ಕೃಷ್ಣನ ಊರು ದ್ವಾರಕೆಯಿಂದ ಯಕ್ಷಗಾನದ ತವರೂರಿಗೆ ಬಂದು ನೆಲೆಸಿದ ಯಶೋಧಾಕರಾರ್ಚಿತ ಗೋಪಾಲಕೃಷ್ಣ!
ಕೃಷ್ಣನ ಊರು ದ್ವಾರಕೆಯಿಂದ ಯಕ್ಷಗಾನದ ತವರೂರಿಗೆ ಬಂದು ನೆಲೆಸಿದ ಯಶೋಧಾಕರಾರ್ಚಿತ ಗೋಪಾಲಕೃಷ್ಣ!
![]() |
| ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ |
ಇದು ಸುಮಾರು ಮೂರು ಯುಗಗಳ ಇತಿಹಾಸವುಳ್ಳ ದಕ್ಷಿಣ ಭಾರತದ ಪರಮ ಪವಿತ್ರ ಕೃಷ್ಣ ದೇವರ ಕ್ಷೇತ್ರ! ದಕ್ಷಿಣ ಭಾರತದ ಮಥುರೆ,ದಕ್ಷಿಣ ಭಾರತದ ದ್ವಾರಕೆಯೆಂದೇ ಕರೆಸಿಕೊಳ್ಳುವ ಉಡುಪಿ, ಗುರುವಾಯೂರು ಕ್ಷೇತ್ರಗಳಷ್ಟೆ ಪವಿತ್ರವಾಗಿರುವ ಕ್ಷೇತ್ರ! ತ್ರೇತಾಯುಗದಲ್ಲಿ ಪ್ರಭು ಶ್ರೀರಾಮಚಂದ್ರನ ದರ್ಶನಕ್ಕೆ ಕಾದು ತಪಸ್ಸನು ಆಚರಿಸುತ್ತಾ ಸಮಯದ ಅರಿವೇ ಇಲ್ಲದೆ ಒಂದು ಯುಗದ ಬಳಿಕ ದ್ವಾಪರಯುಗದಲ್ಲಿ ಶ್ರೀಕೃಷ್ಣನ ದರ್ಶನ ಪಡೆದ ಮಹರ್ಷಿಗಳಿಂದ ಸ್ಥಾಪನೆಗೊಂಡ ಕ್ಷೇತ್ರ! ಕುಂಬಳೆ ಸೀಮೆಯ ನಾಲ್ಕು ಪ್ರಧಾನ ಕ್ಷೇತ್ರಗಳಲ್ಲಿ ಒಂದು ಪ್ರಧಾನ ಕ್ಷೇತ್ರವಿದು! ಬ್ರಿಟಿಷರ ಕಾಲದಲ್ಲಿ ರೈಲ್ವೆ ಹಳಿಗೆ, ಕೆಲವು ವರ್ಷಗಳ ಮೊದಲು ರಾಷ್ಟ್ರೀಯ ಹೆದ್ದಾರಿಗೆ ದೇವಸ್ಥಾನವನ್ನೇ ತೆಗೆಯಬೇಕೆಂದು ಹೊರಟರೂ ಒಂದಿಚ್ಚು ಕದಲದೆ ಗಟ್ಟಿಯಾಗಿ ಅಲ್ಲೇ ನೆಲೆನಿಂತ ಅತ್ಯಂತ ಶಕ್ತಿಶಾಲಿ ದೇವರ ಕ್ಷೇತ್ರವಿದು! ಯಕ್ಷಗಾನ ಅದರಲ್ಲೂ ತೆಂಕುತಿಟ್ಟಿನ ಯಕ್ಷಗಾನದ ಮೂಲಸ್ಥಾನದಲ್ಲಿ ನೆಲೆನಿಂತು ಸಕಲ ಜನರನ್ನು ಪೊರೆಯುತ್ತಾ, "ಕೃಷ್ಣ...!" ಎಂದು ಕರೆದ ಕೂಡಲೆ ಕಷ್ಟದಲ್ಲಿರುವವರ ಬಳಿಗೆ ಓಡೋಡಿ ಬಂದು ಭಕ್ತರನ್ನು ರಕ್ಷಿಸುತ್ತಿರುವ ದೇವರು ಇವರು! ರಾತ್ರಿಯ ಹೊತ್ತು ಪೇಟೆಯಲ್ಲಿ ಬಿಳಿ ಕುದುರೆಯನ್ನು ಏರಿ ಸವಾರಿ ಮಾಡುತ್ತಿದ್ದ ರಹಸ್ಯಗಳು ಸೇರಿ ಹಲವಾರು ರಹಸ್ಯಗಳನ್ನು ತನ್ನೊಳಗೆ ಇಟ್ಟುಕೊಂಡಿರುವ ಕಾರಣಿಕ ಕ್ಷೇತ್ರವಿದು!
ಪೀಠಿಕೆಯಲ್ಲಿ ಇಷ್ಟೆಲ್ಲ ಹೇಳಿದಾಗ ನಿಮಗೆ ಯಾವ ಕ್ಷೇತ್ರ ಎಂದು ಅಂದಾಜು ಆಯಿತೇ!? ಇದುವೆ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ!
![]() |
| ಕಣಿಪುರ ಶ್ರೀ ಗೋಪಾಲಕೃಷ್ಣ ದೇವರು |
ಅದು ತ್ರೇತಾಯುಗ. ಭಗಾವನ್ ವಿಷ್ಣುವಿನ ಏಳನೆಯ ಅವತಾರ, ಮರ್ಯಾದ ಪುರಷೋತ್ತಮ ಪ್ರಭು ಶ್ರೀರಾಮಚಂದ್ರ ರಾವಣನ ಜೊತೆಗೆ ಯುದ್ಧ ಮಾಡಲು ಲಂಕೆಗೆ ಹೋಗುವ ಸಂದರ್ಭದಲ್ಲಿ ಶ್ರೀರಾಮನ ದರ್ಶನಕ್ಕಾಗಿ ತಪಸ್ಸನ್ನು ಮಾಡುತ್ತಿದ್ದ ಕಣ್ವ ಮಹರ್ಷಿಗಳಿಗೆ ಲಂಕೆಯಿಂದ ಬರುವಾಗ ದರ್ಶನ ನೀಡುವುದಾಗಿ ಅಭಯದಾನವನ್ನು ಪ್ರಭು ಶ್ರೀರಾಮಚಂದ್ರ ನೀಡಿದಾಗ ದೇವರ ದರ್ಶನಕ್ಕಾಗಿ ಮತ್ತೆ ಕಾಯುತ್ತಾ ತಪಸ್ಸನ್ನು ಮಾಡುತ್ತಿರುವಾಗ ಸಮಯದ ಅರಿವೇ ಮಹರ್ಷಿಗಳಿಗೆ ಆಗಲೇ ಇಲ್ಲ! ಅದೇ ವೇಳೆ ತನ್ನ ಸಹೋದರ ಭರತನಿಗೆ ಕೊಟ್ಟ ಮಾತಿನಂತೆ ಆದಷ್ಟು ಬೇಗ ಅಯೋಧ್ಯೆಗೆ ಮರಳಿ ಹೋಗಲೇಬೇಕಾದ ಕಾರಣ ಕಣ್ವ ಮಹರ್ಷಿಗಳನ್ನು ಭೇಟಿಯಾಗಲು ರಾಮನಿಗೆ ಆಗಲಿಲ್ಲ. ಹೀಗೆ ದಿನಗಳು ಹೋದಂತೆ ಒಂದು ಯುಗವೇ ಕಳೆದು ಹೋಯಿತು! ರಾಮನ ಅವತಾರ ಸಮಾಪ್ತಿಯಾಯಿತು! ತ್ರೇತಾಯುಗ ಮುಗಿದು ದ್ವಾಪರಯುಗ ಬಂತು! ಲೋಕದಲ್ಲಿ ಅಧರ್ಮ ತಾಂಡವ ಆಡುತ್ತಿದ್ದಾಗ ಧರ್ಮದ ಪುನರ್ಸ್ಥಾಪನೆಗೆ ಭಗವಾನ್ ವಿಷ್ಣು ಕೃಷ್ಣನಾಗಿ ಅವತಾರ ಎತ್ತಿದ್ದರು. ತಮ್ಮ ಬಾಲ್ಯದ ಜೀವನವನ್ನು ಗೋಕುಲ,ವೃಂದಾವನದಲ್ಲಿ ಯಶೋಧೆ-ನಂದಗೋಪನ ಜೊತೆಗೆ ಕಳೆದು ಮರಳಿ ಮಥುರೆ ಸೇರುವ ಸಂದರ್ಭದಲ್ಲಿ ಯಶೋಧೆಗೆ ಒಂದು ತನ್ನದೆ ವಿಗ್ರಹವನ್ನು ನೀಡಿದ ಕೃಷ್ಣ ಈ ವಿಗ್ರಹದಲ್ಲಿ ಸದಾಕಾಲ ನಾನು ಇರುತ್ತೇನೆ,ನನ್ನನ್ನು ಇದೇ ವಿಗ್ರಹದಲ್ಲಿ ನೀನು ಕಾಣು ಎಂದು ಹೇಳಿದನಂತೆ. ನಂತರ ಯಶೋಧೆಯು ಈ ವಿಗ್ರಹದಲ್ಲಿ ಕೃಷ್ಣನನ್ನು ಗೋಪಾಲಕೃಷ್ಣನಾಗಿ ಪೂಜಿಸಿದಳು. ಹೀಗೆ ಸಮಯ ಹೋದಂತೆ, ರಾಮಾವತಾರ ಮುಗಿದು ದ್ವಾಪರಯುಗದಲ್ಲಿ ಕೃಷ್ಣನಾಗಿ ಭಗವಾನ್ ವಿಷ್ಣು ಅವತಾರ ಎತ್ತಿರುವುದು ಕಣ್ವ ಮಹರ್ಷಿಗಳ ಅರಿವಿಗೆ ಬರುತ್ತದೆ. ಹೀಗಾಗಿ ಕೃಷ್ಣನನ್ನು ಕಾಣಲು ದ್ವಾರಕೆಗೆ ಹೋದಾಗ ಕೃಷ್ಣನನ್ನು ಕಂಡಾಗ ಈ ವಿಗ್ರಹವನ್ನು ನೀವು ಪೂಜಿಸಿ ಎಂದು ಇದೇ ವಿಗ್ರಹವನ್ನು ಕಣ್ವ ಮಹರ್ಷಿಗಳಿಗೆ ಕೃಷ್ಣ ನೀಡುತ್ತಾನೆ. ಹೀಗೆ ಗೋಪಾಲಕೃಷ್ಣನ ವಿಗ್ರಹ ಪಡೆದ ಮಹರ್ಷಿ ಕಣ್ವರು ಈ ವಿಗ್ರಹವನ್ನು ತೆಗೆದುಕೊಂಡು ದ್ವಾರಕೆಯಿಂದ ಹೊರಟು ವಿವಿಧೆಡೆ ಸಂಚರಿಸುತ್ತಾ ದಕ್ಷಿಣ ಭಾರತದ ಕಡೆಗೆ ಬಂದಾಗ ವಾಸುಕಿ ಕುಂಡ ಇರುವ ಈ ಸ್ಥಳವನ್ನು ಕಂಡಾಗ ಇದಕ್ಕಿಂತ ಯೋಗ್ಯ ಸ್ಥಳ ಇನ್ನು ಯಾವುದು ಇಲ್ಲವೆಂದು ಗೋಪಾಲಕೃಷ್ಣ ದೇವರ ವಿಗ್ರಹವನ್ನು ಇಲ್ಲಿಯೇ ಪ್ರತಿಷ್ಠಾಪಿಸುತ್ತಾರೆ! ಈ ವಾಸುಕಿ ಕುಂಡ ಇದೆಯಲ್ಲ ಇದಕ್ಕೆ ಹಾಗೂ ಸಮುದ್ರ ಮಥನಕ್ಕೆ ಸಂಬಂಧವಿದೆ! ಸಮುದ್ರ ಮಥನದ ಸಂದರ್ಭದಲ್ಲಿ ವಾಸುಕಿಯು ಅಡಗಿ ಕೂತ್ತಿದ್ದ ಸ್ಥಳ ಇದೇ ವಾಸುಕಿ ಕುಂಡ! ಇಂತಹ ಪವಿತ್ರ ಸ್ಥಳದಲ್ಲಿ ಗೋಪಾಲಕೃಷ್ಣ ನೆಲೆನಿಂತ! ಕಣ್ವ ಮಹರ್ಷಿಗಳಿಂದಾಗಿ "ಕಣ್ವಪುರ" ಎಂಬ ಹೆಸರನ್ನು ಪಡೆದ ಊರು ಬಳಿಕ "ಕಣಿಪುರ" ಎಂದಾಯಿತು! ಹೀಗೆ ಮಹರ್ಷಿ ಕಣ್ವರಿಂದ ಪ್ರತಿಷ್ಠಾನೆಗೊಂಡ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಳಿಕ ಹಲವು ರಾಜರ ಆಡಳಿತಕ್ಕೆ ಒಳಪಟ್ಟು 1600ರ ಬಳಿಕ ಮಾಯಿಪ್ಪಾಡಿ ಅರಸರ ಆಡಳಿತಕ್ಕೆ ಒಳಪಟ್ಟಿತು.
ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ಶಕ್ತಿ ಅದು ಊಹಿಸಲು ಸಾಧ್ಯವಾಗದ್ದು! 1800ರ ದಶಕದಲ್ಲಿ ಭಾರತ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟ ಸಮಯದಲ್ಲಿ ಕೋಯಿಕ್ಕೋಡಿನಿಂದ ಮಂಗಳೂರಿಗೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಬ್ರಿಟೀಷರು ಸರ್ವೆ ಮಾಡಿ ಅದರ ಅಂತಿಮ ವರದಿಯನ್ನೂ ತಯಾರಿಸಿ ಆಗಿತ್ತು! ಇದರ ಪ್ರಕಾರ ರೈಲ್ವೆ ಮಾರ್ಗ ಇದೇ ದೇವಸ್ಥಾನದ ಜಾಗದಲ್ಲೇ ಹಾದುಹೋಗುವುದು ಎಂದು ಆಗಿತ್ತಂತೆ! ಈ ವರದಿ ಒಪ್ಪಿಗೆ ಪಡೆಯಲು ಮುಖ್ಯ ಅಭಿಯಂತರರ ಸಹಿ ಒಂದೇ ಬಾಕಿ ಉಳಿದದ್ದು! ಒಪ್ಪಿಗೆ ನೀಡಿ ಇನ್ನೇನು ಸಹಿ ಮಾಡಲು ಎಂದು ಹೊರಟಾಗ ಆ ಮುಖ್ಯ ಅಭಿಯಂತರರ ಎರಡು ಕಣ್ಣುಗಳೇ ನಷ್ಟಗೊಂಡು ತನ್ನ ಜೀವನವೇ ಹಾಳಾಗುವಂತೆ ಆಗಿ ಹೋಯಿತಂತೆ! ಕೊನೆಗೆ ರೈಲ್ವೆ ಹಳಿ ಪ್ರಸ್ತಾವನೆಯನ್ನು ಮರುಪರಿಶೀಲಿಸಿದ ಬ್ರಿಟೀಷ್ ಸರ್ಕಾರ ತನ್ನ ಪ್ರಸ್ತಾವನೆಯನ್ನು ತಿದ್ದಿ ದೇವಸ್ಥಾನದ ಸಮೀಪ ಬದಲು ಈಗ ಇರುವ ಸ್ಥಳದ ಮೂಲಕ ಹಾದುಹೋಗುವಂತೆ ಪ್ರಸ್ತಾವನೆ ಮಾಡಿತಂತೆ! ಕೆಲವು ವರ್ಷಗಳ ಮೊದಲು ರಾ.ಹೆ 66 ಪನ್ವೇಲ್-ತಿರುವನಂತಪುರ ರಾಷ್ಟ್ರ ಹೆದ್ದಾರಿಯ ಅಗಲೀಕರಣದ ಕೆಲಸಕ್ಕೆ ಪ್ರಸ್ತಾವನೆಗೊಂಡ ಕಣಿಪುರ ದೇವಸ್ಥಾನದ ಕೊಡಿಮರದ ತನಕ ದೇವಸ್ಥಾನವನ್ನೇ ತೆಗೆಯಬೇಕಾಗುತ್ತದೆ ಎಂದು ಗೊತ್ತಾದಾಗ ಹಿಂದಿನ ಪೇಜಾವರ ಸ್ವಾಮಿಗಳು ಸೇರಿ ಲಕ್ಷಾಂತರ ಜನರು ದೇವಸ್ಥಾನವನ್ನು ಉಳಿಸಲು ಪ್ರತಿಭಟನೆ ಮಾಡಿದರು! ಕೊನೆಗೆ ರಸ್ತೆಯನ್ನೇ ದೇವಸ್ಥಾನದ ಸ್ಥಳದ ಬದಲು ಹಿಂದೆ ಈಗ ಕಾಣುವಂತೆ ಆ ಸ್ಥಳದಲ್ಲಿ ಹಾದುಹೋಗುವಂತೆ ಮಾಡಲಾಯಿತು. ಇತ್ತೀಚೆಗೆ ನಡೆದ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸದ ಮೊದಲು ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ "ನಾನು ಇಲ್ಲಿಂದ ಏಳುವುದಿಲ್ಲ,ಸಾಧ್ಯವಿದ್ದವರು ನನ್ನನ್ನು ಎಬ್ಬಿಸಿಕೊಳ್ಳಿ!" ಎಂದು ದೇವರ ತೀರ್ಮಾನ ಕಂಡು ಬಂತಂತೆ! ಅಂದರೆ ಕಣಿಪುರದ ಆ ಪುಣ್ಯ ನೆಲದಲ್ಲಿ ದೇವರು ಗಟ್ಟಿಯಾಗಿ ನೆಲೆನಿಂತು ಆಗಿತ್ತು.ಯಾರು ಎಷ್ಟೇ ಪ್ರಯತ್ನ ಮಾಡಿದರೂ ಅಲ್ಲಿಂದ ದೇವರನ್ನು ಸ್ಥಳಾಂತರಿಸಲು,ದೇವಸ್ಥಾನವನ್ನು ತೆರವು ಮಾಡಲು ಸಾಧ್ಯವಾಗಿಲ್ಲ! ಇದು ಕಣಿಪುರ ಶ್ರೀ ಗೋಪಾಲಕೃಷ್ಣನ ಮಹಿಮೆ!
ಅಲ್ಲಿಯ ಹಿರಿಯರು ಹೇಳುವ ಪ್ರಕಾರ ಹಿಂದಿನ ಕಾಲದಲ್ಲಿ ಮಧ್ಯರಾತ್ರಿಯ ವೇಳೆ ಬಿಳಿ ಕುದುರೆಯನ್ನು ಏರಿ ಕೃಷ್ಣ ದೇವರು ಕುಂಬಳೆ ಪೇಟೆಯ ಸವಾರಿ ಮಾಡುತ್ತಿದ್ದರಂತೆ. ಇದರ ಅರ್ಥವೇನಂದರೆ ಸಾಕ್ಷಾತ್ ಕೃಷ್ಣ ದೇವರೇ ಇಲ್ಲಿ ಯಾವಾಗಲು ಇರುವುದು ಮಾತ್ರವಲ್ಲದೆ ತನ್ನನ್ನು ಪೂಜಿಸುವ ಜನರ ಯೋಗಕ್ಷೇಮವನ್ನು, ತನ್ನ ಊರಿನ ಸ್ಥಿತಿಗತಿಯನ್ನು ನೋಡಲು ಸ್ವತಃ ತಾನೇ ಹೋಗಿ ನೋಡಿಬರುವುದನ್ನು ಕಾಣಬಹುದು! ಹೀಗಾಗಿ ಕಣಿಪುರದ ಗೋಪಾಲಕೃಷ್ಣ ಸಾಮಾನ್ಯನಲ್ಲ,ಅತ್ಯಂತ ಶಕ್ತಿಶಾಲಿ ದೇವರು ಎಂಬುದು ಇಲ್ಲಿಯವರ ನಂಬಿಕೆ! ಇಲ್ಲಿಯ ಜನರ ಹೇಳುವ ಹಾಗೆ ಕಣಿಪುರ ದೇವಸ್ಥಾನಕ್ಕೆ ಮತ್ತೊಂದು ಹೆಸರು "ಸತ್ಯ ಚಾವಡಿ" ಎಂದು, ಯಾಕೆಂದರೆ ಅಲ್ಲಿ ಯಾರು ಸುಳ್ಳು ಹೇಳುವ ಹಾಗೆ ಇಲ್ಲವಂತೆ! ಇನ್ನು ತುಳುನಾಡಿನ ದೇವಸ್ಥಾನಗಳ ಶಾಸ್ತ್ರದ ಪ್ರಕಾರ ಒಂದು ದೇವಸ್ಥಾನದ ಜೀರ್ಣೋದ್ಧಾರ,ಬ್ರಹ್ಮಕಲಶೋತ್ಸವ ಪ್ರತಿ 12 ವರ್ಷಗಳಿಗೊಮ್ಮೆ ಅಥವ 18 ವರ್ಷಕ್ಕೊಮ್ಮೆ ನಡೆಯುವುದು ಪದ್ಧತಿ. ದೇವರ ವಿಗ್ರಹಕ್ಕೆ ಅಳವಡಿಸಿದ ಅಷ್ಟಬಂಧ 12 ವರ್ಷಗಳ ಬಳಿಕ ಅಥವ ನಿರ್ದಿಷ್ಟ ಸಮಯದ ಬಳಿಕ ಜೀರ್ಣಗೊಳ್ಳುತ್ತದೆ. ಹೀಗಾಗಿ ಹೊಸ ಅಷ್ಟಬಂಧವನ್ನು ಅಳವಡಿಸಿ ದೇವರಿಗೆ ಬ್ರಹ್ಮಕಲಶಾಭಿಷೇಕ ಮಾಡುವ ಮಹೋತ್ಸವವೇ ಬ್ರಹ್ಮಕಲಶೋತ್ಸವ. 1971 ಹಾಗೂ 1989ರಲ್ಲಿ ಇಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯ, ಬ್ರಹ್ಮಕಲಶೋತ್ಸ ನಡೆದ ಬಳಿಕ ಬರೋಬ್ಬರಿ 36 ವರ್ಷಗಳ ಕಾಲ ಯಾವುದೇ ಜೀರ್ಣೋದ್ಧಾರ,ಬ್ರಹ್ಮಕಲಶೋತ್ಸವ ಕಾರ್ಯ ಇಲ್ಲಿ ಆಗಲಿಲ್ಲವಂತೆ! ಇದರ ಬಳಿಕ ಎರಡು ವರ್ಷಗಳ ಮೊದಲು ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದು ವಿಜೃಂಭಣೆಯಿಂದ ದೇವರ ಪುನರ್ಪ್ರತಿಷ್ಠೆ,ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಿತು. ಇನ್ನು ಗೋಪಾಲಕೃಷ್ಣ ನೆಲೆನಿಂತ ಕಣಿಪುರ ಊರಿಗೆ ಮತ್ತೊಂದು ವಿಶೇಷತೆಯಿದೆ. ಅದುವೇ ಯಕ್ಷಗಾನ!
ಪಾರ್ಥಿಸುಬ್ಬ! ಇವನ ಹೆಸರನ್ನು ಕೇಳದ ಯಕ್ಷಗಾನದ ಅಭಿಮಾನಿಗಳು ಯಾರು ಇದ್ದಾರೆ ಹೇಳಿ! ಪಾರ್ಥಿಸುಬ್ಬನನ್ನು ತೆಂಕುತಿಟ್ಟಿನ ಯಕ್ಷಗಾನದ ಪಿತಾಮಹ ಎಂದೇ ಗುರುತಿಸುತ್ತಾರೆ. ಕಣಿಪುರ ಗೋಪಾಲಕೃಷ್ಣ, ಮಧೂರು ಗಣಪತಿಯನ್ನು ಸ್ಮರಿಸಿ ಹಲವಾರು ಪದ್ಯಗಳನ್ನು, ಯಕ್ಷಗಾನದಲ್ಲಿ ಅನೇಕ ಪ್ರಸಂಗಗಳನ್ನು ರಚಿಸಿರುವ ಪಾರ್ಥಿಸುಬ್ಬನ ಊರೇ ಕಣಿಪುರ! ಹೀಗಾಗಿ ಕಣಿಪುರವನ್ನು ಯಕ್ಷಗಾನದ ತವರೂರು ಎಂದು ಗುರುತಿಸುತ್ತಾರೆ. ಯಕ್ಷಗಾನಕ್ಕೂ ಕಣಿಪುರಕ್ಕೂ ಅವಿನಾಭಾವದ ಸಂಬಂಧ! ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ಕಣಿಪುರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಉತ್ಸವದ ವೇಳೆ ಗೋಪಾಲಕೃಷ್ಣ ದೇವರಿಗೆ ಯಕ್ಷಗಾನ ಸೇವೆ ಪ್ರತಿ ವರ್ಷವೂ ನಡೆಯುತ್ತದೆ.
ಉಡುಪಿ ಶ್ರೀಕೃಷ್ಣ, ಗುರುವಾಯೂರು ಶ್ರೀಕೃಷ್ಣನಂತೆ ದ್ವಾರಕೆಯಿಂದ ಬಂದು ನೆಲೆನಿಂತ ಗೋಪಾಲಕೃಷ್ಣನ ವಿಗ್ರಹ ಅತ್ಯಂತ ಸುಂದರವಾದದ್ದು. ಉಡುಪಿ ಹಾಗೂ ಗುರುವಾಯೂರಿನಲ್ಲಿ ಕೃಷ್ಣನ ಬಾಲರೂಪದ ವಿಗ್ರಹವನ್ನು ಕಾಣುವಂತೆ ಇಲ್ಲಿಯೂ ಬಾಲ ರೂಪದಲ್ಲೇ ಕೃಷ್ಣನ ದರ್ಶನ ಮಾಡಬಹುದು.
![]() |
| ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ಉತ್ಸವ ಮೂರ್ತಿ |
ಒಂದು ಕೈಯಲ್ಲಿ ಬೆಣ್ಣೆಯನ್ನು ಹಿಡಿದುಕೊಂಡು ನಿಂತಿರುವ ಗೋಪಾಲಕೃಷ್ಣನ ಕಣಿಪುರದಲ್ಲಿ ದರ್ಶನ ಮಾಡಲು ಸಾಧ್ಯವಾದರೆ, ಉಡುಪಿಯಲ್ಲಿ ನಾವು ಕಡಗೋಲು ಕೃಷ್ಣನನ್ನು ಕಾಣಬಹುದು. ಇನ್ನು ಗುರುವಾಯೂರಿನಲ್ಲಿ ಬಾಲಕೃಷ್ಣನೇ ಆದರೂ ಚತುರ್ಭುಜವನ್ನು ಹೊಂದಿ ನಾಲ್ಕು ಕೈಗಳಲ್ಲಿ ಶಂಖ,ಚಕ್ರ,ಗದ,ಪದ್ಮವನ್ನು ಹೊಂದಿರುವ ಕೃಷ್ಣನ ದರ್ಶನ ನಾವು ಮಾಡಬಹುದು. ಹೀಗೆ ದಕ್ಷಿಣ ಭಾರತದ ಪ್ರಮುಖ ಕೃಷ್ಣ ಕ್ಷೇತ್ರವಾಗಿ ಬೆಳಗುತ್ತಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತಿ ವರ್ಷ ಮಕರ ಸಂಕ್ರಮಣದ ದಿನದಿಂದ ಆರಂಭಗೊಂಡು ಐದು ದಿನಗಳ ಕಾಲ ವಾರ್ಷಿಕ ಜಾತ್ರೋತ್ಸವ ನಡೆಯುತ್ತದೆ. ಇಲ್ಲಿ ದರ್ಶನ ಬಲಿ,ಕುಂಬಳೆ ಬೆಡಿ ಪ್ರಮುಖ ಉತ್ಸವಗಳು. ನಾಲ್ಕನೆಯ ದಿನ ರಾತ್ರಿ ವೈಭವದ "ಕುಂಬಳೆ ಬೆಡಿ" ನಡೆಯುತ್ತದೆ. ಕಾಸರಗೋಡಿನಲ್ಲಿ ಅಡೂರು ಬೆಡಿ,ಮಧೂರು ಬೆಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ಬೆಡಿ ಎಷ್ಟು ಪ್ರಸಿದ್ಧವೋ ಅದೇ ರೀತಿ ಕುಂಬಳೆ ಬೆಡಿಯೂ ಅಷ್ಟೇ ಪ್ರಸಿದ್ಧ! ರಾಷ್ಟ್ರೀಯ ಹೆದ್ದಾರಿಯ ಸಮೀಪವೇ ಮಂಗಳೂರಿನಿಂದ ಕೇವಲ 39 ಕಿಲೋಮೀಟರ್ ದೂರದಲ್ಲಿ,ಕಾಸರಗೋಡಿನಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿ ಕುಂಬಳೆಯಲ್ಲಿರುವ ಈ ದೇವಸ್ಥಾನಕ್ಕೆ ನೀವು ಕೂಡ ಒಮ್ಮೆ ಭೇಟಿ ನೀಡಿ! ನಿಮಗೂ ಇಲ್ಲಿ ಬೇರೆ ರೀತಿಯ ಅನುಭವ,ಕೃಷ್ಣನ ದರ್ಶನ, ಆಶೀರ್ವಾದ ಖಂಡಿತ ಆಗುತ್ತದೆ!
ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ| ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ||
🖊ಶ್ರೀಕರ ಬಿ




Comments
Post a Comment