ಬಾಲ್ಯದಿಂದ ಕಂಡ ಕನಸು ಪೂರ್ಣಗೊಂಡಾಗ! | ಕುಮಾರ ಪರ್ವತ ಚಾರಣದ ಸಂಪೂರ್ಣ ಮಾಹಿತಿ!

ಬಾಲ್ಯದಿಂದ ಕಂಡ ಕನಸು ಪೂರ್ಣಗೊಂಡಾಗ!

ಕುಮಾರ ಪರ್ವತ ಚಾರಣದ ಸಂಪೂರ್ಣ ಮಾಹಿತಿ!


ಶೇಷ ಪರ್ವತದ ಒಂದು ಶಿಖರ!
Pc: Sudheesh Patwardhan
 

ಕುಮಾರ ಪರ್ವತ! ಇದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಚಿರಪರಿಚಿತ ಹೆಸರು! ಅಷ್ಟೇ ಅಲ್ಲ! ಸುಬ್ರಹ್ಮಣ್ಯಕ್ಕೆ ಬರುವವರಿಗೆ ದೇವಸ್ಥಾನದ ಜೊತೆಗೆ ಹಿಂಬದಿಯಲ್ಲಿ ಕಾಣಸಿಗುವ ಬೆಟ್ಟ ಯಾವುದು ಎಂದು ಕೇಳಿದ ತಕ್ಷಣ ಹೇಳುವುದು ಕುಮಾರ ಪರ್ವತ(ಆದರೆ ನಿಜವಾಗಿ ಅದು ಶೇಷ ಪರ್ವತ) ಎಂದು! ಹಾಗಾಗಿ ಸುಬ್ರಹ್ಮಣ್ಯಕ್ಕೆ ಬಂದು ಹೋದವರಿಗೆ ಕುಮಾರ ಪರ್ವತ ಚಿರಪರಿಚಿತ ಹೆಸರು. ಜೊತೆಗೆ ಚಾರಣಪ್ರಿಯರಿಗೆ ಅಂತು ಇದು ಸ್ವರ್ಗ! 
ಕುಮಾರಧಾರದ ಕುಮಾರಧಾರ ನದಿಯ ಸೇತುವೆಯಿಂದ ಕಾಣುವ ಶೇಷ ಪರ್ವತದ ಒಂದು ಸುಂದರ ನೋಟ!
Pc:Shreekara B


ನಾನು ಮೊದಲೇ ಹೇಳಿದ ಹಾಗೆ ನನ್ನ ಊರು ಸುಳ್ಯ ತಾಲೂಕಿನ ಪಶ್ಚಿಮ ಘಟ್ಟದ ತಪ್ಪನಲ್ಲಿರುವ ಹರಿಹರಪಲ್ಲತ್ತಡ್ಕ ಗ್ರಾಮ! ಈ ಗ್ರಾಮದ ಎದುರೇ ಕಾಣುವುದು ಕುಮಾರ ಪರ್ವತದ ಒಂದು ಬದಿಯಲ್ಲಿರುವ ಶೇಷ ಪರ್ವತ! ಬಾಲ್ಯದಿಂದ ಈ ಪರ್ವತ ಸಾಲನ್ನು ನೋಡುತ್ತಾ ಬೆಳೆದ ನನಗೆ ಒಂದು ದಿನ ಕುತೂಹಲದಿಂದ ಅಪ್ಪನ ಬಳಿ ಆ ಪರ್ವತವನ್ನು ಹತ್ತಲು ಆಗುತ್ತದೆಯೇ ಎಂದು ಕೇಳಿದ್ದೆ. ಆಗ ಅಪ್ಪ "ನೀನು ದೊಡ್ಡವನಾದ ಮೇಲೆ ಕುಮಾರ ಪರ್ವತ ಹತ್ತು" ಎಂದು ಹೇಳಿದ್ದರು. ಪ್ರತಿ ಬಾರಿಯೂ ಸುಬ್ರಹ್ಮಣ್ಯಕ್ಕೆ ಅಥವ ಹರಿಹರಪಲ್ಲತ್ತಡ್ಕಕ್ಕೆ ಹೋದಾಗಲೆಲ್ಲ ಈ ಪರ್ವತ ಶ್ರೇಣಿಯನ್ನು ಕನಿಷ್ಠಪಕ್ಷ ಒಂದು ಬಾರಿಯಾದರೂ ಸರಿಯಾಗಿ ನೋಡದೆ ನನಗೆ ಸಮಾಧಾನ ಆಗುತ್ತಿರಲಿಲ್ಲ. ಇತ್ತೀಚೆಗೆ ಗೆಳೆಯರೊಂದಿಗೆ ಚರ್ಚಿಸಿ ಕುಮಾರ ಪರ್ವತ ಚಾರಣಕ್ಕೆ ಹೋಗುವ ಯೋಜನೆ ರೂಪಿಸಿ ಹೋಗಿಯೇ ಬಿಟ್ಟೆವು!
 
ಶೇಷ ಪರ್ವತ
Pc: Shreekara B

ಕುಮಾರ ಪರ್ವತ ಚಾರಣವು ದಕ್ಷಿಣ ಭಾರತದ ಅತ್ಯಂತ ಕಠಿಣ ಚಾರಣ ಎಂದು ಹಲವಾರು ಜನರು ಅದರಲ್ಲಿಯೂ ಅನುಭವಸ್ಥ ಚಾರಣಿಗರು,ಸ್ಥಳೀಯರು ಹೇಳುವುದನ್ನು ನಾನು ಕೇಳಿದ್ದೆ. ಜೊತೆಗೆ ಗೂಗಲಿನಲ್ಲಿ ಹುಡುಕಿದರೆ ಮೊದಲು ಬರುವ ಹೆಸರೇ ಕುಮಾರ ಪರ್ವತದ್ದು! ಕೆಲವರು ಅದನ್ನು ಒಪ್ಪಲು ತಯಾರಿಲ್ಲ,ಆದರೂ ದಕ್ಷಿಣ ಭಾರತದ ಕಠಿಣ ಚಾರಣದಲ್ಲಿ ಅಂತೂ ಕುಮಾರ ಪರ್ವತ ಚಾರಣ ಒಂದು! ಕುಮಾರ ಪರ್ವತವು ನಮ್ಮ ಕರ್ನಾಟಕದ ನಾಲ್ಕನೆಯ ಎತ್ತರದ ಶಿಖರವು ಆಗಿದೆ. ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಈ ಪರ್ವತದ ಎತ್ತರ 1712 ಮೀ ಅಥವ 5617 ಫೀಟು. ಕಡಿದಾದ ದಾರಿ,ಕಲ್ಲಗಳಿಂದ ಕೂಡಿರುವ ದಾರಿ ಚಾರಣ ಮಾಡುವವರಿಗೆ ಸವಾಲೊಡ್ಡುತ್ತದೆ! 
 
ಶೇಷ ಪರ್ವತ
Pc: Sudheesh Patwardhan

ನಾನು ಹಾಗು ನನ್ನ ಏಳು ಗೆಳೆಯರ ಬಳಗ ಈ ಚಾರಣವನ್ನು ಎರಡು ದಿನಗಳಲ್ಲಿ ಮುಗಿಸಿದೆವು.
 

ದಿನ 1: ದೇವರಗದ್ದೆಯಿಂದ ಭಟ್ಟರಮನೆ,ಗಿರಿಗದ್ದೆ(4.5 ಕಿ.ಮೀ)

 
ದೇವರಗದ್ದೆಯಿಂದ ಗಿರಿಗದ್ದೆಗೆ ಹೋಗುವ ದಾರಿ
Pc: Shreekara B

ಮೊದಲ ದಿನ ಪುತ್ತೂರಿನಿಂದ ರೈಲು ಹತ್ತಿ ಸುಬ್ರಹ್ಮಣ್ಯಕ್ಕೆ ಹೋದ ನಾವು ನಂತರ ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದ ಬಳಿಯಿರುವ ನನ್ನ ಅಕ್ಕನ ಮನೆಯಲ್ಲಿ ಊಟ ಮುಗಿಸಿ ದೇವರಗದ್ದೆಯಿಂದ ಗಿರಿಗದ್ದೆಗೆ ಹೊರಟೆವು.ದೇವರಗದ್ದೆಯಿಂದ ಗಿರಿಗದ್ದೆಯ ದಾರಿ ಬಹಳ ಕಠಿಣವಾದದ್ದು. ಅರಣ್ಯ ಇಲಾಖೆಯ ಫಲಕದಲ್ಲಿ ಇರುವಂತೆ ದೇವರಗದ್ದೆಯಿಂದ ಗಿರಿಗದ್ದೆಯ ದಾರಿ ಒಟ್ಟು 4.5 ಕಿಲೋಮೀಟರ್. ಆದರೆ ಇಷ್ಟು ದೂರ ನಡೆಯುವುದು ಎಂದರೆ ಒಂದು ದೊಡ್ಡ ಸಾಹಸವೇ ಸರಿ! ದೇವರಗದ್ದೆ ಸಮುದ್ರ ಮಟ್ಟದಿಂದ 146 ಮೀ ಎತ್ತರದಲ್ಲಿದ್ದರೆ ಗಿರಿಗದ್ದೆ 854 ಮೀ ಎತ್ತರದಲ್ಲಿದೆ! ಈ ಕಡಿದಾದ ದಾರಿ ಅರಣ್ಯ ಪ್ರದೇಶದಲ್ಲಿ ಹಾದುಹೋಗುತ್ತದೆ. ಮರಗಳ ಬೇರು,ಕಲ್ಲುಗಳಿಂದ ಕೂಡಿರುವ ಈ ದಾರಿ ಕುಮಾರ ಪರ್ವತ ಚಾರಣದ ಕಠಿಣ ದಾರಿಯಲ್ಲಿ ಅತ್ಯಂತ ಕಠಿಣವಾದದ್ದು ಎಂದರೆ ತಪ್ಪಲ್ಲ! ಈ ದಾರಿಯಲ್ಲಿ ಸಿಗುವ ಭೀಮನ ಬಂಡೆ ಎಂಬ ಸ್ಥಳದ ಸಮೀಪ ಬಲಬದಿಗೆ ಹೋಗುವ ದಾರಿಯಲ್ಲಿ ಹೋದರೆ ಒಂದು ಚಿಕ್ಕ ಜಲಪಾತ ಸಿಗುತ್ತದೆ. ದೇವರಗದ್ದೆಯಿಂದ ಗಿರಿಗದ್ದೆ ದಾರಿಯನ್ನು ಸಾಧಾರಣ ಮೂರು ಗಂಟೆಯಲ್ಲಿ ಕ್ರಮಿಸಬಹುದು. ನಾವು ಈ ದಾರಿಯನ್ನು 2.5 ಗಂಟೆಯಲ್ಲಿ ಕ್ರಮಿಸಿದೆವು. ಆದರೆ ಗಿರಿಗದ್ದೆಯ ಭಟ್ಟರಮನೆಗೆ ಬರುವ ಕೆಲಸದವರು ಆಗಲಿ,ಭಟ್ಟರಮನೆಯವರು ಇದೇ ಕಠಿಣ ದಾರಿಯನ್ನು ಕೇವಲ 30-45 ನಿಮಿಷಗಳಲ್ಲಿ ಕ್ರಮಿಸುತ್ತಾರೆ! ಸಂಜೆ ಗಿರಿಗದ್ದೆಗೆ ತಲುಪಿ ಭಟ್ಟರಮನೆಯಲ್ಲಿ ಶ್ರೀ ಮಹಾಲಿಂಗೇಶ್ವರ ಭಟ್ ಅವರ ಬಳಿ ಮಾತನಾಡಿ ಟೆಂಟ್ ವಾಸ್ತವ್ಯ ಹಾಗು ಊಟದ ವ್ಯವಸ್ಥೆ ಮಾಡಿ ಅಲ್ಲಿಂದ ಮೇಲೆ ನೂರು ಮೀಟರ್ ದೂರದಲ್ಲಿರುವ ಗಿರಿಗದ್ದೆಯ ವೀಕ್ಷಣಾ ಸ್ಥಳಕ್ಕೆ ಹೋದೆವು. ಇಲ್ಲಿ ನಿಮಗೆ ಶೇಷ ಪರ್ವತದ ಸುಂದರ ನೋಟವನ್ನು ನೋಡಲು ಸಿಗುತ್ತದೆ. ಜೊತೆಗೆ ಸುಬ್ರಹ್ಮಣ್ಯ ಪೇಟೆಯ ವಿಹಂಗಮ ನೋಟ ಹಾಗು ಸಂಜೆ ಸೂರ್ಯಾಸ್ತವನ್ನು ನೋಡಬಹುದು. ರಾತ್ರಿ ಭಟ್ಟರಮನೆಯಲ್ಲಿ ನಮಗೆ ರುಚಿರುಚಿಯಾದ ಅನ್ನ,ಸಾಂಬಾರ್,ಮಜ್ಜಿಗೆ,ಉಪ್ಪಿನಕಾಯಿ ಊಟ ಸಿಕ್ಕಿತು! ನಂತರ ಅಲ್ಲಿ ಟೆಂಟ್ ಅಲ್ಲಿ ಮಲಗಿದೆವು.
 
ಗಿರಿಗದ್ದೆಯಿಂದ ಕಾಣುವ ಶೇಷ ಪರ್ವತ!
Pc: Shreekara B

ದಿನ 2:

ದಾರಿ 1: ಗಿರಿಗದ್ದೆ-ಕಲ್ಲು ಮಂಟಪ(3 ಕಿ.ಮೀ)

ಕುಮಾರ ಪರ್ವತ ಚಾರಣ ದಾರಿ
Pc: Shreekara B



ಎರಡನೆಯ ದಿನ ಬೆಳಗ್ಗೆ 5 ಗಂಟೆಗೆ ಎದ್ದು ತಯಾರಾಗಿ ಭಟ್ಟರಮನೆಯಲ್ಲಿ ತಿಂಡಿ ತಿಂದು ಅರಣ್ಯ ಇಲಾಖೆಯ ಚೆಕ್ ಪೋಸ್ಟಿಗೆ ಹೋದೆವು. ಅಲ್ಲಿ ನಮ್ಮನ್ನು ಪರಿಶೀಲಿಸಿ,ಚಾರಣದ ಫೀಸು ಪಡೆದು, ನಮಗೆ ಮಾರ್ಗದರ್ಶನ ನೀಡಿ ಕುಮಾರ ಪರ್ವತದ ಕಡೆಗೆ ಕಳುಹಿಸಿಕೊಟ್ಟರು. ಅಲ್ಲಿಂದ ಆರಂಭಗೊಂಡು ಕಲ್ಲು ಮಂಟಪ ತನಕದ ದಾರಿಯನ್ನು ನಾವು 45 ನಿಮಿಷಗಳಲ್ಲಿ ಕ್ರಮಿಸಿದೆವು. ಇಲ್ಲಿ ನೀವು ಗಮನಿಸಬೇಕಾದ ವಿಷಯವೇನೆಂದರೆ ಗಿರಿಗದ್ದೆ ಬಿಟ್ಟರೆ ನಂತರ ಕುಡಿಯುವ ನೀರು ಸಿಗುವುದು ಕಲ್ಲು ಮಂಟದ ಬಳಿ. ಅಲ್ಲಿಯ ತನಕ ಬೇರೆ ಯಾವುದೇ ನೀರಿನ ಮೂಲ ಲಭ್ಯವಿಲ್ಲ. ಕಲ್ಲು ಮಂಟಪದ ಬಳಿ ತಂಪಾದ,ಶುದ್ಧ ನೀರು ಕುಡಿದು, ಬಾಟಲಿಗಳಲ್ಲಿ ತುಂಬಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆವು. ಕಲ್ಲು ಮಂಟಪ ತಲುಪುವ ಮೊದಲೇ ಮರಗಳ ನಡುವೆ ನೀರು ಹರಿಯುವ ಸದ್ದು ಕೇಳುತ್ತದೆ. ಅಲ್ಲಿ ನೋಡಿದರೆ ಸಣ್ಣ ತೋಡಿನಲ್ಲಿ ಕಲ್ಲುಗಳ ಮೇಲೆ ನೀರು ಹರಿಯುವುದು ಕಾಣಸಿಗುತ್ತದೆ. ಅದೇ ನೀರು ಕುಡಿಯುಮ ನೀರಿನ ಮೂಲ! 
 
ಕಲ್ಲು ಮಂಟಪದ ಬಳಿ ಕಾಣುವ ಪರ್ವತಗಳ ಸಾಲು!
Pc: Shreekara B

ದಾರಿ 2: ಕಲ್ಲು ಮಂಟಪ-ಶೇಷ ಪರ್ವತ(2.5 ಕಿ.ಮೀ)

 
ಕಲ್ಲು ಮಂಟಪ
Pc: Shreekara B

ಕಲ್ಲು ಮಂಟಪದಿಂದ ಶೇಷ ಪರ್ವತಕ್ಕೆ ಇರುವುದು ಕಡಿದಾದ ದಾರಿ. 2.5 ಕಿಲೋಮಿಟರಿನ ಈ ದಾರಿಯನ್ನು ಕ್ರಮಿಸಲು ಹೆಚ್ಚು ಸಮಯ ತೆಗದುಕೊಳ್ಳುವ ಸಾಧ್ಯತೆ ಇರುತ್ತದೆ. ಈ ದಾರಿಯುದ್ದಕ್ಕೂ ಸಿಗುವುದು ಹುಲ್ಲುಗಾವಲಿನಿಂದ ಕೂಡಿದ ಪ್ರದೇಶ. ಇಲ್ಲಿ ಎಲ್ಲಿಯೂ ಒಂದೇ ಒಂದು ಮರ ಇರುವುದಿಲ್ಲ! ಹಾಗಾಗಿ ನಿಮಗೆ ವಿಶ್ರಾಂತಿ ಪಡೆಯಬೇಕಾದರೆ ಬಿಸಿಲಿನ ನಡುವೆಯೇ ವಿಶ್ರಾಂತಿ ಪಡೆಯಬೇಕು. ಆದರೆ ಇಲ್ಲಿ ಇರುವ ಒಂದು ಲಾಭ ಏನೆಂದರೆ ನಡೆದುಕೊಂಡು ಹೋಗುವಾಗ ನಿರಂತರವಾಗಿ ತಂಪಾದ ಗಾಳಿ ಬೀಸುತ್ತಲೆ ಇರುತ್ತದೆ. ಹಾಗಾಗಿ ಹೆಚ್ಚು ಸುಸ್ತು ಆಗುವ ಸಾಧ್ಯತೆ ಇರುವುದಿಲ್ಲ. ನಡೆದುಕೊಂಡು ಹೋದಂತೆ ಶೇಷ ಪರ್ವತದ ತುದಿ ಕಾಣಲು ಸಿಗುತ್ತದೆ. ಆದರೆ ನಡೆದಷ್ಟು ತುದಿ ತಲುಪಲಿಲ್ಲ,ಇನ್ನೂ ನಡೆಯಲು ಇದೆ ಎಂದು ಭಾಸವಾಗುತ್ತದೆ. ಅಂತೂ ಇಂತು ನಡೆದು ನಡೆದು ಶೇಷ ಪರ್ವತವನ್ನು ಕೊನೆಗೆ ತಲುಪಿ ಬಿಟ್ಟೆವು! ಶೇಷ ಪರ್ವತದಲ್ಲಿ ನಿಮಗೆ ಸುತ್ತಲೂ 360° ನಿಸರ್ಗದ ಸೌಂದರ್ಯವನ್ನು ಕಾಣಲು ಸಿಗುತ್ತದೆ. ಅಷ್ಟೇ ಅಲ್ಲ ಅಲ್ಲಿಂದ ಕುಮಾರಧಾರ ನದಿಯ ಹರಿಯುವ ದಾರಿ,ಬಿಸಲೆ ಘಾಟಿ,ಸುಬ್ರಹ್ಮಣ್ಯ ಪೇಟೆ,ದೇವಸ್ಥಾನದ ರಥಬೀದಿ ಸೇರಿ ಹಲವಾರು ಪ್ರದೇಶಗಳ ವಿಹಂಗಮ ನೋಟ ಕಾಣಲು ಸಿಗುತ್ತದೆ. ಜೊತೆಗೆ ನನ್ನ ಊರು ಹರಿಹರಪಲ್ಲತ್ತಡ್ಕ ಗ್ರಾಮವನ್ನು ಶೇಷ ಪರ್ವತದ ಶಿಖರದಿಂದ ನೋಡಿ ಬಹಳ ಸಂತೋಷ ಹಾಗು ತೃಪ್ತಿಯಾಯಿತು. ಶೇಷ ಪರ್ವತದಲ್ಲಿ ವಿಶ್ರಾಂತಿ ಪಡೆದು ನಂತರ ಅಲ್ಲಿಂದ ಕುಮಾರ ಪರ್ವತದ ಕಡೆಗೆ ಸಾಗಿದೆವು.
 
ಶೇಷ ಪರ್ವತದ ಶಿಖರ
Pc: Sudheesh Patwardhan

ಶೇಷ ಪರ್ವತದ ಶಿಖರ
Pc: Shreekara B

ದಾರಿ 3: ಶೇಷ ಪರ್ವತ-ಕುಮಾರ ಪರ್ವತ(1 ಕಿ.ಮೀ)

 
ಮರಗಳ ಸಾಲು
Pc: Sudheesh Patwardhan

ಶೇಷ ಪರ್ವತದಿಂದ ಕುಮಾರ ಪರ್ವತದ ಕಡೆಗೆ ಹೊರಟಾಗ ಮೊದಲು ಇಳಿಯಬೇಕು. ಇಲ್ಲಿಂದ ಕಾಡಿನ ಮಧ್ಯೆ ಸಾಗುವ ದಾರಿಯಲ್ಲಿ ಗಾಳಿಯು ಬೀಸುತ್ತದೆ ಜೊತೆಗೆ ನೆರಳು ಸಿಗುತ್ತದೆ. ಹಾಗಾಗಿ ವೇಗವಾಗಿ ನಡೆದುಕೊಂಡು ಹೋಗಬಹುದು. ಸುಮಾರು ಅರ್ಧ ಕಿಲೋಮೀಟರ್ ನಡೆದ ಮೇಲೆ ನಂತರ ಕಲ್ಲಿನ ರಾಶಿಯ ದಾರಿಯಲ್ಲಿ ಹತ್ತುತ್ತಾ ಸಾಗಿದಂತೆ ಬಂಡೆ ಕಲ್ಲಿನ ಮೆಲೆ ಹತ್ತಬೇಕು. ಅಲ್ಲಿ ಸ್ವಲ್ಪ ಕಷ್ಟವಾಗಬಹುದು. ಆದರೆ ನಾವು ಕಷ್ಟಪಡದೆ ಹತ್ತುತ್ತಾ ಹೋದೆವು. ನಂತರ ಕಲ್ಲಿನ ಮೇಲೆ ನಡೆದುಕೊಂಡು ಹೋಗಿ ಕೊನೆಗೆ ಕುಮಾರ ಪರ್ವತ ತಲುಪಿದೆವು! ಕುಮಾರ ಪರ್ವತದ ಶಿಖರ ನೋಡಿದಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ! ಎಲ್ಲರು ಖುಷಿಯಿಂದ ಹಾರಿದೆವು! ನಂತರ ಅಲ್ಲಿ ಶ್ರೀ ಶಾಂತ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ನಮಸ್ಕರಿಸಿ ಅಲ್ಲೇ ಸುತ್ತಮುತ್ತ ವಿಹರಿಸಿ ವಿಶ್ರಮಿಸಿದೆವು. ಮುಂಜಾನೆ ಬೇಗ ಹೊರಡಲು ಅನುಮತಿ ಇರದ ಕಾರಣ ಬೆಳಗ್ಗೆ 6:50ಕ್ಕೆ ಗಿರಿಗದ್ದೆಯಿಂದ ಹೊರಟು ಬೆಳಗ್ಗೆ 10:30ಕ್ಕೆ ಕುಮಾರ ಪರ್ವತ ತಲುಪಿದೆವು. ಪರ್ವತದ ಶಿಖರವು ಸಮತಟ್ಟಾದ ಪ್ರದೇಶವಾಗಿದೆ. ಹಾಗಾಗಿ ಅದು ವಿಶಾಲವಾದ ಪ್ರದೇಶದ ಕೂಡಿದ ಶಿಖರ.ಇಲ್ಲಿ ನಿಮಗೆ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳ ವಿಹಂಗಮ ನೋಟ ಸಿಗುತ್ತದೆ.
 
ಕುಮಾರ ಪರ್ವತ ಶಿಖರ
Pc:Shreekara B

ಶ್ರೀ ಶಾಂತ ಮಲ್ಲಿಕಾರ್ಜುನ ದೇವರು
Pc:Shreekara B


ಕುಮಾರ ಪರ್ವತದ ಚಾರಣವನ್ನು ಎರಡು ಕಡೆಯಿಂದ ಮಾಡಬಹುದು.
1. ಸುಬ್ರಹ್ಮಣ್ಯ ಕಡೆಯಿಂದ 11 ಕಿಲೋಮಿಟರಿನ ಕಡಿದಾದ ದಾರಿಯನ್ನು ಕ್ರಮಿಸಿ ಕುಮಾರ ಪರ್ವತ ಶಿಖರ ತಲುಪುವುದು.
2. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೀದಳ್ಳಿಯಿಂದ 7 ಕಿಲೋಮಿಟರ್ ಹತ್ತಿ ಕುಮಾರ ಪರ್ವತ ಶಿಖರ ತಲುಪುವುದು. 
 
ಕುಮಾರ ಪರ್ವತದಿಂದ ಕಾಣುವ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳು!
Pc: Sudheesh Patwardhan

ಸುಬ್ರಹ್ಮಣ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ,ಪುತ್ತೂರು,ಮಂಗಳೂರು,ಉಪ್ಪಿನಂಗಡಿ,ಕಡಬ,ಧರ್ಮಸ್ಥಳ ಕಡೆಯಿಂದ ಸಾಕಷ್ಟು ಬಸ್ಸುಗಳು ಲಭ್ಯವಿದೆ.
 
ಜೊತೆಗೆ ಮಂಗಳೂರು,ಹಾಸನ ಕಡೆಯಿಂದ ಸುಬ್ರಹ್ಮಣ್ಯಕ್ಕೆ ರೈಲುಗಳ ಮೂಲಕವು ಪ್ರಯಾಣಿಸಬಹುದು.
ಇನ್ನು ಊಟ,ವಾಸ್ತವ್ಯದ ವಿಷಯಕ್ಕೆ ಬರುವುದಾದರೆ ಕುಮಾರ ಪರ್ವತ ಚಾರಣದ ದಾರಿಯಲ್ಲಿ ಊಟ ಸಿಗುವುದು ಗಿರಿಗದ್ದೆಯ ಭಟ್ಟರಮನೆಯಲ್ಲಿ ಮಾತ್ರ. ರಾತ್ರಿ ತಂಗಲು ಗಿರಿಗದ್ದೆಯ ಭಟ್ಟರಮನೆಯಲ್ಲಿ ಹಾಗು ಅರಣ್ಯ ಇಲಾಖೆಯ ಚೆಕ್ ಪೋಸ್ಟಿನಲ್ಲಿ ಟೆಂಟ್ ವ್ಯವಸ್ಥೆಯಿದೆ. ಭಟ್ಚರಮನೆಯಲ್ಲಿ ಊಟಕ್ಕೆ 150 ರೂಪಾಯಿ ಆಗುತ್ತದೆ ಹಾಗು ಟೆಂಟಿಗೆ ಪ್ರತಿಯೊಬ್ಬರಿಗೆ 200 ರೂಪಾಯಿ ಆಗುತ್ತದೆ. ಚೆಕ್ ಪೋಸ್ಟಿನಲ್ಲಿಯೂ ಟೆಂಟಿಗೆ ಇದೆ ದರವಿದೆ. 
 
ಅರಣ್ಯ ಇಲಾಖೆಯ ಸೂಚನಾ ಫಲಕಗಳು
Pc: Shreekara B

ಚಾರಣ ಫೀಸಿನ ಬಗ್ಗೆ ಮಾಹಿತಿ:

ಕುಮಾರ ಪರ್ವತ ಚಾರಣಕ್ಕೆ ಪ್ರತಿಯೊಬ್ಬರಿಗೆ 350 ರೂಪಾಯಿ ದರವಿದೆ. ಹಾಗೆಯೇ ರಾತ್ರಿ ಗಿರಿಗದ್ದೆಯಲ್ಲಿ ತಂಗುವುದಾದರೆ ಕ್ಯಾಂಪ್ ಫೀಸು 75 ರೂಪಾಯಿಯಿದೆ. ಹಾಗಾಗಿ ಒಟ್ಟು 425 ರೂಪಾಯಿ ಚೆಪ್ ಪೋಸ್ಟಿನಲ್ಲಿ ಪಾವತಿಸಬೇಕು. ಇದರ ಜೊತೆಗೆ ಚಾರಣಿಗರು ತೆಗೆದುಕೊಂಡು ಹೋಗುವ ಪ್ಲಾಸ್ಟಿಕ್,ಬಾಟಲಿ,ಪೇಪರ್ ಸೇರಿ ಇತರೇ ತ್ಯಾಜ್ಯ ರೂಪದ ವಸ್ತುಗಳ ಲೆಕ್ಕ ಹಾಕಿ ಅದರ ಮೇಲೆ ಡೆಪಾಸಿಟ್ ಹಣ ಕಟ್ಟಬೇಕು. ಚಾರಣಕ್ಕೆ ಹೋಗಿ ಬರುವಾಗ ಅಷ್ಟೆ ವಸ್ತಗಳನ್ನು ತಂದರೆ ಡೆಪಾಸಿಟ್ ಹಣವನ್ನು ಹಿಂದಿರುಗಿಸುತ್ತಾರೆ. ತ್ಯಾಜ್ಯ ರೂಪದ ವಸ್ತುಗಳು ಚಾರಣ ದಾರಿಯಲ್ಲಿ ಬಿಸಾಡಿದರೆ ಆ ಹಣವನ್ನು ಹಿಂದಿರುಗಿಸುವುದಿಲ್ಲ.
ಇತ್ತೀಚೆಗೆ ದೇವರಗದ್ದೆಯಲ್ಲಿ ಹೊಸ ಚೆಪ್ ಪೋಸ್ಟ್ ಅನ್ನು ಅರಣ್ಯ ಇಲಾಖೆಯು ತೆರೆದಿದೆ. ಹಾಗಾಗಿ ದೇವರಗದ್ದೆ ಹಾಗು ಗಿರಿಗದ್ದೆಯ ಚೆಕ್ ಪೋಸ್ಟುಗಳಲ್ಲಿ ಪರಿಶೀಲಿಸಿ ಮತ್ತೆ ಚಾರಣಕ್ಕೆ ಬಿಡುತ್ತಾರೆ. ನಾವು ಹೋಗುವಾಗ ದೇವರಗದ್ದೆಯ ಚೆಪ್ ಪೋಸ್ಟ್ ಮುಚ್ಚಿದುದರಿಂದ ಯಾವುದೇ ಪರಿಶೀಲನೆ ಅಲ್ಲಿ ಇರಲಿಲ್ಲ. ಹಣ ಪಾವತಿ ಗಿರಿಗದ್ದೆಯ ಚೆಕ್ ಪೋಸ್ಟಿನಲ್ಲಿ ಮಾತ್ರ ಇರಬೇಕು. ಇದರ ಬಗ್ಗೆ ನಿಖರ ಮಾಹಿತಿ ನನ್ನ ಬಳಿ ಲಭ್ಯವಿಲ್ಲ. 
 
ದೇವರಗದ್ದೆಯಿಂದ ಕುಮಾರ ಪರ್ವತ ಕಡೆಗೆ ಸಾಗುವ ದಾರಿ
Pc: Shreekara B

ನನ್ನ ಸ್ವಂತ ಅನುಭವದಲ್ಲಿ ಹೇಳುವುದಾದರೆ ಕುಮಾರ ಪರ್ವತ ಚಾರಣದ ಅತ್ಯಂತ ಕಠಿಣ ದಾರಿ ದೇವರಗದ್ದೆಯಿಂದ ಗಿರಿಗದ್ದೆವರೆಗಿನ ದಾರಿ ಆಗಿದೆ. ಮತ್ತೆ ಗಿರಿಗದ್ದೆಯಿಂದ ಕುಮಾರ ಪರ್ವತದವರೆಗಿನ ದಾರಿ ನನಗೆ ಅಷ್ಟು ಕಷ್ಟ ಆಗಲಿಲ್ಲ. ಬೆಳಗ್ಗೆ ಹೋಗುವಾಗ ಬಿಸಿಲಿನ ತಾಪದ ಪರಿಣಾಮ ಇರದ ಕಾರಣ ಜೊತೆಗೆ ತಂಪಾದ ಗಾಳಿ ಬೀಸಿಕೊಂಡು ಇದ್ದ ಕಾರಣ ಜೊತೆಗೆ ಗುಡ್ಡಗಾಡುಗಳನ್ನು ಹತ್ತಿ ಅಭ್ಯಾಸವಿದ್ದ ಕಾರಣದಿಂದಲೋ ಏನೋ ಗೊತ್ತಿಲ್ಲ. ನಂತರ ಕಷ್ಟವಾಗುವುದು ಇಳಿಯುವಾಗ ಅದರಲ್ಲೂ ಗಿರಿಗದ್ದೆಯಿಂದ ದೇವರಗದ್ದೆಗೆ ಇಳಿಯುವಾಗ ಕಾಲು ಗಂಟುಗಳಲ್ಲಿ ನೋವಾಗಲು ಆರಂಭಗೊಳ್ಳುತ್ತದೆ. ಜೊತೆಗೆ ಸ್ನಾಯು ಸೆಳೆತವಾಗುವ ಸಾಧ್ಯತೆಯು ಇರುತ್ತದೆ. ಆದ್ದರಿಂದ ಕುಮಾರ ಪರ್ವತ ಚಾರಣಕ್ಕೆ ಹೋಗುವ ಮೊದಲು ಪೂರ್ವ ತಯಾರಿ ಮಾಡಿಕೊಂಡು ಹೋಗುವುದು ಬಹಳ ಉತ್ತಮ. ಇದಕ್ಕಾಗಿ ಕುಮಾರ ಪರ್ವತ ಚಾರಣಕ್ಕಿಂತಲೂ ಸುಲಭ ಚಾರಣಗಳನ್ನು ಮಾಡಿ ಮತ್ತೆ ಕುಮಾರ ಪರ್ವತ ಚಾರಣಕ್ಕೆ ಹೋಗಿ ಎಂದು ಹೆಚ್ಚಿನವರು ಹೇಳುತ್ತಾರೆ. 
 
ಕುಮಾರ ಪರ್ವತ ಹತ್ತುವಾಗ ಕುಡಿಯುವ ನೀರು ಜೊತೆಗೆ ಇರುವುದು ಬಹಳ ಮುಖ್ಯ! ಕನಿಷ್ಠಪಕ್ಷ 15 ನಿಮಿಷಗಳಿಗೆ ಒಮ್ಮೆಯಾದರು ಒಂದು ಗುಟುಕು ನೀರು ಕುಡಿಯಲೇ ಬೇಕು. ದೇಹದ ನಿರ್ಜಲಿಕಾರಣ ಆದರೆ ಅರ್ಧದಲ್ಲೇ ಬಾಕಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ದೇವರಗದ್ದೆಯಿಂದ ಹತ್ತುವಾಗಲೂ,ಗಿರಿಗದ್ದೆಯಿಂದ ಹತ್ತುವಾಗಲೂ ಜೊತೆಗೆ ನೀರು ಖಾಲಿಯಾದರೆ ಕಲ್ಲು ಮಂಟಪದ ಬಳಿ ನೀರು ತುಂಬಿಸಲು ಮರೆಯದಿರಿ. ಕನಿಷ್ಠಪಕ್ಷ ಒಂದು ಲೀಟರಿನ ಎರಡು ಬಾಟಲಿಗಳನ್ನು ತೆಗೆದುಕೊಂಡು ಹೋಗಿ. ಧೈರ್ಯಕ್ಕೆಂದು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಸಹ ಜೊತೆಗೆ ಇಟ್ಟುಕೊಳ್ಳಿ.
 
ಕುಮಾರ ಪರ್ವತದ ಚಾರಣ ದಾರಿಯುದ್ದಕ್ಕೂ ಹೆಚ್ಚಿನ ಕಡೆ ಮೊಬೈಲ್ ನೆಟ್‌ವರ್ಕ್ ಅದರಲ್ಲಿಯೂ ಜಿಯೋ,ಏರ್ಟೆಲ್ ನೆಟ್‌ವರ್ಕ್ ಸಿಗುತ್ತದೆ. ಹೀಗಾಗಿ ನೆಟ್‌ವರ್ಕಿನ ಸಮಸ್ಯೆಯಾಗಲು ಸಾಧ್ಯವಿಲ್ಲ. ಚಾರಣಕ್ಕೆ ಹೋಗುವಾಗ ಅಗತ್ಯಕ್ಕಿಂತಲೂ ಹೆಚ್ಚು 500-1000 ರೂಪಾಯಿ ಕ್ಯಾಶ್ ತೆಗೆದುಕೊಂಡು ಹೋಗಿ. ಗಿರಿಗದ್ದೆಯಲ್ಲಿ ಎರಡು ಕಡೆಗಳಲ್ಲಿಯೂ ಕ್ಯಾಶ್ ಮೂಲಕವೇ ಹಣ ಪಾವತಿಸಬೇಕು.
ಭಟ್ಟರಮನೆಗೆ ನೀವು ಹೋಗುವುದನ್ನ ಮುಂಚಿತವಾಗಿ ತಿಳಿಸಿ. ಮೊಬೈಲ್ ನೆಟವರ್ಕ್ ತುಸು ಲಭ್ಯವಿರುವ ಕಾರಣ ಅವರಿಗೆ ಕರೆ ಮಾಡಿ ನೀವು ಹೋಗುವುದನ್ನು ಅವರಿಗೆ ಮುಂಚಿತವಾಗಿ ತಿಳಿಸಬಹುದು. ದೂರವಾಣಿ ಸಂಖ್ಯೆ:- +919448647947,+919480527765. ಇವೆರಡು ಲಭ್ಯವಾಗದಿದ್ದರೆ ಕುಕ್ಕೆ ಟೂರಿಸಂ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು. ದೂರವಾಣಿ ಸಂಖ್ಯೆ:- +919741247271.
 
ಭಟ್ಟರಮನೆ ದೂರವಾಣಿ ಸಂಖ್ಯೆ
Pc: Shreekara B

ಚಾರಣದ ಯೋಜನೆ ರೂಪಿಸಲು ಹೊರಟಾಗ ಭಟ್ಟರಮನೆಯನ್ನು ಸಂಪರ್ಕಿಸಿ ಮುಂಚಿತವಾಗಿ ತಿಳಿಸಲು ನನಗೆ ಸಹಕರಿಸಿದವರು ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಗಣೇಶ ದೀಕ್ಷಿತ್ ಅವರು. ಚಾರಣದಲ್ಲಿ ಯಾವುದೇ ಅಡೆತಡೆ ಎದುರಾಗದ ಹಾಗೆ,ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಟ್ಟ ಅವರಿಗೂ ಹಾಗು ಭಟ್ಟರಮನೆಯ ಗಿರಿಗದ್ದೆಯ ಭಟ್ ಸಹೋದರರು ಆದ ಶ್ರೀ ಮಹಾಲಿಂಗೇಶ್ವರ ಭಟ್ ಹಾಗು ಶ್ರೀ ನಾರಾಯಣ ಭಟ್ ಅವರಿಗೆ ಧನ್ಯವಾದಗಳು.
 
ಗಿರಿಗದ್ದೆಯಿಂದ ಕಾಣುವ ಸೂರ್ಯಾಸ್ತ
ಗಿರಿಗದ್ದೆಯಿಂದ ಕಾಣುವ ಸೂರ್ಯಾಸ್ತ
Pc:Sudheesh Patwardhan

ಪೇಟೆಯ ಮಧ್ಯೆ ಕೂತು ಬದುಕಿನ ಜಂಜಾಟದಿಂದ ವಿಶ್ರಾಂತಿ ಪಡೆಯಲು,ಪರಿಸರದ ಮಧ್ಯೆ ಸಮಯ ಕಳಿಯಲು,ಚಾರಣಕ್ಕೆ ಹೋಗುವ ಅಭ್ಯಾಸ ಇರುವವರಿಗೆ ಕುಮಾರ ಪರ್ವತಕ್ಕೆ ಚಾರಣ ಹೋಗಿಬರಬಹುದು. ನೀವು ಚಾರಣಕ್ಕೆ ಹೋಗಿ ಬನ್ನಿ! ಆದರೆ ಅಲ್ಲಿನ ಸ್ವಚ್ಛತೆ,ಪರಿಸರವನ್ನು ಕಾಪಾಡಿ!
ಬರಹ: ಶ್ರೀಕರ ಬಿ


 

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!