ನನ್ನ ಕಾಲೇಜು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ನೀಡುವ ಮಹಾನ್ ಗುರುಗಳು ಇವರು!

 ನನ್ನ ಕಾಲೇಜು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ನೀಡುವ ಮಹಾನ್ ಗುರುಗಳು ಇವರು!



ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ |

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ||

ಗುರುಗಳೆಂದರೆ ಕೇವಲ ತರಗತಿಯಲ್ಲಿ ಪಾಠ ಮಾಡುವವರೇ ಆಗಬೇಕಿಲ್ಲ. ಜೀವನದಲ್ಲಿ ಕೇವಲ ಒಂದು ಘಳಿಗೆಗೆ ಮಾರ್ಗದರ್ಶನ ಮಾಡಿದವರು,ಏನಾದರು ಸಣ್ಣಪುಟ್ಟದ್ದನ್ನು ಹೇಳಿಕೊಟ್ಟವರು ಸಹ ಗುರುಗಳೇ. ಜೀವನದಲ್ಲಿ ಒಬ್ಬ ವ್ಯಕ್ತಿಗೆ ಮಾರ್ಗದರ್ಶನ ನೀಡುವ ಸೂಕ್ತ ಮಾರ್ಗದರ್ಶಕರು ಆ ವ್ಯಕ್ತಿಗೆ ಗುರು. ಹೀಗೆ ಗುರು ಎಂಬ ಸ್ಥಾನಕ್ಕೆ ಹಲವಾರು ವ್ಯಾಖ್ಯಾನಗಳನ್ನು ನಾವು ನೀಡಬಹುದು. ಆದರೆ ಗುರುವಿನ ಸ್ಥಾನ ಮಾತ್ರ ಅದು ಶ್ರೇಷ್ಠ ಸ್ಥಾನ. ಆ ಸ್ಥಾನಕ್ಕೆ ಪ್ರತಿಯೊಬ್ಬನು ಗೌರವ ನೀಡಲೇಬೇಕು. ಕಳೆದ ವರ್ಷ ಗುರು ಪೂರ್ಣಿಮೆಯ ಈ ಶುಭ ದಿನದಂದು ನನ್ನ ಗುರುಗಳನ್ನು ಪರಿಚಯಿಸಿ ಅವರಿಗೆ ಗೌರವ ಸಲ್ಲಿಸುವ ಕಾರ್ಯ ನಾನು ಆರಂಭಿಸಿದ್ದೆ. ಈ ವರ್ಷ ನನ್ನ ಎಂಜಿನಿಯರಿಂಗ್ ಶಿಕ್ಷಣದ ಹಾದಿಯಲ್ಲಿ ನನ್ನ ಮಾರ್ಗದರ್ಶಕರಾಗಿದ್ದು,ನನ್ನ ಒಳಗೆ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿದ ನನ್ನ ಗುರುಗಳನ್ನು ಸ್ಮರಿಸಿ,ನಿಮಗೆ ಪರಿಚಯ ಮಾಡಲು ನಾನು ಇಚ್ಛಿಸುತ್ತೇನೆ.


ಆ ಶ್ರೇಷ್ಠ ಗುರುಗಳೇ ನನ್ನ ಮಾರ್ಗದರ್ಶಕರು ಶ್ರೀ ರಿತೇಶ್ ಪಕ್ಕಳ ಸರ್. ನಾನು ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿಗೆ ಸೇರಿದ ನಂತರ ಒಂದು ದಿನ ಆಯಾಯ ವಿಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರನ್ನು ನಿಯೋಜಿಸಲಾಗಿತ್ತು. ನಾನು ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ. ಹಾಗೆ ಈ ವಿಭಾಗದ ಎಲ್ಲಾ ಉಪನ್ಯಾಸಕರಿಗೆ ವಿದ್ಯಾರ್ಥಿಗಳನ್ನು ವಿಂಗಡಿಸಿ ನಿಯೋಜಿಸಲಾದಾಗ ನನಗೆ ಮಾರ್ಗದರ್ಶಕರಾಗಿ ಸಿಕ್ಕವರು ಶ್ರೀ ರಿತೇಶ್ ಪಕ್ಕಳ ಸರ್. ರಿತೇಶ್ ಸರ್ ಅವರನ್ನು ಮೊದಲ ಬಾರಿಗೆ ಭೇಟಿ ಆದಾಗ ನಮ್ಮ ಪರಿಚಯವನ್ನು ಅವರು ಕೇಳಿದರು. ನಂತರ ಅವರು ತಮ್ಮ ಪರಿಚಯವನ್ನು ಸಹ ನೀಡಿದರು. ಇನ್ನೊಂದು ಸಂಗತಿ ಏನೆಂದರೆ ಅವರು ಸಹ್ಯಾದ್ರಿ ಕಾಲೇಜಿನ ಹಿರಿಯ ವಿದ್ಯಾರ್ಥಿ. ಅವರು ಕಾಲೇಜಿನಲ್ಲಿ ಅತ್ಯುತ್ತಮ ರ‍್ಯಾಂಕ್ ಪಡೆದ ವಿದ್ಯಾರ್ಥಿ ಕೂಡ. ನಾನು ಸಹ್ಯಾದ್ರಿ ಕಾಲೇಜಿಗೆ ಸೇರುವ ಮೊದಲೇ ಲೇಖನ ಬರೆಯುವ ಹವ್ಯಾಸ ಬೆಳೆಸಿಕೊಂಡು ಫೇಸ್ಬುಕ್ ಪುಟದಲ್ಲಿ ಬರೆಯುತ್ತಿದ್ದೆ. ಪ್ರಥಮ ವರ್ಷದಲ್ಲಿ ನಾನು ಅಧ್ಯಯನ ಮಾಡುತ್ತಿರುವಾಗ ನನ್ನದೊಂದು ಬ್ಲಾಗ್ ಪುಟ ತೆರೆಯುವ ಆಲೋಚನೆ ಬಂದು ಅದರಲ್ಲಿ ನನ್ನ ಲೇಖನಗಳನ್ನು ಪ್ರಕಟಗೊಳಿಸುತ್ತಿರುವಾಗ ನಾನು ಆ ಲೇಖನಗಳ ಲಿಂಕ್ ಅನ್ನು ನನ್ನ ವಾಟ್ಸಾಪ್ ಸ್ಟೇಟಸಿನಲ್ಲಿ ಹಂಚುತ್ತಿದ್ದೆ. ಅವೆಲ್ಲವನ್ನು ಗಮನಿಸಿ ನಾನು ಬರೆದ ಲೇಖನಗಳನ್ನು ಓದುತ್ತಿದ್ದ ರಿತೇಶ್ ಸರ್ ದ್ವಿತೀಯ ವರ್ಷದ ಎಂಜಿನಿಯರಿಂಗ್ ಅಧ್ಯಯನಕ್ಕೆ ನಾನು ಕಾಲಿಟ್ಟಾಗ ನನ್ನ ಬರವಣಿಗೆ ಶೈಲಿಯನ್ನು ನೋಡಿ ಸಂತೋಷಗೊಂಡು ವಿಭಾಗದ ಕಾರ್ಯಕ್ರಮದ ಬಗ್ಗೆ ಒಂದು ಲೇಖನ ಬರೆಯಲೇಬೇಕು ಎಂದು ನನಗೆ ಹೇಳಿದರು. ನಾನು ಅದಕ್ಕೆ ಒಪ್ಪಿಕೊಂಡೆ. ಅದನ್ನು ನೋಡಿ ಅವರು ಬಹಳ ಸಂತೋಷಗೊಂಡಿದ್ದರು. ನಾನು ಬರೆದ ಆ ಲೇಖನಕ್ಕೆ ಉತ್ತಮ ಸ್ಪಂದನೆ ನನಗೆ ದೊರಕಿತಲ್ಲದೆ ಕಾಲೇಜಿನಲ್ಲಿ ನನಗೊಂದು ಸಾಧನೆಯ ಗುರುತು ಸಿಕ್ಕಿತು. ಅಲ್ಲಿಂದ ಆರಂಭಗೊಂಡು ಕಾಲೇಜಿನಲ್ಲಿ ನಡೆದ ಕೆಲವು ಕಾರ್ಯಕ್ರಮಕ್ಕೆ,ಎನ್.ಎಸ್.ಎಸ್ ಶಿಬಿರಕ್ಕೆ ಸಂಬಂಧಿಸಿದ ಲೇಖನ,ವರದಿಗಳನ್ನು ಬರೆಯುವ ಅಭ್ಯಾಸ ಈಗಲು ಮುಂದುವರಿದಿದೆ. ಇದಕ್ಕೆಲ್ಲ ಮೂಲ ಕಾರಣಕರ್ತರು ನನ್ನ ಮಾರ್ಗದರ್ಶಕರಾದ ರಿತೇಶ್ ಸರ್. ರಿತೇಶ್ ಸರ್ ಅವರ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ,ಆ ಯೋಗ್ಯತೆಯು ನನಗಿಲ್ಲ. ಆದರೂ ಅವರ ಬಗ್ಗೆ ಹೇಳಬೇಕೆಂದರೆ ರಿತೇಶ್ ಸರ್ ಶಿಸ್ತಿನ ಸಿಪಾಯಿ,ವಿದ್ಯಾರ್ಥಿ ಆಗಿರಲಿ ಅಥವ ಉಪನ್ಯಾಸಕರು,ಇತರರು ಯಾರೇ ಆಗಿರಲಿ ಪ್ರತಿಯೊಬ್ಬರಿಗೆ ಗೌರವ ಕೊಟ್ಟು ಮಾತನಾಡುವವರು ಅವರು. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮಾರ್ಗದರ್ಶಕರು ಅವರು. ರಿತೇಶ್ ಸರ್ ಒರ್ವ ಕ್ರೀಡಾಪಟು ಕೂಡ. ಅತ್ಯುತ್ತಮ ಕ್ರಿಕೆಟಿಗ ಕೂಡ. ಕಳೆದ ವರ್ಷ ನಡೆದ ನಮ್ಮ ವಿಭಾಗದ ಕ್ರಿಕೆಟ್ ಕೂಟ ಐ.ಎಸ್.ಪಿ.ಎಲ್ 2022ನೇ ಆವೃತ್ತಿಯಲ್ಲಿ ಅಧಿಕ ರನ್ ಗಳಿಸಿದ ಬ್ಯಾಟ್ಸ್‌ಮಾನ್ ಇವರು. ಹೀಗೆ ಹೇಳಲು ಹೊರಟರೆ ಹಲವಾರು ಇದೆ. ನನ್ನೊಗಳಿದ್ದ ಒಂದು ಸಣ್ಣ ಪ್ರತಿಭೆಯನ್ನು ಗುರುತಿಸಿ ಅದನ್ನು ಪೋಷಿಸಿ,ನನಗೆ ಬೆಂಬಲ ನೀಡುತ್ತಿರುವ ಮಹಾತ್ಮರಿಗೆ ಗೌರವ ಸಲ್ಲಿಸುವುದು ನನ್ನ ಕರ್ತವ್ಯ ಆಗಿತ್ತು. ಯಾವುದೇ ವಿದ್ಯಾರ್ಥಿ ಆಗಿರಲಿ ಅವರ ಬಳಿ ಹೋದರೆ ಸೂಕ್ತ ಮಾರ್ಗದರ್ಶನ ನೀಡಿಯೇ ಕಳುಹಿಸುವವರು ರಿತೇಶ್ ಸರ್. ಆದ್ದರಿಂದ ಈ ವರ್ಷದ ಗುರು ಪೂರ್ಣಿಮೆಯ ದಿನ ರಿತೇಶ್ ಸರ್ ಅವರ ಬಗ್ಗೆ ಒಂದು ಲೇಖನ ಬರೆಯಬೇಕೆಂದು ನನ್ನ ಸಂಕಲ್ಪ ಆಗಿತ್ತು. ಆ ಸಂಕಲ್ಪವನ್ನು ಕೈಗೊಳ್ಳಲು ಗುರು ಪೂರ್ಣಿಮೆಯ ದಿನಕ್ಕಿಂತ ಬೇರೊಂದು ಶ್ರೇಷ್ಠ ದಿನ ಇರಲು ಉಂಟೇ? 

ಗುರು ಪೂರ್ಣಿಮೆಯ ಈ ಶುಭ ದಿನದಂದು ನನ್ನ ನೆಚ್ಚಿನ ಗುರುಗಳು,ನನಗೆ ಸದಾ ಪ್ರೋತ್ಸಾಹ,ಮಾರ್ಗದರ್ಶನ ನೀಡುವ ಶ್ರೀ ರಿತೇಶ್ ಪಕ್ಕಳ ಸರ್ ಅವರಿಗೆ ಪ್ರಣಾಮಗಳನ್ನು ಸಲ್ಲಿಸುತ್ತಾ,ನನ್ನ ಎಲ್ಲಾ ಗುರುಗಳಿಗೂ ಪ್ರಣಾಮಗಳನ್ನು ಸಲ್ಲಿಸುತ್ತಾ ಗುರು ಪೂರ್ಣಿಮೆಯ ಶುಭಾಶಯಗಳನ್ನು ತಿಳಿಸಿ ಈ ಲೇಖನವನ್ನು ಅಂತ್ಯಗೊಳಿಸುತ್ತಿದ್ದೇನೆ.

||ಶ್ರೀ ಗುರುಭ್ಯೋ ನಮಃ||

🖊ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!