ಪುತ್ತೂರೂ-ಮಂಗಳೂರು ನಡುವೆ ಮಧ್ಯಾಹ್ನದ ವೇಳೆ ಇಲ್ಲ ರೈಲು ಸಂಪರ್ಕ! ಕೇಳಿ ಬಂತು ಮಡಗಾಂವ್-ಮಂಗಳೂರು ಮೆಮು ರೈಲಿನ ಪುತ್ತೂರು ತನಕ ವಿಸ್ತರಣೆಯ ಕೂಗು!
ಪುತ್ತೂರೂ-ಮಂಗಳೂರು ನಡುವೆ ಮಧ್ಯಾಹ್ನದ ವೇಳೆ ಇಲ್ಲ ರೈಲು ಸಂಪರ್ಕ! ಕೇಳಿ ಬಂತು ಮಡಗಾಂವ್-ಮಂಗಳೂರು ಮೆಮು ರೈಲಿನ ಪುತ್ತೂರು ತನಕ ವಿಸ್ತರಣೆಯ ಕೂಗು!
![]() |
| ಚಿತ್ರ ಕೃಪೆ: ದಿ ಹಿಂದು ಪತ್ರಿಕೆ |
ಮಂಗಳೂರು,ಪುತ್ತೂರು ಇವು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಮುಖ ನಗರಗಳು. ವಿವಿಧ ಕೆಲಸಗಳಿಗೆ, ವಿದ್ಯಾಭ್ಯಾಸಕ್ಕೆ, ಪ್ರವಾಸಕ್ಕೆ ಸೇರಿ ಪ್ರತಿದಿನ ಸಾವಿರಾರು ಜನರು ಈ ಎರಡು ನಗರಗಳ ನಡುವೆ ಸಂಚರಿಸುತ್ತಾರೆ. ಜೊತೆಗೆ ಈ ಎರಡು ನಗರಗಳಲ್ಲಿರುವ ರೈಲು ನಿಲ್ದಾಣಗಳು(ಮಂಗಳೂರು ಸೆಂಟ್ರಲ್,ಮಂಗಳೂರು ಜಂಕ್ಷನ್, ಕಬಕ ಪುತ್ತೂರು) ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳು ಹೌದು ಹಾಗು ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುವ ರೈಲು ನಿಲ್ದಾಣಗಳೂ ಹೌದು. ಹೀಗೆ ಹಲವಾರು ಮಹತ್ವಗಳನ್ನು ಪಡೆದಿರುವ ಈ ಎರಡು ನಗರಗಳ ನಡುವೆ ಸಾರಿಗೆ ಸೇವೆ ಅತಿ ಮುಖ್ಯ. ಸದ್ಯ ಪುತ್ತೂರು-ಮಂಗಳೂರು ನಡುವೆ ಸಾಕಷ್ಟು ಸರ್ಕಾರಿ,ಖಾಸಗಿ ಬಸ್ ಸೇವೆಗಳೂ ಇದ್ದರೂ ಕೆಲವೊಮ್ಮೆ ವಿವಿಧ ಕಾರಣಗಳಿಂದ ಬಸ್ ಸೇವೆಗಳಲ್ಲಿ ವ್ಯತ್ಯಯಗೊಂಡಾಗ ರೈಲು ಸೇವೆಗಳು ಮಹತ್ವ ಪಡೆಯುತ್ತದೆ. ಇನ್ನು ಸಾರಿಗೆಯಲ್ಲಿ ರೈಲು ಸೇವೆಯ ಬಗ್ಗೆ ಹೇಳುವುದಾದರೆ ಪುತ್ತೂರು-ಮಂಗಳೂರು ನಡುವೆ(ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್) ಸದ್ಯ ಪ್ರತಿದಿನ 6 ರೈಲುಗಳ ಸಂಚಾರವಿದೆ. ಇಷ್ಟು ಮಹತ್ವ ಪಡೆದಿರುವ ನಗರಗಳ ನಡುವೆ ಕೇವಲ 6 ರೈಲುಗಳು ಮಾತ್ರ ಓಡುತ್ತದೆ ಎಂದು ಕೇಳುವಾಗ ಆಶ್ಚರ್ಯ ಆಗಬಹುದು. ಈಗ ಇರುವ ಈ 6 ರೈಲುಗಳಲ್ಲಿಯೂ ಪ್ರತಿದಿನ ನೂರಾರು ಜನರು ಆರಾಮವಾಗಿ ಪ್ರಯಾಣಿಸುತ್ತಾರೆ. ಅಷ್ಟೇ ಅಲ್ಲ ಅತಿ ಕಡಿಮೆ ದರದಲ್ಲಿ ಅಂದರೆ ಸಾಮಾನ್ಯ ಪ್ಯಾಸೆಂಜರ್ ರೈಲಿನಲ್ಲಿ ₹15ರ ಟಿಕೇಟು ಹಾಗು ಎಕ್ಸ್‌ಪ್ರೆಸ್ ರೈಲಿನಲ್ಲಿ ₹30ರ ಟಿಕೇಟು ಪಡೆದು ಸಂಚರಿಸುತ್ತಾರೆ. ಇನ್ನು ತಿಂಗಳ ಪಾಸ್ ಬಗ್ಗೆ ಹೇಳುವುದಾದರೆ ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ನಡುವೆ ₹270 ಆದರೆ ಕಬಕ ಪುತ್ತೂರು-ಮಂಗಳೂರು ಜಂಕ್ಷನ್ ನಡುವೆ ₹185 ಪಾಸ್ ಪಡೆದು ಸಂಚರಿಸುಬಹುದಾಗಿದೆ! ಅಂದರೆ ದಿನಕ್ಕೆ ₹9 ಮಾತ್ರ ಬೀಳುತ್ತದೆ! ಇಷ್ಟು ಕಡಿಮೆ ದರದಲ್ಲಿ ಪುತ್ತೂರು-ಮಂಗಳೂರು ನಡುವೆ ಸಂಚರಿಸುಬಹದಾ? ಎಂದು ಕೇಳುವಾಗ ಆಶ್ಚರ್ಯ ಆಗುತ್ತದೆ ಅಲ್ಲವೇ!?
ಪ್ರಸ್ತುತ ಮುಂಜಾನೆ 5:40ಕ್ಕೆ ಕಬಕ ಪುತ್ತೂರು ರೈಲು ನಿಲ್ದಾಣಕ್ಕೆ ಬೆಂಗಳೂರಿನಿಂದ ಆಗಮಿಸುವ ರೈಲು ಸಂಖ್ಯೆ 16511 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್( ಈ ಹಿಂದೆ ಕ್ರಾ.ಸಂ.ರಾ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್) 5:42ಕ್ಕೆ ಹೊರಟ ಬಳಿಕ ಈ ರೈಲನ್ನು ಸೇರಿಸಿ ಪುತ್ತೂರಿನಿಂದ ಮಂಗಳೂರಿಗೆ ಬೆಳಗ್ಗೆ 8:30ರ ಒಳಗೆ ನಾಲ್ಕು ರೈಲು ಸೇವೆಗಳು ಇದೆ. ಬೆಳಗ್ಗೆ 8:15ಕ್ಕೆ ಕಬಕ ಪುತ್ತೂರು ರೈಲು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಹೋದ ಬಳಿಕ ಮಧ್ಯಾಹ್ನ 2:47ರ ತನಕ ಯಾವುದೇ ರೈಲುಗಳು ಇಲ್ಲ! ಅಂದರೆ ಸುಮಾರು 6.5 ಗಂಟೆಗಳ ತನಕ ಪುತ್ತೂರಿನಿಂದ ಮಂಗಳೂರಿಗೆ ಯಾವುದೇ ರೈಲುಗಳು ಇಲ್ಲ! ಈ ಸಮಯದಲ್ಲಿ ನಿಮಗೆ ಮಂಗಳೂರಿಗೆ ಹೋಗಬೇಕಾದರೆ ಒಂದೋ ಬಸ್ಸಿನಲ್ಲಿ ಇಲ್ಲವೇ ತಮ್ಮ ಸ್ವಂತ ವಾಹನದಲ್ಲಿ ಹೋಗಬೇಕು! ಈ ಕೊರತೆಯನ್ನು ನೀಗಿಸಲು ಪ್ರಸ್ತುತ ಗೋವಾ ರಾಜ್ಯದ ಮಡಗಾಂವ್ ಹಾಗು ನಮ್ಮ ಮಂಗಳೂರು ನಡುವೆ ಸಂಚರಿಸುವ ರೈಲು ಸಂಖ್ಯೆ 10107/08 ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಮೆಮು ಎಕ್ಸ್‌ಪ್ರೆಸ್ ರೈಲನ್ನು ಕಬಕ ಪುತ್ತೂರು ತನಕ ಅಥವ ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಿಸಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ.
ರೈಲು ಸಂಖ್ಯೆ 10107/08 ಮಡಗಾಂವ್ ಜಂಕ್ಷನ್–ಮಂಗಳೂರು ಸೆಂಟ್ರಲ್ ಸೆಂಟ್ರಲ್ ಮೆಮು ಎಕ್ಸ್‌ಪ್ರೆಸ್ ಮಂಗಳೂರು-ಮಡಗಾಂವ್ ನಡುವೆ ಸಂಚರಿಸುವ ಜನಪ್ರಿಯ ರೈಲುಗಳಲ್ಲಿ ಒಂದು. ಮಡಗಾಂವ್ ಅನ್ನು ಉತ್ತರ ಕನ್ನಡ, ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಈ ರೈಲು ವಿದ್ಯಾರ್ಥಿಗಳು, ಕಾರ್ಮಿಕರು, ವ್ಯಾಪಾರಿಗಳು,ಪ್ರವಾಸಿಗರು ಮತ್ತು ಸಣ್ಣ ಉದ್ಯಮಗಳಿಗೆ ವರವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲದೆ ಇದು ಕರಾವಳಿಯ ರೈಲು ಪ್ರಯಾಣಿಕರ ಜೀವನಾಡಿಯಾಗಿದೆ.
ಪ್ರಸ್ತುತ ಕೊಂಕಣ ರೈಲ್ವೆಯ ಮುಂಗಾರು ವೇಳಪಟ್ಟಿಯಲ್ಲಿ ಮಧ್ಯಾಹ್ನ 12:30ಕ್ಕೆ ಹಾಗು ಬೇಸಗೆ ವೇಳಾಪಟ್ಟಿಯಲ್ಲಿ ಬೆಳಗ್ಗೆ 11:30ಕ್ಕೆ ಮಂಗಳೂರೂ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಆಗಮಿಸುವ ರೈಲು ಸಂಖ್ಯೆ 10107 ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಮೆಮು ಎಕ್ಸ್‌ಪ್ರೆಸ್ ಮಧ್ಯಾಹ್ನ 3:30ಕ್ಕೆ ರೈಲು ಸಂಖ್ಯೆ 10108 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ಮೆಮು ಎಕ್ಸ್‌ಪ್ರೆಸ್ ಆಗಿ ಮರಳಿ ಮಡಗಾಂವ್ ನಿಲ್ದಾಣಕ್ಕೆ ಹೋಗುತ್ತದೆ. ಈ ರೈಲಿನ ಸಮಯವನ್ನು ಗಮನಿಸಿದಾಗ ಇದು ಮಂಗಳೂರಿಗೆ ಬಂದ ಬಳಿಕ ಸುಮಾರು 3-4 ಗಂಟೆಗಳ ಕಾಲ ಮಂಗಳೂರು ಸೆಂಟ್ರಲಿನಲ್ಲೇ ಉಳಿಯುತ್ತದೆ. ಹೀಗಾಗಿ ಇದನ್ನು ಪ್ರಸ್ತುತ ಇರುವ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡದೆ ಕಬಕ ಪುತ್ತೂರು ತನಕ ಅಥವ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಿಸಬೇಕೆಂಬ ಬೇಡಿಕೆಯಿದೆ.
ಈ ವಿಸ್ತರಣೆಯಿಂದಾಗಿ ಕರಾವಳಿ ಕರ್ನಾಟಕದ ಸಂಪೂರ್ಣ ರೈಲು ಜಾಲ ಒಂದೇ ರೈಲಿನಲ್ಲಿ ಸಂಪರ್ಕ ಪಡೆಯುವುದು ಮಾತ್ರವಲ್ಲದೆ ಕುಕ್ಕೆ ಸುಬ್ರಹ್ಮಣ್ಯ ಧರ್ಮಸ್ಥಳ,ಉಡುಪಿ,ಕೊಲ್ಲೂರು(ಬೈಂದೂರು/ಕುಂದಾಪುರ ಮೂಲಕ),ಮುರುಡೇಶ್ವರ,ಗೋಕರ್ಣ ಕ್ಷೇತ್ರಗಳಿಗೆ ಹೋಗುವ ಭಕ್ತಾದಿಗಳಿಗೆ ಪ್ರಯಾಣಿಸಲು ಅನುಕೂಲ ಆಗುವುದು ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರಿಗೆ ಪ್ರತಿವರ್ಷ ಗೋವಾದಲ್ಲಿರುವ ತಮ್ಮ ಕುಲದೇವರ ಕ್ಷೇತ್ರಗಳಿಗೆ ಭೇಟಿ ನೀಡಲು ಸಹಾಯವಾಗುತ್ತದೆ ಹಾಗು ಕರಾವಳಿ ಕರ್ನಾಟಕ-ಗೋವ ರಾಜ್ಯದೊಂದಿಗೆ ಸಾಂಸ್ಕೃತಿಕ ಬಾಂಧವ್ಯವನ್ನೂ ಬಲಪಡಿಸುತ್ತದೆ. ಜೊತೆಗೆ ರಾಜ್ಯದಾದ್ಯಂತ ಪ್ರಸಿದ್ಧವಾಗಿರುವ ಈ ಕ್ಷೇತ್ರಗಳು ಮಾತ್ರವಲ್ಲದೆ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ,ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಶ್ರೀ ಕ್ಷೇತ್ರ ಕುದ್ರೋಳಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿ ಕರಾವಳಿ ಕರ್ನಾಟಕದ ಇತಿಹಾಸ ಪ್ರಸಿದ್ಧ ದೇವಸ್ಥಾನಗಳನ್ನು ಒಂದೇ ರೈಲಿನ ಮೂಲಕ ಸಂಪರ್ಕಿಸಬಹುದು.
ಧಾರ್ಮಿಕ ಪ್ರವಾಸದ ಜೊತೆಗೆ ಈ ವಿಸ್ತರಣೆ ಪುತ್ತೂರನ್ನು ಶಿಕ್ಷಣ ಮತ್ತು ವಾಣಿಜ್ಯ ಕೇಂದ್ರವಾಗಿ ಇನ್ನಷ್ಟು ಉತ್ತೇಜಿಸುವಲ್ಲಿ ಸಹಕಾರಿಯಾಗುತ್ತದೆ. ಪುತ್ತೂರಿನಲ್ಲಿ ಹಾಗು ಆಸುಪಾಸಿನಲ್ಲಿರುವ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು, ವ್ಯಾಪಾರಿಗಳು ಮತ್ತು ಕೃಷಿ ಉತ್ಪಾದಕರು, ರೈತರು, ದಿನಗೂಲಿ ಕಾರ್ಮಿಕರು ಮಂಗಳೂರು ಹಾಗು ಉಡುಪಿ,ಕಾರವಾರ ಕಡೆಗೆ ಕಡಿಮೆ ದರದಲ್ಲಿ ಪ್ರಯಾಣಿಸಬಹುದು. ಅಷ್ಟೇ ಅಲ್ಲದೆ ಭವಿಷ್ಯದಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಗೊಂಡಾಗ ಪುತ್ತೂರಿಗೆ ಬೇರೆ ಬೇರೆ ಕಡೆಗಳಿಂದ ಸಂಚರಿಸಲು ಸುಲಭವಾಗುತ್ತದೆ. ಪುತ್ತೂರಿನಂತಹ ವೇಗವಾಗಿ ಬೆಳೆಯುತ್ತಿರುವ ಪಟ್ಟಣಕ್ಕೆ ಉತ್ತಮ ರೈಲು ಸಂಪರ್ಕ ಸಿಕ್ಕರೆ, ಇದು ಕರಾವಳಿ ಹಾಗೂ ಒಳನಾಡಿನ ಪ್ರಮುಖ ಸಂಪರ್ಕ ಕೇಂದ್ರವಾಗಿ ರೂಪಿಸುವಲ್ಲಿ ಬಹಳಷ್ಟು ಕೊಡುಗೆಯನ್ನು ನೀಡಲಿದೆ. ಮೆಮು ರೈಲು ಸಂಪೂರ್ಣವಾಗಿ ವಿದ್ಯುತ್‌ನಿಂದ ಸಂಚರಿಸುವುದರಿಂದ ಇದು ಪರಿಸರ ಸ್ನೇಹಿಯೂ ಹೌದು. ಜೊತೆಗೆ ಮಂಗಳೂರು-ಸುಬ್ರಹ್ಮಣ್ಯ ನಡುವೆ ಹಳಿ ವಿದ್ಯುತ್ತೀಕರಣಗೊಂಡು ಇನ್ನು ವಿದ್ಯುತ್ ಚಾಲಿತ ರೈಲುಗಳು ಸಂಚರಿಸುವ ಕಾರಣ ಮೆಮು ರೈಲನ್ನು ಓಡಿಸಲು ಯಾವುದೇ ಸಮಸ್ಯೆಗಳು ಇರುವುದಿಲ್ಲ. ಆದ್ದರಿಂದ, ಮಡಗಾಂವ್–ಮಂಗಳೂರು ಮೆಮು ರೈಲನ್ನು ಕಬಕ ಪುತ್ತೂರಿನವರೆಗೆ ವಿಸ್ತರಿಸುವ ಬೇಡಿಕೆ ನಿಜಕ್ಕೂ ಸಮಂಜಸವಾದ ಬೇಡಿಕೆ.
ಈಗಾಗಲೇ ಈ ಬಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ರೈಲ್ವೆ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಹಾಗು ಅದಕ್ಕೆ ನೈರುತ್ಯ ರೈಲ್ವೆ ವಲಯದಿಂದ ಕ್ರಮಕೈಗೊಳ್ಳುವುದಾಗಿ ಭರವಸೆ ಸಿಕ್ಕಿರುವ ಮಾಹಿತಿಯಿದೆ. ಧಾರ್ಮಿಕ,ಪ್ರವಾಸ,ಶೈಕ್ಷಣಿಕ,ವಾಣಿಜ್ಯ ಸೇರಿ ಹಲವಾರು ಕ್ಷೇತ್ರಗಳಿಗೆ ಪ್ರಯೋಜನವಾಗುವ ಈ ಬೇಡಿಕೆಯನ್ನು ಆದಷ್ಟು ಬೇಗ ರೈಲ್ವೆ ಇಲಾಖೆ ಪರಿಗಣಿಸಿ ಪ್ರಸ್ತುತ ಇರುವ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡದೆ ಕಬಕ ಪುತ್ತೂರು ತನಕ ಇಲ್ಲವೇ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಣೆಯಾಗಲಿ ಎಂಬುದು ನಮ್ಮೆಲ್ಲರ ಇಚ್ಛೆ.
🖊ಶ್ರೀಕರ ಬಿ

Comments
Post a Comment