ಕಳಚಿದೆ ದಕ್ಷಿಣ ಭಾರತ,ಉತ್ತರ ಭಾರತ ನಡುವಿನ ಒಂದು ಸಂಪರ್ಕ ಕೊಂಡಿ! ಮತ್ತೆ ಕೇಳಿ ಬರುತ್ತಿದೆ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭದ ಕೂಗು!

ಕಳಚಿದೆ ದಕ್ಷಿಣ ಭಾರತ,ಉತ್ತರ ಭಾರತ ನಡುವಿನ ಒಂದು ಸಂಪರ್ಕ ಕೊಂಡಿ! ಮತ್ತೆ ಕೇಳಿ ಬರುತ್ತಿದೆ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭದ ಕೂಗು!



ಭಾರತೀಯ ರೈಲ್ವೆ ಜಾಲ ಇದು ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳ ಪಟ್ಟಿಯಲ್ಲಿ ಅಗ್ರ 5 ಸ್ಥಾನಗಳಲ್ಲಿ ಬರುವ ರೈಲ್ವೆ ಜಾಲವಾಗಿದೆ. ರೈಲು ಕೇವಲ ಪ್ರಯಾಣಿಕರನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ಕರೆದುಕೊಂಡು ಹೋಗುವುದಲ್ಲದೇ,ಒಬ್ಬನ ಮುಂದಿನ ಬದುಕಿನ ಆಶಯ,ಕನಸುಗಳನ್ನು ಸಹ ಕಟ್ಟಿಕೊಂಡು ಹೋಗುತ್ತದೆ. ಇಂತಹ ರೈಲ್ವೆ ಜಾಲದಲ್ಲಿ ದಕ್ಷಿಣ ಭಾರತ,ಉತ್ತರ ಭಾರತ ನಡುವಿನ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಸುತ್ತಿದ್ದ ಒಂದು ರೈಲು ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ನವಯುಗ ಎಕ್ಸ್‌ಪ್ರೆಸ್.

1990ರಲ್ಲಿ ಮಂಗಳೂರಿನಿಂದ ಜಮ್ಮು ತಾವಿ ತನಕ ಆರಂಭಗೊಂಡ ಈ ರೈಲು ಸೇವೆ 2015ರಲ್ಲಿ ಕತ್ರ ತನಕ ವಿಸ್ತರಣೆಗೊಂಡಿತು. ಈ ರೈಲು ದಕ್ಷಿಣ ಭಾರತ ಹಾಗು ಉತ್ತರ ಭಾರತ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಈ ರೈಲು ಕರ್ನಾಟಕದ ಮಂಗಳೂರಿನಿಂದ ಸಂಜೆ 5 ಗಂಟೆಗೆ ಹೊರಟು ಕೇರಳ,ತಮಿಳುನಾಡು,ಆಂಧ್ರಪ್ರದೇಶ,ತೆಲಂಗಾಣ,,ಮಹಾರಾಷ್ಟ್ರ,ಮಧ್ಯಪ್ರದೇಶ,ಉತ್ತರ ಪ್ರದೇಶ,ದೆಹಲಿ,ಹರಿಯಾಣ,ಪಂಜಾಬ್ ಹಾಗು ಜಮ್ಮು ಮತ್ತು ಕಾಶ್ಮೀರದ ಕತ್ರಕ್ಕೆ ಸುಮಾರು 12 ರಾಜ್ಯಗಳ ಮೂಲಕ ಸಂಚರಿಸುತ್ತಿತ್ತು. ಈ ರೈಲು ತನ್ನ ಪ್ರಯಾಣದಲ್ಲಿ 3686 ಕಿ.ಮಿ ಕ್ರಮಿಸಿ, 70 ಗಂಟೆ 5 ನಿಮಿಷ ಅವಧಿಯನ್ನು ತೆಗೆದುಕೊಂಡು ಪ್ರಯಾಣದ ದೂರದ ಲೆಕ್ಕದಲ್ಲಿ ದೇಶದ 4ನೇ ದೊಡ್ಡ ರೈಲು ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಅಷ್ಟೇ ಅಲ್ಲದೇ ಈ ರೈಲು ತನ್ನ ಪ್ರಯಾಣದಲ್ಲಿ ಮಂಗಳೂರು,ಪಾಲಕ್ಕಾಡ್,ಕೊಯಂಬತ್ತೂರು,ಸೇಲಂ,ತಿರುಪತಿ,ವಿಶಾಖಪಟ್ಟಣ,ನಾಗಪುರ,ಜಾನ್ಸಿ,ಆಗ್ರಾ,ಮಥುರ,ದೆಹಲಿ,ಪಠಾಣಕೋಟ್,ಜಮ್ಮು,ಕತ್ರ ಹೀಗೆ ಹಲವಾರು ಪ್ರಸಿದ್ಧ ನಗರಗಳು,ಯಾತ್ರಾ ಸ್ಥಳಗಳನ್ನು ಹಾದುಹೋಗುತ್ತಿದ್ದುದರಿಂದ ಹಲವು ರಾಜ್ಯಗಳ ಜನರ ಬಹಬೇಡಿಕೆಯ ರೈಲಾಗಿತ್ತು. ಕರಾವಳಿ ಕರ್ನಾಟಕ,ಉತ್ತರ ಕೇರಳದಿಂದ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಏಕೈಕ ರೈಲು ನವಯುಗ ಎಕ್ಸ್‌ಪ್ರೆಸ್ ರೈಲು ಆಗಿತ್ತು. 20 ಕೋಚುಗಳ ಈ ರೈಲಿಗೆ ಈರೋಡಿನಲ್ಲಿ ತಿರುನೆಲ್ವೆಲಿಯಿಂದ ಬರುವ ಸ್ಲಿಪ್ ಕೋಚುಗಳನ್ನು ಜೋಡಿಸಿ ಕತ್ರ ಕಡೆಗೆ ಪ್ರಯಾಣವನ್ನು ಮುಂದುವರಿಸಲಾಗುತ್ತಿತ್ತು. 
ಕೊರೋನ ಮಹಾಮಾರಿಯ ಕಾಟದಿಂದ ಲಾಕ್ಡೌನ್ ಸಮಯದಲ್ಲಿ ಭಾರತೀಯ ರೈಲ್ವೆ ಇಲಾಖೆ ದೇಶದಾದ್ಯಂತ ಎಲ್ಲಾ ರೈಲು ಸೇವೆಗಳನ್ನು ರದ್ದುಗೊಳಿಸಿತ್ತು. ಲೌಕ್ಡೌನ್ ತೆಗೆದ ನಂತರ 2021ರಲ್ಲಿ ರೈಲ್ವೆ ಇಲಾಖೆಯು ಎಲ್ಲಾ ರೈಲು ಸೇವೆಗಳನ್ನು ಮರು ಆರಂಭಿಸಲು ನಿರ್ಧರಿಸಿ ಹೆಚ್ಚಿನ ರೈಲು ಸೇವೆಗಳು ಈಗಾಗಲೇ ಆರಂಭಗೊಂಡಿದೆ. ಆದರೆ ಮಂಗಳೂರು ಸೆಂಟ್ರಲ್-ಕತ್ರಾ ನವಯುಗ ಎಕ್ಸ್‌ಪ್ರೆಸ್ ಮಾತ್ರ ಇನ್ನೂ ಹಳಿಯೇರಿಲ್ಲ. ತಿರುನೆಲ್ವೆಲಿಯಿಂದ ಕತ್ರ ಕಡೆಗೆ ನವಯಗ ಎಕ್ಸಪ್ರೆಸ್ ಜತೆಗೆ ಇದ್ದ ಸ್ಲಿಪ್ ರೈಲನ್ನು ಸ್ವತಂತ್ರ ರೈಲಾಗಿ ಮಾಡಿ ಪ್ರಸ್ತುತ 18 ಕೋಚಗಳ ಎಲ್.ಹೆಚ್.ಬಿ ರೇಕಿನೊಂದಿಗೆ ಸಂಚರಿಸುತ್ತಿದೆ. ಆದರೆ ಮಂಗಳೂರಿನಿಂದ ಕತ್ರಕ್ಕೆ ಹೋಗುವ ರೈಲನ್ನು ತಿರುನೆಲ್ವೆಲಿಯಿಂದ ಹೋಗುವ ರೈಲಿನ ಸ್ಲಿಪ್ ರೈಲು ಎಂದು ನೆಪ ಹೇಳಿ ರೈಲ್ವೆ ಇಲಾಖೆಯು ಈ ರೈಲನ್ನು ಇನ್ನೂ ಆರಂಭಿಸದೆ ಕೂತಿದೆ. ಇದು ಈ ಭಾಗದ ಜನರಿಗೆ ಅನ್ಯಾಯ ಆಗಿದೆ,ಅಲ್ಲದೇ ಜನರ ಆಕ್ರೋಶಕ್ಕೂ ಕಾರಣವಾಗಿದೆ. 

ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರು ಈ ರೈಲು ಪುನರಾರಂಭಿಸಬೇಕು ಎಂದು ಟ್ವೀಟ್ ಮೂಲಕ ದಕ್ಷಿಣ ರೈಲ್ವೆಗೆ ಮನವಿ ಮಾಡಿದ್ದಾರೆ.

ಪ್ರಸ್ತುತ ಮತ್ತೇ ಈ ರೈಲನ್ನು ಪುನರಾರಂಭಿಸಲು ಬೇಡಿಕೆಗಳು ಕೇಳಿ ಬರುತ್ತಿದೆ. ಹೇಗೂ ತಿರುನೆಲ್ವೆಲಿಯಿಂದ ಕತ್ರಕ್ಕೆ ಹೋಗುವ ರೈಲು ಸ್ವತಂತ್ರವಾಗಿ ಓಡುತ್ತಿರುವ ಕಾರಣ ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ನವಯುಗ ಎಕ್ಸ್‌ಪ್ರೆಸ್ ರೈಲನ್ನು ಒಂದೋ ಮಂಗಳೂರು-ಮಡಗಾಂವ್-ಕೋಟ-ದೆಹಲಿ ಮೂಲಕ ಇಲ್ಲದಿದ್ದರೆ ಕರಾವಳಿ ಕರ್ನಾಟಕ,ಮಧ್ಯ ಕರ್ನಾಟಕ,ಉತ್ತರ ಕರ್ನಾಟಕದ ಎಲ್ಲಾ ಜನರಿಗೆ ದೇಶದ ರಾಜಧಾನಿ ದೆಹಲಿಗೆ ತೆರಳಲು ಹಾಗು ಪವಿತ್ರ ವೈಷ್ಣೋ ದೇವಿ ಯಾತ್ರೆಗೆ ತೆರಳಲು ಉಪಯೋಗ ಆಗುವ ಹಾಗೆ ಮಂಗಳೂರು-ಹಾಸನ-ಮೀರಜ್-ಪುಣೆ ದೆಹಲಿ ಅಥವ ಮಂಗಳೂರು-ಹಾಸನ-ಹುಬ್ಬಳ್ಳಿ-ಬಳ್ಳಾರಿ ಮೂಲಕ ಕರ್ನಾಟಕ ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಸಂಚರಿಸುವ ಮಾರ್ಗದಲ್ಲಿ ಓಡಿಸಿ ಕರ್ನಾಟಕದ ಹಲವು ಭಾಗಗಳ ಜನರಿಗೆ ಉಪಯೋಗ ಆಗುವಂತೆ ಮಾಡಬೇಕು ಎಂಬ ಬೇಡಿಕೆಗಳು ಕೇಳಿ ಬರುತ್ತಿದೆ. ಆದ್ದರಿಂದ ರೈಲ್ವೆ ಇಲಾಖೆಯು ಶೀಘ್ರವಾಗಿ ಈ ರೈಲನ್ನು ಪುನರಾರಂಭಿಸಲು ಕ್ರಮಕೈಗೊಳ್ಳಬೇಕಿದೆ.

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!