ಅಜ್ಜಿ ಎಂಬ ಯುಗದ ಅಂತ್ಯ!

 ಅಜ್ಜಿ ಎಂಬ ಯುಗದ ಅಂತ್ಯ!



ಅದೊಂದು ಕಾಲವಿತ್ತು. ದೇಶದಲ್ಲಿ ಕಿತ್ತು ತಿನ್ನುವ ಬಡತನದ ಕಾಲ! ಒಂದು ಸಾಮಾನ್ಯ ಕುಟುಂಬ ಹಳ್ಳಿಗಳಲ್ಲಿ ಸೋಗೆ ಮನೆಯಲ್ಲಿ ಜೀವಿಸುವ ಕಾಲ! ಹೆಚ್ಚಾಗಿ ಕೃಷಿ ಅಥವ ಸ್ವಂತ ವ್ಯಾಪಾರವನ್ನು ಅವಲಂಬಿಸಿ ಬದುಕನ್ನು ಸಾಗಿಸುತ್ತಿದ್ದ ಕಾಲವದು! ಆ ಕಾಲದಲ್ಲಿ ಸರ್ಕಾರಿ ಕೆಲಸ,ಜೀಪು,ಅಂಬಾಸಿಡರ್ ಕಾರು ಇರುವ ವ್ಯಕ್ತಿ ಬಹಳ ದೊಡ್ಡ ವ್ಯಕ್ತಿ! ಆ ವ್ಯಕ್ತಿಗೆ ಊರಿನಲ್ಲಿ ಸಿಗುತ್ತಿದ್ದ ಗೌರವ,ಸ್ಥಾನವೇ ಬೇರೆ! ಇಂತಹ ಕಾಲದಲ್ಲಿ ತನ್ನ ಗಂಡನ ನಿಧನದ ನಂತರ ಕುಟುಂಬದ ಹೊಣೆಹೊತ್ತು,ಒಂಬತ್ತು ಮಕ್ಕಳನ್ನು ಕಷ್ಟಪಟ್ಟು ಸಾಕಿ ಸಲುಹಿ,ವಿದ್ಯಾಭ್ಯಾಸ ಕೊಡಿಸಿ ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿದ ಧೀಮಂತ ಮಹಿಳೆ ಇವರು. ನಾನು ಹೋಗಿ ಬರುತ್ತೇನೆ ಎಂದು ಹೇಳಿದರೆ ಹುಷಾರು ಆಗಿ ಬಾ! ಎಂದು ಪ್ರೀತಿಯಿಂದ ಆಶೀರ್ವಾದ ನೀಡುತ್ತಿದ್ದ ದೇವರು ಇವರು! ಇವರೇ ನನ್ನ ಪ್ರೀತಿಯ ಅಜ್ಜಿ!

ಅದು ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಭಾರತ ದೇಶದಾದ್ಯಂತ ಆವರಿಸಿದ ಕಾಲ! ಇಂತಹ ಸಮಯದಲ್ಲಿ ಜೂನ್ 17,1941ರಂದು ಸುಳ್ಯ ತಾಲೂಕಿನ ಬೆಳ್ಳಾರೆಯ ಕೊಳಂಬಳ ಮನೆಯಲ್ಲಿ ಅರ್ನಾಡಿ ಕುಟುಂಬದ ಗಣಪತಿ ಭಟ್ ಅರ್ನಾಡಿ ಹಾಗು ಲಕ್ಷ್ಮಿ ಅವರ 11 ಜನ ಮಕ್ಕಳಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಪರಮೇಶ್ವರಿ ಅವರು ಬೆಳ್ಳಾರೆಯಲ್ಲಿ ಏಳನೆಯ ತರಗತಿ ತನಕ ಶಿಕ್ಷಣ ಮುಗಿಸಿ ನಂತರ ಮನೆಯಲ್ಲಿ ಮನೆ ಕೆಲಸಕ್ಕೆ ಸಹಾಯ ಮಾಡುತ್ತಾ ಇದ್ದರು. ತದನಂತರ 18ನೇ ವಯಸ್ಸಿನಲ್ಲಿ ಮಂಜನಕಾನ ಶಂಕರನಾರಾಯಣಯ್ಯ ಅವರ ಜೊತೆಗೆ ವಿವಾಹ ಆಗಿ 10 ಜನ ಮಕ್ಕಳೊಂದಿಗೆ(ಇವರಲ್ಲಿ ನನ್ನ ಅಮ್ಮ ಒಬ್ಬರು. 11 ಜನರಲ್ಲಿ ಇಬ್ಬರು ನಿಧನ ಹೊಂದಿದ್ದಾರೆ.) ಸಂಸಾರ ಸಾಗಿಸುತ್ತಾ ನನ್ನ ಅಜ್ಜ ಬಾಳಿಲ ಸೊಸೈಟಿ ಕಟ್ಟಡದಲ್ಲಿ ನಡೆಸುತ್ತಿದ್ದ ಹೊಟೇಲಿನಲ್ಲಿ ದಿನಕ್ಕೆ 40-50 ಜನರಿಗೆ ಅಡುಗೆ ಮಾಡುತ್ತಾ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ,ಸಾಕಿ ಸಲಹುತ್ತಿದ್ದರು.

ದಿನಾಂಕ 27,ಅಕ್ಟೋಬರ್ 1984 ಹನ್ನೊಂದನೆ ಮಗುವಿನ ನಿರೀಕ್ಷೆಯಲ್ಲಿದ್ದ ಅಜ್ಜ-ಅಜ್ಜಿ, ಅಜ್ಜಿ ತುಂಬು ಗರ್ಭಿಣಿ ಆಗಿದ್ದ ಸಮಯವದು. ಅಂದು ನನ್ನ ಅಜ್ಜ ಹೊಟೇಲಿನಲ್ಲಿ ಹೃದಯಾಘಾತದಿಂದ ನಿಧನರಾದರು. ತನ್ನ ಗಂಡನ ನಿಧನ ವಾರ್ತೆ ಬರಸಿಡಿಲಿನಂತೆ ಅಪ್ಪಳಿಸಿದರೂ ಎದೆಗುಂದದೆ 8 ಜನ ಮಕ್ಕಳು ಹಾಗು ತನ್ನ ಗರ್ಭದಲ್ಲಿದ್ದ ಶಿಶುವನ್ನು ಸಂಭಾಳಿಸಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಲ್ಪವೂ ತೊಡಕಾಗಬಾರದು ಎಂದು ಸಾಕಷ್ಟು ಕಷ್ಟ ಬಂದರು ನನ್ನ ಅಜ್ಜಿ. ಫೆಬ್ರವರಿ 27,1985ರಂದು ನನ್ನ ಕೊನೆಯ ಮಾವ ಜನಿಸಿದ ಬಳಿಕ ಮಾವನ ಆರೈಕೆಯ ಜೊತೆಗೆ ಉಳಿದ ಮಕ್ಕಳನ್ನು ಕಷ್ಟ ಬಂದು,ಪ್ರೀತಿಯಿಂದ ಸಾಕಿದರು ಅಜ್ಜಿ. ಇದೇ ಸಮಯ ಹೊರಗಿನಿಂದ ಎಷ್ಟೋ ಟೀಕೆಗಳನ್ನು ಅಜ್ಜಿ ಕೇಳಿದರು, ನನ್ನ ಮಕ್ಕಳು,ಕುಟುಂಬದ ಭವಿಷ್ಯ ಉಜ್ವಲವಾಗಬೇಕು ಎಂಬ ಹಠ ಅಜ್ಜಿಯಲ್ಲಿದ್ದ ಕಾರಣ ಸ್ವಲ್ಪವೂ ಎದೆಗುಂದಲಿಲ್ಲ! ಜೊತೆಗೆ ತನ್ನ ತವರು ಮನೆಯಿಂದ(ಮುಖ್ಯವಾಗಿ ತಮ್ಮಂದಿರ ಸಹಾಯ) ಸಹಾಯ,ಬೆಂಬಲ ದೊರಕಿದ ಕಾರಣ ಹಾಗು ತನ್ನ ಮಕ್ಕಳು ಸ್ವಂತವಾಗಿ ಅವರ ಜೀವನ ನಡೆಸಲು ಸಮರ್ಥರಾದಂತೆ,ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುವವರೆಗೆ ಎಷ್ಟೋ ಕಷ್ಟಗಳನ್ನು ಎದುರಿಸಿದರೂ ನಾನು ಬದುಕಬೇಕು,ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂಬ ಹಠದಿಂದ ತೋಟ,ದನಗಳ ಆರೈಕೆ ಮಾಡುತ್ತಾ ಜೀವನ ನಡೆಸಿದರು. ತನ್ನ ದೊಡ್ಡ ಮಗಳಂದಿರ ಮದುವೆಯು ಆಯಿತು. ಜೊತೆಗೆ ಸೋಗೆ ಮನೆಯಿದ್ದ ಸ್ಥಳದ ಸಮೀಪವೇ ಸುಸಜ್ಜಿತ ಮಾಳಿಗೆ ಮನೆಯ ನಿರ್ಮಾಣ ಕಾರ್ಯ ನಡೆಯಿತು. ನಂತರ ನನ್ನ ಅಮ್ಮನ ಅಕ್ಕ,ನನ್ನ ಅಮ್ಮ,ಅಮ್ಮನ ಇಬ್ಬರು ಅಣ್ಣಂದಿರು,ತಮ್ಮನ ಮದುವೆ ನಡೆಯಿತು. ನಂತರ ಮಕ್ಕಳು,ಮೊಮ್ಮಕ್ಕಳ ಜೊತೆಗೆ ನೆಮ್ಮದಿಯ ಜೀವನ ನಡೆಸಿದ ಅಜ್ಜಿ,ಮೊಮ್ಮಕ್ಕಳ ಉಪನಯನ,ಕೊನೆಯ ಇಬ್ಬರು ಮಗಂದಿರ ಮದುವೆ ನಡೆದು 9 ಜನ ಮಕ್ಕಳು,14 ಜನ ಮೊಮ್ಮಕ್ಕಳ ಜೊತೆಗೆ ಸಾರ್ಥಕ ಜೀವನವನ್ನು ನಡೆಸಿದರು. ನನ್ನ ದೊಡ್ಡ ಮಾವ ಭಾರತದ ಕೆಲವು ನಗರಗಳಲ್ಲಿ,ವಿದೇಶದಲ್ಲಿ,ಉಳಿದ ಮಾವಂದಿರು ಬೆಂಗಳೂರು,ಕಾರವಾರದಲ್ಲಿ ಉದ್ಯೋಗ ಮಾಡುತ್ತಿರುವಾಗ ವಿದೇಶ,ಬೆಂಗಳೂರು,ಕಾರವಾರ ಹಾಗು ದೇಶದ ಹಲವಾರು ನಗರಗಳಿಗೆ ಪ್ರಯಾಣಿಸಿದರು. ಸ್ವಲ್ಪ ಸಮಯ ಕಲ್ಮಡ್ಕ ಹಾಲು ಉತ್ಪಾದಕರ ಸಂಘದ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದರು.

ನಾನು ಹಾಗು ನನ್ನ ಅಜ್ಜಿ(ಹಳೆ ಫೋಟೋ)


ಇನ್ನು ನನ್ನ ಹಾಗು ಅಜ್ಜಿಯ ಒಡನಾಟಕ್ಕೆ ಸಂಭಂದಿಸಿದ ಹಾಗೆ ದಿನಾಂಕ 10,ಸೆಪ್ಟೆಂಬರ್,2003ರಂದು ಅವಧಿ ಪೂರ್ವದಲ್ಲಿ ನನ್ನ ಜನನವಾದ ಕಾರಣದಿಂದ ಆರೋಗ್ಯ ಸಮಸ್ಯೆಯಿಂದಾಗಿ ಕೆಲವು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಬೇಕಾದ ಪರಿಸ್ಥಿತಿ ನನಗೆ ಬಂದಿತ್ತು. ಎಳೆಯ ಶಿಶುವನ್ನು ಪ್ರೀತಿಯಿಂದ,ಸಾಕಿ ಸಲಹಿದ ಅಜ್ಜಿ ನನ್ನ ಆರೋಗ್ಯ ಸುಧಾರಿಸುವವರೆಗೆ ನನ್ನ ಆರೈಕೆ ನಡೆಸಿದರು. ಮನೆ ಅಜ್ಜಿಯ(ಅಪ್ಪನ ಅಮ್ಮ) ಪ್ರೀತಿಯಿಂದ ವಂಚಿತನಾದ ನನಗೆ ಆ ಸ್ಥಾನವನ್ನು ತುಂಬಿ ನೋಡಿಕೊಳ್ಳುತ್ತಿದ್ದ ಅಜ್ಜಿ ಅಮ್ಮ ಯಾವಾಗಲು ಅಜ್ಜಿಗೆ ಕರೆ ಮಾಡಿದಾಗ "ಪುಳ್ಳಿಯಕ್ಕ ಎಂತ ಮಾಡ್ತವೇ!?" ಅಂತ ಹವಿಗನ್ನಡದಲ್ಲಿ ಕೇಳಲು ಮರೆಯುತ್ತಿರಲಿಲ್ಲ! ನನ್ನ ಅಪ್ಪ-ಅಮ್ಮನ ಮದುವೆಯಾದ ಬಳಿಕ ಇತ್ತೀಚಿನ ವರ್ಷದವರೆಗೆ ನನ್ನ ಅಪ್ಪನಿಗೆ ಆರೋಗ್ಯ ಸಮಸ್ಯೆ ಉಂಟಾದಾಗ ತನ್ನ ಕೈಯಿಂದ ಎಷ್ಟು ಆಗುತ್ತದೋ ಅಷ್ಟು ಸಹಾಯ ಮಾಡುತ್ತಿದ್ದರಲ್ಲದೆ ಮನೆಯಲ್ಲಿದ್ದುಕೊಂಡು,ಮನೆಯ ಜವಾಬ್ದಾರಿಯ ಜೊತೆಗೆ ಪೌರಹಿತ್ಯಕ್ಕೆ ಹೋಗುತ್ತಿರುವ ನನ್ನ ನಾಲ್ಕನೆ ಮಾವನನ್ನು ಸಹಾಯಕ್ಕೆ ರಾತ್ರೋರಾತ್ರಿ ತಕ್ಷಣ ಕಳುಹಿಸಿಕೊಡುತ್ತಿದ್ದರು ಅಜ್ಜಿ. ಅಜ್ಜಿ ಮನೆಗೆ ನಾವೆಲ್ಲ ಬರುತ್ತೇವೆ ಎಂದು ಗೊತ್ತಾದರೆ ಮನೆಯಲ್ಲಿ ತಾನು ಮೊದಲೇ ಮಾಡಿ ಇಡುತ್ತಿದ್ದ ಹಲಸಿನ ಹಣ್ಣಿನ ಬೆರಟಿಯ ಪಾಯಸವನ್ನು ಪ್ರೀತಿಯಿಂದ ನಮಗೆಲ್ಲ ಮಾಡಿ ಊಟಕ್ಕೆ ಬಡಿಸುತ್ತಿದ್ದರು. ರುಚಿರುಚಿಯಾದ ಪಾಯಸದಲ್ಲಿ ಅವರ ಕೈಗುಣದ ಜೊತೆಗೆ ಅವರ ಪ್ರೀತಿ,ಮಮತೆಯೂ ಜೊತೆಗೆ ಸೇರಿತ್ತು. ನನ್ನ ದೊಡ್ಡ ಮಾವ ಅಜ್ಜಿ ಮಕ್ಕಳು ಕೆಲಸದ ಸ್ಥಳದಿಂದ ಮನೆಗೆ ಬರ್ತಾ ಇದ್ದಾರೆ ಎಂದು ಗೊತ್ತಾದ ತಕ್ಷಣ ಕೇಸರಿ ಬಾತ್ ಮಾಡುತ್ತಿದ್ದರು ಎಂದು ಇಂದು ನೆನಪಿಸಿಕೊಳ್ಳುತ್ತಿದ್ದರು. ಅಜ್ಜಿ ಪುತ್ತೂರಿನ ನಮ್ಮ ಮನೆಗೆ ಪ್ರತಿ ಬಾರಿಯೂ ಬಂದಾಗ ನನ್ನ ಬಳಿ ಹಣಕೊಟ್ಟು ಬೇಕರಿಯಿಂದ ಮೈಸೂರು ಪಾಕ್ ತರಿಸಿ ತಾನು ತಿನ್ನುವುದು ಮಾತ್ರವಲ್ಲದೆ ಅದರ ಒಂದು ಪಟ್ಟು ಜಾಸ್ತಿ ನಮಗೂ ತಿನ್ನಲು ಕೊಡುತ್ತಿದ್ದರು. ಮನೆಯಲ್ಲಿ ಹಲಸಿಸ ಹಣ್ಣು,ಮಾವಿನ ಹಣ್ಣಿನ ಮಾಂಬಳ ಮಾಡಿದಾಗ ತನ್ನ ಮೊಮ್ಮಕ್ಕಳು ಮನೆಗೆ ಬಂದಾಗ ನೆನಪು ಮಾಡಿ ಹಂಚುತ್ತಿದ್ದರು. ಮನೆಯಲ್ಲಿ ಮಾವಿನ ಹಣ್ಣು ಇರುವ ಸಮಯದಲ್ಲಿ ಮಾವಿನ ಹಣ್ಣನ್ನು ಪ್ರೀತಿಯಿಂದ ಕೆತ್ತಿ,ಭಾಗ ಮಾಡಿ ತಿನ್ನಲು ಕೊಡುತ್ತಿದ್ದರು. ಮಾವ ಪೌರಹಿತ್ಯ ಮುಗಿಸಿ ಮನೆಗೆ ಬರುವಾಗ ಆ ದಿನ ಸತ್ಯನಾರಾಯಣ ಪೂಜೆ ಇದ್ದು,ಸಪಾದ ಬಕ್ಷ ಪ್ರಸಾದ ತಂದರೆ ನೆನಪಿನಲ್ಲಿ ತಪ್ಪದೆ ನನಗೆ ಹಾಗು ಉಳಿದ ಮೊಮ್ಮಕ್ಕಳಿಗೆ ಪ್ರೀತಿಯಿಂದ ಹಂಚುತ್ತಿದ್ದರು.

ಚಳಿಗಾಲದಲ್ಲಿ ಸುಬ್ರಹ್ಮಣ್ಯ ಷಷ್ಠಿ ಜಾತ್ರೆ,ಜಾನುವಾರು ಜಾತ್ರೆ(ಈಗ ಇಲ್ಲ) ಎಂದರೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಆದೊಂದು ಹಬ್ಬ! ಸುಬ್ರಹ್ಮಣ್ಯ ಷಷ್ಠಿ ಹತ್ತಿರ ಬಂತೆಂದರೆ ಇಲ್ಲದಿದ್ದರೆ ಜಾತ್ರೆಗೆ ಹೋದ ಬಳಿಕ ಅಲ್ಲಿನ ಕಥೆಗಳನ್ನು ಅಜ್ಜಿಯ ಬಳಿ ಹೇಳಿದಾಗ ಅಜ್ಜಿ ತನ್ನ ಹಳೆಯ ನೆನಪುಗಳನ್ನು ಹೇಳುವಾಗ ಅದನ್ನು ನಾನು ಕೇಳಿ ಸಂಭ್ರಮಿಸುತ್ತಿದ್ದೆ. ಕಳೆದ ವರ್ಷ ನಾನು ಕುಮಾರ ಪರ್ವತ ಚಾರಣಕ್ಕೆ ಹೋದ ಬಗ್ಗೆ ಅಜ್ಜಿಯ ಬಳಿ ಹೇಳಿದಾಗ ಸಂಭ್ರಮಪಟ್ಟಿದ್ದರು. ಹೀಗೆ ಹೇಳುತ್ತಾ ಹೋದರೆ ವಿಚಾರಗಳು ಸಾಕಷ್ಟು ಇದೆ. ಆದರೆ ಹೇಳಲು ಪದಗಳೇ ಸಾಕಾಗುವುದಿಲ್ಲ!

ಇತ್ತೀಚಿನ ವರ್ಷಗಳಲ್ಲಿ ಅಜ್ಜಿಯ ಆರೋಗ್ಯ ಹದಗೆಟ್ಟಿತ್ತು. ವಯಸ್ಸಾದಂತೆ ಉಸಿರಾಟದ ಸಮಸ್ಯೆ ಅಜ್ಜಿಗೆ ಕಾಡುತ್ತಿತ್ತು. ಕೆಲವು ವರ್ಷಗಳ ಮೊದಲು ಲಘು ಹೃದಯಾಘಾತ ಅಜ್ಜಿಗೆ ಆದ ಬಳಿಕ ಅಜ್ಜಿಯ ಹೃದಯದ ಬಡಿತವು ನಿಧಾನವಾಗಿ ಕಡಿಮೆಯಾಗುತ್ತಾ ಬಂದಿತ್ತು. ಆದರೂ ಧೈರ್ಯದಿಂದ ನಾನು ಜೀವನ ನಡೆಸಬೇಕು ಎಂಬ ಹಠದಿಂದಲೇ ಬದುಕನ್ನು ನಡೆಸುತ್ತಿದ್ದ ಅಜ್ಜಿಯ ಆರೋಗ್ಯ ಕಳೆದ ಒಂದು ತಿಂಗಳಿನಿಂದ ಹದಗೆಡುತ್ತಾ ಬಂದಿತ್ತು. ಕಳೆದ ವಾರ ಅಮ್ಮ,ಅಮ್ಮನ ಗೆಳತಿಯ ಜೊತೆಗೆ ಅಜ್ಜಿ ಮನೆಗೆ ಬಂದಾಗಲೂ ಅಜ್ಜಿ ಇಬ್ಬರ ಜೊತೆಗೆ ಚೆನ್ನಾಗಿ ಮಾತನಾಡಿದ್ದರು. ಬಳಿಕ ಅಜ್ಜಿಯ ಆರೋಗ್ಯ ಸಂಪೂರ್ಣವಾಗಿ ಹದಗೆಡುತ್ತಾ ಬಂದು ಮೊನ್ನೆ ಅಂದರೆ 29,ಆಗಸ್ಟ್,2024ರಂದು ಕೃಷ್ಣ ಪಕ್ಷ ಏಕಾದಶಿಯಂದು ರಾತ್ರಿ ಭೂಮಿಯಲ್ಲಿ ತನ್ನ ಪಯಣವನ್ನು ಮುಗಿಸಿ ವೈಕುಂಠದ ಕಡೆಗೆ ಪ್ರಯಾಣ ಬೆಳೆಸಿದರು.

ಅಜ್ಜಿಯ ಬಗ್ಗೆ ಲೇಖನ ಬರೆಯಲು ಹೊರಟಂತೆ ನಾನು ಭಾವುಕನಾಗಿ ಬಿಟ್ಟೆ. ಭೂಮಿಯ ಮೇಲೆ ಇರುವ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇ ಬೇಕು. ಇದು ಪ್ರಕೃತಿಯ ನಿಯಮ. ಇದನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ! ಆದರೂ ಆಪ್ತರನ್ನು ಕಳೆದುಕೊಂಡಾಗ ಸಹಜವಾಗಿಯೂ ಕೂಗುತ್ತೇವೆ. ಅಜ್ಜಿ ಇಲ್ಲದ ಮನೆ ಈಗ ಬರಡಾಗಿದೆ. ಮಾಳಪ್ಪಮಕ್ಕಿ ಮನೆ ತನ್ನ ಒಡತಿಯನ್ನು ಕಳಕೊಂಡಿದೆ. ಇನ್ನೇನಿದ್ದರೂ ಅಜ್ಜಿಯ ನೆನಪುಗಳು ಮಾತ್ರ. ಅಜ್ಜಿ ಹಾಕಿ ಕೊಟ್ಟ ಪಥದಲ್ಲಿ ಮುನ್ನಡೆಸುತ್ತಾ ಅಜ್ಜಿಯ ಜೊತೆಗೆ ಕಳೆದ ಸುಂದರ ದಿನಗಳ ನೆನಪುಗಳನ್ನು ಸ್ಮರಿಸುತ್ತಾ ಜೀವನವನ್ನು ಸಾಗಿಸುವುದು ಇನ್ನು ನಮ್ಮ ಜವಾಬ್ದಾರಿ.
ಜೀವನದಲ್ಲಿ ಬೇಕಾದಷ್ಟು ಕಷ್ಟಗಳನ್ನು ಅನುಭವಿಸಿದ ನಿಮಗೆ ಇನ್ನು ವಿಶ್ರಾಂತಿ ತೆಗೆದುಕೊಳ್ಳುವ ಸಮಯವಿದು ಅಜ್ಜಿ! ಹೋಗಿ ಬನ್ನಿ ಅಜ್ಜಿ! ನನಗೆ ಹಾಗು ನಿಮಗೆ ಇನ್ನು ಮನುಷ್ಯನಾಗಿ ಹುಟ್ಟುವ ಅವಕಾಶ ಇದ್ದರೆ ಆ ಜನ್ಮದಲ್ಲೂ ನೀವು ನನಗೆ ಅಜ್ಜಿ,ನಾನು ನಿಮ್ಮ ಪುಳ್ಳಿಯಾಗಿ ಹುಟ್ಟುವ ಸೌಭಾಗ್ಯ ದೊರಕಿ ಬರಲಿ ಅಜ್ಜಿ! ಹೋಗಿ ಬನ್ನಿ ಅಜ್ಜಿ!
ನಿಮ್ಮ ಆತ್ಮಕ್ಕೆ ಭಗವಂತನ ಸಾನಿಧ್ಯ ದೊರಕಲಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಬರಹ:ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!