ನನ್ನ ವಾರಾಂತ್ಯದ ಬಿಸ್ಲೆ -ಪಟ್ಲ ಬೆಟ್ಟ ಪ್ರವಾಸ!
ನನ್ನ ವಾರಾಂತ್ಯದ ಬಿಸ್ಲೆ -ಪಟ್ಲ ಬೆಟ್ಟ ಪ್ರವಾಸ!
ಕೆಲವೊಮ್ಮೆ ಈ ಮಾನಸಿಕ ಒತ್ತಡ,ಜಂಜಾಟದ ನಗರ ಜೀವನಕ್ಕಿಂತ ಪ್ರಕೃತಿಯ ನಡುವೆ ನಿಸರ್ಗದ ಸೌಂದರ್ಯ ಸವಿಯುತ್ತಾ ಹಳ್ಳಿಯಲ್ಲಿ ಬೆವರು ಸುರಿಸುತ್ತಾ ಕೆಲಸ ಮಾಡುವ ಜೀವನ ಎಷ್ಟೋ ಒಳ್ಳೆಯದು ಅನ್ನಿಸುವ ದಿನಗಳು ಉಂಟು!
ನನ್ನ ಮಾನಸಿಕ ಅವಸ್ಥೆ ಕಳೆದ ವಾರ ಹಾಗೆ ಆಗಿತ್ತು. ಬೆಳಗ್ಗೆ ಬೇಗ ಮನೆ ಬಿಟ್ಟರೆ ಸಂಜೆ ಬಸ್ಸಿನಲ್ಲಿ ನೇತುಕೊಂಡು ಬಂದು ರಾತ್ರಿ ಮನೆಗೆ ಹಿಂದಿರುಗುವುದು. ತದನಂತರ ಕೆಲವು ಕೆಲಸಗಳು ಬಾಕಿ ಇದ್ದರೆ ಅದನ್ನು ಮುಗಿಸಿ ತಡರಾತ್ರಿ ಮಲಗುವುದು, ಅದರ ಮಧ್ಯೆ ಕೈಕೊಡುತ್ತಿದ್ದ ಆರೋಗ್ಯ ಹೀಗೆ ಎಲ್ಲಾ ಆದಾಗ ಎಲ್ಲಿಯಾದರು ಒಂದು ಕಡೆ ಹೋಗಿ ಬಿಡೋಣ ಎಂದೆನ್ನಿಸುವ ಮನಸ್ಸು,ಒಟ್ಟಿನಲ್ಲಿ ಮನಸ್ಸಿನಲ್ಲಿ ಅಶಾಂತಿ ಮೂಡಿತ್ತು. ಅದೇ ಹೊತ್ತಿಗೆ ನನ್ನ ತಲೆಗೆ ಹೊಳೆದದ್ದು ಪ್ರಕೃತಿ ಮಾತೆ ಭೂಲೋಕಕ್ಕೆ ಕೊಟ್ಟ ವರವಾದ ಸುಂದರ,ಭೂಲೋಕದ ಸ್ವರ್ಗ ಪಶ್ಚಿಮ ಘಟ್ಟದ ಒಂದು ಸುಂದರ ಸ್ಥಳಕ್ಕೆ ಹೋಗೆ ಸಮಯ ಕಳೆಯಬೇಕು ಎಂದು. ನನ್ನ ಕಾಲೇಜು ಗೆಳೆಯರ ಜೊತೆಗೆ ಕೊಡಚಾದ್ರಿ ಅಥವ ನೇತ್ರಾವತಿ ಶಿಖರಕ್ಕೆ ಚಾರಣ ಹೋಗುವುದು ಎಂಬ ಯೋಜನೆ ಆಗಿತ್ತು ಆದರೆ ಅದು ಕೈಕೊಟ್ಟಿತು. ನಂತರ ನನ್ನ ಹಳೆಯ ಆಪ್ತಮಿತ್ರರು,ಕಾಲೇಜಿನ ಆಪ್ತಮಿತ್ರನ ಜೊತೆಗೆ ಮಾತುಕತೆಯಾಗಿ ಬಿಸ್ಲೆ ಘಾಟ್,ಪಟ್ಲ ಬೆಟ್ಟಕ್ಕೆ ಹೋಗಿ ಸಮಯ ಕಳೆಯುವ ಯೋಜನೆ ಮಾಡಿಯೇ ಬಿಟ್ಟೆವು. ನಿನ್ನೆ(01/07/2023 ಆದಿತ್ಯವಾರ) ಬೆಳಗ್ಗೆ ಬೇಗ ನನ್ನ ಕಾರಿನಲ್ಲಿ ನಾವು ನಾಲ್ಕು ಜನ ಪುತ್ತೂರಿನಿಂದ ಸುಬ್ರಹ್ಮಣ್ಯಕ್ಕೆ ಪ್ರಯಾಣ ಬೆಳೆಸಿದೆವು. ಮೊದಲಿಗೆ ಕುಕ್ಕೆಪುರನಾಥ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ನಂತರ ಬಿಸ್ಲೆ ಕಡೆಗೆ ಪ್ರಯಾಣ ಮುಂದುವರಿಸುವುದು ಎಂಬುದು ನಮ್ಮ ಯೋಜನೆಯಾಗಿತ್ತು. ನಮ್ಮ ಅದೃಷ್ಟವೋ ಅಥವ ದೇವರ ಸಂಕಲ್ಪ ನಾವು ದೇವರ ದರ್ಶನ ಪಡೆಯಲೇಬೇಕೆಂದು ಇತ್ತೇನೋ ನಿನ್ನೆ ಸುಬ್ರಹ್ಮಣ್ಯದಲ್ಲಿ ಜನ ಸಂದಣಿ ಕಡಿಮೆಯಿದ್ದುದರಿಂದ ನೇರವಾಗಿ ಸರತಿ ಸಾಲಿನಲ್ಲಿ ನಿಲ್ಲದೆ ಹೋಗಿ ದೇವರ ದರ್ಶನ ಸರಿಯಾಗಿ,ಭಕ್ತಿಯಿಂದ,ಸ್ವಲ್ಪ ಹೊತ್ತು ನಿಂತು ಪಡೆದು ಬಂದೆವು. ಗರ್ಭಗುಡಿಯ ಎದುರು ದೇವರನ್ನು ಕಂಡಾಗ ನಾನು ಅಲ್ಲೆ ಒಂದು ಗಳಿಗೆ ಸ್ಥಬ್ಧನಾಗಿ ಬಿಟ್ಟೆ! ನಂತರ ಉಮಾಮಹೇಶ್ವರ ದೇವರ ದರ್ಶನ ಪಡೆದು ಸೇವೆ ಮಾಡಿಸಿ ಅಲ್ಲಿಂದ ಬಿಸ್ಲೆ ಕಡೆಗೆ ಪ್ರಯಾಣ ಬೆಳೆಸಿದೆವು.

![]() | |
ಮೋಡದಿಂದ ಆವೃತವಾಗೋಂಡ ಶಿಬರ |
ನಮ್ಮ ಯೋಜನೆಯ ಪ್ರಕಾರ ನಿಗದಿಪಡಿಸಿದ ಸಮಯಕ್ಕಿಂತ ಸ್ವಲ್ಪ ತಡವಾಗಿ ನಾವು ಸುಬ್ರಹ್ಮಣ್ಯ ತಲುಪಿ ದೇವಸ್ಥಾನಕ್ಕೆ ಹೋಗಿ ಬಂದಿದ್ದರಿಂದ ನಾವು ನೇರವಾಗಿ ಪಟ್ಲ ಬೆಟ್ಟಕ್ಕೆ ಹೋಗಿ ನಂತರ ಹಿಂದಿರುಗುವಾಗ ಬಿಸ್ಲೆ ಘಾಟ್ ವ್ಯೂ ವೀಕ್ಷಣಾಸ್ಥಳಕ್ಕೆ ಭೇಟಿ ನೀಡುವ ಎಂದು ನಿರ್ಧರಿಸಿ ನೇರವಾಗಿ ಪಟ್ಲ ಬೆಟ್ಟದ ಕಡೆಗೆ ಪ್ರಯಾಣ ಮಾಡಿದೆವು. ಕದ್ರಹಳ್ಳಿಯ ಬಳಿ ಪಟ್ಲ ಬೆಟ್ಟದ ಬಳಿ ಮುಖ್ಯ ರಸ್ತೆಯ ಎಡಬದಿಯಲ್ಲಿ ಕಾರ್ ಪಾರ್ಕಿಂಗ್ ಮಾಡಿ ಅಲ್ಲಿಂದ 1.7 ಕಿ.ಮಿ ನಡೆದುಕೊಂಡು ನಿಸರ್ಗದ ಸೌಂದರ್ಯವನ್ನು ಸವಿಯುತ್ತಾ ಮೋಡದ ಚಲನೆಗಳನ್ನು ನೋಡಿ ಆನಂದಿಸುತ್ತಾ ಜೋರಾಗಿ ಬೀಸುತ್ತಿದ್ದ ತಂಪು ಗಾಳಿ,ಜಿಟಿಜಿಟಿ ಎಂದು ಸುರಿಯುತ್ತಿದ್ದ ತುಂತುರು ಮಳೆಯ ನಡುವೆ ಸಾಗುತ್ತಾ ಸುಮಾರು 40 ನಿಮಿಷದೊಳಗೆ ಪಟ್ಲ ಬೆಟ್ಟ ಶಿಖರ ತಲುಪಿದೆವು. ನನಗೆ ಆಶ್ಚರ್ಯವಾದದ್ದು ಶಿಖರಕ್ಕೆ ನಡೆದುಕೊಂಡು ಹೋಗುವ ಕೊನೆಯ 200-300 ಮೀಟರ್ 80°ಯ ಕಡಿದಾದ ರಸ್ತೆ ಇದ್ದರು ಸಹ ಅದನ್ನು ಹತ್ತಿ ಹೋದರೂ ನನಗೆ ಸುಸ್ತಾಗಲೇ ಇಲ್ಲ. ಶಿಖರದಲ್ಲಿ ಸುಮಾರು 45 ನಿಮಿಷಗಳ ಕಾಲ ಸಮಯ ಕಳೆದು ಮೋಡಗಳ ಚಲನೆ,ಜೋರಾಗಿ ಬೀಸುವ ತಂಪು ಗಾಳಿ,ಮೋಡಗಳ ಮಧ್ಯೆ ಮುಚ್ಚಿ ಹೋಗಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಸುಂದರ,ಹಚ್ಚ ಹಸಿರಿನಿಂದ ಕೂಡಿದ ಪರ್ವತಗಳನ್ನು ನೋಡಿ ವಿಶ್ರಾಂತಿ ಪಡೆದು,ಸ್ವಚ್ಛ,ಪರಿಶುದ್ಧ ಗಾಳಿಯನ್ನು ಉಸಿರಾಡುತ್ತಾ ಸಮಯ ಕಳೆದೆವು. ಪಟ್ಲ ಬೆಟ್ಟ ಈಗ ಒಂದು ಪ್ರವಾಸಿ ತಣ. ಇಲ್ಲಿಗೆ ಬರುವ ಪ್ರವಾಸಿಗರು ಕೆಳಗೆ ಅಂಗಡಿಯಿಂದ ತಂದ ಜ್ಯೂಸ್,ನೀರು ಬಾಟಲಿಗಳನ್ನು ಬಿಸಾಕಿ ಹೋಗಿದ್ದನ್ನು ನಾನು ನೋಡಿದೆ. ಇದು ನನಗೆ ಬಹಳ ಬೇಸರ ತರಿಸಿತು. ಇಷ್ಟು ಸುಂದರ,ಹಚ್ಚ ಹಸಿರಿನಿಂದ ಕೂಡಿದ ಸ್ಥಳವನ್ನು ಗಲೀಜು ಮಾಡುತ್ತಿರುವ ಮನುಷ್ಯರು ನಿಜಕ್ಕೂ ಉದ್ಧಾರ ಆಗಲು ಉಂಟೇ? ಇದನ್ನು ತಡೆಯಲೇ ಬೇಕು. ಪಟ್ಲ ಬೆಟ್ಟಕ್ಕೆ ನೀವು ಕೆಳಗಿನಿಂದ ಜೀಪು/ಪಿಕಪಿನಲ್ಲೂ ಹೋಗಬಹುದಾಗಿದೆ. ಆದರೆ ನಿಮ್ಮ ಸ್ವಂತ ಕಾರಿನಲ್ಲಿ ಹೋಗುವ ಸಾಹಸ ಮಾಡಲೇಬೇಡಿ. ಜೀಪು/ಪಿಕಪಿನವರು ಈಗ ಹೋಗಿ-ಬರಲು ಸೇರಿ ಸುಮಾರು 1000-2000 ರೂಪಾಯಿ ಕೇಳುತ್ತಾರೆ ಎಂದು ನಾನು ಕೇಳಲ್ಪಟ್ಟೆ.

Comments
Post a Comment