"ಜೀವನ" ಎಂಬ ಮಹಾ ಸಾಗರದಲ್ಲಿ ಮುಳುಗುತ್ತಿದ್ದ "ನಾನು" ಎಂಬ ಹಡಗನ್ನು ಎತ್ತಿಹಿಡಿದ ಮಹಾನ್ ಗುರುಗಳು!
"ಜೀವನ" ಎಂಬ ಮಹಾ ಸಾಗರದಲ್ಲಿ ಮುಳುಗುತ್ತಿದ್ದ "ನಾನು" ಎಂಬ ಹಡಗನ್ನು ಎತ್ತಿಹಿಡಿದ ಮಹಾನ್ ಗುರುಗಳು!
ಇವರು ನಾನು ಜೀವನದುದ್ದಕ್ಕೂ ಎಂದಿಗೂ ಮರೆಯಲಾಗದ ಮಹಾನ್ ವ್ಯಕ್ತಿಗಳು. ಅದು ಕೊರೋನ ಮಹಾಮಾರಿ ಇಡೀ ವಿಶ್ವಕ್ಕೆ ಬಡಿದ ಸಮಯ. ಆಗ ನಾನು ದ್ವಿತೀಯ ಪಿಯುಸಿಗೆ ಕಾಲಿಟ್ಟು ಒಂದು ತಿಂಗಳಾಗಿತ್ತು. ನಮಗೆಲ್ಲ ಆನ್‌ಲೈನ್ ತರಗತಿಗಳು ಆಗ ಆರಂಭಗೊಂಡಿತ್ತು. ಆದರೆ ಆನ್‌ಲೈನ್ ತರಗತಿಯಿಂದ ನನಗೇನೂ ಭೌತಿಕ ತರಗತಿಯಲ್ಲಿ ಪಾಠಗಳು ಅರ್ಥವಾಗುತ್ತಿದ್ದ ಹಾಗೆ ಅರ್ಥವಾಗುತ್ತಿರಲಿಲ್ಲ. ಅದು ಬೇರೆ ನಮಗೆ ಬೋರ್ಡ್ ಪರೀಕ್ಷೆಯ ಜೊತೆಗೆ ಜೆಇಇ,ಸಿಇಟಿ ಪರೀಕ್ಷೆಗಳಿಗೆ ಕೂಡ ತಯಾರಾಗಬೇಕಿತ್ತು. ಪ್ರತಿದಿನ ಬೆಳಗ್ಗೆ ತರಗತಿ ಕೇಳಲು ಕೂತರೇ ಸಂಜೆ ಮುಗಿಸುವುದು,ಮರುದಿನ ಆ ದಿನದ ತರಗತಿ ಕೇಳುವುದು ಇದೇ ಆಗಿತ್ತು. ಆದರೆ ನನ್ನ ಶೈಕ್ಷಣಿಕ ಸಾಧನೆ ಮಾತ್ರ ಶೂನ್ಯ! ಏನು ಆದರೂ ಒಂದು ಸುಲಭದ ಸಿಇಟಿ ಪರೀಕ್ಷೆಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಶಕ್ತನಾಗಿರಲಿಲ್ಲ ನಾನು. ಮಾಡಿದ ಪಾಠ ಒಂದು ತಲೆಗೆ ಹೋಗುತ್ತಿರಲಿಲ್ಲ. ಇದರಿಂದ ಬಹಳ ಕಂಗೆಟ್ಟಿದ್ದ ನಾನು ಎಂಜಿನಿಯರಿಂಗ್ ಕಲಿಯುವ ಆಸೆಯನ್ನು ಬಿಟ್ಟಿದ್ದೆ. ಈ ಸಂದರ್ಭದಲ್ಲಿ ನನಗೆ ಸಮಾಧಾನ ಮಾಡಿ,ಧೈರ್ಯ ತುಂಬಿ,ನನಗೆ ಸರಿಯಾಗಿ ರಸಾಯನಶಾಸ್ತ್ರ ,ಭೌತಶಾಸ್ತ್ರದ ಪಾಠಗಳನ್ನು ಮಾಡಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮಟ್ಟಿಗೆ ಬೆಳೆಸಿದವರು ನನ್ನ ಈ ಮೂವರು ಗುರುಗಳು. ಅಂಬಿಕ ಪದವಿಪೂರ್ವ ವಿದ್ಯಾಲಯ, ಬಪ್ಪಳಿಗೆ ಇಲ್ಲಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಶ್ರೀ ರಾಮಚಂದ್ರ ಸರ್, ಅದೇ ಕಾಲೇಜಿನಲ್ಲಿ ಆಗ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಶಂಕರನಾರಾಯಣ ಭಟ್ ಸರ್ ಹಾಗು ಅಂಬಿಕ ಪದವಿಪೂರ್ವ ವಿದ್ಯಾಲಯ,ನೆಲ್ಲಿಕಟ್ಟೆ ಇಲ್ಲಿ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಪ್ರಾಂಶುಪಾಲರಾಗಿರುವ ಶ್ರೀ ಸತ್ಯಜಿತ್ ಉಪಾಧ್ಯಾಯ ಸರ್.
![]() | ||
ಶ್ರೀ ರಾಮಚಂದ್ರ ಸರ್ |
ಕೊರೋನ ಮಹಾಮಾರಿ ಆರಂಭಗೊಂಡ ಸಂದರ್ಭದಲ್ಲಿ ರಾಮಚಂದ್ರ ಸರ್ ಅವರ ಮನೆ ನನ್ನ ಮನೆಯ ಹತ್ತಿರ ಇದ್ದ ಕಾರಣ "ನೀನು ಎನ್ನ ಮನೆಗೆ ದಿನಾಲು ಬಾ,ಆನು ನಿನಗೆ ಪಾಠ ಮಾಡ್ತೆ" ಅಂತ ನನಗೆ ಹೇಳಿದರು. ಆರಂಭದಲ್ಲಿ ಲಾಕ್ಡೌನ್ ಅಲ್ಲ ಮನೆಯಲ್ಲಿ ಆರಾಮ ಮಾಡ್ತೇನೆ ಎನ್ನುವ ಮನೋಭಾವದಲ್ಲಿದ್ದ ನಾನು ಮನಸ್ಸಿಲ್ಲದ ಮನಸ್ಸಿನಿಂದ ರಸಾಯನಶಾಸ್ತ್ರ ಪಾಠ ಕೇಳಲು ಅವರ ಮನೆಗೆ ಹೋಗುತ್ತಿದ್ದೆ. ಆದರೆ ಅದರ ಬೆಲೆ ನನಗೆ ನಂತರ ಅರಿವಾಯಿತು. ಅವರು ಬಹಳ ಚೆನ್ನಾಗಿ ಮಾಡಿದ ಪಾಠದ ಫಲ ಕೊನೆಗೆ ನಾನು ಪಡೆದೆ. ನಮಗೆ ಬೋರ್ಡ್ ಪರೀಕ್ಷೆ ರದ್ದುಗೊಂಡಾಗ ಸಿಇಟಿ ಪರೀಕ್ಷೆಯ ತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡೆ. ಆ ಸಂದರ್ಭದಲ್ಲಿ ಅಂದು ಅವರು ಮಾಡಿದ ಪಾಠದಿಂದ ಸ್ವಲ್ಪ ಸುಲಭವಾಗಿ ತಯಾರು ಮಾಡಿಕೊಳ್ಳುಲು ಆಯಿತು. ಸಾವಯವ ರಸಾಯನಶಾಸ್ತ್ರದಂತಹ ಕಷ್ಟ ವಿಷಯದ ಪ್ರಶ್ನೆಗಳು ನನಗೆ ತಲೆಬುಡವು ಅರ್ಥ ಆಗುತ್ತಿರಲಿಲ್ಲ. ಅದನ್ನೆಲ್ಲ ಸುಲಭವಾಗಿ ನನಗೆ ಅರ್ಥ ಮಾಡಿಸಿದವರು ರಾಮಚಂದ್ರ ಸರ್.ನಾನು ಸಣ್ಣಪುಟ್ಟ ತಪ್ಪು ಮಾಡಿದರೂ ಅದನ್ನು ತಿದ್ದಿ ಸರಿಪಡಿಸುತ್ತಿದ್ದವರು ಅವರು. ಈಗಲೂ ಅಷ್ಟೇ ರಸಾಯನಶಾಸ್ತ್ರದ ಬಗ್ಗೆ ನನಗೆ ಏನಾದರು ಮಾಹಿತಿ ಬೇಕಿದ್ದರೆ ಮೊದಲು ಕೇಳುವುದೇ ಅವರ ಬಳಿ.
![]() |
ಶ್ರೀ ಸತ್ಯಜಿತ್ ಉಪಾಧ್ಯಾಯ ಸರ್ |
![]() |
ಅದೇ ರೀತಿ ನನಗೆ ಬೆಂಬಲ ನೀಡಿ,ಭೌತಶಾಸ್ತ್ರ ಪಾಠ ಮಾಡುತ್ತಿದ್ದವರು ಶ್ರೀ ಶಂಕರನಾರಾಯಣ ಭಟ್ ಸರ್. ಶಂಕರನಾರಾಯಣ ಭಟ್ ಸರ್ ಅವರು ಬಪ್ಪಳಿಗೆಯಲ್ಲಿರುವ ಅಂಬಿಕ ಪದವಿಪೂರ್ವ ವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದ ಕಾರಣ ನನಗೆ ಕಾಲೇಜಿನಲ್ಲಿ ಅವರ ಪಾಠ ಕೇಳುವ ಅವಕಾಶ ಇರಲಿಲ್ಲ. ಆದರೆ ಅವರ ಮನೆ ನನ್ನ ಮನೆಯಿಂದ ಸ್ವಲ್ಪವೇ ದೂರದಲ್ಲಿದ್ದ ಕಾರಣ ಸಿಇಟಿ ಪರೀಕ್ಷೆಗೆ ತಯಾರು ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಅವರ ಬಳಿ ಪಾಠ ಕೇಳಲು, ಸಂದೇಹವಿದ್ದ ಪ್ರಶ್ನೆಗಳಿಗೆ ಉತ್ತರ ಕೇಳಲು,ಅವರ ಮುಂದೆಯೇ ಕೂತು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹೋಗುತ್ತಿದ್ದೆ. ಭೌತಶಾಸ್ತ್ರ ನನ್ನ ನೆಚ್ಚಿನ ವಿಷಯ ಆಗಿದ್ದರೂ ಸಹ ನನಗೆ ಹೆಚ್ಚು ಕಷ್ಟವಾಗುತ್ತಿದ್ದ ವಿಷಯವು ಆಗಿತ್ತು. ಭೌತಶಾಸ್ತ್ರ ನನಗೆ ಸುಲಭದ ವಿಷಯ ಆಗುವಂತೆ ಮಾಡಿದವರು ಇವರು ಹಾಗು ಸತ್ಯಜಿತ್ ಸರ್. ಶಂಕರನಾರಾಯಣ ಭಟ್ ಅವರು ಸಮಾಧಾನದಿಂದ ಪಾಠ ಮಾಡುತ್ತಿದ್ದರಲ್ಲದೆ ಪ್ರತಿದಿನವು ನಾನು ಹಾಗು ನನ್ನ ಗೆಳೆಯ ರಾಮಶ್ರೀನಿಧಿ ಜೊತೆಯಾಗಿ ಪರೀಕ್ಷೆಗೆ ಓದುತ್ತಿದ್ದಾಗ ಆಯಾಯ ದಿನದ ಬೆಳವಣಿಗೆಯ ಬಗ್ಗೆ ಮಾಹಿತಿ ಕೇಳಿ ಸೂಕ್ತ ಸಲಹೆ,ಸೂಚನೆಗಳನ್ನು ನೀಡಿ ಮಾರ್ಗದರ್ಶನ ಮಾಡುತ್ತಿದ್ದರು. ನಾನು ಏನು ಓದದಿದ್ದರೆ ಅವರಿಗೆ ಏನು ಹೇಳಲಿ ಎಂಬ ಭಯವು ನನಗಿತ್ತು. ಆ ಭಯದಿಂದಾಗಿ ಆದರೂ ನಾನು ಪ್ರತಿದಿನ ಓದುತ್ತಿದ್ದೆ. ಅಂದು ಅವರು ನನಗೆ ಮಾರ್ಗದರ್ಶನ ಮಾಡದಿದ್ದರೆ ಸಿಇಟಿಯಲ್ಲಿ ಸರಿಯಾಗಿ ನಾನು ಪ್ರಶ್ನೆಗಳಿಗೆ ಉತ್ತರಿಸುತ್ತಿರಲಿಲ್ಲ.
ಪದವಿಪೂರ್ವ ಶಿಕ್ಷಣ ಒಬ್ಬ ವಿದ್ಯಾರ್ಥಿಯ ಜೀವನದ ಪ್ರಮುಖ ಕಾಲಘಟ್ಟ.ಮುಂದಿನ ಪದವಿಯನ್ನು ಪಡೆಯಲು ಸೂಕ್ತ ಪಥವನ್ನು ನಿರ್ಧರಿಸುವುದು ಪಿಯುಸಿಯಲ್ಲಿ. ಎಂಜಿನಿಯರಿಂಗ್,ವೈದ್ಯಕೀಯ ಪದವಿ ಅಥವ ಬೇರೆ ಯಾವುದೇ ಒಂದು ಪದವಿಯನ್ನು ಪಡೆಯಲು ಉತ್ತಮ ವಿದ್ಯಾಸಂಸ್ಥೆಗೆ ದಾಖಲಾಗಲು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಇದೇ ಕಾಲಘಟ್ಟದಲ್ಲಿ. ಇಂತಹ ಮಹತ್ವದ ಕಾಲಘಟ್ಟದಲ್ಲಿ ಮುಗ್ಗರಿಸುತ್ತಿದ್ದ ನನ್ನನ್ನು ಎತ್ತಿ ಹಿಡಿದು ಸರಿಯಾದ ಪಥದಲ್ಲಿ ಸಾಗುವಂತೆ ಮಾಡಿ ಪ್ರಸ್ತುತ ಸಹ್ಯಾದ್ರಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆಯಲು ಆದದ್ದು ಈ ಮೂರು ಮಹಾನ್ ಗುರುಗಳಿಂದಾಗಿ. ಆದ್ದರಿಂದ ಇವರನ್ನು ನಾನು ಸ್ಮರಿಸದಿದ್ದರೆ ಎಂಜಿನಿಯರಿಂಗ್ ಮುಗಿಸಿದರೆ ಅದರ ಸಾರ್ಥಕತೆ ನನಗೆ ಸಿಗಲಿಕ್ಕಿಲ್ಲ. ಗುರು ಪೂರ್ಣಿಮೆಯ ಈ ಶುಭ ದಿನದಂದು ಗುರುಗಳನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದ್ದರಿಂದ ನನ್ನ ಮಹಾನ್ ಗುರುಗಳನ್ನು ಸ್ಮರಿಸುತ್ತಾ ಈ ಲೇಖನಕ್ಕೆ ಮಂಗಳ ಹಾಡುತ್ತೇನೆ.
||ಶ್ರೀ ಗುರುಭ್ಯೋ ನಮಃ||

Comments
Post a Comment