ಐಪಿಎಲ್ ಪಂದ್ಯ ನೋಡುತ್ತಾ ಬಾಲ್ಯದ ಸುಂದರ ದಿನಗಳು ನೆನಪಾದಾಗ!

ಐಪಿಎಲ್ ಪಂದ್ಯ ನೋಡುತ್ತಾ ಬಾಲ್ಯದ ಸುಂದರ ದಿನಗಳು ನೆನಪಾದಾಗ!
ಇಂದು ಐಪಿಎಲ್ ಪಂದ್ಯ ನೋಡುವಾಗ ಬಾಲ್ಯದ ದಿನಗಳು ನೆನಪು ಆಯಿತು. 
ಕಳೆದ ವಾರ ಐಪಿಎಲ್ ಆರಂಭ ಆಗುವಾಗಲೆ ಹಳೆಯ ದಿನಗಳು ನೆನಪಾಗ ರಜೆಯ ಆ ಸುಂದರ ದಿನಗಳ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ ಕುಳಿತೆ!
ಈ ಐಪಿಎಲ್ ಮತ್ತು ಶಾಲೆಯ ದಿನಗಳ ರಜಾ ದಿನಗಳು ದೋಸ್ತಿಗಳ ಹಾಗೆ! ಪರೀಕ್ಷೆ ಮುಗಿಯುವ ಹೊತ್ತಿಗೆ ಐಪಿಎಲ್ ಆರಂಭಗೊಳ್ಳುವ ದಿನಗಳು ಅಂದು ಇತ್ತು. ಈಗ ಪಂದ್ಯಗಳು ಜಾಸ್ತಿಯಾಗಿ ಮಾರ್ಚ್ 20-25ರ ಒಳಗೆ ಆರಂಭಿಸಲು ಶುರು ಮಾಡಿದರೆ ಅಂದು ಎಪ್ರಿಲ್ ಮೊದಲ ವಾರದಲ್ಲಿ ಆರಂಭಗೊಳ್ಳುವ ದಿನಗಳು ಇದ್ದವು. ಎಪ್ರಿಲ್ ಎಂದರೆ ಬಿಡಿ! ಮಕ್ಕಳಿಗೆ ಸ್ವರ್ಗ ಸುಖ ಸಿಗುವ ತಿಂಗಳು ಅದು! ಪರೀಕ್ಷೆ ಮುಗಿದು ತಮ್ಮ ಊರಿಗೆ,ಅಜ್ಜಿ ಮನೆಗೆ ಹೋಗುವುದೋ ಅಥವ ಪ್ರವಾಸಕ್ಕೆ ಹೋಗುವುದೊ ಅಥವ ತಮ್ಮ ಊರಿನ ಜಾತ್ರೆಯಲ್ಲಿ ಭಾಗವಹಿಸುವುದೋ ಅಥವ ತಮ್ಮ ಕುಟುಂಬದ ಶುಭ ಸಮಾರಂಭಗಳಲ್ಲಿ ಭಾಗಿಯಾಗಿ ರಜೆಯ ಮಜಾ ಪಡೆಯುವ ಕಾಲವದು. ನಮಗೆ ಪುತ್ತೂರಿನಲ್ಲಿ ಆದರೆ ಎಪ್ರಿಲ್ ಬರಲು ಪುರ್ಸೋತ್ತಿಲ್ಲ,ಹಬ್ಬದ ವಾತಾವರಣ ಎಲ್ಲೆಡೆ ಇರುತ್ತದೆ! 

ಎಪ್ರಿಲ್ 1ಕ್ಕೆ ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ನಡೆದು ಜಾತ್ರೆಯ ಸಂಭ್ರಮ ಆರಂಭಗೊಂಡರೆ ಎಪ್ರಿಲ್ 10ಕ್ಕೆ ಧ್ವಜಾರೋಹಣದೊಂದಿಗೆ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರಕಿ ದೇವರ ಉತ್ಸವಗಳು 9 ದಿನಗಳ ಕಾಲ ನಡೆಯುತ್ತದೆ. ಆ ದಿನಗಳು ಪುತ್ತೂರಿಗೆ ಹಬ್ಬದ ದಿನಗಳು! ಜಾತ್ರೆಯ ಬಗ್ಗೆ ಈ ಮೊದಲು ಲೇಖನ ಬರೆದಿದ್ದೇನೆ. ಮತ್ತೊಮ್ಮೆ ಅದನ್ನು ಹಂಚಿಕೊಳ್ಳುವೆ. 
ಮಾರ್ಚ್ ತಿಂಗಳು ಪರೀಕ್ಷೆಯ ಕಾಲ. ಯಾವಾಗ ಮಾರ್ಚ್ ಮುಗಿಯುತ್ತದೋ ಎಂದು ಕಾದು ಕುಳಿತು, ಹೇಗಾದರೂ ಮಾಡಿ ಪರೀಕ್ಷೆಗೆ ತಯಾರಾಗಿ,ಪರೀಕ್ಷೆ ಬರೆದು ಬಂದು ಆ ದಿನವೋ ಅಥವ ಮರುದಿನ ಐಪಿಎಲ್ ಆರಂಭಗೊಂಡರೆ ಮನೆಯಲ್ಲಿ ಟಿವಿ ಹಾಕಿ ಅಲ್ಲಿಯೇ ಕೂತು ಬಿಡುತ್ತಿದ್ದ ದಿನಗಳು ಇದ್ದವು. ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಟಿವಿ ಹಾಕಿದರೆ ಸಂಜೆಯ ತನಕ ಡೋರಿಮೋನ್,ಶಿಂಚ್ಯಾನ್ ಅಂತಹ ಕಾರ್ಟೂನ್ ನೋಡದೆ ಇದ್ದರೆ ರಜೆಯ ಮಜಾವೇ ಸಿಗುತ್ತಿರಲಿಲ್ಲ. ಸಂಜೆ ಮನೆಯ ಹೊರಗೆ ಹತ್ತಿರದ ಮನೆಯ ಗೆಳೆಯರ ಜೊತೆಗೆ ಮನೆ ಎದುರು ಕ್ರಿಕೆಟ್ ಆಡಿ ಬಾಲನ್ನು ಹೊಡೆದಾಗ ಅದು ಹತ್ತಿರದ ಬಲ್ಲೆಗೆ ಬಿದ್ದರೆ ಅದರ ಒಳಗೆ ನುಗ್ಗಿ ಹುಡುಕುವುದು ದೊಡ್ಡ ಸವಾಲು! ಹೀಗೆ ಹುಡುಕುತ್ತ ಹೊತ್ತು ಕಳೆದರೂ ಸಂಜೆ 7 ಗಂಟೆಯ ತನಕ ಆಡಿ ಮನೆಗೆ ಬಂದು ಬೇಗನೆ ಸ್ನಾನ,ಸಂಧ್ಯಾವಂದನೆ ಮುಗಿಸಿ ಕ್ರಿಕೆಟ್ ನೋಡಲು ಕೂರುತ್ತಿದೆ. ಆ ದಿನಗಳಲ್ಲಿ ಐಪಿಎಲ್ ಸೋನಿ ಮ್ಯಾಕ್ಸ್,ಸೋನಿ ಸಿಕ್ಸ್ ಅಲ್ಲಿ ಪ್ರಸಾರಗೊಳ್ಳುತ್ತಿತ್ತು. ಪಂದ್ಯದ ಮೊದಲು ಪ್ರೀ-ಮ್ಯಾಚ್ ಶೋಗೆ ಅದೆಷ್ಟೋ ಅಭಿಮಾನಿಗಳು ಇದ್ದರು. ಆ ಶೋನ ಮೊದಲು ಆ ವರ್ಷದ ಐಪಿಎಲ್ ಗೀತೆ ಪ್ರಸಾರಗೊಳ್ಳುವಾಗ ಅದೆಷ್ಟು ಜನರು ಕುಣಿದು ಕುಪ್ಪಳಿಸಿದ್ದಾರೋ! ಜೊತೆಗೆ ನವಜೋತ್ ಸಿಂಗ ಸಿಧು ಅವರ ಕಮೆಂಟರಿ! ಆಹಾ! 
ಎಪ್ರಿಲ್ ಅಲ್ಲಿ ಪುತ್ತೂರು ಜಾತ್ರೆಯ ಸಂದರ್ಭದಲ್ಲಿ ಸಂಬಂಧಿಕರು ಮನೆಗೆ ಬರುತ್ತಿದ್ದರು. ಆಗ ಅವರ ಜೊತೆಗೆ ಜಾತ್ರೆಗೆ ಹೋಗುವುದು,ಐಪಿಎಲ್ ನೋಡುವ ಗಮ್ಮತ್ತೇ ಬೇರೆ ಇತ್ತು! ನಂತರ ದಿನಗಳಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿಯಲ್ಲಿ ದೇವರ ಜೊತೆಗೆ ಹೋಗುತ್ತಾ ಕ್ರಿಕೆಟ್ ನೋಡುವ ಗೆಳೆಯರ ಜೊತೆಗೆ ಸ್ಕೋರ್ ಕೇಳುವುದು,ದೇವರ ಕಟ್ಟೆ ಪೂಜೆ ಆಗುವಾಗ ಒಂದು ಕಡೆ ದೇವರಿಗೆ ನಮಸ್ಕರಿಸುವುದು ಆದರೆ ಮತ್ತೊಂದು ಕಡೆ ಕ್ರಿಕೆಟಿನ ನೇರಪ್ರಸಾರ ನೋಡುತ್ತಾ ತಮ್ಮ ನೆಚ್ಚಿನ ತಂಡವನ್ನು ಪ್ರೋತ್ಸಾಹಿಸುತ್ತಿದ್ದೆವು. ಜಾತ್ರೆ ಮುಗಿದ ಬಳಿಕ ದೇವಸ್ಥಾನದಲ್ಲಿ ವಸಂತ ವೇದ ಶಿಬಿರ ನಡೆಯುತ್ತದೆ. ನನ್ನ ವೇದ ಪಾಠದ ದಿನಗಳಲ್ಲಿ ಪ್ರಥಮ ವರ್ಷದ ಅಧ್ಯಯನ ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆಯುತ್ತಿದ್ದ ಶ್ರೀ ಸದಾಶಿವ ವೇದ ಪಾಠ ಶಾಲೆಯ ವಸಂತ ವೇದ ಶಿಬಿರ ನಡೆದಿತ್ತು. ಹೀಗಾಗಿ ಪ್ರತಿ ದಿನ ನಾನು ಕಲ್ಮಡ್ಕದ ನನ್ನ ಅಜ್ಜಿ ಮನೆಯಿಂದ ಬೆಳ್ಳಾರೆಗೆ ಬಸ್ಸಿನಲ್ಲಿ ಹೋಗಿ ಬರುತ್ತಿದ್ದೆ. ಸಂಜೆ ಅಜ್ಜಿ ಮನೆಗೆ ಹೋ ಬಳಿಕ ನನ್ನ ಜೊತೆಗೆ ವೇದ ಪಾಠಕ್ಕೆ ಅಜ್ಜಿ ಮನೆಯಿಂದ ಹೋಗಿ ಬರುತ್ತಿದ್ದ ನನ್ನ ಭಾವ ಮನೀಶ,ಅಜ್ಜಿ ಮನೆಗೆ ರಜೆಯಲ್ಲಿ ಬರುತ್ತಿದ್ದ ಉಳಿದ ಭಾವಂದಿರೊಂದಿಗೆ ಕ್ರಿಕೆಟ್ ಆಡುತ್ತಾ ಅಜ್ಜಿ ಮಾಡಿ ಕೊಡುತ್ತಿದ್ದ ರುಚಿರುಚಿಯಾದ ತಿಂಡಿ,ಅಜ್ಜಿ ಸಿಪ್ಪೆ ಸುಲಿದು ಕೊಡುತ್ತಿದ್ದ ಹಣ್ಣುಗಳನ್ನು ತಿಂದು ಸಂಜೆ ಸ್ನಾನ,ಸಂಧ್ಯಾವಂದನೆ ಮಾಡಿ ಮಾವನ ಜೊತೆಗೆ ಕ್ರಿಕೆಟ್ ನೋಡುತ್ತಿದ್ದ ದಿನಗಳು ಇದ್ದವು. ನನಗೆ ಕ್ರಿಕೆಟಿನ ಹುಚ್ಚು ಹಿಡಿಯಲು ನನ್ನ ಮಾವನು ಒಬ್ಬರು ಕಾರಣಕರ್ಥರು. ವಿಘ್ನೇಶ್ವರ ಮಾವ(ನನ್ನ ಮಾವ) ದೊಡ್ಡ ಕ್ರಿಕೆಟ್ ಅಭಿಮಾನಿ. ಅವರು ಮನೆಯಲ್ಲಿ ಇದ್ದರೆ ಕ್ರಿಕೆಟ್ ಪಂದ್ಯ ಆಗುತ್ತಿದ್ದರೆ ನೋಡಿಯೇ ನೋಡುತ್ತಾರೆ. ಹಾಗೆಯೇ ನನ್ನ ಅಪ್ಪಯ್ಯ.ನನ್ನ ಮನೆಯಲ್ಲಿ ಟಿವಿ ಇರುವಾಗ ಅಪ್ಪಯ್ಯ ತಪ್ಪದೆ ಕ್ರಿಕೆಟ್ ನೋಡುತ್ತಿದ್ದರು. ಎಷ್ಟೆಂದರೆ ರಾತ್ರಿ ಪಂದ್ಯ ಮುಗಿಯುವ ತನಕ ವಿರಾಮದ ಹೊತ್ತು ಹೊರತುಪಡಿಸಿ ಪಂದ್ಯವನ್ನು ಸಂಪೂರ್ಣವಾಗಿ ಸ್ವಲ್ಪವು ಆಚೆ ಇಚೆ ಹೋಗದೆ ನೋಡುತ್ತಿದ್ದರು. ಅಪ್ಪಯ್ಯನಿಗೆ ಕ್ರಿಕೆಟ್ ಹುಚ್ಚು ಇದ್ದುದರಿಂದ ನನಗೂ ಅದು ಬಂತು. ಎರಡನೆಯ ವರ್ಷದ ವೇದಾಧ್ಯಾಯನಕ್ಕೆ ನಾನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ದೇವಸ್ಥಾನದ ಆಡಳಿತ ಮಂಡಳಿ ಹಾಗು ವೇದ ಸಂವರ್ಧನ ಪ್ರತಿಷ್ಠಾನದ ಆಶ್ರಯದಲ್ಲಿ ಎಪ್ರಿಲ್ ಹಾಗು ಮೇ ತಿಂಗಳಿನಲ್ಲಿ ವಸಂತ ವೇದ ಶಿಬಿರ ನಡೆಯುತ್ತದೆ. ಎರಡನೆಯ ವರ್ಷ ಇಲ್ಲಿ ಅಧ್ಯಯನ ಮಾಡಲು ಆರಂಭಿಸಿದಾಗ ಮಧ್ಯಾಹ್ನದ ಹೊತ್ತು ಊಟ ಮುಗಿಸಿ ದೇವಸ್ಥಾನದ ವಠಾರದಲ್ಲಿ ನಾವು ಕ್ರಿಕೆಟ್ ಆಡುತ್ತಿದ್ದೆವು! ಕೆಲವೊಮ್ಮೆ ಬಾಲ್ ಹೊಡೆದಾಗ ದೇವಸ್ಥಾನದ ಒಳಗೆ ಹೋಗಿ ನಾವು ಬೈಗುಳ ತಿಂದ ಪ್ರಸಂಗವು ನಡೆದಿತ್ತು! ವೇದ ಪಾಠದಲ್ಲಿ ಚೈನ್ನೈ,ಬೆಂಗಳೂರು ಸೇರಿದಂತೆ ಆಗ ಇದ್ದ ಎಲ್ಲಾ ತಂಡಗಳ ಅಭಿಮಾನಿಗಳು ಇದ್ದರು. ಅದರಲ್ಲಿಯೂ ಧೋನಿ,ಗೇಲ್,ಸೆಹ್ವಾಗ್,ಸಚಿನ್ ತೆಂಡುಲ್ಕರ್,ಗಂಭೀರ್,ಡೇವಿಡ್ ವಾರ್ನರ್,ರೈನಾ ಅವರ ಅಭಿಮಾನಿಗಳು ಹೆಚ್ಚು ಇದ್ದರು. ಆಯಾಯಾ ಆಟಗಾರರು ಪ್ರತಿನಿಧಿಸುವ ತಂಡಕ್ಕೆ ಪ್ರೋತ್ಸಾಹಿಸುತ್ತಾ ಆ ದಿನ ಗೆದ್ದ ತಂಡದ ಪರ ಮರುದಿನ ವೇದ ಪಾಠದಲ್ಲಿ ಘೋಷಣೆ ಕೂಗುತ್ತಾ ಉಳಿದವರನ್ನು ತಮಾಷೆ ಮಾಡುತ್ತಾ ಜಗಳವೂ ಮಾಡುತ್ತಿದ್ದೆವು. ಆ ದಿನಗಳಲ್ಲಿ ಸಿಗುತ್ತಿದ್ದ ಸುಖವೇ ಬೇರೆ! ಜೊತೆಗೆ ಇಸ್ಪಿಟ್ ಕಾರ್ಡುಗಳ ರೀತಿ ಕ್ರಿಕೆಟ್ ಆಟಗಾರರ ವಿವರ ಇರುವ ಕಾರ್ಡುಗಳು ಆಗ ಬರುತ್ತಿದ್ದವು. ಅದನ್ನು ನಾವು ತಂದು ಇಲ್ಲಿ ಆಡುತ್ತಿದ್ದೆವು. ಗುರುಗಳು ನೋಡಿದರೆ ಅದನ್ನು ಅವರು ವಶಕ್ಕೆ ಪಡೆದು ನಮಗೆ ಬೈಯುತ್ತಿದ್ದರು. ನಂತರದ ವರ್ಷಗಳಲ್ಲಿ ನಾವು ಹಿರಿಯ ವಿದ್ಯಾರ್ಥಿಗಳು ಆದಾಗ ಕಿರಿಯರಿಂದ ಕಾರ್ಡುಗಳನ್ನು ತೆಗೆದು ನಮಗೆ ಕೊಡುತ್ತಿದ್ದರು! ಮಧ್ಯಾಹ್ನ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದಾಗ ನಾವು ದೇವಸ್ಥಾನದಲ್ಲಿ ರಿಲೇ,ಓಟದ ಸ್ಪರ್ಧೆ,ಕಣ್ಣುಮುಚ್ಚಾಲೆ ಆಡುತ್ತಿದ್ದೆವು! ಒಟ್ಟಿನಲ್ಲಿ ವೇದ ಪಾಠದ ಸಮಯದಲ್ಲಿ ಸಿಗುತ್ತಿದ್ದ ಸುಖವೇ ಬೇರೆ! ಅಂತಹ ಸಂತೋಷದ ದಿನಗಳು ಶಾಲೆಯಲ್ಲಿ ಎಂದಿಗೂ ಸಿಗದೆ ಇದ್ದ ಕಾರಣ ಒಂದು ವರ್ಷ ಕಾಯಬೇಕಿತ್ತು. ಕಾಲೇಜಿಗೆ ಬಂದ ಬಳಿಕ ಅಂತು ಬಿಡಿ! ಸ್ವಲ್ಪವು ಸಮಯ ಇರುವುದಿಲ್ಲ! ಕಾಲೇಜಿನ ಕೆಲಸಗಳನ್ನು ಮಾಡಿ ಮುಗಿಸುವುದು,ಪರೀಕ್ಷೆಗೆ ಓದುವುದು,ರಜೆ ಇದ್ದರೆ ತೆಪ್ಪಗೆ ಮನೆಯಲ್ಲಿ ಕೂರುವುದು,ಮಲಗುವುದೇ ದಿನಚರಿಯಾಗಿ ಬಿಟ್ಟದೆ! ಅಂದಿನ ಸುಖದ ದಿನಗಳು ಮಾಯವಾಗಿಯೇ ಬಿಟ್ಟಿದೆ.
ಇರಲಿ,ವೇದ ಪಾಠದಲ್ಲಿದ್ದಾಗ ನಾನು ಅಂತು ಪ್ರತಿದಿನ ನನ್ನ ವೇದ ಪಾಠದ ಆಪ್ತ ಗೆಳೆಯ ಹರೀಶನ ಜೊತೆಗೆ ಐಪಿಎಲ್ ಬಗ್ಗೆ ಚರ್ಚೆ ಮಾಡುತ್ತಲೆ ಇದ್ದೆ. ಹರೀಶನು ನನ್ನ ಹಾಗೆ ಚೆನ್ನೈ ತಂಡ, ಧೋನಿಯ ಅಭಿಮಾನಿ. ಹಾಗಾಗಿ ನಾವಿಬ್ಬರು ಆಗಲೇ ಚೈನ್ನೈ ತಂಡವನ್ನು ಬೆಂಬಲಿಸುತ್ತಿದ್ದೆವು.ನಮ್ಮ ಜೊತೆಗೆ ನಾವು ಎರಡನೆಯ ವರ್ಷದಲ್ಲಿರುವಾಗ ನಮ್ಮ ಹಿರಿಯ ವರ್ಷದ ವಿದ್ಯಾರ್ಥಿ ಸುಧನ್ವಶ್ಯಾಮ ಕೂಡ ಧೋನಿ ಹಾಗು ಚೈನ್ನೈ ತಂಡದ ಅಭಿಮಾನಿಯಾಗಿದ್ದ. ಈಗಲೂ ಧೋನಿಯ ಕಟ್ಟರ್ ಅಭಿಮಾನಿ! ವೇದ ಪಾಠದ ದಿನಗಳಲ್ಲಿ ಉಳಿದ ತಂಡಗಳ ಅದರಲ್ಲೂ ಬೆಂಗಳೂರು ತಂಡದ ಅಭಿಮಾನಿಗಳ ಜೊತೆಗೆ ನಮಗೆ ಜಗಳವೇ ಆಗಿಬಿಡುತ್ತಿತ್ತು! ಜಗಳ ಮಾಡಿ ಮತ್ತೆ ಜೊತೆಗೆ ಹೋಗುತ್ತಿದ್ದೆವು! ಮಕ್ಕಳಾಟಿಕೆ ಅಂದರೆ ಇದೇ ಅಲ್ಲವೇ!? ಐಪಿಎಲ್ ಫೈನಲ್ ಪಂದ್ಯದ ಮೊದಲು ವೇದ ಪಾಠದ ಸಮರೋಪ ಸಮಾರಂಭ ನಡೆಯುತ್ತಿತ್ತು. ಹೀಗಾಗಿ ಐಪಿಎಲ್ ಫೈನಲ್ ಪಂದ್ಯದ ಬಗ್ಗೆ ಗೆಳೆಯರ ಜೊತೆಗೆ ಮಾತನಾಡುವ ಅವಕಾಶ ಸಿಗುತ್ತಿರಲಿಲ್ಲ. ಫೈನಲ್ ಪಂದ್ಯ ಮುಗಿದು ಒಂದೆರಡು ದಿನಗಳಲ್ಲಿ ಶಾಲೆ ಆರಂಭವಾಗಿ ಬಿಡುತ್ತಿತ್ತು. ಆಗ ಶಾಲೆಯಲ್ಲಿ ಗೆಳೆಯರ ಜೊತೆಗೆ ಕ್ರಿಕೆಟ್ ಬಗ್ಗೆ ಮಾತನಾಡುತ್ತಿದ್ದೆ. ಚೈನ್ನೈ ಐಪಿಎಲ್ ಫೈನಲ್ ಪಂದ್ಯ ಗೆದ್ದರೆ ಉಳಿದವರ ಎದರು ಚೈನ್ನೈ ತಂಡದ ಅಭಿಮಾನಿಗಳ ಸಂಭ್ರಮವೇ ಬೇರೆಯಿತ್ತು! ಇದೇ ರೀತಿ ಮುಂಬೈ ತಂಡದ ಅಭಿಮಾನಿಗಳದ್ದು ಕೂಡ! ಒಟ್ಟಿನಲ್ಲಿ ಅಂತಹ ದಿನಗಳು ಸಿಗಲು ಮತ್ತೆ ಒಂದು ವರ್ಷ ಕಾಯಬೇಕಿತ್ತು. ಕಾಯುತ್ತಿದ್ದೆ ಕೂಡ! ಸಮಯ ಯಾವತ್ತಿಗೂ ಶಾಶ್ವತವಲ್ಲ! ವರ್ಷಗಳು ಕಳೆದಂತೆ ಸಣ್ಣ ಮಕ್ಕಳಾಗಿದ್ದವರು ದೊಡ್ಡವರಾಗಿಯೇ ಬಿಡುತ್ತೇವೆ. ಈಗ ಅಂದಿನ ಆ ದಿನಗಳನ್ನು ನೆನೆಸಿದರೆ ಕಣ್ಣಲ್ಲಿ ನೀರು ಬರುತ್ತದೆ ಹಾಗು ಆ ದಿನಗಳು ಮತ್ತೆ ಬರಲಿ ಎಂದು ಅನಿಸುತ್ತದೆ. ಆ ಸುಖದ ಕ್ಷಣಗಳು! ಆಹಾ! ಆ ಸುಂದರ ದಿನಗಳು ಇನ್ನು ಮರಳಿ ಬರಲು ಉಂಟೇ!? 
ಈ ದಿನಗಳು ನೆನಪಾದಾಗ ಯಾಕೋ ಮತ್ತೆ ಐಪಿಎಲ್ ನೋಡುವ ಎಂದು ಅನಿಸಿತು. ಇದಕ್ಕೆ ಹೇಳುವುದು ನೋಡಿ ಮಗುವಾಗಿದ್ದಾಗ ಮಗುವಿಗೆ ಸಿಗುವ ಸುಖ,ಸಂತೋಷ ದೊಡ್ಡವರಾದಾಗ ಸಿಗುವುದಿಲ್ಲ ಎಂದು! ಇಂಗ್ಲಿಷಿನಲ್ಲಿ ಹೇಳುತ್ತಾರಲ್ಲ "School Days are Golden Days" ಅದು ನಿಜಕ್ಕೂ ಸತ್ಯದ ಮಾತು! 
ಬರಹ: ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!