ರಾಮಕೃಷ್ಣ ಶಾಲೆ,ನನ್ನ ಶಾಲೆ...!

 ರಾಮಕೃಷ್ಣ ಶಾಲೆ,ನನ್ನ ಶಾಲೆ...!


 

ಅದು ಪುತ್ತೂರಿನ ಹೃದಯ ಭಾಗದಲ್ಲಿರುವ ಎತ್ತರದ ಸ್ಥಳ. ಸುತ್ತಲೂ ನೋಡಿದರೂ ಕಾಣಸಿಗುವ ಗುಡ್ಡಗಾಡು,ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿ. ಸದಾ ಬೀಸುತ್ತಿರುವ ತಂಗಾಳಿ. ಇಂತಹ ಸ್ಥಳ ಸಿಕ್ಕರೆ ವಿದ್ಯಾರ್ಜನೆ ಮಾಡುವುದೇ ಒಂದು ಆನಂದ ಅಲ್ಲವೇ!? ಪುತ್ತೂರಿನ ಇಂತಹ ಸ್ಥಳದಲ್ಲಿರುವುದೇ ನಮ್ಮ ಶ್ರೀ ರಾಮಕೃಷ್ಣ ಪ್ರೌಢ ಶಾಲೆ. ನನ್ನ ಸರ್ವತೋಮುಖ ಬೆಳವಣಿಗೆಗೆ,ನನ್ನ ಒಳಗೆ ಅಡಗಿದ್ದ ಪ್ರತಿಭೆಯನ್ನು ಹೊರತಂದು,ಬೆಳೆಸಿದ ಶಾಲೆ! ಶ್ರೀ ಶ್ರೀಧರ್ ರೈ ಸರ್,ಶ್ರೀ ಮನೋಹರ್ ರೈ ಸರ್,ಶ್ರೀಮತಿ ವಸಂತಿ ಮೇಡಂ,ಶ್ರೀಮತಿ ಮಾಲತಿ ಮೇಡಂ,ಶ್ರೀಮತಿ ರೂಪಕಲಾ ಮೇಡಂ,ವನಿತಾ ಕುಮಾರಿ ಮೇಡಂ ಅವರಂತಹ ಶ್ರೇಷ್ಠ ಗುರುಗಳು ಸೇವೆ ಸಲ್ಲಿಸಿದ ವಿದ್ಯಾ ದೇಗುಲವಿದು! ಅದೆಷ್ಟೋ ವಿದ್ಯಾರ್ಥಿಗಳನ್ನು ಬೇರೆ ಬೇರೆ ಸ್ಪರ್ಧೆಗಳಿಗೆ,ಬೇರೆ ಬೇರೆ ಕ್ಷೇತ್ರಗಳಲ್ಲಿ ಆಯ್ದು ರಾಜ್ಯ,ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಿದ ಹೆಮ್ಮೆಯ ಶಾಲೆ! ಶಾಲೆಯಲ್ಲಿ ಈಗ ವಾರ್ಷಿಕೋತ್ಸವ ಹಾಗು ಕನ್ನಡ ರಾಜ್ಯೋತ್ಸವದ ಸಂಭ್ರಮ! ಇದೇ ಸಂದರ್ಭದಲ್ಲಿ ನಾನು ಶಾಲೆಯಲ್ಲಿ ಕಳೆದ ಅದೆಷ್ಟೋ ಸುಂದರ ಕ್ಷಣಗಳು,ನೆನಪುಗಳನ್ನು ಮೆಲುಕು ಹಾಕಲು ಬಯಸುತ್ತೇನೆ.
ಅದು 2016ನೇ ಇಸವಿ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮುಂದಿನ ಶಿಕ್ಷಣಕ್ಕೆಂದು ನನ್ನನ್ನು ಶ್ರೀ ರಾಮಕೃಷ್ಣ ಪ್ರೌಢ ಶಾಲೆಗೆ ದಾಖಲಿಸುವ ತೀರ್ಮಾನ ನನ್ನ ಅಪ್ಪ-ಅಮ್ಮ ತೆಗದುಕೊಂಡರು. ಆದರೆ ನನಗೆ ಆಗ ಹೆದರಿಕೆ! ವಿವೇಕಾನಂದ ಶಾಲೆಯಲ್ಲಿರಬೇಕಾದರೆ ಅದೆಷ್ಟೋ ಗೆಳೆಯರ ಸ್ನೇಹವನ್ನು ಕಟ್ಟಿಕೊಂಡು ನನ್ನದೇ ಆದ ಒಂದು ಸೀಮಿತ ರೇಖೆಯಲ್ಲಿ ಇರುತ್ತಿದ್ದೆ.ಇದನ್ನು ದಾಟಿ ಇಲ್ಲಿ ಹೊಸ ಗೆಳೆಯರ ಜೊತೆ ಸ್ನೇಹವನ್ನು ಕಟ್ಟಿಕೊಳ್ಳಬೇಕಲ್ಲ! ಹೊಸ ಶಿಕ್ಷಕರು ಬೇರೆ! ಹೇಗಿರುತ್ತಾರೆ ಎಂದು ಗೊತ್ತಿಲ್ಲ! ಹೀಗೆಲ್ಲ ಗೊಂದಲಗಳು ನನ್ನ ಮನಸ್ಸಿನಲ್ಲಿ!
ಶಾಲೆಗೆ ದಾಖಲಾಗಲು ಹೋದಾಗ ಆಗ ಶಾಲೆಯ ಮುಖ್ಯ ಶಿಕ್ಷಕರು ಆಗಿದ್ದವರು ಶ್ರೀ ಮನೋಹರ್ ರೈ ಸರ್ ಅವರು. ನನಗೆ ಅವರನ್ನು ನೋಡಿದಾಗಲೆ ಹೆದರಿಕೆ ಆರಂಭವಾಯಿತು! ನನ್ನನ್ನು ಅವರ ಬಳಿ ಕರೆಸಿ ಮಾತನಾಡಿ ಹಿಂದಿನ ತರಗತಿಯಲ್ಲಿ ಪಡೆದ ಅಂಕಗಳನ್ನು ನೋಡಿ,ಬೇರೆ ಯಾವುದಾದರು ಸಾಧನೆ,ಉತ್ತಮ ಹವ್ಯಾಸಗಳ ಬಗ್ಗೆ ಕೇಳಿದರು. ಉತ್ತಮ ಅಂಕಗಳನ್ನು ನಾನು ಪಡೆದಿದ್ದುದರಿಂದ ಹಾಗು ಆಗ ಯಕ್ಷಗಾನ ತರಬೇತಿಯನ್ನು ನಾನು ಪಡೆಯುತ್ತಿದ್ದುದರಿಂದ ಅವರು ಬಹಳ ಸಂತೋಷಗೊಂಡರು. ಮನೋಹರ್ ಸರ್ ಯಕ್ಷಾಭಿಮಾನಿಯೂ ಹೌದು. ಪ್ರತಿ ವರ್ಷ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರೇ ಶಾಲಾ ಮಕ್ಕಳ ಯಕ್ಷಗಾನವನ್ನು ಆಯೋಜಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಪ್ರಸಿದ್ಧ ಯಕ್ಷಗಾನ ಕಲಾವಿದ ದಿ.ಪುತ್ತೂರು ಶ್ರೀಧರ ಭಂಡಾರಿ ಸರ್ ಅವರು ಬರುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ಅದೇ ವರ್ಷ ಶಾಲಾ ವಾರ್ಷಿಕೋತ್ಸವದಲ್ಲಿ "ಕಂಸ ವಧೆ" ಪ್ರಸಂಗದಲ್ಲಿ ಅಕ್ರೂರನ ಪಾತ್ರ ನಿರ್ವಹಿಸಿದ್ದೆ! ಅದಕ್ಕಿಂತ ಮೊದಲು ಎಲ್ಲಿ ಹೋದರೂ ದೇವೇಂದ್ರನ ಬಲ ಪಾತ್ರ ಮಾಡುತ್ತಿದ್ದ ನನ್ನನ್ನು ನಂಬಿ,ನನ್ನ ಮೇಲೆ ವಿಶ್ವಾಸವಿಟ್ಟು ಅಕ್ರೂರನ ಪಾತ್ರ ಮಾಡಿಸಿದರು!
ಶಾಲೆಯಲ್ಲಿ ನನ್ನ ದಾಖಲಾತಿ ಮಾಡಿ ಶಾಲೆಯ ನಿಯಮಗಳನ್ನು ವಿವರಿಸಿದ ಅವರು ನಂತರ ನನಗೆ ಶುಭ ಹಾರೈಸಿದರು. ಶಾಲೆಯ ಮೊದಲ ದಿನ ನಾನು ಅದೇ ಗೊಂದಲಗಳೊಂದಿಗೆ ಹೋದೆ. ಅಲ್ಲಿ ನೋಡಿದರೆ ನನ್ನ ಪ್ರಾಥಮಿಕ ಶಾಲೆಯ ಮಿತ್ರರೂ ಇದ್ದರು. ಜೊತೆಗೆ ಹೊಸ ಗೆಳೆಯರ ಜೊತೆಗೆ ಮಿತ್ರತ್ವವೂ ಆಯಿತು. ನನ್ನ ಒಳಗೆ ಅಡಗಿದ್ದ ಪ್ರತಿಭೆಯನ್ನು ಹೊರ ತಂದವರು ಪ್ರಸ್ತುತ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿರುವ ಶ್ರೀಮತಿ ಜಯಲಕ್ಷ್ಮಿ ಮೇಡಂ ಅವರು. ಎಂಟನೆಯ ತರಗತಿಯಲ್ಲಿ ಗಣಿತ ವಿಷಯಕ್ಕೆ ಪಾಠ ಮಾಡಲು ಬಂದ ಅವರು ಶಾಲೆ ಆರಂಭಗೊಂಡು ಒಂದು ವಾರ ಆಗುವ ಮೊದಲೇ ತರಗತಿಯ ಹಲವಾರು ವಿದ್ಯಾರ್ಥಿಗಳನ್ನು ಗುರುತಿಸಿ ಒಂದೊಂದು ವಿಜ್ಞಾನ ಯೋಜನೆಯ ಉಪಾಯಗಳನ್ನು ನೀಡಲು ಹೇಳಿದರು. ಇವುಗಳಲ್ಲಿ ನಾನು ಹೇಳಿದ ಉಪಾಯವು ಅವರಿಗೆ ಇಷ್ಟವಾಗಿ ನಂತರ ಮುಂಬೈನಲ್ಲಿ ಆಗಬೇಕಿದ್ದ ಒಂದು ವಿಜ್ಞಾನ ಕಾರ್ಯಾಗಾರಕ್ಕೆ ಶಾಲೆಯಿಂದ ಹೋಗಬೇಕಿದ್ದ ತಂಡದಲ್ಲಿ ನನ್ನನ್ನು ಸೇರಿಸಿದರು. ರೈಲಿನ ಟಿಕೇಟು ಬುಕ್ ಆಯಿತು,ಇನ್ನೇನೂ ಹೊರಡಬೇಕು ಎನ್ನುವಷ್ಟರಲ್ಲಿ ನಮ್ಮ ಶಾಲೆಯನ್ನು ಕಾರ್ಯಗಾರದಿಂದ ಆಯೋಜಕರು ಕೈಬಿಟ್ಟರು! ಅಲ್ಲಿಗೆ ಮುಂಬೈಗೆ ಹೋಗುವ ಭಾಗ್ಯ ಕಳೆದುಕೊಂಡೆವು. ನಂತರ ವಿಜ್ಞಾನ ಯೋಜನೆಗಳನ್ನು ರೂಪಿಸಲು ನನಗೆ ಪ್ರೋತ್ಸಾಹಿಸಿದ ಅವರು ನವೀನ ಚಿಂತನೆಗಳನ್ನು ಮಾಡಲು ಮಾರ್ಗದರ್ಶನ ಮಾಡಿದರು. ಬಹುಶಃ ಅಂದು ಅವರು ಮಾಡಿದ ಆ ಮಾರ್ಗದರ್ಶನದಿಂದಲೆ ಈಗಲೂ ಕಾಲೇಜಿನ ಕೆಲವು ವಿಷಯಗಳಲ್ಲಿ,ನೀಡುವ ಯೋಜನೆಗಳಲ್ಲಿ ನವೀನ ಚಿಂತನೆಗಳನ್ನು ಮಾಡಲು ನನಗೆ ಸಾಧ್ಯವಾಗುತ್ತಿರುವುದು. ನಾನು ಸ್ವಾವಲಂಬಿಯಾಗಲು,ಸಾಮಾಜಿಕ ಕಳಕಳಿಗೆ ಸ್ಪಂದಿಸುವ ಗುಣಗಳನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ ಮಾಡಿದವರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ,ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳ ನೆಚ್ಚಿನ "ಪಿ.ಟಿ ಮಿಸ್" ಶ್ರೀಮತಿ ಸುನೀತಾ ಮೇಡಂ ಅವರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರಲ್ಲಿ ಗೈಡ್ಸ್ ಕ್ಯಾಪ್ಟನ್ ಆಗಿಯೂ ಸೇವೆ ಸಲ್ಲಿಸುತ್ತಿರುವಾಗ ಇವರು ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರದಲ್ಲಿ ಪರಿಕ್ಷಕರಾಗಿಯೂ,ವಿವಿಧ ತರಬೇತಿ ಶಿಬಿರಗಳಲ್ಲಿ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜಪಾನ್,ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವ ಜಾಂಬೂರಿಯಲ್ಲೂ ಇವರು ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಕಿಯಾಗಿರದೆ ಅಮ್ಮನ ಹಾಗೆ ಇರುವವರು ಸುನೀತಾ ಮೇಡಂ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಲ್ಲಿ ಸ್ಕೌಟ್ಸ್ ಅಲ್ಲಿ ನಾನು ರಾಜ್ಯ ಪುರಸ್ಕಾರ ಮುಗಿಸಿ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗೆ ಅರ್ಜಿ ಹಾಕಬೇಕಾದರೆ ಅದಕ್ಕೆಲ್ಲ ಕಾರಣಕರ್ತರು ಇವರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ,ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಆಯೋಜಿಸುವ "ಕರ್ನಾಟಕ ದರ್ಶನ" ಪ್ರವಾಸಕ್ಕೆ ನಮ್ಮ ಶಾಲೆಯಿಂದ ಹೋದ ತಂಡದಲ್ಲಿ ನನ್ನನ್ನು ಆಯ್ದು ಉಡುಪಿ,ಉತ್ತರ ಕನ್ನಡ,ಧಾರವಾಡ,ವಿಜಯಪುರ,ಬಳ್ಳಾರಿ,ಚಿತ್ರದುರ್ಗ ಜಿಲ್ಲೆಗಳ ಪ್ರವಾಸಿ ಸ್ಥಳಗಳನ್ನು ಸಂದರ್ಶಿಸುವ ಸೌಭಾಗ್ಯ ನನಗೆ ಒದಗಿಸಿಕೊಟ್ಟರು. ಈ ಸ್ವಾವಲಂಬಿ ಗುಣಗಳು ನನ್ನಲ್ಲಿ ಬೆಳೆದಿದ್ದ ಕಾರಣದಿಂದ ಮುಂದೆ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ಕೌನ್ಸಿಲಿಂಗ್ ನಡೆಯುವ ಮೊದಲು ವಿವಿಧ ದಾಖಲೆಗಳನ್ನು ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸೇರಿ ವಿವಿಧ ಸರಕಾರಿ ಕಚೇರಿಗಳಿಗೆ ನಾನು ಅಪ್ಪ-ಅಮ್ಮನ ಸಹಾಯವಿಲ್ಲದೆ ಒಬ್ಬನೇ ಹೋಗಿ ದಾಖಲೆಗಳನ್ನು ಪಡೆದು ಅದಕ್ಕೆ ಸಹಿ ಪಡೆದು,ಸಿಇಟಿ ಕೌನ್ಸಿಲಿಂಗ್ ಪೂರ್ವ ದಾಖಲೆಗಳನ್ನು ಸಲ್ಲಿಸಲು ಒಬ್ಬನೆ ಹಾಜರಾಗಿದ್ದೆ. ಅದೇ ದಾಖಲೆಗಳನ್ನು ಸಲ್ಲಿಸಲು ನಾನು ಹೋದಾಗ ಅಲ್ಲಿ ಎಷ್ಟೋ ವಿದ್ಯಾರ್ಥಿಗಳು ತಮ್ಮ ಪೋಷಕರ ಸಹಾಯದಿಂದ ಸಲ್ಲಿಸುತ್ತಿರುವುದನ್ನು ನಾನು ಕಂಡಿದ್ದೆ.ಹೀಗೆ ಹಲವಾರು ಅವಕಾಶಗಳು ನನಗೆ ರಾಮಕೃಷ್ಣ ಶಾಲೆಯಲ್ಲಿ ಲಭಿಸಿತ್ತು.ಸುನೀತಾ ಮೇಡಂ ಅವರ ಜೊತೆಗೆ ನಾವು ಹತ್ತನೆಯ ತರಗತಿಯಲ್ಲಿರಬೇಕಾದರೆ ಸ್ಕೌಟ್ಸ್ ರಾಷ್ಟ್ರಪತಿ ಪುರಸ್ಕಾರ ಪೂರ್ವ ಸಿದ್ಧತಾ ಪರೀಕ್ಷೆ ಹಾಗು ತರಬೇತಿ ಶಿಬಿರಕ್ಕೆ ಉಡುಪಿಗೆ ನಮ್ಮನ್ನು ಕರೆದುಕೊಂಡು ಹೋಗಿ ಅಲ್ಲಿ ಶಿಬಿರ ಮುಗಿಸಿ ಹಿಂದಿರುಗಿ ಬರುವಾಗ ನಾವು ಒಂದು ಸಮಸ್ಯೆಗೆ ಸಿಲುಕಿ ರೊಚ್ಚಿಗೆದ್ದಾಗ ನಮ್ಮನ್ನು ಸಮಧಾನಪಡಿಸಿ ಪುತ್ತೂರು ತಲುಪುವವರೆಗೆ ಜವಾಬ್ದಾರಿಯಿಂದ ಪುತ್ತೂರಿಗೆ ಜಾಗರೂಕತೆಯಿಂದ ಕರೆದುಕೊಂಡು ಹೋಗಿ ಬಂದವರು ಶ್ರೀಮತಿ ದೀಪ್ತಿ ಮೇಡಂ ಅವರು. ಒಂಬತ್ತನೆಯ ತರಗತಿಯಲ್ಲಿ ಇಂಗ್ಲಿಷ್ ಭಾಷೆಯ ಪಾಠವನ್ನು ನಮಗೆ ಅವರು ಮಾಡುತ್ತಿದಾಗ ಇಂಗ್ಲಿಷಿನಲ್ಲಿ ಉಳಿದ ವಿಷಯಗಳಿಂದಲೂ ನಾನು ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದೆ(ಅವರು ಸುಮ್ಮನೆ ಅಂಕ ಕೊಟ್ಟು ಅಲ್ಲ)! ಶಾಲೆಯಲ್ಲಿ ಪ್ರತಿದಿನ ಬೆಳಗ್ಗೆ ಹಾಗು ದಿನಕ್ಕೆ ಎರಡರಿಂದ ಮೂರು ಬಾರಿ ಆದರೂ ಯಾವುದಾದರು ಒಂದು ತರಗತಿಯಿಂದ ಕನ್ನಡ ಪಠ್ಯ ಪುಸ್ತಕದಲ್ಲಿರುವ ಪದ್ಯಗಳನ್ನು ತರಗತಿಯ ಎಲ್ಲಾ ಮಕ್ಕಳು ಹಾಡುವುದು ಕೇಳುತ್ತಿತ್ತು. ನಮ್ಮ ರಾಮಕೃಷ್ಣ ಶಾಲೆಯೇ ಹಾಗೆ. ಮೊದಲು ಇಲ್ಲಿ ಪ್ರತಿ ತರಗತಿಗೆ ಸ್ಪೀಕರ್ ಇರಲಿಲ್ಲ. ಆಗೆಲ್ಲ ಬೆಳಗ್ಗೆ ನಾಡಗೀತಿ,ಸಂಜೆ ರಾಷ್ಟ್ರಗೀತೆಯನ್ನು ಪ್ರತಿದಿನ ಒಂದೊಂದು ತರಗತಿಯ ಎಲ್ಲಾ ವಿದ್ಯಾರ್ಥಿಗಳು ಹಾಡಬೇಕು ಎಂಬ ನಿಯಮವಿತ್ತು. ಆ ತರಗತಿಯವರು ಹಾಡಿದರೆ ಶಾಲೆಯ ಎಲ್ಲಾ ಮೂಲೆಗೂ ಕೇಳುತ್ತಿತ್ತು ಹಾಗು ಕೇಳಲೇಬೇಕು. ಅದೇ ರೀತಿ ತರಗತಿಯಲ್ಲಿ ಕನ್ನಡ ಪಠ್ಯ ಪುಸ್ತಕದ ಪದ್ಯಗಳು ಹಾಡುವುದು ಕೇಳಿದರೆ ಆ ತರಗತಿಯವರಿಗೆ ಮುಂದಿನ ತರಗತಿ ನನ್ನ ನೆಚ್ಚಿನ ಕನ್ನಡ ಶಿಕ್ಷಕಿ ಶ್ರೀಮತಿ ರೂಪಕಲಾ ಮೇಡಂ ಅವರದ್ದು ಎಂದೇ ಲೆಕ್ಕ. ಆ ತರಗತಿಯವರು ಹಾಡುವುದು ಕೇಳದಿದ್ದರೆ ತರಗತಿಗೆ ಬಂದು ಎಲ್ಲರಿಗೂ ಮಂಗಳಾರತಿ ಸಿಗುತ್ತಿತ್ತು. ಈ ರೀತಿ ಮಾಡಿಯಾದರೂ ವಿದ್ಯಾರ್ಥಿಗಳಿಗೆ ಕನ್ನಡ ಪದ್ಯಗಳು ಕಂಠಪಾಠ ಆಗುವಂತೆ ಅವರು ಮಾಡುತ್ತಿದ್ದರು. ನಾನು ಈಗ ಏನು ಇಷ್ಟೆಲ್ಲ ಕನ್ನಡದಲ್ಲಿ ಬರೆಯುತ್ತೇನೋ ಅದಕ್ಕೆಲ್ಲ ಮೂಲ ಕಾರಣ ರೂಪಕಲಾ ಮೇಡಂ. ಆಂಗ್ಲ ಮಾಧ್ಯಮದ ವಿದ್ಯಾರ್ಥಿ ನಾನಾದರೂ ಕನ್ನಡದಲ್ಲಿ ಲೇಖನ ಬರೆಯುವ ಸಾಮರ್ಥ್ಯ ನನ್ನಲ್ಲಿ ಬೆಳೆದದ್ದು ಅದೇ ಸಂದರ್ಭದಲ್ಲಿ.ತರಗತಿಯಲ್ಲಿ ಅವರು ಶುದ್ಧ ಕನ್ನಡದಲ್ಲಿ ಯಾವುದೇ ಬೇರೆ ಭಾಷೆಯ ಪದ ಬಳಸದೆ ಪಾಠದ ಅರ್ಥ ವಿವರಿಸುವಾಗ,ಮಾಡುತ್ತಿದ್ದ ಪಾಠ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಈಗಲೂ ಅವರ ಧ್ವನಿ ನನ್ನ ಕಿವಿಗಳಲ್ಲಿ ಮಾರ್ದನಿಸುತ್ತದೆ. ಅವರು ಪಾಠ ಮಾಡುತ್ತಿರುವಾಗ ಪಾಠದ ಕಥೆಯನ್ನು,ಅರ್ಥವನ್ನು ವಿವರಿಸುತ್ತಿರುವಾಗ ಅದನ್ನು ನಾನು ಅರ್ಥೈಸಿಕೊಂಡು ನನ್ನ ದೃಷ್ಟಿಯಲ್ಲಿ ಮನಸ್ಸಿನಲ್ಲಿ ಆ ಕಥೆಯ ದೃಶ್ಯವನ್ನು ಕಲ್ಪಿಸಿಕೊಳ್ಳುತ್ತಿದೆ. ಅವರು ಪಾಠ ಮಾಡುತ್ತಿರುವಾಗ ಸರಿಯಾಗಿ ಕೇಳಿಸಿಕೊಂಡು ಅದನ್ನೇ ಪರೀಕ್ಷೆಯಲ್ಲಿ ಬರೆಯುತ್ತಿದೆ. ಇದರಿಂದಾಗಿ ಕನ್ನಡದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆಯಲು ಸಹಾಯವಾಯಿತು. ಇದೆ ಮುಂದುವರಿದು ಈಗ ಯಾವುದಾದರು ಒಂದು ವಿಷಯದ ಬಗ್ಗೆ ಬರೆಯಬೇಕೆಂದು ಕಲ್ಪಿಸಿದರೆ ಕೂಡಲೇ ಮೊಬೈಲಿನ ಕೀಲಿ ಮಣೆಯಲ್ಲಿ ಒತ್ತಲು ಆರಂಭಿಸುತ್ತೇನೆ. ಈ ಗುಣ ನನ್ನಲ್ಲಿ ಬೆಳೆಯಲು ಅವರು ಸಹಾಯ ಮಾಡಿದರು. ರಾಮಕೃಷ್ಣ ಶಾಲೆಯಲ್ಲಿ ಸೇವೆ ಸಲ್ಲಿಸಿದ ಇನ್ನೊಬ್ಬ ಶ್ರೇಷ್ಠ ಗುರುಗಳಲ್ಲಿ ಶ್ರೀಮತಿ ಮಾಲತಿ ಮೇಡಂ ಕೂಡ ಒಬ್ಬರು. ಅಲ್ಪಾವಧಿಗೆ ಮುಖ್ಯ ಗುರುಗಳಾಗಿಯೂ ಸೇವೆ ಸಲ್ಲಿಸಿರುವ ಇವರು ಹಿಂದಿ ಶಿಕ್ಷಕಿಯಾಗಿ ಮಕ್ಕಳಿಗೆ ಹಿಂದಿಯ ಭಾಷೆಯ ಪಾಠ ಮಾಡುತ್ತಿದ್ದರು. ಶುದ್ಧ ಹಿಂದಿಯಲ್ಲಿ ಇವರು ಮಾಡುವ ಪಾಠ ಕೇಳುವುದೇ ಒಂದು ಸಂಭ್ರಮವಾಗಿತ್ತು! ನನ್ನ ದುರ್ಭಾಗ್ಯವೋ ಏನೋ ನಾನು ಹತ್ತನೆ ತರಗತಿಗೆ ಬರುವ ಮೊದಲೇ ಅವರು ಸೇವಾ ನಿವೃತ್ತಿ ಹೊಂದಿದರಿಂದ ನನಗೆ ಅವರ ಪಾಠ ಕೇಳುವ ಸೌಭಾಗ್ಯ ಸಿಗಲಿಲ್ಲ. ಆದರೆ ತರಗತಿಯಲ್ಲಿ ಶಿಕ್ಷಕರು ಇರದಿದ್ದಾಗ ಇವರು ಬಂದು ಪಾಠ ಮಾಡುತ್ತಿದ್ದರು. ಇವರ ಹಾದಿಯನ್ನು ಪ್ರಸ್ತುತ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿರುವ ಶ್ರೀಮತಿ ಗೀತಾ ಮೇಡಂ ಪಾಲಿಸುತ್ತಿದ್ದಾರೆ. ಅವರು ಶ್ರೀ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿದವರಲ್ಲಿ ನಾನು ಮೊದಲು ಹೇಳಿದ ಹಾಗೆ ಶ್ರೀ ಮನೋಹರ್ ರೈ ಸರ್ ಕೂಡ ಒಬ್ಬರು. ಅವರು ಒಂದು ತರಗತಿಯ ಬಳಿ ಹಾದುಹೋಗುತ್ತಿದ್ದರೆ ಆ ತರಗತಿಯಲ್ಲಿ ನೀರವ ಮೌನ! ಅವರನ್ನು ಕಂಡರೆ ವಿದ್ಯಾರ್ಥಿಗಳು ಎಷ್ಟು ಹೆದರುತ್ತಿದ್ದರೂ,ಅವರ ಮೇಲೆ ಅಷ್ಟೇ ಗೌರವವು ಇತ್ತು. ವಿದ್ಯಾರ್ಥಿಗಳು ಅವರ ತರಗತಿಗೆ ಕಾತರದಿಂದ ಕಾಯುತ್ತಿದ್ದರು ಕೂಡ! ಸಮಾಜ ವಿಜ್ಞಾನದ ಪಾಠ ಮಾಡುತ್ತಿದ್ದ ಅವರ ಪಾಠ ಎಂದರೆ ಎಲ್ಲರಿಗೂ ಬಲುಪ್ರೀತಿ! ಆ ಮೂಕ್ಕಾಲು ಗಂಟೆಯಲ್ಲಿ ಪಾಠ ನಡೆಯುತ್ತಿತ್ತು,ಪದ್ಯಗಳನ್ನು ಹಾಡುತ್ತಿದ್ದರು,ತಮಾಷೆಯನ್ನು ಮಾಡುತ್ತಾ ವಿದ್ಯಾರ್ಥಿಗಳಿಗೆ ಆ ತರಗತಿ ಸ್ವಲ್ಪವೂ ಉದಾಸೀನ ಆಗದಂತೆ ನೋಡಿಕೊಳ್ಳುತ್ತಿದ್ದರು. ಹತ್ತನೆಯ ತರಗತಿಗೆ ಪಾಠ ಮಾಡುತ್ತಿದ್ದ ಇವರು ನಾನು ಎಂಟನೆಯ ತರಗತಿ,ಒಂಬತ್ತನೆಯ ತರಗತಿಯಲ್ಲಿರುವಾಗ(ಕೆಲವು ತಿಂಗಳು) ಆ ಸಮಯದ ತರಗತಿಗೆ ಶಿಕ್ಷಕರು ಬಾರದಿದ್ದಾಗ,ರಜೆ ಹಾಕಿದಾಗ ಬಂದು ನಮಗೆ ಪಾಠ ಮಾಡುತ್ತಿದ್ದರು. ನಾನು ಒಂಬತ್ತನೆಯ ತರಗತಿಯಲ್ಲಿರಬೇಕಾದರೆ ಇವರು ಕೂಡ ಸೇವಾ ನಿವೃತ್ತಿ ಹೊಂದಿದರು. ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಎಷ್ಟೊ ಹಿರಿಯ ವಿದ್ಯಾರ್ಥಿಗಳು,ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಭಾವುಕರಾದದ್ದನ್ನು ನಾನು ನೋಡಿದ್ದೆ. ಅವರು ತರಗತಿಯಲ್ಲಿ ಹಾಡುತ್ತಿದ್ದ ಪದ್ಯಗಳನ್ನು ಹಿರಿಯ ವಿದ್ಯಾರ್ಥಿಗಳು ಹಾಡಿ ಅವರಿಗೆ ಗೌರವವನ್ನು ನೀಡಿದ್ದರು.ನಮಗೆ ಒಂಬತ್ತನೆಯ ತರಗತಿಯಲ್ಲಿ ಪೂರ್ವ ರಾಷ್ಟ್ರಪತಿ ಡಾ. ಎಸ್ ರಾಧಾಕೃಷ್ಣನ್ ಅವರ ಪಾಠವಿತ್ತು. ಆ ಪಾಠದಲ್ಲಿ ರಾಧಾಕೃಷ್ಣನ್ ಅವರು ತರಗತಿಯಲ್ಲಿ ಹೇಗೆ ಪಾಠ ಮಾಡುತ್ತಿದ್ದರು ಎಂದು ವಿವರಣೆ ನೀಡಲಾಗಿತ್ತು. ಅವರು ಕೂಡ ತರಗತಿಯಲ್ಲಿ ತಮಾಷೆಗಳನ್ನು ಮಾಡಿ,ಹಾಸ್ಯ ಚಟಾಕಿಯನ್ನು ಹಾರಿಸಿ ಮಕ್ಕಳಿಗೆ ಉದಾಸೀನ ಆಗದಂತೆ ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿತ್ತು. ಬಹುಶ ಮನೋಹರ್ ಸರ್ ಅವರನ್ನು ನಾನು ರಾಮಕೃಷ್ಣ ಶಾಲೆಯ ರಾಧಾಕೃಷ್ಣನ್ ಎಂದರೂ ತಪ್ಪಾಗಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ನನಗೆ ಇಂಗ್ಲಿಷ್ ಹಾಗು ಸಮಾಜ ವಿಜ್ಞಾನ ವಿಷಯಗಳಿಗೆ ಎಂಟನೆಯ ತರಗತಿ ಮತ್ತು ಹತ್ತನೆಯ ತರಗತಿಯಲ್ಲಿ ಪಾಠ ಮಾಡಿದ್ದು ಶ್ರೀಮತಿ ಸಂಧ್ಯಾ ಮೇಡಂ ಹಾಗು ಶ್ರೀಮತಿ ಗಾಯತ್ರಿ ಮೇಡಂ ಅವರು. ವಿಲಿಯಂ ಷೇಕ್ಸ್‌ಪಿಯರನ ನಾಟಕ,ಪದ್ಯಗಳು ನನಗಂತೂ ಸ್ವಲ್ಪವವೂ ಅರ್ಥ ಆಗುತ್ತಿರಲಿಲ್ಲ. ಕೆಲವು ಹಳೆ ಇಂಗ್ಲಿಷಿನ ಪದ್ಯಗಳು ಪಾಠದಲ್ಲಿ ಇದ್ದವು. ಇದನ್ನು ಸುಲಭವಾಗಿ ವಿವರಿಸಿ ಅರ್ಥ ಆಗುವಂತೆ ಮಾಡಿದವರು ಸಂಧ್ಯಾ ಮೇಡಂ ಅವರು. ಸಮಾಜ ವಿಜ್ಞಾನದಲ್ಲಿ ಗಾಯತ್ರಿ ಮೇಡಂ ಅವರು ಮಾಡುತ್ತಿದ್ದ ಪಾಠ ನನಗೆ ಬಲುಪ್ರೀತಿ! ಇತಿಹಾಸ,ರಾಜ್ಯಶಾಸ್ತ್ರ,ವಾಣಿಜ್ಯ,ಭೂಗೋಳಶಾಸ್ತ್ರ ವಿಷಯಗಳ ಪಾಠವನ್ನು ಅವರು ಒಬ್ಬರೇ ಮಾಡುತ್ತಿದ್ದರು. ಒಂದು-ಒಂದುವರೆ ಪುಟದ ಉತ್ತರಗಳನ್ನು ವಿವರಿಸಿ,ಅರ್ಥ ಮಾಡಿಸಿ ಸುಲಭವಾಗಿ ಪರೀಕ್ಷೆಯಲ್ಲಿ ಬರೆಯುವಂತೆ ಮಾಡುತ್ತಿದ್ದರು. ಸಂಧ್ಯಾ ಮೇಡಂ ಆಗಲಿ,ಗಾಯತ್ರಿ ಮೇಡಂ ಆಗಲಿ ಓದಲು ಎಂದು ನಮಗೆ ಶಾಲೆಯಲ್ಲಿ ಸಮಯ ಕೊಟ್ಟಾಗ ಗೆಳೆಯರೊಂದಿಗೆ ನಾನು ಓದುತ್ತಿರುವಾಗ ಇಂತಹ ವಿಷಯ ಹೆಚ್ಚು ಓದಿ,ಇದು ಬಹಳ ಮುಖ್ಯವಾದದ್ದು, ಇದು ಪರೀಕ್ಷೆಗೆ ಬರಬಹುದು,ಪರೀಕ್ಷೆಗೆ ಹೀಗೆ ಬರೆಯಿರಿ ಎಂದೆಲ್ಲ ಸೂಕ್ತ ಸಲಹೆಗಳನ್ನು ನೀಡುತ್ತಿದ್ದರು.ನಾನು ಎಂಟು ಮತ್ತು ಹತ್ತನೆಯ ತರಗತಿಯಲ್ಲಿರಬೇಕಾದರೆ ಹಿಂದಿ ಭಾಷೆಯ ಪಾಠ ಮಾಡಲು ಬರುತ್ತಿದ್ದದ್ದು ನಾನು ಆಗ ಹೇಳಿದ ಹಾಗೆ ಶ್ರೀಮತಿ ಗೀತಾ ಮೇಡಂ ಅವರು. ಹಿಂದಿಯಲ್ಲೇ ಪಾಠ ಮಾಡುತ್ತಾ ಪದ್ಯಗಳನ್ನು ರಾಗದಲ್ಲಿ ಹಾಡಿ,ಅದನ್ನು ವಿವರಿಸುತ್ತಿದ್ದರು. ಕಬೀರ್ ದಾಸರ ಕೆಲವು ದೋಹೆಗಳು ಈಗಲೂ ನನಗೆ ನೆನಪಿದೆ. ಒಂಬತ್ತನೆಯ ತರಗತಿಯಲ್ಲಿ ಹಿಂದಿ ಪಾಠದ ಜೊತೆಗೆ ತರಗತಿ ಶಿಕ್ಷಕಿಯಾಗಿದ್ದವರು ಶ್ರೀಮತಿ ಶ್ರೀವಿದ್ಯಾ ಮೇಡಂ ಅವರು. ತರಗತಿಯಲ್ಲಿ ಅವರೆಷ್ಟು ಜೋರಿದ್ದರು,ಅಷ್ಟೇ ಪ್ರೀತಿಯಿಂದ ಮಕ್ಕಳನ್ನು ಮಾತನಾಡಿಸುತ್ತಿದ್ದರು. ಅಂದು ಮೂರು ವರ್ಷಗಳ ಕಾಲ ಇವರ ಪಾಠ ನೋಡಿ,ಕೇಳಿದ ಫಲವನ್ನು ಈಗಲೂ ನಾನು ಪಡೆಯುತ್ತಲೆ ಇದ್ದೇನೆ. ಹಾಗಾಗಿಯೇ ಈಗ ಎಲ್ಲಿ ಹೋದರೂ ಹಿಂದಿಯಲ್ಲಿ ಮಾತನಾಡಬೇಕೆಂದರೆ ಭಯ ಆಗುವುದೇ ಇಲ್ಲ. ಗಣಿತ ಹಾಗು ಭೌತಶಾಸ್ತ್ರ ವಿಷಯಗಳಿಗೆ ಪಾಠ ಮಾಡುತ್ತಿದ್ದದ್ದು ಪ್ರಸ್ತುತ ಶಾಲೆಯ ಮುಖ್ಯೋಪಾಧ್ಯಾಯಿನಿ, ವಿಜ್ಞಾನ ಯೋಜನೆಗಳಿಗೆ ನನ್ನ ಗುರುಗಳಾಗಿರುವ ಶ್ರೀಮತಿ ಜಯಲಕ್ಷ್ಮಿ ಮೇಡಂ. ಮುಂದಿನ ತರಗತಿ ಆವರದ್ದು ಎಂದಾದರೆ ಅವರು ಬರುವ ಮೊದಲೇ ತರಗತಿಯಲ್ಲಿ ನೀರವ ಮೌನ! ಮೌನವಾಗಿ ಕುಳಿತುಕೊಂಡು ಓದದಿದ್ದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ! ಅವರು ಪಾಠ ಮಾಡಿದರಾಗ ಸರಿಯಾಗಿ ಕೇಳಿ ಅರ್ಥ ಮಾಡಿಕೊಂಡರೆ ಮತ್ತೆ ಪರೀಕ್ಷೆಯಲ್ಲಿ ಬರೆಯಲು ಹೆದರಬೇಕೆಂದೇ ಇಲ್ಲ! ಪಾಠ ಪುಸ್ತಕದ ಉದಾಹರಣೆಗಳು ಸೇರಿಸಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಲು ನಮಗೆ ಮಾರ್ಗದರ್ಶನ ನೀಡುತ್ತಿದ್ದರು. ಸಂದೇಹಗಳಿದ್ದರೆ ಅದನ್ನು ಅವರು ಬಹಳ ಸಂತೋಷದಿಂದ ನಿವಾರಿಸುತ್ತಿದ್ದರು. ನಾನು ಎಂಟನೆಯ ತರಗತಿ ಮತ್ತು ಒಂಬತ್ತನೆಯ ತರಗತಿಯಲ್ಲಿರುವಾಗ ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ಪಾಠವನ್ನು ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶ್ರೀಮತಿ ವಸಂತಿ ಮೇಡಂ ಅವರು ಮಾಡುತ್ತಿದ್ದರು. ವಸಂತಿ ಮೇಡಂ ಅವರ ಮಾರ್ಗದರ್ಶನದಲ್ಲಿ ಶಾಲೆಯಿಂದ 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಅವರ ಜೀವಶಾಸ್ತ್ರದ ಪಾಠ ನನಗೆ ಬಲುಪ್ರೀತಿ. ಸಸ್ಯ ಕೋಶ,ಪ್ರಾಣಿ ಕೋಶಗಳ ಬಗ್ಗೆ ಅವರು ಮಾಡುತ್ತಿದ್ದ ಪಾಠ ಕೇಳಲು ನನಗೆ ಬಹಳ ಸಂತೋಷ. ಮುಂದೆ ಶ್ರೀಮತಿ ಸಂಗೀತ ಮೇಡಂ ಅವರು ವಸಂತಿ ಮೇಡಂ ಸೇವಾ ನಿವೃತ್ತಿಯನ್ನು ಹೊಂದಿದಾಗ ನಮಗೆ ಪಾಠ ಮಾಡುತ್ತಿದ್ದರು. ಸಂಗೀತ ಮೇಡಂ ಅವರ ರಸಾಯನಶಾಸ್ತ್ರ ಪಾಠ ನನಗೆ ಹೆಚ್ಚು ಇಷ್ಟವಾಗುತ್ತಿತ್ತು. ನಾನು ಆಗ ಆಸಕ್ತಿಯಿಂದ ಅವರ ಪಾಠ ಕೇಳುತ್ತಿದ್ದೆ. ರಾಮಕೃಷ್ಣ ಶಾಲೆಯ ಸುಂದರ ಉದ್ಯಾನವನ ಶಾಲೆಗೆ ಬರುವಾಗ ನಿಮ್ಮನ್ನು ಸ್ವಾಗತಿಸುತ್ತದೆ. ಈ ಸುಂದರ ಉದ್ಯಾನವನದ ನಿರ್ವಹಣೆಯನ್ನು ಆಗ ಮಾಡುತ್ತಿದ್ದದ್ದು ವೃತ್ತಿ ಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತ ಜೀವನವನ್ನು ನಡೆಸುತ್ತಿರುವ ಶ್ರೀಮತಿ ವನಿತಾ ಕುಮಾರಿ ಮೇಡಂ ಹಾಗು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮೆಲ್ಲರ ಪ್ರೀತಿಯ ಶ್ರೀ ಐತಪ್ಪ ಅಣ್ಣ ಅವರು. ಐತಪ್ಪಣ್ಣನವರು ಇನ್ನು ಕೆಲವು ವರ್ಷಗಳಲ್ಲಿ ಸೇವಾ ನಿವೃತ್ತಿ ಹೊಂದುವವರು ಆಗಿದ್ದರೂ ನಮಗೆಲ್ಲ ಅವರು ಪ್ರೀತಿಯ ಐತಪ್ಪಣ್ಣ ಆಗಿಯೇ ಇದ್ದಾರೆ.ಶಾಲೆಯಲ್ಲಿ ಗಣಕಯಂತ್ರದ ತರಗತಿಗಳು ಎಂಟನೆ ಮತ್ತು ಒಂಬತ್ತನೆಯ ತರಗತಿಯಲ್ಲಿರುವಾಗ ನಡೆಯುತ್ತಿತ್ತು.ಇದರ ಜೊತೆಗೆ ತುಳು ಭಾಷೆಯ ಪಾಠವನ್ನು ಮಾಡುತ್ತಿರುವುದು ನೆಚ್ಚಿನ ಶಿಕ್ಷಕಿಯಾಗಿರುವ ಶ್ರೀಮತಿ ಚಿತ್ರಕಲಾ ಮೇಡಂ.ಶಾಲೆಗೆ ಬಂದರೆ ಕಚೇರಿಗೆ ಒಳ ಹೋಗುವ ಮೊದಲು ಒಂದು ಕಿಟಕಿ ಸಿಗುತ್ತದೆ. ಈ ಕಿಟಕಿಯ ಬಳಿ ನೋಡಿದರೆ ನಿಮಗೆ ಒಂದು ಗಣಕಯಂತ್ರದ ಬಳಿ ಚಿತ್ರ ಮೇಡಂ ಕುಳಿತು ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಈಗಲೂ ನಾನು ಶಾಲೆಗೆ ಹೋದರೆ ಮೊದಲು ಮಾತನಾಡುವುದೇ ಚಿತ್ರ ಮೇಡಂ ಬಳಿ! ಶಾಲೆಯ ಕಚೇರಿ ಗುಮಾಸ್ತರಾಗಿದ್ದುಕೊಂಡು ಶಾಲೆಯ ಆಗುಹೋಗುಗಳನ್ನು ನಿರ್ವಹಿಸುವವರು ಶ್ರೀ ಗುಣಧರ ಸರ್ ಹಾಗು ಈಗ ಸೇವಾ ನಿವೃತ್ತಿಯನ್ನು ಹೊಂದಿರುವ ಶ್ರೀಮತಿ ಸುವಮ್ಮ ಮೇಡಂ. ಮಕ್ಕಳ ಬಳಿ ದಾಖಲೆಗಳ ಸಲ್ಲಿಕೆ,ಇಲಾಖೆಯಿಂದ ಮಕ್ಕಳಿಗೆ ನೀಡಬೇಕಾದ ಸೂಚನೆಗಳನ್ನು ಇವರು ನೀಡಿ ಮಕ್ಕಳ ಕಾರ್ಯವನ್ನು ಸುಲಭ ಮಾಡುತ್ತಿದ್ದರು.ಶಾಲೆಯಲ್ಲಿ ವಿದ್ಯಾರ್ಥಿಯ ಹುಟ್ಟುಹಬ್ಬವಿದ್ದು ಆ ವಿದ್ಯಾರ್ಥಿ ಪಾಯಸ ನೀಡಲು ಬಯಸಿದರೆ ಗುಣಧರ ಸರ್ ಅವರ ಬಳಿ ಹೇಳಿದರೆ ಆಯಿತು! ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಅವರು ಮಾಡಿ ಮಕ್ಕಳಿಗೆ ಸಿಹಿಸಿಹಿ,ರುಚಿರುಚಿಯಾದ ಪಾಯಸ ಸಿಗುತ್ತಿತ್ತು. ರಾಮಕೃಷ್ಣ ಶಾಲೆಯು ಇಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ಅದಕ್ಕೆ ಕಾರಣಕರ್ತರು ಶಾಲೆಯ ಸಂಚಾಲಕರಾಗಿ ಶಾಲೆಯನ್ನು ಮುನ್ನಡೆಸುತ್ತಿರುವ ಶ್ರೀ ಕಾವು ಹೇಮನಾಥ ಶೆಟ್ಟಿ ಸರ್.ಶಾಲೆಯ ವಿದ್ಯಾರ್ಥಿಗಳು ಯಾವುದಾದರು ಕ್ಷೇತ್ರದಲ್ಲಿ ಸಾಧನೆ ಮಾಡಲಿದ್ದಾರೆ ಎಂದಾದರೆ ಎಲ್ಲರಿಗಿಂತ ಮೊದಲು ಇವರು ವಿದ್ಯಾರ್ಥಿಗಳನ್ನು ಬೆಂಬಲಿಸುತ್ತಾರೆ! ವಿವಿಧ ಸ್ಪರ್ಧೆಗಳಿಗೆ ಇರಲಿ,ಕಾರ್ಯಗಾರಗಳಿಗೆ ಇರಲಿ ಅದು ಯಾವುದೇ ಸ್ಥಳದಲ್ಲಿ ಆಗುವುದಿದ್ದರೂ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಅವಕಾಶ ತಪ್ಪಬಾರದು ಎಂದು ಬಹಳ ಕಾಳಜಿಯನ್ನು ವಹಿಸಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಅವರು ಮಾಡಿಕೊಡುತ್ತಾರೆ. ನಾನು ಎಂಟನೆಯ ತರಗತಿಯಲ್ಲಿರಬೇಕಾದರೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಮ್ಮ ವಿಜ್ಞಾನ ಯೋಜನೆಯ ಕೆಲವು ಸಾಮಾಗ್ರಿಗಳ ಪರೀಕ್ಷೆಗಳನ್ನು ಅಲ್ಲಿನ ವಿಜ್ಞಾನ ಲ್ಯಾಬಿನಲ್ಲಿ ಮಾಡಲು ಎಂದು ಸ್ವತಃ ಅವರೇ ತಮ್ಮ ಕಾರಿನಲ್ಲಿ ನಮ್ಮನ್ನೆಲ್ಲ ಕಳುಹಿಸಿಕೊಟ್ಟು ಪ್ರೋತ್ಸಾಹಿಸಿದ್ದರು. ಇತ್ತೀಚೆಗೆ ಶಾಲೆಯಲ್ಲಿ ಜಾಗತಿಕ ಹವಾಮಾನ ಗಡಿಯಾರ ಅಳವಡಿಸಲಾಗಿದೆ. ಅದರ ಕಾರ್ಯಗಾರ ವಿದ್ಯಾರ್ಥಿಗಳು ಹಾಗು ಇತರರಿಗೆ ಈ ವರ್ಷ ಎಪ್ರಿಲ್ ತಿಂಗಳಲ್ಲಿ ಭಾರತ ಸರ್ಕಾರದ ನೀತಿ ಆಯೋಗದ ವತಿಯಿಂದ ನವದೆಹಲಿಯಲ್ಲಿ ನಡೆದಿತ್ತು. ಈ ಕಾರ್ಯಾಗಾರದಲ್ಲಿ ಹೇಗಾದರು ಸರಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಲೇ ಬೇಕು ಎಂದು ಅವರು ದೆಹಲಿಯಲ್ಲಿ ಉಳಿದುಕೊಳ್ಳಲು,ಹೋಗಿ ಬರುವ ಎಲ್ಲಾ ವ್ಯವಸ್ಥೆ,ಹಿಂದಿರುಗಿ ಬರುವಾಗ ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ಅವರು ಪ್ರತಿ ಬಾರಿಯು ಶಾಲೆಯಲ್ಲಿ ನಮಗೆಲ್ಲಾ ಹೇಳುವುದಿತ್ತು, ಈಗಲೂ ಹೇಳುತ್ತಾರೆ "ನೀವು ಯಾವಾಗಲೂ ರಾಮಕೃಷ್ಣ ಶಾಲೆ,ನಮ್ಮ ಶಾಲೆ ಎಂದು ಭಾವಿಸಿ ಶಾಲೆಯಲ್ಲಿರುವಾಗ,ಶಾಲೆ ಬಿಟ್ಟಾಗ ಪ್ರೀತಿಸಿ,ಶಾಲೆಯನ್ನು ಎಂದಿಗೂ ಮರೆಯಬೇಡಿ" ಎಂದು. ಅದೇ ವಾಕ್ಯವನ್ನು ಈ ಲೇಖನಕ್ಕೆ ಶೀರ್ಷಿಕೆಯಾಗಿಟ್ಟೆ. ಈಗಲೂ ಅವರು ಎಲ್ಲಿ ಸಿಕ್ಕರು ನಮ್ಮನ್ನು ಮಾತನಾಡಿಸಿ ರಾಮಕೃಷ್ಣ ಶಾಲೆಯ ಹಳೆ ವಿದ್ಯಾರ್ಥಿ ಎಂದು ಅಭಿಮಾನದಿಂದ ಹೇಳಿ ಪ್ರೀತಿಯಿಂದ ಮಾತನಾಡುತ್ತಾರೆ. ಶಾಲೆಯ ಬಗ್ಗೆ ಹೇಳುತ್ತಾ ಹೋದರೆ ಒಂದು ಕಾದಂಬರಿ ಪುಸ್ತಕ ಬರೆದರೂ ಸಾಲದು! ಹೆಮ್ಮರದಂತೆ ಬೆಳೆದು ನಿಂತಿರುವ ಶಾಲೆಯ ಬಗ್ಗೆ ನಾನು ಹೇಳಿದ್ದು ಆ ಮರದ ಗೆಲ್ಲಿನ ಒಂದು ಎಲೆಯ ಹಾಗೆ!ಬರೆಯಬೇಕೆಂದು ಯೋಚಿಸಿದ್ದ ಎಷ್ಟೋ ವಿಷಯಗಳು ಮರೆತು ಹೋಗಿ ಬರೆಯಲು ಬಿಟ್ಟು ಹೋಗಿದೆ.ಶಾಲೆಯ ಜಗುಲಿಯಲ್ಲಿ ಓಡುತ್ತಾ,ನಲಿಯುತ್ತಾ,ಆಟವಾಡುತ್ತಾ,ಆ ಬೆಂಚುಗಳಲ್ಲಿ ಕೂತು ಪಾಠ ಕೇಳುತ್ತಾ ಕಳೆದು ಆ ಸುವರ್ಣ ದಿನಗಳು ಬದುಕಿನಲ್ಲಿ ಮತ್ತೆ ಎಂದೂ ಸಿಗದು! ಶಾಲೆಯಲ್ಲಿರುವಾಗ ಶಿಕ್ಷಕರು ಒಂದು ಮಾತು ಹೇಳುತ್ತಿದ್ದರು "ಪ್ರೌಢ ಶಾಲೆಯಲ್ಲಿ ನೀವು ಕಳೆಯುವ ಆ ಮೂರು ವರ್ಷಗಳ ಸಮಯ ಜೀವನದುದ್ದಕ್ಕೂ ನೀವು ಎಂದಿಗೂ ಮರೆಯುವುದಿಲ್ಲ!" ಎಂದು. ಇದು ನೂರಕ್ಕೂ ನೂರರಷ್ಟು ಸತ್ಯವಾದ ಮಾತು! ಪ್ರೌಢ ಶಾಲೆಯಲ್ಲಿ ಕಲಿತ ಮೌಲ್ಯ ಶಿಕ್ಷಣ,ಸ್ವಾವಲಂಬಿ ಜೀವನದ ಮೌಲ್ಯ,ನವೀನ ಚಿಂತನೆಗಳ ಶಿಕ್ಷಣದಿಂದಾಗಿ ಇಂದು ಈ ಮಟ್ಟಕ್ಕೆ ಏರುವಂತೆ ಮಾಡಿದೆ.
ಕಳೆದ ಬಾರಿ ರೂಪಕಲಾ ಮೇಡಂ ಬಗ್ಗೆ ಬರೆದಾಗ ಶಾಲೆಯ ಬಗ್ಗೆ ಬರೆಯಲೇ ಬೇಕು ಎಂದು ಇದ್ದೆ.ಆದರೆ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಇಂದು ಈ ಲೇಖನ ಬರೆಯಲು ಸರಿಯಾದ ಸಮಯ. ಈ ಲೇಖನವನ್ನು ಶಾಲೆಗೆ,ನನ್ನ ಎಲ್ಲಾ ಗುರುಗಳಿಗೆ,ತಾಯಿ ಸರಸ್ವತಿಯ ಚರಣಕ್ಕೆ ಅರ್ಪಿಸುತ್ತಾ,ನನ್ನ ಎಲ್ಲಾ ಗುರುಗಳಿಗೆ ನಮಿಸಿ ಈ ಲೇಖನಕ್ಕೆ ಮಂಗಳ ಹಾಡುತ್ತೇನೆ.
ಶ್ರೀ ಗುರುಭ್ಯೋ ನಮಃ
ಬರಹ:
ಶ್ರೀಕರ ಬಿ
ಹಳೆಯ ವಿದ್ಯಾರ್ಥಿ,
ಶ್ರೀ ರಾಮಕೃಷ್ಣ ಪ್ರೌಢ ಶಾಲೆ,ಪುತ್ತೂರು

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!