ನಾನು ಕಂಡ ಕಲ್ಮಡ್ಕದ ಯಕ್ಷಗಾನ ಕಾರ್ಯಕ್ರಮ!

ಆ ಹಳ್ಳಿ ಬಂಟಮಲೆಯ ತಟದಲ್ಲಿರುವ ಹಳ್ಳಿ. ಯಕ್ಷಾಭಿಮಾನಿಗಳ ಊರು ಎಂದೇ ಪ್ರಸಿದ್ಧ ಪಡೆದ ಹಳ್ಳಿ. ಇಂತಹ ಹಳ್ಳಿಯಲ್ಲಿ ಯಕ್ಷಲೋಕದ ಮೇರು ಭಾಗವತರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಯಕ್ಷಗಾನ ಕಾರ್ಯಕ್ರಮ ನಡೆಯುತ್ತಿದೆ ಎಂದು ಊರಿನಲ್ಲಿ ಒಂದು ಹಬ್ಬದ ವಾತಾವರಣ ಸೃಷ್ಟಿಗೊಂಡಿತ್ತು ಜೊತೆಗೆ ಆ ಮೇರು ಭಾಗವತರನ್ನು ಸ್ಮರಿಸಲು ಊರಿನ ಜನರು ಅಣಿಯಾಗಿದ್ದರು. ನಾನು ಇಷ್ಟೆಲ್ಲ ಹೇಳಿದು ಪರಶುರಾಮ ಸೃಷ್ಟಿಯ ನಾಡಿನ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬಗ್ಗೆ. ಮೊನ್ನೆ ತಾನೆ ಶನಿವಾರದಂದು ಯಕ್ಷಲೋಕದ ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಇವರ ಸಂಸ್ಮರಣಾ ಕಾರ್ಯಕ್ರಮ ಹಾಗು ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ಇವರ ಜನ್ಮಶತಾಬ್ದಿ ಕಾರ್ಯಕ್ರಮ ಊರಿನ ವಿದ್ಯಾದೇಗುಲದ ವಠಾರದಲ್ಲಿ ನಡೆಯಿತು. ಕಲ್ಮಡ್ಕದಲ್ಲಿ ಒಂದು ಯಕ್ಷಗಾನ ಕಾರ್ಯಕ್ರಮ ನಡೆಯುತ್ತದೆ ಅಂದರೆ ಊರಿನ ಮಾತ್ರವಲ್ಲದೆ ಹತ್ತಿರದ ಗ್ರಾಮಗಳ ಜನರು ಕೂಡ ಯಕ್ಷಗಾನ ನೋಡಲು ಸೇರುತ್ತಾರೆ.
ಅಕ್ಟೋಬರ್ 23ರಂದಷ್ಟೇ ನಾನು ಪುತ್ತೂರಿನಲ್ಲಿ ಪದ್ಯಾಣ ಗಣಪತಿ ಭಟ್ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಅದರ ಮರುದಿನ ನನಗೆ ಕಲ್ಮಡ್ಕದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಾಟ್ಸಾಪಿನಲ್ಲಿ ಒಂದು ಗುಂಪಿನಲ್ಲಿ ಸಿಕ್ಕಿತು. ಹೇಗೂ ನನ್ನ ಅಜ್ಜಿ ಮನೆ ಕಲ್ಮಡ್ಕದಲ್ಲೇ ಇರುವುದರಿಂದ ಕೂಡಲೇ ಕಾರ್ಯಕ್ರಮಕ್ಕೆ ಹೋಗುವುದೇ ಎಂದು ನಿರ್ಧರಿಸಿ ಅಮ್ಮನ ಬಳಿ ಹೇಳಿದೆ. ಅಮ್ಮನ ಹೈಕಮಾಂಡಿನಿಂದ ಒಪ್ಪಿಗೆ ಸಿಕ್ಕಿತು. ಭಾರಿ ಉತ್ಸುಕನಾಗಿದ್ದೆ. ಅಂತೂ ಶನಿವಾರ ಬಂತು! ಬೆಳಗ್ಗೆ ಕಾಲೇಜಿಗೆ ಹೋಗಿ ಆ ದಿನ ತರಗತಿ ಬೇಗ ಮುಗಿದ ಕಾರಣ ತರಗತಿ ಬಿಟ್ಟ ಕೂಡಲೆ ಪುತ್ತೂರು ಬಸ್ಸು ಹತ್ತಲು ಬಸ್ ನಿಲ್ದಾಣ ಬಳಿ ಓಡಿ ಬಂದು ಬೇಗ ಮನೆಗೆ ತಲುಪಿ ಕಲ್ಮಡ್ಕಕ್ಕೆ ಹೋಗಲು ಅಣಿಯಾದೆ. ಮಧ್ಯಾಹ್ನ ತಾಳಮದ್ದಳೆ ಕಾರ್ಯಕ್ರಮ ನೋಡಲು ನನಗೆ ಆಗಬಹುದೇ ಎಂಬ ಅನುಮಾನವಿತ್ತು. ನಾನು ಕಲ್ಮಡ್ಕ ತಲುಪುವಾಗ ಆಗಷ್ಟೇ ಕಾರ್ಯಕ್ರಮ ಆರಂಭಗೊಂಡಿತ್ತು. ನಂತರ ಅಜ್ಜಿ ಮನೆಗೆ ಹೋಗಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುತ್ತಿರುವಾಗ ಮಾವ ತಾಳಮದ್ದಳೆ ನೋಡಲು ಹೋಗುವ ಎಂದು ಹೇಳಿದರು. ಮಾವನ ಜೊತೆಗೆ ಸಂತೋಷದಿಂದ ಹೋಗಿ ಕಾರ್ಯಕ್ರಮ ವೀಕ್ಷಿಸಿದೆ. ಅಂದು ತಾಳಮದ್ದಳೆಯ ಪ್ರಸಂಗ "ವೀರಮಣಿ ಕಾಳಗ". ಎಲ್ಲಾ ಘಟಾನುಘಟಿ ಕಲಾವಿದರ ಸಮಾಗಮ! ಹಿಮ್ಮೇಳದಲ್ಲಿ ಭಾಗವತರಾಗಿ ಗಾನಕೋಗಿಲೆ ಶ್ರೀ ದಿನೇಶ್ ಅಮ್ಮಣ್ಣಯರು ಇದ್ದರು. ಚೆಂಡೆ-ಮದ್ದಳೆಗೆ ಶ್ರೀ ಪದ್ಯಾಣ ಶಂಕರನಾರಾಯಣ ಭಟ್,ಶ್ರೀ ಪದ್ಯಾಣ ಜಯರಾಮ ಭಟ್ ಹಾಗು ಶ್ರೀ ಚೈತನ್ಯಕೃಷ್ಣ ಪದ್ಯಾಣ ಅವರು ಯಕ್ಷಮಾತೆಯ ಸೇವೆ ಸಲ್ಲಿಸಿದರು. ಅರ್ಥಧಾರಿಗಳಾಗಿ ಶತ್ರುಘ್ನನಾಗಿ ಶ್ರೀ ರಾಧಾಕೃಷ್ಣ ಕಲ್ಚಾರ್,ವೀರಮಣಿಯಾಗಿ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್,ಈಶ್ವರನಾಗಿ ಶ್ರೀ ವಾಸುದೇವ ರಂಗ ಭಟ್,ಹನುಮಂತನಾಗಿ ಶ್ರೀ ಉಜಿರೆ ಅಶೋಕ ಭಟ್ ಅವರು ಇದ್ದರು. ಅಮ್ಮಣ್ಣಯರ ಭಾಗವತಿಕೆ ಕೇಳುವುದೇ ಒಂದು ಸೌಭಾಗ್ಯ! ತಾಳಮದ್ದಳೆ ಒಟ್ಟು ನೋಡಿದರೆ ಚೆನ್ನಾಗಿ ಮೂಡಿಬಂತು. ನನಗೆ ತಾಳಮದ್ದಳೆಯ ಬಹುತೇಕ ಭಾಗಗಳನ್ನು ನೋಡಲು ಆಗಲಿಲ್ಲ. ಆದರೆ ಅಲ್ಪಸ್ವಲ್ಪ ನೇರಪ್ರಸಾರ ನೋಡಿ ಕೊನೆಗೆ ಈಶ್ವರ ಮತ್ತು ಹನುಮಂತನ ಯುದ್ಧ ಭಾಗವನ್ನು ನೇರವಾಗಿ ಸಭೆಯಲ್ಲಿ ನೋಡಿದೆ. ವಾಸುದೇವ ರಂಗ ಭಟ್ ಮತ್ತು ಉಜಿರೆ ಅಶೋಕ ಭಟ್ಟರ ಮಾತುಕತೆಯನ್ನು ನೋಡಿ ಸಭೆಯಲ್ಲಿದ್ದ ಪ್ರೇಕ್ಷಕರು ಮೂಕವಿಸ್ಮಿತರಾದರು! ಸಭೆಯಲ್ಲಿದ ಪ್ರೇಕ್ಷಕರು ಇನ್ನು ಒಬ್ಬೊಬ್ಬರ ಬೆಂಬಲಕ್ಕೆ ನಿಲ್ಲುತ್ತಾರೋ ಎಂಬಂತೆ ವಾತಾವರಣ ಇತ್ತು! ನಂತರ ಸಭಾ ಕಾರ್ಯಕ್ರಮ ನಡೆದು "ಕೃಷ್ಣಾರ್ಜುನ ಕಾಳಗ" ಯಕ್ಷಗಾನ ಬಯಲಾಟ ನಡೆಯಿತು. ನಾನು ತಾಳಮದ್ದಳೆಕ್ಕಿಂತಲು ಹೆಚ್ಚು ನೋಡ ಬಯಿಸಿದ್ದು ಬಯಲಾಟವನ್ನು. ಕಲ್ಮಡ್ಕದಂತಹ ಊರಿನಲ್ಲಿ ಯಕ್ಷಗಾನ ಬಯಲಾಟ ನೋಡುವುದೆಂದರೆ ಅದೇನು ಒಂದು ಖುಷಿ ನನಗೆ! ಯಕ್ಷಗಾನ ಬಯಲಾಟ ಆರಂಭದಿಂದ ಹಿಡಿದು ಕೊನೆಯವರೆಗೆ ಸಂಪೂರ್ಣವಾಗಿ ನೋಡಿದೆ. ಬಯಲಾಟದಲ್ಲಿ ಭಾಗವತರಾಗಿ ನನ್ನ ನೆಚ್ಚಿನ ಭಾಗವತರಲ್ಲೊಬ್ಬರಾದ ಗಾನಸುರಭಿ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರು ಪ್ರೇಕ್ಷಕರನ್ನು ತಮ್ಮ ಗಾಯನದ ಮೂಲಕ ಸೆಳೆದರು. ಚೆಂಡೆಯಲ್ಲಿ ನನ್ನ ನೆಚ್ಚಿನ ಕಲಾವಿದರಲ್ಲಿ ಒಬ್ಬರಾದ ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಇದ್ದರು. ಮದ್ದಳೆಯಲ್ಲಿ ಶ್ರೀ ಚೈತನ್ಯಕೃಷ್ಣ ಪದ್ಯಾಣ ಕಲಾಮಾತೆಯ ಸೇವೆಗೈದರು. ಮುಮ್ಮೇಳದಲ್ಲಿ ಕೃಷ್ಣನ ಪಾತ್ರಕ್ಕೆ ಶ್ರೀ ದಿವಾಕರ ರೈ ಸಂಪಾಜೆ ತಕ್ಕದಾದ ನ್ಯಾಯ ಒದಗಿಸಿದರು.ಪ್ರೇಕ್ಷಕರು ಕೃಷ್ಣನ ಪಾತ್ರ ನೆಚ್ಚಿ ಮಾತನಾಡುತ್ತಿದ್ದದ್ದನ್ನು ನಾನು ಕಂಡೆ. ಸುಭದ್ರೆ ಹಾಗು ಈಶ್ವರನ ಪಾತ್ರವನ್ನು ಶ್ರೀ ಪ್ರಸಾದ್ ಸವಣೂರು ಅವರು ತುಂಬಾ ಚೆನ್ನಾಗಿ ನಿರ್ವಹಿಸಿದರು. ನನಗೆ ಸುಭದ್ರೆ-ಅಭಿಮನ್ಯು-ಕೃಷ್ಣನ ಸಂಭಾಷಣೆಯ ಭಾಗ ಇಷ್ಟವಾಯಿತು. ಅಭಿಮನ್ಯುವಿನ ಪಾತ್ರವನ್ನು ಯುವ ಕಲಾವಿದ ಶ್ರೀ ಅಕ್ಷಯ್ ಭಟ್ ಮೂಡಬಿದ್ರೆ ನಿರ್ವಹಿಸಿದರು. ಅಭಿಮನ್ಯು ತನ್ನ ಮಾವನಾದ ಕೃಷ್ಣನ ಮೇಲೆ ಆಕ್ರಮಣ ಮಾಡುವ ಯೋಚನೆ,ಸುಭದ್ರೆ,ಕೃಷ್ಣನ ಜೊತೆಗೆ ಮಾತನಾಡುವ ಭಾಗ ತುಂಬಾ ಚೆನ್ನಾಗಿ ಮೂಡಿಬಂತು. ಪ್ರೇಕ್ಷಕರು ನೋಡಿ ನಕ್ಕರು! ನನ್ನ ಬಳಿ ಕುಳಿತಿದ್ದ ಹಿರಿಯರು ಸ್ವಲ್ಪವೂ ವಿಚಲಿತರಾಗದೆ ಯಕ್ಷಗಾನ ನೋಡುತ್ತಿದ್ದದ್ದನ್ನು ನಾನು ಕಂಡೆ! ನಂತರ ಬಂದದ್ದು ಆ ಆಟದ ನನಗೆ ಅತಿ ಇಷ್ಟವಾದ ಪಾತ್ರ ದಾರುಕ! ದಾರುಕನಾಗಿದ್ದದ್ದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಹನುಮಗಿರಿ ಮೇಳದ ಹಾಸ್ಯ ಕಲಾವಿದ,ನನ್ನ ನೆಚ್ಚಿನ ಹಾಸ್ಯಗಾರರಲ್ಲೊಬ್ಬರಾದ ಶ್ರೀ ಬಂಟ್ವಾಳ ಜಯರಾಮ ಆಚಾರ್ಯ ಅವರು! ಹಾಸ್ಯಗಾರರು ಬರುವಾಗಲೇ ಜನರ ಮುಖದಲ್ಲಿ ನಗು ಮೂಡಲು ಆರಂಭಗೊಳ್ಳುತ್ತದೆ.ಇದನ್ನು ನಾನು ಬಹುತೇಕ ಕಡೆ ಗಮನಿಸಿದ್ದೇನೆ. ಅದು ಹಾಸ್ಯಗಾರರ ಯಶಸ್ಸಿಗೂ ಕೊಡುಗೆ ನೀಡುತ್ತದೆ. ಅದರಲ್ಲೂ ಬಂಟ್ವಾಳ ಜಯರಾಮ ಆಚಾರ್ಯರು ರಂಗಸ್ಥಳಕ್ಕೆ ಬರುವಾಗ ಸಭೆಯಯಲ್ಲಿರುವ ಪ್ರೇಕ್ಷಕರ ಮುಖದಲ್ಲಿ ನಗು ಕಾಣದೆ ಇರುವುದು ತೀರಾ ಅಪರೂಪ. ಮೊನ್ನೆಯೂ ಅಷ್ಟೇ ಇವರು ಬಂದದ್ದೆ ತಡ ಪ್ರೇಕ್ಷಕರು ನಗಲು ಆರಂಭಿಸಿದ್ದೆ! ಅದು ನೋಡಿ ಹಾಸ್ಯಗಾರರ ತಾಕತ್ತು! ಅವರು ರಂಗಸ್ಥಳದಲ್ಲಿದ್ದಷ್ಟು ಹೊತ್ತು ಮನೋರಂಜನೆಗೆ ಕೊರತೆ ಇರಲೇ ಇಲ್ಲ! ಆ ಮಧ್ಯರಾತ್ರಿಯ ಹೊತ್ತಲ್ಲಿ ನಿದ್ದೆ ಮಾಡುತ್ತಿದ್ದ ಪ್ರೇಕ್ಷಕರು ಬಹಳ ಕಡಿಮೆ! ಮೊದಲು ಕೃಷ್ಣನ ಜೊತೆಗೆ ಸಂಭಾಷಣೆ ಆದರೆ ನಂತರ,ಅರ್ಜುನನ ಜೊತೆಗೆ ಮಾತಿಗೆ ಇಳಿದು ಕೊನೆಗೆ ಧರ್ಮರಾಯನ ಬಳಿ ಮಾತನಾಡುತ್ತೇನೆ ಎಂದು ಹೋದಾಗ ದಾರುಕನನ್ನು ಎಳೆದುಕೊಂಡು ಬರುವ ಭೀಮ ನಂತರ ಚೆನ್ನಾಗಿ ದಾರುಕನಿಗೆ ಪಾಠ ಕಲಿಸುತ್ತಾನೆ. ಅರ್ಜುನನಾಗಿ ಆ ಆಟದಲ್ಲಿ ಶ್ರೀ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಪಾತ್ರ ನಿರ್ವಹಿಸಿದರು. ನಿಜಕ್ಕೂ ಅರ್ಜುನನೇ!ಸ್ವಲ್ಪ ಗಂಭೀರ ಪಾತ್ರವಾದರು ದಾರುಕನ ಜೊತೆಗೆ ಸ್ವಲ್ಪವಾದರೂ ಹಾಸ್ಯದಿಂದ ಮಾತನಾಡುವುದು ತಪ್ಪಲ್ಲ ಎಂಬುದು ನನ್ನ ಅಭಿಪ್ರಾಯ(ವಿಮರ್ಶೆ ಅಲ್ಲ). ಆದ್ದರಿಂದ ಮೊನ್ನೆ ದಾರುಕನ ಜೊತೆಗೆ ಅರ್ಜುನನ ಹಾಸ್ಯ ಕೂಡಿತ ಸಂಭಾಷಣೆ ತುಂಬಾ ಚೆನ್ನಾಗಿತ್ತು. ಭೀಮನಾಗಿ ಶ್ರೀ ಶಶಿಕಿರಣ್ ಕಾವು ಪಾತ್ರ ನಿರ್ವಹಿಸಿದರು. ಭೀಮನ ಪಾತ್ರಕ್ಕೆ ನ್ಯಾಯ ಒದಗಿಸುವುದರಲ್ಲಿ ಸಫಲರಾದರು ಕೂಡ. ದಾರುಕನಿಗೆ ಚೆನ್ನಾಗಿ ಸನ್ಮಾನ ಮಾಡಿದರು!
ಬಲರಾಮನಾಗಿ ಯಕ್ಷಗಾನದ ಆಲ್ ರೌಂಡರ್ ಎಂದು ಪ್ರಸಿದ್ಧಿ ಪಡೆದಿರುವ ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆಯವರು.ಬಲರಾಮನ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದರು. ಹಾಸ್ಯ ಸಂಭಾಷಣೆಯನ್ನು ಜೊತೆಗೆ ಸೇರಿಸಿ ಪ್ರೇಕ್ಷಕರ ಮುಖದಲ್ಲಿ ನಗುಮೂಡಿಸಿದರು. ಪ್ರಸಂಗದಲ್ಲಿ ಬರುವ ಸಣ್ಣ ಪಾತ್ರ ಪಾರ್ವತಿ. ಪಾರ್ವತಿಯ ಪಾತ್ರವನ್ನು ಶರಣ್ಯ ಕೆರೆಮೂಲೆಯವರು ನಿರ್ವಹಿಸಿದರು. ಒಟ್ಟು ಹೇಳುತ್ತಿದ್ದರೆ ನನಗೆ ಯಕ್ಷಗಾನ ಬಯಲಾಟ ತುಂಬಾ ಇಷ್ಟವಾಯಿತು. ಇಡೀ ದಿನದ ಕೆಲಸದಿಂದ ಸುಸ್ತಾಗಿದ್ದರೂ ಆ ಸುಸ್ತು ಯಕ್ಷಗಾನ ನೋಡಿ ಕಡಿಮೆಗೊಂಡು ನಿದ್ರೆಯು ಬಿಟ್ಟು ಹೋಗುವಂತೆ ಮಾಡಿತು. ಉತ್ತಮ ರೀತಿಯಲ್ಲಿ ಆ ಯಕ್ಷಗಾನ ಮೂಡಿಬಂತು. ಪದ್ಯಾಣ ಭಾಗವತರು ನಮ್ಮೊಂದಿಗೆ ಭೌತಿಕವಾಗಿ ಇಲ್ಲ,ಆದರೆ ಅವರ ನೆನಪುಗಳು ನಮ್ಮೊಂದಿಗೆ ಜೀವನಪರ್ಯಂತ ಇದ್ದೇ ಇರುತ್ತದೆ.  
ಈ ಕಾರ್ಯಕ್ರಮವನ್ನು ಆಯೋಜಿಸಿದ ಸಂಘಟಕರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ವಿಮರ್ಶೆ ಬರೆಯುವವಷ್ಟು ದೊಡ್ಡವನು ನಾನಲ್ಲ,ನನ್ನ ಅನಿಸಿಕೆಗಳನ್ನು ನಾನು ಇಲ್ಲಿ ಬರೆದೆ. ನಿಮ್ಮ ಅಭಿಪ್ರಾಯಗಳಿಗೆ ನಾನು ಎಂದಿಗೂ ಕಾಯುತ್ತಿರುತ್ತೇನೆ. ನನ್ನ ಈ ಪುಟ್ಟ ಲೇಖನ ನಿಮಗೂ ಇಷ್ಟವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ
"ಕೃಷ್ಣಾರ್ಜುನ ಕಾಳಗ" ಯಕ್ಷಗಾನದ ಹಾಸ್ಯ ಭಾಗವನ್ನು ನಾನು ಚಿತ್ರೀಕರಿಸಿದ್ದೆ. ಆಸಕ್ತರು ವೀಡಿಯೊವನ್ನು ನಾನು ನೀಡುವ ಲಿಂಕ್ ಮೂಲಕ ವೀಕ್ಷಿಸಬಹುದು.
||ಯಕ್ಷಗಾನಂ ಗೆಲ್ಗೆ||
ಬರಹ: ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!