ಚಾರಣಿಗರ ಸ್ವರ್ಗ ಕುಮಾರ ಪರ್ವತ: ಭಕ್ತಿ ಮತ್ತು ಸಾಹಸದ ಅವಿಸ್ಮರಣೀಯ ಸಂಗಮ

 

ಚಾರಣಿಗರ ಸ್ವರ್ಗ ಕುಮಾರ ಪರ್ವತ: ಭಕ್ತಿ ಮತ್ತು ಸಾಹಸದ ಅವಿಸ್ಮರಣೀಯ ಸಂಗಮ

ಕುಮಾರ ಪರ್ವತ! ಇದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಚಿರಪರಿಚಿತ ಹೆಸರು! ಅಷ್ಟೇ ಅಲ್ಲ! ಸುಬ್ರಹ್ಮಣ್ಯಕ್ಕೆ ಬರುವವರಿಗೆ ದೇವಸ್ಥಾನದ ಜೊತೆಗೆ ಹಿಂಬದಿಯಲ್ಲಿ ಕಾಣಸಿಗುವ ಬೆಟ್ಟ ಯಾವುದು ಎಂದು ಕೇಳಿದ ತಕ್ಷಣ ಹೇಳುವುದು ಕುಮಾರ ಪರ್ವತ(ಆದರೆ ನಿಜವಾಗಿ ಅದು ಶೇಷ ಪರ್ವತ) ಎಂದು! ಹಾಗಾಗಿ ಸುಬ್ರಹ್ಮಣ್ಯಕ್ಕೆ ಬಂದು ಹೋದವರಿಗೆ ಕುಮಾರ ಪರ್ವತ ಚಿರಪರಿಚಿತ ಹೆಸರು. ಜೊತೆಗೆ ಚಾರಣಪ್ರಿಯರಿಗೆ ಅಂತು ಇದು ಸ್ವರ್ಗ! ಎಷ್ಟು ಸಲ ಚಾರಣ ಮಾಡಿದರೂ ಮತ್ತೆ ಮತ್ತೆ ತನ್ನ ಹತ್ತಿರ ಚಾರಣ ಪ್ರಿಯರನ್ನು ಸೆಳೆಯುವ ಶಿಖರವಿದು! ನೋಡಲು ಎಷ್ಟು ಸುಂದರವೋ ಅಷ್ಟೇ ಕಠಿಣವಿರುವ ಚಾರಣವಿದು!
 
ಎರಡು ವರ್ಷಗಳ ಮೊದಲು ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಚಾರಣ ಮಾಡಿದ್ದೆ. ಆ ಬಳಿಕ ಬದಲಾದ ನಿಯಮಗಳಿಂದಾಗಿ ಕುಮಾರ ಪರ್ವತ ಚಾರಣವೂ ಕೇವಲ ಒಂದೇ ದಿನಕ್ಕೆ ಸೀಮಿತಗೊಂಡಿತು. ಸುಬ್ರಹ್ಮಣ್ಯ ಭಾಗದಿಂದ ಹೋಗುವುದಾದರೂ ಒಂದೇ ದಿನದಲ್ಲಿ ಕುಮಾರ ಪರ್ವತ ಹತ್ತಿ ಇಳಿಯಲೇ ಬೇಕು. ಗಿರಿಗದ್ದೆಯಲ್ಲಿ ಭಟ್ಟರಮನೆ ಅಥವ ಅರಣ್ಯ ಇಲಾಖೆಯ ಚೆಕ್ ಪೋಸ್ಟಿನಲ್ಲಿ ರಾತ್ರಿಯ ವೇಳೆ ತಂಗುವ ಹಾಗಿಲ್ಲ. ಈ ನಿಯಮದಿಂದಾಗಿ ಸುಬ್ರಹ್ಮಣ್ಯ ಭಾಗದಿಂದ ಹತ್ತಿ ಇಳಿಯುವುದು ಇನ್ನಷ್ಟು ಕಠಿಣಗೊಂಡಿದೆ.
 
ಈ ಕುಮಾರ ಪರ್ವತ ಚಾರಣವಿದೆಯಲ್ಲ, ಇದು ಸಾಮಾನ್ಯ ಚಾರಣವಲ್ಲ! ಯಾವುದೇ ಮೋಜು ಮಸ್ತಿ ಮಾಡಲು ಚಾರಣ ಮಾಡುತ್ತೀರಿ ಎಂದಾದರೂ ಖಂಡಿತ ಸಾಧ್ಯವಿಲ್ಲ! ಇದಕ್ಕೆ ನಮ್ಮ ದೇಹವನ್ನು ಚಾರಣಕ್ಕೆಂದು ಸಿದ್ಧಪಡಿಸಬೇಕು ಜೊತೆಗೆ ಮನಸ್ಸು ಕೂಡ ಗಟ್ಟಿಯಾಗಿರಬೇಕು. "ಏನೇ ಆಗಲಿ, ನಾನು ಕುಮಾರ ಪರ್ವತ ಏರಿಯೇ ತೀರುತ್ತೇನೆ, ಇಂದೇ ಚಾರಣ ಪೂರ್ಣಗೊಳಿಸುತ್ತೇನೆ!" ಎಂಬ ಧೃಡ ನಿರ್ಧಾರವಿದ್ದರೆ ಮಾತ್ರ ಒಂದೇ ದಿನದಲ್ಲಿ ಹತ್ತಿ ಇಳಿಯಬಹುದು! ಇಲ್ಲದಿದ್ದರೆ ಅರ್ಧ ದಾರಿಯಲ್ಲಿ ನೀವು ಬಾಕಿ ಆಗುವುದು ಖಂಡಿತ!
 
ಪ್ರತಿ ಬಾರಿಯೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಮಹೋತ್ಸವದ ಸುದ್ದಿಗಳು, ಫೋಟೋ,ವಿಡಿಯೋ ನೋಡುತ್ತಿರುವಾಗ ಷಷ್ಠಿ ಜಾತ್ರೆ ಮುಗಿದ ಬಳಿಕ ಕುಮಾರಪರ್ವತದ ಶಿಖರದಲ್ಲಿ ನಡೆಯುವ ಕುಮಾರ ಪಾದಪೂಜೆ, ಕುಮಾರ ಪಾದಯಾತ್ರೆಯ ಸುದ್ದಿಯನ್ನು ನೋಡುತ್ತಿದೆ. ಕಳೆದ 4-5 ವರ್ಷಗಳಿಂದ ಒಮ್ಮೆಯಾದರೂ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಕುಮಾರಪರ್ವತಕ್ಕೆ ಹೋಗಿ ಪೂಜೆ ನೋಡಬೇಕು ಎಂಬ ಆಸೆ ಇತ್ತು. ಆದರೆ ಏನೇ ಮಾಡಿದರೂ ಪ್ರತಿ ಬಾರಿಯೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಹೇಗಾದರೂ ಮಾಡಿ ಕುಮಾರ ಪರ್ವತ ಹತ್ತಬೇಕು ಎಂದು ಎರಡು ವರ್ಷದ ಮೊದಲು ಹೊರಟಾಗ ನನ್ನ ಜೊತೆಗೆ ಗೆಳೆಯರು ಬಂದರು. ಹೀಗೆ ಗೆಳೆಯರ ಜೊತೆಗೆ ಎರಡು ದಿನ ಸುಬ್ರಹ್ಮಣ್ಯ ಭಾಗದಿಂದ ಕುಮಾರ ಪರ್ವತ ಚಾರಣ ಮಾಡಿದ್ದೆ. ಚಾರಣ ಮಾಡಿ ಸುಬ್ರಹ್ಮಣ್ಯಕ್ಕೆ ಇಳಿಯುವಾಗ ಮತ್ತೊಮ್ಮೆ ಸಮಯ ಸಿಕ್ಕಾಗ ಕುಮಾರ ಪರ್ವತ ಹತ್ತಬೇಕು ಎಂದು ಅನಿಸಿತು. ಸಮಯ ಉರುಳಿತು, ಚಾರಣದ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಾಯಿತು, ಒಂದೇ ದಿನ ಸಾವಿರಾರು ಜನರು ಚಾರಣ ಮಾಡಲು ಹೊರಟರು, ಹೋದವರು ಪರಿಸರವನ್ನು ಮಲೀನಗೊಳಿಸಿದರು, ಕೊನೆಗೆ ಸರ್ಕಾರವೇ ಚಾರಣಕ್ಕೆ ನಿರ್ಬಂಧ ಹೇರಿ ನಂತರ ಬಹಳಷ್ಟು ಕಠಿಣ ನಿಯಮಗಳೊಂದಿಗೆ ಚಾರಣಕ್ಕೆ ಅನುಮತಿ ನೀಡಿತು. ಒಂದೇ ದಿನದಲ್ಲಿ ಹತ್ತಿ ಇಳಿಯಬೇಕೆಂಬ ನಿಯಮ ಇರುವ ಕಾರಣ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು,ದೈಹಿಕ ವ್ಯಾಯಾಮವನ್ನು ಮಾಡದೆ ಚಾರಣ ಮಾಡಲು ಸಾಧ್ಯವಿಲ್ಲವೆಂದು ನಾನು ಮತ್ತೊಮ್ಮೆ ಚಾರಣ ಮಾಡಲು ಹೊರಡಲಿಲ್ಲ.
ಈ ವರ್ಷ ಷಷ್ಠಿ ಜಾತ್ರೆಯ ಸಮಯದಲ್ಲೇ ಕುಮಾರ ಪಾದಯಾತ್ರೆ ಯಾವಾಗ ನಡೆಯುತ್ತದೆ ಎಂದು ತಿಳಿದುಕೊಳ್ಳಲು ಹೊರಟೆ. ಸಮಯವಿದ್ದರೆ ಕುಮಾರ ಪಾದಯಾತ್ರೆಯಲ್ಲಿ ಪಾಲ್ಗೊಂಡು ಕುಮಾರ ಪರ್ವತ ಹತ್ತಬೇಕೆಂಬ ಉದ್ದೇಶವಿತ್ತು. ದಿನಾಂಕ ಗೊತ್ತಾಯಿತು, ದೇವರ ಸಂಕಲ್ಪವೋ ಏನೋ ಹೋಗಲು ಬೇಕಾದ ಎಲ್ಲಾ ವ್ಯವಸ್ಥೆಗಳು ಸುಲಭವಾಗಿ ಆಯಿತು. ಅಂತಿಮವಾಗಿ ನಿನ್ನೆಯ ದಿನ ದೇವಸ್ಥಾನದ ತಂಡ ಹಾಗೂ ಊರಿನ ಭಕ್ತಾದಿಗಳು, ಚಾರಣಗಿರ ಜೊತೆಗೆ ಸೋಮವಾರಪೇಟೆ ತಾಲೂಕಿನ ಬೀಡಳ್ಳಿಯಿಂದ ಕುಮಾರ ಪರ್ವತದ ಚಾರಣ ಮಾಡಿದೆವು. ಸುಬ್ರಹ್ಮಣ್ಯ-ಕುಮಾರಪರ್ವತ-ಸುಬ್ರಹ್ಮಣ್ಯ ಚಾರಣದ ಬಗ್ಗೆ ಈ ಹಿಂದೆ ಎರಡು ವರ್ಷಗಳ ಮೊದಲು ಲೇಖನ ಬರೆದಿದ್ದೆ.( ಲೇಖನದ ಲಿಂಕ್: https://bshreekara.blogspot.com/.../a-wonderful-trek-to...)
ಈ ಬಾರಿ ಬೀಡಳ್ಳಿ-ಕುಮಾರ ಪರ್ವತ-ಬೀಡಳ್ಳಿ ಚಾರಣದ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ.
ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ,ಪುಷ್ಪಗಿರಿ

ಭಾಗ 1: ಬೀಡಳ್ಳಿ- ಮೊದಲನೆಯ ವ್ಯೂ ಪಾಯಿಂಟ್( 3.5 ಕಿ.ಮಿ)

 
ಮೊದಲು ಬೀಡಳ್ಳಿ ಬಳಿಯ ಪುಷ್ಪಗಿರಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಶ್ರೀ ಶಾಂತ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ಚಾರಣದ ಯಶಸ್ಸಿಗೆ ಪ್ರಾರ್ಥಿಸಿದೆವು. ಬಳಿಕ ಅಲ್ಲಿಂದ ಹೊರಟು ಸುಮಾರು 1 ಕಿ.ಮಿ ದೂರದಲ್ಲಿರುವ ಬೀಡಳ್ಳಿ ಅರಣ್ಯ ಇಲಾಖೆಯ ಚೆಕ್ ಪೋಸ್ಟಿಗೆ ಹೋದೆವು. ಇಲ್ಲಿ ಬಿಗಿ ತಪಾಸಣೆಯ ಬಳಿಕ ನಮಗೆ ಚಾರಣ ಮಾಡಲು ಅನುಮತಿ ನೀಡಿದರು. ಅಲ್ಲಿಂದ ಹೊರಟ ನಮಗೆ ಕಾಡಿನ ಮಧ್ಯೆ ಸಾಗುತ್ತಾ ಮೊದಲು ಕುಮಾರಧಾರ ನದಿಗೆ ಅಡ್ಡಲಾಗಿರುವ ತೂಗು ಸೇತುವೆಯನ್ನು ದಾಟಿ ಕುದುರೆದೊಡ್ಡಿಯ ತನಕದ ಸುಮಾರು 2.5 ಕಿ.ಮಿ ದಾರಿಯನ್ನು 36 ನಿಮಿಷದಲ್ಲಿ ಕ್ರಮಿಸಿದೆವು. ಆ ಬಳಿಕ ಅಲ್ಲಿಂದ ಮುಂದೆ ಸಾಗುತ್ತಾ ಹೋದಂತೆ ದಟ್ಟ ಕಾಡಿನ ಮಧ್ಯೆ ಎತ್ತರವಾಗಿ ಬೆಳೆದಿರುವ ಮರಗಳ ಬೇರು,ಅಲ್ಲಲ್ಲಿ ಬಿದ್ದಿರುವ ಮರದ ರೆಂಬೆ-ಕೊಂಬೆಗಳು,ಕಲ್ಲುಗಳನ್ನು ದಾಟಿ ಹತ್ತುತ್ತಾ 1 ಗಂಟೆ 14 ನಿಮಿಷದಲ್ಲಿ ಮೊದಲ ವ್ಯೂ ಪಾಯಿಂಟ್ ತಲುಪಿದೆವು. ಇಲ್ಲಿ ಮಲ್ಲಳ್ಳಿ, ಕುಮಾರ ಹಳ್ಳಿ,ಬೀಡಳ್ಳಿ, ಪುಷ್ಪಗಿರಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಬಿಸಲೆ ಭಾಗದ ಬೆಟ್ಟಗಳನ್ನು ನೋಡಬಹುದು. ಇಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ನಾವು ಅಲ್ಲಿಂದ ಚಾರಣವನ್ನು ಮತ್ತೆ ಆರಂಭಿಸಿದೆವು.

 
ಕುಮಾರಧಾರ ನದಿ 

ಅರಣ್ಯ ಮಾರ್ಗದ ಹಾದಿ

ಭಾಗ 2: ಮೊದಲನೆಯ ವ್ಯೂ ಪಾಯಿಂಟ್- ಕುಮಾರ ಪರ್ವತ ಶಿಖರ(3 ಕಿ.ಮಿ)

ಮೊದಲನೆಯ ವ್ಯೂ ಪಾಯಿಂಟ್

ಮೊದಲನೆಯ ವೀಕ್ಷಣಾ ಸ್ಥಳದಿಂದ ಹೊರಟು 3 ಕಿ.ಮಿ ಫಲಕವನ್ನು ದಾಟಿ ಸ್ವಲ್ಪ ದೂರ ಕ್ರಮಿಸಿದಾಗ ಮೊಲನೆಯ ಬಂಡೆ ಸಿಗುತ್ತದೆ. ಈ ಭಾಗ ಚಾರಣದ ಮಾರ್ಗದಲ್ಲಿರುವ ಅತ್ಯಂತ ಕಠಿಣ ಭಾಗ. ಈ ಬಂಡೆಯಲ್ಲಿ ನೀರು ಹರಿಯುವ ಕಾರಣ ಜಾರುತ್ತಿತ್ತು. ಆದರೆ ಬಂಡೆಯ ಎಡಗಡೆಯಲ್ಲಿ ಹಗ್ಗವನ್ನು ಕಟ್ಟಲಾಗಿತ್ತು. ಹಗ್ಗದ ಸಹಾಯದಿಂದ ಮುಂದೆ ಹೋಗಬಹುದು. ಆದರೆ ನಾವು ಎಡಕ್ಕೆ ತಿರುಗದೆ ನೇರವಾಗಿ ಬಂಡೆಯನ್ನು ಹತ್ತಿದೆವು. ಈ ಬಂಡೆಯನ್ನು ಹತ್ತಿದಾಗ ಸುತ್ತಮುತ್ತಲಿನ ಪರ್ವತ ಶ್ರೇಣಿಗಳನ್ನು ಚೆನ್ನಾಗಿ ನೋಡಬಹುದು. ಬಳಿಕ ಮತ್ತೆ ಕಾಡಿನ ಮಧ್ಯೆ ಸಾಗುತ್ತಾ ಹೋದಂತೆ ಸ್ವಲ್ಪ ದೂರದಲ್ಲಿ ಎರಡನೆಯ ಬಂಡೆ ಸಿಗುತ್ತದೆ. ಈ ಬಂಡೆಯೂ ಮೊದಲನೆಯ ಬಂಡೆಯಂತೆ ಕಡಿದಾಗಿದ್ದರೂ ಜಾರದ ಕಾರಣ ಸುಲಭವಾಗಿ ಹತ್ತಬಹುದು. ಎರಡನೆಯ ಬಂಡೆಯನ್ನು ಹತ್ತಿದ ಬಳಿಕ ಬಲಬದಿಯಲ್ಲಿ ಶೇಷ ಪರ್ವತದ ಮೊದಲ ನೋಟವನ್ನು ಕಾಣಬಹುದು. ಇಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ ಮತ್ತೆ ಸ್ವಲ್ಪ ದೂರ ಕಾಡಿನ ಮಧ್ಯೆ ನಡೆದುಕೊಂಡು ಹೋದಾಗ ಮೂರನೆಯ ಬಂಡೆ ಸಿಗುತ್ತದೆ. ಇಲ್ಲಿಂದ ನಾವು ನೇರವಾಗಿ ಕುಮಾರ ಪರ್ವತಕ್ಕೆ ಹೋಗುವ ಬದಲು ಅಲ್ಲಿ ಎಡಕ್ಕೆ ತಿರುಗಿ ಕುಮಾರ ತೀರ್ಥಕ್ಕೆ ಹೋದೆವು. ಕುಮಾರ ತೀರ್ಥ ಪವಿತ್ರ ಕುಮಾರಧಾರ ನದಿಯ ಉಗಮ ಸ್ಥಾನವಾಗಿದೆ. ಇಲ್ಲಿ ಒಂದು ಸಣ್ಣ ಕೊಳವಿದ್ದು, ಶುದ್ಧ ನೀರು ಸಿಗುತ್ತದೆ. ನೀರು ಕುಡಿಯಬೇಕೆಂದು ಇದ್ದರೆ ಇಲ್ಲಿ ತಮ್ಮ ಬಾಟಲಿಗಳಿಗೆ ನೀರು ತುಂಬಿಸಿ ಕುಡಿಯಬಹುದು. ಕುಮಾರ ತೀರ್ಥಕ್ಕೆ ಹೋಗಲು ಯಾವುದೇ ಫಲಕಗಳು ಇಲ್ಲ. ಆದ್ದರಿಂದ ದಾರಿ ಗೊತ್ತಿದ್ದರೆ ಮಾತ್ರ ಹೋಗಬಹುದು. ಕುಮಾರ ತೀರ್ಥದಿಂದ ಮರಳಿ ಕುಮಾರ ಪರ್ವತ ಮಾರ್ಗಕ್ಕೆ ಸೇರಿದ ಬಳಿಕ ಕುಮಾರ ಪರ್ವತ ಚಾರಣದ ಕೊನೆಯ ಭಾಗವನ್ನು ಕ್ರಮಿಸಿ ಕೊನೆಗೆ 1 ಗಂಟೆ 13 ನಿಮಿಷದಲ್ಲಿ ಕುಮಾರ ಪರ್ವತ ತಲುಪಿದೆವು. 
ಮೊದಲನೆಯ ಬಂಡೆ

 
ಬಂಡೆಗಳ ಮೇಲಿನ ಹಾದಿ

ಶೇಷ ಪರ್ವತ

ಕುಮಾರ ತೀರ್ಥ- ಪವಿತ್ರ ಕುಮಾರಧಾರ ನದಿಯ ಉಗಮ ಸ್ಥಾನ


 
ಕುಮಾರ ಪರ್ವತದ ಬಳಿ ಅಲ್ಲಿಂದ ಸುಬ್ರಹ್ಮಣ್ಯ ಪೇಟೆ,ಕುಮಾರಧಾರ ನದಿ, ಸೇತುವೆ, ಕುಮಾರಸ್ವಾಮಿ ಶಾಲೆ ಹೀಗೆ ಹಲವಾರು ಕಟ್ಟಡಗಳು, ಸ್ಥಳಗಳನ್ನು ನೋಡಿ ಆನಂದಪಟ್ಟೆ. ನಾವು ತಲುಪುವಾಗಲೇ ಕುಮಾರ ಪಾದಪೂಜೆ ಆರಂಭವಾಗಿತ್ತು ಹೀಗಾಗಿ ನೇರವಾಗಿ ಪೂಜೆಯಲ್ಲಿ ಪಾಲ್ಗೊಂಡೆವು. ಸುಬ್ರಹ್ಮಣ್ಯ ದೇವರ ಪಾದಕ್ಕೆ ಹಾಗೂ ಬೆಳ್ಳಿಯ ವಿಗ್ರಹಕ್ಕೆ ಅಭಿಷೇಕವನ್ನು ಕಣ್ತುಂಬಿಕೊಂಡ ಬಳಿಕ ನಾವು ಅಲ್ಲಿ ಶ್ರೀ ಶಾಂತ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ನಮಸ್ಕರಿಸಿ ಅಲ್ಲೇ ಸುತ್ತಮುತ್ತ ವಿಹರಿಸಿದೆವು. ಪರ್ವತದ ಶಿಖರವು ಸಮತಟ್ಟಾದ ಪ್ರದೇಶವಾಗಿದೆ. ಹಾಗಾಗಿ ಅದು ವಿಶಾಲವಾದ ಪ್ರದೇಶದ ಕೂಡಿದ ಶಿಖರ.ಇಲ್ಲಿ ನಿಮಗೆ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳ ವಿಹಂಗಮ ನೋಟ ಸಿಗುತ್ತದೆ.
 

ಕುಮಾರ ಪರ್ವತ ಶಿಖರದಿಂದ ಸುಬ್ರಹ್ಮಣ್ಯ ಪೇಟೆಯ ನೋಟ

 
ಕುಮಾರ ಪಾದಪೂಜೆ
 
ಸುಬ್ರಹ್ಮಣ್ಯ ಭಾಗದಿಂದ ಬರುವ ಹೆಚ್ಚಿನ ಚಾರಣಗರಿಗೆ ಕುಮಾರ ಪರ್ವತದಲ್ಲಿ ನೋಡಲು ಏನು ಇಲ್ಲ ಎಂದು ಅನಿಸಬಹುದು. ನಾನು ಕೂಡ ಕಳೆದ ಬಾರಿ ಹೋದಾಗ ಶೇಷ ಪರ್ವತದಲ್ಲಿ ಸುತ್ತಮುತ್ತಲಿನ ಸೌಂದರ್ಯವನ್ನು ಕಣ್ತುಂಬಿಕೊಂಡು ಅದೇ ನಿರೀಕ್ಷೆಯೊಂದಿಗೆ ಶೇಷ ಪರ್ವತದಿಂದ ಕುಮಾರ ಪರ್ವತ ಹತ್ತಿದ್ದೆ. ಅಲ್ಲಿ ಶಿಖರದ ಬಳಿ ವಿಹರಿಸಿ ವಿಶ್ರಾಂತಿ ಪಡೆದು ಬಂದಾಗ ಇಲ್ಲಿ ನೋಡಲು ಏನೂ ಇಲ್ಲ,ಶೇಷ ಪರ್ವತವೇ ನೋಡಲು ಚಂದ ಅಂತ ಅಂದುಕೊಂಡು ಇಳಿದಿದ್ದೆ. ಆದರೆ ಈ ಬಾರಿ ಹೋದಾಗ ನಮಗೆ ಸ್ವಲ್ಪ ಸಮಯವೂ ಇದ್ದ ಕಾರಣ ಹೆಚ್ಚು ಹೊತ್ತು ವಿಹರಿಸಿದಾಗ ಅಲ್ಲಿರುವ ಅದ್ಭುತ ಸೌಂದರ್ಯದ ಸ್ಥಳಗಳು ನೋಡಲು ಸಿಕ್ಕವು. ಇದರಲ್ಲಿರುವ ಒಂದು ಅತ್ಯದ್ಭುತ ಹಾಗೂ ಅಪಾಯಕಾರಿ ಸ್ಥಳ ಮಾರಿಗುಂಡಿ ಕಣಿವೆ-ಸಿದ್ಧ ಪರ್ವತದ ವೀಕ್ಷಣಾ ಸ್ಥಳ!

ಮಾರಿಗುಂಡಿ ಕಣಿವೆ ಹಾಗೂ ಸಿದ್ಧ ಪರ್ವತದ ನೋಟ
 

ಸಿದ್ಧ ಪರ್ವತ 


ಕುಮಾರ ಪರ್ವತದ ಶಿಖರದ ನೈರುತ್ಯ ದಿಕ್ಕಿನ ಕಡೆಗೆ ಹೋಗಿ ಪೊದೆಗಳಿಂದ ಆವೃತಗೊಂಡಿರುವ ದಾರಿಯಲ್ಲಿ 5 ನಿಮಿಷ ನಡೆದರೆ ಮಾರಿಗುಂಡಿ ಕಣಿವೆ-ಸಿದ್ಧ ಪರ್ವತದ ವೀಕ್ಷಣಾ ಸ್ಥಳ ಸಿಗುತ್ತದೆ. ಇಲ್ಲಿ ಸಿದ್ಧ ಪರ್ವತ, ಮಾರಿಗುಂಡಿ ಕಣಿವೆ, ಬ್ರಹ್ಮಗಿರಿ ಪರ್ವತದ ಸಾಲುಗಳು, ಕುಮಾರ ಪರ್ವತ,ಶೇಷ ಪರ್ವತದ ತಪ್ಪಲಲ್ಲಿರುವ ಹಳ್ಳಿಗಳು,ಸಿದ್ಧ ಪರ್ವತದಲ್ಲಿ ಉಗಮಗೊಂಡು ಮುಂದೆ ಹರಿಹರಪಲ್ಲತ್ತಡ್ಕದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ಬಳಿ ಇತರೇ ಎರಡು ನದಿಗಳ ಜೊತೆಗೆ ತ್ರಿವೇಣಿ ಸಂಗಮಗೊಳ್ಳುವ ಕೋಟೆ ಹೊಳೆ ನದಿಯ ಹರಿಯುವ ದಾರಿಯ ಅತ್ಯದ್ಭುತ ನೋಟ ನೋಡಲು ಸಿಗುತ್ತದೆ. ಈ ಸ್ಥಳ ನೋಡಲು ಎಷ್ಟು ಚೆನ್ನಾಗಿದೆಯೋ ಅಷ್ಟೇ ಅಪಾಯಕಾರಿ. ಸ್ವಲ್ಪವೂ ಯಾಮಾರಿದರೆ ನೇರವಾಗಿ ಯಮಲೋಕಕ್ಕೆ! ಸ್ವಲ್ಪ ಜಾರಿದರೂ ನೇರವಾಗಿ ಬಹಳ ಎತ್ತರದಿಂದ ಮಾರಿಗುಂಡಿ ಕಣಿವೆಗೆ ಬೀಳಬಹುದು! ಇಲ್ಲಿಂದ ನನ್ನ ಊರು ಹರಿಹರಪಲ್ಲತ್ತಡ್ಕವನ್ನು ಕಂಡು ಖುಷಿಯಾಯಿತು. ನನ್ನ ಜೊತೆಗೆ ಬಂದಿದ್ದ ನನ್ನ ಅಮ್ಮನಿಗೂ ನಮ್ಮೂರನ್ನು ತೋರಿಸಿದೆ! 
ಕೋಟೆ ಹೊಳೆ ನದಿಯ ಹರಿಯುವ ದಾರಿ
 
ಕುಮಾರ ಪರ್ವತ ಶಿಖರ

ಕುಮಾರ ಪರ್ವತ ಶಿಖರದಲ್ಲಿರುವ ಶ್ರೀ ಶಾಂತಮಲ್ಲಿಕಾರ್ಜುನ ದೇವರ ಲಿಂಗ
ಬಳಿಕ ಮರಳಿ ಕುಮಾರ ಪಾದದ ಬಳಿ ಬಂದು ಪೂಜೆಯಲ್ಲಿ ಭಾಗವಹಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಿಂದ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಮರಳಿ ಅದೇ ವೀಕ್ಷಣಾ ಸ್ಥಳಕ್ಕೆ ಬಂದು ನಾವು ಚಾರಣಕ್ಕೆ ಬರುವಾಗ ನಮ್ಮ ಜೊತೆಗೆ ತಂದಿದ್ದ ಉಪಹಾರವನ್ನು ಸೇವಿಸಿದೆವು. ಈ ಬಾರಿ 8 ಜನರ ಜೊತೆಗೆ ನಾನು ಚಾರಣ ಮಾಡಿದೆ.
ಕುಮಾರ ಪರ್ವತದ ಸುತ್ತಮುತ್ತ ಪ್ರತಿಯೊಂದು ದಿಕ್ಕಿಗೆ ಹೋದರೆ ಪರ್ವತ ಶ್ರೇಣಿಗಳು, ಸುತ್ತಮುತ್ತ ಇರುವ ಪಟ್ಟಣಗಳು ಕಾಣಲು ಸಿಗುತ್ತದೆ. ಒಂದು ದಿಕ್ಕಿನಲ್ಲಿ ಸೋಮವಾರಪೇಟೆ, ಮತ್ತೊಂದು ಕಡೆ ಸುಬ್ರಹ್ಮಣ್ಯ, ನೈರುತ್ಯ ದಿಕ್ಕಿನಲ್ಲಿ ಹರಿಹರಪಲ್ಲತ್ತಡ್ಕ,ಬಾಳುಗೋಡು,ಕೊಲ್ಲಮೊಗ್ರ ಗ್ರಾಮಗಳನ್ನು ನೋಡಬಹುದು. ಇವೆಲ್ಲವನ್ನೂ ಕಣ್ತುಂಬಿಕೊಂಡು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮರಳಿ ಬೀಡಳ್ಳಿ ಕಡೆಗೆ ಹೊರಟೆವು.
 
ಕುಮಾರ ಪರ್ವತ ಚಾರಣ ಮಾಡಲು ಎರಡು ದಾರಿಗಳು ಇದೆ. ಸುಬ್ರಹ್ಮಣ್ಯ-ಕುಮಾರಪರ್ವತ-ಸುಬ್ರಹ್ಮಣ್ಯ ಚಾರಣ(ಒಟ್ಟು 28 ಕಿ.ಮಿ) ಇದು ದಕ್ಷಿಣ ಭಾರತದಲ್ಲಿ ಕಠಿಣ ಹಾಗೂ ಹೆಚ್ಚು ಪ್ರಸಿದ್ಧಿಯನ್ನು ಪಡೆದ ಚಾರಣ ಮಾರ್ಗ ಮತ್ತೊಂದು ಸೋಮವಾರಪೇಟೆ ತಾಲೂಕಿನ ಬೀಡಳ್ಳಿಯಿಂದ ಕುಮಾರ ಪರ್ವತ ಚಾರಣದ ಮಾರ್ಗ. ಇದು ಸುಬ್ರಹ್ಮಣ್ಯ-ಕುಮಾರಪರ್ವತ-ಸುಬ್ರಹ್ಮಣ್ಯ ಮಾರ್ಗಕ್ಕೆ ಹೋಲಿಸಿದರೆ ಬಹಳಷ್ಟು ಸುಲಭ ಹಾಗೂ ಹತ್ತಿರದ ಮಾರ್ಗ. ಬೀಡಳ್ಳಿಯಿಂದ ಕುಮಾರ ಪರ್ವತದ ಒಟ್ಟು ಚಾರಣದ ದೂರ ಕೇವಲ 7 ಕಿ.ಮಿ. 
 

ಚಾರಣದ ಬುಕ್ಕಿಂಗ್ ಮಾಹಿತಿ:

ಕುಮಾರ ಪರ್ವತ ಚಾರಣಕ್ಕೆ ಪ್ರತಿಯೊಬ್ಬರಿಗೆ 350 ರೂಪಾಯಿ ದರವಿದೆ. ಬದಲಾದ ನಿಯಮಗಳ ಪ್ರಕಾರ ಚಾರಣದ ಟಿಕೇಟು ಕಾಯ್ದಿರಿಸಲು ಅರಣ್ಯ ವಿಹಾರ ಜಾಲತಾಣಕ್ಕೆ ಹೋಗಬೇಕು. ಈ ಜಾಲತಾಣದಲ್ಲಿ ಕಡ್ಡಾಯವಾಗಿ ಬುಕ್ ಮಾಡಬೇಕು. ಇಲ್ಲದಿದ್ದರೆ ಚಾರಣ ಮಾಡಲು ಅವಕಾಶ ಇರುವುದಿಲ್ಲ. ಪ್ರತಿದಿನ ಚಾರಣಕ್ಕೆ ಹೋಗುವ ಜನರ ಮಿತಿ ಇರುತ್ತದೆ. ಆದ್ದರಿಂದ ಆದಷ್ಟು ಬೇಗ ಬುಕ್ ಮಾಡಿಕೊಳ್ಳಿ. ಸುಬ್ರಹ್ಮಣ್ಯ-ಕುಮಾರಪರ್ವತ-ಸುಬ್ರಹ್ಮಣ್ಯ ಹಾಗೂ ಬೀಡಳ್ಳಿ-ಕುಮಾರ ಪರ್ವತ-ಬೀಡಳ್ಳಿ ಮಾರ್ಗದಲ್ಲಿ 300 ಜನ ಹಾಗೂ ಬೀಡಳ್ಳಿ-ಕುಮಾರ ಪರ್ವತ-ಸುಬ್ರಹ್ಮಣ್ಯ ಮಾರ್ಗದಲ್ಲಿ 50 ಜನರ ಮಿತಿಯಿದೆ. ಪ್ಲಾಸ್ಟಿಕ್,ಪೇಪರ್ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೆ ಕಾರಣಕ್ಕೆ ನೀರು, ಆಹಾರವನ್ನು ಪ್ಲಾಸ್ಟಿಕ್ ಬಾಟಲಿ,ಡಬ್ಬ, ಪೇಪರಿನಲ್ಲಿ ತರಬೇಡಿ. ನಿನ್ನೆ ನಾವು ಹೋದಾಗ ಬಟ್ಟೆಯ ಚೀಲವನ್ನೂ ಕೂಡ ಬಿಡಲಿಲ್ಲ. ನೀರು, ಆಹಾರವನ್ನು ಸ್ಟೀಲ್ ಬಾಟಲಿ,ಡಬ್ಬದಲ್ಲಿ ತನ್ನಿ. 
ಸೂಚನೆಗಳು

ಪ್ಲಾಸ್ಟಿಕ್ ಮುಕ್ತ ಅರಣ್ಯ ಪ್ರದೇಶ

 

ಈ ಮಾರ್ಗದಲ್ಲಿ ಮೊದಲ ಭಾಗದಲ್ಲಿ ಕುಡಿಯುವ ನೀರಿಗೆ ಒಂದು ಸಣ್ಣ ಜರಿ/ತೋಡು ಸಿಗುತ್ತದೆ. ಆ ಬಳಿಕ ಸಣ್ಣ ತೋಡುಗಳ ಇದ್ದರೂ ನೀರು ಬತ್ತಿ ಹೋಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮತ್ತೆ ಸಿಗುವ ನೀರಿನ ಮೂಲ ಕುಮಾರ ತೀರ್ಥ. ನನ್ನ ಸ್ವಂತ ಅನುಭವದ ಪ್ರಕಾರ ಸುಬ್ರಹ್ಮಣ್ಯ-ಕುಮಾರಪರ್ವತ-ಸುಬ್ರಹ್ಮಣ್ಯ ಮಾರ್ಗಕ್ಕೆ ಹೋಲಿಸಿದರೆ ತುಂಬಾ ಸುಲಭವಾಗಿದೆ. ಈ ಮಾರ್ಗದಲ್ಲಿ ಸುಬ್ರಹ್ಮಣ್ಯ ಭಾಗದಿಂದ ಇರುವ ಮಾರ್ಗದ ಹಾಗೆ ಬಯಲು ಪ್ರದೇಶದ ಬದಲು ದಟ್ಟ ಕಾಡಿನಿಂದ ಆವೃತಗೊಂಡಿದೆ. ಆದ್ದರಿಂದ ತಂಪಾದ ಗಾಳಿ ಹಾಗೂ ಮರಗಳ ನೆರಳಿನ ನಡುವೆ ಆರಾಮವಾಗಿ ಹತ್ತಬಹುದು. ಕೊನೆಗೆ ಸಿಗುವ ಬಂಡೆಗಳನ್ನು ಜಾಗರೂಕತೆಯಿಂದ ಹತ್ತಬೇಕು. ಈ ಮಾರ್ಗದಲ್ಲಿ ದಾರಿಯುದಕ್ಕೂ ಹೆಚ್ಚಿನ ಕಡೆ ನೆಟ್‌ವರ್ಕ್ ಸಿಗುತ್ತದೆ. ಕುದುರೆದೊಡ್ಡಿಯ ಬಳಿಯಿಂದ ಮೊದಲ ವೀಕ್ಷಣಾ ಸ್ಥಳದ ತನಕ ನೆಟ್‌ವರ್ಕ್ ಇರುವುದಿಲ್ಲ. ಆದರೆ ಕೆಲವು ಕಡೆ ಏರ್ಟೆಲ್ ನೆಟ್‌ವರ್ಕ್ ಸಿಗದೆ ಇರುವುದನ್ನು ನಾನು ಗಮನಿಸಿದ್ದೆ. ಕುಮಾರ ಪರ್ವತ ಶಿಖರದಲ್ಲಿ 5ಜಿ ಇಂಟರ್ನೆಟ್ ಕೂಡ ಸಿಗುತ್ತಿತ್ತು. ಪುಷ್ಪಗಿರಿ ದೇವಸ್ಥಾನದ ಬಳಿ ಜಿಯೋ ನೆಟ್‌ವರ್ಕ್ ಮಾತ್ರ ಸಿಗುತ್ತಿತ್ತು. ಹೀಗಾಗಿ ಜಿಯೋ ಬಳಕೆದಾರರಿಗೆ ನೆಟ್‌ವರ್ಕ್ ಸಮಸ್ಯೆ ಆಗದು.
ಕುಮಾರ ಪರ್ವತ
 ಕುಮಾರ ಪರ್ವತ ಶಿಖರ ಒಂದು ಸಾಮಾನ್ಯ ಶಿಖರ ಮಾತ್ರವಲ್ಲದೆ ಧಾರ್ಮಿಕ,ಪೌರಾಣಿಕ ಹಿನ್ನೆಲೆಯಿಂದಲೂ ಮಹತ್ವ ಪಡೆದಿದೆ. ಆದ್ದರಿಂದ ಇದು ಅತ್ಯಂತ ಪವಿತ್ರ ಶಿಖರವಾಗಿದೆ. ಪುರಾಣದ ಪ್ರಕಾರ
ಕುಮಾರಪರ್ವತದಲ್ಲಿ ಸುಬ್ರಹ್ಮಣ್ಯ ದೇವರು ತಾರಕಾದಿ ರಾಕ್ಷಸರನ್ನು ಕೊಂದು ಕತ್ತಿಯ ಅಲಗನ್ನು ಕುಮಾರಪರ್ವತದಲ್ಲಿ ಹುಟ್ಟುವ ಧಾರಾ ನದಿಯಲ್ಲಿ ತೊಳೆದರು. ಆದ್ದರಿಂದ ಧಾರಾ ನದಿಗೆ ಕುಮಾರಧಾರ ಎಂಬ ಹೆಸರು ಬಂತು. ಬಳಿಕ ಷಣ್ಮುಖನು ವಾಸುಕಿಯೊಂದಿಗೆ ಕುಕ್ಕೆ ಕ್ಷೇತ್ರದಲ್ಲಿ ನೆಲೆಯಾದರು ಎಂದು ಕ್ಷೇತ್ರ ಪುರಾಣ ಉಲ್ಲೇಖಿಸಿದೆ. ತಾರಕಾದಿ ರಾಕ್ಷಸರನ್ನು ಸುಬ್ರಹ್ಮಣ್ಯ ದೇವರು ಈ ಪರ್ವತ ಶ್ರೇಣಿಯಲ್ಲೇ ವಧೆ ಮಾಡಿದರು. ಈ ಪರ್ವತ ಶ್ರೇಣಿಯಲ್ಲೇ ತ್ರಿಮೂರ್ತಿಗಳ ಸಮ್ಮುಖದಲ್ಲಿ ಮಾರ್ಗಶಿರ ಶುದ್ಧ ಷಷ್ಠಿ(ಚಂಪಾಷಷ್ಠಿ)ಯ ದಿನ ದೇವೇಂದ್ರನ ಮಗಳಾದ ದೇವಸೇನೆಯನ್ನು ಷಣ್ಮುಖನಿಗೆ ವಿವಾಹ ಮಾಡಿಸಿ ಪಟ್ಟಾಭಿಷೇಕ ಮಾಡಿಸಲಾಯಿತು. ಈ ಅಭಿಷೇಕದ ನೀರು ಮುಂದೆ ಹರಿದು ಕುಮಾರಧಾರಾ ನದಿಯಾಯಿತು ಎಂದೂ ಪುರಾಣಗಳು ಉಲ್ಲೇಖಿಸಿವೆ. ಕುಮಾರಧಾರ ನದಿ ಈ ಮೊದಲು ಕುಮಾರ ಪಾದದ ಬಳಿಯೇ ಉಗಮಿಸಿ ಹರಿಯುತ್ತಿತ್ತು. ಆದರೆ ಕಾಲ ಬದಲಾದಂತೆ ಅಂತರ್ಜಲ ಮಟ್ಟ ಕುಸಿತಗೊಂಡು ಪ್ರಸ್ತುತ ಕುಮಾರ ತೀರ್ಥದಲ್ಲಿ ಉಗಮಿಸಿ ಹರಿಯುತ್ತಿದೆ. ಕುಮಾರಪರ್ವತದಲ್ಲಿ ಷಣ್ಮುಖನಿಗೆ ವಿವಾಹವಾದ ಪ್ರದೇಶದಲ್ಲಿ ಈಗಲೂ ಸುಬ್ರಹ್ಮಣ್ಯ ದೇವರ ಪಾದಗಳು ಇವೆ. ಇದನ್ನು "ಕುಮಾರಪಾದ" ಎನ್ನುತ್ತಾರೆ. ಇದರ ಪಕ್ಕದಲ್ಲಿ ವಾಸುಕಿಯೂ ಗೋಚರಿತವಾಗಿದೆ. ಇದಕ್ಕೆ "ಬಹುಳ ಷಷ್ಠಿ"ಯಂದು ಕುಕ್ಕೆ ದೇಗುಲದ ಪ್ರಧಾನ ಅರ್ಚಕರು ಪೂಜೆ ಸಲ್ಲಿಸುತ್ತಾರೆ. ಇಂತಹ ಪವಿತ್ರ ಶಿಖರಕ್ಕೆ ಚಾರಣಕ್ಕೆ ಹೋಗುವಾಗ ಕುಮಾರ ಪರ್ವತ ಶಿಖರವನ್ನು ಪೂಜ್ಯ ಭಾವನೆಯಿಂದ ನೋಡಿ ಹಾಗೂ ಚಾರಣದ ಉದ್ದಕ್ಕೂ ಕಸ ಎಸೆದು ಪರ್ವತದ ಪಾವಿತ್ರ್ಯತೆಯನ್ನು ಹಾಳು ಮಾಡಬೇಡಿ. ನೀವು ಬಳಸಿದ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸಗಳನ್ನು ನೀವೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ. ಅರಣ್ಯ ಇಲಾಖೆಯ ಚೆಕ್ ಪೋಸ್ಟುಗಳಲ್ಲಿ ಕಸದ ಬುಟ್ಟಿಗಳು ಇರುತ್ತದೆ. ಅಲ್ಲಿಯೇ ಕಸವನ್ನು ವಿಲೇವಾರಿ ಮಾಡಿ.
 
ಪೇಟೆಯ ಮಧ್ಯೆ ಕೂತು ಬದುಕಿನ ಜಂಜಾಟದಿಂದ ವಿಶ್ರಾಂತಿ ಪಡೆಯಲು,ಪರಿಸರದ ಮಧ್ಯೆ ಸಮಯ ಕಳಿಯಲು,ಚಾರಣಕ್ಕೆ ಹೋಗುವ ಅಭ್ಯಾಸ ಇರುವವರಿಗೆ ಕುಮಾರ ಪರ್ವತಕ್ಕೆ ಚಾರಣ ಹೋಗಿಬರಬಹುದು. ನೀವು ಚಾರಣಕ್ಕೆ ಹೋಗಿ ಬನ್ನಿ! ಆದರೆ ಅಲ್ಲಿನ ಸ್ವಚ್ಛತೆ,ಪರಿಸರವನ್ನು ಕಾಪಾಡಿ!
ಬರಹ: ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!