ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಗಳು!


ಇಂದು ನಾವೆಲ್ಲರೂ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಮೊತ್ತಮೊದಲನೆಯದಾಗಿ ತಮ್ಮೆಲರಿಗೆ 76ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

ಈ ನನ್ನ ಲೇಖನದಲ್ಲಿ ಸ್ವಾತಂತ್ರ್ಯೋತ್ಸವದ ದಿನದಂದು ನಾನು ಮೊದಲು ಕಲೆತ ಶಾಲೆ,ಕಾಲೇಜಿನಲ್ಲಿ ಕಳೆದ ಸುವರ್ಣ ಕ್ಷಣಗಳನ್ನು ನೆನಪು ಮಾಡಲು ಇಚ್ಛಿಸುತ್ತೇನೆ. 

ಆಗಸ್ಟ್ ತಿಂಗಳು ಬಂತೆಂದರೆ ಸಾಕು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲೆ,ಕಾಲೇಜಿನಲ್ಲಿ ಸ್ಪರ್ಧೆಗಳು ಶುರುವಾಗಿ ಬಿಡುತ್ತಿತ್ತು. ಆ ಸ್ಪರ್ಧೆಗಳಲ್ಲಿ ಸೇರಲು ಸ್ಪರ್ಧೆ ಏರ್ಪಡುವ ಮಟ್ಟಿಗೆ ವಿದ್ಯಾರ್ಥಿಗಳಲ್ಲಿ ಉತ್ಸಾಹವಿರುತ್ತಿತ್ತು! ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದು ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ. ಅಲ್ಲಿ ಸ್ವಾತಂತ್ರ್ಯೋತ್ಸವ ಬಂತೆಂದರೆ ಸಾಕು ಎಲ್ಲಾ ಮಕ್ಕಳಿಗೂ ಉತ್ಸಹ. ಪುತ್ತೂರಿನಲ್ಲಿ ದೇಶಭಕ್ತರನ್ನು ಸೃಷ್ಟಿಸುವ ಶಾಲೆಗಳಲ್ಲಿ ಈ ಶಾಲೆಯು ಒಂದು. ಯಾವಾಗಲು ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು,ಅವರ ಹೆಸರು ಹಾಗು ದೇಶಕ್ಕಾಗಿ ದುಡಿದ ಮಹಾನ್ ಪುರುಷರ ಹೆಸರು,ಹಿಂದಿನ ಕಾಲದ ಋಷಿ,ಮುನಿಗಳ ಹೆಸರನ್ನು ಪ್ರತಿ ತರಗತಿಗೆ ಇಟ್ಟಿರುವುದನ್ನು ನೀವು ನೋಡಬಹುದು. ಸ್ವಾತಂತ್ರ್ಯೋತ್ಸವ ದಿನ,ಗಣರಾಜ್ಯೋತ್ಸವದ ದಿನ ಎಲ್ಲಾ ವಿದ್ಯಾರ್ಥಿಗಳ ಶಾಲೆಗೆ ಬರುವುದು ಕಡ್ಡಾಯವಾಗಿತ್ತು. ಆ ದಿನ ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ದೇಶಕ್ಕಾಗಿ ದುಡಿದ ವೀರ ಸೈನಿಕರನ್ನು ಆತಿಥಿಗಳಾಗಿ ಕರೆಯುತ್ತಿದ್ದರು. ಧ್ವಜಾರೋಹಣದ ಕಾರ್ಯಕ್ರಮ ಆಗುವಾಗ ಶಾಲೆಯ ವಿಶಾಲ ಕ್ರೀಡಾಂಗಣದಲ್ಲಿ ಎಲ್ಲೆಲ್ಲೂ ವಿದ್ಯಾರ್ಥಿಗಳು! ಅಂದು ಆಂಗ್ಲ ಮಾಧ್ಯಮ,ಕನ್ನಡ ಮಾಧ್ಯಮದ ಧ್ವಜಾರೋಹಣ ಕಾರ್ಯಕ್ರಮ ಜಂಟಿಯಾಗಿ ನಡೆಯುತ್ತಿತ್ತು. ಹೀಗಾಗಿ ಎರಡು ಶಾಲೆಗಳ ವಿದ್ಯಾರ್ಥಿಗಳು ಸೇರಿದಾಗ ಕ್ರೀಡಾಂಗಣದ ಸುತ್ತಮುತ್ತ ವಿದ್ಯಾರ್ಥಿಗಳೇ ನೆರೆದುಬಿಡುತ್ತಿದ್ದರು. ಧ್ವಜಾರೋಹಣ ನಡೆಯುವಾಗ ಅದೇನು ಉತ್ಸಾಹ,ವಿದ್ಯಾರ್ಥಿಗಳಿಂದ ಮೊಳಗುತ್ತಿದ್ದ ರಾಷ್ಟ್ರಗೀತೆಯ ನಿನಾದ,ವಂದೇ ಮಾತರಂ,ಭಾರತ್ ಮಾತಾ ಕೈ ಜೈ ಎಂಬ ಉದ್ಘೋಷಗಳು! ಸಂಪೂರ್ಣ ಪರಿಸರವನ್ನು ರಾಷ್ಟ್ರಪ್ರೇಮದಲ್ಲಿ ಮುಳುಗಿಸಿ ಬಿಡುತ್ತಿತ್ತು! ಕಾರ್ಯಕ್ರಮ ಮುಗಿದ ನಂತರ ಸಿಗುವ ಸಿಹಿ ತಿಂಡಿಗೆ ಕಾಯುವ ಕ್ಷಣ! ಅದು ಎಂದೂ ಮರೆಯಲು ಸಾಧ್ಯವಿಲ್ಲ! ಉದ್ದಕ್ಕೆ ಸಾಲಾಗಿ ನಿಂತು ವಿದ್ಯಾರ್ಥಿಗಳು ಶಿಕ್ಷಕರ ಎದುರು ತೋರಿಸುತ್ತಿದ್ದ ಮುಗ್ಧತೆ ಅವರ ಮನಸನ್ನು ಕರಗಿಸಿ ಇನ್ನೊಂದು ಲಾಡು ಅಥವ ಇತರೆ ಸಿಹಿ ತಿಂಡಿಯನ್ನು ಜೊತೆಗೆ ಕೊಡುವ ಮಟ್ಟಿಗೆ ತಲುಪುತ್ತಿತ್ತು. ಅದೆಲ್ಲ ಆದ ನಂತರ ತರಗತಿಯಲ್ಲಿ ಹಾಜರಾತಿ ಕರೆದು ವಿದ್ಯಾರ್ಥಿಗಳಿಗೆ ಆಯಾಯ ತರಗತಿ ಮಟ್ಟದಲ್ಲಿ ಭಾಷಣ ಸ್ಪರ್ಧೆ! ನನಗೆ ಅಂದು ಇಷ್ಟವಾಗದಿರುತ್ತಿದ್ದ ಸ್ಪರ್ಧೆಗಳಲ್ಲಿ ಅದು ಕೂಡ ಒಂದಾಗಿರುತ್ತಿತ್ತು. ಸ್ಪರ್ಧೆಯ ವಿಷಯ ನಿಮ್ಮ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ ಮಾಡಿ ಎಂದು! ಒಬ್ಬ ವಿದ್ಯಾರ್ಥಿಯು ಮುಂದೆ ಬರದಿರುವಾಗ ಶಿಕ್ಷಕರೇ ಕರೆದು ವಿದ್ಯಾರ್ಥಿಯ ಹೆಸರು ಹೇಳಿದ ಮೇಲೆ ಎದ್ದು ಬಂದು ಭಾಷಣ ಆರಂಭಿಸುವ ಪ್ರತಿ ವಿದ್ಯಾರ್ಥಿಯು ಹೇಳುವುದು ಮಹಾತ್ಮ ಗಾಂಧೀಜಿ ಹಾಗು ಪಂಡಿತ್ ನೆಹರು ಅವರ ಬಗ್ಗೆ,ಏಕೆಂದರೆ ಪಠ್ಯ ಪುಸ್ತಕದಲ್ಲಿ,ಇತರೆ ಭಾಷಣ ಪುಸ್ತಕಗಳಲ್ಲಿ ಅವರ ಬಗ್ಗೆ ಮಾಹಿತಿ ಇದ್ದೇ ಇರುತ್ತಿತ್ತು. ಪ್ರತಿ ವಿದ್ಯಾರ್ಥಿಯು ಇನ್ನೊಬ್ಬ ಹೇಳಿದನ್ನೇ ಹೇಳುವುದು! ಕೊನೆಗೆ ವಿದ್ಯಾರ್ಥಿಗಳಿಗೂ,ಶಿಕ್ಷಕರಿಗೂ ಕೇಳಿ ಕೇಳಿ ಬೇಸೆತ್ತು,ಶಿಕ್ಷಕರು ನಿನಗೆ ಬೇರೆ ಯಾರ ಬಗ್ಗೆಯು ಗೊತ್ತಿಲ್ಲವೇ? ಎಂದು ಕೇಳಿದ ಮೇಲೆ ನೇತಾಜಿ ಬೋಸರ ಬಗ್ಗೆ,ಇನ್ನು ಕೆಲವರು ಭಗತ್ ಸಿಂಗ್,ತಿಲಕರ ಬಗ್ಗೆ ಹೇಳುತ್ತಿದ್ದರು. ಅಲ್ಲಿಗೆ ಸ್ಪರ್ಧೆ ಮುಗಿಯಿತು! ನನಗೆ ಸ್ಪರ್ಧೆಕಿಂತಲು ಹೆಚ್ಚು ಆಕರ್ಷಣೆಯ ಬಿಂದುವಾಗಿರುತ್ತಿದ್ದದ್ದು ಮರಳಿ ಮನೆಗೆ ರಿಕ್ಷದಲ್ಲಿ ಬರುವಾಗ ಆರೋಹಣಗೊಂಡಿರುತ್ತಿದ್ದ ತಿರಂಗ ಧ್ವಜವನ್ನು ನೋಡುವುದು! ನನಗೆ ಧ್ವಜವನ್ನು ನೋಡಿದಾಗಲೆಲ್ಲ ಹೆಮ್ಮೆಯೆನಿಸುತ್ತಿತ್ತು. ಜೊತೆಗೆ ಹಾರಿದ ಧ್ವಜಗಳ ಲೆಕ್ಕ ಹಾಕುತ್ತಿದ್ದೆ. ಬಹುಶಃ ನನಗೆ ದೇಶಭಕ್ತಿಯ ಬಗ್ಗೆ ಒಲವು ಬರಲು,ನನ್ನ ಮನಸ್ಸಿನಲ್ಲಿ ಅದರ ಬೀಜ ಬಿತ್ತುವ ಕೆಲಸ ಮಾಡಿದ್ದು ವಿವೇಕಾನಂದ ಶಾಲೆ ಎಂದೇ ಹೇಳಬಹುದು. ಆ ಬೀಜವನ್ನು ಪೋಷಿಸಿ,ವಿಶಾಲ ಮರವಾಗಿ ಮಾಡಿದ್ದು ಅಂಬಿಕ ವಿದ್ಯಾಸಂಸ್ಥೆ. ಮುಂದೆ ಹೇಳುತ್ತೇನೆ. ನಾನು ಪ್ರೌಢ ಶಿಕ್ಷಣಕ್ಕೆಂದು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ಸೇರಿದೆ. ಅಲ್ಲಿ ಸ್ವಾತಂತ್ರ್ಯೋತ್ಸವ ಎಂದರೆ ಶಾಲೆಗೆ ವಾರ್ಷಿಕೋತ್ಸವಿದ್ದಂತೆ. ಸ್ವಾತಂತ್ರ್ಯೋತ್ಸವದ ಜೊತೆಗೆ ಹಳೆ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗು ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಬೆಳಗ್ಗೆ ಎಂಟು ಗಂಟೆಗೆ ಮನೆಯಿಂದ ಶಾಲೆಗೆ ಹೋದರೆ ಮನೆಗೆ ಮತ್ತೆ ಬರುವಾಗ ಮಧ್ಯಾಹ್ನ ಎರಡು ಗಂಟೆ ಪ್ರತಿ ವರ್ಷವು ಕಳೆಯುತ್ತಿತ್ತು. ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಭರ್ಜರಿ ಊಟ ಎಲ್ಲ ಇರುತ್ತಿತ್ತು. ಶ್ರೀ ರಾಮಕೃಷ್ಣ ಪ್ರೌಢ ಶಾಲೆ ನನಗೆ ದೇಶಭಕ್ತಿಕಿಂತ ಹೆಚ್ಚು ನನ್ನಲ್ಲಿ ಇರುವ ಪ್ರತಿಭೆಗಳ ಬಗ್ಗೆ ತಿಳಿಯಲು,ಅದನ್ನು ಅನಾವರಣಗೊಳಿಸುಲು ತುಂಬಾ ಸಹಕರಿಸಿತು. ಸ್ವಾತಂತ್ರ್ಯೋತ್ಸವದ ದಿನಕ್ಕೆಂದು ನಾವೆಲ್ಲ ಸೇರಿ ಶಾಲೆಯನ್ನು ಸಿಂಗರಿಸಿ, ಸಿದ್ಧತೆಗಳನ್ನು ಮಾಡುತ್ತಿದ್ದೇವು. ಮುಂಚಿನ ದಿನ ಶಾಲೆ ಇದ್ದರೆ ಮಧ್ಯಾಹ್ನ ಮೇಲೆ ಒಂದೇ ತರಗತಿ ಇರುತ್ತಿದ್ದದ್ದು! ಮತ್ತೆ ಸಿದ್ಧತೆ! ಹೀಗೆ ಖುಷಿಯಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವು. ನಂತರ ನಾನು ಪದವಿಪೂರ್ವ ಶಿಕ್ಷಣಕ್ಕೆಂದು ಸೇರಿದ್ದು ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ಅಂಬಿಕ ಪದವಿಪೂರ್ವ ವಿದ್ಯಾಲಯಕ್ಕೆ. ದೇಶಭಕ್ತಿಯ ವಿಚಾರದಲ್ಲಿ ಅಂಬಿಕ ವಿದ್ಯಾಸಂಸ್ಥೆಯು ಅಗ್ರಮಾನ್ಯವೆಂದೇ ಹೇಳಬಹುದು. ಪ್ರತಿ ವಾರ ಮೌಲ್ಯ ಶಿಕ್ಷಣದ ತರಗತಿ ಇರುತ್ತಿದ್ದರೆ ಹೆಚ್ಚಾಗಿ ಆ ತರಗತಿ ತೆಗೆದುಕೊಳ್ಳುತ್ತಿದ್ದು ವಿದ್ಯಾಲಯದ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ನಟ್ಟೋಜ ಸರ್.ಅವರು ಹೇಳುತ್ತಿದ್ದ ಒಂದೊಂದು ಕಥೆ,ವೀರ ಯೋಧರ ಕಥೆ,ಸ್ವಾತಂತ್ರ್ಯ ಹೋರಾಟಗಾರರ ಕಥೆ,ದೇಶಭಕ್ತಿಯ ವಿಚಾರಗಳು, ಸ್ವದೇಶಿ ಅಭಿಯಾನದ ಬಗ್ಗೆ ಕೇಳಲು ನನಗೆ ಇನ್ನಿಲ್ಲದ ಆಸಕ್ತಿ. ನನಗೆ ಈಗಲು ನೆನಪಿದೆ,ವಿದ್ಯಾಲಯದಲ್ಲಿ ದೇಶಭಕ್ತಿಯ ವಿಚಾರದ ಕುರಿತು ಕಾರ್ಯಕ್ರಮವಾದರೆ ಅದಕ್ಕೆ ಉಪನ್ಯಾಸಕ್ಕೆಂದು ಒಂದೋ ಶ್ರೀ ಆದರ್ಶ ಗೋಖಲೆ ಸರ್, ಇಲ್ಲದಿದ್ದರೆ ಶ್ರೀ ಶ್ರೀಕೃಷ್ಣ ಉಪಾಧ್ಯಾಯ ಸರ್ ಬರುತ್ತಿದ್ದರು. ಶ್ರೀಕೃಷ್ಣ ಉಪಾಧ್ಯಾಯ ಸರ್ ಅವರು ಕಾರ್ಗಿಲ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾಡಿದ ಭಾಷಣ ನನಗೆ ಈಗಲು ಕಣ್ಣಿಗೆ ಕಟ್ಟಿದಂತಿದೆ. ಈಗಲು ನನ್ನ ಕಿವಿಯಲ್ಲಿ ಅದೇ ಭಾಷಣ,ಅದೇ ಸ್ವರ ನೆನೆಸಿದರೆ ಮಾರ್ಧನಿಸುತ್ತದೆ. ಸ್ವಾತಂತ್ರ್ಯೋತ್ಸವದ ದಿನ ಬೆಳಗ್ಗೆ ವಿದ್ಯಾಲಯಕ್ಕೆ ಬೇಗ ಹೋಗಬೇಕಿತ್ತು. ಬೆಳಗ್ಗೆ ವಿದ್ಯಾಲಯದಲ್ಲಿ ಧ್ವಜಾರೋಹಣವಾದ ತಕ್ಷಣ ಹಾಜರಾತಿ ಕರೆದು ನೆಲ್ಲಿಕಟ್ಟೆ ಸಂಸ್ಥೆಯಿಂದ ಒಂದು ಕಡೆಯಾದರೆ ಮತ್ತೊಂದು ಕಡೆ ಬಪ್ಪಳಿಗೆಯಲ್ಲಿರುವ ಪದವಿಪೂರ್ವ ವಿದ್ಯಾಲಯ ಹಾಗು ಅಂಬಿಕ ವಿದ್ಯಾಲಯದಿಂದ(ಅಂದು ಬಾಲ ವಿದ್ಯಾಲಯವಾಗಿತ್ತು) ಮೆರವಣಿಗೆ ಪುತ್ತೂರು ನಗರದ ಮೂಲಕ ಸಾಗಿ ಶ್ರೀಧರ ಭಟ್ ಅಂಗಡಿಯ ಹತ್ತಿರ ತಿರುಗಿ ಮೊಳಹಳ್ಳಿ ಶಿವರಾಯ ವೃತ್ತದಲ್ಲಿ ಎಲ್ಲಾ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಒಟ್ಟುಗೂಡಿ ರಾಷ್ಟ್ರಭಕ್ತಿಯ ಘೋಷಣೆ ಕೂಗುತ್ತಾ ಸಾಗಿ ಕಿಲ್ಲೆ ಮೈದಾನದಲ್ಲಿರುವ ಅಮರ್ ಜವಾನ್ ಜ್ಯೋತಿಯ ಬಳಿ ನಡೆಯುತ್ತಿದ್ದ ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಲ್ಲಿಂದ ಜೈನ ಭವನಕ್ಕೆ ಹೋಗಿ ವಿದ್ಯಾಸಂಸ್ಥೆಯಿಂದ ನಡೆಯತ್ತಿದ್ದ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇವು. ನನಗೆ ಅದರ ಜೊತೆಗೆ ಬೆಳಗ್ಗೆ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನ ಮಂತ್ರಿಗಳು ನೆರವೇರಿಸುವ ಧ್ವಜಾರೋಹಣ ಕಾರ್ಯಕ್ರಮದ ನೇರಪ್ರಸಾರ ನೋಡಲು ಉತ್ಸಾಹ. ಅಮ್ಮ ಮನೆಯಲ್ಲಿರುವ ರೇಡಿಯೋದಲ್ಲಿ ಪ್ರಧಾನಮಂತ್ರಿಗಳ ಭಾಷಣ ಕೇಳುತ್ತಿದ್ದರೆ ಅಪ್ಪ ಆಫೀಸಿನಲ್ಲಿನ ಕಾರ್ಯಕ್ರಮಕ್ಕೆ ಹೋಗಲು ಹೊರಡುತ್ತಿದ್ದರು.ನಡುವೆ ನಾನು ಟಿ.ವಿ ಹಾಕಿ ದೂರದರ್ಶನ ಚ್ಯಾನಲಿನಲ್ಲಿ ಭಾಷಣ ನೋಡುತ್ತಿದ್ದೆ. ಹೀಗೆ ಸ್ವಾತಂತ್ರ್ಯೋತ್ಸವದ ದಿನವನ್ನು ಖುಷಿಯಿಂದ ಕಳೆದು ರಾತ್ರಿ ಊಟ ಮಾಡುವಾಗ ನ್ಯೂಸಿನಲ್ಲಿ ಬರುವ ದಿನದ ಮುಖ್ಯಾಂಶಗಳನ್ನು ಊಟ ಮಾಡುವಾಗ ನೋಡಿ ಮುಗಿಸುತ್ತಿದ್ದೆ. ಇಂದು ಕೂಡ ಹಾಗೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಲೇ ಬೇಕು ಎಂದು ಬೆಳಗ್ಗೆ ಏಳು ಗಂಟೆಗೆ ಪುತ್ತೂರಿನಿಂದ ಸ್ಪೇಟ್ ಬ್ಯಾಂಕ್ ಬಸ್ಸು ಹತ್ತಿ ಕಾಲೇಜಿಗೆ ಹೋದೆ. ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆದು ಕಾಲೇಜಿನ ಉಪನ್ಯಾಸಕ, ಇತರೆ ಸಿಬ್ಬಂದಿ ವೃಂದಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರತಿ ವರ್ಷ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದನ್ನು ನೋಡುತ್ತಿದ್ದರೇ, ಈ ವರ್ಷ ಉಪನ್ಯಾಸಕರು ನಡೆಸಿಕೊಡುವ ಕಾರ್ಯಕ್ರಮ ನೋಡುವ ಭಾಗ್ಯ ನನ್ನದಾಯಿತು. ಇಷ್ಟೆಲ್ಲ ಯಾಕೆ ಹೇಳಿದೆ ಎಂದರೆ ಪ್ರಧಾನಿ ಮೋದಿಯವರ ಕರೆಗೆ ಓಗೊಟ್ಟು "ಹರ್ ಘರ್ ತಿರಂಗ" ಅಭಿಯಾನದಲ್ಲಿ ಭಾಗವಹಿಸಿದ ನಾವೆಲ್ಲರೂ ನಮ್ಮ ಮನೆ,ಕಚೇರಿಗಳಲ್ಲಿ ತಿರಂಗ ಧ್ವಜವನ್ನು ಹಾರಿಸಿದೆವು. ನನಗೆ ನಿನ್ನೆ ಪುತ್ತೂರಿನಲ್ಲಿ ಸ್ಕೂಟಿಯಲ್ಲಿ ಹೋಗುವಾಗ ಎಲ್ಲಿ ನೋಡಿದರು ತಿರಂಗ ಧ್ವಜವೇ ಕಾಣಲು ಸಿಗುತ್ತಿತ್ತು,ಹೆಮ್ಮೆ ಎನಿಸಿ, ಜೋರಾಗಿ "ಭಾರತ್ ಮಾತಾ ಕಿ ಜೈ" ಎಂದು ಕೂಗುವ ಎಂದು ಅನಿಸುವಷ್ಟು ಭಾವುನಕಾದೆ. ಆ ಕ್ಷಣ ನನ್ನೆಲ್ಲ ಹಳೆ ನೆನಪುಗಳು ಎಂಬ ಪುಟಗಳು ನನ್ನ ತಲೆ ಎಂಬ ಪುಸ್ತಕದಲ್ಲಿ ತೆರೆದವು. ಆದ್ದರಿಂದ ಇಂದು ಅವುಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಎಂದು ಅನಿಸಿತು. ಏನೇ ಇರಲಿ,ಭಾರತೀಯರಾದ ನಾವು ದೇಶದ ವಿಚಾರಕ್ಕೆ ಬಂದಾಗ ಒಂದಾಗಿ,ದೇಶದ ಏಳಿಗೆಗಾಗಿ ದುಡಿಯುತ್ತಿರೋಣ. ಭಾರತ ಮಾತೆಯ ಕಿರೀಟ ಎಂದಿಗೂ ಬೀಳದಂತೆ ನೋಡೋಣ

ಮತ್ತೊಮ್ಮೆ ಎಲ್ಲರಿಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭಘಳಿಗೆಯಲ್ಲಿ ಶುಭಕೋರುತ್ತಿದ್ದೇನೆ

ಭಾರತ್ ಮಾತಾ ಕಿ ಜೈ!

ವಂದೇ ಮಾತರಂ!

ಜೈ ಹಿಂದ್!

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!