ಪುತ್ತೂರು ಜಾತ್ರೆ ಸಂಪನ್ನ!

 ಪುತ್ತೂರು ಜಾತ್ರೆ ಸಂಪನ್ನ!



ಮಹಾಲಿಂಗೇಶ್ವರ...!

ಈ ಹೆಸರು ಪುತ್ತೂರಿಗೆ ಕೇವಲ ದೇವರ ಹೆಸರು ಮಾತ್ರವಲ್ಲ,ಅದು ಒಂದು ಶಕ್ತಿ! 



ತಮ್ಮ ಕಷ್ಟ,ಸುಖಗಳನ್ನು ಪುತ್ತೂರಿನ ಜನರು ಪ್ರಥಮವಾಗಿ ಹಂಚುವುದು ತಮ್ಮ ಒಡೆಯನ ಬಳಿಯೇ! 

ಎಪ್ರಿಲ್ ಬಂತೆಂದರೆ ಅದು ಪುತ್ತೂರಿಗೆ ಹಬ್ಬದ ತಿಂಗಳು ಅಂತ ನಾನು ಈ ಮೊದಲು ಒಮ್ಮೆ ಹೇಳಿದ್ದೆ. ಕಾರಣ ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ವಾರ್ಷಿಕ ಜಾತ್ರೋತ್ಸವ!

ಎಪ್ರಿಲ್ 1ಕ್ಕೆ ಗೊನೆ ಮುಹೂರ್ತದೊಂದಿಗೆ ಜಾತ್ರೋತ್ಸವದ ಕ್ಷಣಗಣನೆ ಆರಂಭಗೊಂಡು ಎಪ್ರಿಲ್ 10ಕ್ಕೆ ಧ್ವಜಾರೋಹಣದೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ಸಿಗುತ್ತದೆ. ನಂತರ 6 ದಿನಗಳ ಕಾಲ ತನ್ನ ಭಕ್ತರನ್ನು ಕಾಣಲು ಪ್ರತಿದಿನ ಪುತ್ತೂರು ನಗರದ ವಿವಿಧ ದಿಕ್ಕಿನ ಕಡೆಗೆ ಹೋಗುವ ಮಹಾಲಿಂಗೇಶ್ವರ ದೇವರು ಜಾತ್ರೋತ್ಸವದ 7 ದಿನ ಅಂದರೆ ಎ.16ರಂದು ಬಲ್ನಾಡಿನಿಂದ ಬರುವ ಶ್ರೀ ದಂಡನಾಯಕ-ಉಳ್ಳಾಲ್ತಿ ಅಮ್ಮನವರನ್ನು ಭೇಟಿ ಮಾಡಿ,ಪಲ್ಲಕ್ಕಿಯಲ್ಲಿ ಸಂಗೀತವನ್ನು ಆಲಿಸುತ್ತಾ,ನಂತರ ವೇದಘೋಷ,ಭಜನೆಗಳಿಂದ ಪ್ರಸನ್ನಗೊಂಡು,ಶಂಖ,ಬ್ಯಾಂಡ್ ಸುತ್ತಿನಲ್ಲಿ ಉತ್ಸವವನ್ನು ಸ್ವೀಕರಿಸಿ,ಹೂತೇರಿನಲ್ಲಿ ಆರೂಢರಾಗಿ ರಥೋತ್ಸವವನ್ನು ಸ್ವೀಕರಿಸಿ,ತೆಪ್ಪದಲ್ಲಿ ಕೆರೆ ಆಯನ ನಡೆಸುವ ಮಹಾಲಿಂಗೇಶ್ವರ ದೇವರು,ಮರುದಿನ ಅಂದರೆ ಎ.17ಕ್ಕೆ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ ನಡೆದು ರಾತ್ರಿ ದೇವರು ಬ್ರಹರಥದಲ್ಲಿ ಆರೂಢರಾಗಿ, ಬೆಡಿ ಸೇವೆಯನ್ನು ಸ್ವೀಕರಿಸಿ ದೇವರ ವೈಭವದ ಬ್ರಹ್ಮರಥೋತ್ಸವದಿಂದ ಪ್ರಸನ್ನಗೊಂಡು ಬಂಗಾರ್ ಕಾಯರ್ ಕಟ್ಟೆಗೆ ಸವಾರಿ ಹೋಗಿ ಅಂಕದಕಟ್ಟೆಯಲ್ಲಿ(ಉಳ್ಳಾಲ್ತಿ ಕಟ್ಟೆ) ಶ್ರೀ ದಂಡನಾಯಕ-ಉಳ್ಳಾಲ್ತಿ ಅಮ್ಮನವರ ಭಂಡಾರವನ್ನು ಬೀಳ್ಕೊಟ್ಟು ಮರಳಿ ದೇವಸ್ಥಾನಕ್ಕೆ ಬಂದು ಶಯನದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಜಾತ್ರೋತ್ಸವದ ಒಂಬತ್ತನೆಯ ದಿನ ಸಂಜೆಯ ಹೊತ್ತಿಗೆ ಪುತ್ತೂರಿನಿಂದ 13 ಕಿ.ಮಿ ದೂರದ ವೀರಮಂಗಲಕ್ಕೆ ಅವಭೃತ ಸವಾರಿಗೆ ಹೊರಡುವ ಒಡೆಯ ದಾರಿ ಮಧ್ಯೆ ಸುಮಾರು 56 ಕಟ್ಟೆಗಳಲ್ಲಿ ಪೂಜೆಯನ್ನು ಸ್ವೀಕರಿಸುತ್ತಾ,ಭಕ್ತರು ಸಮರ್ಪಿಸುವ ಹಣ್ಣುಕಾಯಿ,ಮಂಗಳಾರತಿಯನ್ನು ಸ್ವೀಕರಿಸಿ ಮರುದಿನ ಅಂದರೆ ಎ.19 ದಿನ ಮುಂಜಾನೆಯ ಸೂರ್ಯೋದಯದ ಹೊತ್ತಿನಲ್ಲಿ ವೀರಮಂಗಲ ತಲುಪಿ ಅವಭೃತ ಸ್ನಾನವನ್ನು ಮಾಡುತ್ತಾರೆ. ನಂತರ ವೀರಮಂಗಲದಿಂದ ಹೊರಡು ಓಡೋಡಿ ಮರಳಿ ಪುತ್ತೂರಿಗೆ ಬಂದು ದೇವಸ್ಥಾನದಲ್ಲಿ ಧ್ವಜಾವರೋಹಣದೊಂದಿಗೆ ಒಡೆಯನ ಜಾತ್ರೋತ್ಸವ ಸಂಪನ್ನಗೊಳ್ಳುತ್ತದೆ. ಅದೇ ದಿನ ಹಾಗು ಮರುದಿನ ಅಂದರೆ ಎ.20ರಂದು ರಾತ್ರಿ ದೇವಸ್ಥಾನದ ಪರಿವಾರ ದೈವಗಳ ನೇಮೋತ್ಸವ ನಡೆಯುತ್ತದೆ.

ಈ ವರ್ಷ ಧ್ವಜಾರೋಹಣದಿಂದ ಧ್ವಜಾವರೋಹಣದ ತನಕ ನಡೆದ ಬಹುತೇಕ ಉತ್ಸವಗಳಲ್ಲಿ ಭಾಗವಹಿಸುವ ಸೌಭಾಗ್ಯ ದೇವರು ನನಗೆ ಕರುಣಿಸಿದರು. ಧ್ವಜಾರೋಹಣವನ್ನು ಕಣ್ತುಂಬಿಕೊಂಡು,ಸಂಜೆಯ ಉತ್ಸವದಲ್ಲಿ ಭಾಗಿಯಾಗಿ ನೆಹರುನಗರ ಕಡೆಗೆ ಹೋಗುವ ಶ್ರೀ ದೇವರ ಪೇಟೆ ಸವಾರಿಯಲ್ಲಿ ನಾನು ಕೂಡ ದೇವರ ಜೊತೆಗೆ ಹೋದೆ. ಎ.12ರಿಂದ 15ರ ತನಕ ಶ್ರೀ ದೇವರ ಉತ್ಸವದಲ್ಲಿ ಭಾಗಿಯಾಗಿ ದೇವರ ಜೊತೆಗೆ ಗೆಳೆಯರನ್ನು ಕೂಡಿಕೊಂಡು ಪೇಟೆ ಸವಾರಿಯಲ್ಲಿ ಭಾಗಿಯಾದೆ. ದೇವರ ಪೇಟೆ ಸವಾರಿಯಲ್ಲಿ ಭಾಗಿಯಾದ ಮೇಲೆ ನಾನು ನನ್ನಷ್ಟಕ್ಕೆ ಹೇಳಿಕೊಂಡಿದ್ದು "ನಾನು ನಿಜಕ್ಕೂ ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿದ್ದೆ!" ಎಂದು. ಇಷ್ಟು ವೈಭವದ,ಬೇರೆ ಊರಿನ ಜಾತ್ರೋತ್ಸವದಿಂದ ಭಿನ್ನವಾಗಿರುವ ನಮ್ಮ ಪುತ್ತೂರಿನ ಜಾತ್ರೋತ್ಸವದಲ್ಲಿ ಸ್ವತಃ ಭಗವಂತನೇ ತನ್ನ ಭಕ್ತರನ್ನು ಕಾಣಲು ಭಕ್ತರು ಇರುವಲ್ಲಿಗೆ,ಭಕ್ತರ ಮನೆ ಬಾಗಿಲಿಗೆ ಒಬ್ಬ ಅತಿಥಿಯ ರೀತಿಯಲ್ಲಿ ಹೋಗಿ ಬರುವ ಆ ದಿವ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಭಾಗ್ಯ ಸಿಕ್ಕಿದರೆ ಅದು ಹಿಂದಿನ ಜನ್ಮದ ಪುಣ್ಯದ ಫಲವಲ್ಲದಿದ್ದರೆ ಮತ್ತೇನು ಹೇಳಬೇಕು!? ನಿಜಕ್ಕೂ ನಾನು ಭಾಗ್ಯಶಾಲಿ! ಎ.16ರ ಮುಂಜಾನೆ ನಡೆಯುವ ಶ್ರೀ ದೇವರ ದೀಪಬಲಿಯಲ್ಲೂ ಭಾಗಿಯಾಗಿ ಉತ್ಸವವನ್ನು ಕಣ್ತುಂಬಿಕೊಂಡೆ. ಶ್ರೀ ದೇವರು ಹಾಗು ಶ್ರೀ ದಂಡನಾಯಕ-ಉಳ್ಳಾಲ್ತಿ ಅಮ್ಮನವರ ಭೇಟಿಯನ್ನು ಕಣ್ತುಂಬಿಕೊಂಡ ನಂತರ ವೇದ ಸುತ್ತಿನಲ್ಲಿ ದೇವರ ಸೇವೆಯನ್ನು ಮಾಡುವ ಸೌಭಾಗ್ಯ ನನಗೆ ಒದಗಿ ಬಂತು! ನಂತರ ದೇವರ ಹೂತೇರು ಉತ್ಸವವನ್ನು ನೋಡಿ ಬಂದೆ! ಎ.17ರಂದು ಶ್ರೀ ದೇವರ ದರ್ಶನ ಬಲಿಯನ್ನು ನೋಡಿ ಬ್ರಹ್ಮರಥದಲ್ಲಿ ದೇವರು ಆರೂಢರಾಗುವುದನ್ನು ಸಮೀಪದಿಂದಲೆ ಕಣ್ತುಂಬಿಕೊಂಡ ನಾನು ನಂತರ ವೈಭವದ ಪುತ್ತೂರು ಬೆಡಿ,ಬ್ರಹ್ಮರಥೋತ್ಸವವನ್ನು ರಥಬೀದಿಯಲ್ಲಿ ನಿಂತು ನೋಡಿ ಭಾವುಕನಾಗಿ ಬಿಟ್ಟೆ! ದೇವರ ಕೃಪೆಯಿಲ್ಲದಿದ್ದರೆ ದೇವರ ಉತ್ಸವಗಳನ್ನು ನೋಡುವ ಭಾಗ್ಯ ಸಿಗುತ್ತಿತ್ತೇ!? ಖಂಡಿತ ಇಲ್ಲ!

ನಿನ್ನೆಯ ದಿನ ಅಂದರೆ ಎ.18ರಂದು ದೇವರ ಜೊತೆಗೆ ವೀರಮಂಗಲ ಕಡೆಗೆ ಅವಭೃತ ಸವಾರಿಗೆ ಹೊರಟ ನಾನು ನಿರಂತರ 14 ಗಂಟೆಗಳ ಕಾಲ ದೇವರ ಜೊತೆಗೆ ಹೆಜ್ಜೆ ಹಾಕಿ ದೇವರ ಅವಭೃತ ಸ್ನಾನದ ಬಳಿಕ ಜಳಕದ ಗುಂಡಿಯಲ್ಲಿ ಮುಳುಗಿ ಎದ್ದು ಮರಳಿ ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಿದೆ. ದೇವಸ್ಥಾನದಲ್ಲಿ ಧ್ವಜಾವರೋಹಣವನ್ನು ಕಣ್ತುಂಬಿಕೊಂಡು ಮನೆಗೆ ಬಂದಾಗ ನನ್ನ ಒಂದು ಗಳಿಗೆ ಭಾವನೆಯಲ್ಲಿ ನನ್ನ ಮನಸ್ಸು ಸ್ಥಬ್ಧಗೊಂಡತ್ತೇ ಆಯಿತು! ಇದು ನನ್ನಿಂದ ಸಾಧ್ಯವಿತ್ತೆ!? ಹೇಗೆ ವೀರಮಂಗಲಕ್ಕೆ ಹೋಗಿ ಬಂದೆ ಅಂತ ಈಗಲೂ ನನಗೆ ನೆನೆಸಲು ಆಗುತ್ತಿಲ್ಲ! ಎಲ್ಲವು ಮಹಾಲಿಂಗೇಶ್ವರನ ಶಕ್ತಿ! ಮಹಾಲಿಂಗೇಶ್ವರನ ಮಹಿಮೆ! ಮಹಾಲಿಂಗೇಶ್ವರ ದೇವರ ಅವಭೃತ ಸವಾರಿಯಷ್ಟು ದೊಡ್ಡ,ಕಠಿಣ ಅವಭೃತ ಸವಾರಿ ಇಡೀ ವಿಶ್ವದಲ್ಲಿ ಇರಲು ಸಾಧ್ಯವಿಲ್ಲ!ಮಹಾಲಿಂಗೇಶ್ವರ ದೇವರ ಅವಭೃತ ಸವಾರಿಯಷ್ಟು ದೊಡ್ಡ,ಕಠಿಣ ಅವಭೃತ ಸವಾರಿ ಇಡೀ ವಿಶ್ವದಲ್ಲಿ ಇರಲು ಸಾಧ್ಯವಿಲ್ಲ!ಉತ್ತರ ಭಾರತದಲ್ಲಿ ಚಾರ್ ಧಾಮ್,ಪಂಚ ಕೇದಾರದಂತಹ ಪವಿತ್ರ ದೇವಾಲಯಗಳಲ್ಲಿ ದೇವರ ಮೂರ್ತಿಯನ್ನು ಚಳಿಗಾಲದಲ್ಲಿ ಅಲ್ಲಿಂದ ದೂರದ ಶೀತಕಾಲಿನ ಮಠಗಳಿಗೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಅಲ್ಲಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ(ಡೋಲಿ) ತೆಗೆದುಕೊಂಡು ಹೋಗುವುದು ಕ್ರಮ. ನಮ್ಮ ಪುತ್ತೂರಿನಲ್ಲಿ ಮಹಾಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ತಲೆಯಲ್ಲಿ ಹೊತ್ತು ಬ್ರಹ್ಮವಾಹಕರು ವೀರಮಂಗಲ ತನಕ 14 ಗಂಟೆಗಳ ಕಾಲ ನಡೆದುಕೊಂಡು ಹೋಗುವುದು ಎಂದರೆ ಸುಲಭದ ಮಾತಲ್ಲ! ಹೀಗಾಗಿಯೇ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿಯಷ್ಟು ದೊಡ್ಡ,ಕಠಿಣ ಅವಭೃತ ಸವಾರಿ ಇಡೀ ವಿಶ್ವದಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳುವುದು! ಒಟ್ಟಿನಲ್ಲಿ ಈ ವರ್ಷದ ಜಾತ್ರೋತ್ಸವದ ಹೇಗೆ ಆರಂಭಗೊಂಡು ಮುಗಿದು ಹೋಯಿತು ಅಂತ ಈಗಲೂ ನನಗೆ ನೆನೆಸಿಕೊಳ್ಳಲು ಆಗುತ್ತಿಲ್ಲ! ಕಣ್ಣು ಮುಚ್ಚಿ ಬಿಡುವುದರ ಒಳಗೆ ಜಾತ್ರೋತ್ಸವ ಮುಗಿದು ಹೋಯಿತು ಎಂದು ಭಾಸವಾಗುತ್ತಿದೆ! ಜಾತ್ರೋತ್ಸವದಲ್ಲಿ ಪಾಲ್ಗೊಂಡು ದೇವರ ಉತ್ಸವಗಳಲ್ಲಿ ಭಾಗಿಯಾದೆನಲ್ಲ ಎಂದು ಭಾವುನಕಾಗಿ ಬಿಟ್ಟೆ!ಇನ್ನು ಏನಿದ್ದರೂ ಈ ವರ್ಷದ ಜಾತ್ರೋತ್ಸವ ಸುಂದರ ನೆನಪುಗಳನ್ನು ಇಟ್ಟುಕೊಂಡು ಮೆಲುಕು ಹಾಕುತ್ತಾ ಮುಂದಿನ ವರ್ಷದ ತನಕ ಮಹಾಲಿಂಗೇಶ್ವರನ ಭಕ್ತರಾಗಿ ಕಾಯೋಣ! "ಮಹಾಲಿಂಗೇಶ್ವರ...! ಎಂದಿಗೂ ನಮ್ಮನ್ನು ಕಾಪಾಡು!" ಎಂದು ಪ್ರಾರ್ಥಿಸೋಣ!

|ಓಂ ನಮಃ ಶಿವಾಯ|

|ಹರ ಹರ ಮಹಾದೇವ|

🖊ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!