ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ
ಹಾಗಾದರೆ ಈ ರೈಲಿಗೆ ಅಷ್ಟೊಂದು ಬೇಡಿಕೆ ಯಾಕೆ? ಅವಶ್ಯಕತೆಯಾದರು ಏನು? ಎಂಬುವುದನ್ನು ಸ್ವಲ್ಪ ನೋಡೋಣ ಬನ್ನಿ
![]() |
ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ |
ಮಂಗಳೂರು ದಕ್ಷಿಣ ಭಾರತದಲ್ಲಿ ವೇಗದಲ್ಲಿ ಬೆಳೆಯುತ್ತಿರುವ ಪ್ರಮುಖ ನಗರಗಳಲ್ಲಿ ಒಂದು. ಧಾರ್ಮಿಕ,ಶೈಕ್ಷಣಿಕ,ವಾಣಿಜ್ಯ ಹಾಗು ಪ್ರವಾಸಿ ತಾಣವಾಗಿರುವ ಮಂಗಳೂರು ಕರ್ನಾಟಕದ ಹೆಬ್ಬಾಗಿಲು ಎಂಬ ಖ್ಯಾತಿ ಪಡೆದಿದೆ. ಭಾರತದ ಅತ್ಯುತ್ತಮ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳ ಸಾಲಿನಲ್ಲಿ ಮಂಗಳೂರಿನ ಸುರತ್ಕಲ್ ಅಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ ಎರಡನೆಯ ಸ್ಥಾನ ಪಡೆದಿದೆ. ಮಂಗಳೂರಿನಲ್ಲಿರುವ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನ,ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಗಳು ಮಂಗಳೂರನ್ನು ಧಾರ್ಮಿಕ ಸ್ಥಾನವಾಗಿ ಪ್ರಸಿದ್ಧಿಪಡಿಸಿದೆ.
ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಮುಖ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ,ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ,ಕರಾವಳಿ ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ಹಾಗು ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ,ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ,ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ, ಅತ್ಯಂತ ಹಳೆಯ ದೇವಸ್ಥಾನ,ಮಹಾಭಾರತ ಕಾಲದಲ್ಲಿ ಪಾಂಡವರಿಂದ ಸ್ಥಾಪಿಸಲ್ಟಟ್ಟು ಆರಾಧಿಸಿಕೊಂಡು ಬರುತ್ತಿರುವ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲು ಹೀಗೆ ಮುಂತಾದ ದೇವಸ್ಥಾನಗಳು,ಧಾರ್ಮಿಕ ಕ್ಷೇತ್ರಗಳಿಂದಾಗಿ ಪರಶುರಾಮನ ಸೃಷ್ಟಿಯ ಈ ತುಳುನಾಡು ಪ್ರಸಿದ್ಧಿ ಪಡೆದಿದೆ.
ಮಂಗಳೂರಿನ ಸುಂದರ ಕಡಲ ಕಿನಾರೆಗಳು,ಪಿಲಿಕುಳ ನಿಸರ್ಗ ಧಾಮ, ಮಂಗಳೂರಿನ ಹತ್ತಿರದ ಪಶ್ಚಿಮಘಟ್ಟಗಳ ಶಿಖರಗಳು ಪ್ರವಾಸಿಗರನ್ನು ಕೈಬೀಸಿ ಕರಿಯುತ್ತದೆ.
ಮಂಗಳೂರು ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಗರಗಳಾದ ಪುತ್ತೂರು,ಸುಳ್ಯ,ಬಿ.ಸಿ ರೋಡ್,ಬೆಳ್ತಂಗಡಿ,ಕಡಬ ಕೂಡ ಮಹತ್ವ ಸ್ಥಾನ ಪಡೆದಿದೆ.
ಕಾಶಿ ಹಿಂದುಗಳಿಗೆ ಪವಿತ್ರವಾದ ಸ್ಥಳ. ಜೀವನದ ಕೊನೆ ಕ್ಷಣಗಳನ್ನು ಕಾಶಿಯಲ್ಲಿ ಕಳೆದು ತನ್ನು ಕೊನೆಯುಸಿರನ್ನು ಕಾಶಿಯಲ್ಲಿ ಎಳೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹಾಗು ಇಚ್ಛೆ ಹಿಂದುಗಳಿಗಿದೆ. ಜೀವನದಲ್ಲಿ ಒಮ್ಮೆಯಾದರು ಭಗವಾನ್ ಶಂಕರನ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಾಗು ಹಿಂದುಗಳ ಆರಾಧ್ಯ ದೇವರಾದ ಕಾಶಿ ವಿಶ್ವನಾಥನ ದರ್ಶನ ಪಡೆದು ಧನ್ಯರಾಗಬೇಕೆಂಬ ಆಸೆ ಹಿಂದುಗಳಿಗೆ ಇದ್ದೇ ಇರುತ್ತದೆ. ಅಲ್ಲದೆ ವಾರಣಾಸಿಯಲ್ಲಿರುವ "ಕಾಶಿ ಮಠ" ಕರವಾಳಿ ಭಾಗದ ಜಿ.ಎಸ್.ಬಿ ಸಮಾಜದ ಬಾಂಧವರ ಮುಖ್ಯ ಮಠವಾಗಿರುವುದರಿಂದ ಸಮಾಜ ಬಾಂಧವರು ವಾರಣಾಸಿಗೆ ಹೋಗುತ್ತಾ ಇರುತ್ತಾರೆ. ಆದ್ದರಿಂದ ವಾರಣಾಸಿಗೆ ಈ ನಿಟ್ಟಿನಲ್ಲೂ ಮಹತ್ವದ ಸ್ಥಾನವಿದೆ.
ಮಂಗಳೂರಿನಿಂದ ವಾರಣಾಸಿಗೆ ಪ್ರಸ್ತುತ ಯಾವುದೇ ನೇರ ರೈಲು,ವಿಮಾನ ಸಂಪರ್ಕವಿಲ್ಲದಿರುವುದರಿಂದ ಈಗ ಜನರು ಮುಂಬೈ ಅಥವ ಬೆಂಗಳೂರು ಮೂಲಕ ಪ್ರಯಾಣಿಸಬೇಕಾದ ಪರಿಸ್ಥಿತಿಯಿದೆ .
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಈಶಾನ್ಯ ಭಾಗದಲ್ಲಿ ರುದ್ರಭೂಮಿ ಇರುವುದರಿಂದ "ದಕ್ಷಿಣ ಕಾಶಿ" ಎಂದು ಹೆಸರುವಾಸಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಹಾಗು ಕುಮಾರಧಾರ ನದಿಗಳು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಎದುರು ಸಂಗಮಗೊಳ್ಳುವುದರಿಂದ ಉಪ್ಪಿನಂಗಡಿ "ಗಯಾಪದ" ಕ್ಷೇತ್ರ ಎಂದು ಖ್ಯಾತಿ ಪಡೆದಿದೆ.
"ಜೈನಕಾಶಿ" ಮೂಡಬಿದ್ರೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಬರುತ್ತದೆ. ಹೀಗೆ ಹಲವು ಮಹತ್ವವನ್ನು ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಕರ್ನಾಟಕದ ಬೇರೆ ಭಾಗಗಳಿಗೆ ಹಾಗು ದೆಹಲಿ ಹೊರತುಪಡಿಸಿ ಉತ್ತರ ಭಾರತಕ್ಕೆ ರೈಲಿನ ಅಗತ್ಯ ತುಂಬಾ ಇದೆ.
ಹಿಂದೆ ಮೀಟರ್ ಗೇಜ್ ಕಾಲದಲ್ಲಿ ಮಂಗಳೂರಿನಿಂದ ಹಾಸನ ಮುಖಾಂತರ ಹುಬ್ಬಳ್ಳಿ,ಬೆಳಗಾವಿ ಮಾರ್ಗದ ಮೂಲಕ ಮೀರಜ್ ಗೆ ರೈಲು ಸಂಚಾರವಿತ್ತು. ತದನಂತರ ಬ್ರಾಡ್ ಗೇಜ್ ಮಾರ್ಗದ ಕಾರ್ಯಕ್ಕೆ ಎಂದು ಈ ರೈಲು ಮಾರ್ಗವನ್ನು ಮುಚ್ಚಿದ ಕಾರಣ ಮಂಗಳೂರು-ಮೀರಜ್ ಮಹಾಲಕ್ಷಿ ಎಕ್ಸ್‌ಪ್ರೆಸ್ ರೈಲು ಸೇರೆ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಇದರಿಂದಾಗಿ ಮಂಗಳೂರಿನಿಂದ ಉತ್ತರ ಕರ್ನಾಟಕ್ಕೆ ರೈಲು ಸಂಪರ್ಕ ಕಡಿತಗೊಂಡಿತ್ತು.ಆ ರೈಲು ಸಂಚಾರ ಇರುವಾಗ ಸಾವಿರಾರು ಜನರು ಪ್ರತಿದಿನ ಸಂಚರಿಸುತ್ತಿದ್ದರು. ಆದ್ದರಿಂದ ಮಂಗಳೂರಿನಿಂದ ವಾರಣಾಸಿಗೆ ಹಾಸನ,ಹುಬ್ಬಳ್ಳಿ,ಬೆಳಗಾವಿ,ಮೀರಜ್,ಪುಣೆ ಮೂಲಕ ರೈಲು ಸೇವೆ ಆರಂಭಿಸಿದರೆ ಮಂಗಳೂರು ಹೊರತುಪಡಿಸಿ ದಕ್ಷಿಣ ಕನ್ನಡದ ಇತರೆ ರೈಲು ಸಂಪರ್ಕದಲ್ಲಿ ಹಿಂದುಳಿದ ಭಾಗ,ಗ್ರಾಮೀಣ ಭಾಗದ ಜನರಿಗೆ ಬಂಟ್ವಾಳ,ಕಬಕ ಪುತ್ತೂರು,ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಗಳ ಮೂಲಕ ಉತ್ತರ ಕರ್ನಾಟಕ,ಉತ್ತರ ಭಾರತಕ್ಕೆ ರೈಲಿನಲ್ಲಿ ಪ್ರಯಾಣಿಸಬಹುದು ಹಾಗು ಅನುಕೂಲ ಕೂಡ. ಸದ್ಯದ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡದ ಹಲವು ರೈಲು ಹೋರಾಟಗಾರರು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣದಿಂದ ಕರ್ನಾಟಕದ ಇತರೆ ಭಾಗಗಳಿಗೆ,ಮುಂಬೈಗೆ ರೈಲು ಸೇವೆಗಳನ್ನು ನೀಡಬೇಕೆಂದು ಬೇಡಿಕೆ ಇಟ್ಟರೂ ಗೂಡ್ಸ್ ರೈಲು ಸೇವೆಗಳು,ತುರ್ತು ಪರಿಸ್ಥಿತಿಗಳಲ್ಲಿ ನಿಲ್ದಾಣದ ಅವಶ್ಯಕತೆಯ ನೆಪವೊಡ್ಡಿ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ಯಾವುದೇ ಹೊಸ ರೈಲು ಆರಂಭಿಸಲು ಅನುಮತಿ ನೀಡುತ್ತಿಲ್ಲ. ಆದ್ದರಿಂದ ಮಂಗಳೂರಿನಿಂದ ಈ ರೈಲು ಆರಂಭಿಸಿದರೆ ಹೆಚ್ಚು ಪರಿಣಾಮಕಾರಿ ಹಾಗು ಅನುಕೂಲಕರ. ಸದ್ಯ ಕರ್ನಾಟಕದಿಂದ ಎರಡು ರೈಲುಗಳು ವಾರಣಾಸಿಗೆ ಸಂಚರಿಸುತ್ತದೆ. ಮೈಸೂರು-ಬೆಂಗಳೂರು-ವಾರಣಾಸಿ ರೈಲು(ವಯಾ ಅರಸೀಕೆರೆ,ಚಿತ್ರದುರ್ಗ,ಬಳ್ಳಾರಿ)ಒಂದಾದರೆ ಮತ್ತೊಂದು ಹುಬ್ಬಳ್ಳಿ-ವಾರಣಾಸಿ ರೈಲು(ವಯಾ ವಿಜಯಪುರ,ಸೋಲಾಪುರ),ಈ ಎರಡ ರೈಲುಗಳು ದಾವಣಗೆರೆ,ಹಾವೇರಿ,ಬೆಳಗಾವಿ ಸಂಪರ್ಕಿಸುವುದಿಲ್ಲ. ಆದ್ದರಿಂದ ಆ ಭಾಗದಿಂದಲೂ ವಾರಣಾಸಿಗೆ ರೈಲು ಸೇವೆಯ ಬಗ್ಗೆ ಬೇಡಿಕೆ ಇರುವುದರಿಂದ ಮಂಗಳೂರಿನಿಂದ ಹಾಸನ,ಬೆಳಗಾವಿ ಮೂಲಕ ರೈಲು ಹಾದುಹೋದರೆ ಕರ್ನಾಟಕದ ಹಲವು ಭಾಗಗಳ ಜನರಿಗೆ ತುಂಬಾ ಉಪಕಾರಿಯಾಗಲಿದೆ ಹಾಗು ಒಂದೇ ರೈಲಿನಲ್ಲಿ ಮಂಗಳೂರು-ವಾರಣಾಸಿ,ಮಂಗಳೂರು-ಮೀರಜ್, ಬೆಳಗಾವಿ-ವಾರಣಾಸಿ ರೈಲುಗಳ ಬೇಡಿಕೆ ಈಡೇರಿಸದಂತಾಗುತ್ತದೆ. ಅಷ್ಟೇ ಅಲ್ಲದೆ ಮಂಗಳೂರಿನಿಂದ ಭಾರತದ ಪ್ರಮುಖ ನಗರಗಳಲ್ಲೊಂದಾದ ಪುಣೆಗೆ ಪರ್ಯಾಯ ಮಾರ್ಗದಲ್ಲಿ ರೈಲು ಸೇವೆ ನೀಡಿದಂತಾಗುತ್ತದೆ. ಪ್ರಸ್ತುತ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಕಾರ್ಯ ಪೂರ್ಣಗೊಂಡ ನಂತರ ಅಯೋಧ್ಯೆಗೂ ಮಂಗಳೂರಿನಿಂದ ರೈಲಿನ ಅಗತ್ಯತೆ ಇರುವುದರಿಂದ ಭವಿಷ್ಯದಲ್ಲಿ ಈ ರೈಲನ್ನು ಅಯೋಧ್ಯೆಗೂ ವಿಸ್ತರಿಸುವ ಅಲೋಚನೆ ಮಾಡಬಹುದು.
ಆದ್ದರಿಂದಾಗಿ ರೈಲ್ವೆ ಇಲಾಖೆ ಮಂಗಳೂರಿನಿಂದ ವಾರಣಾಸಿಗೆ ರೈಲು ಆರಂಭಿಸುವ ಬಗ್ಗೆ ಯೋಚಿಸಿ ಕ್ರಮಕೈಗೊಂಡರೆ ಇಲ್ಲಿನ ಜನರ ಬೇಡಿಕೆ ಈಡೇರಿದಂತಾಗುತ್ತದೆ ಹಾಗು ನ್ಯಾಯ ಒದಗಿಸಿದಂತಾಗುತ್ತದೆ.
ಪ್ರಸ್ತುತ ಮಂಗಳೂರು ಸಂಸದ ಶ್ರೀ ನಳಿನ್ ಕುಮಾರ್ ಕಟೀಲು ಅವರ ಮನವಿಯನ್ನು ಸ್ವೀಕರಿಸಿ ಅದರ ಬಗ್ಗೆ ಕ್ರಮಕೈಗೊಂಡು ಪ್ರಸ್ತಾವನೆಯನ್ನು ಸಿದ್ಧಪಡಿಸಿರುವ ದಕ್ಷಿಣ ರೈಲ್ವೆ ಮಂಡಳಿ,ಮಂಡಳಿಯ ಜನರಲ್ ಮ್ಯಾನೇಜರ್ ಅವರು ಪ್ರಸ್ತಾವನೆಯ ಬಗ್ಗೆ ಸಂಸದರಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ ಎಂಬ ಸುದ್ದಿ ಇದೆ.
ಈ ರೈಲು ಯೋಜನೆ ಸದ್ಯದಲ್ಲಿ ಅನುಷ್ಠಾನಗೊಂಡು ಮಂಗಳೂರಿನಿಂದ ವಾರಣಾಸಿಗೆ ರೈಲು ಹಳಿ ಇಳಿಯುವಂತಾಗಲಿ ಎಂಬುವುದು ನಮ್ಮೆಲ್ಲರ ಇಚ್ಛೆ
Comments
Post a Comment