ವೀರ ಚಂದ್ರಹಾಸ! ದೊಡ್ಡಪರದೆಯಲ್ಲಿ ಕರಾವಳಿಯ ಗಂಡುಕಲೆಯ ಅಬ್ಬರ! ಹೇಗಿದೆ ಈ ಸಿನಿಮಾ!?
ವೀರ ಚಂದ್ರಹಾಸ! ದೊಡ್ಡಪರದೆಯಲ್ಲಿ ಕರಾವಳಿಯ ಗಂಡುಕಲೆಯ ಅಬ್ಬರ! ಹೇಗಿದೆ ಈ ಸಿನಿಮಾ!?
ಈಗಷ್ಟೆ ವೀರ ಚಂದ್ರಹಾಸ ಸಿನಿಮಾವನ್ನು ಅಮೆಜಾನ್ ಪ್ರೈಮಿನಲ್ಲಿ ನೋಡಿದೆ. ಈ ಸಿನಿಮಾ ಬಗ್ಗೆ ನಾನು ಬಿಡುಗಡೆಗೊಳ್ಳುವ ಸಮಯದಲ್ಲಿ ತಿಳಿದಿದ್ದರೂ ಕಾರಣಾಂತರಗಳಿಂದ ಚಿತ್ರಮಂದಿರಕ್ಕೆ ಹೋಗಿ ನೋಡಲು ಆಗರಿಲಿಲ್ಲ. ನಂತರ ಅಮೆಜಾನ್ ಪ್ರೈಮಿನಲ್ಲಿ ಬಿಡುಗಡೆಗೊಂಡ ಬಗ್ಗೆ ನನಗೆ ಗೊತ್ತಿರಲಿಲ್ಲ. ಇಂದು ಇನ್ಟಾಗ್ರಾಮಿನಲ್ಲಿ ರೀಲ್ಸ್ ನೋಡುತ್ತಿದ್ದಾಗ ಈ ಚಿತ್ರದ ಒಂದು ತುಣುಕನ್ನು ನಾನು ನೋಡಿದೆ. ಮದನ ರಾಜ್ಯವನ್ನು ಆಳುವ ಸನ್ನಿವೇಶ ಅದು. ಕಡಬಾಳರ ಅಭಿನಯ. ತಕ್ಷಣ ನಾನು ಗೂಗಲಿನಲ್ಲಿ ಚಿತ್ರದ ಬಗ್ಗೆ ಹುಡುಕಿದೆ. ಅಮೆಜಾನ್ ಪ್ರೈಮಿನಲ್ಲಿ ಇರುವುದು ಗೊತ್ತಾಯಿತು. ಕೂಡಲೆ ಪ್ರೈಮಿಗೆ ಹೋಗಿ ಸಿನಿಮಾ ನೋಡಲು ಕೂತ ನಾನು ಈಗ ನೋಡಿ ಮುಗಿಸಿದೆ. ಯಕ್ಷಗಾನವನ್ನು ಸಿನಿಮಾದಲ್ಲಿ ನೋಡುವ ಒಂದು ಖುಷಿಯೇ ಬೇರೆ!
ಕಥೆಯ ಬಗ್ಗೆ ಹೇಳುವುದಾದರೆ ಇದು ನಮಗೆ ಯಕ್ಷಗಾನದಲ್ಲಿರುವ ಚಂದ್ರಹಾಸ ಚರಿತ್ರೆ ಪ್ರಸಂಗವನ್ನು ಸಿನಿಮಾದಲ್ಲಿ ಯಕ್ಷಗಾನ ಶೈಲಿಯಲ್ಲಿ ತೋರಿಸಿದ್ದಾರೆ. ಆದರೆ ನಾನು ಈ ಹಿಂದೆ ಯಕ್ಷಗಾನ ಬಯಲಾಟದಲ್ಲಿ ನೋಡಿದಾಗ ಚಂದ್ರಹಾಸನ ಪೂರ್ವ ಇತಿಹಾಸ ಅಂದರೆ ಬಾಲಕನಾಗಿದ್ದಾಗ ಇದ್ದ ರೀತಿಯ ಬಗ್ಗೆ ನಾನು ತಿಳಿದಿರಲಿಲ್ಲ. ಇದು ಈ ಸಿನಿಮಾದ ಮೂಲಕ ನಾನು ತಿಳಿದುಕೊಂಡೆ. ಇದರ ಜೊತೆಗೆ ಶಿವ ಪುಟ್ಟಸ್ವಾಮಿಯ ಬಗ್ಗೆಯೂ ತಿಳಿದುಕೊಂಡದ್ದು ಸಿನಿಮಾದಲ್ಲಿಯೇ. ಇನ್ನು
ರವಿ ಬಸ್ರೂರು ಅವರ ನಿರ್ದೇಶನ ಮತ್ತು ಪ್ರಸಾದ್ ಮೊಗೆಬೆಟ್ಟು ಅವರ ಪದ್ಯ ಸಾಹಿತ್ಯ ಬಹಳ ಮೂಡಿಬಂದಿದೆ. ಇನ್ನು ಹಾಡುಗಾರಿಕೆಯ ಬಗ್ಗೆ ಹೇಳುವುದಾದರೆ ಇಲ್ಲಿ ಇದು ಹಾಡು ಅಂತ ಹೇಳುವ ಬದಲು ಭಾಗವತಿಕೆ ಅಂತಲೇ ಹೇಳಬಹುದು. ಪಟ್ಲ ಸತೀಶ್ ಶೆಟ್ಟಿ, ರಾಘವೇಂದ್ರ ಆಚಾರ್ಯ ಜನ್ಸಾಲೆ, ಚಿನ್ಮಯ ಭಟ್ ಕಲ್ಲಡ್ಕ,ಗಣೇಶ್ ಆಚಾರ್ಯ ಬಿಲ್ಲಾಡಿ ಅವರ ಮಧುರವಾದ ಹಾಗೂ ಅಬ್ಬರದ ಹಾಡುಗಳು ಪ್ರೇಕ್ಷಕನನ್ನು ಸಿನಿಮಾದಲ್ಲಿ ಆ ಸನ್ನಿವೇಶಕ್ಕೆ ಸರಿಯಾಗಿ ಹಿಡಿದಿರುವಂತೆ ಮಾಡುತ್ತದೆ. ದುಷ್ಟ ಬುದ್ಧಿಯಾಗಿ ಪ್ರಸನ್ನ ಶೆಟ್ಟಿಗಾರ್ ಅವರ ಅಭಿನಯ, ಅಬ್ಬರ ಆ ಪಾತ್ರಕ್ಕೆ ತಕ್ಕ ಹಾಗೆ ಇದೆ ಮತ್ತು ರಂಗಸ್ಥಳದಲ್ಲಿ ದುಷ್ಟಬುದ್ಧಿಯ ಅಬ್ಬರವನ್ನು ನೋಡುವ ಹಾಗೆ ನಾವು ಇಲ್ಲಿಯೂನೋಡಬಹುದು. ಶಿಥಿಲ್ ಶೆಟ್ಟಿ ಚಂದ್ರಹಾಸನ ಪಾತ್ರವನ್ನು ಬಹಳ ಚೆನ್ನಾಗಿ ಅಭಿನಯಿಸದ್ದಾರೆ. ಇನ್ನು ಮದನ ಪಾತ್ರದ ಬಗ್ಗೆ ಹೇಳುವಾದಾದರೆ ನನಗೆ ಈ ಪಾತ್ರವನ್ನು ಯಕ್ಷಗಾನದಲ್ಲಿ ಉದಯ ಕಡಬಾಳರು ಮಾಡುವ ರೀತಿ ಬಹಳ ಇಷ್ಟ. ಅದು ಅವರಿಗೆ ಸರಿಸಾಟಿಯಾದ ಪಾತ್ರ. ಮದನನ ಮುಗ್ಧತೆ, ಸಹಜವಾಗಿ ಬರುವ ಹಾಸ್ಯದ ಸನ್ನಿವೇಶವನ್ನು ಕಡಬಾಳರ ಅಭಿನಯದಲ್ಲಿ ನಾವು ರಂಗಸ್ಥಳದಲ್ಲಿ ನೋಡಬಹುದು. ಅದನ್ನು ನಾವು ಸಿನಿಮಾದಲ್ಲಿಯೂ ಹಾಗೆಯೇ ಕಾಣಬಹುದು. ನಾಗಶ್ರೀಯವರು ವಿಷಯೇ ಪಾತ್ರವನ್ನು ಚೆನ್ನಾಗಿ ಅಭಿನಯಿಸಿದ್ದಾರೆ. ರವೀಂದ್ರ ದೇವಾಡಿಗ ಮತ್ತು ಶ್ರೀಧರ್ ಕಾಸರಕೋಡು ಅವರ ಹಾಸ್ಯ ಬಹಳ ಚೆನ್ನಾಗಿ ಇದೆ.ಯಕ್ಷಗಾನವನ್ನು ಇಷ್ಟರ ತನಕ ನೋಡದವರು ಕೂಡ ನಕ್ಕು ಬಿಡಬಹುದು. ಒಂದು ನನಗೆ ಇಷ್ಟವಾದದ್ದು ಏನೆಂದರೆ ಯಕ್ಷಗಾನದ ಸಹಜತೆ ಹೇಗೆ ಇದೆಯೋ ಅಥವ ಆ ಮಾತುಗಾರಿಕೆ ಹೇಗೆ ಇದೆಯೋ ಅದನ್ನು ಸಿನಿಮಾದಲ್ಲಿಯೂ ಹಾಗೆಯೇ ತೋರಿಸಿದ್ದಾರೆ. ಯಕ್ಷಗಾನದ ಪ್ರಧಾನ ಅಂಗ ಅಂದರೆ ಕುಣಿತ. ಅದು ಇಲ್ಲಿ ಇಲ್ಲದಿರುವುದು ಸ್ವಲ್ಪ ಕಾಡುತ್ತದೆ. ಸಿನಿಮಾದಲ್ಲಿ ನಾವು ನೋಡುವ ಸಾಹಸಮಯ ದೃಶ್ಯಗಳನ್ನು ಈ ಸಿನಿಮಾದಲ್ಲಿಯೂ ಯುದ್ಧ ಸನ್ನಿವೇಶಗಳಲ್ಲಿ ಸ್ವಲ್ಪ ಮಟ್ಟಿಗೆ ನೋಡಬಹುದು. ಸಿನಿಮಾ ಎಂದಾಕ್ಷಣ ಇದು ಬೇಕು. ಯಕ್ಷಗಾನವನ್ನು ಅದರ ರೀತಿಯಲ್ಲಿಯೇ ಯಕ್ಷಗಾನದ ವೇಷಭೂಷಣಗಳೊಂದಿಗೆ ಈ ಸಾಹಸಮಯ ದೃಶ್ಯಗಳನ್ನು(ಉದಾಹರಣೆಗೆ ಎತ್ತರಕ್ಕೆ ಹಾರುವುದು) ನೋಡುವುದು ಒಂದು ವಿಭಿನ್ನ ಅನುಭವವನ್ನು ನೀಡುತ್ತದೆ. ಇನ್ನು ಸಿನಿಮಾಟೋಗ್ರಫಿಯ ಬಗ್ಗೆ ಒಂದು ಮಾತಿಲ್ಲ. ಚಿತ್ರೀಕರಣ,ಗ್ರಾಫಿಕ್ಸ್(ವಿ.ಎಫ್.ಎಕ್ಸ್) ಚೆನ್ನಾಗಿ ಮೂಡಿಬಂದಿದೆ. ಜೊತೆಗೆ ರವಿ ಬಸ್ರೂರು ಅವರು ಸ್ವತಃ ಸಂಗೀತ ನಿರ್ದೇಶಕರು ಆಗಿರುವುದರಿಂದ ಜೊತೆಗೆ ಚಿತ್ರವನ್ನು ಅವರೇ ನಿರ್ದೇಶಿಸಿರುವುದರಿಂದ ಇಡೀ ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕ ಹಾಗೆ ಭಾವನೆಯನ್ನು, ಆ ದೃಶ್ಯವನ್ನು ಸಂಗೀತದ ಮೂಲಕ ಹೇಗೆ ತೋರಿಸಬೇಕು,ಪ್ರೇಕ್ಷಕರನ್ನು ಹೇಗೆ ಹಿಡಿದು ಇಟ್ಟುಕೊಳ್ಳಬೇಕು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ನಿರ್ದೇಶಿಸಿರುವುದನ್ನು ನಾವು ನೋಡಬಹುದು. ಯಕ್ಷಗಾನದಲ್ಲಿ ಒಂದು ಪಾತ್ರ ಅಥವ ಆ ಸನ್ನಿವೇಶದ ಭಾವನೆಯನ್ನು ಭಾಗವತರು ತಮ್ಮ ಭಾಗವತಿಕೆಯ ಮೂಲಕ ಪ್ರೇಕ್ಷಕರ ಮನಸ್ಸಿಗೆ ತಲುಪಿಸುತ್ತಾರೆ. ಕೆಲವು ಭಾವನಾತ್ಮಕ ಸನ್ನಿವೇಶಗಳು,ಪ್ರಸಂಗಗಳು ಬಹಳ ಕಾಡುತ್ತದೆ. ಆ ಪ್ರಯತ್ನ ಈ ಸಿನಿಮಾದಲ್ಲಿ ನೋಡಬಹುದು. ಯಕ್ಷಗಾನದ ಹಿಮ್ಮೇಳ ಅಂದರೆ ಹಾಡು,ಹಿಮ್ಮೇಳ ವಾದ್ಯವನ್ನು ಸಿನಿಮಾದಲ್ಲಿ ಕೇಳಿ ನನಗೆ ಬಹಳ ಸಂತೋಷವಾಯಿತು.ಒಟ್ಟಿನಲ್ಲಿ ಹೇಳುವುದಾದರೆ ಇದೊಂದು ವಿಭಿನ್ನ ಪ್ರಯತ್ನ. ನನಗೆ ಅಂತೂ ಬಹಳ ಇಷ್ಟವಾಯಿತು. ಯಕ್ಷಗಾನವನ್ನು ದೊಡ್ಡ ಪರದೆಯಲ್ಲಿ ನೋಡಲು ಆಗಲಿಲ್ಲವಲ್ಲ ಅಂತಲೂ ಈಗ ಬೇಸರವಾಗುತ್ತಿದೆ. ಬಹುಶಃ ಈ ಸಿನಿಮಾದ ಇನ್ನೊಂದು ಭಾಗವೂ ಬರಬಹುದು ಅಂತ ಅನಿಸುತ್ತದೆ. ಬಂದರೆ ಖಂಡಿತವಾಗಿಯೂ ಚಿತ್ರಮಂದಿರಕ್ಕೆ ಹೋಗಿ ನೋಡಲು ಪ್ರಯತ್ನಿಸುವೆ. ಇದೇ ರೀತಿಯಲ್ಲಿ ಮುಂದೆಯೂ ರವಿ ಬಸ್ರೂರು ಅವರು ಬೇರೆಬೇರೆ ಪ್ರಸಂಗಗಳನ್ನು ಸಿನಿಮಾದ ಮೂಲಕ ಜಗತ್ತಿಗೆ ತೋರಿಸುವಂತೆ ಆಗಲಿ ಅಂತ ಹಾರೈಸುತ್ತೇನೆ. ನೀವು ಕೂಡ ಇನ್ನೂ "ವೀರ ಚಂದ್ರಹಾಸ" ಚಿತ್ರವನ್ನು ನೋಡದಿದ್ದರೆ ಈಗಲೇ ಅಮೆಜಾನ್ ಪ್ರೈಮಿನಲ್ಲಿ ನೋಡಿ!
ನನ್ನ ರೇಟಿಂಗ್: 5/5
🖊ಶ್ರೀಕರ ಬಿ
Comments
Post a Comment