ಹೊಸಬೆಟ್ಟು ಕಡಲ ತೀರದಲ್ಲಿ ಮುಂಜಾನೆಯ ಕಾರ್ಯಕ್ರಮ!

 ಹೊಸಬೆಟ್ಟು ಕಡಲ ತೀರದಲ್ಲಿ ಮುಂಜಾನೆಯ ಕಾರ್ಯಕ್ರಮ!


 

ಕರ್ನಾಟಕದ ಪಶ್ಚಿಮ ಭಾಗವು ತನ್ನ ಕರಾವಳಿ ತೀರಕ್ಕೆ ಖ್ಯಾತಿ. ಆದ್ದರಿಂದ ಪಶ್ಚಿಮ ಕರ್ನಾಟಕ ಎಂದು ಕರೆಯುವ ಬದಲು ಕರಾವಳಿ ಕರ್ನಾಟಕವೆಂದೇ ಹೆಚ್ಚು ಕರೆಯುವುದು. ಸುಂದರವಾದ ಕಡಲ ತೀರಗಳು,ಇಲ್ಲಿನ ದೇವಸ್ಥಾನಗಳು,ಆಹಾರ ಪದ್ಧತಿ,ಖಾದ್ಯಗಳು ಎಲ್ಲವೂ ವಿಶ್ವ ವಿಖ್ಯಾತಿ. ಈ ಸುಂದರ ಕರಾವಳಿ ಪ್ರದೇಶದ ಹೊಸಬೆಟ್ಟು ಎಂಬ ಸ್ಥಳದಲ್ಲಿ ಇಂದಿನ ಮುಂಜಾನೆಯ ಸಮಯವನ್ನು ಕಾಲೇಜಿನ ಸ್ನೇಹಿತರು,ನನ್ನ ಗುರುಗಳ ಜೊತೆಗೆ ಕಳೆದೆ!

 
ಕಳೆದ 5 ದಿನಗಳಿಂದ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್) ಕ್ಯಾಂಪ್ ನಡೆಯುತ್ತಿದೆ. ಇದರ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಇಂದು ಎನ್.ಎಸ್.ಎಸ್ ಘಟಕ, ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು ಹಾಗು ಸ್ವಚ್ಛ ಸುರತ್ಕಲ್ ತಂಡದ ಜಂಟಿ ಸಂಯೋಜನೆಯಲ್ಲಿ ಹೊಸಬೆಟ್ಟು ಕಡಲ ತೀರದಲ್ಲಿ ನಡೆಯಿತು. ಮುಂಜಾನೆ 6 ಗಂಟೆಗೆ ಕಾಲೇಜು ತಲುಪಿದ ನಾನು ಬಹಳ ಉತ್ಸುಕನಾಗಿದ್ದೆ. ಪರಿಸರವನ್ನು ಸ್ವಚ್ಛವಾಗಿಸುವ ಪುಣ್ಯ ಕಾರ್ಯ ಮಾಡಲು ಹೊರಟಿರುವ ಖುಷಿ! ಬೆಳಿಗ್ಗೆ 7 ಗಂಟೆಗೆ ಹೊಸಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರಕ್ಕೆ ತಲುಪಿದ ನಮ್ಮನ್ನು ಸ್ವಚ್ಛ ಸುರತ್ಕಲ್ ತಂಡದ ಸದಸ್ಯರು ಸ್ವಾಗತಿಸಿದರು. ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಬಹಳ ಭರವಸೆಯನ್ನು ಹೊಂದಿದ್ದ ಅವರು ನಮಗೆ ಸೂಕ್ತ ಮಾರ್ಗದರ್ಶನ ನೀಡಿದರು. 200 ಜನ ವಿದ್ಯಾರ್ಥಿಗಳ ಬ್ಯಾಚ್ ಇಂದು ಸ್ವಚ್ಛತಾ ಕಾರ್ಯಕ್ರಮಕ್ಕೆ ಆಗಮಿಸಿತ್ತು. ಆದ್ದರಿಂದ 40 ಜನರ 1 ತಂಡದಂತೆ 5 ತಂಡಗಳನ್ನು ಮಾಡಲಾಗಿತ್ತು. ಪ್ರತಿ ತಂಡಕ್ಕೂ ಅಗತ್ಯ ಪರಿಕರಗಳನ್ನು ನೀಡಿ ಸ್ವಚ್ಛತೆ ಮಾಡಬೇಕಾದ ಸ್ಥಳಗಳಿಗೆ ಕರೆದುಕೊಂಡು ಹೋಗಲಾಯಿತು. ನಾನು ಎರಡನೆಯ ತಂಡದಲ್ಲಿದ್ದೆ. ನಮ್ಮ ತಂಡಕ್ಕೆ ಕಡಲ ಕಿನಾರೆಯುದ್ದಕ್ಕೂ ಇರುವ ಸಂಪರ್ಕ ರಸ್ತೆಯ ಎರಡು ಬದಿಯಲ್ಲಿ ಸ್ವಚ್ಛಗೊಳಿಸುವ ಜವಾಬ್ದಾರಿ ನೀಡಲಾಯಿತು. ಬೆಳಗ್ಗೆ 8 ಗಂಟೆಗೆ ಕೆಲಸ ಆರಂಭಿಸಿದ ನಾವು ರಸ್ತೆಯಲ್ಲಿ ಸಾಗುತ್ತಾ ಸಾಗುತ್ತಾ ಸುಮಾರು 500-600 ಮೀಟರ್ ಅಷ್ಟು ದೂರ ಸಾಗಿದೆವು. ಬೇರೆ ತಂಡಗಳಿಗೂ ಹೊಸಬೆಟ್ಟು ಕಡಲ ಕಿನಾರೆಯ ಬೇರೆಬೇರೆ ಭಾಗಗಳಲ್ಲಿ ಕೆಲಸ ಮಾಡಲು ನಿಯೋಜನೆ ಮಾಡಲಾಗಿತ್ತು. ನಾವು ಸಾಗಿದ ದಾರಿ ಉದ್ದಕ್ಕೂ ಕಸ ಹೆಕ್ಕಿ ಸುಮಾರು 11-12 ಚೀಲದಷ್ಟು ಕಸ ಸಂಗ್ರಹಿಸಿದೆವು! 


ಕಸ ಏನೆಂದು ಕೇಳಬೇಡಿ! ಹೇಳುವಾಗಲೇ ಆಕ್ರೋಶ ಉಕ್ಕಿಬರುತ್ತದೆ! ರಸ್ತೆಯುದ್ದಕ್ಕೂ ನಮಗೆ ಸಿಕ್ಕಿದ್ದು ಇಷ್ಟೇ: ವಿಮಲ್,ಮಾರುತಿ ಪಾನ್ ಮಸಾಲದ ಪ್ಯಾಕೇಟ್,ಸಿಗರೇಟಿನ ಪ್ಯಾಕೇಟ್ ಮತ್ತು ಎಣ್ಣೆ ಪ್ರಿಯರ ಬಾಟಲಿಗಳು! ಇನ್ನು ಅಲ್ಪಸ್ವಲ್ಪ ಪಟಾಕಿಗಳ ಕಸ,ಚಾಕಲೇಟಿನ ಕವರ್,ಪ್ಲಾಸ್ಟಿಕ್ ತೊಟ್ಟೆ! 40 ಜನರ ತಂಡವನ್ನು 5-6 ಜನರ ಸಣ್ಣ ತಂಡಗಳಾಗಿ ಮಾಡಲಾಗಿತ್ತು. ನನ್ನ ಜೊತೆಗೆ ಇದ್ದ 5 ಜನ ಗೆಳೆಯರಿಗೆ ಸಿಕ್ಕಿದ್ದು ಎಲ್ಲಾ ಪಾನ್ ಮಸಾಲದ ಪ್ಯಾಕೇಟುಗಳು ಹಾಗು ಬಾಟಲಿಗಳೇ! ಅದು ಬಿಟ್ಟು ಬೇರೆ ಏನು ಇಲ್ಲ! ನೋಡುವಾಗಲೇ ಅಸಹ್ಯ ಎನಿಸುತ್ತದೆ! ಜೊತೆಗೆ ಆಕ್ರೋಶವು ಉಕ್ಕಿಬಂತು. ದೇವರು ಕೊಟ್ಟ ಇಷ್ಟು ಸುಂದರ ಪರಿಸರವನ್ನು ಮನುಷ್ಯ ಹಾಳು ಮಾಡುತ್ತಾ ಇದ್ದಾನಲ್ಲಾ ಎಂದು! ಆ ಮದ್ಯದ ಬಾಟಲಿಗಳನ್ನು ನಾವು ಹಿಡಿದುಕೊಂಡು ಯಾವ ಬ್ರ್ಯಾಂಡಿನ ಬಾಟಲಿ ಎಂದು ನೋಡಿ ತಮಷೆ ಮಾಡುತ್ತಾ, ಹತ್ತಿರದಲ್ಲಿರುವ ಜನರಿಗೆ ಕೇಳುವಂತೆ ಜೋರಾಗಿ ಮಾತನಾಡುತ್ತಾ ಅವರಿಗೆ ನಾಚಿಕೆ ಆಗುವಂತೆ ಪ್ರತಿಭಟಿಸಿ ಸ್ವಚ್ಛತೆ ಮಾಡಿದೆವು! 
ಸ್ವಚ್ಛ ಸುರತ್ಕಲ್ ತಂಡದ ಸದಸ್ಯರು ಅವರ ಅನುಭವದ ಅನುಸಾರ ಹೇಳುವಂತೆ ಈ ಕಸ ಬಿಸಾಡುವ ಮಾಡುತ್ತಿರುವುದರಲ್ಲಿ ಅಲ್ಲಿನ ಸ್ಥಳೀಯರು,ಸ್ವಲ್ಪ ಕಮ್ಮಿ ಶಿಕ್ಷಣ ಪಡೆದವರ ಪಾಲು ಚಿಕ್ಕದ್ದು. ಹೆಚ್ಚು ಶಿಕ್ಷಿತರು,ದೊಡ್ಡದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರೇ ಸುತ್ತಮುತ್ತಲಿನ ಪರಿಸರಲ್ಲಿ ಕಸ ಬಿಸಾಕಿ ಹೋಗುತ್ತಿದ್ದಾರಂತೆ! ನೆನಪಿರಲಿ ಸುಶಿಕ್ಷಿತರು! ಇದೆಲ್ಲ ನೋಡುವಾಗ ಪ್ರಕೃತಿ ಮಾತೆಯು ಎಷ್ಟು ನೊಂದುಕೊಂಡಿರುವಳೋ ಎಂದು ಅನಿಸಿತು. ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಸ್ವಚ್ಛತಾ ಕಾರ್ಯವನ್ನು ಮುಗಿಸಿದೆವು. ಈ ಪುಣ್ಯ ಕೆಲಸದಲ್ಲಿ ಭಾಗಿಯಾಗಿ ಧನ್ಯತಾ ಭಾವವನ್ನು ನಾನು ಅನುಭವಿಸಿದೆ. ನಂತರ ಸ್ವಲ್ಪ ಹೊತ್ತು ಕಡಲ ಕಿನಾರೆಯಲ್ಲಿ ವಿಶ್ರಾಂತಿ ಪಡೆದು,ಆಟವಾಡಿ ಶಾಲೆಯ ವಠಾರಕ್ಕೆ ಬಂದು ಉಪಹಾರ ಮಾಡಿ ಕಾಲೇಜಿಗೆ ಹಿಂದಿರುಗಿದೆವು. 

 


 
 
ಕೆಲವು ವರ್ಷಗಳ ಮೊದಲು ರಾಮಕೃಷ್ಣ ಮಿಷನ್,ಮಂಗಳೂರು ಇದರ ಮಾರ್ಗದರ್ಶನದಲ್ಲಿ ಪುತ್ತೂರಿನಲ್ಲಿ ಶ್ರೀ ಶ್ರೀಕೃಷ್ಣ ಉಪಾಧ್ಯಾಯರ ನೇತೃತ್ವದದಲ್ಲಿ ಪ್ರತಿ ಆದಿತ್ಯವಾರ "ಸ್ವಚ್ಛ ಪುತ್ತೂರು" ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ನನ್ನ ಪೂಜ್ಯ ಅಮ್ಮನವರು ಭಾಗವಹಿಸುತ್ತಿದ್ದರು. ಅಮ್ಮನ ಜೊತೆಗೆ ನಾನು ಕೂಡ ಹೋಗುತ್ತಿದ್ದೆ. ಬಹಳ ಸಂತೋಷದಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದೆ.ಜೊತೆಗೆ ರಾಮಕೃಷ್ಣ ಮಿಷನ್ ಅವರ ವತಿಯಿಂದ ಪ್ರತಿ ಶಾಲೆಯಲ್ಲೂ ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿತ್ತು. ನನ್ನ ಶಾಲೆಯಿಂದ ನಾನು ಕೂಡ ಒಬ್ಬ "ಸ್ವಚ್ಛತಾ ಸೇನಾನಿ" ಆಗಿದ್ದೆ. ಪ್ರಸಿದ್ಧ ಜಾದೂಗಾರರಾದ ಶ್ರೀ ಕುದ್ರೇಳಿ ಗಣೇಶ್ ಅವರು ನಮ್ಮ ಶಾಲೆಗೆ ಬಂದು ಸ್ವಚ್ಛತೆಯ ಜಾಗೃತಿ ಮೂಡಿಸಲು ಜಾದೂ ಕಾರ್ಯಕ್ರಮ ಸಹ ಮಾಡಿದ್ದರು. ಇದೆಲ್ಲವೂ ಇಂದು ನನಗೆ ಮತ್ತೆ ನೆನಪಾದವು. ಆದರೆ ಆ ಮದ್ಯದ ಬಾಟಲಿಗಳು,ಪಾನ್,ಸಿಗರೇಟಿನ ಪ್ಯಾಕೇಟುಗಳನ್ನು ನೋಡುವ ಈ ಲೇಖನ ಬರೆಯಲೇ ಬೇಕೆಂದು ಅನಿಸಿತು. 
ಪ್ರತಿ ವ್ಯಕ್ತಿಯು ತನ್ನ ಮಗುವಿಗೆ ಬಾಲ್ಯದಿಂದಲೇ ಸ್ವಚ್ಛತೆಯ ಜಾಗೃತಿ ಮೂಡಿಸಿದರೆ ದಾರಿಯಲ್ಲಿ ಇದ್ದಲ್ಲೆಲ್ಲಾ ಕಸ ಬಿಸಾಕುವ ಅಭ್ಯಾಸ ಮೂಡಬಹುದೇ? ಎಲ್ಲೆಲ್ಲೋ ನಮಗೆ ಕಸ ನೋಡುವಂತೆ ಆಗುತ್ತದೆಯೇ? ಸ್ವಚ್ಛತಾ ಕಾರ್ಯಕ್ರಮದ ಅವಶ್ಯಕತೆ ಬರಬಹುದೇ? ಪ್ರತಿ ವ್ಯಕ್ತಿಯು ತನ್ನ ಸುತ್ತಲಿನ ಪರಿಸರ,ತಾನು ವಾಸಿಸುವ ಹಳ್ಳಿ,ನಗರವು ತನಗೆ ಆಶ್ರಯ ಕೊಟ್ಟ ಭೂಮಿ,ಅನ್ನ ಕೊಡುತ್ತಿರುವ ಭೂಮಿ ಎಂದು ನೆನೆಸಿ ಜವಾಬ್ದಾರಿಯುತನಾಗಿದ್ದರೇ ಪರಿಸರ ಸ್ವಚ್ಛವಾಗಿರದೆ ಇರುತ್ತದೆಯೇ? ಸ್ವಲ್ಪ ಯೋಚಿಸಿ! ಕಸ ಸಂಗ್ರಹಿಸುವುದು ಪೌರ ಕಾರ್ಮಿಕರ ಕೆಲಸ,ಇನ್ನೊಬ್ಬರ ಕೆಲಸ ಎಂದು ನಾವು ದೂಷಿಸಿಕೊಂಡು,ಇಲ್ಲಿ ಕಸ ಹಾಕಿದರೆ ನಾಳೆ ಯಾರಾದರು ಹೆಕ್ಕಿಯಾರು ಎಂದು ಹೇಳುತ್ತಾ ಇದ್ದಲ್ಲೆಲ್ಲಾ ಕಸ ಬಿಸಾಡುತ್ತೇವೆ. ಇದರಿಂದಲೇ ಪರಿಸರ ಮಾಲಿನ್ಯಗೊಂಡು ರೋಗಗಳು ನಮಗೆ ಅಂಟದೆ ಇರುತ್ತದೆಯೇ? ಸ್ವಲ್ಪ ಯೋಚಿಸಿ! ನಾನು ಯಾವಾಗ ಸ್ವಚ್ಛತಾ ಸೇನಾನಿಯಾದನೋ ಅಂದಿನಿಂದ ನಾನು ಕಸದ ಬುಟ್ಟಿಗೆ ಕಸ ಬಿಸಾಡುತ್ತೇನೆ ಹೊರತು ಬೇರೆ ಎಲ್ಲಿಯೂ ಬಿಸಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ. ಅದೇ ರೀತಿ ನಿಮಗೂ ಮಾಡಬಹುದೇ? ಇನ್ನೊಬ್ಬರು ತಪ್ಪು ಮಾಡಿದಾಗ ನೀವು ಅವರಿಗೆ ಜಾಗೃತಿ ಮೂಡಿಬಹುದೇ?
ನಾನು ಇಂದು ಬರೆದಿದ್ದನ್ನು ನೀವೆಲ್ಲ ಓದುತ್ತೀರಿ. ನಿಜಕ್ಕೂ ಇದರ ಮಹತ್ವ ತಿಳಿದವರು ಇದರ ಬಗ್ಗೆ ಯೋಚಿಸಿ ನಾನು ಏನು ಮಾಡಬಲ್ಲೇ ಎಂದು ನಿಮ್ಮೊಳಗೆ ಪ್ರಶ್ನೆ ಮಾಡಿ ನಿಮ್ಮ ಕೈಯಿಂದ ಆಗುವ ಕೆಲಸ ಮಾಡಲು ಹೊರಡುತ್ತೀರಿ. ಉಳಿದವರು ಅದೇ ಹಳೆ ಚಾಳಿಯನ್ನು ಮುಂದುವರಿ ಮಾಲಿನ್ಯ ಮಾಡುತ್ತಾ ಇರಬಹುದು. ಆದರೆ ಕೊನೆಗೆ ಲಾಭವು ನಮಗೆ,ನಷ್ಟವು ನಮಗೆ. ಯಾವಾಗ ಪ್ರಕೃತಿ ಮಾತೆ ಮುನಿಯುತ್ತಾಳೋ ಆಗ ನಮ್ಮ ಅಂತ್ಯ ಕಾಲ ಬಂತು ಎಂಬುದು ಮಾತ್ರ ನೆನಪಿರಲಿ ಅಷ್ಟೇ!
ಇಷ್ಟು ಹೇಳಿ ನನ್ನ ಈ ಲೇಖನಕ್ಕೆ ಮಂಗಳ ಹಾಡುತ್ತೇನೆ.
🖊ಶ್ರೀಕರ ಬಿ
 
 

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!