"ಹರಿಹರ"ರು ನೆಲೆ ನಿಂತ ಊರು ಪಲ್ಲತ್ತಡ್ಕ!

 

"ಹರಿಹರ"ರು ನೆಲೆ ನಿಂತ ಊರು ಪಲ್ಲತ್ತಡ್ಕ!

ಹಲವು ಸಮಯದಿಂದ ನನ್ನ ಊರು ಹರಿಹರಪಲ್ಲತ್ತಡ್ಕದಲ್ಲಿರುವ ಶ್ರೀ ಹರಿಹರೇಶ್ವರ ದೇವಸ್ಥಾದ ಬಗ್ಗೆ ಒಂದಲ್ಲ ಒಂದು ಪೋಸ್ಟ್ ಬರೆಯುತ್ತಲೆ ಇದ್ದೆ. ಆದರೆ ಒಮ್ಮೆಯೂ ಶ್ರೀ ಕ್ಷೇತ್ರದ ಪರಿಚಯ ನಾನು ಮಾಡಿರಲಿಲ್ಲ. ಇಂದು ಏಕೋ ನಿಮಗೆ ನನ್ನ ಊರಿನ ಪವಿತ್ರ,ಕಾರಣಿಕ ಹರಿಹರೇಶ್ವರ ದೇವರ ಕ್ಷೇತ್ರದ ಪರಿಚಯ ಮಾಡುವ ಆಸೆ ನನಗೆ ವ್ಯಕ್ತವಾಯಿತು. ಹಾಗಾಗಿ ಈ ಲೇಖನ ಬರೆಯುತ್ತಿದ್ದೇನೆ.
 
Image source: Google

ಶ್ರೀ ಹರಿಹರೇಶ್ವರ ದೇವಸ್ಥಾನ ದಕ್ಷಿಣ ಭಾರತದ ಪರಶುರಾಮ ಸೃಷ್ಟಿಯ ಈ ತುಳುನಾಡಿನಲ್ಲಿ ಪಶ್ಚಿಮ ಘಟ್ಟದ ತಪ್ಪನಲ್ಲಿರುವ ಒಂದು ಪುಣ್ಯ ತ್ರಿವೇಣಿ ಸಂಗಮ ಕ್ಷೇತ್ರ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ತಾಲೂಕು ಸುಳ್ಯ ಈ ಸುಳ್ಯ ತಾಲೂಕಿನ ಹರಿಹರಪಲ್ಲತ್ತಡ್ಕ ಎಂಬ ಒಂದು ಹಳ್ಳಿಯಲ್ಲಿ ಶ್ರೀ ಹರಿಹರೇಶ್ವರ ದೇವರು ನೆಲೆಸಿದ್ದಾರೆ. 
 

ಇತಿಹಾಸ/ಸ್ಥಳ ಪುರಾಣ:
ಇತಿಹಾಸದ ಪ್ರಕಾರ ಸಾವಿರಾರು ವರ್ಷಗಳ ಮೊದಲು ಒರ್ವ ಋಷಿಗಳು ತಮ್ಮ ಸಂಚಾರದ ಸಮಯದಲ್ಲಿ ಪಲ್ಲತ್ತಡ್ಕ ಎಂಬ ಊರಿಗೆ ಬಂದಾಗ ಅಲ್ಲಿ ಮೂರು ನದಿಗಳು ಸಂಗಮ ಆಗುವ ಸ್ಥಳವನ್ನು ಕಂಡು ಸಂತೋಷಗೊಂಡು ಅಲ್ಲಿ ಹರಿಹರೇಶ್ವರ ದೇವರನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಿದರು ಎಂಬ ನಂಬಿಕೆಯಿದೆ. 
 
ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಜಾಲತಾಣದಲ್ಲಿ ನೀಡಿದ ವಿವರಾನುಸಾರ ದೇವಾಲಯದ ಪೂರ್ವದಿಕ್ಕಿನಲ್ಲಿರುವ ಸುಮಾರು ಐದು ಸಾವಿರ ವರುಷಗಳಿಗೂ ಹಿಂದೆ ರಾಕ್ಷಸರ ನಿಗ್ರಹಕ್ಕಾಗಿ ಮುನಿ ಶ್ರೇಷ್ಠರು ವಿಶಿಷ್ಠವಾದ ಯಾಗವನ್ನು ಮಾಡಿದ್ದರೆಂದೂ, ಆ ಯಾಗಕ್ಕೆ ಭರತ ಖಂಡದ ಸಹಸ್ರಾರು ಪುಣ್ಯ ಕ್ಷೇತ್ರಗಳಿಂದ ತೀರ್ಥವನ್ನು ತಂದು ಯಾಗಕ್ಕೆ ಬಳಸಿದ್ದರೆನ್ನಲಾಗುತ್ತಿದ್ದೆ. ಆ ರೀತಿಯಾಗಿ ರಾಕ್ಷಸರ ಸಂಹಾರವಾದ ಬಳಿಕ ಯಾಗವನ್ನು ನಡೆಸಿದ ಮುನಿಗಳು ತಮ್ಮ ಕಮಂಡಲದ ವೇದೋದಕಗಳನ್ನು ನದಿಗೆ ಎರೆದರೆನ್ನುವ ದಂತಕತೆಯಿದೆ. ಸಿದ್ದ ಪರ್ವತದಿಂದ ಹರಿದು ಬರುವ ನದಿಯು ”ಕೋಟಿ ತೀರ್ಥ”ವೆಂದು ಪ್ರಸಿದ್ದಿಯಾಗಿದೆ. ಈ ನದಿಯು ಸಂಗಮವಾಗುವ ಹರಿಹರೇಶ್ವರ ನೆಲೆಯಲ್ಲಿ ಪುಣ್ಯಸ್ನಾನ ಮಾಡಿ ಹರಿಹರೇಶ್ವರನ ದರ್ಶನ ಪಡೆಯುವುದರಿಂದ ಔಷಧಿ ರಹಿತವಾಗಿ ಕಾಯಿಲೆಗಳು, ಮನೋರೋಗ, ಚರ್ಮರೋಗಾಧಿಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಅಲ್ಲದೇ ಸಕಲ ಪಾಪ ನಿವಾರಣೆ ಆಗಿ ಮುಕ್ತಿಯನ್ನು ಕರುಣೆಸುವ ಕ್ಷೇತ್ರವಾಗಿ ಸಹಸ್ರಾರು ಭಕ್ತರನ್ನು ಆಕರ್ಷಿಸುವ ಕ್ಷೇತ್ರವೆಂದು ಇಲ್ಲಿನ ಭಕ್ತರ ಅಚಲವಾದ ನಂಬಿಕೆಯಾಗಿದೆ.
 
ಋಷಿ ಮುನಿಗಳು ತಪಸ್ಸುಗೈದ ಪಾವನ ಸ್ಥಳವು ಈ ಕೇತ್ರವಾಗಿದ್ದು ಇಲ್ಲಿ ಮಾಡಿಸಿದ ಶನಿಪೂಜೆಗೆ ವಿಶೇಷ ಶಕ್ತಿ ಇರುತ್ತದೆ. ಶ್ರೀ ಹರಿಹರೇಶ್ವರ ಸಂಗಮದಲ್ಲಿ ತುಲಾ ಸಂಕ್ರಮಣದ ದಿನ ತೀರ್ಥ ಉದ್ಭವವಾಗುತ್ತದೆ ಎಂಬ ನಂಬಿಕೆಯಿದೆ. ಆ ದಿನದಂದು ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ತೀರ್ಥಸ್ನಾನ ಮಾಡುತ್ತಾರೆ ಹಾಗೂ ಮೃತರಿಗೆ ಪಿಂಡ ಪ್ರಧಾನವನ್ನು ಮಾಡುತ್ತಾರೆ ಈಗಲೂ ತುಲಾ ಮಾಸಾರಂಭದ ದಿನ ಭಕ್ತಾಧಿಗಳು ಬಂದು ತೀರ್ಥಸ್ನಾನ ಮಾಡುವ ಪದ್ದತಿ ರೂಢಿಯಲ್ಲಿದೆ. ತ್ರಿವೇಣಿ ಸಂಗಮ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ ಈ ಕ್ಷೇತ್ರದಲ್ಲಿ ತಲಕಾವೇರಿಯಲ್ಲಿ ಯಾವ ರೀತಿ ತೀರ್ಥೋದ್ಭವ ಆಗುತ್ತದೆಯೋ, ಶ್ರೀ ದೇವಸ್ಥಾನದ ಎದುರು ಸಂಗಮ ಕ್ಷೇತ್ರದಲ್ಲಿ ಅಂಥಹುದೇ ತೀರ್ಥೋದ್ಭವವಾಗುತ್ತದೆ.
 
ಹರಿ ಮತ್ತು ಹರರು ಒಂದೇ ಬಿಂಬದಲ್ಲಿ(ಲಿಂಗರೂಪ) ಸಂಕಲ್ಪಿಸಲ್ಟಟ್ಟ ವಿರಳವಾದ ವಿಶಿಷ್ಠವಾದ ಕ್ಷೇತ್ರ ಇದಾಗಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಭಾರತದ ಕೆಲವೇ ಪುಣ್ಯಕ್ಷೇತ್ರಗಳಲ್ಲಿ ಇದು ಒಂದಾಗಿದೆ. ಭಕ್ತರ ಇಷ್ಟಾರ್ಥ ಸಿದ್ದಿಯಾಗಿ, ಪಾಪನಾಶಕವಾಗುತ್ತದೆ. ದೇವಾಲಯಕ್ಕೆ ಸ್ಥಳೀಕರಲ್ಲದೇ ದೂರದ ಊರುಗಳಿಂದಲೂ ಭಕ್ತಾದಿಗಳು ಬಂದು ಈ ಪುಣ್ಯ ಕೇತ್ರದಲ್ಲಿ ತೀರ್ಥಸ್ನಾನ ಮಾಡಿ ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಿರುತ್ತಾರೆ.
ಪ್ರಸ್ತುತ ಇರುವ ಶಿಲಾಮೂರ್ತಿಯು ಲಿಂಗಸ್ವರೂಪಿಯಾಗಿದ್ದು ಸುಮಾರು 800 ವರ್ಷಗಳ ಹಿಂದೆ ಉತ್ತರ ಕರ್ನಾಟಕದಿಂದ ಲಿಂಗಾಯತ ಅರಸರು ತಂದು ಸ್ಥಾಪಿಸಿದರು ಎಂದು ಪ್ರತೀತಿ. ಆ ನಂತರ ಬಲ್ಲಾಳರ ಆಡಳಿತವು ಕೊನೆಗೊಂಡ ನಂತರ ಕೊಡಗಿನ ಅರಸರ ಆಡಳಿತದಲ್ಲಿತ್ತು. ರಾಜ್ಯಾಡಳಿತದ ಕಾಲದಲ್ಲಿ ದೇವಾಲಯಕ್ಕೆ ಸಾಕಷ್ಟು ಕೃಷಿ ಭೂಮಿಯನ್ನು ಬಳುವಳಿ ನೀಡಲಾಗಿತ್ತು ಇದು ಈ ದೇವಾಲಯದ ಇತಿಹಾಸವನ್ನು ಸಾರುತ್ತದೆ. 

 
ಇಲ್ಲಿ ಹರಿ(ವಿಷ್ಣು) ಹಾಗು ಹರ(ಶಿವ) ದೇವರು ಜೊತೆಯಾಗಿ ದರ್ಶನ ನೀಡುತ್ತಾರೆ. ಅರ್ಧ ಭಾಗ ವಿಷ್ಣು ಆದರೆ ಇನ್ನುಳಿದ ಅರ್ಧ ಶಿವ ದೇವರು ಹಾಗಾಗಿ "ಹರಿಹರೇಶ್ವರ" ಎಂದು ಕರೆಯಲಾಗುತ್ತದೆ. ಈ ಕ್ಷೇತ್ರವು "ಶನಿ ಪೂಜೆ"ಗೆ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ.ಇಲ್ಲಿ ಶನಿ ಪೂಜೆಯನ್ನು ಮಾಡಿಸಿದರೆ ಶನಿ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಶನಿವಾರದಂದು ದೂರದ ಊರುಗಳಿಂದ,ಹೊರರಾಜ್ಯಗಳಿಂದಲೂ ಇಲ್ಲಿಗೆ ಭಕ್ತಾದಿಗಳು ಬಂದು ಶನಿ ಪೂಜೆಯನ್ನು ಮಾಡಿಸುತ್ತಾರೆ. ಈ ದೇವಸ್ಥಾನದ ಮತ್ತೊಂದು ವಿಶೇಷತೆ ಏನೆಂದರೆ ಇಲ್ಲಿಗೆ ಬರುವ ಎಲ್ಲಾ ಭಕ್ತಾಧಿಗಳಿಗೂ ಯಾವುದೇ ತಾರತಮ್ಯವಿಲ್ಲದೆ ಅನ್ನಪ್ರಸಾದವನ್ನು ನೀಡಲಾಗುತ್ತಿದೆ. ಯಾವುದೇ ಕಷ್ಟಗಳು ಎದುರಾದಾಗ ಶ್ರೀ ದೇವರಿಗೆ ಶರಣಾಗಿ ದೇವರ ನಡೆಯಲ್ಲಿ ನಿಂತು ಪ್ರಾರ್ಥಿಸಿದರೆ ಅವರನ್ನು ಶ್ರೀ ದೇವರು ರಕ್ಷಿಸುತ್ತಾರೆ ಎಂಬ ನಂಬಿಕೆಯಿದೆ. ಇದಕ್ಕೆ ನಾನು ಕೂಡ ಸಾಕ್ಷಿಯಾಗಿದ್ದೇನೆ. ಅಷ್ಟೇ ಅಲ್ಲದೆ ಯಾವುದೇ ಶುಭ ಕಾರ್ಯ ಆಗುವ ಮೊದಲು ಊರಿನ ಜನರು ಅಥವ ಬೇರೆ ಯಾರೆ ಆಗಲಿ ಶ್ರೀ ದೇವರ ಬಳಿ ಬಂದು ಪ್ರಾರ್ಥಿಸುವುದಲ್ಲದೆ ಮಾಡುವ ಶುಭ ಕಾರ್ಯವು ಯಾವುದೇ ಅಡೆತಡೆಗಳಿಲ್ಲದೆ ನೆರವೇರಲಿ ಎಂದು ಎರಡು ತೆಂಗಿನಕಾಯಿಯನ್ನು ಸಮರ್ಪಿಸಿ ಪ್ರಾರ್ಥಿಸಿದರೆ ಸ್ವಲ್ಪವು ಕಾರ್ಯಕ್ಕೆ ಅಡ್ಡಿಯಾಗದೆ ಶುಭ ಕಾರ್ಯ ಪೂರ್ಣಗೊಳ್ಳುತ್ತದೆ.
 
ಪ್ರಸ್ತುತ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಡಿ ಒಳಪಡುವ ಈ ದೇವಸ್ಥಾನದಲ್ಲಿ ಪ್ರತಿ ವರ್ಷವು ಫೆಬ್ರವರಿ ಅಥವ ಮಾರ್ಚ್ ತಿಂಗಳಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗು ಜಾತ್ರೋತ್ಸವ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲ ಇವರ ನೇತೃತ್ವದಲ್ಲಿ ಊರ-ಪರವೂರ ಭಕ್ತರ ಸಹಕಾರದಿಂದ ವೈಭವದಿಂದ ಜರಗುತ್ತದೆ. ಶ್ರೀ ಕ್ಷೇತ್ರದಲ್ಲಿ ಶನಿ ಪೂಜೆ ವಿಶೇಷವಾದರೆ ಪ್ರತಿದಿನ ಶ್ರೀ ಹರಿಹರೇಶ್ವರ ದೇವರಿಗೆ ಪ್ರಮುಖವಾಗಿ ರುದ್ರಾಭಿಷೇಕ,ಹೂವಿನ ಪೂಜೆ,ವಿಷ್ಣು ಸಹಸ್ರನಾಮ ಪಠಣ,ಕ್ಷೀರಾಭಿಷೇಕ,ಹಾಲು ಪಾಯಸ ಸೇವೆ,ಮಂಗಳಾರತಿ ಶ್ರೀ ಮಹಾಗಣಪತಿ ದೇವರಿಗೆ ಪಂಚಕಜ್ಜಾಯ ಹಾಗು ಇತರ ಸೇವೆಗಳು ಶ್ರೀ ದೇವರ ಸನ್ನಿಧಿಯಲ್ಲಿ ನಡೆಯುತ್ತಿದೆ. ಪ್ರಸ್ತುತ ಶ್ರೀ ಹರಿಹರೇಶ್ವರ ದೇವಸ್ಥಾನ ಪ್ರಧಾನ ಅರ್ಚಕರಾಗಿ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ಅವರು ಭಕ್ತಿ,ಶ್ರದ್ಧೆಯಿಂದ ಶ್ರೀ ದೇವರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಜೊತೆಗೆ ಸಹಾಯಕ ಅರ್ಚಕರಾಗಿ ಶ್ರೀ ಕೃಷ್ಣಕುಮಾರ ಬಿ,ಶ್ರೀ ಮಹೇಶ್ ಭಟ್ ಕಿರಿಭಾಗ ಅವರು ಭಕ್ತಿಪೂರ್ವಕವಾಗಿ ಶ್ರೀ ದೇವರ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

 
ಶ್ರೀ ಹರಿಹರೇಶ್ವರ ದೇವಸ್ಥಾನ ತಲುಪುವ ದಾರಿ:
ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಿಂದ 8 ಕಿ.ಮಿ ದೂರದಲ್ಲಿರುವ ಶ್ರೀ ಕ್ಷೇತ್ರಕ್ಕೆ ತಾವು ಸುಬ್ರಹ್ಮಣ್ಯಕ್ಕೆ ಬಂದಾಗ ಭೇಟಿ ನೀಡಬಹುದು. ಸುಬ್ರಹ್ಮಣ್ಯದಿಂದ ಸುಳ್ಯ ಮಾರ್ಗದಲ್ಲಿ ಸಾಗಿ ಮಲೆಯಾಳ ಎಂಬಲ್ಲಿ ಎಡ ಭಾಗಕ್ಕೆ ತಿರುಗಿ 5 ಕಿ.ಮಿ ಸಾಗಿದರೆ ಶ್ರೀ ಹರಿಹರೇಶ್ವರ ದೇವಸ್ಥಾನ ತಲುಪಬಹುದಾಗಿದೆ. ಸುಬ್ರಹ್ಮಣ್ಯದಿಂದ ಹರಿಹರಪಲ್ಲತ್ತಡ್ಕ ಭಾಗಕ್ಕೆ ಸರಿಯಾಗಿ ಸರಕಾರಿ ಬಸ್ಸು ಸೇವೆ ಇಲ್ಲದಿರುವ ಕಾರಣ ನೀವು
ಶ್ರೀ ದೇವಸ್ಥಾನಕ್ಕೆ ನಿಮ್ಮ ಸ್ವಂತ ವಾಹನ ಇಲ್ಲದಿದ್ದರೆ ಸುಬ್ರಹ್ಮಣ್ಯದಿಂದ ಬದಲು ವಾಹನ ವ್ಯವಸ್ಥೆ ಮಾಡಿ ತಲುಪಬಹುದಾಗಿದೆ. ತಾಲೂಕು ಕೇಂದ್ರವಾದ ಸುಳ್ಯದಿಂದ ಹರಿಹರಪಲ್ಲತ್ತಡ್ಕಕ್ಕೆ(ಬಾಳುಗೋಡು,ಕೊಲ್ಲಮೊಗ್ರಕ್ಕೆ ಸಾಗುವ ಬಸ್ಸುಗಳು)ಬೇಕಾದಷ್ಟು ಸರಕಾರಿ ಬಸ್ಸುಗಳ ಸೇವೆಯಿದೆ. ಜೊತೆಗೆ ಪುತ್ತೂರಿನಿಂದ ಪ್ರತಿದಿನ 4 ಬಸ್ಸುಗಳು ಬಾಳುಗೋಡಿಗೆ ಹಾಗು ಸಂಜೆ 1 ಬಸ್ಸು ಕೊಲ್ಲಮೊಗ್ರಕ್ಕೆ ಸರಕಾರಿ ಬಸ್ಸು ಸೇವೆಯಿದೆ. ಸುಬ್ರಹ್ಮಣ್ಯದಿಂದ ಬಸ್ಸಿನಲ್ಲಿ ನಡುಗಲ್ಲು ಎಂಬಲ್ಲಿಗೆ ಬಂದರೆ ಅಲ್ಲಿಂದ ಹರಿಹರಪಲ್ಲತ್ತಡ್ಕ ಕಡೆಗೆ ಹೋಗುವ ಬಸ್ಸಿನಲ್ಲಿ ಸಹ ನೀವು ಶ್ರೀ ಹರಿಹರೇಶ್ವರ ದೇವಸ್ಥಾನ ತಲುಪಬಹುದಾಗಿದೆ.
 
ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಹತ್ತಿರದಲ್ಲಿರುವ ಬಸ್ಸು ನಿಲ್ದಾಣ: ಹರಿಹರಪಲ್ಲತ್ತಡ್ಕ
ಹತ್ತಿರದ ಪ್ರಮುಖ ಬಸ್ಸು ನಿಲ್ದಾಣ: ಕುಕ್ಕೆ ಸುಬ್ರಹ್ಮಣ್ಯ(8 ಕಿ.ಮಿ)
ಹತ್ತಿರದಲ್ಲಿರುವ ರೈಲು ನಿಲ್ದಾಣ: ಸುಬ್ರಹ್ಮಣ್ಯ ರೋಡ್(21 ಕಿ.ಮಿ)
ಹತ್ತಿರದಲ್ಲಿರುವ ವಿಮಾನ ನಿಲ್ದಾಣ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(117 ಕಿ.ಮಿ)
ಶ್ರೀ ದೇವಸ್ಥಾನದ ಪೂಜಾ ಸಮಯ:
ದರ್ಶನ ಸಮಯ:
ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ
ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯ ತನಕ
ಬೆಳಗ್ಗೆಯ ಪೂಜೆ: 8:00-8:15 ತನಕ
ಮಹಾಪೂಜೆ: ಮಧ್ಯಾಹ್ನ 12:00-12:15 ತನಕ
ರಾತ್ರಿಯ ಪೂಜೆ: ರಾತ್ರಿ 8 ಗಂಟೆ
ಬಾಲ್ಯದಿಂದಲೇ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಕುಣಿದು ನಲಿಯುತ್ತಾ ಬೆಳೆದ ನಾನು ಈ ಪುಟ್ಟ ಲೇಖನವನ್ನು ಶ್ರೀ ದೇವರ ಚರಣಕ್ಕೆ ಸಮರ್ಪಿಸುತ್ತಿದ್ದೇನೆ. ಶ್ರೀ ಹರಿಹರೇಶ್ವರ ದೇವರು ಹಾಗು ಶ್ರೀ ಮಹಾಗಣಪತಿ ದೇವರು ಎಲ್ಲರನ್ನು ಅನುಗ್ರಹಿಸಿ,ಲೋಕಕ್ಕೆ ಸನ್ಮಂಗಲ ಉಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ.
🖊ಬರಹ:
ಶ್ರೀಕರ ಬಿ
 
 
 
 

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!