ಎಂಜಿನಿಯರಿಂಗ್ ವ್ಯಾಸಂಗದ ಎರಡನೇಯ ಘಟ್ಟ ಸಂಪೂರ್ಣ!

 

ಎಂಜಿನಿಯರಿಂಗ್ ವ್ಯಾಸಂಗದ ಎರಡನೇಯ ಘಟ್ಟ ಸಂಪೂರ್ಣ!


 

ನಮ್ಮ ಬದುಕಿನಲ್ಲಿ ವೃತ್ತಿ ಜೀವನಕ್ಕೆ ನಮ್ಮನ್ನು ತಯಾರು ಮಾಡುವುದು ಪದವಿ ವಿದ್ಯಾಭ್ಯಾಸ! ಎಂಜಿನಿಯರಿಂಗ್ ಅನ್ನು ನನ್ನ ವೃತ್ತಿ ಜೀವನ ಎಂದು ಆರಿಸಿ ಎಂಜಿನಿಯರಿಂಗ್ ವ್ಯಾಸಂಗ ಮಾಡಲು ಎಂದು ಸಿಇಟಿ ಪರೀಕ್ಷೆ ಬರೆದು ಕರ್ನಾಟಕದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲಾಗಬೇಕೆಂಬ ನನ್ನ ಆಸೆಯ ಒಂದು ಹಂತ ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಕಾಲೇಜು ಸೇರಿದಾಗ ಪೂರ್ಣಗೊಂಡಿತು. ಅಲ್ಲಿಂದ ಆರಂಭವಾದ ವೃತ್ತಿಪರ ಕೋರ್ಸಿನ ಅಧ್ಯಯನ ಇಂದು ಎರಡನೇ ಹಂತ ಪೂರ್ಣಗೊಳಿಸಿದೆ. ನಾಲ್ಕು ವರ್ಷಗಳ ಈ ಪಯಣದಲ್ಲಿ ಇಂದಿಗೆ ಎರಡು ವರ್ಷಗಳು ಪೂರ್ಣಗೊಂಡಿತು. ಅದು 2021ನೇ ಸಾಲಿನ ದಶಂಬರ್ ತಿಂಗಳು. ವೃತ್ತಿಪರ ಕಾಲೇಜು ಸೇರಲು ಸಿಇಟಿ ಕೌನ್ಸೆಲಿಂಗ್ ಅಲ್ಲಿ ಹಲವಾರು ಎಂಜಿನಿಯರಿಂಗ್ ಕಾಲೇಜುಗಳನ್ನು ಆರಿಸಿ ಅಣಕು ಸುತ್ತು ಹಾಗು ಪ್ರಥಮ ಸುತ್ತು ಪೂರೈಸಿ ಎರಡನೆಯ ಸುತ್ತಿನ ಫಲಿತಾಂಶವನ್ನು ಕಾಯುತ್ತಿದ್ದೆ. ಅದೇ ಸಮಯದಲ್ಲಿ ಊರಿನ ಆರಾಧ್ಯ ದೇವ,ಕುಕ್ಕೆಪುರನಾಥ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹೋತ್ಸವದಲ್ಲಿ ಪಾಲ್ಗೊಳ್ಳಲೆಂದು ಸುಬ್ರಹ್ಮಣ್ಯದಲ್ಲಿ ಅಕ್ಕನ ಮನೆಯಲ್ಲಿ ಇದ್ದೆ. ಇದ್ದಕ್ಕಿದ್ದಂತೆ ಮಧ್ಯರಾತ್ರಿ ಎರಡನೆಯ ಸುತ್ತಿನ ಕೌನ್ಸೆಲಿಂಗ್ ಫಲಿತಾಂಶ ಬಂತು. ನನಗೆ ಸಹ್ಯಾದ್ರಿ ಕಾಲೇಜಿನಲ್ಲಿ ಸೀಟು ದೊರಕಿತು. ಸರಿ ಎಂದು ಅಲ್ಲೇ ದಾಖಲಾಗುವುದು ಎಂದು ಮರುದಿನ ಮನೆಗೆ ಬಂದು ಬಳಿಕ ಸಹ್ಯಾದ್ರಿ ಕಾಲೇಜಿನಲ್ಲಿ ದಾಖಲಾದೆ. 2021ರ ದಶಂಬರ್ ತಿಂಗಳಿನಿಂದ ಆರಂಭವಾದ ವೃತ್ತಿಪರ ಅಧ್ಯಯನದ ಈ ಪಯಣ ಇಂದು ಎರಡು ವರ್ಷಗಳನ್ನು ಪೂರೈಸಿತು. ಪ್ರಥಮ ವರ್ಷದ ಅಧ್ಯಯನದ ಬಗ್ಗೆ ಹಿಂದೊಮ್ಮೆ ಫೇಸ್ಬುಕ್ ಪುಟದಲ್ಲಿ ಬರೆದಿದ್ದೆ.2022ರ ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಎರಡನೆಯ ವರ್ಷದ ವ್ಯಾಸಂಗ ಆರಂಭಗೊಂಡಿತು. ಎರಡನೆಯ ವರ್ಷದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಾವು ಆಯ್ದುಕೊಂಡ ಕೋರ್ಸಿನ ಅಧ್ಯಯನ ಮಾಡಲು ಬೇರೆಬೇರೆ ವಿಭಾಗಕ್ಕೆ ಸೇರುತ್ತಾರೆ. ನಾನು ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ. ಎರಡನೆಯ ವರ್ಷದ ವ್ಯಾಸಂಗ ನನಗೆ ಹಲವಾರು ಮರೆಯಲಾಗದ ಅನುಭವಗಳನ್ನು ನೀಡಿತು. ಎರಡನೆಯ ವರ್ಷದ ವ್ಯಾಸಂಗ ಆರಂಭಗೊಂಡು ಒಂದು ತಿಂಗಳು ಆಗುವಾಗ ನಮಗೆ ನಮ್ಮ ವಿಭಾಗದ ವಿಭಾಗೀಯ ಸಂಘದ ದಿನದ ಕಾರ್ಯಕ್ರಮ ಭರ್ಜರಿ ಆಗಿ ನಡೆದು ಅದರ ಬಗ್ಗೆ ಲೇಖನ ಬರೆದಿದ್ದೆ. ಅದನ್ನು ಓದಿ ಬಹಳ ಸಂತೋಷಗೊಂಡ ನನ್ನ ಮಾರ್ಗದರ್ಶಕರಾದ ಶ್ರೀ ರಿತೇಶ್ ಪಕ್ಕಳ ಸರ್ ಅವರು ನನ್ನ ಲೇಖನ ಬರೆಯುವ ಹವ್ಯಾಸಕ್ಕೆ ಬೆಂಬಲ ನೀಡಿ ಹಲವಾರು ಸಲಹೆಗಳನ್ನು ನೀಡಿದರು ಹಾಗು ವಿಭಾಗದ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿದರು. ಸಹ್ಯಾದ್ರಿ ಕಾಲೇಜಿನಲ್ಲಿ ನಾನು ವ್ಯಾಸಂಗ ಮಾಡುತ್ತಿರುವ ವಿಭಾಗ ಅತ್ಯುತ್ತಮ ವಿಭಾಗಗಳಲ್ಲಿ ಒಂದು. ಶಿಸ್ತನ್ನು ಚಾಚು ತಪ್ಪದೆ ಪಾಲಿಸುವ ವಿಭಾಗ ನಮ್ಮ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗ. ಸಾಮಾನ್ಯವಾಗಿ ವೃತ್ತಿಪರ ಶಿಕ್ಷಣ ಪಡೆಯಲು ಕಾಲೇಜಿಗೆ ಕಾಲಿಟ್ಟ ಕೂಡಲೆ ಅಶಿಸ್ತಿನಿಂದ ವರ್ತಿಸುವ ವಿದ್ಯಾರ್ಥಿಗಳು ಇರುತ್ತಾರೆ ಹಾಗು ವಿದ್ಯಾರ್ಥಿಗಳ ನಡವಳಿಕೆಯೂ ಬದಲಾಗುತ್ತದೆ. ಆದರೆ ಈ ವಿಭಾಗ ಹಾಗು ವಿಭಾಗದ ಉಪನ್ಯಾಸಕರು ಕೊಡುತ್ತಿದ್ದ ಸೂಚನೆಗಳು ನನಗೆ ಶಿಸ್ತಿನಿಂದ ವರ್ತಿಸುವಂತೆ ಮಾಡಿತು. ಮೊದಲು ಹೇಗೆ ಪಿಯುಸಿಯಲ್ಲಿ ಒಬ್ಬ ವಿದ್ಯಾರ್ಥಿ ಆಗಿ ವರ್ತಿಸುತ್ತಿದ್ದೆನೋ ಅದೇ ರೀತಿ ಈಗಲೂ ಹಾಗೆ ಇದ್ದೇನೆ. ನನಗೆ ವಿಭಾಗದಲ್ಲಿ ಎಲ್ಲಾ ಉಪನ್ಯಾಸಕರು ಬಹಳ ಬೆಂಬಲ ನೀಡುತ್ತಿದ್ದರು. ಅದರಲ್ಲೂ ನನ್ನ ಮಾರ್ಗದರ್ಶಕರಾದ ಶ್ರೀ ರಿತೇಶ್ ಪಕ್ಕಳ ಸರ್ ಅವರಿಗೆ ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು. ನನ್ನ ಒಳಗೆ ಇದ್ದ ಪ್ರತಿಭೆಯನ್ನು ಸದುಪಯೋಗ ಪಡಿಸಿ ಲೇಖನ ಬರೆಯುವ ಹವ್ಯಾಸವನ್ನು ಮುಂದುವರಿಸಲು ಸ್ಫೂರ್ತಿ ನೀಡಿದವರು ಅವರು. ಗುರು ಪೂರ್ಣಿಮೆಯ ದಿನದಂದು ವಿಶೇಷವಾಗಿ ನಾನು ಅವರ ಬಗ್ಗೆ ಲೇಖನ ಬರೆದಿದ್ದೆ. ಇನ್ನು ನಾನು ಕಾಲೇಜಿನಲ್ಲಿ ಹೆಚ್ಚು ಲೇಖನ ಬರೆಯಲು ಶುರು ಮಾಡಿದ್ದು ಕಾಲೇಜಿನಲ್ಲಿ ನಡೆದ ಎನ್.ಎಸ್.ಎಸ್ ಶಿಬಿರದ ಬಳಿಕ. ಶಿಬಿರದಲ್ಲಿ ನನಗೆ ಸ್ವಯಂಸೇವಕನಾಗಿ ಸೇವೆ ಸಲ್ಲಿಸುವ ಅವಕಾಶ ಲಭಿಸಿತ್ತು. ಪ್ರತಿದಿನದ ವರದಿಯನ್ನು ತಯಾರಿಸಿ ಮರುದಿನ ಆ ವರದಿಯನ್ನು ಎಲ್ಲರ ಮುಂದೆ ಮಂಡಿಸುವ ಅವಕಾಶ ನನಗೆ ಲಭಿಸಿತ್ತು. ಕೊನೆಗೆ ಶಿಬರದ ಸಮಾರೋಪ ಸಮಾರಂಭದಂದು 400 ವಿದ್ಯಾರ್ಥಿಗಳ ಎದುರು ಶಿಬಿರದ ಸಂಪೂರ್ಣ ವರದಿಯನ್ನು ತಯಾರಿಸಿ ಮಂಡಿಸುವ ಅತ್ಯುತ್ತಮ ಅವಕಾಶ ಲಭಿಸಿತ್ತು. ಇದಕ್ಕೆ ಕಾರಣಕರ್ತರು ನನ್ನನ್ನು ಸ್ವಯಂಸೇವಕನಾಗಿ ನೇಮಿಸಿ, ನಾನು ಕೇಳಿದಾಗಲೆಲ್ಲ ಸೂಕ್ತ ಸಲಹೆ,ಮಾರ್ಗದರ್ಶನ ನೀಡುತ್ತಿದ್ದ ನನ್ನ ತರಗತಿಯ ಅಧ್ಯಾಪಕ ಸಂಯೋಜಕರು ಆಗಿರುವ ಶ್ರೀಮತಿ ಹರಿಣಾಕ್ಷಿ ಮೇಡಂ ಅವರು. ಈ ಶಿಬಿರದ ಬಳಿಕ ಕಾಲೇಜಿನ ಇ-ಮ್ಯಗಜೀನಿನಲ್ಲಿ ಲೇಖನ ಬರೆಯುವ ಅವಕಾಶ ಸೇರಿ ಹಲವಾರು ಅವಕಾಶಗಳು ಲಭಿಸಿತ್ತು. ನನ್ನ ವರದಿಯು ಕಾಲೇಜಿನ ಉಪನ್ಯಾಸಕರು,ವಿಭಾಗದ ಮುಖ್ಯಸ್ಥರು ಸೇರಿ ಗಣ್ಯರ ಪ್ರಶಂಸೆಗೆ ಒಳಪಟ್ಟಿತು. ಇದಕ್ಕಾಗಿ ನಾನು ಹರಿಣಾಕ್ಷಿ ಮೇಡಂ ಅವರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಅದೇ ಶಿಬಿರದ ಸಮಯದಲ್ಲಿ ಕಡಲತೀರದ ಸ್ವಚ್ಛತಾ ಕಾರ್ಯಕ್ರಮದ ವರದಿಯನ್ನು ಮಾಡಿ ಕಾಲೇಜಿನ ಪ್ರತಿನಿತ್ಯದ ಕ್ಯಾಂಪಸ್ ನ್ಯೂಸ್ ಬಝ್ ಅದರಲ್ಲಿ ಪ್ರಕಟಗೊಳಿಸುವಂತೆ ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ಮಾರ್ಗದರ್ಶನ ಮಾಡಿದವರು ನಮ್ಮ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಮಸೂದ ಮೇಡಂ ಅವರು. ತದನಂತರ ಮೊನ್ನೆ ಆಗಸ್ಟಿನಲ್ಲಿ ಬ್ಲಾಕ್‌ಚೈನ್‌ ತಂತ್ರಜ್ಞಾನ ಕಾರ್ಮಗಾರದ ಸಂದರ್ಭದಲ್ಲಿ ಈ ಕಾರ್ಯಾಗಾರದ ವರದಿಯನ್ನು ತಯಾರಿಸಿ ಮಂಡಿಸಲು ನನಗೆ ಅವಕಾಶ ನೀಡಿ ಮಾರ್ಗದರ್ಶನ ನೀಡಿದವರು ಡಾ.ನವನೀತ್ ಭಾಸ್ಕರ್ ಸರ್ ಹಾಗು ಶ್ರೀಮತಿ ಅಖಿಲ ತೇಜಸ್ವಿ ಮೇಡಂ ಅವರು. ಈ ಅವಕಾಶಗಳಿಂದ ನಾನು ಹಲವಾರು ವಿಷಯಗಳನ್ನು ಕಲಿತದ್ದು ಅಲ್ಲದೆ ನನ್ನ ಲೇಖನ ಬರೆಯುವ ಶೈಲಿಯನ್ನು ಸುಧಾರಿಸಲು ಸಹಕಾರಿಯಾಯಿತು. ನನಗೆ ಈ ಉತ್ತಮ ಅವಕಾಶಗಳನ್ನು ನೀಡಿದ ಎಲ್ಲಾ ಉಪನ್ಯಾಸಕರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಇನ್ನು ಕೆಲವೊಮ್ಮೆ ವರದಿಗಳನ್ನು,ರೆಕೋರ್ಡ್ ಪುಸ್ತಕ,ಎಸೈನ್ಮೆಂಟ್ ಅನ್ನು ಸಲ್ಲಿಸಲು ಉಪನ್ಯಾಸಕರ ಬಳಿ ಹೋದರೆ ಅವರು ನನ್ನ ಜೊತೆ ಮಾತನಾಡುತ್ತಿದ್ದದ್ದು ಅಲ್ಲದೇ ಹಲವಾರು ವಿಚಾರಗಳನ್ನು ಹಂಚುತ್ತಿದ್ದರು. ಇದರಿಂದ ನನ್ನ ಜ್ಞಾನ ಭಂಡಾರವನ್ನು ವೃದ್ಧಿಸಲು ಸಹಕಾರಿಯಾಯಿತು. ಹೆಚ್ಚಾಗಿ ನನ್ನ ಜೊತೆ ಮಾತನಾಡುತ್ತಿದ್ದದ್ದು ಶ್ರೀ ಪ್ರತೀಕ್ ಸರ್ ಹಾಗು ಶ್ರೀ ಗಣರಾಜ್ ಸರ್. ಇವರ ಜೊತೆಗೆ ಮಾತನಾಡುತ್ತಾ ನನ್ನ ಕೆಲವು ಸಂಹೇಗಳಿಗೆ ಉತ್ತರಗಳು ಸಿಗುತ್ತಿತ್ತು. ಕೆಲವೊಮ್ಮೆ ನನಗೆ ಬೇಕಾದ ಮಾರ್ಗದರ್ಶನ ನೀಡುತ್ತಿದ್ದರು. ಹೀಗೆ ಹಲವಾರು ವಿಚಾರಗಳನ್ನು ನಾನು ಕಲಿಯುತ್ತಿದ್ದೆ. ನಾನು ಪ್ರತೀಕ್ ಸರ್ ಹಾಗು ಗಣರಾಜ್ ಸರ್ ಅವರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಹೀಗೆ ಹೇಳುತ್ತಾ ಹೊರಟರೇ ಎಲ್ಲಾ ಉಪನ್ಯಾಸಕರಿಗೆ ಧನ್ಯವಾದಗಳನ್ನು ಹೇಳಲೇ ಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಏಳಿಗೆಯನ್ನು ಬಯಸಿ ಅದಕ್ಕಾಗಿ ಹಗಲಿರುಳು ದುಡಿಯುವವರು ಅವರು. ಅವರ ಆ ಶ್ರಮ,ಮಾರ್ಗದರ್ಶನ,ಪಾಠಗಳಿಂದಾಗಿ ಒಬ್ಬ ವಿದ್ಯಾರ್ಥಿಯು ಜ್ಞಾನ ಸಂಪಾದನೆ ಮಾಡುತ್ತಾನೆ. ಇದೇ ಸಂದರ್ಭದಲ್ಲಿ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಮುಸ್ತಾಫ ಬಸ್ತಿಕೋಡಿ ಸರ್ ಅವರನ್ನು ಕೂಡ ಸ್ಮರಿಸಿಕೊಳ್ಳಬೇಕು.ನನ್ನ ಲೇಖನ ಬರೆಯುವ ಶೈಲಿಯಿಂದ ಸಂತೋಷಗೊಂಡ ಅವರು ಮುಂದೆ ಲೇಖನ ಬರೆಯಲು ಪ್ರೋತ್ಸಾಹಿಸಿದರು.ಪ್ರತಿ ಬಾರಿಯೂ ನಾನು ಸ್ಮರಿಸಿಕೊಳ್ಳಬೇಕಾದದ್ದು ಪ್ರಥಮ ವರ್ಷ ವಿಭಾಗ ಹಾಗು ಗಣಿತ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ರಾವ್ ಸರ್ ಅವರನ್ನು. ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ನಾನು ವ್ಯಾಸಂಗ ಮಾಡುತ್ತಿರುವಾಗ ಅಲ್ಲಿ ಒಂದು ಕಾರ್ಯಾಗಾರಕ್ಕೆ ಅವರು ಬಂದಿರುವಾಗ ಒಂದು ಸಂದೇಹಕ್ಕೆ ಅವರ ಬಳಿ ಉತ್ತರ ಕೇಳಿದ್ದೆ. ವಿಧಿಯ ಆಟ ಯಾರು ಬಲ್ಲ! ಮುಂದೆ ಒಂದು ದಿನ ಸಹ್ಯಾದ್ರಿ ಕಾಲೇಜಿನಲ್ಲಿ ಕಲಿಯುವ ಅವಕಾಶ ಸಿಕ್ಕಿ,ಅವರು ನನಗೆ ಪಾಠಕ್ಕೆ ಸಿಗದಿದ್ದರೂ,ಅವರ ಬಳಿ ಹಲವು ವಿಷಯಗಳಿಗೆ ಅನುಮತಿ ಪತ್ರಕ್ಕೆ ಸಹಿ,ಯಕ್ಷಗಾನ ತಂಡ ಕಟ್ಟಲು ಹೊರಟಾಗ ಅವರು ನೀಡಿದ ಮಾರ್ಗದರ್ಶನ,ಈಗಲೂ ಅವರು ಸಿಕ್ಕಾಗಲೆಲ್ಲ ನಾನು ಮಾತನಾಡದಿದ್ದರೂ,ಅವರು ನನ್ನನ್ನು ಮಾತನಾಡಿಸಿ ಹೋಗುವುದು ಉಂಟು. ಅವರಿಗೂ ನಾನು ಧನ್ಯವಾದಗಳನ್ನು ಹೇಳಲೇ ಬೇಕು.

ಇನ್ನು ಹೇಳಲು ಹೊರಟರೆ ಕಾಲೇಜಿನಲ್ಲಿ ಪ್ರಥಮ ವರ್ಷದ ವ್ಯಾಸಂಗಕ್ಕಿಂತ ದ್ವಿತೀಯ ವರ್ಷದಲ್ಲಿ ನಾನು ಹೆಚ್ಚು ಆನಂದಪಟ್ಟೆ. ದ್ವಿತೀಯ ವರ್ಷದಲ್ಲಿ ನನಗೆ ನನ್ನ ಹಲವಾರು ಸಹಪಾಠಿಗಳ ಪರಿಚಯವಾಯಿತಲ್ಲದೆ ಅವರ ಜೊತೆಗೆ ಕಳೆದ ಪ್ರತಿಯೊಂದು ಕ್ಷಣಗಳು ಸುಂದರ ನೆನಪುಗಳನ್ನು ನೀಡಿತು. ನನ್ನ ಬೆಂಚಿನಲ್ಲಿ ಒಟ್ಟಿಗೆ ಕುಳಿತುಕೊಳ್ಳುವ ಆಪ್ತಮಿತ್ರರಾದ ಹೇಮಂತ್,ಯೋಗೀಶ್,ನನ್ನ ಹಿಂದೆ ಕುಳಿತುಕೊಳ್ಳುವ ಕೀರ್ತಿ ಪ್ರಸಾದ್,ವಿಜಯೇಂದ್ರ,ಚಂದನ್ ಎದುರು ಕುಳಿತುಕೊಳ್ಳುವ ಕೃಷ್ಣಚೇತನ್,ಸೂಚಕ್,ಶಮನ್ ಇವರ ಜೊತೆಗೆ ತರಗತಿಯಲ್ಲಿ ಚೇಷ್ಠೆಗಳನ್ನು ಮಾಡುತ್ತಾ ಮಜಾ ಮಾಡುತ್ತಿದ್ದೆವು. ಪ್ರತಿ ತರಗತಿಯಲ್ಲಿ ಸಂತೋಷದ ಕ್ಷಣಗಳನ್ನು ಕಳೆದದ್ದೂ ಇದೆ. ಬಸ್ಸಿನಲ್ಲಿ ಒಟ್ಟಾಗುತ್ತಿದ್ದ ನನ್ನ ಬಹುಕಾಲದ ಆಪ್ತಮಿತ್ರರು,ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳೇ ಆಗಿರುವ ರೋಹನ್,ಸೃಜನ್,ಆದಿತ್ಯ,ಸಹ್ಯಾದ್ರಿ ಕಾಲೇಜಿನಲ್ಲಿ ಪರಿಚಯ ಆಗಿ ಆಪ್ತರಾದ ಮಿತ್ರರಾದ ದೇವೀಶ್,ಅಭಿಷೇಕ್ ಇವರ ಜೊತೆಗೆ ಬಸ್,ರೈಲಿನಲ್ಲಿ ಪ್ರಯಾಣ ಬೆಳೆಸುತ್ತ ಜೊತೆಯಾಗಿ ಕಾಲೇಜಿಗೆ ಹೋಗಿ ಬರುತ್ತಿದ್ದ ದಿನಗಳು ಎಷ್ಟೋ! ಗೆಳೆಯರ ಜೊತೆಗೆ ಥಿಯೇಟರಿಗೆ ಹೋಗಿ ಸಿನಿಮಾ ನೋಡುವುದು,ಆಪ್ತಮಿತ್ರನಾದ ಪ್ರದ್ಯುಮ್ನನ ಜೊತೆಗೆ ಪರೀಕ್ಷೆಗೆ ತಯಾರಾಗುವುದು,ಪ್ರವಾಸಕ್ಕೆ ಹೋಗುವುದು,ಕಾಲೇಜಿನ ಬಳಿ ಇರುವ 'ಪೋಗೋ' ಎಂಬ ಫಾಸ್ಟ್ ಫುಡ್ ಅಂಗಡಿಗೆ ಹೋಗಿ ಪಾನಿಪುರಿ,ಮಸಾಲಪುರಿ ತಿನ್ನುವುದು,ಬೊಂಡಾ ಫ್ಯಾಕ್ಟರಿಗೆ ಹೋಗಿ ಬೊಂಡ ನೀರು ಕುಡಿಯುವುದು,ಐಸ್ಕ್ರೀಂ ತಿನ್ನುವುದು, ಆಪ್ತಮಿತ್ರರಾದ ಅಭಿಷೇಕ್ ಗದಾರ್,ಬಾಲಮುರಳಿ,ಹೇಮಂತ್,ಯೋಗೀಶ್ ಜೊತೆಗೆ ಮಧ್ಯಾಹ್ನ ಮಾಡುತ್ತಿದ್ದ ಊಟ,ಇವರ ಮೂಲಕ ಸಿಗುತ್ತಿದ್ದ ಕ್ಯಾಂಟಿನಿನ ಪಲ್ಯ,ಚಪಾತಿಯನ್ನು ತಿನ್ನುತ್ತಾ, ಊಟ ಮುಗಿಸಿ ತರಗತಿಗೆ ಓಡುತ್ತಾ, ಆಪ್ತಮಿತ್ರರಾದ ದರ್ಶಿತ್,ಸುಧೀಶ್, ಪ್ರಜ್ವಲ್ ಹೀಗೆ ಹೇಳುತ್ತಾ ಹೋದರೆ ಉದ್ದಾ ಪಟ್ಟಿಯೇ ಬರಬಹುದು. ಇವರೆಲ್ಲರ ಜೊತೆಗೆ ದ್ವಿತೀಯ ವರ್ಷದ ವ್ಯಾಸಂಗದಲ್ಲಿ ಕಳೆದ ಸುಂದರ,ಮರೆಯಲಾಗದ ಕ್ಷಣಗಳು ಅದೆಷ್ಟೋ! ಪ್ರಥಮ ವರ್ಷಕ್ಕಿಂತ ದ್ವಿತೀಯ ವರ್ಷ ಎಷ್ಟೋ ಸ್ಮರಣೀಯ ಕ್ಷಣಗಳನ್ನು ಕಟ್ಟಿಕೊಂಡಿತು. ಇದಕ್ಕೆ ಕಾರಣರಾದವರು ಈ ಆಪ್ತಮಿತ್ರರು. ಅವರಿಗೆಲ್ಲ ನಾನು ಧನ್ಯವಾದಗಳನ್ನು ಹೇಳಲೇಬೇಕು.
ದ್ವಿತೀಯ ವರ್ಷದ ವ್ಯಾಸಂಗ ಮುಗಿದು ಹೋಯಿತು,ಇನ್ನು ಮೂರನೆಯ ವರ್ಷದ ವ್ಯಾಸಂಗಕ್ಕೆ ದಾಪುಗಾಲು ಇಡುವ ದಿನಗಳು ಬರುತ್ತಿವೆ. ಇನ್ನು ಏನು ಕಣ್ಣು ಮುಚ್ಚಿ ಬಿಡುತ್ತಿರುವಾಗ ಎಂಜಿನಿಯರಿಂಗ್ ವ್ಯಾಸಂಗ ಮುಗಿದು ಬಿಡುತ್ತದೆ. ಆದರೆ ಏನೇ ಹೇಳಿ ಇಲ್ಲಿ ಸಿಗುವ ಅನುಭವ ಜೀವನದುದ್ದಕ್ಕೂ ನೆನಪು ಇರುತ್ತದೆ!
ಬರಹ: ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!