ಪ್ರೇಮ ಬಂಧನದ ಕಾವ್ಯ ಈ "ಸಪ್ತ ಸಾಗರದಾಚೆ ಎಲ್ಲೋ!"

ಪ್ರೇಮ ಬಂಧನದ ಕಾವ್ಯ ಈ "ಸಪ್ತ ಸಾಗರದಾಚೆ ಎಲ್ಲೋ!"



ಕನ್ನಡ ಚಿತ್ರರಂಗದಲ್ಲಿ ಈಗ ಕರಾವಳಿಯಲ್ಲಿ ಬೆಳೆದು ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಸಿನಿಮಾ ನಟರದ್ದೇ ಹವಾ! ಅದರಲ್ಲೂ ನಮ್ಮ ಶೆಟ್ಟಿ ಗ್ಯಾಂಗ್ ಅವರ ಸಿನಿಮಾಗಳು ಬಿಡುಗಡೆಗೊಂಡರೇ ಕೇಳಬೇಕೆಂದೇ ಇಲ್ಲ! ಈಗ ಅದು ಒಂದು ತರಹ ನೋಡಲೇ ಬೇಕು ಎನ್ನುವ ನಿರ್ಧಾರಕ್ಕೆ ಬರುವ ಮಟ್ಟಿಗೆ ಶೆಟ್ಟಿ ಗ್ಯಾಂಗಿನ ಸಿನಿಮಾಗಳು ಇರುತ್ತದೆ. ಕಳೆದ ವಾರ ಬಿಡುಗಡೆಗೊಂಡ "ಸಪ್ತ ಸಾರದಾಚೆ ಎಲ್ಲೋ" ಸಿನಿಮಾ ಈ ಪಟ್ಟಿಗೆ ಸೇರುವುದರಲ್ಲಿ ಎರಡು ಮಾತಿಲ್ಲ!
"777 ಚಾರ್ಲಿ" ಸಿನಿಮಾ ನೋಡಿ ಬಂದ ಬಳಿಕ ರಕ್ಷಿತ್ ಶೆಟ್ಟಿಯವರ ಮುಂದಿನ ಸಿನಿಮಾ "ಸಪ್ತ ಸಾಗರದಾಚೆ ಎಲ್ಲೋ" ಎಂದು ನನಗೆ ಗೊತ್ತಾಯಿತು. ಆದರೆ ಆಗ ನನಗೆ ಈ ಸಿನಿಮಾ ನೋಡಬೇಕೆಂದು ಅಷ್ಟು ಆಸಕ್ತಿ ಇರಲಿಲ್ಲ. ಆದರೆ ಸಿನಿಮಾ ಟ್ರೈಲರ್ ನೋಡಿದ ಮೇಲೆ ನೋಡುವ ಎಂದು ನನಗೆ ಅನ್ನಿಸಿತು. ಸಿನಿಮಾ ನೋಡಿದ ಮೇಲೆ ಈಗ ನಾನು ಥಿಯೇಟರಿನಲ್ಲಿ ನೋಡುವ ನಿರ್ಧಾರ ತೆಗೆದುಕೊಂಡದ್ದು ಬಹಳ ಒಳ್ಳೆಯದೇ ಆಯಿತು ಎಂಬ ಸಾರ್ಥಕತೆ ನನಗಾಗುತ್ತಿದೆ.
ನೀವು ಕಥೆ,ಆಕ್ಷನ್,ಪದ್ಯಗಳ ನಿರೀಕ್ಷೆಯನ್ನು ಇಟ್ಟುಕೊಂಡು ಈ ಸಿನಿಮಾ ನೋಡಿದರೆ ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಈ ಸಿನಿಮಾ ಬರಬಹುದು ಎಂದು ನಾನು ಹೇಳಲು ಅಸಾಧ್ಯ. ಈ ಸಿನಿಮಾ ಒಂದು ಕಾವ್ಯ ಇದ್ದ ಹಾಗೆ. ಮನು-ಪ್ರಿಯರ ಪ್ರೇಮ ಕಥೆಯನ್ನು ನೀವು ಇಲ್ಲಿ ಕಾಣಬಹುದಾಗಿದೆ ಹಾಗು ಅದನ್ನು ನೀವು ಸಿನಿಮಾ ನೋಡಿದ ಮೇಲೆ ಹೋಗುವಾಗ ತೆಗೆದುಕೊಂಡು ಹೋಗುತ್ತೀರಿ. ಸಿನಿಮಾದ ನಿರ್ದೇಶನ ಇದೆಯಲ್ಲ ಅದು ಅದ್ಭುತ! ಹೇಮಂತ್ ರಾವ್ ಅವರು ಅದನ್ನು ಸಾಧಿಸಿಯೇ ಬಿಟ್ಟರು! ಇನ್ನು ನಟನೆಗೆ ಬರುವುದಾದರೆ ಪ್ರಮುಖ ಪಾತ್ರಗಳಲ್ಲಿ ಕಾಣಿಸುವ ರಕ್ಷಿತ್ ಶೆಟ್ಟಿ ಹಾಗು ರುಕ್ಮಿಣಿ ವಸಂತ್ ಅವರು ನಟಿಸಿದ್ದು ಅಲ್ಲ,ಆ ಪಾತ್ರಗಳಲ್ಲಿ ಅವರು ಸ್ವತಃ ಜೀವಿಸಿದ್ದಾರೆ,ಅದು ಅವರದ್ದೇ ಸ್ವಂತ ಅನುಭವ ಎಂಬಂತೆ ಅಭಿನಯಿಸಿದ್ದಾರೆ. ಮನು-ಪ್ರಿಯರ ಪ್ರೇಮ ಕಥೆಯನ್ನು ನೋಡುತ್ತಾ ನಿಮ್ಮ ಕಣ್ಣುಗಳಲ್ಲಿ ನೀರು ಬರುವುದು ಗ್ಯಾರಂಟಿ! ಅಚ್ಯುತ್ ಕುಮಾರ್ ಅವರು ಇತ್ತೀಚೆಗೆ ನೆಗೆಟಿವ್ ಪಾತ್ರಗಳನ್ನು ಜಾಸ್ತಿ ಒಪ್ಪಿಕೊಳ್ಳುತ್ತಾರೋ ಎಂಬುದು ನನಗೆ ಸಂದೇಹ! ಕಾಂತಾರ ನೋಡಿದರೆ ಅಲ್ಲಿಯೂ ಅವರದ್ದು ನೆಗೆಟಿವ್ ಪಾತ್ರ. ಕೊನೆಗೆ ಶಿವನಿಗೆ ಮೋಸ ಮಾಡುತ್ತಾರೆ. ಈ ಸಿನಿಮಾದಲ್ಲೂ ಅವರದ್ದು ನೆಗೆಟಿವ್ ಪಾತ್ರ. ಆದರೆ ಇಲ್ಲಿ ಅವರದ್ದು ಪ್ರಮುಖ ಪಾತ್ರ ಅಲ್ಲ! ಅವರ ಪಾತ್ರ ಎಂತಹದ್ದು ಎಂದು ಸಿನಿಮಾದಲ್ಲಿ ನೋಡಿ! ಮನುವಿನ ಆ ಮುಗ್ಧತೆ,ಪ್ರಿಯನ ಮೇಲೆ ಇರುವ ಪ್ರೀತಿ,ತನ್ನ ಆರ್ಥಿಕ ಅಸಹಾಯಕತೆಯಿಂದ ತಾನು ಮಾಡದ ತಪ್ಪಿಗೆ ತನ್ನ ಮಾಲೀಕ(ಶೇಖರ್ ಗೌಡ) ಕೊಡುವ ಹಣದ ಒಪ್ಪಂದಕ್ಕೆ ಒಪ್ಪಿ ಮಾಲೀಕನ ಮಗನ ಬದಲಿಗೆ ಸ್ವತಃ ತಾನು ಜೈಲು ಸೇರಿ,ಅಲ್ಲಿ ಅನುಭವಿಸುವ ಕಷ್ಟಗಳು,ಮನುವನ್ನು ರಕ್ಷಿಸಲು ಪ್ರಿಯ ಅನುಭವಿಸುವ ಕಷ್ಟಪಾಡುಗಳನ್ನು ನೀವು ನೋಡಿ, ಅದು ನಿಮ್ಮ ಹೃದಯವನ್ನು ಖಂಡಿತವಾಗಿಯೂ ಕರಗಿಸುತ್ತದೆ.ಅಷ್ಟೇ ಅಲ್ಲ,ಪ್ರಮುಖ ಜೈಲುಗಳಲ್ಲಿ ದೊಡ್ಡ ಕೈದಿಗಳ ಬಣಗಳು,ಜೈಲು ಸೇರುವ ಹೊಸ ಕೈದಿಗಳಿಗೆ ಕೊಡುವ ಹಿಂಸೆ ಇವೆಲ್ಲವನ್ನು ಇಲ್ಲಿ ಕಾಣಬಹುದು. ಅದರಲ್ಲಿಯೂ ಜೈಲಿನಲ್ಲಿ ಪ್ರಮುಖ ಕೈದಿ ಸೋಮನಾಗಿ ನಟಿಸುವ ರಮೇಶ್ ಇಂದ್ರಾ ಅವರ ಎರಡು ಮುಖಗಳು ಇಲ್ಲಿ ನೋಡಬಹುದು. ನನಗೆ ಪ್ರತಿ ಬಾರಿಯೂ ಕಾಡುವುದು ಗೋಪಾಲಕೃಷ್ಣ ದೇಶಪಾಂಡೆಯವರ ನಟನೆ. ಗರುಡ ಗಮನ ವೃಷಭ ವಾಹನ, 777 ಚಾರ್ಲಿ,ಟೋಬಿ, ಈಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಇವರ ನಟನೆ ನನ್ನ ಮನಸ್ಸಿಗೆ ಬಹಳ ನಾಟಿತ್ತು. ತದನಂತರ 777 ಚಾರ್ಲಿ ಮೂವಿಯಲ್ಲಿ ಇವರ ನಟನೆಯು ನನಗೆ ಬಹಳ ಇಷ್ಟವಾಗಿತ್ತು. ಈ ಸಿನಿಮಾದಲ್ಲೂ ಸಣ್ಣ ಪಾತ್ರದಲ್ಲಿ ಇವರು ನಟಿಸಿದ್ದರೂ, ಜೈಲಿನಲ್ಲಿ ಮನುವಿನ ಸ್ನೇಹಿತನಾಗಿ ಇವರು ಇರುತ್ತಾರೆ. ಆರಂಭದಲ್ಲಿ ಮನುವಿನ ಜೊತೆಗಿನ ಪ್ರಮುಖ ಕೈದಿಯಾಗಿರುವ ಸೋಮನ(ರಮೇಶ್ ಇಂದ್ರ ಅವರ ಪಾತ್ರ) ನಕಲಿ ಆತ್ಮೀಯತೆ,ಶೇಖರ್ ಗೌಡ(ಅವಿನಾಶ್ ಅವರು ನಟಿಸಿದ ಪಾತ್ರ) ನಿಧನರಾದ ಮೇಲೆ ಸೋಮ ಮನುವಿಗೆ ಕೊಡುವ ಹಿಂಸೆ ನಿಮಗೆ ಕಥೆಯಲ್ಲಿ ಒಂದು ರೀತಿಯ ತಿರುವ ನೀಡಿದಂತೆ ಕಾಣುತ್ತದೆ. ಇನ್ನು ಸಿನಿಮಾದ ಸಂಗೀತಕ್ಕೆ ಬರುವುದಾದರೆ ಈ ಸಿನಿಮಾದಲ್ಲಿ ನಿಮಗೆ ಹಾಡುಗಳು ಸಿಗುವುದು ಬಹಳ ಕಡಿಮೆ. ಶೀರ್ಷಿಕೆ ಪದ್ಯ ಸೇರಿ ಒಟ್ಟು ಎರಡು ಹಾಡುಗಳನ್ನು ನೀವು ಈ ಸಿನಿಮಾದಲ್ಲಿ ನೋಡಬಹುದು. ಹಿನ್ನೆಲೆ ಗಾಯನ ಆ ಸನ್ನಿವೇಶದ ಭಾವನೆಯನ್ನು ಎತ್ತಿ ಹಿಡಿಯುತ್ತದೆ. ಸಿನಿಮಾಟೊಗ್ರಾಫಿಯು ಬಹಳ ಚೆನ್ನಾಗಿ ಮೂಡಿಬಂದಿದೆ. ಅದರ ಬಗ್ಗೆಯು ಒಂದು ಮಾತಿಲ್ಲ. ಎಲ್ಲಕ್ಕಿಂತ ಹೆಚ್ಚು ನಿರ್ದೇಶನ! ನಾನು ಮೊದಲೇ ಹೇಳಿದ ಹಾಗೆ ಹೇಮಂತ್ ರಾವ್ ಅವರ ನಿರ್ದೇಶನ ಅತ್ಯದ್ಭುತ! ಈ ಸಿನಿಮಾದ ಯಶಸ್ಸು ಅವರ ನಿರ್ದೇಶನದಲ್ಲಿಯೇ ಅಡಗಿದೆ. ಈ ಸಿನಿಮಾದ ಕಥೆ ನಿಮಗೆ ಸಂಪೂರ್ಣವಾಗಿ ಅರ್ಥ ಆಗಬೇಕಾದರೆ, ಒಂದು ನೀವು ಸಂಪೂರ್ಣ ಸಿನಿಮಾ ನೋಡಬೇಕು,ಇನ್ನೊಂದು ಮುಂದಿನ ಭಾಗ ನೋಡಬೇಕು! ನೀವು ಸಿನಿಮಾದ ಆರಂಭದಲ್ಲಿಯೇ ಸಂಪೂರ್ಣವಾಗಿ ಮಗ್ನರಾದರೆ,ಸಿನಿಮಾದ ಕೊನೆಯ ತನಕ ಖಂಡಿತವಾಗಿಯೂ ಸಿನಿಮಾದ ಒಳಗೆ ಬಿದ್ದು ಹೋಗುತ್ತೀರಿ! ಒಂದೊಂದು ಹಂತ ನಿಮ್ಮ ಗಮನವನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಳ್ಳುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಇಬ್ಬರ ನಡುವಿನ ಪ್ರೇಮ ಕಥನದ ಈ ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ಮುಂದಿನ ಭಾಗದ ನಿರೀಕ್ಷೆಯು ಇನ್ನಷ್ಟು ಹೆಚ್ಚಾಗಿದೆ. ಮುಂದಿನ ಭಾಗ ನೋಡುವ ಕಾತರದೊಂದಿಗೆ ಈ ಲೇಖನವನ್ನು ಅಂತ್ಯಗೊಳಿಸುತ್ತೇನೆ.
ನನ್ನ ರೇಟಿಂಗ್: 5/5⭐️⭐️⭐️⭐️⭐️
🖊ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!