ದಾಮಾಯಣ- ಇದು ದಾಮೋದರನ ಕಥಾಯಣ!

 
ದಾಮಾಯಣ- ಇದು ದಾಮೋದರನ ಕಥಾಯಣ!

ಕಳೆದ ಹಲವು ದಿನಗಳಿಂದ ಕರಾವಳಿ ಕರ್ನಾಟಕದಾದ್ಯಂತ ಅದರಲ್ಲಿಯೂ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ಕೇಳಿ ಬರುತ್ತಿರುವ ಮಾತು ಇದು: "ನೀವು ದಾಮಾಯಣ ನೋಡಿದಿರಾ? ಹೇಗುಂಟು ಸಿನಿಮಾ? ನಮ್ಮ ಊರಿನವರೇ ಮಾಡಿದ ಸಿನಿಮಾ ಅಂತೆ ಅಲ್ಲ?" 
 

ಹೌದು! ದಾಮಾಯಣ ನಮ್ಮೂರಿನ ಪ್ರತಿಭೆಗಳು ನಿರ್ಮಿಸಿದ ಸಿನಿಮಾ! ಡ್ಯೂಡ್ ದಾಮೋದರನ ಕಥೆಯನ್ನು ಹೇಳುವ ಸಿನಿಮಾವಿದು. ನಮ್ಮ ಪುತ್ತೂರಿನಲ್ಲಿ ಬಹುತೇಕ ಚಿತ್ರೀಕರಣಗೊಂಡ ಸಿನಿಮಾವಿದು. ಪ್ರಸ್ತುತ ಚಿತ್ರರಂಗದಲ್ಲಿ ಅಬ್ಬರಿಸುತ್ತಿರುವ "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ,ಓಪನ್ಹೈಮರ್" ಸಿನಿಮಾಗಳ ನಡುವೆ ಯಶಸ್ವಿಯಾಗಿ ಎರಡನೆಯ ವಾರದ ಪ್ರದರ್ಶನ ಮುಗಿಸಿ ಮೂರನೆಯ ವಾರ ಪ್ರದರ್ಶನಗೊಳ್ಳುತ್ತಿರುವ ಸಿನಿಮಾವಿದು.
ದಾಮಾಯಣ ಸಿನಿಮಾ ಒಬ್ಬ ಹಳ್ಳಿಯಲ್ಲಿ ಬೆಳೆದು,ನಗರದ ಜೀವನ ಗೊತ್ತಿಲ್ಲದ ಮನುಷ್ಯ,ನಗರಕ್ಕೆ ಕೆಲಸ ಆರಿಸಿಕೊಂಡು ಬಂದು,ಕೆಲಸ,ಹಣದ ಹೆಸರಿನಲ್ಲಿ ವಂಚನೆಗೊಳಗಾಗಿ ಕಷ್ಟ ಅನುಭವಿಸುತ್ತಾನೆ,ಅಹಂಕಾರಿ ಆಗಿದ್ದವನ ಅಹಂಕಾರ ಹೇಗೆ ಇಳಿಯುತ್ತದೆ,ಯಾವುದೇ ಉದ್ಯೋಗ ಆದರು ಸಹ ಅದು ಎಷ್ಟು ಮಹತ್ವ ಸಾರುತ್ತದೆ,ಹಣಕ್ಕಿಂತಲೂ ನೆಮ್ಮದಿ,ಮಾನವೀಯತೆ ಎಷ್ಟು ಮುಖ್ಯ ಎಂದು ತಿಳಿಸುತ್ತದೆ. ಒಂದು ಉತ್ತಮ ಸಂದೇಶವನ್ನು ಹಾಸ್ಯ ಬರಿತವಾಗಿ ಈ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಿರ್ದೇಶಕರು ತೋರಿಸಿದ್ದಾರೆ.
ಕಥೆಯ ನಾಯಕ ದಾಮೋದರ. ಒಬ್ಬ ಹಳ್ಳಿಯ ಹುಡುಗ. ಅವನು ನಿರುದ್ಯೋಗಿ. ಕೆಲಸ ಆರಿಸಿಕೊಂಡು ಪೇಟೆಗೆ ಬಂದು ಕೆಲಸ ಯಾವುದೂ ಸಿಕ್ಕದೆ,ಅವನಿಗಾಗುವ ಮೋಸ,ಮತ್ತೆ ಅವನು ನಡೆಸುವ ಜೀವನ ಈ ಸಿನಿಮಾದಲ್ಲಿ ನೋಡಬಹುದು. ಸಿನಿಮಾದ ಬಹುತೇಕ ಭಾಗದಲ್ಲಿ ಹಾಸ್ಯ ಇದ್ದೇ ಇದೆ. ಇದರಿಂದ ಸಿನಿಮಾ ನೋಡುವ ಪ್ರತಿ ಪ್ರೇಕ್ಷಕನಿಗೂ ಉದಾಸೀನ ಅಂತು ಖಂಡಿತ ಆಗಲು ಸಾಧ್ಯವಿಲ್ಲ. ಒಂದು ಸಣ್ಣ ಪಾತ್ರದಿಂದ ಹಿಡಿದು ಕಥಾ ನಾಯಕ,ನಾಯಕಿಯ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ತುಂಬಾ ಸರಳವಾದ ವೇಷಭೂಷಣ,ಪ್ರತಿಯೊಬ್ಬರ ಸಹಜ ನಟನೆ ಈ ಸಿನಿಮಾದ ಬೆಲೆಯನ್ನು ಎತ್ತಿ ಹಿಡಿಯುತ್ತದೆ. ಹಳ್ಳಿ ಜನರ ಸರಳ ಜೀವನ ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ನೋಡಬಹುದು. 
 

ಸಿನಿಮಾದ ಬಗ್ಗೆ ಹೇಳುವುದಾದರೆ ಕಾಂತಾರ ಸಿನಿಮಾದ ನಂತರ ನಾನು ನೋಡಿದ ಸಿನಿಮಾಗಳಲ್ಲಿ ಪಾತ್ರಗಳ ಇಷ್ಟು ಸರಳ ವೇಷಭೂಷಣ,ಸಹಜ ನಟನೆ ನೋಡಿದ್ದು ದಾಮಾಯಣ ಸಿನಿಮಾದಲ್ಲಿ. ಕಾಂತಾರ ನೋಡಲು ಕುಟುಂಬ ಸಮೇತ ನಮ್ಮ ಸುತ್ತಮುತ್ತಲಿನ ಪ್ರದೇಶ ಜನರು ಥಿಯೇಟರಿಗೆ ಹೋಗುತ್ತಿದ್ದರು.ಅದೇ ರೀತಿ ಕುಟುಂಬ ಸಮೇತರಾಗಿ ದಾಮಾಯಣ ನೋಡಲು ಹೋಗುತ್ತಿದ್ದಾರೆ. ಸಿನಿಮಾದ ನಿರ್ದೇಶನವನ್ನು ನಿರ್ದೇಶಕ ಹಾಗು ನಾಯಕನಾದ ದಾಮೋದರನ ಪಾತ್ರ ನಿರ್ವಹಿಸಿದ ಶ್ರೀಮುಖ ಅವರು ತುಂಬಾ ಚೆನ್ನಾಗಿ ಮಾಡಿದ್ದಾರೆ. ಅವರ ಪ್ರಥಮ ನಿರ್ದೇಶನ,ಯಾವುದೇ ಅನುಭವವಿಲ್ಲದಿದ್ದರೂ ಅದು ಸ್ವಲ್ಪವು ಸಿನಿಮಾದಲ್ಲಿ ಗೊತ್ತಾಗುವುದಿಲ್ಲ. ಒಬ್ಬ ಅನುಭವಸ್ಥ,ಉತ್ತಮ ನಿರ್ದೇಶಕ ಮಾಡಿದ ಸಿನಿಮಾದ ರೀತಿ ಈ ಸಿನಿಮಾವಿದೆ. ನನಗೆ ನಟನೆಯಲ್ಲಿ ಹೆಚ್ಚು ಇಷ್ಟವಾದದ್ದು ವಿನಾಯಕನ ಪಾತ್ರ ನಿರ್ವಹಿಸಿದ ಆದಿತ್ಯ ಬಿಕೆ ಅವರದ್ದು. ವಿನಾಯಕ ಒಬ್ಬ ಪುರೋಹಿತ ಆಗಿರುತ್ತಾನೆ. ಪುರೋಹಿತ ಹೇಗಿರಬೇಕೋ ಅದೇ ರೀತಿ ಆದಿತ್ಯ ಅವರ ವೇಷಭೂಷಣ,ನಟನೆ ಎಲ್ಲವೂ ಸಹಜವಾಗಿ ಅತ್ಯುತ್ತಮವಾಗಿ ಮೂಡಿಬಂದಿದೆ. ದಾಮೋದರನ ಪಾತ್ರವನ್ನು ಮಾಡಿದ ಶ್ರೀಮುಖ ಅವರೇ ಸಿನಿಮಾದ ಪ್ರಮುಖ ಆಕರ್ಷಣೆ. ದಾಮೋದರ ಹೇಗಿರುತ್ತಾನೆ,ಅವನ ಸ್ವಭಾವ ಎಲ್ಲವನ್ನು ಶ್ರೀಮುಖ ಅವರು ತುಂಬಾ ಚೆನ್ನಾಗಿ ತೋರಿಸಿ,ನಟಿಸಿದ್ದಾರೆ.ದಾಮೋದರನ ಪಾತ್ರದ ನಟನೆಯಲ್ಲಿ ಇನ್ನು ಸ್ವಲ್ಪ ಹೆಚ್ಚು ಭಾವನೆಗಳು ಇದ್ದರೆ ಅದರಲ್ಲೂ ಕೆಲವು ಭಾವನಾತ್ಮಕ ಸನ್ನಿವೇಶಗಳು ಇರುವ ಕಡೆ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ನನಗನಿಸಿತು. ನನ್ನ ಅಮ್ಮನು ಅದನ್ನೇ ಹೇಳುತ್ತಿದ್ದರು. ಇನ್ನು ಉಳಿದಂತೆ ಕಥಾ ನಾಯಕಿ ವಿದ್ಯಾ ಪಾತ್ರದಲ್ಲಿ ನಟಿಸಿದ ಅನಘ ಭಟ್,ದಾಮೋದರನ ತಂದೆಯ ಪಾತ್ರ ನಿರ್ವಹಿಸಿದ ವೆಂಕಟರಾಮ ಭಟ್,ತಾಯಿಯ ಪಾತ್ರ ನಿರ್ವಹಿಸಿದ ಡಾ. ಪ್ರತಿಭಾ ರೈ, ದಾಮೋದರನ ಹಾಗೆ ಕೆಲಸ ಹುಡುಕಿಕೊಂಡು ಬಂದು ಜೇಬುಗಳ್ಳನಾಗಿ ಸೆರೆ ಸಿಕ್ಕಿ ನಂತರ ಜೈಲಿಂದ ಬಿಡುಗಡೆಗೊಂಡು ಚಹಾ ಮಾರುವ ವ್ಯಕ್ತಿಯ ಪಾತ್ರ ನಿರ್ವಹಿಸಿದ ನಟರು, ದಿನಪತ್ರಿಕೆ ಮಾರುವ ಅಜ್ಜನ ಪಾತ್ರ ನಿರ್ವಹಿಸಿದ ಯಕ್ಷಗಾನದ ಮೇರು ಕಲಾವಿದ, ಹಾಸ್ಯಬ್ರಹ್ಮ ಪೆರುವೋಡಿ ನಾರಾಯಣ ಭಟ್ ಸೇರಿದಂತೆ ಉಳಿದ ಎಲ್ಲಾ ನಟರು ತುಂಬ ಚೆನ್ನಾಗಿ ನಟಿಸಿದ್ದಾರೆ. ಹೆಚ್ಚು ಸಿನಿಮಾ ನೋಡಿ ಗೊತ್ತಿಲ್ಲದಿದ್ದವರಿಗೆ ಅಥವ ಎಷ್ಟೋ ಸಮಯದ ನಂತರ ಸಿನಿಮಾ ನೋಡುವವರಿಗೆ ಇವರು ಯಾರು ಕೂಡ ಪ್ರಥಮ ಬಾರಿಗೆ ನಟಿಸುತ್ತಿದ್ದಾರೆ ಎಂದು ಅನಿಸಲು ಸಾಧ್ಯವಿಲ್ಲ. ಸಿನಿಮಾದ ಹಾಡುಗಳು,ಸಂಗೀತ,ಹಿನ್ನಲೆ ಗಾಯನ ಚೆನ್ನಾಗಿ ಸಂಗೀತ ನಿರ್ದೇಶಕರಾದ ಕೀರ್ತನ್ ಬಾಳಿಲ ಅವರು ನಿರ್ದೇಶಿಸಿದ್ದಾರೆ. ನನಗೆ ಸಿನಿಮಾದಲ್ಲಿ ಅತಿ ಹೆಚ್ಚು ಇಷ್ಟವಾದದ್ದು ಅಚ್ಛ ಮಂಗಳೂರು ಕನ್ನಡ ಕೇಳಲು! ನಮ್ಮ ಮಂಗಳೂರು ಕನ್ನಡ ಕೇಳುವುದೇ ಒಂದು ಆನಂದ. ಮಂಗಳೂರು ಕನ್ನಡದ ಸೌಂದರ್ಯವೇ ಬೇರೆ. ಈ ಮಂಗಳೂರು ಕನ್ನಡದಲ್ಲಿ ನಾವು ಬಳಸುವ ಒಳ್ಳೆ ಒಳ್ಳೆ ಪದಗಳು(ಅಂದಾಜು ಆಯಿತಲ್ಲ!), ಅಪ್ಪ-ಅಮ್ಮ ತಮ್ಮ ಮಕ್ಕಳಿಗೆ ಬಯ್ಯುವಾಗ ಬಳಸುವ ಪದಗಳು,ಶೈಲಿ ಎಲ್ಲಾ ಈ ಸಿನಿಮಾದಲ್ಲಿ ನಾವು ನೋಡಬಹುದು! ಅದು ಎಲ್ಲಾ ನಾವು ಬಳಸುವ ಪದಗಳೇ! ಸಿನಿಮಾದ ಕಥೆಯು ಕುತೂಹಲಕಾರಿಯಿದೆ. ಮುಂದೆ ಏನಾಗಬಹುದು ಎಂಬ ಕುತೂಹಲ ನೋಡುವವರಲ್ಲಿ ಇರುವಂತೆ ಇದು ಮಾಡುತ್ತದೆ. ಕೆಲವು ಕಡೆ ಬರುವ ತಿರುವುಗಳು ನೋಡುವವರಿಗೆ ಸ್ವಲ್ಪವೂ ಉದಾಸೀನ ಹಿಡಿಯದಂತೆ ಮಾಡುತ್ತದೆ. ಸಿನಿಮಾದ ಕೊನೆಯ ದೃಶ್ಯವನ್ನು ಸಹ ಚೆನ್ನಾಗಿ ನಿರ್ಮಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ದಾಮಾಯಣ ಕುಟುಂಬ ಸಮೇತರಾಗಿ ನೋಡಬಹುದಾದಂತಹ ಉತ್ತಮ ಸಿನಿಮಾ. ಹಿಟ್ ಆಗುವಂತಹ ಸಿನಿಮಾವೇ ಇದು. ಹಿಟ್ ಆಗಲು ನಮ್ಮೆಲ್ಲರ ಬೆಂಬಲ ಇದ್ದರೆ ಸಾಕು! 

 
ಬಹುಶ 2015ರಲ್ಲಿ ಬಿಡುಗಡೆಗೊಂಡ "ಕನಸು ಕಣ್ಣು ತೆರೆದಾಗ" ಸಿನಿಮಾ ಬಿಟ್ಟರೆ ನಂತರ ಪುತ್ತೂರಿನಲ್ಲಿ ಚಿತ್ರೀಕರಣಗೊಂಡ ಕನ್ನಡ ಸಿನಿಮಾ ಎಂದರೆ ಅದು ದಾಮಾಯಣವೇ ಇರಬೇಕು. ಏನಿದ್ದರೂ ಸ್ಥಳೀಯರು,ಹೊಸಬರೇ ಸೇರಿಕೊಂಡು ನಿರ್ಮಿಸಿದ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕನ್ನಡ ಚಿತ್ರಗಳು ಥಿಯೇಟರಿನಲ್ಲಿ ಬಿಡುಗಡೆಗೊಂಡ ಕೆಲವು ತಿಂಗಳುಗಳಲ್ಲಿ ಒಟಿಟಿಗಳಲ್ಲಿ ಬಿಡುಗೊಳ್ಳುತ್ತದೆ. ಅದೇ ರೀತಿ ದಾಮಾಯಣವು ಬಿಡುಗಡೆಗೊಂಡು ಮತ್ತೆ ನೋಡುವಂತೆ ಆಗಬೇಕು ಎಂಬುದು ನನ್ನ ಅನಿಸಿಕೆ. ಸಿನಿಮಾ ನೋಡಿರದಿದ್ದರೇ ಹತ್ತಿರದಲ್ಲಿರುವ ಥಿಯೇಟರಿಗೆ ದಾಮೋದರನ ಕಥೆ ಕೇಳಿ ಬನ್ನಿ! ಸಿನಿಮಾ ನೋಡಿದ್ದರೆ ನಿಮ್ಮ ಅಭಿಪ್ರಾಯ ತಿಳಿಸಿ,ಜೊತೆಗೆ ನನ್ನ ಲೇಖನ ಹೇಗಿದೆ ಎಂದು ಸಹ ಓದಿ ತಿಳಿಸಿ!
ದಾಮಾಯಣ ಚಿತ್ರ ಸುಪರ್ ಹಿಟ್ ಆಗಲಿ,ಚಿತ್ರ ತಂಡ ಇನ್ನು ಹೆಚ್ಚು ಯಶಸ್ಸನ್ನು ಪಡೆಯಲಿ ಹಾಗು ಒಟಿಟಿಯಲ್ಲೂ ಬಿಡುಗಡೆಗೊಂಡು ಅಲ್ಲಿಯೂ ಸದ್ದು ಮಾಡುವಂತೆ ಆಗಲಿ ಎಂದು ಹಾರೈಸುತ್ತಾ ನನ್ನ ಲೇಖನವನ್ನು ಅಂತ್ಯಗೊಳಿಸುತ್ತೇನೆ.
ನನ್ನ ರೇಟಿಂಗ್: 5/5⭐️⭐️⭐️⭐️⭐️
ಬರಹ: ಶ್ರೀಕರ ಬಿ

Comments

Post a Comment

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!