ಸಿನಿಮಾ ಅಂದ್ರೆ ಇದು ಮಾರ್ರೆ!

ಸಿನಿಮಾ ಅಂದ್ರೆ ಇದು ಮಾರ್ರೆ!

ಯಬ್ಬ! ಏನು ಹೇಳುವುದು,ಏನು ಬರೆಯುವುದು ಒಂದೂ ಗೊತ್ತಾಗುತ್ತಿಲ್ಲ! ಸೆಪ್ಟೆಂಬರ್ ಅಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಬಿಡುಗಡೆಗೊಂಡಾಗ ನೋಡಿ ನನ್ನ ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದಿದ್ದ ನನಗೆ ಸೈಡ್ ಬಿ ನೋಡಿ ಏನು ಹೇಳಬೇಕೆಂದೇ ಗೊತ್ತಾಗುತ್ತಿಲ್ಲ!
ಸೈಡ್ ಬಿ ಸಿನಿಮಾ ಅಂತೂ ನೈಜ,ಮುಗ್ಧ ಪ್ರೇಮ ಕಥನವನ್ನು ಬಹಳ ಚೆನ್ನಾಗಿ ಹೇಳುತ್ತದೆ. ಸೈಡ್ ಎ ಅಲ್ಲಿ ಪ್ರಿಯಾ "ನನ್ನ ಸಮುದ್ರ ನೀನು" ಎಂದು ಮನುವಿಗೆ ಹೇಳಿದರೆ ಅರ್ಥಾತ್ "ಅವಳ ಸಮುದ್ರ ಅವನು" ಎಂದು ಸೈಡ್ ಎ ಹೇಳಿ ತೋರಿಸಿ ಕೊಟ್ಟರೆ ಅದರ ಉಲ್ಟಾ "ಅವನ ಸಮುದ್ರ ಅವಳು" ಎಂಬುದು ಸೈಡ್ ಬಿ ಅಲ್ಲಿ ನೋಡಬಹುದಾಗಿದೆ. ಮನುವಿನ ಒಂದು ಮುಖವನ್ನು ಸೈಡ್ ಎ ಅಲ್ಲಿ ನಾವು ನೋಡಿ ಆಗಿದೆ. ಅದೆ ಮನುವಿನ ಇನ್ನೊಂದು ಮುಖವನ್ನು ಸೈಡ್ ಬಿ ಸಿನಿಮಾದಲ್ಲಿ ಚೆನ್ನಾಗಿ ನೋಡಬಹುದಾಗಿದೆ. ಮನುವಿನ ಮನಸ್ಸಿನ ಭಾವನೆಗಳು,ಪ್ರಿಯಾಳನ್ನು ಕಾಣಬೇಕೆನ್ನುವ ಹಂಬಲ,ಸುರಭಿಯ ಮುಗ್ಧ ಪ್ರೀತಿ,ಪ್ರಕಾಶನ ಗೆಳೆತನ,ಸೋಮನ ಸೇಡು ತಿರುವಿಕೆ ಜೊತೆಗೆ ಮಧ್ಯದಲ್ಲಿ,ಅಲ್ಲಲ್ಲಿ ಸಿಗುವ ಹಾಸ್ಯ ಸಂಭಾಷಣೆ,ಊಹಿಸಲು ಅಸಾಧ್ಯವಾದ ಕ್ಲೈಮಾಕ್ಸ್ ನೋಡುವವರ ಏಕಾಗ್ರತೆಯನ್ನು ಸಿನಿಮಾದುದ್ದಕ್ಕೂ ಎಳೆದು ಇಟ್ಟಕೊಳ್ಳುತ್ತದೆ! ಸಿನಿಮಾ ಕಥೆಯು ಮನಸ್ಸಿನ ಆಳಕ್ಕೆ ಇಳಿದು ಸಿನಿಮಾದ ಕೊನೆಗೆ ಭಾವನೆಗಳಿಂದ ಕಣ್ಣಿನಲ್ಲಿ ನೀರು ಬರುತ್ತದೆ ಹಾಗು ಅದೇ ಭಾವನೆಗಳ ಜೊತೆಗೆ ನೀವು ಹೊರಗೆ ಬರುತ್ತೀರಿ! ಕಥೆಗೆ ಅನುಗುಣವಾಗಿ ಕಥೆಯ ಭಾವನೆಯನ್ನು ಎತ್ತಿಹಿಡಿಯುವ ಸಂಗೀತ,ಕಥೆಯನ್ನು ಅಚ್ಚುಕಟ್ಟಾಗಿ ತೋರಿಸಿದ ಸಿನಿಮಾಟೋಗ್ರಫಿಯ ಬಗ್ಗೆ ಎರಡು ಮಾತಿಲ್ಲ! ಅದೇ ಸನ್ನಿವೇಶ,ಅದೇ ಸಂಗೀತ ಈಗಲೂ ನನ್ನನ್ನು ಕಾಡುತ್ತಲೆ ಇದೆ! ಸೈಡ್ ಎ ನೋಡದವರಿಗೆ ಅಂತೂ ಸೈಡ್ ಬಿ ಸಿನಿಮಾದ ಕಥೆಯನ್ನು ಅರ್ಥ ಮಾಡಿಕೊಳ್ಳಲು,ಹೊಂದಾಣಿಕೆ ಮಾಡಲು ಸಾಧ್ಯವೇ ಇಲ್ಲ!
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯವರ ನಟನೆಯಂತೂ ಬಹಳ ಕಾಡುತ್ತದೆ! ಅವರ ಸಿನಿ ಪಯಣದಲ್ಲಿ ಮನು ಪಾತ್ರದ ನಟನೆ ಶ್ರೇಷ್ಠ ನಟನೆ ಎಂದರೆ ತಪ್ಪಾಗಲು ಸಾಧ್ಯವಿಲ್ಲ! ಸೈಡ್ ಎ ಸಿನಿಮಾದಲ್ಲಿ ತಮ್ಮ ನಟನೆ,ಮಾತುಕತೆಯಿಂದ ಎಲ್ಲರ ಮನಗೆದ್ದ ರುಕ್ಮಿಣಿ ವಸಂತ್ ಅವರದ್ದು ಸೈಡ್ ಬಿನಲ್ಲಿ ಮಾತು ಕಮ್ಮಿ,ಎಲ್ಲಾ ಭಾವನೆಗಳಿಂದ ಕೂಡಿರುವ ನಟನೆಯೆ ಜಾಸ್ತಿ! ಇದರಿಂದ ಪ್ರಿಯಾಳ ಪಾತ್ರ ಇನ್ನಷ್ಟು ಹತ್ತಿರವಾಗುತ್ತದೆ. ಸುರಭಿಯ ಪಾತ್ರದಲ್ಲಿ ನಟಿಸಿರುವ ಚೈತ್ರ ಆಚಾರ್ ಅವರ ಕಣ್ಣುಗಳ ಭಾವನೆ ನೋಡುಗರ ಮನಗೆಲ್ಲುತ್ತದೆ. ಇನ್ನು ನಾನು ಮೊದಲು ಹೇಳಿದಂತೆ ಮನುವಿನ ಗೆಳೆಯ ಪ್ರಕಾಶನ ಪಾತ್ರ ನಿರ್ವಹಿಸಿದ ಗೋಪಾಲಕೃಷ್ಣ ದೇಶಪಾಂಡೆಯವರ ನಟನೆ ನಿಜಕ್ಕೂ ಅತ್ಯುತ್ತಮವಾದದ್ದು. ಕೆಲವು ಸನ್ನಿವೇಶಗಳಲ್ಲಿ ಇವರ ಸಂಭಾಷಣೆ,ಸನ್ನಿವೇಶ ಜನರ ಮುಖದಲ್ಲಿ ನಗು ಬರುವಂತೆ ಮಾಡುತ್ತದೆ. ಇನ್ನು ಚಿತ್ರದ ಖಳನಾಯಕ ಸೋಮನ ಪಾತ್ರಕ್ಕೆ ಜೀವ ತುಂಬಿದ ರಮೇಶ್ ಇಂದ್ರ ಅವರ ಆ ಖಳ ನಗು ನೋಡುಗರಲ್ಲಿ ಈ ಮನುಷ್ಯ ಮುಂದೇನು ಮಾಡುತ್ತಾನೋ ಎನ್ನುವ ಕುತೂಹಲ ಹುಟ್ಟಿಸುತ್ತದೆ. ಅವರ ಆ ನಗು,ಸಂಭಾಷಣೆ ಕೇಳಿ ಫಿದಾ ಆಗುವುದು ಗ್ಯಾರಂಟಿ! ಕಳೆದ ಎರಡು ಮೂರು ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡ ಅಚ್ಯುತ್ ಕುಮಾರ್ ಅವರದ್ದು ಸೈಡ್ ಎ ಸಿನಿಮಾದ ಹಾಗೆ ಇಲ್ಲಿಯೂ ಪ್ರಭುವಿನ ಪಾತ್ರ ಆದರೂ ಸ್ವಲ್ಪ ವಿಭಿನ್ನವಾಗಿದೆ. ಅದು ಏನು ಎಂದು ನೀವು ಚಿತ್ರಮಂದಿರದಲ್ಲೇ ನೋಡಬೇಕು! ಇನ್ನು ಉಳಿದಂತೆ ಪ್ರಿಯಾಕ್ಷ ಗಂಡ ದೀಪಕ್,ತಮ್ಮ ವಿನೋದ ಅವರ ಪಾತ್ರಗಳೆಲ್ಲ ಚಿತ್ರದ ಕಥೆಯನ್ನು ಸಾಗಿಸುತ್ತಾ ಆ ಪಾತ್ರಗಳಲ್ಲಿ ನಟಿಸಿರುವ ನಟರ ಅಭಿನಯ ಪ್ರೇಕ್ಷಕರ ಮನಸ್ಸಿನಲ್ಲಿ ಬೇರೂರುವಂತೆ ಮಾಡುತ್ತದೆ.
ಇನ್ನು ನಿರ್ದೇಶನಕ್ಕೆ ಬರುವುದಾದರೆ ಹೇಮಂತ್ ರಾವ್ ಅವರ ನಿರ್ದೇಶನದ ಬಗ್ಗೆ ಒಂದೇ ಒಂದು ಮಾತಿಲ್ಲ! ಆ ಕಥೆ ಹೇಳುವ ವಿಧಾನ,ಕಥೆಯನ್ನು ಚಿತ್ರದಲ್ಲಿ ತೋರಿಸಿರುವ ಬಗೆ,ಪ್ರತಿ ಪಾತ್ರಕ್ಕೂ ಕೊಟ್ಟಿರುವ ಆದ್ಯತೆ ನಿಜಕ್ಕೂ ಮೆಚ್ಚುವಂತದ್ದು. ಅದ್ವೈತ್ ಗುರುಮೂರ್ತಿ ಅವರ ಸಿನಿಮಾಟೋಗ್ರಫಿ,ಚರಣ್ ರಾಜ್ ಅವರ ಸಂಗೀತವನ್ನು ನಿಜಕ್ಕೂ ಮೆಚ್ಚಬೇಕು. ಜೊತೆಗೆ ಶ್ರೀಲಕ್ಷ್ಮಿ ಬೆಳ್ಮಣ್ಣು ಅವರ ಇಂಪಾದ ಗಾಯನ ನೋಡುಗರನ್ನು,ಸಂಗೀತ ಪ್ರಿಯರ ಕಿವಿಗೆ ಮುದ ನೀಡುತ್ತದೆ.ಆ ಸನ್ನಿವೇಶಗಳನ್ನು ಎತ್ತಿ ಹಿಡಿದದ್ದು,ಆ ಸನ್ನಿವೇಶಗಳು ಅಷ್ಟು ಆಳವಾಗಿ ಕಾಡಿದ್ದೇ ಇವರೆಡರಿಂದ! ಸಿನಿಮಾ ನೋಡಿ ಅದರ ಬಗ್ಗೆ ಈಗ ಬರೆಯುತ್ತಿರುವಾಗ ಎಷ್ಟೋ ವಿಚಾರಗಳು ಹೇಳಲು ಬಿಟ್ಚು ಕೂಡ ಹೋಗಿದೆ. ಸಿನಿಮಾ ನೋಡಿ ಬಂದು ಅದನ್ನು ಮತ್ತೆ ನೆನಪು ಮಾಡುವಾಗ ಮರೆತು ಹೋಗಿದ್ದು ಇದೆ. ಮತ್ತೊಮ್ಮೆ ನೋಡಬೇಕು ಎಂದು ಅನಿಸುತ್ತದೆ.

 
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ನಿರ್ಮಿಸಿದ ಪರಂವಃ ಪಿಕ್ಚರ್ಸ್‌ನ ತಂಡವನ್ನು ನಿಜಕ್ಕೂ ಮೆಚ್ಚಬೇಕು. ಇಂತಹ ವಿಭಿನ್ನವಾದ ಸಿನಿಮಾಗಳು, ಕನ್ನಡ ಚಿತ್ರರಂಗವನ್ನು ಇನ್ನಷ್ಟು ಎತ್ತರಕ್ಕೆ ಏರಿಸುವಂತಹ ಸಿನಿಮಾಗಳನ್ನು ನಿರ್ಮಿಸಲು ಅವರಿಂದ ಮಾತ್ರ ಸಾಧ್ಯ!
ಒಟ್ಟಿನಲ್ಲಿ ಹೇಳುವುದಾದರೆ ಒಂದು ಪ್ರೇಮ ಕಥೆ ನಿಮಗೆ ಇಷ್ಟವಾಗಿ ಕಾಡುವುದು ಅಂತೂ ನೂರಕ್ಕೂ ನೂರರಷ್ಟು ಸತ್ಯ! ಸೈಡ್ ಎ ಸಿನಿಮಾ ಎಷ್ಟು ಇಷ್ಟ ಆಗಿದೆಯೂ ಅದಕ್ಕಿಂತ ಹೆಚ್ಚು ಸೈಡ್ ಬಿ ಇಷ್ಟವಾಗುತ್ತದೆ! ಸೈಡ್ ಎ ಸಿನಿಮಾ ನೋಡಿ ಇಷ್ಟು ಸಮಯ ಸೈಡ್ ಬಿ ಸಿನಿಮಾ ನೋಡಲು ಕಾದದ್ದು ಸಾರ್ಥಕವಾಯಿತು! ಆ ಕಾತರದಿಂದಲೆ ಬಿಡುಗಡೆಗೊಂಡ ಕೂಡಲೆ ಬೇಗನೆ ನೋಡಿ ಬಂದೆ! ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ಸೈಡ್ ಎ ಸಿನಿಮಾಕ್ಕಿಂತಲೂ ಹೆಚ್ಚು ಯಶಸ್ಸನ್ನು ಪಡೆಯಲಿ,ಇಂತಹ ಇನ್ನಷ್ಟು ಸಿನಿಮಾಗಳು ಇನ್ನು ಮುಂದೆಯೂ ಬರಲಿ ಎಂದು ಆಶಿಸುತ್ತೇನೆ.ಜೊತೆಗೆ ನೀವು ಸೈಡ್ ಎ ಸಿನಿಮಾ ನೋಡದಿದ್ದರೆ ಈ ಕೂಡಲೇ ಅಮೆಜಾನ್ ಪ್ರೈಮ್ ಅಲ್ಲಿ ನೋಡಿ,ನೋಡಿ ಆಗಿದ್ದರೆ ಆದಷ್ಟು ಬೇಗ ಸೈಡ್ ಬಿ ಸಿನಿಮಾವನ್ನು ಹತ್ತಿರದ ಚಿತ್ರ ಮಂದಿರದಲ್ಲಿ ನೋಡಿ! 
ನನ್ನ ರೇಟಿಂಗ್: 5/5 ⭐️⭐️⭐️⭐️⭐️
ಬರಹ: ಶ್ರೀಕರ ಬಿ

 

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!