ಹಳಿ ಏರಲಿಲ್ಲ ನವಯುಗ ಎಕ್ಸ್‌ಪ್ರೆಸ್! ಮತ್ತೆ ಕೇಳಿ ಬಂದ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭದ ಕೂಗು! ರೈಲು ಪ್ರಯಾಣಿಕರಿಗೆ ಭರವಸೆ ತಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪ್ರಯತ್ನ!
ಹಳಿ ಏರಲಿಲ್ಲ ನವಯುಗ ಎಕ್ಸ್‌ಪ್ರೆಸ್! ಮತ್ತೆ ಕೇಳಿ ಬಂದ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭದ ಕೂಗು! ರೈಲು ಪ್ರಯಾಣಿಕರಿಗೆ ಭರವಸೆ ತಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪ್ರಯತ್ನ!
ಅದು ದಿನಾಂಕ 24 ಎಪ್ರಿಲ್,1990. ನಮ್ಮ ಕರಾವಳಿಯಲ್ಲಿ ಬೇಸಗೆಯ ಕಾಲ. ಆ ದಿನ ದೇಶದ ರೈಲ್ವೆ ಇತಿಹಾಸದ ದಾಖಲೆ ಪುಟಗಳಲ್ಲಿ ಸೇರಿದ ದಿನ. ಅಂದುಮಂಗಳೂರಿನಿಂದ ಜಮ್ಮು ತಾವಿ ತನಕ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸಾವಿರಾರು ಜನರನ್ನು ಹೊತ್ತುಕೊಂಡು ಹೋದ ರೈಲೊಂದು ಆರಂಭಗೊಂಡಿತು. ಅಷ್ಟು ಮಾತ್ರವಲ್ಲದೆ ದೇಶದ ನಾಲ್ಕನೆಯ ಉದ್ದದ ರೈಲು ಎಂಬ ಕೀರ್ತಿಯನ್ನು ಪಡೆಯಿತು. ಭಾರತೀಯ ರೈಲ್ವೆ ಜಾಲದಲ್ಲಿ ಒಂದು ಹೊಸ ಯುಗವನ್ನೇ ಆರಂಭಿಸಿತು. ಇದು ಬೇರೆ ಯಾವ ರೈಲು ಅಲ್ಲ ಇದುವೇ ಹೊಸ ಯುಗಕ್ಕೆ ನಾಂದಿ ಹಾಡಿದ ನಮ್ಮ ಹೆಮ್ಮೆಯ ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋದೇವಿ ಕತ್ರ "ನವಯುಗ ಎಕ್ಸ್‌ಪ್ರೆಸ್" ರೈಲು. ಸೋಮವಾರ ಬಂತೆಂದರೆ ಸಂಜೆ ಸೂರ್ಯ ಕಡಲಿನಲ್ಲಿ ಅಸ್ತಮಗೊಳ್ಳುವ ಸಮಯಕ್ಕೆ ಮಂಗಳೂರು ಸೆಂಟ್ರಲ್‌ನಲ್ಲಿ ಒಂದು ರೈಲಿನ ಉಗಿಬಂಡಿಯ ಅಬ್ಬರದ ಸದ್ದು ಕೇಳುತ್ತಿತ್ತು. ತಾನು ಹೋಗಿ ಬರುತ್ತೇನೆ, ಎಷ್ಟೋ ಜನರನ್ನು ತನ್ನೊಡಲಿನಲ್ಲಿ ಕುಳ್ಳಿರಿಸಿ ಸುರಕ್ಷಿತವಾಗಿ ಅವರ ಸ್ಥಾನಕ್ಕೆ ಬಿಟ್ಟು ಮರಳಿ ಬರುವಾಗ ಮತ್ತೆ ಸಾವಿರಾರು ಜನರನ್ನು ಕರೆದುಕೊಂಡು ಬರುತ್ತೇನೆ ಎನ್ನುತ್ತಾ ಮಂಗಳೂರು ಸೆಂಟ್ರಲಿನಿಂದ ಸಂಜೆ 5 ಗಂಟೆಗೆ ಹೊರಡುತ್ತಿದ್ದ ಈ ರೈಲು ಮಂಗಳೂರಿನಿಂದ ದಕ್ಷಿಣದ ಕಡೆಗೆ ಮುಖ ಮಾಡಿ ಕರ್ನಾಟಕದ ಗಡಿಯನ್ನು ದಾಟಿ ಕೇರಳ,ತಮಿಳುನಾಡು,ಆಂಧ್ರಪ್ರದೇಶ,ತೆಲಂಗಾಣ,ಮಹಾರಾಷ್ಟ್ರ,ಮಧ್ಯಪ್ರದೇಶ,ಉತ್ತರ ಪ್ರದೇಶದ ಮೂಲಕ ಸಾಗಿ ರಾಷ್ಟದ ರಾಜಧಾನಿ ದೆಹಲಿಯನ್ನು ಪಯಣದ ಮೂರನೆಯ ದಿನ ಅಂದರೆ ಬುಧವಾರದಂದು ಸುಮಾರು ರಾತ್ರಿ 9 ಗಂಟೆಯ ಹೊತ್ತಿಗೆ ತಲುಪುತ್ತಿತ್ತು. ಅಲ್ಲಿಂದ ಹರಿಯಾಣ,ಪಂಜಾಬ್ ಮೂಲಕ ಸಾಗಿ ಜಮ್ಮು ಮತ್ತು ಕಾಶ್ಮೀರವನ್ನು ನಾಲ್ಕನೆಯ ದಿನ ಪ್ರವೇಶಿಸುವ ರೈಲು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಚಳಿಗಾಲದ ರಾಜಧಾನಿ ಜಮ್ಮುವನ್ನು ತಲುಪುತ್ತಿತ್ತು. 2015ನೇ ಇಸವಿಯಲ್ಲಿ ಇದನ್ನು ಕತ್ರ ತನಕ ವಿಸ್ತರಿಸಲು ನಿರ್ಧರಿಸಿದ ರೈಲ್ವೆ ಇಲಾಖೆಯು ಜಮ್ಮುವಿಗೆ ಮಧ್ಯಾಹ್ನ ತಲುಪು ರೈಲನ್ನು ಅಲ್ಲಿಂದ ಮುಂದೆ ಉದಂಪುರ ಮೂಲಕ ಕತ್ರಕ್ಕೆ ಮಧ್ಯಾಹ್ನ 3:10ಕ್ಕೆ ತಲುಪ ಹಾಗೆ ವೇಳಾಪಟ್ಟಿ ರೂಪಿಸಿತು. ನಂತರ ಅದೇ ದಿನ ಅಂದರೆ ಗುರುವಾರ ರಾತ್ರಿ 9:55ಕ್ಕೆ ಕತ್ರದಿಂದ ಹೊರಟು 11:35ಕ್ಕೆ ಜಮ್ಮು ತಲುಪುತ್ತಿದ್ದ ಈ ರೈಲು ನಂತರ ಮರುದಿನ ಮಧ್ಯಾಹ್ನ 1:30ಕ್ಕೆ ದೆಹಲಿ ತಲುಪಿ ಅಲ್ಲಿಂದ ಸಾಗುತ್ತಾ ಆದಿತ್ಯವಾರ ರಾತ್ರಿ 11 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪುತ್ತಿತ್ತು. ಈ ರೈಲು ತನ್ನ ಪ್ರಯಾಣದಲ್ಲಿ 3686 ಕಿ.ಮಿ ಕ್ರಮಿಸಿ ಮಂಗಳೂರು,ಪಾಲಕ್ಕಾಡ್,ಕೊಯಂಬತ್ತೂರು,ಸೇಲಂ,ತಿರುಪತಿ,ವಿಶಾಖಪಟ್ಟಣ,ನಾಗಪುರ,ಜಾನ್ಸಿ,ಆಗ್ರಾ,ಮಥುರ,ದೆಹಲಿ,ಪಠಾಣಕೋಟ್,ಜಮ್ಮು,ಕತ್ರ ಹೀಗೆ ಹಲವಾರು ಪ್ರಸಿದ್ಧ ನಗರಗಳು,ಯಾತ್ರಾ ಸ್ಥಳಗಳನ್ನು ಹಾದುಹೋಗುತ್ತಿದ್ದುದರಿಂದ ಹಲವು ರಾಜ್ಯಗಳ ಜನರ ಬಹಬೇಡಿಕೆಯ ರೈಲಾಗಿತ್ತು. ಜೊತೆಗೆ ಉತ್ತರ ಭಾರತದಲ್ಲಿ ಸೇನಾ ನೆಲೆಗಳು ಇರುವ ಕಾರಣ ದಕ್ಷಿಣ ಭಾರತದ ಯೋಧರು ಈ ರೈಲಿನಲ್ಲಿ ಉತ್ತರ ಭಾರತದ ಕಡೆಗೆ ಸಂಚರಿಸುತ್ತಿದ್ದರು. ಕರಾವಳಿ ಕರ್ನಾಟಕ,ಉತ್ತರ ಕೇರಳದಿಂದ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಏಕೈಕ ರೈಲು ನವಯುಗ ಎಕ್ಸ್‌ಪ್ರೆಸ್ ರೈಲು ಆಗಿತ್ತು. 13 ಕೋಚುಗಳ ಈ ರೈಲಿಗೆ ಈರೋಡಿನಲ್ಲಿ ತಿರುನೆಲ್ವೆಲಿಯಿಂದ ಬರುವ 7 ಸ್ಲಿಪ್ ಕೋಚುಗಳನ್ನು ಜೋಡಿಸಿ ಕತ್ರ ಕಡೆಗೆ ಪ್ರಯಾಣವನ್ನು ಮುಂದುವರಿಸಲಾಗುತ್ತಿತ್ತು. ಅದು ಯಾವ ದೆಸೆ ಈ ರೈಲಿಗಿತ್ತೋ ಕೊರೋನ ಮಹಾಮಾರಿಯ ಕಾಟದಿಂದ ಲಾಕ್ಡೌನ್ ಸಮಯದಲ್ಲಿ ಭಾರತೀಯ ರೈಲ್ವೆ ಇಲಾಖೆ ದೇಶದಾದ್ಯಂತ ಎಲ್ಲಾ ರೈಲು ಸೇವೆಗಳನ್ನು ರದ್ದುಗೊಳಿಸಿತ್ತು. ಲೌಕ್ಡೌನ್ ತೆಗೆದ ನಂತರ 2021ರಲ್ಲಿ ರೈಲ್ವೆ ಇಲಾಖೆಯು ಎಲ್ಲಾ ರೈಲು ಸೇವೆಗಳನ್ನು ಮರು ಆರಂಭಿಸಲು ನಿರ್ಧರಿಸಿ ಹೆಚ್ಚಿನ ರೈಲು ಸೇವೆಗಳು ಈಗಾಗಲೇ ಆರಂಭಗೊಂಡಿದೆ. ಆದರೆ ಮಂಗಳೂರು ಸೆಂಟ್ರಲ್-ಕತ್ರಾ ನವಯುಗ ಎಕ್ಸ್‌ಪ್ರೆಸ್ ಮಾತ್ರ ಇನ್ನೂ ಹಳಿಯೇರಲೇ ಇಲ್ಲ! ತಿರುನೆಲ್ವೆಲಿಯಿಂದ ಕತ್ರ ಕಡೆಗೆ ನವಯಗ ಎಕ್ಸಪ್ರೆಸ್ ಜತೆಗೆ ಇದ್ದ ಸ್ಲಿಪ್ ರೈಲನ್ನು ಸ್ವತಂತ್ರ ರೈಲಾಗಿ ಮಾಡಿ ಪ್ರಸ್ತುತ 18 ಕೋಚಗಳ ಎಲ್.ಹೆಚ್.ಬಿ ರೇಕಿನೊಂದಿಗೆ ಸಂಚರಿಸುತ್ತಿದೆ. ಆದರೆ ಮಂಗಳೂರಿನಿಂದ ಕತ್ರಕ್ಕೆ ಹೋಗುವ ರೈಲನ್ನು ತಿರುನೆಲ್ವೆಲಿಯಿಂದ ಹೋಗುವ ರೈಲಿನ ಸ್ಲಿಪ್ ರೈಲು ಎಂದು ನೆಪ ಹೇಳಿ ರೈಲ್ವೆ ಇಲಾಖೆಯು ಈ ರೈಲನ್ನು ಇನ್ನೂ ಆರಂಭಿಸದೆ ಕೂತಿದೆ. ಇದು ಈ ಭಾಗದ ಜನರಿಗೆ ಅನ್ಯಾಯ ಆಗಿದೆ,ಅಲ್ಲದೇ ಜನರ ಆಕ್ರೋಶಕ್ಕೂ ಕಾರಣವಾಗಿದೆ.
![]() |
ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ |
ಪ್ರಸ್ತುತ ಮತ್ತೇ ಈ ರೈಲನ್ನು ಪುನರಾರಂಭಿಸಲು ಬೇಡಿಕೆಗಳು ಕೇಳಿ ಬರುತ್ತಿದೆ. ಹೇಗೂ ತಿರುನೆಲ್ವೆಲಿಯಿಂದ ಕತ್ರಕ್ಕೆ ಹೋಗುವ ರೈಲು ಸ್ವತಂತ್ರವಾಗಿ ಓಡುತ್ತಿರುವ ಕಾರಣ ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ನವಯುಗ ಎಕ್ಸ್‌ಪ್ರೆಸ್ ರೈಲನ್ನು ಇಲ್ಲದಿದ್ದರೆ ಕರಾವಳಿ ಕರ್ನಾಟಕ,ಮಧ್ಯ ಕರ್ನಾಟಕ,ಉತ್ತರ ಕರ್ನಾಟಕದ ಎಲ್ಲಾ ಜನರಿಗೆ ದೇಶದ ರಾಜಧಾನಿ ದೆಹಲಿಗೆ ತೆರಳಲು ಹಾಗು ಪವಿತ್ರ ವೈಷ್ಣೋ ದೇವಿ ಯಾತ್ರೆಗೆ ತೆರಳಲು ಉಪಯೋಗ ಆಗುವ ಹಾಗೆ ಮಂಗಳೂರು-ಹಾಸನ-ಮೀರಜ್-ಪುಣೆ ದೆಹಲಿ ಮೂಲಕ ಓಡಿಸಬೇಕೆಂಬ ಕೂಗು ಕೇಳಿ ಬರುತ್ತಿದ್ದೆ. ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿಯು ಈಗಾಗಲೇ ಸಹಿ ಅಭಿಯಾನವನ್ನು ಮಾಡಿದೆ. ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿಯು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸನ್ಮಾನ್ಯ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಹಾಗು ಜಿಲ್ಲೆಯ ಹಲವಾರು ವಿಧಾನಸಭಾ,ವಿಧಾನ ಪರಿಷತ್ತಿನ ಶಾಸಕರಿಗೂ ರೈಲು ಪುನರಾರಂಭಿಸಲು ಮನವಿ ಮಾಡಿದೆ. ವಿವಿಧ ಪತ್ರಿಕೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಪತ್ರಿಕೆಗಳಲ್ಲಿ ವರದಿ ಮಾಡಿದೆ. ಇತ್ತೀಚೆಗೆ ಅಷ್ಟೆ ಉದಯವಾಣಿ ಪತ್ರಿಕೆಯ ವರದಿಯಲ್ಲಿ ಸನ್ಮಾನ್ಯ ಸಂಸದರು ಹೇಳಿಕೆಯನ್ನು ಕೂಡ ಉಲ್ಲೇಖಿಸಲಾಗಿತ್ತು. ಇದರ ಪ್ರಕಾರ ಸಂಸದರು ಈಗಾಗಲೇ ರೈಲ್ವೆ ಸಚಿವರ ಗಮನಕ್ಕೆ ತಂದಿದ್ದಾರೆ. ಇದು ಜಿಲ್ಲೆಯ ರೈಲ್ವೆ ಪ್ರಯಾಣಿಕರಿಗೆ,ಹೋರಾಟಗಾರರಿಗೆ ತಮ್ಮ ಹೋರಾಟಕ್ಕೆ ಹೊಸ ಹುರುಪನ್ನು ನೀಡಿದೆ. ಸಂಸದರ ಬೆಂಬಲ ಇರುವ ಕಾರಣ ಆದಷ್ಟು ಬೇಗ ಈ ರೈಲು ಹಳಿ ಏರಲಿ ಎಂಬ ಆಶಯ ಎಲ್ಲರಿಗೆ ಇದೆ. ಸನ್ಮಾನ್ಯ ಸಂಸದರ ಪ್ರಯತ್ನದ ಫಲವಾಗಿ ಈ ಹಿಂದೆ ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ತನಕ ವಿಸ್ತರಣೆಗೊಂಡಿತ್ತು. ತದನಂತರ ಈಗ ಮಂಗಳೂರು-ವಿಜಯಪುರ ವಿಶೇಷ ರೈಲಿನ ಸಮಯ ಬದಲಾವಣೆ ಆದದ್ದು ಮಾತ್ರವಲ್ಲದೆ ಈ ರೈಲು ಖಾಯಂಗೊಳ್ಳುವ ಹಂತಕ್ಕೆ ತಲುಪಿದೆ. ಈ ಹಿಂದೆ ಮಂಗಳೂರು-ಬೆಂಗಳೂರು ಮಧ್ಯೆ ಹೆಚ್ಚುವರಿ ರೈಲುಗಳ ಅಗತ್ಯವಿದ್ದಾಗ ವಿಶೇಷ ರೈಲು ಓಡಿಸುವಲ್ಲಿ ಸಂಸದರ ಪ್ರಯತ್ನ ಬಹಳಷ್ಟು ಇತ್ತು. ಹೀಗಾಗಿ ಈ ಬಾರಿ ಸಂಸದರ ಪ್ರಯತ್ನದ ಫಲವಾಗಿ ನವಯುಗ ಎಕ್ಸ್‌ಪ್ರೆಸ್ ಪುನರಾರಂಭಗೊಂಡು ಹಾಸನ-ಮೀರಜ್-ಪುಣೆ ಮಾರ್ಗದ ಶೀಘ್ರವಾಗಿ ಓಡಲಿ ಎಂಬುದು ಪ್ರಯಾಣಿಕರ ಆಶಯ. ಈ ಬಗ್ಗೆ ರೈಲ್ವೆ ಇಲಾಖೆಯು ಶೀಘ್ರವಾಗಿ ಈ ರೈಲನ್ನು ಪುನರಾರಂಭಿಸಲು ಕ್ರಮಕೈಗೊಳ್ಳಬೇಕಿದೆ ಹಾಗು ಜನ ಪ್ರತಿನಿಧಿಗಳು ಈ ರೈಲಿನ ನಿರ್ವಹಣೆ ಮಾಡಬೇಕಾದ ದಕ್ಷಿಣ ರೈಲ್ವೆ ವಲಯಕ್ಕೆ ರೈಲು ಸೇವೆಯನ್ನು ಪುನರಾರಂಭಿಸಲು ಒತ್ತಡ ಹೇರಬೇಕಾಗಿದೆ.
Comments
Post a Comment