"ಕಾಂತಾರ" ಸಿನಿಮಾ ಹೇಗಿದೆ!? ನನ್ನದೊಂದು ಅಭಿಪ್ರಾಯ!
"ಕಾಂತಾರ" ಸಿನಿಮಾ ಹೇಗಿದೆ!? ನನ್ನದೊಂದು ಅಭಿಪ್ರಾಯ!
2022ರಲ್ಲಿ ಬಿಡುಗಡೆಗೊಂಡ ಕಾಂತಾರ ಸಿನಿಮಾ ಒಂದು ದಾಖಲೆ ಸೃಷ್ಟಿಸಿತ್ತು. ನಮ್ಮ ತುಳುನಾಡಿನ ದೈವಗಳ ಮಹಿಮೆಯನ್ನು ರಿಷಭ್ ಶೆಟ್ರು ವಿಶ್ವಕ್ಕೆ ಪರಿಚಯಿಸಿದ್ದರು. ಇದು ದಾಖಲೆಯನ್ನೇ ಸೃಷ್ಟಿಸಿತು. ಇದೇ ಮೂಡಿನಲ್ಲಿದ್ದ ಜನರಿಗೆ ಯಾವಾಗ ಕಾಂತಾರ ಚಾಪ್ಟರ್-1 ಸಿನಿಮಾ ಘೋಷಣೆ ಆಯಿತೋ ಆಗ ಜನರ ನಿರೀಕ್ಷೆ ಉತ್ತುಂಗಕ್ಕೆ ಏರಿತು. ನನಗೆ ಚಿತ್ರ ನೋಡಿದ ಬಳಿಕ ಅನಿಸಿದ್ದು ಈ ನಿರೀಕ್ಷೆಯನ್ನು ಹಾಳುಮಾಡದೆ ಇರಲು ರಿಷಭ್ ಶೆಟ್ರು ಹೆಚ್ಚು ಶ್ರಮವಹಿಸಿದ್ದಾರೆ ಎಂದು.
ಮೊದಲ ಸಿನಿಮಾ ನೋಡಿದಾಗ ಅದರಲ್ಲಿ ಆರಂಭದಿಂದ ಅಂತ್ಯದ ತನಕ ಬಹಳಷ್ಟು ಕುತೂಹಲವಿತ್ತು ಹಾಗೂ ಹೆಚ್ಚಿನ ದೃಶ್ಯಗಳು ನೈಸರ್ಗಿಕವಾಗಿ ಒಂದು ಹಳ್ಳಿಯ ಜೀವನ ಶೈಲಿ,ಸಂಭಾಷಣೆಗಳನ್ನು ತೋರಿಸಿದ್ದರು. ಅದು ಹೆಚ್ಚಿನ ಜನರ ಮನಮುಟ್ಟುವಂತೆ ಇತ್ತು. ಈ ಸಿನಿಮಾಗೆ ಹೆಚ್ಚು ನಿರೀಕ್ಷೆಯಿದ್ದ ಕಾರಣ ಅದನ್ನು ತಲುಪಲು ದೊಡ್ಡ ಬಜೆಟಿನಲ್ಲಿ ಮಾಡಿದ್ದು ಸರಿಯಾಗಿ ಕಾಣುತ್ತದೆ. ಜೊತೆಗೆ ಮೂವಿಯ ಸೆಟ್ ಅದ್ಭುತವಾಗಿ ನಿರ್ಮಿಸಿದ್ದಾರೆ.
ಆರಂಭದಲ್ಲಿ ಸಿನಿಮಾ ನೋಡುತ್ತಾ ಹೋದಂತೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಹಾಕಿರುವ ಶ್ರಮ ಕಾಣುತ್ತದೆ. ಆದರೆ ನನಗೆ ಈ ಬಾರಿ ಅಷ್ಟು ಕುತೂಹಲ ಆಗಲಿಲ್ಲ. ಕಥೆಯಲ್ಲಿ ಒಂದು ಪಾತ್ರದ ಬಗ್ಗೆ ನಾವು ಒಂದು ರೀತಿಯಲ್ಲಿ ಯೋಚಿಸಿ ಆ ಪಾತ್ರ ಹೀಗೆ ಇರುತ್ತದೆ ಎಂಬ ತೀರ್ಮಾನಕ್ಕೆ ಬಂದರೆ ಅದು ಉಲ್ಟಾ ಆಗುವ ಸಾಧ್ಯತೆ ಇರುತ್ತದೆ.
ಇನ್ನು ನಟನೆ ಹಾಗು ನಿರ್ದೇಶನದ ವಿಷಯಕ್ಕೆ ಬಂದರೆ ಇದರಲ್ಲಿ ರಿಷಭ್ ಶೆಟ್ರನ್ನು ಮೆಚ್ಚಲೇಬೇಕು. ನಿರೀಕ್ಷೆಯ ಭಾರ ತಮ್ಮ ಮೇಲೆ ಇದ್ದಾಗ ಕಥೆಯನ್ನು ಬರೆದು,ನಿರ್ದೇಶನ ಮಾಡುತ್ತಾ ನಾಯಕನ ಪಾತ್ರದಲ್ಲಿ ನಟನೆ ಮಾಡುವುದು ಎಂದರೆ ಸುಲಭದ ಮಾತಲ್ಲ. ಕಡೆಮೆ ಸಮಯದಲ್ಲಿ ಇದನ್ನು ಮಾಡಿ ತೋರಿಸಿದ್ದಾರೆ. ರಿಷಭ್ ಶೆಟ್ಟಿಯವರ ನಟನೆ ಈ ಸಿನಿಮಾದಲ್ಲೂ ಅದ್ಭುತವಾಗಿದೆ. ಜೊತೆಗೆ ರುಕ್ಮಿಣಿ ವಸಂತ್ ಅವರು ಕೂಡ ತಮ್ಮ ಪಾತ್ರವನ್ನು ಚೆನ್ನಾಗಿ ಮಾಡಿದ್ದಾರೆ. ನೋಡುತ್ತಾ ಹೋದಂತೆ ಆಶ್ಚರ್ಯ ಆಗಬಹುದು. ರಾಜ ಕುಲಶೇಖರನ ಪಾತ್ರ ಮಾಡಿದ ಗುಲ್ಶನ್ ದೇವಯ್ಯ,ರಾಜ ರಾಜಶೇಖರನ ಪಾತ್ರ ಮಾಡಿದ ಜಯರಾಮ್ ಅವರ ನಟನೆಯೂ ಚೆನ್ನಾಗಿದೆ. ಇನ್ನುಳಿದಂತೆ ಹಿಂದಿನ ಸಿನಿಮಾದಲ್ಲಿದ್ದ ಹೆಚ್ಚಿನ ನಟರು ಈ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.
ಸಂಭಾಷಣೆಯ ವಿಷಯಕ್ಕೆ ಬಂದರೆ ಕನ್ನಡದಲ್ಲಿ ನಮ್ಮ ಕರಾವಳಿಯ ಕನ್ನಡದ ಸೊಗಡನ್ನು ಕಾಣಬಹುದು. ಕರಾವಳಿ ಕನ್ನಡ ಅಂದರೆ ನಮ್ಮ ಮಂಗಳೂರು ಕನ್ನಡ ಇಂತಹ ದೊಡ್ಡ ಸಿನಿಮಾದಲ್ಲಿ ಕೇಳುವಾಗ ಬಹಳ ಸಂತೋಷವಾಗುತ್ತದೆ. ಮಂಗಳೂರು ಕನ್ನಡವನ್ನು ಮತ್ತೊಮ್ಮೆ ವಿಶ್ವಕ್ಕೆ ಪರಿಚಯಿಸಿದ ರಿಷಭ್ ಶೆಟ್ರಿಗೆ ಧನ್ಯವಾದಗಳು. ನಮ್ಮದೇ ಭಾಷೆಯಾದ ಕಾರಣ ನಮಗೆ ಸಂಭಾಷಣೆಗಳು ಬೇಗ ಅರ್ಥ ಆಗುತ್ತದೆ. ಇನ್ನು ಸಿನಿಮಾದಲ್ಲಿ ಬರುವ ಪಾಡ್ದನಗಳು ದೈವ ಭಾಷೆಯಾದ ತುಳು ಭಾಷೆಯಲ್ಲಿದೆ. ಹೀಗಾಗಿ ನಮ್ಮ ಕರಾವಳಿಯ ಜನರಿಗೆ ಬೇಗ ಅರ್ಥ ಆಗುತ್ತದೆ. ಸಿನಿಮಾಟೋಗ್ರಫಿಯ ಬಗ್ಗೆ ಒಂದು ಮಾತಿಲ್ಲ. ಅರವಿಂದ್ ಕಶ್ಯಪ್ ಅವರ ಚಮತ್ಕಾರವನ್ನು ಸಿನಿಮಾದಲ್ಲಿ ನೋಡಬಹುದು. ಇನ್ನು ಸಂಗೀತ, ಹಾಡುಗಾರಿಕೆಯ ಬಗ್ಗೆ ಹೇಳುವುದಾದರೆ ಹಿಂದಿನ ಸಿನಿಮಾದ ಕೆಲವು ಹಾಡುಗಳನ್ನು ಈ ಸಿನಿಮಾದಲ್ಲಿಯೂ ಬಳಸಿದ್ದಾರೆ. ಹಿನ್ನೆಲೆ ಸಂಗೀತ,ಹಾಡುಗಳು ಚೆನ್ನಾಗಿದೆ.
ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡು,ಯಾವುದೋ ಯೋಚನೆಯನ್ನು ಇಟ್ಟುಕೊಂಡು ಸಿನಿಮಾ ನೋಡುವವರಿಗೆ ಸ್ವಲ್ಪ ನಿರಾಸೆಯಾಗಬಹುದು. ಆದರೂ ಸಿನಿಮಾದ ಅನುಭವವನ್ನು ಪಡೆಯಲು ಚಿತ್ರಮಂದಿರದಲ್ಲಿಯೇ ನೋಡಿದರೆ ಉತ್ತಮ. ಒಟಿಟಿ,ಚ್ಯಾನಲಿನಲ್ಲಿ ನೋಡುವ ಯೋಚನೆಯಲ್ಲಿ ಇರುವವರು ಒಟಿಟಿಯಲ್ಲಿ "ಸು ಫ್ರಮ್ ಸೋ" ನೋಡಿದ ಬಳಿಕ ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತಪಡಿಸಿದಂತೆ ಈ ಸಿನಿಮಾವನ್ನು ನೋಡಿದ ಬಳಿಕ ವ್ಯಕ್ತಪಡಿಸಬಹುದು ಅಂದರೆ ಒಟಿಟಿಯಲ್ಲಿ ನೋಡಿದಾಗ ಚಿತ್ರಮಂದಿರದಲ್ಲಿ ನೋಡುವ ಅನುಭವ ಸಿಗದ ಕಾರಣ ನಿರಾಸೆಯಾಗಬಹುದು.
ಸಂಪೂರ್ಣ ಚಿತ್ರ ತಂಡಕ್ಕೆ ಹಾಗು ಹೊಂಬಾಳೆ ತಂಡಕ್ಕೆ ಶುಭ ಹಾರೈಕೆಗಳು.
ನೀವು ಕೂಡ ಈ ಸಿನಿಮಾವನ್ನು ಚಿತ್ರ ಮಂದಿರಕ್ಕೆ ಹೋಗಿಯೇ ನೋಡಿ, ಒಟಿಟಿ ಅಥವ ಚ್ಯಾನಲಿನಲ್ಲಿ ಬರಲು ಕಾಯಬೇಡಿ!
ನನ್ನ ರೇಟಿಂಗ್: 9/10
ಬರಹ: ಶ್ರೀಕರ ಬಿ
Comments
Post a Comment