ವೀಕ್ಷಕರನ್ನು ನಗುವಿನಲ್ಲಿ ತೇಲಿಸಿ ಬಿಡುವ "ಸು ಫ್ರಮ್ ಸೋ!" ಸಿನಿಮಾ, ಹೇಗಿದೆ ಸಿನಿಮಾ!?

 ವೀಕ್ಷಕರನ್ನು ನಗುವಿನಲ್ಲಿ ತೇಲಿಸಿ ಬಿಡುವ "ಸು ಫ್ರಮ್ ಸೋ!" ಸಿನಿಮಾ, ಹೇಗಿದೆ ಸಿನಿಮಾ!?



ಒಂದು ಸಿನಿಮಾ ಎಂದಾಕ್ಷಣ ಅದರಲ್ಲಿ ರೋಲರ್ ಕೋಸ್ಟರ್ ರೈಡಿನ ಹಾಗೆ ಹೋಗಬೇಕಾದರೆ,ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕಾದರೆ ಅದಕ್ಕೆ ಕಥೆ,ಅಲ್ಲಲ್ಲಿ ಸಿಗುವ ತಿರುವುಗಳು ಒಂದು ಪಾತ್ರವಹಿಸುತ್ತದೆ. ಜೊತೆಗೆ ಹಾಸ್ಯ ಸನ್ನಿವೇಶಗಳು,ಕುತೂಹಲಕಾರಿ ಸನ್ನಿವೇಶಗಳು ಕೂಡ ಪ್ರೇಕ್ಷಕರನ್ನು ಆ ಸಿನಿಮಾ ಹಿಡಿದಿಟ್ಟುಕೊಳ್ಳುತ್ತದೆ. ಅಂತಹ ಎಲ್ಲಾ ಗುಣಗಳು ಇರುವಂತಹ ಸಿನಿಮಾವೇ "ಸು ಫ್ರಮ್ ಸೋ"! ಸಾಮಾನ್ಯವಾಗಿ ಒಂದು ಸಿನಿಮಾ ಎಂದಾಕ್ಷಣ ನಾವು ಹೆಚ್ಚಾಗಿ ನೋಡುವುದು ಒಂದು ಕಥೆಗೆ ನಾಯಕ,ನಾಯಕಿ ಇರುತ್ತಾರೆ ಹಾಗು ನಾಯಕ ಖಳನಾಯಕ ಜೊತೆಗೆ ಜಗಳ ಮಾಡುತ್ತಾನೆ,ಒಂದು ಸ್ಥಳದಲ್ಲಿ ನಿಂತು ಹೊಡೆದರೆ ಪೆಟ್ಟು ತಿಂದವ ಒಂದು ಕಿಲೋಮೀಟರ್ ದೂರಕ್ಕೆ ಹೋಗಿ ಬೀಳುತ್ತಾನೆ ಅಥವ ಅಲ್ಲೇ ನೆಲಕ್ಕೆ ಬಿದ್ದು ಕೆಲವು ಬಾರಿ ಪಲ್ಟಿ ಹೊಡೆಯುತ್ತಾನೆ ಹೀಗೆಲ್ಲ ನಾವು ನೋಡಿರುತ್ತೇವೆ. ಕೊನೆಗೆ ಆ ಸಿನಿಮಾದ ನಾಯಕ ಗೆಲ್ಲುತ್ತಾನೆ. ಇಂತಹ ಸನ್ನಿವೇಶಗಳನ್ನು ನೋಡಿ ರೋಸಿ ಹೋಗಿರುವ ಜನರಿಗೆ ಹೊಸತನವನ್ನು ನೀಡುವ ಸಿನಿಮಾವಿದು. ಆರಂಭದಿಂದ ಕೊನೆಯ ತನಕ ಹಾಸ್ಯಭರಿತ ಸನ್ನಿವೇಶ, ನಮ್ಮ ಊರಿನ ಕನ್ನಡ ಆಥವ ಮಂಗಳೂರು ಕನ್ನಡದಲ್ಲಿ ಸಂಭಾಷಣೆ,ಹಳ್ಳಿಯ ಸೊಗಡು,ನೈಜ ಅಭಿನಯ ಇಂತಹ ಗುಣಗಳು ಈ ಸಿನಿಮಾವನ್ನು ಗೆಲ್ಲಿಸಿದೆ.
ಇನ್ನು ಕಥೆಯ ವಿಷಯಕ್ಕೆ ಬರುವಾದದರೆ ನಮ್ಮ ಹಳ್ಳಿಗಳಲ್ಲಿ ಇರುವ ಕೆಲವು ಮೂಢನಂಬಿಕೆಗಳಿಂದ ಏನೇನು ಅನಾಹುತಗಳು ಆಗುತ್ತದೆ,ಮೂಢನಂಬಿಕೆಗಳು ಹೇಗೆ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಈ ಸಿನಿಮಾ ತೋರಿಸುತ್ತದೆ ಜೊತೆಗೆ ಮೋಸ ಮಾಡುವವರಿಂದ ಜನರು ಹೇಗೆ ಮೋಸ ಹೋಗುವರು,ತಮ್ಮ ತಪ್ಪಿನಿಂದ ಆಗುವ ಪರಿಣಾಮಕ್ಕೆ ಹೆದರಿ ಅದನ್ನು ತಪ್ಪಿಸಿಕೊಳ್ಳಲು ಜನರು ಏನೆಲ್ಲ ಮಾಡಬಹುದು,ಅದರಿಂದ ಆಗುವ ಪರಿಣಾಮವನ್ನೆಲ್ಲ ಈ ಸಿನಿಮಾದಲ್ಲಿ ಚೆನ್ನಾಗಿ ತೋರಿಸಿದ್ದಾರೆ ಜೊತೆಗೆ ಹಳ್ಳಿಗಳಲ್ಲಿ ಆ ಊರಿನ ನಾಯಕ ಅಥವ ಮುಖ್ಯಸ್ಥನಿಗೆ ಅಲ್ಲಿಯ ಜನರು ಎಷ್ಟು ಗೌರವ ನೀಡುತ್ತಾರೆ,ಎಷ್ಪು ಬೆಲೆ ಕೊಡುತ್ತಾರೆ, ಮುಖ್ಯಸ್ಥ ಹಳ್ಳಿಯ ಪ್ರತಿಯೊಂದು ಕಾರ್ಯದ ಜವಾಬ್ದಾರಿ ಹೊತ್ತು ಹೇಗೆ ಕೆಲಸ ಮಾಡುವನು ಎಂದು ಹಾಗು ಒಂದು ಅನಾಥ ಹೆಣ್ಣಿನ ವ್ಯಥೆ,ಸಂಕಟವನ್ನು ಈ ಸಿನಿಮಾದಲ್ಲಿ ನೋಡಬಹುದಾಗಿದೆ. ಸಿನಿಮಾದ ಪ್ರಥಮಾರ್ಧದಲ್ಲಿ ನಕ್ಕು ಸುಸ್ತಾಗುವ ಪ್ರೇಕ್ಷಕನಿಗೆ ದ್ವಿತೀಯಾರ್ಧದಲ್ಲಿ ಸ್ವಲ್ಪ ಟ್ವಿಸ್ಟ್ ಸಿಗುತ್ತದೆ ಹಾಗು ಒಂದು ಸಂದೇಶವನ್ನು ನೀಡಿ ಚಿತ್ರ ಕೊನೆಗೊಳ್ಳುತ್ತದೆ. ಟ್ರೈಲರ್ ಅಲ್ಲಿ ತೋರಿಸಿದ ಹೆಚ್ಟಿನ ಸನ್ನಿವೇಶಗಳು ಮೊದಲ ಭಾಗದಲ್ಲಿ ಮುಗಿದು ಇನ್ನೇನು ಇದೆ ಎಂದು ಕುತೂಹಲದಿಂದ ಕಾಯುವ ಪ್ರೇಕ್ಷಕನಿಗೆ ಎರಡನೆಯ ಭಾಗವೂ ಇಷ್ಟ ಆಗುವುದರಲ್ಲಿ ಸಂಶಯವಿಲ್ಲ!
ಇನ್ನು ನನಗೆ ಈ ಸಿನಿಮಾದಲ್ಲಿ ವಿಭಿನ್ನವಾಗಿ ಕಂಡದ್ದು ಸಿನಿಮಾದಲ್ಲಿ ನಾಯಕ ಯಾರು,ನಾಯಕಿ ಯಾರು ಎಂದು ಸರಿಯಾಗಿ ಗೊತ್ತಾಗುವುದಿಲ್ಲ. ರವಿಯಣ್ಣನ ಪಾತ್ರವನ್ನು ಮಾಡುವ ಶಾನೀಲ್ ಗೌತಮ್ ಅವರು ಪ್ರಧಾನ ಪಾತ್ರವನ್ನು ಮಾಡಿದರೂ, ನಿರ್ದೇಶನ ಮಾಡಿ ಅಶೋಕನ ಪಾತ್ರವನ್ನು ಮಾಡುವ ಜೆ.ಪಿ ತುಮಿನಾಡು ಅವರು ಕೂಡ ನಾಯಕ ಅಂತ ಅನಿಸಬಹುದು. ಸಿನಿಮಾದ ತಂಡದವರೇ ಶಾನೀಲ್ ಗೌತಮ್ ಅವರದ್ದು ಪ್ರಧಾನ ಪಾತ್ರ ಎಂದು ಹೇಳಿರುವ ಕಾರಣ ಆ ಗೊಂದಲ ಇರುವುದಿಲ್ಲ. ಆದರೆ ನಾಯಕಿ ಯಾರು ಅಂತ ಯಾರಿಗೂ ಗೊತ್ತಾಗುವುದಿಲ್ಲ. ಇನ್ನು ನಟನೆಯ ವಿಚಾರಕ್ಕೆ ಬರುವುದಾದರೆ ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬ ನಟನೂ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ ಹಾಗು ನೈಜತೆಯನ್ನು ತೋರಿಸಿದ್ದಾರೆ. ಎಲ್ಲಿಯೂ ಇದು ಹೆಚ್ಚು ನಟನೆ ಮಾಡಿದ್ದು ಅಂತ ಅನಿಸುವುದೇ ಇಲ್ಲ. ಇದಕ್ಕೆ ಕಾರಣ ಅವರ ವೇಷಭೂಷಣ,ಮಂಗಳೂರು ಕನ್ನಡದಲ್ಲಿ ಸಂಭಾಷಣೆ,ರಂಗಭೂಮಿಯ ಅನುಭವವೂ ಕಾರಣ ಇರಬಹುದು. ಆದರೆ ನೋಡುವವನಿಗೆ ಇದು ಮೂಮೂಲಾಗಿ ನಡೆಯುವ ಸಂಭಾಷಣೆ ಎಂದೇ ಅನಿಸಬಹುದು. ಅಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ. ಶಾನೀಲ್ ಗೌತಮ್,ಪ್ರಕಾಶ್ ತುಮಿನಾಡು,ಜೆ.ಪಿ ತುಮಿನಾಡು,ಮೈಮ್ ರಾಮ್ ದಾಸ್, ನಮ್ಮ ಭಾವ ಪುಷ್ಪರಾಜ್ ಬೋಳಾರ್,ಅರ್ಜುನ್ ಕಜೆ, ಭಾನು ಆಗಿ ಸಂಧ್ಯಾ ಅರಕೆರೆ ಸೇರಿ ಹೀಗೆ ಕೆಲವು ಸಿನಿಮಾ,ನಾಟಕಗಳಲ್ಲಿ ನೋಡಿರುವ ಪರಿಚಿತ ಮುಖಗಳು ಇಲ್ಲಿ ನೋಡಬಹುದು. ಸ್ಟಾರ್ ನಟ ಯಾರು ಅಂತ ಬಂದರೆ ಅದು ರಾಜ್ ಶೆಟ್ರು ಅಂತ ಹೇಳಬೇಕಷ್ಟೆ. ಮತ್ತೆ ಉಳಿದ ಎಲ್ಲರೂ ಸಿನಿಪ್ರಿಯರಿಗೆ,ಪ್ರೇಕ್ಷಕರಿಗೆ ಹೊಸಬರು ಅಂತ ಹೇಳಬಹುದು. ಆದರೆ ಇವರೆಲ್ಲ ರಂಗಭೂಮಿಯಲ್ಲಿ ನಟಿಸಿದ ಅನುಭವಸ್ಥ ಕಲಾವಿದರು. ಶಾನೀಲ್ ಗೌತಮ್ ಅವರನ್ನು ಈ ಹಿಂದೆ ಕಾಂತಾರ ಸಿನಿಮಾದಲ್ಲಿ ಬುಳ್ಳ,ಸ.ಹಿ.ಪ್ರಾ.ಶಾಲೆ ಕಾಸರಗೋಡು ಸಿನಿಮಾದಲ್ಲಿ ಅಡುಗೆ ಭಟ್ರು ಪಾತ್ರದಲ್ಲಿ ನಾವು ಈಗಾಗಲೇ ನೋಡಿದ್ದೇವೆ. ಜೊತೆಗೆ ಹಾಸ್ಯ ಪಾತ್ರಗಳನ್ನೇ ಹೆಚ್ಚು ಮಾಡುವ ಪ್ರಕಾಶ್ ತುಮಿನಾಡು ಅವರನ್ನು ಕೂಡ ಈ ಎರಡು ಸಿನಿಮಾಗಳಲ್ಲಿ ನಾವು ನೋಡಿದ್ದೆವು. ಇನ್ನು ಜೆ.ಪಿ ತುಮಿನಾಡು ಅವರ ವಿಷಯಕ್ಕೆ ಬರುವುದಾದರೆ "ಸಪ್ತಸಾಗರದಾಚೆ ಎಲ್ಲೋ ಸೈಡ್-ಬಿ" ಸಿನಿಮಾದಲ್ಲಿ ಪ್ರಿಯಳ ಗಂಡನ ಪಾತ್ರದಲ್ಲಿ ಇವರನ್ನು ನೋಡಿದವರಿಗೆ ಅದು ಅವರೇಯಾ ಅಂತ ಅನಿಸಬಹುದು! ನಿರ್ದೇಶನದ ಜೊತೆಗೆ ನಟನೆಯೂ ಅದ್ಭುತವಾಗಿದೆ. ರಾಜ್ ಬಿ ಶೆಟ್ಟಿಯವರ ನಟನೆ ಕೆಲವರಿಗೆ ಅತಿರೇಕದಂತೆ ಕಂಡರೂ ಅದು ಆ ಪಾತ್ರಕ್ಕೆ,ಕಪಟವನ್ನು ತೋರಿಸಲು ಸರಿಯಾಗಿದೆ ಅಂತ ನನಗೆ ಅನಿಸಿತು. ಕೊನೆಗೆ ಅವರು ಓಡುವ ಸನ್ನಿವೇಶವನ್ನು ಚೆನ್ನಾಗಿತ್ತು. ನಿರ್ದೇಶನದ ಬಗ್ಗೆ ಈಗಾಗಲೇ ಹೇಳಿದ ಹಾಗೆ ನಿರ್ದೇಶನ ಮತ್ತು ಕಥೆಯನ್ನು ಪ್ರಸ್ತುತಪಡಿಸುವ ರೀತಿಯನ್ನು ಜೆ.ಪಿ ತುಮಿನಾಡು ಅವರು ಚೆನ್ನಾಗಿ ಮಾಡಿದ್ದಾರೆ. ಸಂಗೀತದ ಬಗ್ಗೆ ಹೇಳುವುದಾದರೆ ಸಿನಿಮಾ ಕ್ಷೇತ್ರಕ್ಕೆ ಹೊಸ ಮುಖ ಆದರೂ ಈ ಮೊದಲು ತಮ್ಮ ಯೂಟ್ಯೂಬ್ ಚ್ಯಾನಲ್ ಮೂಲಕ "ಕರ್ಮ","ತಾವರೆ" ಸೇರಿ ಕೆಲವು ಹಾಡುಗಳ ಮೂಲಕ ಪ್ರಸಿದ್ಧಿಯನ್ನು ಪಡೆದ ಸುಮೇಧ್ ಕೆ ಅವರು ಚಿತ್ರದ ಸಂಗೀತ ನಿರ್ದೇಶನವನ್ನು ಚೆನ್ನಾಗಿ ಮಾಡಿದ್ದಾರೆ. ಕೆಲವು ಹಾಡುಗಳು,ಹಿನ್ನೆಲೆ ಸಂಗೀತ ಚೆನ್ನಾಗಿ ಪ್ರೇಕ್ಷಕರ ಮನಮುಟ್ಟುತ್ತದೆ. ಹಾರರ್ ಸನ್ನಿವೇಶಗಳು,ಕುತೂಹಲಕಾರಿ ಸನ್ನಿವೇಶಗಳು ಬರುವಾಗ ಅದಕ್ಕೆ ತಕ್ಕ ಹಾಗಿ ಸಂಗೀತವನ್ನು ರೂಪಿಸಿದ್ದಾರೆ. ಇನ್ನು ಸಿನಿಮಾಟೋಗ್ರಫಿಯ ಬಗ್ಗೆ ಹೇಳುವುದಾದರೆ ಸಿನಿಮಾಟೋಗ್ರಫಿಯನ್ನು ಎಸ್. ಚಂದ್ರಶೇಖರನ್ ಅವರು ಚೆನ್ನಾಗಿ ಮಾಡಿದ್ದಾರೆ. ಹಳ್ಳಿಯ ಸೊಗಡನ್ನು ಚೆನ್ನಾಗಿ ತೋರಿಸಿದ್ದಾರೆ ಅಂತ ಹೇಳಬಹುದು. ಸಿನಿಮಾದ ಯಶಸ್ಸಿಗೆ ಇದು ಕೂಡ ಒಂದು ಹೇಳಬಹುದು. ಒಟ್ಟಿನಲ್ಲಿ ಹೇಳುವುದಾದರೆ ರಾಜ್ ಶೆಟ್ರ ಗರಡಿಯಲ್ಲಿ ಹೊಸಬರ ಸಿನಿಮಾ ಬಹಳ ಚೆನ್ನಾಗಿ ನಿರ್ಮಾಣಗೊಂಡಿದೆ ಹಾಗು ಯಶಸ್ಸನ್ನು ಕಂಡಿದೆ ಹಾಗು ಮುಂದೆ ಹೆಚ್ಚು ಯಶಸ್ಸನ್ನು ಕಾಣುತ್ತದೆ ಅಂತ ಹೇಳಬಹುದು. ಆರಂಭದಿಂದ ಅಂತ್ಯದ ತನಕ ಹೇಗೆ ಸಮಯ ಹೋಗುತ್ತದೆ ಅಂತ ಗೊತ್ತೇ ಆಗುವುದಿಲ್ಲ.ಖಂಡಿತವಾಗಿಯೂ ಸ್ವಲ್ಪ ವಿಚಲಿತರಾಗದೆ ಸಿನಿಮಾವನ್ನು ನೋಡುತ್ತೀರಿ ಹಾಗು ಆನಂದಿಸುತ್ತೀರಿ. ಬಹಳ ಸಮಯದ ನಂತರ ಇಂತಹ ಒಂದು ವಿಭಿನ್ನ ರೀತಿಯ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದೆ ಅಂತ ಹೇಳಬಹುದು. ನೀವು ಕೂಡ ಖಂಡಿತವಾಗಿಯೂ ಈ ಸಿನಿಮಾವನ್ನು ನೋಡಿ! ನೋಡದಿದ್ದರೆ ಚಿತ್ರಮಂದಿರಕ್ಕೆ ಹೋಗಿ ನೋಡಿ ಬನ್ನಿ! ಒಟಿಟಿಗೆ ಕಾಯಬೇಡಿ! ಇದನ್ನು ಚಿತ್ರಮಂದಿರಲ್ಲಿ ನೋಡಿಯೇ ಅನುಭವಿಸಬೇಕು!
ನನ್ನ ರೇಟಿಂಗ್: 10/10

ಬರಹ: ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!