ಪೋಸ್ಟ್ ಐಪಿಎಲ್ ಮಾತುಕತೆ!

 ಪೋಸ್ಟ್ ಐಪಿಎಲ್ ಮಾತುಕತೆ!

2023ನೇ ಸಾಲಿನ ಐಪಿಎಲ್ ಮುಗಿಯಿತು,ನೆಚ್ಚಿನ ಚೆನ್ನೈ ಗೆದ್ದಾಯಿತು, ಆದರೆ ಕೆಲವು ವಿಷಯಗಳನ್ನು ಹಂಚಬೇಕೆಂದು ಈ ಪೋಸ್ಟ್ ಬರೆಯುತ್ತಿದ್ದೇನೆ.
ಈ ಪೋಸ್ಟ್ ಅಲ್ಲಿ ಈ ವರ್ಷದ ಯಶಸ್ವಿ ತಂಡಗಳಲ್ಲಿ ಎರಡಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗು ಗುಜರಾತ್ ಟೈಟನ್ಸ್ ಬಗ್ಗೆ ಮಾತ್ರ ಹೇಳುತ್ತೇನೆ.
Pic credits: Chennai Super Kings

 
ಈ ವರ್ಷ ಚೆನ್ನೈ ತಂಡದಲ್ಲಿ ನಾನು ಗಮನಿಸಿದ ಹಾಗೆ ಒಂದೇ ಲಯದಲ್ಲಿ ಉತ್ತಮ ಬ್ಯಾಚಿಂಗ್ ಮಾಡಿದವರು ಡೇವನ್ ಕಾನ್ವೇ ಅವರು. ಚೆನ್ನೈ ತಂಡದ ಆರಂಭಿಕ ಜೋಡಿಯಾಗಿದ್ದ ಡುಪ್ಲೇಸಿಸ್-ಗಾಯಕ್ವಾಡ್ ಜೋಡಿ 2021ರಲ್ಲಿ ಅದ್ಭುತ ಜೊತೆಯಾಟವಾಡಿ ತಂಡ ಚಾಂಪಿಯನ್ ಆಗುವಲ್ಲಿ ಕೊಡುಗೆ ನೀಡಿತ್ತು. ಕಳೆದ ವರ್ಷ ಡುಪ್ಲೇಸಿಸ್ ಅವರು ಆರ್.ಸಿ.ಬಿ ತಂಡದ ಸೇರಿದ ನಂತರ ಅವರ ಸ್ಥಾನ ತುಂಬಲು ಒಬ್ಬ ಉತ್ತಮ ಆಟಗಾರನ ಅವಶ್ಯಕತೆ ಚೆನ್ನೈಗೆ ಇತ್ತು. ಪ್ರಾಮಾಣಿಕನಾಗಿ ಹೇಳುವುದಾದರೆ ನನಗೆ ಕಳೆದ ವರ್ಷ ಆರಂಭದಲ್ಲಿ ಕಾನ್ವೇ ಅವರ ಕಳಪೆ ಪ್ರದರ್ಶನ ನೋಡಿ ಯಾಕಾಗಿ ಚೆನ್ನೈ ಕಾನ್ವೆ ಅವರನ್ನು ಖರೀದಿಸಿತು ಎಂದು ಅನಿಸಿತ್ತು. ಆದರೆ ನಂತರ ಉತ್ತಮ ಪ್ರದರ್ಶನ ನೀಡುತ್ತಾ ಬಂದ ಅವರು ಈ ವರ್ಷ ತಂಡದಲ್ಲಿ ಅತ್ಯಂತ ಯಶಸ್ವಿ ಬ್ಯಾಟರ್ ಆಗಿ ಅತಿ ಹೆಚ್ಚು ರನ್ ಬಾರಿಸಿ ತನ್ನ ಸಾಮರ್ಥ್ಯ ತೋರಿಸಿಯೇ ಬಿಟ್ಟರು. ಡುಪ್ಲೇಸಿಸ್ ಅವರ ಸ್ಥಾನ ತುಂಬಲು ಒರ್ವ ಅರ್ಹ ವ್ಯಕ್ತಿ ಕಾನ್ವೆ ಆದರು. ಈ ವರ್ಷ ಕಾನ್ವೆ-ಗಾಯಕ್ವಾಡ್ ಅವರ ಜೋಡಿ ಚೆನ್ನೈ ಬ್ಯಾಟಿಂಗ್ ವಿಭಾಗದಲ್ಲಿ ಒಂದು ಭದ್ರ ಬುನಾದಿಯೇ ಹಾಕಿತು. ಚೆನ್ನೈ ತಂಡಕ್ಕೆ ಹಿರಿಯ ಆಟಗಾರರನ್ನು ಖರೀದಿಸಿ ಆಡಿಸುವುದೇ ಬಲು ಪ್ರೀತಿ ಎಂದು ಕಾಣುತ್ತದೆ. 2018ರ ನಂತರ ಇದೇ ನೀತಿಯನ್ನು ಪಾಲಿಸುತ್ತಿರುವ ಚೆನ್ನೈ ಅದರಲ್ಲಿ ಯಶಸ್ವಿ ಕೂಡ ಆಯಿತು! ಈ ವರ್ಷ ಅಜಿಂಕ್ಯ ರಹಾನೆಯವರನ್ನು ಖರೀದಿಸಿದ ಚೆನ್ನೈಯ ಈ ನಡೆ ಎಲ್ಲರಿಗೆ ತೂಸು ಅಚ್ಚರಿ ತಂದಿತ್ತು ಸಹ. ರಹಾನೆಯವರನ್ನು ಪೂಜಾರನ ರೀತಿ ಬೆಂಚಿನಲ್ಲಿ ಕೂರಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ರಹಾನೆಗೆ ಅವಕಾಶ ಕೊಟ್ಟದ್ದಕ್ಕೆ ಸಾರ್ಥಕತೆಯನ್ನು ತಂಡ ಅನುಭವಿಸಿತು. ಟೆಸ್ಟ್ ಪಂದ್ಯದ ರೀತಿಯೇ ಐಪಿಎಲ್ ಅಲ್ಲಿ ಆಡುತ್ತಿದ್ದ ರಹಾನೆ ಈ ವರ್ಷ ಸಂಪೂರ್ಣ ಉಲ್ಟಾ! ಸರಾಸರಿ 200ರ ಸ್ಟ್ರೈಕ್ ರೇಟಿನಲ್ಲಿ ಬ್ಯಾಟಿಂಗ್ ಮಾಡುತ್ತಾ ಚೈನ್ನೈ ತಂಡದ ರನ್ ಮೊತ್ತ 200 ಗಡಿ ದಾಟಿಸುವಲ್ಲಿ ಕೊಡುಗೆ ನೀಡುತ್ತಲೇ ಹೋದರು. ಇನ್ನು ರುತುರಾಜ್ ಗಾಯಕ್ವಾಡ್ ಅವರ ವಿಷಯಕ್ಕೆ ಬಂದರೆ ಈ ವರ್ಷದ ಐಪಿಎಲ್ ಆರಂಭದಲ್ಲಿ ಉತ್ತಮ ಫಾರ್ಮ್ನಲ್ಲಿದ್ದ ಗಾಯಕ್ವಾಡ್ ನಂತರ ಸ್ವಲ್ಪ ಲಯ ತಪ್ಪಿದರು. ಕಾನ್ವೆ ಒಂದೇ ಲಯದಲ್ಲಿ ಆಡುತ್ತಾ ಸರಾಸರಿ 40-50 ರನ್ ಬಾರಿಸುತ್ತಿದ್ದರೆ ಗಾಯಕ್ವಾಡ್ ಅವರು ಕೆಲವೊಂದು ಪಂದ್ಯಗಳಲ್ಲಿ ಕಡಿಮೆ ರನ್ ಬಾರಿಸಿ ಔಟ್ ಆಗಿದ್ದರು. ಆದರೂ ಸಹ ತಂಡದ ಆರಂಭಿಕ ಆಟಕ್ಕೆ ಭದ್ರ ಬುನಾದಿ ಹಾಕಿಯೇ ಔಟಾಗುತ್ತಿದ್ದರು. ಇನ್ನು ಈ ವರ್ಷವು ತಂಡದಲ್ಲಿ ಮಿಂಚಿದ್ದು ಶಿವಂ ದುಬೆ! ಆರ್.ಸಿ.ಬಿ ಹಾಗು ರಾಜಸ್ಥಾನ್ ತಂಡದಲ್ಲಿದ್ದಾಗ ಏನು ಸಾಧನೆ ಮಾಡದ ದುಬೆ ಚೆನ್ನೈ ತಂಡ ಸೇರಿದ ನಂತರ ಏನಾಯಿತೋ ಗೊತ್ತಿಲ್ಲ, ಕ್ರೀಸಿಗೆ ಬಂದ ಕೂಡಲೇ ಮೈದಾನದ ಮೂಲೆಮೂಲೆಗೂ ಬಾಲನ್ನು ಅಟ್ಟುವುದು ಆಯಿತು! ತಂಡದ ಬಿಗ್ ಹಿಟ್ಟರ್ ಆಗಿ ಬಿಟ್ಟರು. ಇನ್ನು ರಾಯುಡು ವಿಷಯಕ್ಕೆ ಬಂದರೆ ರಾಯುಡು ಅವರು ಈ ಹಿಂದಿನ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಎಲ್ಲಾ ಪಂದ್ಯಗಳ ಖಾಯಂ ಆಟಗಾರನಾಗಿದ್ದರೆ ಈ ವರ್ಷ ಇಂಪಾಕ್ಟ್ ಆಟಗಾರನಾಗಿ ಬಿಟ್ಟರು.ಈ ವರ್ಷ ಬ್ಯಾಟಿಂಗ್ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡದ ಇವರನ್ನು ಮುಂದಿನ ಬಾರಿ ತಂಡದಿಂದ ಬಿಡುತ್ತಾರೆ ಎಂದೇ ನಾನು ಭಾವಿಸಿದ್ದೆ. ಆದರೆ ಫೈನಲ್ ಪಂದ್ಯದ ಮೊದಲು ಅವರು ನಿವೃತ್ತಿಯನ್ನು ಘೋಷಿಸಿಬಿಟ್ಟರು. ಅವರ ವಿದಾಯ ಪಂದ್ಯ ಸ್ಮರಣೀಯ ಪಂದ್ಯ ಆಗಿಬಿಟ್ಟಿತು. ಸ್ಮರಣೀಯ ವಿದಾಯದ ನಿರೀಕ್ಷೆಯಲ್ಲಿದ್ದ ರಾಯುಡು ಅವರನ್ನು ನಿನ್ನೆ ಪಂದ್ಯದ ನಂತರ ಭಾವುಕರಾದದ್ದು ನೋಡಿ ವೀಕ್ಷರಿಗೂ ಕಣ್ಣಲ್ಲಿ ನೀರು ಬಂತು! ಈ ವರ್ಷ ಚೆನ್ನೈ ತಂಡದ ಉಪಯೋಗಕ್ಕೆ ಬಾರದವರು ಬೆನ್ ಸ್ಟೋಕ್ಸ್. ಆಡಿದ 2 ಪಂದ್ಯಗಳಲ್ಲಿ ಕೇವಲ 15 ರನ್ ಕಲೆ ಹಾಕಿದ ಇವರು ನಂತರ ಗಾಯದ ಕಾರಣ ತಂಡಕ್ಕೆ ಅಲಭ್ಯರಾದರು. ಮೋಯಿನ್ ಅಲಿ ಅವರು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಈ ವರ್ಷ ತಮ್ಮ ಕೈಯಿಂದ ಆಗುವಷ್ಟು ಕೊಡುಗೆಯನ್ನು ನೀಡಿದರೂ ಸಹ ಕಳೆದ ಆವೃತ್ತಿಗಳಿಗೆ ಹೋಲಿಸಿದರೆ ಅವರ ಈ ವರ್ಷದ ಪ್ರದರ್ಶನ ಅಷ್ಟೇನು ಇರಲಿಲ್ಲ. ಇನ್ನು ತಂಡದ ಸೂಪರ್ ಸ್ಟಾರ್ ರವೀಂದ್ರ ಜಡೇಜ ಅವರ ವಿಷಯಕ್ಕೆ ಬಂದರೆ ಅವರು ಪ್ರತಿ ಬಾರಿಯೂ ಬ್ಯಾಟಿಂಗ್ ಮಾಡಲು ಬಂದಾಗ ನೆರೆದ ಅಭಿಮಾನಿಗಳು ಧೋನಿ ಬರಲಿ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಅವರು ಔಟಾದಾಗಲೆಲ್ಲ ಸಂತೋಷದಿಂದ ಚೆನ್ನೈ ತಂಡದ ಅಭಿಮಾನಿಗಳು,ಧೋನಿ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದದ್ದು ಅವರಿಗೆ ಸ್ವಲ್ಪ ಬೇಸರ ತರಿಸಿದ್ದಂತು ನಿಜ. ಆದರೆ ಧೋನಿಗಾಗಿ ಇರುವ ಅಭಿಮಾನವನ್ನು ಕಂಡು ಸಂತೋಷಪಡುತ್ತಿದ್ದರು. ಈ ವರ್ಷ ಚೆನ್ನೈ ತಂಡದ ಸ್ಪಿನ್ ವಿಭಾಗದಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ್ದು ಕೂಡ ಜಡೇಜನೇ. ಒಟ್ಟಿನಲ್ಲಿ ಎಲ್ಲಾ ವಿಭಾಗಗಳಲ್ಲೂ ಕೊಡುಗೆ ನೀಡುತ್ತಲೆ ಹೋದ ಜಡೇಜ ನಿನ್ನೆಯ ಫೈನಲ್ ಪಂದ್ಯದ ಗೆಲುವನ್ನು ಧೋನಿಗೆ ಅರ್ಪಿಸಿಬಿಟ್ಟರು! 
 
File image

ಇದರಿಂದ ಧೋನಿ-ಜಡೇಜ ಮಧ್ಯೆ ಸಂಬಂಧ ಹದಗೆಟ್ಟಿದ ಎಂದು ಹರಡುತ್ತಿದ್ದ ಊಹಪೋಹಗಳಿಗೆ ತೆರೆ ಎಳೆದು ವಿರೋಧಿಗಳ ಬಾಯಿ ಮುಚ್ಚಿಸಿದರು! ತಂಡದ ಯಶಸ್ಸಿಗೆ ಕಾರಣಕರ್ತರಲ್ಲಿ ಬೌಲರ್‌ಗಳ ಕೊಡುಗೆ ಕೂಡ ಅಪಾರ. ದೀಪಕ್ ಚಹರ್ ಗಾಯದಿಂದ ಅಲಭ್ಯರಾಗಿ ನಂತರ ಚೇತರಿಸಿಕೊಂಡು ಬೌಲಿಂಗ್ ಮಾಡಿದರು ಸಹ ಉತ್ತಮ ರೀತಿಯಲ್ಲೇನು ಇರಲಿಲ್ಲ. ಆದರೆ ನಂತರ ಸುಧಾರಿಸಿಕೊಂಡು ವಿಕೆಟ್ ಕಬಳಿಸುತ್ತಾ ಹೋದರು. ಈ ವರ್ಷ ಚೆನ್ನೈ ಬೌಲಿಂಗ್ ಅಲ್ಲಿ ಮಿಂಚಿದ್ದು ಶ್ರೀಲಂಕಾದ ತರುಣ ಮತೀಶ್ ಪತಿರಾಣ! ಮಾಲಿಂಗ ಅವರನ್ನು ನೆನಪಿಸುವಂತಹ ಬೌಲಿಂಗ್ ಇವರದ್ದು. ಅವರು ಎಸೆಯುವ ಯೋರ್ಕರ್ ಇದೆಯಲ್ಲ ಅದ್ಭುತ! ಆಡಿದ 12 ಪಂದ್ಯಗಳಲ್ಲಿ 19 ವಿಕೆಟ್ ಕಬಳಿಸಿದ ಪತಿರಾಣ 371 ರನ್ ಬಿಟ್ಟು ಕೊಟ್ಟಿದ್ದರು. ಇನ್ನು ವಿಕೆಟ್ ಕಬಳಿಸಿ ಎದುರಾಳಿ ತಂಡಕ್ಕೆ ರನ್ ಬಿಟ್ಟು ಕೊಡುತ್ತಿದ್ದವರು ತುಷಾರ್ ದೇಶಪಾಂಡೆ ಹಾಗು ಮಹೀಶ್ ತೀಕ್ಷಾಣ. ದೇಶಪಾಂಡೆ ಈ ವರ್ಷ ತಂಡದಲ್ಲಿ ಅತಿ ಹೆಚ್ಚು ವಿಕೆಟ್ ತೆಗೆದ ಬೌಲರ್ ಆಗಿದ್ದರು ಸಹ ಎದುರಾಳಿ ತಂಡಕ್ಕೆ 564 ರನ್ ಬಿಟ್ಟುಕೊಟ್ಟರು! ತೀಕ್ಷಾಣ ಒಟ್ಟು 392 ರನ್ ಬಿಟ್ಟುಕೊಟ್ಟರೂ ಸಹ ಕೆಲವು ಪಂದ್ಯಗಳಲ್ಲಿ ತಂಡಕ್ಕೆ ದುಬಾರಿ ಆಗಿಬಿಟ್ಟರು. ಆಕಾಶ್ ಸಿಂಗ್ ಅವರಿಗೆ ಐಪಿಎಲ್ ಅಲ್ಲಿ ಅನುಭವ ಇಲ್ಲದ ಕಾರಣ ಬೌಲಿಂಗ್ ಮಾಡಲು ಇಳಿದ ಕೂಡಲೇ ಹೆದರುತ್ತಿದ್ದರು. ಆಡಿದ ಬಹುತೇಕ ಪಂದ್ಯಗಳಲ್ಲಿ ದುಬಾರಿ ಆಗಿಯೇ ಬಿಟ್ಟರು. ಇನ್ನು ತಂಡದ ಯಶಸ್ಸಿಗೆ ಧೋನಿಯ ನಾಯಕತ್ವ,ಸ್ಟೀಫನ್ ಫ್ಲೆಮಿಂಗ್ಸ್ ಅವರ ಕೋಚಿಂಗ್ ಒಂದು ಕಾರಣ. ತಂಡದ ಪ್ರತಿ ಆಟಗಾರನಿಗೆ ಒಂದೊಂದು ಪಾತ್ರವನ್ನು ನೀಡುತ್ತಾ ಒಂದು ಬಲಿಷ್ಠ ತಂಡವನ್ನೇ ಮಾಡಿದರು. ಉದಾಹರಣೆಗೆ, ಶಿವಂ ದುಬೆ ಅವರಿಗೆ ಹಿಟ್ಟರ್ ಪಾತ್ರ ನೀಡಿದ ಹಾಗೆ. ಮೈದಾನಕ್ಕೆ ಬ್ಯಾಟಿಂಗಿಗೆ ಹೋಗಿ ಬೀಸಿ ಬರುವುದು ಅವರ ಪಾತ್ರ. ಅದೇ ರೀತಿ ಪ್ರತಿಯೊಬ್ಬ ಆಟಗಾರನಿಗೂ ಒಂದೊಂದು ಪಾತ್ರ ಕೊಡುತ್ತಿದ್ದರು. ಅವರು ಆ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಕಾರಣ ತಂಡ ಯಶಸ್ಸನ್ನು ಕಂಡಿತು. ಧೋನಿ ಬಗ್ಗೆ ಪ್ರತ್ಯೇಕವಾಗಿ ಹೇಳಲು ಹೊರಟರೇ ಈ ಪೋಸ್ಟ್ ಸಾಲದು. ಹಾಗಾಗಿ ಸಾಧ್ಯವಾದರೆ ಇನ್ನೊಮ್ಮೆ ಬರೆಯುತ್ತೇನೆ.
 
File image

ಇನ್ನೊಂದು ವಿಷಯ ನಾನು ಹೇಳಲೇಬೇಕಾದದ್ದು ಚೆನ್ನೈ ತಂಡದ ಆಟಗಾರ ಮಿಚೆಲ್ ಸ್ಯಾಂಟ್ನೆರ್ ಅವರ ಬಗ್ಗೆ. ಸ್ಯಾಂಟ್ನೆರ್ ಅವರಿಗಎ ಚೆನ್ನೈ ತಂಡ ಕೊಟ್ಟ ಅವಕಾಶಗಳು ಕಡಿಮೆ. ಅದರಲ್ಲೂ ಈ ವರ್ಷವಂತೂ ಅವರನ್ನು ಕೇವಲ ಫಿಲ್ಡಿಂಗ್ ಹಾಗು ಬೌಲಿಂಗಿಗೆ ಮಾತ್ರ. ಆದರೂ ಸಹ ಅವರು ಕೊಟ್ಟ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ. ಸಿಕ್ಕ ಎಲ್ಲಾ ಅವಕಾಶಗಳನ್ನು ಚೆನ್ನಾಗಿ ಬಳಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2019ರಲ್ಲಿ ರಾಜಸ್ತಾನ್ ವಿರುದ್ಧದ ಪಂದ್ಯ ಸೋಲುವ ಹಂತದಲ್ಲಿದ್ದಾಗ ಚೆನ್ನೈ ತಂಡಕ್ಕೆ ಗೆಲುವನ್ನು ದೊರಕಿಸಿಕೊಟ್ಟದ್ದು ಇದೇ ಸ್ಯಾಂಟ್ನರ್. ಆದರೆ ಅವರನ್ನು ಕಡೆಗಣಿಸುತ್ತಿರುವುದು ನನಗೂ ವೈಯಕ್ತಿಕವಾಗಿ ಬೇಸರವಾಯಿತು. ತಂಡ ಅವರನ್ನು ಕಡೆಗಣಿಸಿದರೂ,ತಂಡದ ಅಭಿಮಾನಿಗಳು ಸುಮ್ಮನೆ ಇರುವರೇ? ಖಂಡಿತ ಇಲ್ಲ, ಇಂದು ಬೆಳಗ್ಗೆ ಟ್ಟಿಟರಿನಲ್ಲಿ ಅಭಿಮಾನಿಗಳು ಸ್ಯಾಂಟ್ನರ್ ಅವರ ಮೇಲೆ ಇರುವ ಪ್ರೀತಿ ತೋರಿಸಲು ಹಾಗು ಧನ್ಯವಾದ ಹೇಳಲು ನಡೆಸುತ್ತಿರುವ "WE YELLOVE YOU SANTNER" ಎಂಬ ಅಭಿಯಾನ ಟ್ರೆಂಡಿಂಗ್ ಅಲ್ಲಿ ಇರುವುದನ್ನು ಗಮನಿಸಿದೆ.ಮುಂದಿನ ಬಾರಿ ಆದರು ಚೆನ್ನೈ ತಂಡ ಅವರಿಗೆ ಉತ್ತಮ ಅವಕಾಶ ಕೊಡಲೇಬೇಕು.
 
Pic Credits: IPL/BCCI

ಇನ್ನು ಗುಜರಾತ್ ತಂಡದ ವಿಷಯಕ್ಕೆ ಬರೋಣ,ಗುಜರಾತ್ ಟೈಟನ್ಸ್ ಒಂದು ಸಮಾಬಲ ತಂಡ. ಅಲ್ಲಿ ಒಬ್ಬ ಆಟಗಾರ ವೈಫಲ್ಯ ಕಂಡರೆ ಇನ್ನೊಬ್ಬ ಮಿಂಚುತ್ತಾನೆ. ಶುಭಮನ್ ಗಿಲ್ ಬಗ್ಗೆ ಹೇಳಬೇಕೆಂದಿಲ್ಲ, ಈ ವರ್ಷದ ಯಶಸ್ವಿ ಆಟಗಾರ ಗಿಲ್. ಆರಂಭದಲ್ಲಿ ಸ್ವಲ್ಪ ವೈಫಲ್ಯ ಕಂಡರೂ ನಂತರ ಸಿಡಿಯುತ್ತಾ ಹೋದ ಗಿಲ್ ಸತತ ಶತಕ ಬಾರಿಸಿ ಭಾರತದ ಭವಿಷ್ಯದ ಆಟಗಾರ ಎಂದು ಸಾಬೀತುಪಡಿಸಿದರು. ಸಾಯಿ ಸುದರ್ಶನ್ ಬಗ್ಗೆ ಕೂಡ ಹೇಳಬೇಕೆಂದಿಲ್ಲ. ಕೊಟ್ಟ ಅವಕಾಶವನ್ನು ಸರಿಯಾಗಿ ಬಳಸಿದ ಸುದರ್ಶನ್ ಮೊನ್ನೆ ಫೈನಲ್ ಪಂದ್ಯದಲ್ಲಿ ತಂಡದ ರನ್ 200 ದಾಟಲು ಅಪಾರ ಕೊಡುಗೆ ನೀಡಿದರು. 
 

ಇನ್ನು ಪ್ರಮುಖವಾಗಿ ಹೇಳಬೇಕಾದದ್ದು ಇಲ್ಲಿ ಮೋಹಿತ್ ಶರ್ಮ ಅವರ ಬಗ್ಗೆ. ಅವರ ಕಮ್ ಬ್ಯಾಕ್ ಇದೆಯಲ್ಲ ಅದ್ಭುತ! ಈ ಮೊದಲು ಚೆನ್ನೈ,ಪಂಜಾಬ್,ದೆಹಲಿ ತಂಡದಲ್ಲಿ ಆಡಿ ಗುಜಾರತ್ ಟೈಟನ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿದ್ದ ಇವರು ಈ ವರ್ಷ ಅವರಿಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಅತ್ಯುತ್ತಮ ಬೌಲಿಂಗ್ ಮಾಡಿದರು. ನನಗೂ ಅವರ ಬೌಲಿಂಗ್ ನೋಡಿ ಅಚ್ಚರಿ! ಮೊದಲೆಲ್ಲ ಬೌನ್ಸರ್ ಅನ್ನು ಹೆಚ್ಚು ಹಾಕುತ್ತಿದ್ದ ಇವರು ಕಳೆದ ಕೆಲವು ಪಂದ್ಯಗಳಲ್ಲಿ ಯೋರ್ಕರ್ ಹಾಕಿದ್ದು ಅಲ್ಲದೇ ವಿಕೆಟ್ ಪಡೆಯುತ್ತಾ ಎದುರಾಳಿ ತಂಡದವರಿಗೆ ಕಡಿಮೆ ರನ್ ಬಿಟ್ಟುಕೊಟ್ಟು ರನ್ ಹರಿವನ್ನು ಸರಿಯಾಗಿ ನಿಯಂತ್ರಿಸಿದರು. ಮೊದಲೆಲ್ಲ ಎದುರಾಳಿ ತಂಡಕ್ಕೆ ರನ್ ಬಿಟ್ಟುಕೊಡುತ್ತಲೆ ಇದ್ದ ಇವರು ಈ ವರ್ಷ ಮುಂಬೈ ವಿರುದ್ಧದ ಕ್ವಾಲಿಫಾಯರ್ ಪಂದ್ಯದಲ್ಲಿ ಕೇವಲ 10 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಬಳಿಸಿದ್ದು ಇದೇ ಅಲ್ಲ ಅದ್ಭುತ!
 
Pic credits: IPL/BCCI

ಇನ್ನು ನಾಯಕತ್ವ ವಿಷಯಕ್ಕೆ ಬಂದರೆ ನನಗೆ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ಇಷ್ಟವಾದದ್ದು ಗೆಲುವು ಸಾಧಿಸಲೇ ಬೇಕೆಂಬ ಅವರ ಹಠದಿಂದ. ಫಿಲ್ಡಿಂಗ್ ಅಲ್ಲಿ ಒರ್ವ ಫಿಲ್ಡರ್ ಕ್ಯಾಚ್ ಬಿಟ್ಟರೆ ಸಿಟ್ಟಿನಲ್ಲಿ ಒಮ್ಮೆ ಬೈದರೇ ಇನ್ನೊಮ್ಮೆ ಅವರ ಹಿಂದೆ ನಿಂತು ಮತ್ತೊಮ್ಮೆ ಪ್ರೋತ್ಸಾಹಿಸುವುದು,ಒಬ್ಬ ಬೌಲರ್ ಉತ್ತಮ ಪ್ರದರ್ಶನ ನೀಡಿದರೇ ಅವನನ್ನು ಅಭಿನಂದಿಸುವುದು,ಆಲಿಂಗನ ಮಾಡಿಕೊಳ್ಳುವುದು,ಫಿಲ್ಡಿಂಗ್ ಆರಂಭದ ಮೊದಲು ತಂಡದ ಜೊತೆಗೆ ಮಾತುಕತೆ ನಡೆಸುವ ರೀತಿ ನನಗೆ ಇಷ್ಟವಾಯಿತು. ಹಾರ್ದಿಕ್ ಪಾಂಡ್ಯ ದುರಹಂಕಾರಿಯಾದರು ಸಹ ಇನ್ನೊಬ್ಬ ಆಟಗಾರನ ಮೇಲೆ ಗೌರವ ಇಟ್ಟುಕೊಂಡವರು. ಪಂದ್ಯ ಆಗುತ್ತಿರುವ ಬೈದಿರಬಹುದು,ಆದರೆ ಪಂದ್ಯ ಮುಗಿದ ಮೇಲೆ ಆಟಗಾರರ ಜೊತೆ ಅವರು ಬೆರೆತುಕೊಳ್ಳುವ ರೀತಿ ಇನ್ನೊಬ್ಬರ ಮೇಲೆ ಅವರಿಗಿರುವ ಗೌರವ ತೋರಿಸುತ್ತದೆ. ಅಷ್ಟೇ ಅಲ್ಲದೇ ತನ್ನ ತಂಡದ ಪ್ರಥಮ ಆವೃತ್ತಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದು,ದ್ವಿತೀಯ ಆವೃತಿಯಲ್ಲಿ ರನ್ನರ್ ಅಪ್ಸ್ ಸ್ಥಾನ ತನಕ ತಲುಪಿದ್ದು ಅವರ ಯಶಸ್ವಿ ನಾಯಕತ್ವಕ್ಕೆ ಸಾಕ್ಷಿ. ನಿನ್ನೆ ಐಪಿಎಲ್ ಫೈನಲ್ ಅಲ್ಲಿ ಸೋತ ನಂತರ ಅವರನ್ನು ನೋಡುವಾಗ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋತ ಫ್ರಾನ್ಸ್‌ ತಂಡದ ನಾಯಕ ಎಂಬಾಪೆಯವರನ್ನು ಒಮ್ಮೆ ನನಗೆ ನೆನಪಾಯಿತು. 
 
Pic credits:PTI

ಇನ್ನು ಕೋಚ್ ಆಶಿಶ್ ನೆಹ್ರಾ ಅವರ ಬಗ್ಗೆ ಹೇಳುವುದಿದ್ದರೆ ಬಹುಶಃ ನಾನು ನೋಡಿದ ಹಾಗೆ ಜನಾರ್ದನ್ ಸರ್ ಖ್ಯಾತಿಯ ಗಣೇಶ್ ಕಾರಂತ್ ಅವರು ಹೇಳುವ ಹಾಗೆ ಐಪಿಎಲ್ನಲ್ಲಿ ಒಂದು ಫುಟ್ಬಾಲ್ ತಂಡದ ಕೋಚ್ ರೀತಿಯಲ್ಲಿ ಪಂದ್ಯ ಆಗುತ್ತಿರುವ ಆಟಗಾರರನ್ನು ಬೆಂಬಲಿಸುವುದು,ಸೂಕ್ತ ಸಲಹೆಗಳನ್ನು ನೀಡುತ್ತಿರುವುದು ಅವರೊಬ್ಬರೆ ಎಂದು ಕಾಣುತ್ತದೆ. ಬೇರೆ ಯಾವುದೇ ತಂಡದ ಕೋಚುಗಳು ಆಗಿರಲಿ ಅವರು ತಮ್ಮ ತಂಡದ ಡಗ್ಔಟಿನಲ್ಲಿ ಸುಮ್ಮನೆ ಕೂತಿರುತ್ತರೆ. ಆದರೆ ಇವರು ಮೈದಾನದ ಬಳಿ ಬಂದು ಆಟಗಾರರಿಗೆ ಪ್ರೋತ್ಸಾಹ ನೀಡುತ್ತಾ ಏನಾದರು ಒಂದು ಸಲಹೆ ನೀಡುತ್ತಾ ಚಿರಿಪಿರಿ ಮಾಡುತ್ತಲೇ ಇರುತ್ತಾರೆ. ಈ ಮೊದಲು ಐಪಿಎಲ್ನಲ್ಲಿ ಆಡಿ ಐಪಿಎಲ್ನಲ್ಲೂ ಯಶಸ್ವಿ ಬೌಲರ್ ಎನಿಕೊಂಡ ನೆಹ್ರಾ ತಮ್ಮ ಅನುಭವದ ಲಾಭ ಕೋಚಿಂಗ್ ಅಲ್ಲಿ ಬಳಸುತ್ತಿದ್ದಾರೆ. ಒಂದು ತಂಡಕ್ಕೆ ಉತ್ತಮ ನಾಯಕ-ಕೋಚ್ ಇದ್ದರೆ ಆ ತಂಡದ ಯಶಸ್ಸಿಗೆ ಇದು ಕೂಡ ಕಾರಣ ಆಗುತ್ತದೆ.ಇಲ್ಲಿ ಗಮನಿಸಬೇಕಾದ ಸ್ವಾರಸ್ಯಕರ ಸಂಗತಿ ಏನೆಂದರೆ ಚೆನ್ನೈ-ಗುಜಾರತ್ ಎರಡು ತಂಡಗಳ ಪ್ರಧಾನ ಕೋಚುಗಳಾದ ಫ್ಲೇಮಿಂಗ್ಸ್ ಹಾಗು ನೆಹ್ರಾ ಧೋನಿ ನಾಯಕತ್ವದಡಿ ಐಪಿಎಲ್ನಲ್ಲಿ ಆಡಿದವರು. ಒಬ್ಬರು ತಮ್ಮ ಮಾಜಿ ನಾಯಕ ಆಡುತ್ತಿರುವ,ತಾನು ಆಡಿದ ತಂಡದ ಪ್ರಧಾನ ಕೋಚ್ ಆದರೆ,ಮತ್ತೊಬ್ಬರು ಇನ್ನೊಂದು ಯಶಸ್ವಿ ತಂಡದ ಪ್ರಧಾನ ಕೋಚ್. ಏನೇ ಇರಲಿ 2023ನೇ ಸಾಲಿನ ಐಪಿಎಲ್ ಸರಣಿ ಮುಗಿದಿದೆ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ 5ನೇ ಬಾರಿಗೆ ಪಟ್ಟ ಪಡೆದಿದೆ. ಹಲವು ದಾಖಲೆಗಳು,ಜಗಳ,ಕುತೂಹಲಕಾರಿ,ಸ್ಮರಣೀಯ ಕ್ಷಣಗಳನ್ನು ಕಂಡ ಈ ವರ್ಷದ ಐಪಿಎಲ್ ಸರಣಿ ಎಲ್ಲಾ ಸರಣಿಗಳಲ್ಲಿ ಉತ್ತಮ ಸರಣಿ ಎಂದರೂ ತಪ್ಪಲ್ಲ.ಮುಂದಿನ ಸಾಲಿನ ಐಪಿಎಲ್ ಸರಣಿ ಯಶಸ್ವಿಯಾಗಿ ಭಾರತದಲ್ಲಿ ನಡೆಯಲಿ ಎಂದು ಆಶಿಸುತ್ತಾ ಈ ಲೇಖನ ಅಂತ್ಯಗೊಳಿಸುತ್ತೇನೆ. ಕೆಲವು ವಿಷಯಗಳನ್ನು ನಾನು ಬಿಟ್ಟರಬಹುದು ಅಥವ ನಿಮ್ಮ ಬಳಿ ಇನ್ನು ವಿಭಿನ್ನ ಅಭಿಪ್ರಾಯ,ಹೆಚ್ಚಿನ ಮಾಹಿತಿ ಇದ್ದಿರಬಹುದು ಅದನ್ನು ಕಮೆಂಟ್ ಬಾಕ್ಸಿನಲ್ಲಿ ತಿಳಿಸಬೇಕೆಂದು ವಿನಂತಿ.
ಧನ್ಯವಾದಗಳು
🖊ಬರಹ: ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!