ನನ್ನ ಬೇಲೂರು-ಹಳೆಬೀಡು ಪ್ರವಾಸ!

 ನನ್ನ ಬೇಲೂರು-ಹಳೆಬೀಡು ಪ್ರವಾಸ!

 


ಕೆಲವೊಮ್ಮೆ ನಾವು ಮೊದಲೇ ಮಾಡಿದ ಯೋಜನೆಗಳು ಕೈಗೂಡುವುದಿಲ್ಲ,ಆದರೆ ಇದ್ದಕ್ಕಿದ್ದಂತೆ ಮಾಡಿದ ಅದೆಷ್ಟೋ ಯೋಜನೆಗಳು ಕೈಗೂಡುತ್ತದೆ. ಅಂತಹ ಯೋಜನೆಗಳಲ್ಲಿ ಒಂದಾಗಿತ್ತು ನಮ್ಮ ಪ್ರವಾಸ. ನನ್ನ ಅಮ್ಮನಿಗೆ ಕುಟುಂಬ ಸಮೇತರಾಗಿ ತಾನು ಮದುವೆ ಆಗುವ ಮೊದಲು ಹಾಸನದಲ್ಲಿ ಕೆಲಸ ಮಾಡುತ್ತಿರುವಾಗ ಪ್ರವಾಸಕ್ಕೆ ಹೋದ ಸ್ಥಳಗಳಾದ ಬೇಲೂರು,ಹಳೆಬೀಡಿಗೆ ಹೋಗಬೇಕೆಂಬ ಆಸೆಯಿತ್ತು. ಎರಡು ಮೂರು ಬಾರಿ ಹೋಗಬೇಕೆಂದು ಹೇಳಿಕೊಳ್ಳುತ್ತಿದ್ದ ಅಮ್ಮನಿಗೆ ನನಗೆ ಹಾಗು ತಮ್ಮನಿಗೆ ಸಿಗುತ್ತಿದ್ದ ರಜೆ ಹೊಂದಾಣಿಕೆಯಾಗದ ಕಾರಣ ಯೋಜನೆ ಕೈಗೂಡಲಿಲ್ಲ. ಆದರೆ ಮೊನ್ನೆ ಒಂದು ದಿನ ಇದ್ದಕ್ಕಿದ್ದ ಹಾಗೆ ಅಮ್ಮ ತನ್ನ ಆಪ್ತ ಗಳತಿಯೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬೇಲೂರು-ಹಳೆಬೀಡಿಗೆ ಹೋಗುವ ಆಲೋಚನೆ ಹೊಳೆಯಿತು. ಅಲ್ಲಿಂದ ಆರಂಭಗೊಂಡ ಪ್ರವಾಸದ ಯೋಜನೆ, ಎರಡು ದಿನ ಬಿಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಕ್ಕಾಗ ಮಾತುಕತೆಯಲ್ಲಿ ಪೂರ್ಣಗೊಂಡಿತ್ತು. ಹೀಗೆ ಪ್ರವಾಸಕ್ಕೆ ತಯಾರು ಮಾಡುತ್ತಾ ನಿನ್ನೆ ಅಂದರೆ ಆದಿತ್ಯವಾರ ಹೋಗುವುದೆಂದು ನಿರ್ಧಾರವಾಯಿತು.
ಪ್ರವಾಸಕ್ಕೆ ಹೋಗುವ ಮೊದಲ ದಿನ ಬೆಳಗ್ಗೆ "ದಿ ಕೇರಳ ಸ್ಟೋರಿ" ಸಿನಿಮಾ ನೋಡಲು ಹೋಗುತ್ತಿದ್ದೇನೆಂದು ಅಮ್ಮನ ಬಳಿ ಹೇಳಿದಾಗ "ನಾಳೆಗೆ ಬೇಕಾದ ಎಲ್ಲಾ ಅಗತ್ಯತೆಗಳನ್ನು ನೀನು ತಂದು ಕೊಟ್ಟು ಮತ್ತೆ ಸಿನಿಮಾಕ್ಕೆ ಹೋಗು" ಎಂದು ಹೈಕಮಾಂಡಿನ(ಅಮ್ಮನ) ಅಪ್ಪಣೆ ಆಯಿತು. ಆಯಿತು ಎಂದು ಬೆಳಗ್ಗೆ ಎಲ್ಲ ಅಗತ್ಯತೆಗಳನ್ನು ತಂದು ಕೊಟ್ಟು ಸಿನಿಮಾ ನೋಡಲು ಹೋದೆ. ಸಂಜೆ ನನ್ನ ಮನೆಯ ಬಹು ಹತ್ತಿರದಲ್ಲೇ ಕಟೀಲು ಐದನೆಯ ಮೇಳದವರಿಂದ "ಸಿಂಹಧ್ವಜ ಕಾಳಗ-ಸರ್ಪಾಧ್ವರ" ಯಕ್ಷಗಾನ ಬಯಲಾಟ ಇದ್ದುದರಿಂದ ಯಕ್ಷಗಾನ ನೋಡಲು ಎಂದು ನಾನು ಮತ್ತೆ ನನ್ನ ಅಮ್ಮ ಹೋದವರು ಮನೆಗೆ ಹಿಂದಿರುಗುವಾಗ ಶನಿವಾರ ತಡರಾತ್ರಿ ಅಂದರೆ ಆದಿತ್ಯವಾರ ಬಂದಾಗಿತ್ತು! ಬೆಳಗ್ಗೆ ಬೇಗ ಎದ್ದು ತಯಾರಾಗಿ ಪುತ್ತೂರಿನಿಂದ ಹೊರಟ ನಾವು ಉಪ್ಪಿನಂಗಡಿ ಮಾರ್ಗವಾಗಿ ಬೆಳಗಿನ ಉಪಾಹಾರಕ್ಕೆ ಉಪ್ಪಿನಂಗಡಿಯ ಹೋಟಲ್ ಆದಿತ್ಯದಲ್ಲಿ ವ್ಯವಸ್ಥೆ ಮಾಡಿ ಶಿರಾಡಿ ಘಾಟಿಯತ್ತ ಸಾಗಿದೆವು. ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಶಿರಾಡಿ ಘಾಟಿಯ ಅರೆಬೆಟ್ಟದ ಸಮೀಪ ಉಪಾಹಾರಕ್ಕೆಂದು ನಿಂತು ಉಪಾಹಾರ ಮುಗಿಸಿ ನಿಸರ್ಗದ ಸೌಂದರ್ಯವನ್ನು ಸವಿಯುತ್ತಾ ಸಕಲೇಶಪುರ ಮಾರ್ಗವಾಗಿ ಬೇಲೂರು ಕಡೆಗೆ ಸಾಗಿದೆವು.
ಬೇಲೂರು ತಲುಪಿದ ನಾವು ಅಲ್ಲಿಯ ತಣ್ಣಗೆಯ ವಾತಾವರಣವನ್ನು ಆಸ್ವಾದಿಸುತ್ತಾ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿದೆವು. ಚೆನ್ನಕೇಶವ ದೇವಾಲಯವು ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ೧೨ ನೇ ಶತಮಾನದ ಹಿಂದೂ ದೇವಾಲಯವಾಗಿದೆ. ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ರಾಜನಾದ ವಿಷ್ಣುವರ್ಧನನಿಂದ ಕಟ್ಟಿಸಲ್ಪಟ್ಟ ದೇವಾಲಯವಿದು. ಒಂದು ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ಬೇಲೂರು ಆಗಿತ್ತು. ದೇವಾಲಯದ ಸಂಕೀರ್ಣದ ಬಗ್ಗೆ ಮಾಹಿತಿ ನೀಡುವುದಾದರೆ ದೇವಸ್ಥಾನ ಸಂಕೀರ್ಣವು 444.5 ಅಡಿ 396 ಅಡಿ ನ್ಯಾಯಾಲಯವನ್ನು ಒಳಗೊಂಡಿದೆ ಮತ್ತು ಗೋಡೆಯ ಆವರಣದೊಳಗೆ ಸಣ್ಣ ದೇವಾಲಯಗಳನ್ನು ಹೊಂದಿದೆ. ಚೆನ್ನಕೇಶವ ದೇವಸ್ಥಾನವು ಮುಖ್ಯ ದೇವಾಲಯವಾಗಿದ್ದು ಗರ್ಭಗುಡಿಯಲ್ಲಿ "ಚೆನ್ನಕೇಶವ(ವಿಷ್ಣು)" ದೇವರನ್ನು ಪೂಜಿಸಲಾಗುತ್ತದೆ.ನಕ್ಷತ್ರಾಕಾರದಲ್ಲಿ ಈ ದೇವಾಲಯವನ್ನು ಕಟ್ಟಲಾಗಿದೆ. ಚೆನ್ನಕೇಶವ ದೇವಾಲಯದಲ್ಲಿ ಬಳಸಲಾಗುವ ಕಟ್ಟಡ ಸಾಮಗ್ರಿಯು ಕ್ಲೋರಿಟಿಕ್ ಸ್ಕಿಸ್ಟ್ ಆಗಿದೆ, ಇದನ್ನು ಸಾಮಾನ್ಯವಾಗಿ ಸೋಪ್‌ಸ್ಟೋನ್ ಎಂದು ಕರೆಯಲಾಗುತ್ತದೆ. ದೇವಸ್ಥಾನದ ಗೋಡೆಗಳ ಕೆತ್ತನೆಗಳನ್ನು ನೋಡಲು ಎರಡು ಕಣ್ಣುಗಳು ಸಾಲದು.
 

 




ಒಂದೊಂದು ಕೆತ್ತನೆಗಳು ಅಂದಿನ ಗತವೈಭವವನ್ನು ಎತ್ತಿಹಿಡಿಯುವುವಂತೆ ಇದೆ. ಮದನಿಕೆಯರ ಕೆತ್ತನೆಗಳು,ಹಲವಾರು ಹಿಂದು ದೇವರ ಕೆತ್ತನೆಗಳನ್ನು ನೋಡುವಾಗ ನಿಬ್ಬೆರಗಾಗಿಸುತ್ತದೆ.ತನ್ನ ಒಂದೇ ಕೈಯಿಂದ ಅತೀಸುಂದರ ವಿಗ್ರಹಗಳನ್ನು ಕೆತ್ತಿದ ಶಿಲ್ಪಿ ಜಕಣಾಚಾರಿಯನ್ನು ಯಾರಾದರೂ ಮೆಚ್ಚದೆ ಇರಲು ಸಾಧ್ಯವಿಲ್ಲ. ಪಾಶ್ಚಿಮಾತ್ಯರು ಸಾಕ್ಷರತೆಯನ್ನು ಹೊಂದುತ್ತಿರುವ ಆ ಕಾಲದಲ್ಲಿ ನಮ್ಮ ಭಾರತೀಯರು ಅತೀ ಸುಂದರ ಶಿಲ್ಪಕಲೆಗಳನ್ನು ಕೆತ್ತಿ ಶಾಸನಗಳನ್ನು ಬರೆಯುತ್ತಿದ್ದರು. ಇದು ಪ್ರತಿ ಭಾರತೀಯನಿಗೂ ಹೆಮ್ಮೆಯ ವಿಚಾರ. ಹೊಯ್ಸಳರು ಹೊಸ ವಾಸ್ತುಶಿಲ್ಪದ ಸಂಪ್ರದಾಯವನ್ನು ಅಭಿವೃದ್ಧಿಪಡಿಸಿದ ಅನೇಕ ಪ್ರಸಿದ್ಧ ವಾಸ್ತುಶಿಲ್ಪಿಗಳು ಮತ್ತು ಕುಶಲಕರ್ಮಿಗಳನ್ನು ನೇಮಿಸಿಕೊಂಡರು. ಅವರು ಹಲವಾರು ಸುಂದರ ದೇವಾಲಯಗಳು,ವಿಗ್ರಹಗಳನ್ನು ಕೆತ್ತಿದವರು. ಕಲಾ ಇತಿಹಾಸಕಾರ ಆಡಮ್ ಹಾರ್ಡಿ ಇದನ್ನು ಕರ್ನಾಟ ದ್ರಾವಿಡ ಸಂಪ್ರದಾಯ ಎಂದು ಕರೆಯುತ್ತಾರೆ. ಈ ಶೈಲಿಯಲ್ಲಿ ನಿರ್ಮಿಸಲ್ಪಟ್ಟ ದೇವಾಲಯಗಳು ಹಲವಾರು ಕಡೆ ನಾವು ನೋಡಬಹುದಾಗಿದೆ. ಚೆನ್ನಕೇಶವ ದೇವಸ್ಥಾನದ ದಕ್ಷಿಣಕ್ಕೆ ಕಪ್ಪೆ ಚೆನ್ನಿಗರಾಯ ದೇವಸ್ಥಾನವಿದೆ. ವಿಷ್ಣುವಿಗೆ ಸಮರ್ಪಿತವಾದ ದೇವಾಲಯವಿದು. ಅದರ ಪಕ್ಕದಲ್ಲಿ ಸೌಮ್ಯನಾಯಕಿ ದೇವಸ್ಥಾನ,ಪಶ್ಚಿಮ ದಿಕ್ಕಿನಲ್ಲಿ ವಾಹನ ಮಂಟಪ,ಉತ್ತರ ದಿಕ್ಕಿನಲ್ಲಿ ಅಂಡಾಲ್(ರಂಗನಾಯಕಿ) ದೇವಸ್ಥಾನಗಳು ಇವೆ.ನಿನ್ನೆ ನಾನು ಹೋದಾಗ ಅವುಗಳಲ್ಲಿ ಸೌಮ್ಯನಾಯಕಿ ದೇವಸ್ಥಾನಕ್ಕೆ ಹೋಗುವ ಅವಕಾಶ ಮಾತ್ರ ಸಿಕ್ಕಿತು. ಚೆನ್ನಕೇಶವ ದೇವಸ್ಥಾನದ ಕಲಾಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತ,ಇತಿಹಾಸವನ್ನು ತಿಳಿಯುತ್ತಿರುವಾಗ ಅಂದಿನ ಹೊಯ್ಸಳ ಸಾಮ್ರಾಜ್ಯದ ಗತವೈಭವ ಹೇಗಿದ್ದರಬಹುದು ಎಂದು ಯೋಚಿಸ ತೊಡಗಿದೆ. ಹೀಗೆ ಎಲ್ಲ ನೋಡುತ್ತಾ ನಾವು ಅಲ್ಲಿಂದ ಹೊರಟು ಹಳೆಬೀಡಿನ ಕಡೆಗೆ ಹೊರಟೆವು. ದಾರಿಯಲ್ಲಿ ಯಗಚಿ ನದಿಗೆ ಅಡ್ಡಲಾಗಿ ಕಟ್ಟಲ್ಪಟ್ಟ ಯಗಚಿ ಅಣೆಕಟ್ಟೆ ಭೇಟಿ ಕೊಟ್ಟೆವು. ನಂತರ ಹಳೆಬೀಡು ತಲುಪಿದ ನಾವು ಶ್ರೀ ಹೊಯ್ಸಳೇಶ್ವರ ದೇವಸ್ಥಾನಕ್ಕೆ ಹೋದೆವು. 



 

 

ಹಳೆಬೀಡನ್ನು ಮೊದಲು ದ್ವಾರಸಮುದ್ರ ಎಂದು ಕರೆಯಲಾಗುತ್ತಿತ್ತು. ಇದು ಹೊಯ್ಸಳ ಸಾಮ್ರಾಜ್ಯದ ರಾಜಧಾನಿ.ಹೊಯ್ಸಳೇಶ್ವರ ದೇವಸ್ಥಾನವು ಭಗವಾನ್ ಶಂಕರನಿಗೆ ಅರ್ಪಿತ ದೇವಾಲಯವಾಗಿದ್ದು ರಾಜ ವಿಷ್ಣುವರ್ಧನನ ದಂಡನಾಯಕ ಕೇತಮಲ್ಲ 1121ರಲ್ಲಿ ಕಟ್ಟಿಸಿಲು ಆರಂಭಿಸಿದ ಎಂದು ಹೇಳಲಾಗಿದೆ.ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ.ಕೆಲವು ಮೂಲಗಳ ಪ್ರಕಾರ ಇವಳ ಆಸೆಯನ್ನು ಪೂರೈಸಲು ವಿಷ್ಣುವರ್ಧನ ಬೇಲೂರಿನಲ್ಲಿ ಚೆನ್ನಕೇಶವ ದೇವಸ್ಥಾನ ಕಟ್ಟಿಸಿದ ಎಂದು ಹೇಳಲಾಗುತ್ತದೆ. ಬೇಲೂರಿನ ಚೆನ್ನಕೇಶವ ದೇವಸ್ಥಾನದಂತೆ ಹೊಯ್ಸಳೇಶ್ವರ ದೇವಾಲಯದ ನಿರ್ಮಾಣಕ್ಕೆ ಬಳಪದ ಕಲ್ಲು ಬಳಕೆಯಾಗಿದೆ.ದೇವಾಲಯಕ್ಕೆ ನಾಲ್ಕು ಬಾಗಿಲುಗಳಿದ್ದು ಪೂರ್ವಕ್ಕೆ ಎರಡು ಮತ್ತು ಉತ್ತರ-ದಕ್ಷಿಣವಾಗಿ ಒಂದೊಂದು ಬಾಗಿಲಿದೆ. ಉತ್ತರದ ಬಾಗಿಲಿನಿಂದ ದಕ್ಷಿಣಕ್ಕಿರುವ ಅಂತರವು ೧೬೦ ಅಡಿ. ಪೂರ್ವ-ಪಶ್ಚಿಮವಾಗಿ (ಗರ್ಭಗುಡಿಯ ಗೋಡೆಯವರೆಗೆ) ೧೨೨ ಅಡಿ ಉದ್ದವಿದೆ. ದೇವಾಲಯದ ಒಳಭಾಗದಲ್ಲಿ ಸುಮಾರು ೧೦೮ ಕಂಬಗಳಿದ್ದು ಒಂದೊಂದು ಕಂಬದಲ್ಲೂ ಒಂದೊಂದು ಬಗೆಯ ಚಿತ್ರಗಳಿವೆ. ಪ್ರತಿಯೊಂದು ಕಂಬವೂ ಐದು ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದ್ದು 'ಪಂಚಶಿಲಾ ಸ್ಥಂಭ' ವೆಂದು ಶಾಸನಗಳಲ್ಲಿ ಹೇಳಲ್ಪಟ್ಟಿದೆ. ಎರಡು ಗರ್ಭಗುಡಿಗಳನ್ನು ಒಳಗೊಂಡ ಈ ದೇವಾಲಯದಲ್ಲಿ ರಾಜ ವಂಶದ ಹೆಸರಿನಲ್ಲಿ ಸ್ಥಾಪನೆಯಾಗಿರುವ ಹೊಯ್ಸಳೇಶ್ವರ ಗರ್ಭಗುಡಿಯ ಜೊತೆಗೆ ಶಾಂತಲೇಶ್ವರ ಅಥವಾ ಪಾಂಡುಕೇಶ್ವರ ಎಂದು ಕರೆಯಲಾಗುವ ಮತ್ತೊಂದು ಗುಡಿಯೂ ಇದೆ. ಎರಡು ಗರ್ಭಗುಡಿಗಳ ನೇರಕ್ಕೆ ಶಿವನ ವಾಹನವಾದ ನಂದಿಯ ಎರಡು ದೊಡ್ಡ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯದ ಸಮೀಪಕ್ಕೆ "ದ್ವಾರಸಮುದ್ರ" ಕೆರೆಯು ಇದೆ. 

 

 

ಹೊಯ್ಸಳೇಶ್ವರ ದೇವಸ್ಥಾನದ ಸೌಂದರ್ಯ ನೋಡಿ ಭಗವಂತನ ದರ್ಶನ ಪಡೆದು ಮಧ್ಯಾಹ್ನ ಊಟವನ್ನು ಅಲ್ಲೇ ಸಮೀಪದಲ್ಲಿರುವ ಮ್ಯಾಂಗೋ ಟ್ರೀ ಎನ್ನುವ ಹೋಟಲಿನಲ್ಲಿ ಮಾಡಿದೆವು. ಬಹಳ ರುಚಿರುಚಿಯಾದ ಊಟವನ್ನು ಈ ಹೋಟಲಿನಲ್ಲಿ ಉಣಬಡಿಸಲಾಗುತ್ತದೆ. ಹಳೆಬೀಡಿಗೆ ಬಂದಾಗ ನೀವು ಊಟ ಮಾಡಲು ಇಲ್ಲಿಗೆ ಖಂಡಿತ ಹೋಗಬಹುದಾಗಿದೆ. ಊಟವನ್ನು ಮುಗಿಸಿ ನಾವು ದ್ವಾರಸಮುದ್ರ ಕೆರೆಯಲ್ಲಿ ನೌಕಾವಿಹಾರ ಮಾಡಿದೆವು. ಹೊಯ್ಸಳೇಶ್ವರ ದೇವಸ್ಥಾನದಿಂದ ಹೊರಟು ಹಳೆಬೀಡು ಜಂಕ್ಷನಿನ ಹೊಯ್ಸಳ ವೃತದ ಬಳಿ ದ್ವಾರಸಮುದ್ರ ಕೆರೆಗೆ ಹೋಗುವ ದಾರಿಯಲ್ಲಿ ಸಾಗಿದರೆ ಹೊಯ್ಸಳ ಬೋಟಿಂಗ್ ಅವರು ನಡೆಸುವ ನೌಕಾವಿಹಾರದಲ್ಲಿ ನಿಗದಿತ ಶುಲ್ಕವನ್ನು ಕೊಟ್ಟು ನೌಕಾವಿಹಾರ ಮಾಡಬಹುದು. ನೌಕಾವಿಹಾರ ಮಾಡಿ ನಾವು ಅಲ್ಲಿಂದ ಬೆಳವಾಡಿ ಕಡೆಗೆ ಹೊರಟೆವು.


 ಬೆಳವಾಡಿಯಲ್ಲಿ ವೀರ ನಾರಾಯಣ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಾವು ಅಲ್ಲಿನ ವಾಸ್ತುಶಿಲ್ಪವನ್ನು ಕಂಡು ಆಶ್ಚರ್ಯಪಟ್ಟೆವು. ವೀರ ನಾರಾಯಣ ದೇವಸ್ಥಾನಕ್ಕೆ ನಾವು ಹೋದ ಹೊತ್ತು ಮಧ್ಯಾಹ್ನ ಆದ ಕಾರಣ ದೇವಸ್ಥಾನದ ಗುಡಿಗಳು ಮುಚ್ಚಿದ್ದವು. ಸಿಕ್ಕ ಮಾಹಿತಿ ಅನುಸಾರ ವೀರನಾರಾಯಣ ದೇವಸ್ಥಾನವನ್ನು ಎರಡು ಹಂತದಲ್ಲಿ ನಿರ್ಮಿಸಿ ಆರಂಭದಲ್ಲಿ 1117 ಇಸವಿಯಲ್ಲಿ ರಾಜ ಎರಡನೇ ವೀರ ಬಲ್ಲಾಳನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದ್ದರೆ, ರಾಜ ನರಸಿಂಹ ಬಲ್ಲಾಳ ಅದನ್ನು ಮತ್ತೆ ವಿಸ್ತರಿಸಿದ. 1200ನೇ ಇಸವಿಯಲ್ಲಿ ಗೋಪಾಲಕೃಷ್ಣ ದೇವರ ಗರ್ಭಗುಡಿ ಹಾಗು ಯೋಗನರಸಿಂಹ ದೇವರ ಗರ್ಭಗುಡಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿದೆ. 270 ಅಡಿ ಉದ್ದದ ಈ ದೇವಾಲಯವು ಮೂರು ಪ್ರತ್ಯೇಕ ಚೌಕಾಕಾರದ ಗರ್ಭಗುಡಿಗಳನ್ನು ಹೊಂದಿದ್ದು ತನ್ನದೇ ಆದ ವಿಮಾನ ಗೋಪುರವನ್ನು ಹೊಂದಿದೆ ಹಾಗು ಅಸಾಧಾರಣವಾಗಿ ದೊಡ್ಡ ಚೌಕ ರಂಗಮಂಟಪದ ಮೂಲಕ (103 ಅಡಿ) ಸಂಪರ್ಕ ಹೊಂದಿದೆ. ಮುಖ್ಯ ದೇವಾಲಯವು ಪೂರ್ವಕ್ಕೆ ಮುಖಮಾಡಿದೆ ಮತ್ತು ವೀರನಾರಾಯಣ(ವಿಷ್ಣು) ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಉತ್ತರಾಭಿಮುಖವಾಗಿರುವ ದೇಗುಲದಲ್ಲಿ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠಾಪಿಸಲಾಗಿದ್ದರೆ,ದಕ್ಷಿಣಾಭಿಮುಖವಾಗಿರುವ ದೇಗುಲದಲ್ಲಿ ಯೋಗ-ನರಸಿಂಹನ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಮೂರು ದೇವಾಲಯಗಳಲ್ಲಿ ಪ್ರತಿಯೊಂದೂ ಸಂಪೂರ್ಣ ಮೇಲ್ವಿನ್ಯಾಸವನ್ನು ಹೊಂದಿದೆ (ದೇವಾಲಯದ ಮೇಲಿರುವ ಗೋಪುರ) ಮತ್ತು ಹೊಯ್ಸಳ ರಾಜರು ನಿರ್ಮಿಸಿದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ. ಬೇಲೂರು ಮತ್ತು ಹಳೇಬೀಡುನಲ್ಲಿರುವ ಪ್ರಸಿದ್ಧ ದೇವಾಲಯಗಳು ತಮ್ಮ ಸಂಕೀರ್ಣವಾದ ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದ್ದರೆ, ಈ ದೇವಾಲಯವು ತನ್ನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.ಗೋಪಾಲಕೃಷ್ಣ ಹಾಗು ಯೋಗನರಸಿಂಹ ದೇವಾಲಯಗಳು ಪರಸ್ಪರ ಮುಖಾಮುಖಿಯಾಗಿವೆ ಮತ್ತು ಮೂವತ್ತೇಳು ಕೊಲ್ಲಿಗಳನ್ನು ಒಳಗೊಂಡಿರುವ ವಿಶಾಲವಾದ ಮತ್ತು ವಿಶಾಲವಾದ ತೆರೆದ ಮಂಟಪದ (ಹಾಲ್) ಎರಡೂ ಬದಿಯಲ್ಲಿವೆ. ವೀರನಾರಾಯಣ ದೇವಸ್ಥಾನದ ಕಟ್ಟಡದ ಮುಖ್ಯ ದ್ವಾರದ ಎದುರು ಎರಡು ಬದಿ ಎರಡು ಪಟ್ಟದ ಆನೆಗಳ ಸುಂದರ ಕೆತ್ತಲಾಗಿದೆ. ಅವು ಈಗಲೂ ಸರಿಯಾದ ಸ್ಥಿತಿಯಲ್ಲಿದೆ ಹಾಗು ತಮ್ಮ ದೇಹದ ಒತ್ತಡದಿಂದ ಕಾಲುಗಳನ್ನು ಬಾಗಿಸಿ, ಇಡೀ ದೇವಾಲಯವನ್ನು ರಥದಂತೆ ಎಳೆಯುತ್ತಿರುವಂತೆ ಗೋಚರಿಸುತ್ತವೆ. ನಾನು ಗಮನಿಸಿದ ಇನ್ನೊಂದು ಅಂಶವೆಂದರೆ ಇಲ್ಲಿ ಮಂಟಪಗಳಲ್ಲಿ ಕೂತುಕೊಳ್ಳಲು ಇರುವ ಚಿಟ್ಟೆಗಳಲ್ಲಿ ಚೆನ್ನೆಮಣೆ(ಕನ್ನಡದಲ್ಲಿ ಅಳಗುಳಿ ಮನೆ ಎಂದು ಕರೆಯುತ್ತಾರೆ) ಆಟ ಆಡಲು ಅಥವ ಇತರೆ ಆಟ ಆಡಲು ಎಂದು ಮಾಡಿದ ಮಣೆ ಆಕರದ ಕೆತ್ತನೆಯಿದೆ. ದೇವಾಲಯದ ವಾಸ್ತುಶಿಲ್ಪದ ಸೌಂದರ್ಯ ವೀಕ್ಷಿಸಿ ಅಲ್ಲೇ ಎಲ್ಲಾ ದೇವರಿಗೆ ನಮಸ್ಕರಿಸಿ ನಂತರ ಅಲ್ಲೇ ಹಿಂದೆ ಇರುವ ಉದ್ಭವ ಗಣಪತಿ ದೇವಸ್ಥಾನಕ್ಕೂ ಹೋದೆವು. ದೇವಸ್ಥಾನ ಮಧ್ಯಾಹ್ನದ ವೇಳೆ ಮುಚ್ಚಿದ ಕಾರಣ ಹೊರಗಿನಿಂದಲೇ ಪ್ರದಕ್ಷಣೆ ಬಂದು ಅಲ್ಲಿಂದ ಹೊರಟೆವು. ಅಂದ ಹಾಗೆ ಈ ಎರಡು ದೇವಾಲಯಗಳ ಆಡಳಿತವನ್ನು ಪ್ರಸ್ತುತ ಶೃಂಗೇರಿ ಶಾರದಾ ಪೀಠದವರು ಮಾಡುತ್ತಿದ್ದಾರೆ. 


 
ನಂತರ ಅಲ್ಲಿಂದ ಹೊರಟ ನಾವು ಪುತ್ತೂರಿಗೆ ಹಿಂದಿರುಗಲು ಅಣಿಯಾದೆವು. ನನಗೆ ಬರುವಾಗ ಚಾರ್ಮಾಡಿ ಘಾಟಿಯಾಗಿ ಬರಬೇಕೆಂದು ಆಸೆಯಿದ್ದ ಕಾರಣ ಹಾಗೆ ಬರಲು ಬೆಳವಾಡಿಯಿಂದ ಚಿಕ್ಕಮಗಳೂರು ಮೂಲಕ ರಾ.ಹೆ 173ರಲ್ಲಿ ಸಾಗಿ ಮೂಡಿಗೆರೆಯಲ್ಲಿ ರಾ.ಹೆ 73ಕ್ಕೆ ಸೇರಿ ಅಲ್ಲಿಂದ ಕೊಟ್ಟಿಗೆಹಾರ ಮೂಲಕ ಚಾರ್ಮಾಡಿ ಘಾಟಿ ತಲುಪಿದೆವು. ನಿನ್ನೆ ನಮ್ಮ ಅದೃಷ್ಟವೇನೋ ಎಂಬಂತೆ ಆದಿತ್ಯವಾರ ಆದರು ಸಹ ಘಾಟಿಯಲ್ಲಿ ವಾಹನ ದಟ್ಟಣೆ ಕಡಿಮೆ ಇತ್ತು. ಹೀಗಾಗಿ ಘಾಟಿಯ ಮನಮೋಹಕ ಸೌಂದರ್ಯವನ್ನು ವೀಕ್ಷಸುತ್ತಾ ಚಾರ್ಮಾಡಿ ಘಾಟಿಯ ವಿವ್ಯೂ ಪಾಯಿಂಟ್ ತಲುಪಿ ಸ್ವಲ್ಪ ಹೊತ್ತು ಅಲ್ಲಿ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡೆವು. ಅಲ್ಲಿ ನಾನು ಗಮನಿಸಿದ ಹಾಗೆ ಘಾಟಿಗೆ ಬರುವ ಪ್ರಯಾಣಿಕರು ಅಥವ ಅದೇ ದಾರಿಯಲ್ಲಿ ಹೋಗುವವರು ಪರಿಸರದ ಸ್ವಲ್ಪವು ಕಾಳಜಿಯಿಲ್ಲದೆ ಕಸವನ್ನು ಎಸೆದು ಹೋಗುತ್ತಿದ್ದಾರೆ. ತನ್ನ ಒಡಲಲ್ಲಿ ಸೌಂದರ್ಯವನ್ನು ಜೋಪಾನವಾಗಿ ಇಟ್ಟರೆ ಮಾನವ ಆ ಪ್ರಕೃತಿಯಸೌಂದರ್ಯ ರೂಪವನ್ನು ವಿರೂಪಗೊಳಿಸಿ ನಾಶ ಮಾಡುತ್ತಿದ್ದಾನೆ. ಅಲ್ಲಿ ಎಲ್ಲಿ ನೋಡಿದರೂ ಗಲೀಜು! ಪ್ರಕೃತಿಯ ಸೌಂದರ್ಯ,ಶುಚಿತ್ವವನ್ನು ಕಾಪಾಡುವುದು ನಮ್ಮ ಕರ್ತವ್ಯ. ಆದ್ದರಿಂದ ದಯವಿಟ್ಟು ಅದನ್ನು ಪಾಲಿಸಬೇಕೆಂದು ನಾನು ವಿನಂತಿಸಿಕೊಳ್ಳುತ್ತಿದ್ದೇನೆ. ಘಾಟಿಯಲ್ಲಿ 15-20 ನಿಮಿಷಗಳ ಕಾಲ ಕಳೆದು ಅಲ್ಲಿಂದ ಇಳಿಯುತ್ತಾ ಬಂದು ರಾತ್ರಿ ಮರಳಿ ಪುತ್ತೂರು ತಲುಪಿದೆವು. ಎಷ್ಟು ಬೇಗ ಆ ಪ್ರವಾಸ ಮುಗಿದು ಹೋಯಿತು ಎಂದು ಗೊತ್ತೇ ಆಗಲಿಲ್ಲ. ಒಟ್ಟಿನಲ್ಲಿ ನಮ್ಮ ಬೇಲೂರು-ಹಳೆಬೀಡು ಪ್ರವಾಸ ತುಂಬಾ ಚೆನ್ನಾಗಿ ಖುಷಿಖುಷಿಯಾಗಿ ನಡೆದು ಹೋಯಿತು.
🖊ಬರಹ: ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!