"ಕಾಂತಾರ" ಇದು ನಿಜಕ್ಕೂ ಒಂದು ದಂತ ಕಥೆ!

 "ಕಾಂತಾರ" ಇದು ನಿಜಕ್ಕೂ ಒಂದು ದಂತ ಕಥೆ!



ಕರ್ನಾಟಕದ ಉದ್ದಗಲಕ್ಕೂ ಎಲ್ಲಿ ನೋಡಿದರು ಸದ್ಯ ಕೇಳಿಬರುತ್ತಿರುವ ಪದ ಕಾಂತಾರ!

ಸೆಪ್ಟೆಂಬರ್ 30ಕ್ಕೆ ಬಿಡುಗಡೆಗೊಂಡ ಈ ಸಿನಿಮಾ ಇತಿಹಾಸವನ್ನೇ ಸೃಷ್ಟಿಸಿದೆ. 

ತುಳುನಾಡು ಪರಶುರಾಮನ ಸೃಷ್ಟಿ. ಈ ಪವಿತ್ರ ಭೂಮಿಯ ಸಂಸ್ಕೃತಿ,ಪ್ರಸಿದ್ಧ ಕ್ರೀಡೆ ಕಂಬಳ,ದೈವಾರಾಧನೆ ವಿಷಯಗಳನ್ನು ಈ ಸಿನಿಮಾದಲ್ಲಿ ಕಾಣಬಹುದು.

ಸಿನಿಮಾದ ಮುಖ್ಯ ಪಾತ್ರ/ನಾಯಕನಾದ ಶಿವನ ರೌದ್ರಾವತಾರ, ಅವನ ಗುಂಪಿನೊಂದಿಗೆ ಅವನು ಮಾಡುವ ಕೆಲಸಗಳು,ಕಾಡನ್ನು ರಕ್ಷಿತಾರಣ್ಯ ಎಂದು ಘೋಷಿಸಲು ಪ್ರಯತ್ನ ಪಡುವ ಅರಣ್ಯ ಅಧಿಕಾರಿ ಮುರಳಿ,ಮೋಸದಿಂದ ಇಡೀ ಊರಿನ ಜಾಗವನ್ನು ಕಬಳಿಸಲು ನೋಡುವ ಊರಿನ ಮುಖ್ಯಸ್ಥ ಹೀಗೆ ಹಲವಾರು ಸನ್ನಿವೇಶಗಳು ಈ ಸಿನಿಮಾದಲ್ಲಿ ಕಾಣಬಹುದು.

ಪ್ರತಿ ಬಾರಿ ರಿಷಭ್ ಶೆಟ್ಟಿಯವರು ನಿರ್ದೇಶನ ಮಾಡಿ ಅತ್ಯುತ್ತಮ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರೆ, ಈ ಬಾರಿ ತಾನು ಒಬ್ಬ ಒಳ್ಳೆಯ ನಿರ್ದೇಶಕ ಮಾತ್ರವಲ್ಲದೆ ಒಳ್ಳೆಯ ನಟನು ಕೂಡ ಎಂದು ತೋರಿಸಿದ್ದಾರೆ. ಅವರ ನಟನೆ ನಾನು ತುಂಬಾ ನೆಚ್ಚಿಕೊಂಡೆ. ಅದರಲ್ಲೂ ಸಿನಿಮಾದ ಕೊನೆಯ ಭಾಗವನ್ನು ನೋಡಿ ಮೈ ಜುಮ್! ಎನಿಸಿತು. ಚಿತ್ರದ ನಾಯಕಿ ಸಪ್ತಮಿ ಗೌಡ ಅವರ ನಟನೆ ಕೂಡ ತುಂಬಾ ಚೆನ್ನಾಗಿತ್ತು. ರಿಷಭ್ ಶೆಟ್ಟಿಯವರ ನಟನೆ ಬಿಟ್ಟರೆ ನನಗೆ ಅತಿ ಹೆಚ್ಚು ಇಷ್ಟವಾದದ್ದು ದೀಪಕ್ ರೈ ಪಾಣಾಜೆ ಮತ್ತು ಪ್ರಕಾಶ್ ತುಮಿನಾಡು ಅವರ ನಟನೆ. ಆ ಸನ್ನಿವೇಶಕ್ಕೆ ತಕ್ಕದಾದ ಅವರ ಹಾಸ್ಯ ಸಂಭಾಷಣೆಗಳು ಹಾಸ್ಯ ಎಂಬ ಬೆಂಕಿಗೆ ತುಪ್ಪ ಸುರಿದಂತೆ ಇತ್ತು. ಥಿಯೇಟರಿನಲ್ಲಿದ್ದ ಎಲ್ಲರನ್ನು ನಗಿಸಿತು ಅವರ ಸಂಭಾಷಣೆ. .ಜೊತೆಗೆ ಮಾನಸಿ ಸುಧೀರ್ ಅವರ ಶಿವನ ಅಮ್ಮನ ಪಾತ್ರ ನಿಜಕ್ಕೂ ಶ್ಲಾಘನೀಯವಾದದ್ದು. ಶಿವನಿಗೆ ಬೈಯುವುದಾದರು ನೋಡುವವರಿಗೆ ಅದು ನಗು ತರಿಸುವಂತೆ ಇತ್ತು. ಕಿಶೋರ್ ಕುಮಾರ್ ಅವರ ನಟನೆ ಆ ಪಾತ್ರಕ್ಕೆ ತಕ್ಕದಾದ ಗಾಂಭೀರ್ಯವನ್ನು ಒದಗಿಸುತ್ತಿತ್ತು.ಕನ್ನಡ ಚಿತ್ರರಂಗದಲ್ಲಿ ತಾನು ಒಬ್ಬ ಅದ್ಭುತ ನಟ ಎಂದು ಎಲ್ಲರಿಗೆ ನೆನಪು ಮಾಡುವಂತೆ ಮಾಡಿದರು.ಅಚ್ಯುತ್ ಕುಮಾರ್ ಅವರು ನೆಗೆಟಿವ್ ರೋಲ್ ಅಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಹ ಪಾತ್ರಗಳಿಗೆ ಇವರ ನಟನೆ ಸರಿ ಹೊಂದುತ್ತದೆ. ಶಿವನ ತಮ್ಮ ಗುರುವನ ಪಾತ್ರದಲ್ಲಿ ಸ್ವರಾಜ್ ಶೆಟ್ಟಿಯವರ ನಟನೆ ಕೂಡ ಅದ್ಭುತವಾಗಿ ಮೂಡಿಬಂದಿದೆ.ಅವರಿಗೆ ಕೊಟ್ಟ ಪಾತ್ರಕ್ಕೆ ಸರಿಯಾಗಿ ನ್ಯಾಯ ಒದಗಿಸುವುದರಲ್ಲಿ ಸಫಲವಾಗಿ ಕನ್ನಡ ಚಿತ್ರರಂಗಕ್ಕೆ ಭವಿಷ್ಯದ ಉತ್ತಮ ನಟನಾಗಿ ಹೊರಹೊಮ್ಮುವ ಸಾಧ್ಯತೆಗಳು ಬರುವಂತೆ ಮಾಡಿದ್ದಾರೆ.ಸಿನಿಮಾದಲ್ಲಿ ನಟಿಸಿದ ಸ್ಥಳೀಯ ಕಲಾವಿದರು ಕೂಡ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ನಮ್ಮ ತುಳುನಾಡಿನ ಹೆಮ್ಮೆಯ ನಟ,ನೆಚ್ಚಿನ "ಕುಸಾಲ್ದ ಅರಸೆ" ನವೀನ್ ಡಿ.ಪಡೀಲ್ ಅವರನ್ನು ಈ ಸಿನಿಮಾದಲ್ಲಿ ಕಂಡು ನನಗೆ ಸಂತೋಷವಾಯಿತು. ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡರು ಹಾಸ್ಯ ಚಟಾಕಿಯನ್ನು ಹಾರಿಸದೆ ಅವರು ಬಿಡಲಿಲ್ಲ. ಜೊತೆಗೆ ರಘು ಪಾಂಡೇಶ್ವರ ಅವರ ಅರಣ್ಯ ಸಿಬ್ಬಂದಿಯ ಪಾತ್ರ ಕೂಡ ನನಗೆ ಇಷ್ಟವಾಯಿತು. ಈ ಸಿನಿಮಾದ ಸಂಗೀತದ ಬಗ್ಗೆ ಏನು ಹೇಳುವಂತಿಲ್ಲ.ಅಜನೀಶ್ ಲೋಕನಾಥ್ ಅವರಿಗೆ ಒಂದು ಸೆಲ್ಯೂಟ್ ಹೊಡಯಬೇಕಿದೆ. ಸಿನಿಮಾದಲ್ಲಿ ಬರುವ ಪ್ರತಿಯೊಂದು ಪದ್ಯ,ಹಿನ್ನೆಲೆ ಸಂಗೀತ ಸಿನಿಮಾವನ್ನು ಮತ್ತೊಂದು ಮಟ್ಟಕ್ಕೆ ಕರೆದುಕೊಂಡು ಹೋಯಿತು. "ಸಿಂಗಾರ ಸಿರಿಯೇ" ಹಾಡಿನ ಆರಂಭದಲ್ಲಿ ನಾಗರಾಜ್ ಪಾಣಾರ್ ವಾಲ್ತೂರ್ ಅವರ ಗಾಯನ ಹಾಡಿನ ಇಂಪನ್ನು ಇನ್ನಷ್ಟು ಹೆಚ್ಚಿಸಿತು. ವಿಜಯ್ ಪ್ರಕಾಶ್ ಮತ್ತು ಅನನ್ಯ ಭಟ್ ಅವರ ಇಂಪಾದ ಗಾಯನಕ್ಕೆ ಪ್ರೇಕ್ಷಕರು ತಲೆದೂಗುವಂತೆ ಮಾಡಿತು.

ಎಡಿಟಿಂಗ್ ಆಗಲಿ,ಚಿತ್ರಿಕರಣವಾಗಲಿ ಎಲ್ಲವೂ ಅದ್ಭುತವಾಗಿ ಮೂಡಿಬಂದಿದೆ. ಕೊನೆಯ 30 ನಿಮಿಷ/ಕ್ಲೈಮಾಕ್ಸ್ ಅಂತೂ ರೋಚಕವಾಗಿದೆ. 

ಹಾಸ್ಯ ಸನ್ನಿವೇಶಗಳಲ್ಲಿ ನಗಿಸಿ,ದುಃಖ ಸನ್ನಿವೇಶಗಳಲ್ಲಿ ಕಣ್ಣಲ್ಲಿ ನೀರು ಬರಿಸುವಂತೆ ಮಾಡಿ,ಕೆಲವು ಸನ್ನಿವೇಶಗಳಲ್ಲಿ ಭಕ್ತಿಪರವಶರಾಗುವಂತೆ ಮಾಡುತ್ತದೆ ಈ ಸಿನಿಮಾ. ಈ ಸಿನಿಮಾದ ಬಗ್ಗೆ ನಾನು ಹೇಳಿರುವುದು ಸಿನಿಮಾದ ಶೇಕಡ 1ರಷ್ಟು ಇದೆಯೋ ಇಲ್ಲವೋ ಗೊತ್ತಿಲ್ಲ. ಸಿನಿಮಾದ ಏನು ಹೇಳಬೇಕೆಂದೇ ಗೊತ್ತಾಗುತ್ತಿಲ್ಲ.

ಈ ಚಿತ್ರದ ಮೂಲಕ ದೈವದ ಮಹಿಮೆಯನ್ನು ಅರ್ಥ ಮಾಡಿಕೊಳ್ಳಬಹುದು ಹಾಗು ಅರಣ್ಯ ನಾಶದ ತಡೆಯುವಿಕೆಯ ಬಗ್ಗೆ ತಿಳಿಯಬಹುದು.

ಒಟ್ಟಿನಲ್ಲಿ ಸಿನಿಮಾ ಅತ್ಯದ್ಭುತವಾಗಿ ಮೂಡಿಬಂದಿದೆ. ನಾನೂ ಪ್ರಥಮ ಬಾರಿಗೆ ಒಂದು ಕನ್ನಡ ಸಿನಿಮಾವನ್ನು ಎರಡು ಬಾರಿ ಥಿಯೇಟರಿನಲ್ಲಿ ವೀಕ್ಷಿಸಿದೆ.

ಇಂತಹ ಅದ್ಭುತ ಚಿತ್ರವನ್ನು ಮಾಡಿದ ರಿಷಭ್ ಶೆಟ್ಟಿ ಮತ್ತು ಅವರ ತಂಡಕ್ಕೆ ಹಾಗು ಈ ಸಿನಿಮಾವನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಅವರಿಗೆ ತುಂಬು ಹೃದಯದ ಧನ್ಯವಾದಗಳು

ನನ್ನ ರೇಟಿಂಗ್: 10/10 ⭐️⭐️⭐️⭐️⭐️

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!