ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ...!

 ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ...!

ಸದಾ ಪೇಟೆಯ ಜಂಜಾಟದ ಮಧ್ಯೆ ಬದುಕುವಾಗ ಅದರಿಂದ ಮುಕ್ತಿ ಪಡೆಯಲು ಸ್ವಲ್ಪ ಸಮಯ ಪ್ರಕೃತಿಯ ಮಧ್ಯೆ ಕಳೆಯಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಇದೇ ಆಸೆಯೊಂದಿಗೆ ಗೆಳೆಯರೊಂದಿಗೆ ವರ್ಷದಲ್ಲಿ ಒಂದೆರಡು ಬಾರಿ ಪ್ರವಾಸ,ಚಾರಣಕ್ಕೆ ಹೋಗುವ ನಾನು ಈ ಮೊದಲು ಕುಮಾರ ಪರ್ವತ,ಕುದುರೆಮುಖ ಶಿಖರಗಳ ಚಾರಣ ಮಾಡಿದ್ದೆ. ಕುದುರೆಮುಖ ಶಿಖರದ ಚಾರಣಕ್ಕೆ ಹೋಗುವ ಮೊದಲು ನನಗೆ ಇದರ ಯೋಜನೆ ರೂಪಿಸುವ ಸಮಯದಲ್ಲಿ ನಾನು ಮೊದಲು ಹೋಗಲು ತೀರ್ಮಾನಿಸಿದ್ದು ನೇತ್ರಾವತಿ ಶಿಖರಕ್ಕೆ ಚಾರಣ ಎಂದು. ಆದರೆ ನಂತರ ನಮ್ಮ ಯೋಜನೆಯಲ್ಲಿ ಬದಲಾವಣೆ ತಂದು ಕುದುರೆಮುಖ ಶಿಖರಕ್ಕೆ ಚಾರಣ ಹೋದೆವು. ಈ ಬಾರಿ ಅನಿರೀಕ್ಷಿತವಾಗಿ ಒಂದು ಯೋಜನೆ ಮಾಡಿ ಎರಡು ದಿನಗಳ ಪ್ರವಾಸ ಆಯೋಜಿಸಿ ಮೊದಲ ದಿನ ಚಾರ್ಮಾಡಿ,ದೇವರಮನೆ,ರಾಣಿಝರಿ,ಕಳಸಕ್ಕೆ ಭೇಟಿ ನೀಡಿ ಎರಡನೆಯ ದಿನ ನೇತ್ರಾವತಿ ಶಿಖರಕ್ಕೆ ಚಾರಣ ಹೋದೆವು. ಈ ಲೇಖನದಲ್ಲಿ ಮೊದಲ ದಿನದ ಅನುಭವಕ್ಕಿಂತ ಮುಖ್ಯವಾಗಿ ನಾನು ನೇತ್ರಾವತಿ ಶಿಖರದ ಚಾರಣ ಮಾಹಿತಿ,ಅನುಭವದ ಬಗ್ಗೆ ಮಾಹಿತಿ ನೀಡುತ್ತೇನೆ.

ನೇತ್ರಾವತಿ ಶಿಖರ ಕರ್ನಾಟಕದ ಸುಂದರ ಶಿಖರಗಳಲ್ಲಿ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯ ಉಗಮ ಸ್ಥಾನವು ಇಲ್ಲಿ ಹತ್ತಿರದಲ್ಲಿದೆ. ಹೀಗಾಗಿ ಈ ಶಿಖರಕ್ಕೆ ನೇತ್ರಾವತಿಯ ಹೆಸರು ಬಂತು. ಸಮುದ್ರ ಮಟ್ಟದಿಂದ 1520 ಮೀಟರ್ ಎತ್ತರದಲ್ಲಿರುವ ಈ ಶಿಖರ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಬರುತ್ತದೆ. ಕುದುರೆಮುಖ ಪರ್ವತ ಸಾಲಿನಲ್ಲಿ ಕುದುರೆಮುಖ ಶಿಖರದ ಎಡಭಾಗಕ್ಕೆ ಈ ಶಿಖರವಿದೆ. ಹಲವಾರು ವಿಶಿಷ್ಟ ಸಸ್ಯ,ಪ್ರಾಣಿ ಪ್ರಭೇದಗಳು ಈ ಕುದುರೆಮುಖ ಪರ್ವತ ಸಾಲುಗಳಲ್ಲಿ ಇದೆ. ಆದ್ದರಿಂದ ಕುದುರೆಮುಖ ಪರ್ವತ ಹಾಗು ಸುತ್ತಮುತ್ತಲಿನ ಪ್ರದೇಶಗಳನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಿ ಈ ವಿಶಿಷ್ಟ ಸಸ್ಯ,ಪ್ರಾಣಿ ಪ್ರಭೇದಗಳನ್ನು ಸಂರಕ್ಷಿಸುವ ಕೆಲಸ ನಡೆಯುತ್ತಿದೆ. ಈ ವಿಶಿಷ್ಟ ಪ್ರಭೇದಗಳಲ್ಲಿ ಸಿಂಗಳಿಕ,ಲಂಗೂರ್ ವಾನರ,ಸಾಂಬಾರ್ ಜಿಂಕೆ,ಹುಲಿ,ಕಾಡುನಾಯಿಗಳು,ಹಾರುವ ಅಳಿಲು ಸೇರಿ ಹಲವಾರು ಪ್ರಾಣಿಗಳು,ಸಸ್ಯ ಸಂಕುಲಗಳು ಒಳಗೊಂಡಿವೆ. ಕುದುರೆಮುಖ ಪರ್ವತ ಸಾಲುಗಳು,ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ,ದಕ್ಷಿಣ ಕನ್ನಡ,ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಬ್ಬಿಕೊಂಡಿದೆ. ಇದರಲ್ಲಿ ನೇತ್ರಾವತಿ ಶಿಖರವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುತ್ತದೆ. ನಮ್ಮ ಮಾರ್ಗದರ್ಶಕರು ಹೇಳಿದ ಹಾಗೆ ನೇತ್ರಾವತಿ ನದಿಯ ಮುಖ್ಯ ಭಾಗ ಇಲ್ಲಿ ಉಗಮಿಸಿದರೆ ಅದರ ಇನ್ನೊಂದು ಭಾಗ ಗಂಗಮೂಲದಲ್ಲಿ ಉಗಮಿಸುತ್ತದೆ. ಎರಡು ಭಾಗಗಳು ಮುಂದೆ ಸಂಗಮಿಸಿ ಮುಂದೆ ಸಾಗುತ್ತದೆ.

ಚಾರಣದ ಮಾಹಿತಿ:

ದಿನಾಂಕ 14/01/2024ರಂದು ಬೆಳಗ್ಗೆ ಗೆಳೆಯರ ಜೊತೆಗೆ ಮಂಗಳೂರಿನಿಂದ ಹೊರಟ ನಾನು ಚಾರ್ಮಾಡಿ ಘಾಟಿಯ ಮೂಲಕ ದೇವರಮನೆ ಶಿಖರಕ್ಕೆ ಹೋದೆವು. ದೇವರಮನೆಯಲ್ಲಿ ಪಶ್ಚಿಮ ಘಟ್ಟದ ಸುಂದರ ನೋಟವನ್ನು ಕಣ್ತುಂಬಿಕೊಂಡು ಕಳಸದ ಕಡೆ ಹೊರಟೆವು. ಆ ಸಂದರ್ಭದಲ್ಲಿ ನಮ್ಮ ಕಾರಿನ ಚಾಲಕರು ಕಳಸಕ್ಕೆ ಹೋಗುವ ದಾರಿಯಲ್ಲಿ ರಾಣಿಝರಿಗೂ ದಾರಿ ಮಧ್ಯೆ ಹೋಗಿ ಮುಂದೆ ಹೋಗಬಹುದು ಎಂದು ಹೇಳುದರು. ಹೀಗಾಗಿ ನಾವು ರಾಣಿಝರಿಗೆ ಹೋಗುವ ನಿರ್ಧಾರ ಮಾಡಿ ಹೊರಟೆವು. ರಾಣಿಝರಿಯಲ್ಲಿ ಕುದುರೆಮುಖ ಪರ್ವತಗಳ ಸಾಲು,ಬಳ್ಳರಾಯನದುರ್ಗ ಕೋಟೆ,ಬಂಡಾಜೆ ಜಲಪಾತಗಳ ಶಿಖರ,ರಾಣಿಝರಿ ಪ್ರಪಾತದ ಸುಂದರ ನೋಟವನ್ನು ನೋಡಬಹುದು. ರಾಣಿಝರಿಯಲ್ಲಿ ಸ್ವಲ್ಪ ಸಮಯ ಕಳೆದು ಸಂಜೆ ಕಳಸಕ್ಕೆ ಹೋದೆವು. ಕಳೆದ ಬಾರಿ ಕುದುರೆಮುಖ ಚಾರಣದ ಸಮಯದಲ್ಲಿ ಕಳಸದಲ್ಲಿರುವ ನನ್ನ ದೊಡ್ಡಮ್ಮನ ಬಳಿ ಮಾಹಿತಿಯನ್ನು ಕೇಳಿದ್ದೆ. ಈ ಬಾರಿ ನೇತ್ರಾವತಿ ಶಿಖರದ ಚಾರಣಕ್ಕೆ ಹೋಗುವ ಸಂದರ್ಭದಲ್ಲಿ ನಾನು ಅವರಿಗೆ ತಿಳಿಸಿದ್ದೆ. ಆಗ ಚಾರಣಕ್ಕೆ ಹೋಗುವಾಗ ಒಂದು ದಿನ ಮೊದಲು ಬರುವುದಾದರೆ ತಂಗಲು ಇಲ್ಲಿಗೆ ಬನ್ನಿ ಅಂತ ನನಗೆ ಹೇಳಿಯೇ ಬಿಟ್ಟರು! ನಮಗೆ ಆ ಚಳಿಯ ವಾತಾವರಣದ ನಡುವೆ ಬಿಸಿ ನೀರಿನ ಸ್ನಾನ,ರುಚಿರುಚಿಯಾದ ಊಟ,ತಿಂಡಿ,ನಿದ್ರೆ ಮಾಡಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಅವರು ಹಾಗು ದೊಡ್ಡಪ್ಪ ಮಾಡಿಕೊಟ್ಟರು. ಒಟ್ಟಿನಲ್ಲಿ ನಮಗೆ ಅಲ್ಲಿ ಬಹಳ ಒಳ್ಳೆಯ ಉಪಚಾರ ಆಯಿತು. ಗೆಳೆಯರು,ನಮ್ಮ ವಾಹನದ ಚಾಲಕರು ಬಹಳ ಸಂತೋಷಪಟ್ಟರು. ಮರುದಿನ ಮುಂಜಾನೆ ದೊಡ್ಡಮ್ಮ ನಮಗೆಲ್ಲರಿಗೆ ತಿಂಡಿಯ ವ್ಯವಸ್ಥೆ ಮಾಡಿದ್ದು ಅಲ್ಲದೆ ಚಾರಣಕ್ಕೆ ಹೋಗುವಾಗ ತೆಗೆದು ಹೋಗಲು ತಿಂಡಿಯನ್ನು ಕಟ್ಟಿಕೊಟ್ಟರು. ನಂತರ ಅವರ ಮನೆಯಿಂದ ಹೊರಟ ನಾವು ಸಂಸೆಗೆ ತಲುಪಿದೆವು. ನಮ್ಮ ಕಾರಿನ ಚಾಲಕರು ಕಾರಿನಲ್ಲಿ ನಮ್ಮನ್ನು ಸಂಸೆಯಿಂದ ಎಳನೀರು ರಸ್ತೆಯಲ್ಲಿ ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗಳ ಗಡಿಯ ತನಕ ಬಿಟ್ಟಿರು. ಅಲ್ಲಿಂದ ನಾವು ಚಾರಣ ಆರಂಭಗೊಳ್ಳುವ ಸ್ಥಳದ ತನಕ ನಡೆದು ಹೋಗುವಾಗ ಮಧ್ಯದಲ್ಲಿ ಚಾರಣದ ಮಾರ್ಗದರ್ಶಕರೊಬ್ಬರು ಸಿಕ್ಕಿದರು. ಅವರ ಜೊತೆಗೆ ಮಾತನಾಡಿ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಟ್ಟು ನಮ್ಮ ಜೊತೆಗೆ ಬರುವುದಾಗಿ ಹೇಳಿದರು. ನಮಗೆ ಅವರು ಅಲ್ಲೇ ಸಿಕ್ಕಿದ ಕಾರಣ ಸುಲಭವು ಆಯಿತು. ಇಲ್ಲದಿದ್ದರೆ ಮುಂದೆ ಹೋಗಿ ಮಾರ್ಗದರ್ಶಕರನ್ನು ಹುಡುಕಬೇಕಿತ್ತು.

ನೇತ್ರಾವತಿ ಚಾರಣ ಒಂದು ದಿನದ ಚಾರಣ ಆಗಿದೆ. ಇಲ್ಲಿ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯ ತನಕ ಚಾರಣಕ್ಕೆ ಹೋಗಲು ಬಿಡುತ್ತಾರೆ. ನೇತ್ರಾವತಿ ಚಾರಣ ಆರಂಭ ಆಗುವುದು ಸಂಸೆ ಬಳಿಯ ಕುಡ್ಚಾರು ಉಪಕಲ್ಲು ಎಂಬಲ್ಲಿಂದ.ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸಿಗುತ್ತದೆ. ಸಂಸೆಯಿಂದ ಈ ಚೆಕ್ ಪೋಸ್ಟಿಗೆ ಸುಮಾರು 4 ಕಿಲೋಮಿಟರ್ ಆಗುತ್ತದೆ. ತಮ್ಮ ಸ್ವಂತ ವಾಹನದಲ್ಲಿ ಮುಕ್ಕಾಲು ಭಾಗ ಬರಬಹುದು. ಹೀಗಾಗಿ ಜೀಪ್ ಅಥವ ಪಿಕಪಿನ ಅಗತ್ಯ ಇರುವುದಿಲ್ಲ. ಇಲ್ಲದಿದ್ದರೆ ಸಂಸೆಯಿಂದ ಬೇಗ ಹೊರಟು ನಡೆದುಕೊಂಡು ಬರಬಹುದು. 

ನೇತ್ರಾವತಿ ಚಾರಣಕ್ಕೆ ಪ್ರತಿಯೊಬ್ಬರಿಗೆ 500ರೂ ದರವಿದೆ. ಇಲ್ಲಿ ಮಾರ್ಗದರ್ಶಕರನ್ನು ಜೊತೆಗೆ ಕರೆದುಕೊಂಡು ಹೋಗುವುದು ಕಡ್ಡಾಯವಾಗಿದೆ. ಪ್ರತಿಯೊಬ್ಬರಿಗೆ ತಲಾ 500ರೂ ಜೊತೆಗೆ ಒಂದು ತಂಡಕ್ಕೆ(ಗರಿಷ್ಠ 10 ಚಾರಣಿಗರ ತಂಡ) 1000ರೂ ಮಾರ್ಗದರ್ಶಕರ ದರ ನಿಗದಿಪಡಿಸಲಾಗಿದೆ. ಚಾರಣ ಹೋಗುವ ಕನಿಷ್ಠ ಎರಡು ದಿನಗಳ ಮೊದಲೈ ಅರಣ್ಯ ಇಲಾಖೆಯ ಅರಣ್ಯ ವಿಹಾರ ಜಾಲತಾಣದಲ್ಲಿ ಕಡ್ಡಾಯವಾಗಿ ಬುಕ್ ಮಾಡಬೇಕು. ಇಲ್ಲದಿದ್ದರೆ ಚಾರಣಕ್ಕೆ ಹೋಗಲು ಅವಕಾಶ ಇರುವುದಿಲ್ಲ. ಒಂದು ದಿನಕ್ಕೆ 300 ಚಾರಣಿಗರಿಗೆ ಮಾತ್ರ ಚಾರಣಕ್ಕೆ ಹೋಗಲು ಅವಕಾಶವಿದೆ.


ಚಾರಣದ ದಾರಿ:

ಭಾಗ 1: ಕುಡ್ಚಾರು ಉಪಕಲ್ಲು-ಕರಿಕಲ್ಲು ಜಲಪಾತ(2 ಕಿ.ಮಿ)


ನಾನು ಆಗ ಹೇಳಿದ ಹಾಗೆ ಕುಡ್ಚಾರು ಉಪಕಲ್ಲು ಚೆಕ್ ಪೋಸ್ಟ್ ನೇತ್ರಾವತಿ ಚಾರಣದ ಆರಂಭ ಸ್ಥಳ. ಇಲ್ಲಿ ನೀವು ತೆಗೆದುಕೊಂಡು ಬರುವ ಬ್ಯಾಗ್ ಅನ್ನು ಅಲ್ಲಿಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಾರೆ. ಪ್ರತಿಯೊಂದು ಪ್ಲಾಸ್ಟಿಕ್ ಅನ್ನು ತೆಗೆದು ಅವುಗಳಲ್ಲಿ ಕಟ್ಟಿಕೊಂಡು ಬಂದ ವಸ್ತುಗಳು ಅನಿವಾರ್ಯವಾಗಿ ಬೇಕಾದರೆ ಅದನ್ನು ಬೇರೆ ಬುತ್ತಿಗಳಲ್ಲಿ ಕಟ್ಟಿಕೊಂಡು ಹೋಗಲೂ ಹೇಳುತ್ತಾರೆ. ಇದು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತ ಪ್ರದೇಶ.ಹಾಗಾಗಿ ಚಾರಣಕ್ಕೆ ಹೋಗುವಾಗ ಪರಿಶೀಲಿಸಿ ಪ್ಲಾಸ್ಟಿಕ್ ತೊಟ್ಟೆಗಳನ್ನು ವಶಪಡಿಸಿಕೊಳ್ಳುತ್ತಾರೆ. ಹೀಗಾಗಿ ನೀವು ಬರುವಾಗ ಸಾಧ್ಯವಾದಷ್ಟು ಪ್ಲಾಸ್ಟಿಕ್ ತರಬೇಡಿ. ನಮಗೆ ಹೋಗುವ ದಾರಿಯಲ್ಲಿ ಮಾರ್ಗದರ್ಶಕರೊಬ್ಬರು ಸಿಕ್ಕದ ಕಾರಣ ಮತ್ತೆ ಮಾರ್ಗದರ್ಶಕರನ್ನು ಹುಡುಕುವ ಕೆಲಸ ಇರಲಿಲ್ಲ. ನಮ್ಮ ಮಾರ್ಗದರ್ಶಕರ ಹೆಸರು ಜಗದೀಶ್. ಅವರು ಅಲ್ಲಿಯ ಸ್ಥಳೀಯ ನಿವಾಸಿಯೂ ಹೌದು. ಅವರ ಜೊತೆಗೆ ಚಾರಣ ಆರಂಭಿಸಿದ ನಾವು ಸ್ವಲ್ಪ ಕಾಡು,ಹುಲ್ಲುಗಾವಲಿನಿಂದ ಕೂಡಿದ ಸ್ವಲ್ಪ ಕಡಿದಾದ ದಾರಿಯ ಮೂಲಕ ಸಾಗಿದೆವು. ದಾರಿ ಮಧ್ಯೆ ನಾವು ಸ್ಥಳೀಯ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಸಾಕುವ 10-20 ಮಲೆನಾಡು ಗಿಡ್ಡ ತಳಿಯ ದನಗಳನ್ನು ಗುಡ್ಡೆಯಲ್ಲಿ ಮೇಯಿಸಲು ಕರೆದುಕೊಂಡು ಹೋಗುವುದನ್ನು ನೋಡಿದೆವು. ದಾರಿ ಮಧ್ಯೆ ಅಲ್ಲಿರುವ ಮನೆಗಳಿಗೆ ಕುಡಿಯುವ ನೀರು ಹಾಗು ತೋಟಕ್ಕೆ ಬೇಕಾದ ನೀರಿಗೆ ನಾಲೆ ಮಾಡಿದ್ದನ್ನು ನೋಡಿದೆವು. ಈ ಭಾಗದ ಕೊನೆಗೆ ಕರಿಕಲ್ಲು ಜಲಪಾತ ಸಿಗುತ್ತದೆ. ಕರಿಕಲ್ಲು ಜಲಪಾತದ ಬಳಿ ನಿಮಗೆ ಕಲ್ಲಿನ ಮೇಲೆ ಕುಳಿತು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬಹುದು. ಬಾಟಲಿಯಲ್ಲಿ ನೀರು ತುಂಬಿಸಲು ಇದ್ದರೆ ಇಲ್ಲಿ ತುಂಬಿಸಿಕೊಳ್ಳಿ. 


ಭಾಗ 2: ಕರಿಕಲ್ಲು ಜಲಪಾತ-ನೇತ್ರಾವತಿ ನದಿ(3 ಕಿ.ಮಿ)

ಕರಿಕಲ್ಲು ಜಲಪಾತದಿಂದ ನೇತ್ರಾವತಿ ನದಿ ತನಕದ ದಾರಿ ಸಮತಟ್ಟು ಮತ್ತು ಇಳಿಜಾರಿನಿಂದ ಕೂಡಿದ ಪ್ರದೇಶದಲ್ಲಿ ಸಾಗುತ್ತದೆ. ಈ ಪ್ರದೇಶವನ್ನು ಕ್ರಮಿಸಲು ನಮ್ಮ ಕಷ್ಟವಾಗಲಿಲ್ಲ. ನಾವು ಸಮಯದ ಹೊಂದಾಣಿಕೆ ಮಾಡಲು ಸ್ವಲ್ಪ ಬೇಗ ನಡೆದುಕೊಂಡು ಹೋದೆವು. ದಾರಿಯ ಮಧ್ಯೆ ನಿಮಗೆ ನಾನು ಮೇಲೆ ಹೇಳಿದ ಕುಡಿಯುವ ನೀರಿನ ನಾಲೆ ಸಿಗುತ್ತದೆ. ಅಂದಾಜು 50-80ಮೀ ತನಕ ಈ ನಾಲೆಯ ಒಂದು ಭಾಗದಲ್ಲಿ ನಡೆದುಕೊಂಡು ಹೋಗಿ ನಂತರ ಅದನ್ನು ದಾಟಬೇಕು. ದಾರಿಯಲ್ಲಿ ಸಾಗುತ್ತಾ ಹೋದಂತೆ ಎಡಭಾಗದಲ್ಲಿ ರಾಣಿಝರಿ ಪ್ರಪಾತ,ಬಳ್ಳರಾಯನದುರ್ಗ ಕೋಟೆ ನೋಡಲು ಸಿಗುತ್ತದೆ. ದೂರದ ಬೆಟ್ಟಗಳ ನೋಟವನ್ನು ನೋಡುತ್ತ,ಕೆಳಗೆ ಹರಿಯುವ ನೀರಿನ ಇಂಪಾದ ಶಬ್ದವನ್ನು ಕೇಳುತ್ತಾ, ಮುಂದೆ ನಡೆದುಕೊಂಡು ಹೋಗಿ ಕೊನೆಗೆ ಸಿಗುವ ಕಾಡಿನ ಮಧ್ಯೆ ನಡೆದುಕೊಂಡು ಹೋದರೆ ನೇತ್ರಾವತಿ ನದಿ ಸಿಗುತ್ತದೆ. ನೇತ್ರಾವತಿ ನದಿ ಶಿಖರದ ಸಮೀಪ ಇರುವ ಕಾಡಿನಲ್ಲಿ ಹುಟ್ಟುತ್ತದೆ. ಅಲ್ಲಿಂದ ಹರಿದು ಕೆಳಗೆ ಬರುತ್ತದೆ. ನೇತ್ರಾವತಿ ನದಿಯ ಬಳಿ ಸ್ವಲ್ಪ ಹೊತ್ತು ವಿಶ್ರಮಿಸಿ,ನೀರು ಕುಡಿದು ಬಾಟಲಿಗಳಲ್ಲಿ ತುಂಬಿಸಿಕೊಳ್ಳಿ. ಈ ಚಾರಣದ ದಾರಿಯಲ್ಲಿ ಇದೇ ಕೊನೆಯ ನೀರಿನ ಮೂಲ. ಇಲ್ಲಿಂದ ಮುಂದೆ ಇರುವ ದಾರಿ ಹುಲ್ಲುಗಾವಲಿನಿಂದ ಕೂಡಿರುತ್ತದೆ. 


 

 


ಭಾಗ 3: ನೇತ್ರಾವತಿ ನದಿ-ನೇತ್ರಾವತಿ ಶಿಖರ(2 ಕಿ.ಮಿ)


 


ಈ ಭಾಗ ಇಡೀ ಚಾರಣದ ದಾರಿಯ ಸುಂದರ ಭಾಗ.ಈ ಭಾಗದಲ್ಲಿ ಹುಲ್ಲುಗಾವಲಿನ ನಡುವೆ ನಡೆದುಕೊಂಡು ಹೋಗಬೇಕು. ಈ ಎರಡು ಕಿಲೋಮೀಟರಿನ ಭಾಗ ಕಡಿದಾದ ದಾರಿಯನ್ನು ಒಳಗೊಂಡಿದೆ. ಹೀಗಾಗಿ ಬಿಸಿಲು ಮೇಲೆ ಏರುವ ಮೊದಲೇ ಈ ಭಾಗದಲ್ಲಿ ಹತ್ತಲು ಆರಂಭಿಸಿದರೆ ಒಳ್ಳೆಯದು. ಇಲ್ಲಿ ನೀವು ಎಲ್ಲಾ ದಿಕ್ಕುಗಳಲ್ಲಿ ಬೆಟ್ಟಗಳನ್ನು ನೋಡಬಹುದು. ಉತ್ತರ ದಿಕ್ಕಿನಲ್ಲಿ ಕ್ಯಾತನಮಕ್ಕಿ ಶಿಖರ ಕಾಣುತ್ತದೆ. ಈ ಭಾಗದ ಒಂದು ಹಂತ ತಲುಪಿದಾಗ ಶಿಖರ ತಲುಪಿದೆ ಎಂದು ಅನಿಸಿದರೂ ಮುಂದೆ ಇನ್ನೊಂದು ಶಿಖರವನ್ನು ದಾಟಬೇಕು. ಹೀಗೆ ನಾವು ಹತ್ತುತ್ತಾ ಅಂತೂ ಇಂತು ಶಿಖರ ತಲುಪಿ ಬಿಟ್ಟೆವು! ನೇತ್ರಾವತಿ ಶಿಖರ ತಲುಪಿದಾಗ ನಮ್ಮೆಲ್ಲರ ಮುಖದಲ್ಲಿ ಸಾರ್ಥಕತೆಯ ಭಾವ ಮೂಡಿತು! ಎಲ್ಲರು ಸಂಭ್ರಮಿಸಿದೆವು.ನಂತರ ಶಿಖರದಲ್ಲಿ ನಿಮಗೆ ಸುತ್ತಲೂ 360° ನಿಸರ್ಗದ ಸೌಂದರ್ಯವನ್ನು ಕಾಣಲು ಸಿಗುತ್ತದೆ. ಇಲ್ಲಿ ನೀವು ಕುದುರೆಮುಖ ಶಿಖರ,ನೇತ್ರಾವತಿ ನದಿ ಹುಟ್ಟುವ ಕಾಡು,ಗಡಾಯಿಕಲ್ಲು,ಉಜಿರೆ,ದಿಡುಪೆ,ಕಳಸ,ಹೊರನಾಡು,ಕ್ಯಾತನಮಕ್ಕಿ,ಬಳ್ಳರಾಯನದುರ್ಗ ಕೋಟೆ,ರಾಣಿಝರಿ ಪ್ರಪಾತ ಸೇರಿ ಹಲವಾರು ಪ್ರದೇಶಗಳು,ಪಶ್ಚಿಮ ಘಟ್ಟದ ಸಾಲಿನ ಪರ್ವತ ಸಾಲುಗಳನ್ನು ನೋಡಬಹುದು. ಜೊತೆಗೆ ಎಳನೀರಿನಿಂದ ದಿಡುಪೆ,ಧರ್ಮಸ್ಥಳ ಆಗಿ ಹರಿಯುವ ನೇತ್ರಾವತಿ ನದಿಯ ಹರಿಯುವ ದಾರಿಯನ್ನು ನೋಡಬಹುದು. ನಂತರ ಸ್ವಲ್ಪ ಹೊತ್ತು ವಿಶ್ರಮಿಸಿ ನನ್ನ ದೊಡ್ಡಮ್ಮ ಬೆಳಗ್ಗೆ ಮಾಡಿಕೊಟ್ಟ ದಪ್ಪ ಅವಲಕ್ಕಿಯ ಉಪ್ಪಿಟ್ಟು ತಿಂದು ಫೋಟೋ,ವೀಡಿಯೊ ತೆಗೆದೆವು. 


 


ಬೆಳಗ್ಗೆ 7:20ಕ್ಕೆ ಕುಡ್ಚಾರು ಉಪಕಲ್ಲು ಚೆಕ್ ಪೋಸ್ಟಿನಿಂದ ಹೊರಟು ಬೆಳಗ್ಗೆ 9:50ಕ್ಕೆ ನೇತ್ರಾವತಿ ಶಿಖರ ತಲುಪಿದೆವು. ಮಳೆಗಾಲ ಅಥವ ಮೋಡ ಕವಿದ ವಾತಾವರಣ ಇರುವ ಸಮಯದಲ್ಲಿ ಶಿಖರಕ್ಕೆ ಬಂದರೆ ಪರ್ವತದ ಒಂದು ಭಾಗದಲ್ಲಿ ಮೋಡಗಳು,ಆ ಮೋಡಗಳು ಇನ್ನೊಂದು ಭಾಗಕ್ಕೆ ಬಾರದಂತೆ ಪರ್ವತ ತಡೆಯುವ ಸುಂದರ ದೃಶ್ಯವನ್ನು ನೋಡಬಹುದು. ನೇತ್ರಾವತಿ ಶಿಖರದಿಂದ ಬೆಳಗ್ಗೆ 11:20ಕ್ಕೆ ಹೊರಟ ನಾವು ಮಧ್ಯಾಹ್ನ 1:20ಕ್ಕೆ ಚೆಕ್ ಪೋಸ್ಟಿಗೆ ಮರಳಿದೆವು. ನಮ್ಮ ಚಾರಣ ಇಷ್ಟು ಸುಲಭವಾಗಿ ಸಾಗಲು ಒಂದು ಕಾರಣ ನಮ್ಮ ಮಾರ್ಗದರ್ಶಕರಾದ ಜಗದೀಶ್ ಅವರು. ಅವರು ನಮಗೆ ಮಾರ್ಗದರ್ಶನ ನೀಡಿದ್ದು ಮಾತ್ರವಲ್ಲದೆ ನಮಗೆ ನಡೆದುಕೊಂಡು ಹೋಗುವಾಗ ಸುರಕ್ಷತೆಗೆ,ಜಾರದಂತೆ ಬೆಂಬಲಕ್ಕೆ ಕೋಲುಗಳನ್ನು ನೀಡಿದರು. ನಾನು ದಾರಿಯುದ್ದಕ್ಕೂ ನನಗೆ ಇದ್ದ ಹಲವಾರು ಸಂದೇಹಗಳನ್ನು,ಪ್ರಶ್ನೆಗಳನ್ನು ಕೇಳಿದಾಗ ಚೆನ್ನಾಗಿ ಉತ್ತರಿಸಿದ್ದು ಮಾತ್ರವಲ್ಲದೆ ಬೇಕಾದ ಎಲ್ಲಾ ಮಾಹಿತಿಗಳನ್ನು ನೀಡಿದರು. ಜಗದೀಶ್ ಅವರನ್ನು ಸಂಪರ್ಕಿಸಲು +919483335264 ನಂಬರಿಗೆ ಕರೆ ಮಾಡಬಹುದು. ನೀವು ನೇತ್ರಾವತಿ ಚಾರಣಕ್ಕೆ ಹೋಗುವವರು ಆಗಿದ್ದರೆ ಅವರಿಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದು.



ನೇತ್ರಾವತಿ ಚಾರಣಕ್ಕೆ ಇರುವುದು ಇದೊಂದೇ ದಾರಿ.ಸಂಸೆಯಿಂದ ಕುಡ್ಚಾರು ಉಪಕಲ್ಲು ತನಕ 4 ಕಿಲೋಮಿಟರ್ ನಡೆದುಕೊಂಡೇ ಹೋಗಬಹುದು ಅಥವ ಜೀಪು,ಪಿಕಪಿನಲ್ಲಿ ಹೋಗಬಹುದು. ಜೀಪು ಅಥವ ಪಿಕಪಿಗೆ ಸಂಸೆಯಿಂದ ಮರಳಿ ಸಂಸೆಗೆ ತಂಡಕ್ಕೆ 2000ರೂ ನಿಗದಿಪಡಿಸಲಾಗಿದೆ. ಉಪ್ಪುಕಲ್ಲು ರಸ್ತೆ ಪ್ರಾರಂಭ ಆಗುವುದು ಸಂಸೆಯಿಂದ.ಈ ರಸ್ತೆ ಮುಂದೆ ಎಳನೀರು,ದಿಡುಪೆ ಕಡೆಗೆ ಹೋಗುತ್ತದೆ. ವಾಹನದವರು ನಿಮ್ಮನ್ನು ಸಂಸೆ ಪೇಟೆಯವರೆಗೆ ಅಥವ ಬಾಳ್ಗಲ್ ತನಕ ಬಿಡುತ್ತಾರೆ.ನೇತ್ರಾವತಿ ಚಾರಣಕ್ಕೆ ಬರುವವರು ತಮ್ಮ ಸ್ವಂತ ವಾಹನದಲ್ಲಿ ಬರುವುದಾದರೆ ಸಂಸೆ ಅಥವ ಉಪ್ಪುಕಲ್ಲು ಎಸ್ಟೇಟ್ ತನಕ ಬರಬಹುದು. ನೇತ್ರಾವತಿ ಶಿಖರಕ್ಕೆ ಹತ್ತಿರದಲ್ಲಿರುವ ಪ್ರಮುಖ ನಗರ ಎಂದರೆ ಕಳಸ. ಕರ್ನಾಟಕದ ಹಲವು ಸ್ಥಳಗಳಿಂದ ಕಳಸ,ಹೊರನಾಡಿಗೆ ಹೋಗುವ ಬಸ್ಸುಗಳಲ್ಲಿ ಕಳಸಕ್ಕೆ ಬಂದರೆ ಅಲ್ಲಿಂದ ಮಂಗಳೂರು,ಉಡುಪಿ ಕಡೆಗೆ ಹೋಗುವ ಬಸ್ಸುಗಳಲ್ಲಿ ಅಥವ ಬೇರೆ ವಾಹನಗಳಲ್ಲಿ ಸಂಸೆ,ಉಪ್ಪುಕಲ್ಲು ತನಕ ಪ್ರಯಾಣಿಸಬಹುದು. ಕಳಸ,ಸಂಸೆಯಲ್ಲಿ ತಂಗಲು ಸಾಕಷ್ಟು ಹೋಮ್ ಸ್ಟೇಗಳು ಲಭ್ಯವಿದೆ. ಬಹುತೇಕ ಹೋಮ್ ಸ್ಟೇಗಳು ಚಾರಣಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ.


ನನ್ನ ಸ್ವಂತ ಅನುಭವದ ಪ್ರಕಾರ ಹೇಳುವುದಾದರೆ ನೇತ್ರಾವತಿ ಚಾರಣ ಕುದುರೆಮುಖ ಚಾರಣ ಆಗಲಿ,ಕುಮಾರ ಪರ್ವತ ಚಾರಣದಷ್ಟು ಕಠಿಣವಿಲ್ಲ. ಈ ಚಾರಣವನ್ನು ಸುಲಭ-ಮಧ್ಯಮ ಕಠಿಣ ವರ್ಗದ ಚಾರಣಗಳಲ್ಲಿ ಸೇರಿಸಲಾಗಿದೆ. ಆರಂಭದಲ್ಲಿ ಹಾಗು ಕೊನೆಯಲ್ಲಿ ಕಡಿದಾದ ದಾರಿ ಸಿಗುವುದು ಬಿಟ್ಟರೆ ಬಹುತೇಕ ಭಾಗದಲ್ಲಿ ಸುಲಭವಾಗಿ ನಡೆದುಕೊಂಡು ಹೋಗಬಹುದು.ನಮಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯ ಅಗತ್ಯವು ಬರಲಿಲ್ಲ. ಈ ಮೊದಲು ಕುಮಾರ ಪರ್ವತ,ಕುದುರೆಮುಖ ಹತ್ತಿದ ಅನುಭವದ ಆಧಾರದ ಮೇಲೆ ಈ ಚಾರಣಕ್ಕೆ ಬೇಕಾದ ತಯಾರಿಯನ್ನು ನಾನು ಮೊದಲು ಮಾಡಿಟ್ಟುಕೊಂಡಿದ್ದೆ. ದಾರಿ ಮಧ್ಯೆ ಸಾಗುವಾಗ ನೀರು ಕುಡಿಯುವುದು ಬಹಳ ಉತ್ತಮ. ಇದರಿಂದ ದೇಹದಲ್ಲಿ ನಿರ್ಜಲಿಕಾರಣ ಅಥವ ನಿತ್ರಾಣ ಆಗುವುದನ್ನು ತಡೆಯಬಹುದು.ದೇಹದ ನಿರ್ಜಲಿಕಾರಣ ಆದರೆ ಅರ್ಧದಲ್ಲೇ ಬಾಕಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಿ.


ನೇತ್ರಾವತಿ ಚಾರಣದ ದಾರಿಯುದ್ದಕ್ಕೂ ನೇತ್ರಾವತಿ ನದಿ ದಾಟುವ ಪ್ರದೇಶ ಬಿಟ್ಟರೆ ಮತ್ತೆ ಬಹುತೇಕ ಭಾಗಗಳಲ್ಲಿ ಮೊಬೈಲ್ ನೆಟ್‌ವರ್ಕ್ ಲಭ್ಯವಿದೆ. ಅದರಲ್ಲಿಯೂ ಬಿ.ಎಸ್.ಎನ್.ಎಲ್,ಜಿಯೋ,ಏರ್ಟೆಲ್ ನೆಟ್‌ವರ್ಕ್ ಸಿಗುತ್ತದೆ.ಈ ಪ್ರದೇಶದಲ್ಲಿ ಬಿ.ಎಸ್.ಎಸ್.ಎಲ್ ಬಳಸುವವರು ತುಂಬಾ ಜನರು ಇದ್ದಾರೆ. ಶಿಖರದಲ್ಲಿ 5ಜಿ ಇಂಟರ್‌ನೆಟ್ ಕೂಡ ಸಿಗುತ್ತದೆ! ಚಾರಣಕ್ಕೆ ಬರುವಾಗ ನಿಮ್ಮ ಕೈಯಲ್ಲಿ ಹಾಗು ತಂಡದ ಸದಸ್ಯರ ಬಳಿ 2000-5000ರೂ ಕ್ಯಾಶ್ ಇದ್ದರೆ ಒಳ್ಳೆಯದು. ಇಲ್ಲಿ ಯುಪಿಐ,ನೆಟ್ ಬ್ಯಾಂಕಿಂಗ್ ಯಾವುದು ಚಲಾವಣೆಯಲ್ಲಿ ಇಲ್ಲ.

ಕುದುರೆಮುಖ ಚಾರಣದ ಸಂದರ್ಭದಂತೆ ಈ ಬಾರಿಯೂ ನನಗೆ ಹಾಗು ನನ್ನ ಗೆಳೆಯರಿಗೆ ಊಟ-ತಿಂಡಿ ಹಾಗು ರಾತ್ರಿ ತಂಗಲು ವ್ಯವಸ್ಥೆ ಮಾಡಿಕೊಟ್ಟ ನನ್ನ ದೊಡ್ಡಮ್ಮ ಶ್ರೀಮತಿ ಪಾರ್ವತಿ ಗಣೇಶ್ ಸಾಲಿನಮಕ್ಕಿ, ದೊಡ್ಡಪ್ಪ ಶ್ರೀ ಪ್ರಸನ್ನ ಗಣೇಶ್ ಜೋಯಿಸ ಸಾಲಿನಮಕ್ಕಿ ಹಾಗು ನಮ್ಮ ತಂಡದ ಜೊತೆಗೆ ಮಾರ್ಗದರ್ಶಕರಾಗಿ ಚಾರಣದುದ್ದಕ್ಕೂ ಬಂದ ಶ್ರೀ ಜಗದೀಶ್ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ಚಾರಣಕ್ಕೆ ಹೋದ ಸಂತೋಷ ಮಾತ್ರವಲ್ಲದೆ ನೇತ್ರಾವತಿ ನದಿಯ ಉಗಮ ಸ್ಥಾನವನ್ನು ನೋಡಿದ ಸಾರ್ಥಕತೆ ಈಗ ನನಗೆ. ಈ ಸಂತೋಷದೊಂದಿಗೆ ಆ ಕ್ಷಣಗಳು,ಚಾರಣದ ಮಾಹಿತಿಯನ್ನು ಹಾಗು ನನ್ನ ಅನುಭವಗಳನ್ನು ಇಲ್ಲಿ ಹಂಚಿದ್ದೇನೆ.

ಪರಿಸರದ ಮಧ್ಯೆ ಸಮಯ ಕಳೆಯಲು ಇಷ್ಟ ಇರುವವರು,ಚಾರಣಕ್ಕೆ ಹೋಗುವ ಅಭ್ಯಾಸ ಇರುವವರಿಗೆ,ಯಾವುದೇ ಅನುಭವ ಇಲ್ಲದ ಚಾರಣಿಗರು(ಸ್ವಲ್ಪ ಕಡಿದಾದ ದಾರಿಯಲ್ಲಿ ನಡೆದು ಅಭ್ಯಾಸ ಇರುವವರು) ನೇತ್ರಾವತಿ ಚಾರಣಕ್ಕೆ ಹೋಗಿ ಬರಬಹುದು. ನೀವು ಚಾರಣಕ್ಕೆ ಹೋಗಿ ಬನ್ನಿ! ಆದರೆ ಅಲ್ಲಿನ ಸ್ವಚ್ಛತೆ,ಪರಿಸರವನ್ನು ಕಾಪಾಡಿ!

ಬರಹ: ಶ್ರೀಕರ ಬಿ




Comments

Post a Comment

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!