ಅಕ್ಷರ ರೂಪದಲ್ಲಿ ಅಯ್ಯಪ್ಪನ ದರ್ಶನ: "ಶೌರ್ಯಮಲೆ" ಕಾದಂಬರಿ ಒಂದು ಅನುಭವ
ಅಕ್ಷರ ರೂಪದಲ್ಲಿ ಅಯ್ಯಪ್ಪನ ದರ್ಶನ: "ಶೌರ್ಯಮಲೆ" ಕಾದಂಬರಿ ಒಂದು ಅನುಭವ
ಬಹಳ ಸಮಯದ ನಂತರ ಮತ್ತೆ ಒಂದು ಕಾದಂಬರಿಯನ್ನು ಓದಿದೆ. ಈ ಬಾರಿ ಓದಿದ ಪುಸ್ತಕವೇ "ಶೌರ್ಯಮಲೆ ಅಯ್ಯಪ್ಪನ ಪೂಂಗಾವನ".
ಶಬರಿಮಲೆ ಅಯ್ಯಪ್ಪನ ಕಥೆಯನ್ನು ನಾವು ಹಲವಾರು ಮೂಲಗಳಿಂದ ಕೇಳಿ ತಿಳಿದಿದ್ದೇವೆ. ಒಂದೊಂದು ಕಡೆ ವಿಭಿನ್ನ ರೀತಿಯ ಕಥೆಗಳು ಇರುವ ಸಾಧ್ಯತೆ ಇರುತ್ತದೆ. ಆದರೆ ನನಗೆ ಸ್ವಷ್ಟವಾಗಿ ಶಬರಿಮಲೆ ಅಯ್ಯಪ್ಪನ ಚರಿತ್ರೆಯನ್ನು ತಿಳಿದುಕೊಳ್ಳಬೇಕಿತ್ತು. ಬಹಳ ವರ್ಷಗಳಿಂದ ಶಬರಿಮಲೆ ಅಯ್ಯಪ್ಪನ ಮಹಿಮೆಯನ್ನು ಕೇಳಿ ತಿಳಿದಿದ್ದ ನಾನು ನನ್ನ ಪಾಲಿಗೆ ಒಲಿದು ಬಂದ ಅವಕಾಶವನ್ನು ಬಳಸಿ 2024ರಲ್ಲಿ ಶಬರಿಮಲೆಗಿ ಹೋಗಿ ಬಂದೆ. ಅಲ್ಲಿಯ ತನಕ ಉಳಿದವರು ಹೋಗುವುದನ್ನು ಕಂಡು ಆಸೆ ಪಡುತ್ತಿದ್ದ ನಾನು ಸ್ವತಃ ಹೋಗಿ ಅಯ್ಯಪ್ಪನ ದರ್ಶನ ಪಡೆದು ರಾತ್ರಿ ಹೊತ್ತು ಸನ್ನಿಧಾನದಲ್ಲೇ ಕಳೆದಾಗ ನನಗೆ ಸಿಕ್ಕ ದಿವ್ಯಾನುಭೂತಿ ನನ್ನ ಬದುಕಿನ ಪಥವನ್ನೇ ಬದಲಿಸಿತು. ಅಲ್ಲಿ ಸಿಕ್ಕ ಅನುಭವ,ದೇಹದಲ್ಲಾದ ಶಕ್ತಿಯ ಸಂಚಾರದ ಬಗ್ಗೆ ಹೇಳಲು ಸಾಧ್ಯವಿಲ್ಲ.
ಕೆಲವು ಸಮಯದ ಮೊದಲು ಈ ಕಾದಂಬರಿಯ ಬಗ್ಗೆ ಫೇಸ್ಪುಕಿನಲ್ಲಿ ನನ್ನ ಫೇಸ್ಬುಕ್ ಮಿತ್ರರು,ಪುಸ್ತಕ ಪ್ರೇಮಿ ಹಾಗೂ ಬರಹಗಾರರಾದ ಶ್ರೀ ಪ್ರಶಾಂತ್ ಭಟ್ ಅವರು ಬರೆದಿದ್ದನ್ನು ನಾನು ನೋಡಿದೆ. ತಕ್ಷಣ ಈ ಪುಸ್ತಕವನ್ನು ಓದಬೇಕೆಂಬ ಆಸೆ ನನಗೂ ಬಂತು. ಪುಸ್ತಕ ಖರೀದಿಸಿ ಓದಿದೆ.
ಕಾದಂಬರಿಯ ಲೇಖಕರಾದ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರು ಈ ಕಾದಂಬರಿಯನ್ನು ಬರೆಯುವ ಹಿಂದೆ ಇದ್ದ ಮುಖ್ಯ ಉದ್ದೇಶ,ಅವರಿಗೆ ಸಿಕ್ಕ ಪ್ರೇರಣೆ,ಮಾಹಿತಿಗಳನ್ನು ಕ್ರೋಢೀಕರಿಸಿದ ರೀತಿ ಹಾಗೂ ಅಯ್ಯಪ್ಪ ವ್ರತದಲ್ಲಿದ್ದು ಕಾದಂಬರಿಯನ್ನು ಬರೆದ ಬಗೆಯನ್ನು ಕಾದಂಬರಿಯ ಆರಂಭದಲ್ಲಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಜನರಲ್ಲಿ ಇರುವ ಹಲವಾರು ಗೊಂದಲಗಳು, ಅಯ್ಯಪ್ಪನ ಜನ್ಮದ ರಹಸ್ಯ,ಧರ್ಮಶಾಸ್ತನ ಅವತಾರ, ಶಬರಿಮಲಿಗೆ ಹೆಸರು ಬಂದ ಕಥೆ ಸೇರಿ ಕೆಲವು ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಕಾದಂಬರಿಯ ಆರಂಭದಲ್ಲಿ ಸ್ವತಃ ಮಣಿಕಂಠನೇ ಕಥೆಯನ್ನು ಹೇಳುವ ರೀತಿಯಲ್ಲಿ ಕಾದಂಬರಿಯನ್ನು ಬರೆದಿರುವ ಲೇಖಕರು ಜನರಿಗೆ ಹೆಚ್ಚು ಹತ್ತಿರದಲ್ಲಿ ಕಥೆ ಮುಟ್ಟುವುಂತೆ ಮಾಡಿದ್ದಾರೆ. ಓದುತ್ತಾ ಹೋದಂತೆ ಆ ಕಥೆಯ ಚಿತ್ರಣ ಸ್ಪಷ್ಟವಾಗಿ ನಮಗೆ ಸಿಕ್ಕಿ ಚಲನಚಿತ್ರ ನೋಡದಂತಹ ಅನುಭವ ಸಿಗುತ್ತದೆ. ಕನ್ನಡದಲ್ಲಿ "ಶಬರಿಮಲೆ ಸ್ವಾಮಿ ಅಯ್ಯಪ್ಪ" ಎಂಬ ಸಿನಿಮಾ ಇದೆ. ಈ ಕಾದಂಬರಿಯನ್ನು ಓದುವಾಗ ಸಿನಿಮಾದಲ್ಲಿದ್ದ ಪಾತ್ರಗಳು ನೆನಪಾದವು ಹಾಗೂ ಕಥೆಯನ್ನು ಸುಲಭವಾಗಿ ಅರ್ಥೈಸಿಕೊಂಡೆ.
ತನ್ನ ತಾಯಿಯ ಉದರನೋವಿನ ಶಮನಕ್ಕೆ ಹುಲಿಯ ಹಾಲನ್ನು ತರಲು ಮಣಿಕಂಠ ಕಾಡಿಗೆ ಹೋಗುವ ಸನ್ನಿವೇಶದೊಂದಿಗೆ ಆರಂಭಗೊಳ್ಳುವ ಕಥೆ ನಂತರ ಮಣಿಕಂಠನ ಜನ್ಮ ರಹಸ್ಯ, ಕಳರಿಯ ವಿದ್ಯೆ ಕಲಿಯುವ ರೋಚಕ ಕಥೆ,ಧರ್ಮಶಾಸ್ತನ ಅವತಾರ,ವಾವರನ ಜೊತೆಗೆ ಯುದ್ಧ ಹಾಗೂ ಸಂಧನಾ,ಮಹಿಷಿ ವಧೆ,ಉದಯನ್ ಜೊತೆಗೆ ಯುದ್ಧ ಹಾಗೂ ಶಬರಿಮಲೆಯಲ್ಲಿ ಧರ್ಮಶಾಸ್ತನ ಸನ್ನಿಧಾನದ ಮರುನಿರ್ಮಾಣದ ಕಥೆ ಸುತ್ತ ಕಾದಂಬರಿಯನ್ನು ಲೇಖಕರು ಬರೆದಿದ್ದಾರೆ.
ಕಾದಂಬರಿಯನ್ನು ಓದಿದ ಬಳಿಕ ನನಗೆ ಸಿಕ್ಕ ಸಂತೋಷ, ನೆಮ್ಮದಿಯಿಂದ ಒಮ್ಮೆ "ಸ್ವಾಮಿಯೇ ಶರಣಂ ಅಯ್ಯಪ್ಪ" ಎಂದು ಹೇಳಿ ಪುಸ್ತಕಕ್ಕೆ ನಮಿಸಿ, ಅಯ್ಯಪ್ಪನಿಗೆ ನಮಿಸಿದೆ. ಶಬರಿಮಲೆಯಲ್ಲಿ ನನಗೆ ಸಿಕ್ಕ ಅನುಭವ, ಅಯ್ಯಪ್ಪನ ಅನುಭೂತಿ ಪುಸ್ತಕ ಓದಿದಾಗಲೂ ಆಯಿತು. ಅಂತೂ ಅಯ್ಯಪ್ಪನ ಚರಿತ್ರೆ,ಎರುಮಲೆ,ಪಂದಳ,ತಿರುವಾಭರಣ,ಪೊನ್ನಂಬಲಮೇಡು ಬೆಟ್ಟ,ಮಕರ ಜ್ಯೋತಿ,ದೊಡ್ಡಪಾದದ ರಹಸ್ಯವನ್ನು ಕಾದಂಬರಿಯಲ್ಲಿ ಓದಿ ತಿಳಿದುಕೊಂಡೆ. ಧರ್ಮಶಾಸ್ತ ಎಂದರೆ ಯಾರು? ಅಯ್ಯಪ್ಪ ಎಂದರೆ ಯಾರು? ಧರ್ಮಶಾಸ್ತ ಹಾಗೂ ಅಯ್ಯಪ್ಪ ಬೇರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡೆ.
ಕೆಲವು ವರ್ಷಗಳಿಂದ ಮಕರ ಜ್ಯೋತಿಯ ಬಗ್ಗೆ ಏನೆಲ್ಲ ಅಪಪ್ರಚಾರ ಮಾಡಿ ದೇವರ ಮೇಲೆ ಇರುವ ನಂಬಿಕೆಯನ್ನು ಕಡಿಮೆಗೊಳಿಸುವ ಕೆಲಸ ನಡೆಯುತ್ತಿದೆ. ಹಾಗಿರುವಾಗ ಮಕರ ಜ್ಯೋತಿ, ಮಕರ ನಕ್ಷತ್ರದ ರಹಸ್ಯವನ್ನು ತಿಳಿದುಕೊಳ್ಳಲು ಈ ಕಾದಂಬರಿ ಉತ್ತಮ ಸಾಧನವಾಗಿದೆ. ನೀವು ಕೂಡ ಖಂಡಿತವಾಗಿಯೂ ಈ ಪುಸ್ತಕವನ್ನು ಪಡೆದು ಓದಬೇಕು!
ಪುಸ್ತಕದ ಮಾಹಿತಿ:
ಕಾರಂಬರಿ: ಶೌರ್ಯಮಲೆ ಅಯ್ಯಪ್ಪನ ಪೂಂಗಾವನ
ಲೇಖಕರು: ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಶನ್
ದರ: ₹280
🖊ಶ್ರೀಕರ ಬಿ

Comments
Post a Comment