ನೇತ್ರಾವತಿ ಶಿಖರದ ತಪ್ಪಲಿನಲ್ಲಿ ಅಡಗಿರುವ ಮಾಣಿಕ್ಯ: ಬೊಳ್ಳೆ ಜಲಪಾತದ ಚಾರಣ ಅನುಭವ!
ನೇತ್ರಾವತಿ ಶಿಖರದ ತಪ್ಪಲಿನಲ್ಲಿ ಅಡಗಿರುವ ಮಾಣಿಕ್ಯ: ಬೊಳ್ಳೆ ಜಲಪಾತದ ಚಾರಣ ಅನುಭವ!
ಆದಿತ್ಯವಾರ! ವಾರದ ಆರು ದಿನ ಕೆಲಸ ಮಾಡಿ ವಾರದ ರಜಾದಿನದಂದು ಸ್ವಲ್ಪ ಬಿಡುವು ಪಡೆದು ನೆಮ್ಮದಿ ಪಡೆಯಬೇಕೆಂಬ ಆಲೋಚನೆ ಎಲ್ಲರಿಗೆ ಇರುತ್ತದೆ! ತಮ್ಮ ಕುಟುಂಬದ ಜೊತೆಗೆ ಮನೆಯಲ್ಲಿ ಅಥವ ಹೊರಗೆ ಎಲ್ಲಿಗಾದರೂ ಹೋಗಿ ಸಮಯ ಕರೆಯಬೇಕೆಂಬ ಆಲೋಚನೆಗಳು ಇರುತ್ತದೆ. ಇಂತಹ ಸಮಯದಲ್ಲಿ ನನ್ನ ಪಯಣ ಸಾಗಿದ್ದು ಬೊಳ್ಳೆ ಜಲಪಾತದ ಕಡೆಗೆ!
ಸೋಮವಾರದಿಂದ ಶನಿವಾರ ತನಕ ಬಿಡುವು ಇಲ್ಲದೆ ನನ್ನ ಉದ್ಯೋಗ, ಇತರೇ ಕೆಲಸಗಳನ್ನು ಮಾಡಿ ಬಸವಳಿದ್ದ ನನ್ನ ಮನಸ್ಸು ಸ್ವಲ್ಪ ನೆಮ್ಮದಿಗೆ ಕಾಯುತ್ತಿತ್ತು. ಇಂತಹ ಸಮಯದಲ್ಲಿ ಮೊದಲು ನೆನಪಾಗುವುದು ಪ್ರಕೃತಿ ಮಾತೆಯನ್ನು! ನಾವು ನೆಮ್ಮದಿಯನ್ನು ಹುಡುಕಿಕೊಂಡು ಏನೇನೋ ಮಾಡಲು ಹೊರಡುತ್ತೇವೆ. ಕೊನೆಗೆ ಅದು ದುಶ್ಚಟಕ್ಕೆ ಬಿದ್ದರೂ ತೊಂದರೆಯಿಲ್ಲ ಎನ್ನುವ ಮಟ್ಟಕ್ಕೆ! ಆದರೆ ಪ್ರಕೃತಿ ಮಾತೆಯೇ ಎಲ್ಲವನ್ನು ಒದಗಿಸುತ್ತಿರುವುದು ಮನುಷ್ಯರಿಗೆ ತಿಳಿದಿರಬೇಕಲ್ಲ! ಇರಲಿ,ಹೀಗೆ ಪ್ರಕೃತಿ ಮಾತೆಯನ್ನು ನೆನಪಾದಾಗ ಒಂದೋ ನನ್ನ ಊರಾದ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಹರಿಹರಪಲ್ಲತ್ತಡ್ಕಕ್ಕೆ ಹೋಗಿ ಹಳ್ಳಿಯಲ್ಲಿ ಒಂದೆರಡು ದಿನಗಳನ್ನು ಕಳೆದೋ ಅಥವ ಅವಕಾಶ ಸಿಕ್ಕರೆ ವರ್ಷಕ್ಕೆ ಒಂದೆರಡು ಚಾರಣಕ್ಕೆ ಹೋಗಿ ಬರುತ್ತಿದ್ದೆ. ಇಂದು ಅಂತಹ ಒಂದು ಉತ್ತಮ ಅವಕಾಶ ನನ್ನ ಪಾಲಿಗೆ ಒದಗಿ ಬಂತು!
ಬೊಳ್ಳೆ ಜಲಪಾತ ಇದು ಹೆಚ್ಚಿನ ಜನರಿಗೆ ಅಪರಿಚಿತ ಸ್ಥಳ! ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಕುದುರೆಮುಖ ಪರ್ವತ ಶ್ರೇಣಿಗಳಲ್ಲಿ ಒಂದಾದ ನೇತ್ರಾವತಿ ಶಿಖರದ ತಪ್ಪಲಿನಲ್ಲಿ ಇರುವ ಒಂದು ಸುಂದರ ಜಲಪಾತವೇ ಬೊಳ್ಳೆ ಜಲಪಾತ! ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಗ್ರಾಮದಲ್ಲಿ ಈ ಜಲಪಾತವಿದೆ. ನೇತ್ರಾವತಿ ಶಿಖರದ ಬಳಿಯಿಂದ ಹರಿದು ಬರುವ ನೀರು ಇಲ್ಲಿರುವ ಬಂಡೆ ರಾಶಿಗಳ ಮೇಲೆಂದ ಹರಿದು ಬಂದು ಮುಂದಕ್ಕೆ ನೇತ್ರಾವತಿ ನದಿಗೆ ಹೋಗಿ ಈ ನೀರು ಸೇರುತ್ತದೆ. ಹೀಗೆ ಅಚಾನಾಕ್ ಆಗಿ ಭಾರತೀಯ ಯುವ ಹಾಸ್ಟೆಲ್ಸ್ ಸಂಘದ ಸದಸ್ಯರ ಜೊತೆಗೆ ಚಾರಣ ಮಾಡಲು ಸಿಕ್ಕ ಒಳ್ಳೆಯ ಅವಕಾಶವನ್ನು ತಪ್ಪಿಸದೆ ದಿನಾಂಕ 21.12.2025ರಂದು ಸುಂದರ ಬೊಳ್ಳೆ ಜಲಪಾತಕ್ಕೆ ಚಾರಣ ಮಾಡಿ ಬಂದೆ!
ಭಾಗ 1: ಕಿಲ್ಲೂರು ಬಸ್ ನಿಲ್ದಾಣ- ಸೂರ್ಲಿ ಸೇತುವೆ( 5 ಕಿ.ಮಿ)
ಮೊದಲು ಪುತ್ತೂರಿನಿಂದ ಸಂಘದ ಕೆಲವು ಸದಸ್ಯರ ಜೊತೆಗೆ ಬೆಳ್ತಂಗಡಿಗೆ ಬಂದು ಅಲ್ಲಿ ಎಲ್ಲಾ ಸದಸ್ಯರ ಜೊತೆಗೆ ಸೇರಿ ಉಪಹಾರ ಸೇವಿಸಿ ನಂತರ ಕಿಲ್ಲೂರು ಕಡೆಗೆ ಹೊರಟೆವು. ಕಿಲ್ಲೂರು ಬಸ್ ನಿಲ್ದಾಣದ ಬಳಿ ಇರುವ ಸರ್ಕಾರಿ ಪಡಿತರ ವಿತರಣಾ ಕೇಂದ್ರದ ಬಳಿ ನಮ್ಮ ಬಸ್ಸನ್ನು ನಿಲ್ಲಿಸಿ ಅಲ್ಲಿಂದ ಬೊಳ್ಳೆ ಜಲಪಾತದ ಕಡೆಗೆ ಚಾರಣ ಆರಂಭಿಸಿದೆವು. ಆರಂಭದಲ್ಲಿ ಸುಮಾರು 1 ಕಿ.ಮಿ ಕಾಂಕ್ರೀಟ್ ರಸ್ತೆಯಲ್ಲಿ ಸಾಗಿದ ಬಳಿಕ ಅರಣ್ಯ ಇಲಾಖೆಯ ಗೇಟ್ ಸಿಗುತ್ತದೆ. ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಗಡಿ ಪ್ರದೇಶ. ಈ ಗೇಟಿನ ಮೂಲಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯನ್ನು ಪ್ರವೇಶಿಸಿದ ನಾವು ಕಾಡಿನ ನಡುವೆ ಮಣ್ಣಿನ ರಸ್ತೆಯಲ್ಲಿ ಸಾಗಿದೆವು. ದಾರಿಯಲ್ಲಿ ಸಾಗುವಾಗ ನಮ್ಮ ಎದುರಿನಲ್ಲಿ ನೇತ್ರಾವತಿ ಶಿಖರ ಹಾಗೂ ಹತ್ತಿರದ ಪರ್ವತ ಶ್ರೇಣಿಗಳನ್ನು ಕಾಣಬಹುದು ಜೊತೆಗೆ ಹಿಂಬದಿಯಲ್ಲಿ ಬಳ್ಳರಾಯನದುರ್ಗ ಕೋಟೆ-ಬಂಡಾಜೆ ಜಲಪಾತದ ಪರ್ವತ ಶ್ರೇಣಿಯನ್ನು ನೋಡಬಹುದು. ಹೀಗೆ ಸುತ್ತಲೂ ಪರ್ವತ ಶ್ರೇಣಿಗಳನ್ನು ನೋಡುತ್ತಾ ಮುಂದೆ ಸಾಗಿದಾಗ ಸಣ್ಣ ತೋಡು ಸಿಗುತ್ತದೆ. ಈ ತೋಡಿನ ಮೇಲೆ ನಿರ್ಮಿಸಿರುವ ಪುಟ್ಟ ಸೇತುವೆಯನ್ನು ದಾಟಿ ಮುಂದೆ ಸಾಗಿದೆವು. ಮುಂದೆ ಸಾಗಿದಂತೆ ಕಾಡಿನ ನಡುವೆ ಎತ್ತರ ತಗ್ಗು,ಸಮತಟ್ಟಾದ ಪ್ರದೇಶ ಸಿಗುತ್ತದೆ. ಹೀಗೆ ಈ ಪ್ರದೇಶವನ್ನು ಸಾಗುತ್ತಾ ಸುಮಾರು 5 ಕಿ.ಮಿ ನಡೆದಾಗ ಎರಡನೆಯ ಸೇತುವೆ ಸಿಗುತ್ತದೆ. ಈ ಸೇತುವೆ ಸ್ವಲ್ಪ ಎತ್ತರದಲ್ಲಿದೆ. ಇಲ್ಲಿ ಮುಂದೆ ಸಾಗಲು ಎರಡು ದಾರಿಗಳು ಇದೆ. ಒಂದು ಎಡಬದಿಯಲ್ಲಿ ಸೇತುವೆಯ ಮೂಲಕ ಹೋಗಬಹುದು. ಬಲಬದಿಯಿಂದ ಹೋದರೆ ತೋಡನ್ನು ನಾವು ದಾಟಿ ಮುಂದೆ ಸಾಗಬೇಕು. ಇದು ಪಿಕಪ್,ಜೀಪ್ ಅಂತಹ ವಾಹನಗಳು ಹೋಗುವ ಅಂತಿಮ ಸ್ಥಳ. ಇಲ್ಲಿಂದ ಮುಂದೆ ನಡೆದುಕೊಂಡು ಸಾಗಬೇಕು. ಆದರೆ ಚಾರಣಕ್ಕೆ ಹೋದ ಸಮಯದಲ್ಲಿ ನಾವು ಗಮನಿಸಿದಂತೆ ರಸ್ತೆಗೆ ಮಣ್ಣು ಹಾಕಿರುವ ಕಾರಣ ತೋಡನ್ನು ದಾಟಲು ಸಾಧ್ಯವಾದರೆ ಮುಂದೆ ಜಲಪಾತದಿಂದ 1 ಕಿ.ಮಿ ದೂರದ ತನಕ ಜೀಪ್ ಅಥವ ಪಿಕಪಿನಲ್ಲಿ ಹೋಗಬಹುದು. ಜೀಪ್,ಪಿಕಪ್ ಅಂತಹ ವಾಹನಗಳು ಹೊರತುಪಡಿಸಿ ಕಾರ್,ಬಸ್ಸಿನಲ್ಲಿ ನೀವು ಬಂದರೆ ಕಿಲ್ಲೂರು ಬಸ್ ನಿಲ್ದಾಣದ ಬಳಿಯಿಂದಲೇ ನಡೆದುಕೊಂಡು ಹೋಗುವುದು ಉತ್ತಮ.ಬಸ್ ನಿಲ್ಲಿಸಿದ ಸ್ಥಳದಿಂದ ಈ ಸೇತುವೆಯ ತನಕದ ದಾರಿಯನ್ನು ಆರಾಮವಾಗಿ 57 ನಿಮಿಷದಲ್ಲಿ ಕ್ರಮಿಸಿದೆವು.
ಭಾಗ 2: ಸೂರ್ಲಿ ಸೇತುವೆ- ಬೊಳ್ಳೆ ಜಲಪಾತ(2 ಕಿ.ಮಿ)
ಸೂರ್ಲಿ ಸೇತುವೆ ಅಥವ ಎರಡನೆಯ ಸೇತುವೆಯಿಂಓ ಮುಂದೆ ಸಿಗುವುದು ಕಡಿದಾದ ರಸ್ತೆ. ಇದು ಈ ಚಾರಣದಲ್ಲಿ ಸಿಗುವ ಕಷ್ಟದ ಮಾರ್ಗ. ಕಡಿದಾದ ರಸ್ತೆಯಲ್ಲಿ ಮುಂದೆ ಸಾಗಿದಾಗ ಕಾಡಿನ ಮಧ್ಯೆ ಒಂದೆರಡು ಮನೆಗಳು,ಅಡಿಕೆ ತೋಟವನ್ನು ನೋಡಬಹುದು ಜೊತೆಗೆ ಪರ್ವತ ಶಿಬರಗಳನ್ನು ನೋಡಬಹುದು. ಹೀಗೆ ತೋಟದ ಸಮೀಪ ಜಲಪಾತದ ರಸ್ತೆಯಲ್ಲಿ ಮುಂದೆ ಸಾಗಿದಾಗ ಪೊದೆಗಳಿಂದ ಆವೃತಗೊಂಡಿರುವ ಕಡಿದಾದ ರಸ್ತೆಯ ಭಾಗ ಆರಂಭಗೊಳ್ಳುತ್ತದೆ. ಪೊದೆಗಳ ನಡುವೆ ರಸ್ತೆಯಲ್ಲಿ ಹತ್ತುತ್ತಾ ಹೋದಾಗ ಬಿದಿರು,ಬೆತ್ತ, ಇತರೇ ಎತ್ತರ ಬೆಳೆಯುವ ಮರಗಳನ್ನು ನೋಡಬಹುದು. ಹೀಗೆ ಮುಂದೆ ಹೋದಾಗ ನೀರು ಶಬ್ದ ಕೇಳಲು ಆರಂಭಗೊಳ್ಳುತ್ತದೆ. ಸಪೂರ ರಸ್ತೆಯಲ್ಲಿ ಮುಂದೆ ಸಾಗಿದಂತೆ ನೀರಿನ ಶಬ್ದವನ್ನು ಅನುಸರಿಸುತ್ತಾ ಹೋದಾಗ ಕೊನೆಗೂ ಬೊಳ್ಳೆ ಜಲಪಾತವನ್ನು ತಲುಪುತ್ತೇವೆ. ಈ 2 ಕಿ.ಮಿ ದಾರಿಯಲ್ಲಿ ನಾವು ಬಹಳ ಆರಾಮವಾಗಿ ಹೋದ ಕಾರಣ ಹಾಗೂ ಹೆಚ್ಚು ಸಮಯವೂ ನಮ್ಮ ಬಳಿ ಇದ್ದ ಕಾರಣ ಈ ದಾರಿಯನ್ನು ಕ್ರಮಿಸಲು ನಾವು 1 ಗಂಟೆಯಲ್ಲಿ ಕ್ರಮಿಸಿದೆವು.
ಜಲಪಾತದ ಸಮೀಪ ತಲುಪಿದಂತೆ ಎತ್ತರದಿಂದ ಕಲ್ಲಿನ ಮೇಲೆ ನೀರು ಬೀಳುವುದನ್ನು ನಾವು ನೋಡಬಹುದು! ಹಾಲಿನಂತೆ ಶುಭ್ರ ಬಿಳಿ ಬಣ್ಣದಲ್ಲಿ ನೀರು ಬೀಳುವುದನ್ನು ನೋಡಲು ಎರಡು ಕಣ್ಣುಗಳು ಸಾಲದು! ಜಲಪಾತದ ಸಮೀಪವೇ ನೀರಿನ ಗುಂಡಿಗೆ ಹೋಗಲು ಕಲ್ಲುಗಳ ರಾಶಿಯ ಮೇಲೆ ಹತ್ತಿ ಕೊನೆಗೆ ಜಲಪಾತದ ಬುಡಕ್ಕೆ(ನೀರು ಬೀಳುವ ಗುಂಡಿ) ಹೋದೆವು. ಶುದ್ಧ ಗಾಳಿ,ನೀರಿನಿಂದ ಕೂಡಿರುವ ಈ ಪ್ರದೇಶಕ್ಕೆ ಬಂದಾಗ ಮನಸ್ಸು ಬಹಳ ಶಾಂತವಾಯಿತು!
ಬಂಡೆ ಕಲ್ಲಿನ ಮೇಲೆ ಕುಳಿತುಕೊಂಡಾಗ ಮೇಲೆಂದ ನಮ್ಮ ಮೇಲೆಯೇ ನೀರು ಬೀಳುತ್ತಿತ್ತು. ಹೀಗೆ ಇಲ್ಲಿ ಬಹಳಷ್ಟು ಸಮಯ ಕಳೆದು ನೀರಿನಲ್ಲಿ ಅಟವಾಡಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆವು. ಇದೇ ಸಂದರ್ಭದಲ್ಲಿ ನಾವು ಬುತ್ತಿಯಲ್ಲಿ ತಂದಿದ್ದ ಊಟವನ್ನು ಸೇವಿಸಿದೆವು.
ಮಧ್ಯಾಹ್ನದ ಊಟ ಸೇವಿಸಿ,ವಿಶ್ರಾಂತಿ ಪಡೆದ ಬಳಿಕ ಮರಳಿ ನೇರವಾಗಿ ಬಸ್ ಬಳಿಗೆ ಬಂದೆವು.
ಚಾರಣದ ಮಾಹಿತಿ:
ಬೊಳ್ಳೆ ಜಲಪಾತಕ್ಕೆ ಪ್ರಸ್ತುತ ಹೋಗಲು ಟಿಕೇಟು ಇರುತ್ತದೆ. ಚಾರಣಕ್ಕೆ ಹೋಗುವಾಗ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಭೇಟಿ ಮಾಡಿ ತಮ್ಮ ಬ್ಯಾಗ್ ಪರಿಶೀಲಿಸಿ ₹200 ಚಾರಣದ ಫೀಸವನ್ನು ಪಾವತಿಸಬೇಕು. ಜಲಪಾತದ ಚಾರಣದ ದಾರಿ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯ ತನಕ ತೆರೆದಿರುತ್ತದೆ. ಸಂಜೆ 5 ಗಂಟೆಯ ನಂತರ ಯಾರು ಕೂಡ ಜಲಪಾತದ ಬಳಿ ಇರುವಂತಿಲ್ಲ! ಕಾಡಿನ ಮಧ್ಯಯೇ ದಾರಿ ಸಾಗುವ ಕಾರಣ ಚಾರಣದ ದಾರಿಯಲ್ಲಿ ಹೆಚ್ಚು ಕುಡಿಯುವ ನೀರಿನ ಅವಶ್ಯಕತೆ ಇರುವುದಿಲ್ಲ. ಚಾರಣದ ದಾರಿಯಲ್ಲೀ ಸೇತುವೆಗಳ ಬಳಿ ಇರುವ ತೋಡುಗಳು ಹಾಗೂ ಮೇಲೆ ಜಲಪಾತದ ನೀರು ಕುಡಿಯುವ ನೀರಿನ ಮೂಲ. ಪ್ರಸ್ತುತ 5-6 ಕಿ.ಮಿ ತನಕ ಜೀಪ್,ಪಿಕಪ್ ಅಂತಹ ವಾಹನಗಳು ಹೋಗುವ ಕಾರಣ ಈ ರಸ್ತೆಯಲ್ಲಿ ವಾಹನ ಹೋಗುವ ಅಂತಿಮ ಸ್ಥಳದ ತನಕ ಹೋಗಿ ಅಲ್ಲಿಂದ ಕೊನೆಯ 1 ಕಿ.ಮಿ ನಡೆದು ಮುಂದೆ ಸಾಗಿದರೆ ಬೊಳ್ಳೆ ಜಲಪಾತ ಸಿಗುತ್ತದೆ. ಈ ಮಾರ್ಗದಲ್ಲಿ ಕೆಲವು ಕಡೆ ಬಿಟ್ಟರೆ ಬಹುತೇಕ ಕಡೆಗಳಲ್ಲಿ ನೆಟ್‌ವರ್ಕ್ ಸಿಗುತ್ತದೆ.ಆದ್ದರಿಂದ ಕರೆ ಮಾಡಲು ಸಮಸ್ಯೆಯಾಗುವುದಿಲ್ಲ.
ಹತ್ತಿರದಲ್ಲಿ ಯಾವುದೆ ಹೋಟೆಲ್ ಸಿಗದಿರುವುದರಿಂದ ಮಧ್ಯಾಹ್ನ ಊಟಕ್ಕೆ ಅಥವ ಇತರೇ ಸಮಯದಲ್ಲಿ ಆಹಾರ ಬೇಕಾದರೆ ನೀವು ವ್ಯವಸ್ಥೆಯನ್ನು ಮಾಡಬೇಕು.
ಒಟ್ಟು ಚಾರಣವನ್ನು ಆರಾಮವಾಗಿ 5-6 ಗಂಟೆಯಲ್ಲಿ ಮುಗಿಸಬಹುದು.
ಇನ್ನು ಕುದುರೆಮುಖ ಪರ್ವತ ಶ್ರೇಣಿಗಳಲ್ಲಿ ಬರುವ ಶಿಖರಗಳ ಚಾರಣ,ಕುಮಾರ ಪರ್ವತ ಶಿಖರದಂತಹ ಚಾರಣವನ್ನು ಮಾಡಿ ನನಗೆ ಅನುಭವ ಇರುವ ಕಾರಣ ಈ ಚಾರಣ ಕಷ್ಟ ಅನಿಸಲೇ ಇಲ್ಲ! ಆದ್ದರಿಂದ ಸುಲಭವಾಗಿ ಚಾರಣ ಮುಗಿಸಿದೆ. ನಾವು ಹೋದ ದಿನ ಆದಿತ್ಯವಾರವಾದರೂ ಬೊಳ್ಳೆ ಜಲಪಾತದಲ್ಲಿ ಜನ ಇರಲಿಲ್ಲ. ಆದ್ದರಿಂದ ಸುಲಭವಾಗಿ ನಮ್ಮ ಪಾಡಿಗೆ ನಾವು ಚಾರಣವನ್ನು ಮಾಡಲು ಸುಲಭವಾಯಿತು ಜೊತೆಗೆ ಜಲಪಾತದಲ್ಲಿ ಹೆಚ್ಚು ಹೊತ್ತು ಆಟವಾಡಲು ಸಾಧ್ಯವಾಯಿತು. ಚಾರಣಕ್ಕೆ ಹೋಗುವಾಗ ನೀವು ಬಳಸಿದ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸಗಳನ್ನು ನೀವೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ. ಯಾವುದೇ ಕಾರಣಕ್ಕೂ ಚಾರಣದ ದಾರಿಯಲ್ಲಿ ಅಥವ ಕಾಡಿನಲ್ಲಿ ಬಿಸಾಕಿ ಬರಬೇಡಿ.
ಪೇಟೆಯ ಮಧ್ಯೆ ಕೂತು ಬದುಕಿನ ಜಂಜಾಟದಿಂದ ವಿಶ್ರಾಂತಿ ಪಡೆಯಲು,ಪರಿಸರದ ಮಧ್ಯೆ ಸಮಯ ಕಳಿಯಲು,ಚಾರಣಕ್ಕೆ ಹೋಗುವ ಅಭ್ಯಾಸ ಇರುವವರಿಗೆ ಬೊಳ್ಳೆ ಜಲಪಾತಕ್ಕೆ ಸುಲಭವಾಗಿ ಚಾರಣ ಹೋಗಿ ಬರಬಹುದು. ನೀವು ಚಾರಣಕ್ಕೆ ಹೋಗಿ ಬನ್ನಿ! ಆದರೆ ಅಲ್ಲಿನ ಸ್ವಚ್ಛತೆ,ಪರಿಸರವನ್ನು ಕಾಪಾಡಿ!









Comments
Post a Comment