ಅಮರಾವತಿ ಪುಸ್ತಕದ ಅವಲೋಕನ,ನನ್ನ ಅನಿಸಿಕೆಗಳು

ಅಮರಾವತಿ- ನಾ ಕಾರಂತ ಪೆರಾಜೆ
ಪುಸ್ತಕದ ಲೇಖಕಾರದ ನಾ ಕಾರಂತ ಪೆರಾಜೆ ಅವರನ್ನು ನಾನು ಮದ್ದಳೆ ಅಭ್ಯಾಸಕ್ಕೆಂದು ತರಗತಿಗೆ ಹೋಗುತ್ತಿರುವಾಗ ಅಲ್ಲಿ ನಡೆಯುತ್ತಿದ್ದ ತಿಂಗಳ ತಾಳಮದ್ದಳೆಗೆ ಅರ್ಥಧಾರಿಯಾಗಿ ಬರುತ್ತಿದ್ದರು ಹಾಗು ಎಷ್ಟೋ ಸಲ ಅವರ ಅರ್ಥವನ್ನು ಕೇಳಿ ಆನಂದಪಟ್ಟಿದ್ದೇನೆ. ಹೀಗೆ ಕಳೆದ ವಾರ ಮರಿಕೆ ಸಾವಯವ ಮಳಿಗೆಗೆ ಹೋದಾಗ ಅಮರಾವತಿ ಪುಸ್ತಕ ನನ್ನ ಕಣ್ಣಿಗೆ ಬಿತ್ತು. ತಕ್ಷಣ ಅಮ್ಮನ ಬಳಿ ಬೇಡಿ ಪುಸ್ತಕ ತೆಗೆದುಕೊಂಡೆ. 
ಅಮರಾವತಿ ಪುಸ್ತಕದಲ್ಲಿ ಯಕ್ಷರಂಗದಲ್ಲಿ ವಿಜೃಂಭಿಸಿ,ಕಲಾಮಾತೆಯ ಸೇವೆಗೈದು,ಈಗ ದೇವರ ಪಾದ ಸೇರಿರುವ ಮಹಾನ್ ಕಲಾವಿದರ ಬಗ್ಗೆ ಪರಿಚಯ,ವಿವರ,ಅವರ ಸಂದರ್ಶನಗಳನ್ನು ಕೂಡಿದೆ.
ಪ್ರಥಮದಲ್ಲಿ ಸ್ವತ ಭಾಗವತರಾಗಿದ್ದು,ಹಲವಾರು ಕಲಾವಿದರನ್ನು ಬೆಳೆಸಿ,ಮೇಳವನ್ನು ಕಟ್ಟಿ,ಜೊತೆಗೆ ಗೋಪಾಲಕೃಷ್ಣನ ಸೇವೆ ಮಾಡಿದ ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳ ಬಗ್ಗೆ ಪುಸ್ತಕದಲ್ಲಿ ತಿಳಿದುಕೊಳ್ಳಬಹುದು. ಯಾರೇ ಎಡನೀರು ಮಠಕ್ಕೆ ಬರಲಿ,ಅವರನ್ನು ಉಪಚರಿಸಿ,ತಿಂಡಿ-ಊಟ ಉಪಚಾರ ಮಾಡಿಯೇ ಕಳುಹಿಸುತ್ತಿದ್ದವರು ಎಡನೀರು ಶ್ರೀಗಳು. ಅವರ ಭಾಗವತಿಕೆಯನ್ನು ಮುಖತಃ ನೋಡಿ ಕೇಳುವ ಭಾಗ್ಯ ನನಗಿಲ್ಲದಿದ್ದರೂ ಈಗಿನ ಕಾಲದ ತಂತ್ರಜ್ಞಾನದ ಸಹಾಯದಿಂದ ಯೂಟ್ಯೂಬಿನಲ್ಲಿ ಕೇಳಿ ಆನಂದಿಸಿದ್ದೇನೆ. ಬ್ರಹ್ಮೈಕ್ಯರಾದ ಗುರುಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು.
ತದನಂತರ ಯಕ್ಷರಂಗದಲ್ಲಿ ಅದರಲ್ಲಿಯೂ ತಾಳಮದ್ದಳೆ ಕ್ಷೇತ್ರದಲ್ಲಿ ಹೆಸರುಮಾಡಿ ಒಂದು ಕಾಲದಲ್ಲಿ "ಶೇಣಿಯವರು ಇಲ್ಲದಿದ್ದರೇ ತಾಳಮದ್ದಳೆ ಸರಿ ಆಗುವುದಿಲ್ಲ" ಎಂಬಲ್ಲಿಗೂ ತಲುಪುವವರೆಗೆ ಪ್ರಸಿದ್ಧರಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರ ಬಗ್ಗೆ ಪುಸ್ತಕದಲ್ಲಿ ಓದಬಹುದಾಗಿದೆ. ಅವರ ಸಂದರ್ಶನದ ಭಾಗ ಪುಸ್ತಕದಲ್ಲಿ ನೀಡಲಾಗಿದೆ.
ನಂತರ ಧೀಂಗಿಣ ವೀರ,ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸಿ ಪುತ್ತೂರು,ಕಾಂತಾವರ ಮೇಳ ಮುನ್ನಡೆಸಿ,ಸಾವಿರಾರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಜ್ಞಾನವನ್ನು ಧಾರೆಯೆರೆದ "ಯಕ್ಷಗಾನದ ಸಿಡಿಲಮರಿ" ಪುತ್ತೂರು ಶ್ರೀಧರ ಭಂಡಾರಿಯವರ ಬಗ್ಗೆ ಪುಸ್ತಕದಲ್ಲಿ ಪರಿಚಯ,ಅವರ ಸಂದರ್ಶನವನ್ನು ಪುಸ್ತಕದಲ್ಲಿ ಓದಲಾಗಿದೆ. ನಂತರ ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ಪ್ರಸಿದ್ಧ ಭಾಗವತರು,ಶೈಲಿಗಳ ನಡುವೆ ತನ್ನದೇ ಹೆಸರು ಮೂಡಿಸಿ, "ಪದ್ಯಾಣ ಶೈಲಿ" ಎಂಬ ಶೈಲಿಯನ್ನು ಸೃಷ್ಟಿಸಿ ಜೊತೆಗೆ ಹಲವಾರು ಹೊಸ ತಲೆಮಾರಿನ ಭಾಗವತರನ್ನು ಸೃಷ್ಟಿಸಿ,ಕೆಲವು ಪ್ರಸಂಗವನ್ನೂ ಬರೆದು ಜೊತೆಗೆ ಗಾನಗಂಧರ್ವ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೂ ಬೆರಗಾಗುವಂತೆ ಮಾಡಿದ,ನನ್ನ ನೆಚ್ಚಿನ ಭಾಗವತರಾದ "ಯಕ್ಷರಂಗದ ಗಾನಗಂಧರ್ವ" ಪದ್ಯಾಣ ಗಣಪತಿ ಭಟ್ಟರ ಪರಿಚಯ ಪುಸ್ತಕದಲ್ಲಿ ನೀಡಲಾಗಿದೆ. ನಂತರ "ಅಭಿನವ ವಾಲ್ಮೀಕಿ" ಬೊಟ್ಟಿಕೆರೆ ಪುರುಷೋತ್ತಮ ಪೂಂಜ,ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಡಾ.ಎನ್.ನಾರಾಯಣ ಶೆಟ್ಟಿ, ವಂಡ್ಲೆ ನಾರಾಯಣ ಗಾಣಿಗ,ಮಲ್ಪೆ ವಾಸುದೇವ ಸಾಮಗ, ಸಂಪಾಜೆ ಶೀನಪ್ಪ ರೈ , ಮಾರ್ಗೋಳ ಗೋವಿಂದ ಸೇರೆಗಾ‌ರ್, ಕುರ್ನಾಡು ಶಿವಣ್ಣ ಆಚಾರ್, ಮುಳಿಯಾಲ ಭೀಮ ಭಟ್, ತಲೆಂಗಳ ರಾಮಚಂದ್ರ ಭಟ್, ಬಿ.ಎಸ್.ಓಕುಣ್ಣಾಯ, ಕ್ಯಾಸೆಟ್,ಸಿಡಿ ಮೂಲಕ ಹಲವಾರು ಯಕ್ಷಗಾನ ಪ್ರಸಂಗಗಳ ತಾಳಮದ್ದಳೆ,ಬಯಲಾಟಗಳನ್ನು ಮುದ್ರಿಸಿ ಮುಂದಿನ ಪೀಳಿಗೆಗೆ ಕೂಡ ತಲುಪುವಂತೆ ಮಾಡಿದ ಸರಸ್ವತಿ ಕೃಷ್ಣ ಭಟ್, ರಾಮಚಂದ್ರ ಅರ್ಚಿತ್ತಾಯ,ವೇಣೂರು ವಾಮನ ಕುಮಾ‌ರ್ ಅವರ ಬಗ್ಗೆ ಪುಸ್ತಕದಲ್ಲಿ ತಿಳಿದುಕೊಳ್ಳುಬಹುದು.
ಧೀಂಗಿಣ ವೀರ,ಪುಂಡು ವೇಷಗಳಿಂದ ಪ್ರಸಿದ್ಧಿ ಪಡೆದು,ಧರ್ಮಸ್ಥಳ ಮೇಳದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಗಣಿಮಾಣಿಯಾಗಿ ಅತ್ಯುತ್ತಮ ರೀತಿಯಲ್ಲಿ ಪಾತ್ರ ನಿರ್ವಹಿಸುತ್ತಿದ್ದ "ಯಕ್ಷಗಾನದ ಸಿಡಿಲಮರಿ" ಪುತ್ತೂರು ಶ್ರೀಧರ ಭಂಡಾರಿಯವರ ಬಗ್ಗೆ ನಾನು ಬೇರೆಯಾಗಿ ಹೇಳಬೇಕೆಂದಿಲ್ಲ. ಅಂದು ಒಮ್ಮೆ ಅವರ ಬಗ್ಗೆ ಬರೆದಿದ್ದೆ ಕೂಡ.
ರಕ್ತಬೀಜ,ಹಿರಣ್ಯಾಕ್ಷ,ಶಿಶುಪಾಲ,ಅರುಣಾಸುರ ಅಂತಹ ಖಳ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡಿದವರು ಸಂಪಾಜೆ ಶೀನಪ್ಪ ರೈಗಳು. ನಾನು ಚಿಕ್ಕವನಿದ್ದಾಗ ಪುತ್ತೂರಿನಲ್ಲಿ ಪ್ರತಿ ವರ್ಷವು ಹೊಸನಗರ,ಎಡನೀರು ಮೇಳಗಳ "ಯಕ್ಷಸಪ್ತಾಹ" ಯಕ್ಷಗಾನ ಬಯಲಾಟ ಪ್ರದರ್ಶನ ನಡೆದುಕೊಂಡು ಇರುತ್ತಿತ್ತು. ನಾನು ಅಪ್ಪ,ಅಮ್ಮನ ಜೊತೆ ಯಕ್ಷಗಾನಕ್ಕೆ ಹೋಗಿ ಸಂಪೂರ್ಣ ಆಟ ನೋಡಿ ಬರುತ್ತಿದ್ದೆ. ಅಂದೇ ನಾನು ಅವರ ವೇಷವನ್ನು ನೋಡಿದ್ದೆ. 
ಪದ್ಯಾಣ ಗಣಪತಿ ಭಟ್ಟರ ಹಾಡುಗಳನ್ನ ನಾನು ಮೊದಲ ಬಾರಿ ಅಂದೇ ಕೇಳಿದ್ದು. ಅವರ ಹಾಡುಗಳನ್ನು ನಾನು ಏಕಾಗ್ರಚಿತ್ತದಿಂದ ಕೇಳುತ್ತಿದ್ದೆ. ಯಕ್ಷಗಾನ ನೋಡಲು ಕುಳಿತರೆ ಎದ್ದುಬರಲು ಮನಸ್ಸೇ ಬರುತ್ತಿರಲಿಲ್ಲ.
ರಾಮಚಂದ್ರ ಅರ್ಬಿತ್ತಾಯರ ಬಗ್ಗೆ ಓದುವಾಗ ನನಗೆ ನನ್ನ ಹಳೆಯ ನೆನಪುಗಳು ಹಸಿರಾದವು. ನನ್ನ ಯಕ್ಷಗಾನ ರಂಗಪ್ರವೇಶಕ್ಕೆ(ಮದ್ದಳೆ ಆಗಿರಲಿ,ಚೆಂಡೆ ಆಗಿರಲಿ) ಭಾಗವತರಾಗಿ ಬಂದಿದ್ದು ಅವರೇ. ಅವರು ಭಾಗವತರಾಗಿ ಸೇವೆ ಸಲ್ಲಿಸಿದ ಯಕ್ಷಗಾನದಲ್ಲಿ ನಾನು ಮದ್ದಳೆಗಾರನಾಗಿ,ಮುಮ್ಮೇಳ ಕಲಾವಿದನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಒಂದು ಭಾಗ್ಯ
 ಎಂದು ಹೇಳಲು ಖುಷಿಯಾಗುತ್ತದೆ. 
ಪುಸ್ತಕ,ಅಲ್ಲಿ ಹೆಸರಿಸಲಾದ ಕಲಾವಿದರ ಬಗ್ಗೆ ಹೇಳಲು ಹೊರಟರೆ ಮುಗಿಯುವಂತದ್ದಲ್ಲ. ನನಗೆ ತುಂಬಾ ಇಷ್ಟವಾದ ಕಲಾವಿದರು,ಅವರ ಬಗ್ಗೆ ಸ್ವಲ್ಪವಾದರೂ ಗೊತ್ತಿದ್ದು,ಅವರನ್ನು ಮುಖತ ನೋಡಿ ಗೊತ್ತಿದ್ದವರ ಬಗ್ಗೆ ಸ್ವಲ್ಪ ಹೆಚ್ಚು ಹೇಳಿದ್ದೇನೆ.
ಮಹಾನ್ ಕಲಾವಿದರ ಬಗ್ಗೆ ನನಗೆ ಗೊತ್ತಿಲ್ಲದ ಎಷ್ಟೋ ಮಾಹಿತಿ ಈ ಪುಸ್ತಕದ ಮೂಲಕ ಪಡೆದುಕೊಂಡೆ.
ಮಹಾನ್ ಕಲಾವಿದರ ಮಾಹಿತಿ ಪುಸ್ತಕದ ಮೂಲಕ ನೀಡಿದ ಸಾಹಿತಿ,ಕಲಾವಿದ,ಬರಹಗಾರರಾದ ನಾ.ಕಾರಂತ ಪೆರಾಜೆಯವರಿಗೆ ಧನ್ಯವಾದಗಳು
ಕಲಾಭಿಮಾನಿಗಳು ಕಲಾವಿದರ ಬಗ್ಗೆ ತಿಳಿದುಕೊಳ್ಳುಲು ಈ ಪುಸ್ತಕ ಖಂಡಿತ ಓದಿ.

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!