ವಿಶ್ವದ ಅತ್ಯಂತ ಎತ್ತರದ ಹಿಕ್ಕಿಂ ಅಂಚೆ ಕಚೇರಿ: 42 ವರ್ಷಗಳಿಂದ ಹಿಮಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ರಿಂಚನ್ ಅವರ ರೋಚಕ ಕಥೆ!
ವಿಶ್ವದ ಅತ್ಯಂತ ಎತ್ತರದ ಹಿಕ್ಕಿಂ ಅಂಚೆ ಕಚೇರಿ: 42 ವರ್ಷಗಳಿಂದ ಹಿಮಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ರಿಂಚನ್ ಅವರ ರೋಚಕ ಕಥೆ!
ಭಾರತೀಯ ಅಂಚೆ ಇಲಾಖೆ! ಇದು ನಮ್ಮ ಭಾರತದ ಹೆಮ್ಮೆಯು ಹೌದು! ವಿಶ್ವದ ಅತಿದೊಡ್ಡ ಅಂಚೆ ಜಾಲವನ್ನು ಹೊಂದಿರುವ ಇಲಾಖೆಯು ಹೌದು! ಭಾರತ ಸರ್ಕಾರದ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ ಇಲಾಖೆಗಳಲ್ಲಿ ಇದು ಒಂದು!
ಅದೊಂದು ಕಾಲವಿತ್ತು. ಭಾರತದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜನರ ಸಂದೇಶ ರವಾನಿಸುವ ಕೆಲಸಗಳನ್ನು ಪತ್ರಗಳು ಮಾಡುತ್ತಿದ್ದವು. ಇದು ಎಷ್ಟೋ ಶತಮಾನಗಳ ಹಿಂದಿನಿಂದಲೂ ರಾಜರ ಕಾಲದಿಂದಲೂ ಪಾರಿವಳ,ರಾಜದೂತರ ಮೂಲಕವೂ ರವಾನಿಸುವ ಕೆಲಸಗಳು ಆಗುತ್ತಿತ್ತು. ಅದೇ ರೀತಿ ನಮ್ಮ ಆಧುನಿಕ ಯುಗದಲ್ಲಿ ಬ್ರಿಟಿಷರು ಭಾರತದಲ್ಲಿದ್ದ ಕಾಲದಿಂದ ಅಂಚೆ ಇಲಾಖೆಯು ಅಸ್ತಿತ್ವಕ್ಕೆ ಬಂದು ನಂತರ ಸ್ವತಂತ್ರ ಭಾರತದಲ್ಲಿ ಭಾರತ ಸರ್ಕಾರವೂ ಅಂಚೆ ಸೇವೆಗಳಿಗೆ ಸಂಬಂಧಿಸಿ ಅಂಚೆ ಇಲಾಖೆಯನ್ನು ಸ್ಥಾಪಿಸಿ ಅಂಚೆ ಸೇವೆ ಮಾತ್ರವಲ್ಲದೆ ಹಣಕಾಸಿಗೆ ಸಂಬಂಧಪಟ್ಟ ಸೇವೆಗಳನ್ನೂ ನೀಡಲು ಆರಂಭಿಸಿತು. ಎಷ್ಟೋ ಮನೆಗಳನ್ನು,ಕುಟುಂಬಗಳನ್ನು ಬೆಳಗುವ ಕೆಲಸ ಈ ಅಂಚೆ ಇಲಾಖೆ ಮಾಡಿದೆ. ಎಷ್ಟೋ ಜನರು ಯಾವಾಗ ಅಂಚೆಪೇದೆ(ಪೋಸ್ಟ್ ಮ್ಯಾನ್) ತಮ್ಮ ಸ್ಥಳಕ್ಕೆ ಬಂದು ಪತ್ರವನ್ನು ವಿತರಣೆ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಇರುತ್ತಿದ್ದರು. ಒಂದು ಪತ್ರ ಒಂದು ಮನೆಯ ಸಂತೋಷಕ್ಕೆ ಕಾರಣ ಆಗುತ್ತಿತ್ತು. ಯಾವುದೇ ಮೂಲೆಗೂ ಪತ್ರಗಳು ತಲುಪುತ್ತಿತ್ತು. ಇಂತಹ ಹೆಮ್ಮೆಯ ಅಂಚೆ ಇಲಾಖೆಯ ಅಡಿಯಲ್ಲಿ ಕಾರ್ಯಚರಿಸುವ ಒಂದು ಅಂಚೆ ಕಚೇರಿಯ ಬಗ್ಗೆ ನಿಮಗೆ ತಿಳಿದಿದೆಯೇ? ವಿಶ್ವದ ಅತ್ಯಂತ ಎತ್ತರದಲ್ಲಿರುವ ಅಂಚೆ ಕಚೇರಿ ಎಲ್ಲಿದೆ ಎಂದು ನಿಮಗೆ ತಿಳಿದಿದೆಯೇ? ಇದು ನಮ್ಮ ಭಾರತದಲ್ಲಿಯೇ ಎಂದು ನಿಮಗೆ ಗೊತ್ತಿದಿದೆಯೇ? ಹೌದು! ವಿಶ್ವದ ಅತ್ಯಂತ ಎತ್ತರದಲ್ಲಿರುವ ಅಂಚೆ ಕಚೇರಿ ನಮ್ಮ ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿದೆ! ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆ ಪ್ರತಿವರ್ಷವೂ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಪ್ರದೇಶ. ಈ ಸ್ಪಿತಿ ಕಣಿವೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 14,500 ಅಡಿ ಎತ್ತರದಲ್ಲಿ ಹಿಮಾಲಯದ ಪರ್ವತ ಶ್ರೇಣಿಗಳ ಮಧ್ಯದಲ್ಲಿರುವ ಹಿಕ್ಕಿಂ ಎಂಬ ಪುಟ್ಟ ಗ್ರಾಮದಲ್ಲಿ ವಿಶ್ವದ ಅತ್ಯಂತ ಎತ್ತರದಲ್ಲಿರುವ ಅಂಚೆ ಕಚೇರಿ ಇದೆ. ಈ ಕಚೇರಿಯ ಕಥೆ ಒಂದು ರೋಚಕ. 1983ರಲ್ಲಿ ಶಾಖಾ ಅಂಚೆ ಕಚೇರಿ ಆಗಿ ಸ್ಥಾಪಿತಗೊಂಡ ಈ ಅಂಚೆ ಕಚೇರಿಯಲ್ಲಿ ಕಳೆದ 42 ವರ್ಷಗಳಿಂದ ಅಂದರೆ ಸ್ಥಾಪನೆಗೊಂಡ ಸಮಯದಿಂದ ರಿಂಚನ್ ಚೇರಿಂಗ್ ಎಂಬುವವರು ಅಂಚೆ ಕಚೇರಿಯ ವ್ಯವಸ್ಥಾಪಕರಾಗಿ(ಪೋಸ್ಟ್ ಮಾಸ್ಟರ್) ಅಥವ ಗ್ರಾಮೀಣ ಡಾಕ್ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1983ರಲ್ಲಿ ಹಿಕ್ಕಿಂ ಗ್ರಾಮದಲ್ಲಿ ಅಂಚೆ ಕಚೇರಿ ಸ್ಥಾಪಿಸಲು ಆಲೋಚನೆ ಮಾಡಿದಾಗ ಆ ಗ್ರಾಮದಲ್ಲಿ ವೇಗವಾಗಿ ಓಡುವವರನ್ನು ಹುಡುಕುತ್ತಿದ್ದರಂತೆ. ಆಗ ಕಣ್ಣಿಗೆ ಬಿದ್ದದ್ದು ರಿಂಚನ್ ಅವರು. ಅವರ ಬಳಿ ಆಗ ಸೈಕಲ್ ಕೂಡ ಇತ್ತು. ಹೀಗಾಗಿ ಅವರನ್ನು ಗ್ರಾಮೀಣ ಡಾಕ್ ಸೇವಕರಾಗಿ ಆಗಿ ನೇಮಕ ಮಾಡಲಾಯಿತು. ಇನ್ನೊಂದು ವಿಶೇಷ ಎಂದರೆ ಅಲ್ಲಿ ಅಂಚೆ ಕಚೇರಿ ಹಾಗು ರಿಂಚನ್ ಅವರ ಮನೆ ಒಂದೆ ಕಟ್ಟಡದಲ್ಲಿದೆ.
ಈ ಹಿಕ್ಕಿಂ ಗ್ರಾಮ ಹಿಮಾಲಯದ ಪರ್ವತ ಶ್ರೇಣಿಗಳ ಮಧ್ಯದಲ್ಲಿರುವುದರಿಂದ ಅಲ್ಲಿನ ಹವಾಮಾನದ ಬಗ್ಗೆ ಏನು ಹೇಳಲು ಆಗುವುದಿಲ್ಲ. ಮೈ ಕೊರೆಯುವ ಚಳಿ,ಹಿಮಪಾತ, ಕಡಿದಾದ ರಸ್ತೆಗಳು ಇಂತಹ ಹಲವಾರು ಸವಾಲುಗಳ ಮಧ್ಯೆ ಅವೆಲ್ಲವನ್ನು ಹಿಮ್ಮೆಟ್ಟಿ ಕಳೆದ 42 ವರ್ಷಗಳಿಂದ ರಿಂಚನ್ ಅವರು ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವುದು ಮಾತ್ರವಲ್ಲದೆ ಆ ಅಂಚೆ ಕಚೇರಿಯ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಅಂಚೆಗಳನ್ನು ವಿತರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ 8 ಗಂಟೆಯ ತನಕ ಕಾರ್ಯಚರಿಸುವ ಈ ಅಂಚೆ ಕಚೇರಿಯಲ್ಲಿ ಅವರು ಕೆಲಸಗಳನ್ನು ಮುಗಿಸಿ ಆ ದಿನದ ಅಂಚೆಗಳನ್ನು ಸಂಗ್ರಹಿಸಿ ತಮ್ಮ ಅಂಚೆ ಚೀಲದಲ್ಲಿ ತುಂಬಿಕೊಂಡು ಅಲ್ಲಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಕಾಜಾ ಉಪ ಅಂಚೆ ಕಚೇರಿಗೆ ಕಡಿದಾದ, ಸವಾಲಿನ ರಸ್ತೆಯಲ್ಲಿ ನಡೆದುಕೊಂಡು ಇಲ್ಲವೇ ಸೈಕಲಿನಲ್ಲಿ ಪ್ರಯಾಣಿಸಿ ತಲುಪಿಸುತ್ತಾರೆ. ಇವರ ಈ ಸೇವೆ ಹಿಕ್ಕಿಂ ಅನ್ನು ದೇಶದ ಬೇರೆ ಭಾಗಗಳನ್ನು ಈಗಲೂ ಸಂಪರ್ಕಿಸುತ್ತಿದೆ! ನಂತರ ಕಾಜಾ ಅಂಚೆ ಕಚೇರಿಯಿಂದ ಅಂಚೆಗಳನ್ನು ತುಂಬಿಕೊಂಡು ಮರಳಿ ಹಿಕ್ಕಿಂಗೆ ಬಂದು ತಮ್ಮ ಅಂಚೆ ಕಚೇರಿಯ ಕಾರ್ಯ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿ ಅಂಚೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಸೇವೆ, ಕಾರ್ಯ ನಿಷ್ಠೆಯನ್ನು ನಿಜವಾಗಿ ಮೆಚ್ಟಲೇ ಬೇಕು. ಈ ಹಿಕ್ಕಿಂ ಗ್ರಾಮದ ತಾಪಮಾನ ನೋಡಿದರೆ 20°C - 0°C ತನಕ ಇರುತ್ತದೆ. ರಾತ್ರಿಯಲ್ಲಿ 0°C ಅಥವ ಅದಕ್ಕಿಂತ ಕೆಳಗೂ ಇಳಿಯುತ್ತದೆ. ಚಳಿಗಾಲದಲ್ಲಿ -20°C ತನಕವೂ ಇಳಿಯುತ್ತದೆ. ಇಂತಹ ಕಠಿಣ ತಾಪಮಾನ ಇರುವ ಸಮಯದಲ್ಲೂ ಇವರು ತಮ್ಮ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಕೋವಿಡ್ ಮಹಾಮಾರಿ ಇಡೀ ವಿಶ್ವಕ್ಕೆ ಅಪ್ಪಳಿಸಿ ವಿವಿಧ ಸೇವೆಗಳು ಸ್ಥಬ್ದಗೊಂಡರೂ ಇವರ ಸೇವೆಗೆ ಕೋವಿಡ್ ಅಡ್ಡ ಬರಲೇ ಇಲ್ಲ! ಕೋವಿಡ್ ಸಮಯದಲ್ಲೂ ಇವರ ಸೇವೆ ನಿಲ್ಲದಿರುವುದು ಭಾರತೀಯ ಅಂಚೆ ಇಲಾಖೆಯ ಶ್ರೇಷ್ಠತೆಯನ್ನು ತೋರಿಸುತ್ತದೆ. ಈ ಹಿಕ್ಕಿಂ ಅಂಚೆ ಕಚೇರಿ ಹೆಚ್ಚು ಹಿಮಪಾತವಾದ ಸಮಯದಲ್ಲಿ ರಸ್ತೆಗಳು ಮುಚ್ಚಿದ ಸಂದರ್ಭದಲ್ಲಿ ಹೋಗಲು ಕಷ್ಟವಾಗುವ ಕಾರಣ ಮುಚ್ಚಿರುತ್ತದೆ. ಅದು ಬಿಟ್ಟರೆ ಈಗಲೂ ಈ ಗ್ರಾಮದ ಜನರಿಗೆ ಈ ಅಂಚೆ ಕಚೇರಿ ಜೀವನಾಡಿ. ಇದು ಈಗ ಸ್ಪಿತಿ ಕಣಿವೆಯಲ್ಲಿ ಒಂದು ಪ್ರವಾಸಿ ತಾಣವೂ ಹೌದು.
ಸ್ಪಿತಿ ಕಣಿವೆಗೆ ಹೋಗುವ ಪ್ರವಾಸಿಗರು ಒಮ್ಮೆಯಾದರೂ ಈ ಅಂಚೆ ಕಚೇರಿಗೆ ಭೇಟಿ ನೀಡಿ ಅಲ್ಲಿಂದ ವಿಶೇಷ ಅಂಚೆ ಪತ್ರವನ್ನು ತಮ್ಮ ವಿಳಾಸಕ್ಕೆ ಅಥವ ಬೇಕಾದ ಕಡೆಗೆ ಕಳುಹಿಸಿ ಸಂಭ್ರಮಿಸುತ್ತಾರೆ. ಇನ್ನು ಈ ಅಂಚೆ ಕಚೇರಿಯಲ್ಲಿ ಸಿಗುವ ಸೇವೆಗಳ ಬಗ್ಗೆ ಹೇಳುವುದಾದರೆ ಇಲ್ಲಿ ಮೈಲ್ ಸೇವೆ,ಪಾರ್ಸೆಲ್ ಸೇವೆ, ಹಣಕಾಸಿಗೆ ಸಂಬಂಧಪಟ್ಟ ಸೇವೆಗಳು(ಅಂಚೆ ಬ್ಯಾಂಕ್, ಮನಿ ಆರ್ಡರ್ ಹಾಗು ಇತರೇ ಸೇವೆಗಳು), ರಿಟೇಲ್ ಮತ್ತು ಪ್ರೀಮಿಯಂ ಸೇವೆಗಳು(ಸ್ಟ್ಯಾಂಪ್,ಪೋಸ್ಟಲ್ ಇನ್ಶೂರೆನ್ಸ್ ಸೇವೆಗಳು ಸೇರಿ ಇತರೇ ಸೇವೆಗಳು), ಸರ್ಕಾರಿ ಸೇವೆಗಳು ಸೇರಿ ಉಳಿದ ಶಾಖಾ ಅಂಚೆ ಕಚೇರಿಗಳಲ್ಲಿ ಸಿಗುವ ಸೇವೆಗಳು ಇಲ್ಲಿಯೂ ಲಭ್ಯವಿದೆ. ಇಂತಹ ಪುಟ್ಟ ಹಳ್ಳಿಯಲ್ಲಿ, ಎತ್ತರದ, ತಲುಪಲು ಕಷ್ಟಪಡಬೇಕಾದ ಪ್ರದೇಶದಲ್ಲಿಯೂ ಇಷ್ಟು ಸೇವೆಗಳನ್ನು ನೀಡುತ್ತಿರುವ ಅಂಚೆ ಇಲಾಖೆಯನ್ನು ಹಾಗು ರಿಂಚನ್ ಚೇರಿಂಗ್ ಅವರನ್ನು ಮೆಚ್ಚಲೇ ಬೇಕು.
ಇದು ಹಿಕ್ಕಿಂ ಶಾಖಾ ಅಂಚೆ ಕಚೇರಿ ಹಾಗು ರಿಂಚನ್ ಅವರ ಕಥೆ. ಇದೇ ರೀತಿ ಭಾರತ ದೇಶದ ಹಲವಾರು ಪ್ರದೇಶಗಳಲ್ಲಿ, ಹಳ್ಳಿಗಳಲ್ಲಿ, ಯಾವುದೋ ಗುಡ್ಡಗಾಡಿನ ಮಧ್ಯದಲ್ಲಿ ಗ್ರಾಮೀಣ ಡಾಕ್ ಸೇವಕರು ಶಾಖಾ ಅಂಚೆ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಸಣ್ಣ ಹಳ್ಳಿಗಳಿಂದ ಹಿಡಿದು ದೊಡ್ಡ ನಗರಗಳ ತನಕ ಅಲ್ಲಲ್ಲಿ ಇರುವ ಅಂಚೆ ಕಚೇರಿಗಳು ಹಾಗು ಅಂಚೆ ಕಚೇರಿಯ ಸಿಬ್ಬಂದಿಗಳ( ಶಾಖಾ ಅಂಚೆ ಕಚೇರಿಗಳಲ್ಲಿ ಗ್ರಾಮೀಣ ಡಾಕ್ ಸೇವಕರು) ಸೇವೆಯಿಂದ ಇಂದು ನಮ್ಮ ಒಂದು ಪತ್ರ ಸುರಕ್ಷಿತವಾಗಿ ಮತ್ತೊಬ್ಬರ ಕೈ ಸೇರುತ್ತಿದೆ. ನಮ್ಮ ಒಂದು ಪಾರ್ಸೆಲ್/ಕೊರಿಯರ್ ಕಡಿಮೆ ದರದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಥವ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸುರಕ್ಷಿತವಾಗಿ ತಲುಪುತ್ತಿದೆ. ಅಂಚೆ ಕಚೇರಿಗಳಲ್ಲಿ ನಮಗೆ ಉತ್ತಮ ಬಡ್ಡಿ ದರದಲ್ಲಿ ಹಣಕಾಸಿಗೆ ಸಂಬಂಧಪಟ್ಟ ಸೇವೆಗಳು, ಇನ್ಶೂರೆನ್ಸ್ ಸೇವೆಗಳು ಸಿಗುತ್ತಿದೆ. ವಿವಿಧ ಸೇವೆಗಳಿಗೆ ಸಂಬಂಧಪಟ್ಟ ಬಿಲ್ ಪಾವತಿಸುವ ವ್ಯವಸ್ಥೆ ಅಂಚೆ ಕಚೇರಿಗಳಲ್ಲಿ ಸಿಗುತ್ತಿದೆ. ಇದು ನಮ್ಮ ಹೆಮ್ಮೆಯ ಭಾರತೀಯ ಅಂಚೆ ಇಲಾಖೆ,ಹಿಕ್ಕಿಂ ಶಾಖಾ ಅಂಚೆ ಕಚೇರಿ ಹಾಗು ರಿಂಚನ್ ಅವರ ಕಥೆ. ನನ್ನ ಪ್ರಕಾರ ಇವರೆಲ್ಲರೂ ಕೂಡ ಹಿರೋಗಳೇ!
ಬನ್ನಿ! ಒಂದು ಬಾರಿ ಇವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸೋಣ!
🖊ಶ್ರೀಕರ ಬಿ
Comments
Post a Comment