ಕೆರೆಯ ಮಧ್ಯದಿ ನೆಲೆನಿಂತ ಮಹಾವಿಷ್ಣುವಿನ ವಿಶೇಷ ಪುಣ್ಯ ಕ್ಷೇತ್ರ!

 

ಕೆರೆಯ ಮಧ್ಯದಿ ನೆಲೆನಿಂತ ಮಹಾವಿಷ್ಣುವಿನ ವಿಶೇಷ ಪುಣ್ಯ ಕ್ಷೇತ್ರ!

 

ವಿಶ್ವದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ, ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಶ್ರೀ ಅನಂತಪದ್ಮನಾಭ ದೇವಸ್ಥಾನದ ಬಗ್ಗೆ ನೀವು ಕೇಳಿರುತ್ತೀರಿ, ಈ ಲೇಖನ ಓದುತ್ತಿರುವ ನೀವು ಒಮ್ಮೆಯಾದರೂ ಅಲ್ಲಿಗೆ ಹೋಗಿ ಮಹಾವಿಷ್ಣು ದೇವರ ದರ್ಶನ ಮಾಡಿರಬಹುದು. ಆದರೆ ಅನಂತಪದ್ಮನಾಭ ಸ್ವಾಮಿಯ ಮೂಲಸ್ಥಾನ ಯಾವುದು ಎಂದು ನಿಮಗೆ ಗೊತ್ತಿದೆಯಾ!? ಸುಲಭದಲ್ಲಿ ಹೇಳುವುದಾದರೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೂ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಹೇಗೆ ಸಂಬಂಧ ಇದೆಯೋ ಹಾಗೆಯೇ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೂ ಹಾಗೂ ಈ ದೇವಾಲಯಕ್ಕೆ ಒಂದು ಸಂಬಂಧವಿದೆ. ಭಾರತದಲ್ಲಿ ಪ್ರ‌ಸಿದ್ಧಿ ಪಡೆದಿದ್ದ ಶಾಕಾಹಾರಿ ಮೊಸಳೆ "ಬಬಿಯಾ" ಜೀವಿಸಿದ್ದು ಇದೇ ದೇವಸ್ಥಾನದ ಸುತ್ತ ಇರುವ ಕೆರೆಯಲ್ಲಿ! ಈಗ ನಿಮಗೆ ಗೊತ್ತಾಗಿರಬಹುದು ನಾನು ಯಾವ ದೇವಸ್ಥಾನದ ಬಗ್ಗೆ ಹೇಳುತ್ತಿದ್ದೇನೆ ಎಂದು! ಇದುವೇ ಮಂಗಳೂರು ಸಮೀಪದಲ್ಲಿರುವ ಕಾಸರಗೋಡು ಜಿಲ್ಲೆಯ ಕುಂಬಳೆಯ ನಾಯ್ಕಾಪಿನಲ್ಲಿರುವ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ!
ಬಹಳ ವರ್ಷಗಳ ಹಿಂದೆ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಸ್ಥಾಪನೆಗೊಳ್ಳುವ ಮೊದಲು ಕುಂಬಳೆಯ ಅನಂತಪುರದಲ್ಲಿ ಕೃಷ್ಣಾಕರ್ಣಾಮೃತ ಸೇರಿ ಮೊದಲಾದ ಗ್ರಂಥಗಳನ್ನು ರಚಿಸಿದ ಶ್ರೀಕೃಷ್ಣ ದೇವರ ಭಕ್ತರಾದ ದಿವಾಕರ ಮುನಿ ಅಥವ ಬಿಲ್ವಮಂಗಲ ಎಂಬ ಋಷಿಗಳು ವಾಸಿವಾಗಿರುತ್ತಾ ಭಗವಂತನ ಪೂಜೆ ಹಾಗೂ ತಪ್ಪಸ್ಸನ್ನಾಚರಿಸುತ್ತಿದ್ದರು. ಹೀಗೆ ಒಂದು ದಿನ ಒಬ್ಬ ಬಾಲಕ ಋಷಿಗಳ ಮುಂದೆ ಪ್ರತ್ಯಕ್ಷಗೊಂಡಾಗ ಮಗುವಿನ ಮುಖದಲ್ಲಿದ್ದ ತೇಜಸ್ಸು, ಕಾಂತಿಯನ್ನು ಕಂಡು ಮಗುವನ್ನು ವಿಚಾರಿಸುತ್ತಾರೆ‌. ಬಾಲಕನಿಗೆ ಅಪ್ಪ,ಅಮ್ಮ ಆಗಲಿ ಮನೆಯಲ್ಲಿ ಯಾರು ಬಂಧುಗಳು ಇಲ್ಲ ಎಂದು ತಿಳಿದ ಮುನಿಗಳು ತನ್ನ ಬಳಿಯೇ ಇರಲು ಕೇಳಿಕೊಳ್ಳುತ್ತಾರೆ. ಇದಕ್ಕೆ ಷರತ್ತುಬದ್ಧವಾಗಿ ಒಪ್ಪಿಕೊಂಡ ಬಾಲಕ "ನನ್ನನ್ನು ಎಂದಿಗೂ ಅವಮಾನಿಬಾರದು ಅಥವ ಸಿಟ್ಟಿನಿಂದ ನೋಡಬಾರದು" ಎಂಬ ಷರತ್ತನ್ನು ವಿಧಿಸಿದನು‌. ಹೀಗೆ ಅಲ್ಲಿಯೇ ನೆಲೆಸಿದ ಬಾಲಕನ ತುಂಟಾಟ ದಿನ ಕಳೆದಂತೆ ಹೆಚ್ಚಾದ ಹಾಗೆ ಒಂದು ದಿನ ಋಷಿಗಳು ಪೂಜಿಸುತ್ತಿದ್ದ ಸಾಲಿಗ್ರಾಮವನ್ನೇ ಬಾಯಿಗೆ ಹಾಕಿದಾಗ ಕೋಪಗೊಂಡ ಋಷಿಗಳು ಬಾಲಕನನ್ನು ಪಕ್ಕಕ್ಕೆ ತಳ್ಳುತ್ತಾರೆ. ಆಗ ಆ ಬಾಲಕ "ಇನ್ನು ನನ್ನನ್ನು ನೋಡಬೇಕಾದರೆ ಅನಂತನ ಕಾಡಿಗೆ(ಅನಂತನ್ಕಾಡು)‌ಬರಬೇಕು!" ಎಂದು ಹೇಳಿ ಅಲ್ಲಿದ್ದ ಒಂದು ಗುಹೆಯನ್ನು ಪ್ರವೇಶಿಸಿ ಅದೃಶ್ಯನಾದ.ಆ ಬಾಲಕ ಬೇರೆ ಯಾರು ಅಲ್ಲ, ಸಾಕ್ಷಾತ್ ಮಹಾವಿಷ್ಣು ದೇವರೆಂದು ಅರಿತ ಮುನಿಗಳು ತಾವು ನಡೆದುಕೊಂಡ ರೀತಿಯಿಂದ ಬೇಸರಗೊಂಡು ಅದೇ ಗುಹೆಯ ಮೂಲಕ ಹುಡುಕುತ್ತಾ ಹೋದರು. ಆ ಗುಹೆಯ ದಾರಿ ದಕ್ಷಿಣ ದಿಕ್ಕಿನಲ್ಲಿರುವ ಸಮುದ್ರ ತನಕ ಇತ್ತು. ಋಷಿಗಳು ಸಮುದ್ರ ಕಿನಾರೆಗೆ ತಲುಪಿದ ಬಳಿಕ ಮತ್ತೆ ಮುಂದೆ ಸಾಗುತ್ತಾರೆ‌. ಹೀಗೆ ಮುಂದೆ ಸಾಗಿದ ಋಷಿಗಳು ಕೊನೆಗೆ ಅನಂತನ ಕಾಡು ಪ್ರದೇಶ ತಲುಪಿದಾಗ ಮತ್ತೆ ದಿವ್ಯ ಬಾಲಕನನ್ನು ಋಷಿಗಳು ನೋಡಿದ ಕೂಡಲೇ ಬಾಲಕ ಅಲ್ಲಿದ್ದ ಬೃಹತ್ ಇಪ್ಪಿ(ಮಹುವಾ) ಮರದಲ್ಲಿ ಕಣ್ಮರೆಯಾಗುತ್ತಾನೆ. ಕೂಡಲೇ ಆ ಮರ‌ ಉರುಳಿ ಬಿದ್ದು ಆದಿಶೇಷನ ಮೇಲೆ ಮಲಗಿರುವ ಶ್ರೀಮನ್ನಾರಾಯಣನ(ಅನಂತಶಯನ) ಬೃಹತ್ ವಿಗ್ರಹವಾಗಿ ರೂಪುಗೊಂಡಿತು. ಇಪ್ಪಿ ಮರ ವಿಗ್ರಹವಾಗಿ ರೂಪುಗೊಂಡ ಸ್ಥಳದಲ್ಲಿ ಈಗ ತಿರುವನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನ ಸ್ಥಾಪನೆಗೊಂಡಿದೆ ಎಂದು ಇಲ್ಲಿಯ ಸ್ಥಳ ಪುರಾಣ ಹೇಳುತ್ತದೆ.
 
ಸುಮಾರು 2 ಎಕರೆ ವಿಸ್ತೀರ್ಣದ ನೈಸರ್ಗಿಕ ಕೆರೆಯ ಮಧ್ಯದಲ್ಲಿ ಈ ದೇವಸ್ಥಾನ ನಿರ್ಮಾಣಗೊಂಡಿದ್ದು, ಕೆರೆ ದಾಟಿ ದೇವಸ್ಥಾನಕ್ಕೆ ಹೋಗಲು ಸೇತುವೆ ಇದೆ. ದೇವಸ್ಥಾನದ ಸುತ್ತ ಕಾಣಸಿಗುವ ಅವಶೇಷಗಳನ್ನು ನೋಡಿದಾಗ ಈಗ ಇರುವ ದೇವಸ್ಥಾನದ ಕಟ್ಟಡ ಹಿಂದೆ ದೊಡ್ಡ ದೇವಾಲಯದ ಸಂಕೀರ್ಣದ ಭಾಗವಾಗಿತ್ತು ಎಂದು ಕಾಣುತ್ತದೆ. ದೇವಸ್ಥಾನದ ಗರ್ಭಗುಡಿ, ನಮಸ್ಕಾರ ಮಂಟಪ ಎಲ್ಲವೂ ಕೆರೆಯ ಮಧ್ಯದಲ್ಲಿ ನಿರ್ಮಾಣಗೊಂಡಿದೆ. ಇನ್ನು ದೇವರ ವಿಗ್ರಹದ ಬಗ್ಗೆ ಹೇಳುವುದಾದರೆ ತಿರುವನಂತಪುರದಲ್ಲಿ ಸಾವಿರ ಹೆಡೆಯ ಆದಿಶೇಷನ ಮೇಲೆ ಮಲಗಿರುವ ಶ್ರೀಮನ್ನಾರಾಯಣನನ್ನು ಕಾಣಬಹುದಾದರೆ ಇಲ್ಲಿ ಐದು ಹೆಡೆಯ ಆದಿಶೇಷನ ಮೇಲೆ ಎರಡು ಬದಿಯಲ್ಲಿ ಶ್ರೀದೇವಿ,ಭೂದೇವಿ ಸಹಿತರಾಗಿ ಶ್ರೀಮನ್ನಾರಾಯಣ ದೇವರು ಕುಳಿತಿರುವುದನ್ನು ಕಾಣಬಹುದು. ಇಲ್ಲಿಯ ಮತ್ತೊಂದು ವಿಶೇಷತೆ ಏನೆಂದರೆ ಶ್ರೀ ದೇವರ ವಿಗ್ರಹ ನಿರ್ಮಾಣಗೊಂಡ ರೀತಿ. ಸಾಮಾನ್ಯವಾಗಿ ಹೆಚ್ಚಿನ ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳನ್ನು ಕಲ್ಲಿನಿಂದ/ಪಂಚಲೋಹ/ಚಿನ್ನ ಹೀಗೆ ಒಂದೋ ಕಲ್ಲು ಅಥವ ಲೋಹಗಳಿಂದ ನಿರ್ಮಿಸಿರುವುದನ್ನು ನೋಡಬಹುದು‌. ಆದರೆ ಇಲ್ಲಿ ಅನಂತಪದ್ಮನಾಭ ದೇವರ ವಿಗ್ರಹವನ್ನು ಸುಮಾರು 70ಕ್ಕೂ ಅಧಿಕ ಔಷಧೀಯ ಗುಣಗಳನ್ನು ಹೊಂದಿರುವ ವಸ್ತುಗಳನ್ನು ಬಳಸಿ ಕಡುಶರ್ಕರಪಾಕ ಎಂಬ ವಿಧಾನದಿಂದ ನಿರ್ಮಿಸಲಾಗಿದೆ‌. 
 

2022ರವರೆಗೆ ಅನಂತಪುರ ದೇವಸ್ಥಾನದಲ್ಲಿ ವಾಸ ಮಾಡುತ್ತಿದ ಬಬಿಯಾ ಮೊಸಳೆ
ಚಿತ್ರ ಕೃಪೆ:- ಗೂಗಲ್ 


ಈ ದೇವಸ್ಥಾನ ಹೆಚ್ಚು ಪ್ರಸಿದ್ಧಿ ಪಡೆದಿದ್ದು ಇಲ್ಲಿ ಗರ್ಭಗುಡಿಯ ಸುತ್ತಲೂ ಇರುವ ಕೆರೆ ಹಾಗೂ ಕೆರಯಲ್ಲಿ ವಾಸ ಮಾಡುತ್ತಿದ್ದ 'ಬಬಿಯಾ" ಎಂಬ ಮೊಸಳೆಯಿಂದ! ಸಾಮಾನ್ಯವಾಗಿ ಮೊಸಳೆಗಳು ಮಾಂಸಾಹಾರ ಪ್ರಾಣಿಗಳು. ಆದರೆ ಇಲ್ಲಿ ವಾಸ ಮಾಡುತ್ತಿದ್ದ ಬಬಿಯಾ ಕೇವಲ ಮಧ್ಯಾಹ್ನದ ವೇಳೆ ದೇವಸ್ಥಾನದ ಅರ್ಚಕರು ಕೊಡುವ ನೈವೇದ್ಯದ ಅನ್ನ ತಿಂದು ಬದುಕಿತ್ತು! ಇದು ಇಲ್ಲಿಯ‌ ವಿಸ್ಮಯಕಾರಿ ಸಂಗತಿಯಾಗಿತ್ತು. ಈ ಬಬಿಯಾ ಮೊಸಳೆ ಪ್ರತ್ಯಕ್ಷಗೊಳ್ಳುವ ಮೊದಲು 1945ರ ಇಸವಿಯಲ್ಲಿ ಒಬ್ಬ ಬ್ರಿಟಿಷ್ ಸೈನಕ ಕೆರೆಯಲ್ಲಿದ್ದ ಮೊಸಳೆಯನ್ನು ಗುಂಡಿಕ್ಕಿ ಕೊಲ್ಲುತ್ತಾನೆ. ಕೊಂದ ಕೆಲವೇ ದಿನಗಳಲ್ಲಿ ವಿಷ ಜಂತುವಿನ ಕಡಿತದಿಂದ ಅವನು ಸಾಯುತ್ತಾನೆ ಹಾಗೂ ಕೆರೆಯಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷಗೊಳ್ಳುತ್ತದೆ. ಆ ಮೊಸಳೆಯೇ ಸುಮಾರು 77 ವರ್ಷಗಳ ಕಾಲ ಅನಂತಪದ್ಮನಾಭನ ಸನಿಹದಲ್ಲೇ ವಾಸವಾಗಿದ್ದ ಬಬಿಯಾ ಮೊಸಳೆ‌! ದೇವಸ್ಥಾನಕ್ಕೆ ಬಂದ ಭಕ್ತರಿಗೆ ಆಗಲಿ ದೇವಸ್ಥಾನದ ಅರ್ಚಕರಿಗೆ ಆಗಲಿ ಏನೂ ಹಾನಿ ಮಾಡದೆ ತನ್ನ ಪಾಡಿಗೆ ತಾನು ಇರುತ್ತಿತ್ತು. ವೃದ್ಧಾಪ್ಯದ ಕಾರಣದಿಂದ 2022ರ ಇಸವಿಯಲ್ಲಿ ಬಬಿಯಾ ದೇವರ ಪಾದ ಸೇರಿತ್ತು. ಬಬಿಯಾ ಮೊಸಳೆ ಕಾಲವಾದ ಕೆಲವು ಸಮಯದ ಬಳಿಕ ಮತ್ತೆ ಒಂದು ಮೊಸಳೆ ಇಲ್ಲಿ ಪ್ರತ್ಯಕ್ಷಗೊಂಡಿದೆ‌. ಹೀಗೆ ಒಂದು ಮೊಸಳೆ ವಿಧಿವಶವಾದರೆ ಮತ್ತೊಂದು ಮೊಸಳೆ ಕೆಲವೇ ಸಮಯದಲ್ಲಿ ಪ್ರತ್ಯಕ್ಷಗೊಳ್ಳುತ್ತದೆ‌. ಏಕಾಂಗಿಯಾಗಿ ಇಲ್ಲಿ ಬಹುಕಾಲ ದೇವರ ಸಮೀಪ ವಾಸಿಸುವ ಮೊಸಳೆ ಎಲ್ಲಿಂದ ಬರುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ದೇವಸ್ಥಾನದ ಒಳಗೆ ಪ್ರವೇಶಿಸಿದಾಗ ಕೆರೆಯನ್ನು ದಾಟಲು ನಿರ್ಮಿಸಿರುವ ಸೇತುವೆಯ ಮೊದಲು ಬಲ ಭಾಗದಲ್ಲಿ ಹೋದರೆ ಬಾಲಕ ಸ್ವರೂಪಿ ಮಹಾವಿಷ್ಣು ದೇವರು ಅದೃಶ್ಯರಾದ ಗುಹೆಯನ್ನು ಈಗಲೂ ನೋಡಬಹುದು. ಈ ಗುಹೆಯಲ್ಲಿ ಹಾಗೂ ಕೆರೆಯ ಪರಿಸರದಲ್ಲಿ ದೇವಸ್ಥಾನದ ಮೊಸಳೆ ವಾಸವಾಗಿರುತ್ತದೆ. ಈಗ ವಾಸವಾಗಿರುವ ಮೊಸಳೆ ಜನರ ಕಣ್ಣಿಗೆ ಹೆಚ್ಙಾಗಿ ಕಾಣಲು ಸಿಗುವುದಿಲ್ಲ. ಬಹುಶಃ ಇನ್ನೂ ಜನರ ಓಡಾಟಕ್ಕೆ ಹೊಂದಿಕೊಳ್ಳಬೇಕಷ್ಟೆ ಎಂದು ಕಾಣುತ್ತದೆ. ಆದರೂ ನೀರಿನಿಂದ ಮೇಲೆ ಬಂದಾಗ ಬಬಿಯಾಳ ಹಾಗೆ ಶಾಂತ ಸ್ವಭಾವದಿಂದ ಇದ್ದು ಯಾರಿಗೂ ಏನೂ ಮಾಡದೆ ತನ್ನ ಪಾಡಿಗೆ ತಾನು ಇರುತ್ತದೆ. ಇಲ್ಲಿ ವಾಸಿಸುವ ಮೊಸಳೆಯನ್ನು ದೇವರ ಸ್ವರೂಪ ಎಂದು ನಂಬಲಾಗಿದೆ.
 
ಅನಂತಪದ್ಮನಾಭ ದೇವರು

ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಕುಂಬಳೆ ಪೇಟೆಯಿಂದ ಸುಮಾರು 5.4 ಕಿ.ಮಿ ದೂರವಿದ್ದು, ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ಬರುವ ನಾಯ್ಕಾಪಿನಲ್ಲಿದೆ‌. ಮಂಗಳೂರಿನಿಂದ ಸುಮಾರು 40 ಕಿ.ಮಿ ದೂರದಲ್ಲಿರುವ ಈ ದೇವಸ್ಥಾನವನ್ನು ಮಂಗಳೂರು ಕಡೆಯಿಂದ ಹೋಗುವುದಾದರೆ ರಾ.ಹೆ 66 ಪನ್ವೇಲ್-ಕನ್ಯಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಸರಗೋಡು ಕಡೆಗೆ ಸಾಗಿ ಕುಂಬಳೆ ತಲುಪಿದಾಗ ಎಡಕ್ಕೆ ತಿರುಗಿ ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ಸಾಗಿ ನಾಯ್ಕಾಪಿನಲ್ಲಿ ಬಲಕ್ಕೆ ತಿರುಗಿ ಸಾಗಿ ತಲುಪಬಹುದು. ಮಂಗಳೂರಿನಿಂದ ಕಾಸರಗೋಡಿಗೆ ಸಾಕಷ್ಟು ಬಸ್ಸುಗಳು ಲಭ್ಯವಿದ್ದು,ಎಲ್ಲಾ ಬಸ್ಸುಗಳು ಕುಂಬಳೆಯಲ್ಲಿ ನಿಲ್ಲುತ್ತದೆ. ಕುಂಬಳೆಯಿಂದ ನಾಯ್ಕಾಪಿಗೆ ಬಸ್, ರಿಕ್ಷಾ ಮೂಲಕ ಹೋಗಬಹುದು. ಇನ್ನು ರೈಲಿನ ಮೂಲಕ ಪ್ರಯಾಣ ಮಾಡಿದರೆ ಕುಂಬಳೆ ರೈಲು ನಿಲ್ದಾಣ ದೇವಸ್ಥಾನಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣವಾಗಿದ್ದು ದೇವಸ್ಥಾನದಿಂದ ರೈಲು ನಿಲ್ದಾಣಕ್ಕೆ ಸುಮಾರು 5.7 ಕಿ.ಮಿ ಆಗುತ್ತದೆ. ಕುಂಬಳೆ ರೈಲು ನಿಲ್ದಾಣದಲ್ಲಿ ಎಲ್ಲಾ ರೈಲುಗಳಿಗೆ ನಿಲುಗಡೆ ಇಲ್ಲ. ಆದ್ದರಿಂದ ದೇವಸ್ಥಾನಕ್ಕೆ ಹತ್ತಿರದ ಪ್ರಮುಖ ರೈಲು ನಿಲ್ದಾಣಗಳಾದ ಕಾಸರಗೋಡು ರೈಲು ನಿಲ್ದಾಣ(ಸುಮಾರು 13.6 ಕಿ.ಮಿ), ಮಂಗಳೂರು ಜಂಕ್ಷನ್( ಸುಮಾರು 42.1 ಕಿ.ಮಿ) ಅಥವ ಮಂಗಳೂರು ಸೆಂಟ್ರಲ್ (ಸುಮಾರು 41.7 ಕಿ.ಮಿ) ರೈಲು ನಿಲ್ದಾಣಗಳ ಮೂಲಕ ಪ್ರಯಾಣಿಸಬಹುದು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅನಂತಪುರ ದೇವಸ್ಥಾನಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವಾಗಿದ್ದು, ವಿಮಾನ ನಿಲ್ದಾಣದಿಂದ ದೇವಸ್ಥಾನಕ್ಕೆ ಸುಮಾರು 53.7 ಕಿ.ಮೀ ದೂರವಾಗುತ್ತದೆ‌. ದೇವಸ್ಥಾನ, ಕೆರೆಯ ಸೌಂದರ್ಯವನ್ನು ನೋಡಬಯಸುವವರು ಹಗಲಿನ ವೇಳೆ ದೇವಸ್ಥಾನಕ್ಕೆ ಹೋಗಬಹುದು‌. ಇಲ್ಲಿ ಪ್ರತಿದಿನ ಸಂಜೆ ದೀಪಾರಾಧನೆ ನಡೆಯುತ್ತದೆ. ಈ ವೇಳೆ ಗರ್ಭಗುಡಿಯ ಪರಿಸರದಲ್ಲಿ ಹಣತೆ, ದೀಪದ ಬೆಳಕಿನಲ್ಲಿ ದೇವರನ್ನು ನೋಡುವಾಗ ಸಿಗುವ ಅನುಭವವೇ ಬೇರೆ! ಹೀಗಾಗಿ ಸಮಯ ಇದ್ದವರು ಸಂಜೆಯ ವೇಳೆ ದೇವಸ್ಥಾನಕ್ಕೆ ಭೇಟಿ ನೀಡಬಹುದು.‌ ಅನಂತಪುರ ದೇವಸ್ಥಾನದ ಜೊತೆಗೆ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಸ್ಥಾನಗಳಲ್ಲಿ ಮೂರು ದೇವಸ್ಥಾನಗಳಾದ ಕುಂಬಳೆ ಪೇಟೆಯಲ್ಲಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಅನಂತಪುರ ದೇವಸ್ಥಾನದ ಸಮೀಪವೇ ಇರುವ ಮುಜಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನ ಹಾಗೂ ಅನಂತಪುರ ದೇವಸ್ಥಾನದಿಂದ ಸುಮಾರು 8 ಕಿ.ಮಿ ದೂರದಲ್ಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೂ ಭೇಟಿ ನೀಡಬಹುದು.
 
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಈ ದೇವಸ್ಥಾನದಲ್ಲಿ ಮುಂದಿನ ವರ್ಷ ಅಂದರೆ 2027ರ ಫೆಬ್ರವರಿ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು ಪ್ರತಿ ವರ್ಷ ಫೆಬ್ರವರಿ 26ರಂದು ಇಲ್ಲಿ ದರ್ಶನ ಬಲಿ,ಬೆಡಿ ಸೇವೆಯೊಂದಿಗೆ ಅದ್ಧೂರಿಯಾಗಿ ಶ್ರೀ ದೇವರ ವಾರ್ಷಿಕ ಜಾತ್ರೋತ್ಸವ ನಡೆಯುತ್ತದೆ. ವಿಶಾಲವಾದ ಗರ್ಭಗುಡಿಯ ಸುತ್ತಲೂ ಇರುವ ಕೆರೆಯ ಸುತ್ತ ನಡೆಯುವ ಶ್ರೀ ದೇವರ ಉತ್ಸವ, ದರ್ಶನ ಬಲಿ ಇಲ್ಲಿಯ ವಾರ್ಷಿಕ ಜಾತ್ರೆಯ ವಿಶೇಷತೆಯಾಗಿದೆ.
ನೀವು ಅನಂತಪುರ ದೇವಸ್ಥಾನಕ್ಕೆ ಭೇಟಿ ನೀಡದೆ ಇದ್ದರೆ ಭೇಟಿ ನೀಡಿ ಶ್ರೀ ದೇವರ ದರ್ಶನವನ್ನು ಪಡೆದು ಬನ್ನಿ ಜೊತೆಗೆ ಕ್ಷೇತ್ರದ ಸ್ವಚ್ಛತೆ, ಪಾವಿತ್ರ್ಯತೆಯನ್ನು ಕಾಪಾಡಲು ಮರೆಯದಿರಿ!
🖊️ ಶ್ರೀಕರ ಬಿ
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಮ್ |
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃದ್ಧ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್ ||

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!