ಪುತ್ತೂರು ಜಾತ್ರೆಯ ಸಂಭ್ರಮ!

ಪುತ್ತೂರು ಜಾತ್ರೆಯ ಸಂಭ್ರಮ!


ಎಪ್ರಿಲ್ 5,2022ರಂದು ನನ್ನ ಫೇಸ್ಬುಕ್ ಪುಟದಲ್ಲಿ ಬರೆದ ಲೇಖನ:
ಎಪ್ರಿಲ್ ಬಂತೆಂದರೆ ಸಾಕು ಇಡೀ ಪುತ್ತೂರಿನಲ್ಲಿ ಚಟುವಟಿಕೆಗಳು ಗರಿಗೆದರುತ್ತದೆ. ಇಡೀ ಪುತ್ತೂರು ನಗರ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿರುವಂತೆ ಕಾಣುತ್ತದೆ. ಕಾರಣ ಪುತ್ತೂರು ಹಾಗು ಹತ್ತೂರ ಒಡೆಯ, ಪುತ್ತೂರಿಗರ ಆರಾಧ್ಯ ದೇವ ಶ್ರೀ ಮಹಾಲಿಂಗೇಶ್ವರನ ವರ್ಷಾವಧಿ ಜಾತ್ರೋತ್ಸವ! ಅದರೊಂದಿಗೆ ಶಾಲೆಗೆ ಹೋಗುವ ಮಕ್ಕಳಿಗೆ ಬೇಸಿಗೆ ರಜೆಯ ಸಂಭ್ರಮ! ಮಾರ್ಚ್ ತಿಂಗಳ ಕೊನೆಗೆ ಯುಗಾದಿ ಹಬ್ಬ ಬಂದರೆ ಅಲ್ಲಿಂದ ಪ್ರಾರಂಭಗೊಳ್ಳುವ ಪುತ್ತೂರಿಗರ ಹಬ್ಬ ಮುಗಿಯುವುದು ಎಪ್ರಿಲ್ 20ಕ್ಕೆ!

ಪುತ್ತೂರು ಕೊಡಿಯೆರುವುದು,ಉತ್ಸವಗಳು ಆರಂಭಗೊಳ್ಳುವುದು ಎಪ್ರಿಲ್ 10ಕ್ಕೆ ಆದರು ಎಪ್ರಿಲ್ 1ಕ್ಕೆ ಗೊನೆ ಮುಹೂರ್ತದೊಂದಿಗೆ ಜಾತ್ರೆ ಪ್ರಾರಂಭಗೊಳ್ಳುತ್ತದೆ. ವರ್ಷದ ಎಲ್ಲಾ ದಿನಗಳಂದು ಭಕ್ತರು ದೇವರನ್ನು ಕಾಣಲು ದೇವಸ್ಥಾನಕ್ಕೆ ಹೋದರೆ ಇಲ್ಲಿ ವರ್ಷದಲ್ಲಿ ಏಳು ದಿನ ದೇವರು ಭಕ್ತರನ್ನು ಕಾಣಲು ಭಕ್ತರ ಮನೆಗೆ ಹೋಗುತ್ತಾರೆ! ಇದೇ ಅಲ್ಲವೇ ದೇವರು-ಭಕ್ತರ ಸಂಬಂಧ. ಬಹುಶಃ ನನಗೆ ಗೊತ್ತಿರುವ ಹಾಗೆ ಇಂತಹ ಕ್ಷಣಗಳನ್ನು ಪುತ್ತೂರಿನಲ್ಲಿ ಮಾತ್ರ ಕಾಣಲು ಸಿಗುತ್ತದೆ ಎಂದು ಅನ್ನಿಸುತ್ತದೆ. ಬಾನಿನಲ್ಲಿ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದಂತೆ ಆರಾಧ್ಯ ದೇವ ಮಹಾಲಿಂಗೇಶ್ವರನ ಉತ್ಸವ ಪ್ರಾರಂಭಗೊಳ್ಳುತ್ತದೆ. ಆರಂಭದಲ್ಲಿ ದೇವಸ್ಥಾನದ ಒಳಾಂಗಣದಲ್ಲಿ ಬಲಿ ನಡೆದು ಹೊರಾಂಗಣಕ್ಕೆ ಬಂದ ನಂತರ ನಡೆಯುವ ಉಡಿಕೆ ಬಲಿ ನಡೆಯುವಾಗ ನಾಗಸ್ವರ,ಸಾಕ್ಸೋಫೋನಿನ ಆ ಮಧುರ ಸ್ವರಕ್ಕೆ ದೇವರು ಹಾಗು ಭಕ್ತರು ಮಗ್ನರಾದಂತೆ ಭಾಸವಾಗುತ್ತದೆ. ಎಂತಹ ಸ್ವರ, ಎಂತಹ ಕ್ಷಣಗಳು ಅವು! ಆ ಸ್ವರ,ತಾಳಕ್ಕೆ ತಕ್ಕ ಹಾಗೆ ದೇವರ ಸೇವೆ ಮಾಡುತ್ತಿರುವ ಬ್ರಹ್ಮವಾಹಕರ ನೃತ್ಯ ನೆರೆದ ಭಕ್ತರನ್ನು ಭಕ್ತಿಪರವಶ ಮಾಡುತ್ತದೆ. ನಂತರ ನನ್ನ ಇಷ್ಟದ ಚೆಂಡೆ ಸುತ್ತು. ವರ್ಣಿಸಲು ನನ್ನ ಬಳಿ ಪದಗಳೇ ಇಲ್ಲ! ಚೆಂಡೆ ಸುತ್ತು ಮುಗಿದೊಡನೆ ನಡೆಯುವ ದೇವರ ಕಟ್ಟೆ ಪೂಜೆ ಹಾಗು ಕಟ್ಟೆ ಪೂಜೆ ಸೇವೆ ಮಾಡಿಸಿದ ಭಕ್ತರಿಗೆ ಪ್ರಸಾದ ವಿತರಣೆ ಮುಗಿಯುವಾಗ ಸುಮಾರು ರಾತ್ರಿ ಏಳುವರೆ ಆಗುತ್ತದೆ. ನಂತರ ಪ್ರಸಿದ್ಧ ಸಾಕ್ಸೋಫೋನ್ ವಾದಕರಾದ ಪಿ.ಕೆ ಗಣೇಶ್ ಅವರಿಂದ ಸಾಕ್ಸೋಫೋನ್ ಸೇವೆ ನಡೆದು, ಬ್ಯಾಂಡ್ ಸುತ್ತು ನಡೆದು ನಂತರ ದೇವರ ಪೇಟೆ ಸವಾರಿ ಆರಂಭಗೊಳ್ಳುತ್ತದೆ. ಪ್ರತಿದಿನ ಪುತ್ತೂರಿನ ಒಂದು ದಿಕ್ಕಿಗೆ ಹೋಗುವ ದೇವರ ಪೇಟೆ ಸವಾರಿ ಸುಮಾರು ಜಾತ್ರೆ ಮುಗಿಯುವ ಸಮಯದಲ್ಲಿ 150ಕ್ಕೂ ಅಧಿಕ ಕಟ್ಟೆಗಳಲ್ಲಿ ದೇವರು ಕಟ್ಟೆ ಪೂಜೆಯನ್ನು ಸ್ವೀಕರಿಸುತ್ತಾರೆ! ಇದು ಪುತ್ತೂರಿನಲ್ಲಿ ಬಿಟ್ಟರೆ ಬೇರೆ ಎಲ್ಲಿಯೂ ಕಾಣಲು ಸಿಗದು.
ಜಾತ್ರೆಯ ಮೊದಲ ದಿನ ಎಪ್ರಿಲ್ 10ರಂದು ಸಂಜೆ ಉತ್ಸವ ನಡೆದು ಬೊಳ್ವಾರು,ಮಂಜಲಪಡ್ಪು,ಕಾರ್ಜಾಲು,ಕಲ್ಲೇಗ,ಕರ್ಮಲ,ನೆಹರು ನಗರದಲ್ಲಿ ದೇವರ ಪೇಟೆ ಸವಾರಿ,11ರಂದು ಸಂಜೆ ಉತ್ಸವ, ನೆಲ್ಲಿಕಟ್ಟೆ, ಸಾಲರ, ಸೂತಬೆಟ್ಟು ಸವಾರಿ, 12ರಂದು ನನ್ನ ಪ್ರಕಾರ ಪುತ್ತೂರು ನಗರದಲ್ಲಿ ಸಾಗುವ ದೇವರ ಪೇಟೆ ಸವಾರಿಯಲ್ಲಿ ದೀರ್ಘ ಸಮಯ ತೆಗೆದುಕೊಳ್ಳುವ ದಿನ ಅಂದೆ ಎಂದು ನನಗೆ ಅನ್ನಿಸುತ್ತದೆ. ಏಕೆಂದರೆ ಅಂದು ದೇವಸ್ಥಾನದಿಂದ ಆರಂಭಗೊಳ್ಳುವ ದೇವರ ಪೇಟೆ ಸವಾರಿ ಮುಖ್ಯ ರಸ್ತೆಯಲ್ಲಿ ಮಹಾಲಾಸ ಮೆಡಿಕಲ್ಸ್ ಅವರ ಕಟ್ಟೆಗೆ ಬಂದು ನಂತರ ಮಹಾಮ್ಮಾಯಿ ದೇವಸ್ಥಾನದ ಕಟ್ಟೆಯಲ್ಲಿ ಪೂಜೆ ಸ್ವೀಕರಿಸಿ ಪರ್ಲಡ್ಕ ರಸ್ತೆಯಲ್ಲಿ ಸಾಗಿ ನಂತರ ಬೈಪಾಸ್ ರಸ್ತೆಯಲ್ಲಿ ಶಿವಪೇಟೆ, ತೆಂಕಿಲ ವಿವೇಕಾನಂದ ಶಾಲೆ,ಸ್ವಾಮಿ ಕಲಾಮಂದಿರದ ಕಟ್ಟೆಗಳಲ್ಲಿ ಪೂಜೆ ಸ್ವೀಕರಿಸಿ ಕೊನೆಯ ಕಟ್ಟೆಯಾದ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಕಟ್ಟೆಯಲ್ಲಿ ದೇವರು ಪೂಜೆ ಸ್ವೀಕರಿಸಿ ನಂತರ ದೇವರ ಪೇಟೆ ಸವಾರಿ ಮರಳಿ ದೇವಸ್ಥಾನ ತಲುಪುವಾಗ ರಾತ್ರಿ 1-2 ಗಂಟೆ ಹತ್ತಿರವಾಗುತ್ತದೆ. ಎ.15ರಂದು ವಿಷು ಪ್ರಯುಕ್ತ ದೇವರ ಚಂದ್ರಮಂಡಲ ರಥೋತ್ಸವ ಇರುವ ಕಾರಣ ಪೇಟೆ ಸವಾರಿಗೆ ಹೊರಡುವಾಗಲೆ ತಡವಾಗುವ ಕಾರಣ ಮರಳಿ ದೇವಸ್ಥಾನ ತಲುಪುವಾಗ ತಡವಾಗುತ್ತದೆ. ಎ.13ರಂದು ಕೋರ್ಟ್ ರಸ್ತೆ,ಬಪ್ಪಳಿಗೆ,ಉರ್ಲಾಂಡಿ,ಎ.14ರಂದು ಬೊಳ್ವಾರು,ಹಾರಾಡಿ,ಕೊಂಬೆಟ್ಟು,ಎ.15ರಂದು ಬನ್ನೂರು,ಪಡೀಲು, ಪುತ್ತೂರು ರೈಲು ನಿಲ್ದಾಣ ಮಾರ್ಗದಲ್ಲಿ ದೇವರ ಪೇಟೆ ಸವಾರಿ ಸಾಗುತ್ತ ಭಕ್ತರು ಸಲ್ಲಿಸುವ ಹಣ್ಣುಕಾಯಿ, ಕಟ್ಟೆ ಪೂಜೆಯನ್ನು ಸ್ವೀಕರಿಸಿ ಪ್ರಸನ್ನಗೊಳ್ಳುತ್ತಾರೆ ಶ್ರೀ ದೇವರು. ಶ್ರೀ ದೇವರ ಪೇಟೆ ಸವಾರಿ ಸಾಗುವಾಗ ತುಂಬಾ ವಿಶೇಷತೆಗಳನ್ನು ನಮಗೆ ಕಾಣ ಸಿಗುತ್ತದೆ. ಇನ್ನೊಂದು ವಿಶೇಷತೆ ಶ್ರೀ ದೇವರ ಪೇಟೆ ಸವಾರಿ ಪುತ್ತೂರು(ಕಬಕ ಪುತ್ತೂರು) ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ನಲ್ಲಿ ಹಾದುಹೋಗುವುದು! ನೀವೆಲ್ಲ ತಿರುವನಂತಪುರದಲ್ಲಿ ಶ್ರೀ ಅನಂತಪದ್ಮನಾಭ ದೇವರ ಅವಭೃತ ಸ್ನಾನ ಪ್ರಯುಕ್ತ ಅಲ್ಲಿನ ವಿಮಾನ ನಿಲ್ದಾಣವನ್ನು ಕೆಲವು ಗಂಟೆಗಳ ಕಾಲ ಮುಚ್ಚುವುದನ್ನು ಕೇಳಿರಬಹುದು. ಇಲ್ಲಿ ಶ್ರೀ ದೇವರು ರೈಲು ನಿಲ್ದಾಣದ ಮೂಲಕ ಸಾಗುತ್ತಾರೆ. ಶ್ರೀ ದೇವರ ಪೇಟೆ ಸವಾರಿ ಹಾದು ಹೋಗುವ ಸಮಯದಲ್ಲಿ ರೈಲು ಬಂದರೆ ರೈಲನ್ನು ನಿಲ್ಲಿಸಲಾಗುತ್ತದೆ. ಎ.15ರ ಉತ್ಸವಗಳು ಮುಗಿದ ನಂತರ ಎ.16ರಂದು ನಸುಕಿನ ವೇಳೆಯಲ್ಲಿ ದೇವಸ್ಥಾನದ ಒಳಾಂಗಣದಲ್ಲಿ ಕೇವಲ ಎಣ್ಣೆ ದೀಪದ ಬೆಳಕಿನಲ್ಲಿ ದೇವರ ದೀಪದ ಬಲಿ ನಡೆಯುತ್ತದೆ.ಎ.16ರಂದು ಬಲ್ನಾಡಿನಿಂದ ಪ್ರತಿ ವರ್ಷದಂತೆ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಭಂಡಾರದ ಆಗಮನ ಹಾಗು ಶ್ರೀ ದೇವರ ಭೇಟಿ, ನಂತರ ಶ್ರೀ ದೇವರ ಪಲ್ಲಕಿ ಉತ್ಸವ ಜೊತೆಗೆ ಪಿ.ಕೆ ಗಣೇಶ್ ಅವರ ಸಾಕ್ಸೋಫೋನ್ ಸೇವೆ. ನಂತರ ವೇದ ಸುತ್ತು,ಭಜನೆ ಸುತ್ತು ಹೀಗೆ ಹಲವು ಸುತ್ತುಗಳ ಉತ್ಸವ ನಡೆದು ವರ್ಷದಲ್ಲಿ ಒಂದು ಬಾರಿ ಮಾತ್ರ ಎಳೆಯಲಾಗುವ ಸಣ್ಣ ರಥೋತ್ಸವದಲ್ಲಿ ಶ್ರೀ ದೇವರು ಆರೂಢರಾಗಿ ರಥೋತ್ಸವ. ನಂತರ ದೇವಸ್ಥಾನದ ಪುಷ್ಕರಿಣಿಯಲ್ಲಿ ತೆಪ್ಪೋತ್ಸವ ನಡೆದು ಅಂದಿನ ಉತ್ಸವ ಮುಗಿಯುತ್ತದೆ. 17 ಜಾತ್ರೆಯ ಪ್ರಮುಖ ದಿನ. ಶ್ರೀ ದೇವರ ದರ್ಶನ ಬಲಿ,ಬ್ರಹ್ಮರಥೋತ್ಸವ ನಡೆಯುವ ದಿನ. ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಸುಮಾರು 9 ಗಂಟೆಗೆ ದೇವಸ್ಥಾನಕ್ಕೆ ಹೋದರೆ ಬರುವುದು ಮತ್ತೆ ಮಧ್ಯಾಹ್ನ! ಶ್ರೀ ದೇವರ ದರ್ಶನ ಬಲಿ ಕಣ್ತುಂಬಿಕೊಳ್ಳುವುದೇ ಸೌಭಾಗ್ಯ! ಆ ಬಿಸಿಲಿನ ಬೆಗೆಗೆ ಅಳಿಕೆ ಸತ್ಯಸಾಯಿ ಪ್ರಸ್ಟ್ ಹಾಗು ವಿವಿಧ ಸಂಘ ಸಂಸ್ಥೆಗಳಿಂದ ಮಜ್ಜಿಗೆ ನೀರು,ಜ್ಯೂಸ್ ವಿತರಣೆ ನಿರಂತರ ನಡೆಯುತ್ತಾ ಇರುತ್ತದೆ ಹಾಗು ಅವರ ಈ ಸೇವೆಯಿಂದ ಎಷ್ಟೋ ಭಕ್ತರ ಬಾಯಾರಿಕೆ ತಣಿಸುತ್ತದೆ. ಎ.17ರ ಸೂರ್ಯಾಸ್ತ ಆಗಿ ಕತ್ತಲೆ ಆವಾರಿಸಿದರೂ ಪುತ್ತೂರಿನಲ್ಲಿ ಮಾತ್ರ ಬೆಳಕಿನ ಹಬ್ಬ! ದೇವರು ಬ್ರಹ್ಮ ರಥಾರೂಢರಾದಂತೆ ಆರಂಭಗೊಳ್ಳುವ ಪುತ್ತೂರು ಬೆಡಿ! ಪುತ್ತೂರು ಬೆಡಿ ನೋಡಲು ಎರಡು ಕಣ್ಣುಗಳು ಸಾಲದು. ಸುಮಾರು ಒಂದು ಗಂಟೆಯ ಬೆಡಿ ಸೇವೆ ನಂತರ ಶ್ರೀ ದೇವರ ವೈಭವದ ಬ್ರಹ್ಮರಥೋತ್ಸವ ನೋಡುವುದೆ ಒಂದು ಸೌಭಾಗ್ಯ! ಲಕ್ಷಾಂತರ ಮಂದಿ ಭಕ್ತರು ದೇವರ ಬ್ರಹ್ಮರಥೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾಗುತ್ತಾರೆ. ಬ್ರಹ್ಮರಥೋತ್ಸವ ಸಮಯದಲ್ಲಿ ಪ್ರಸನ್ನಗೊಳ್ಳುವ ದೇವರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆಯಿದೆ. ಬ್ರಹ್ಮರಥೋತ್ಸವದ ನಂತರ ಶ್ರೀ ದೇವರು ಹಾಗು ಶ್ರೀ ದಂಡನಾಯಕ-ಉಳ್ಳಾಲ್ತಿ ಅಮ್ಮನವರ ಭಂಡಾರ ಸಹಿತ ಬಂಗಾರ್ ಕಾಯರ್ ಕಟ್ಟೆಗೆ ಸವಾರಿ ಹೋಗಿ ಅಲ್ಲಿ ತಂತ್ರ ತೂಗಿದ ನಂತರ ದೇವರು ಅಮ್ಮನವರ ಭಂಡಾರವನ್ನು ಬೀಳ್ಕೊಟ್ಟು ಮರಳಿ ದೇವಸ್ಥಾನಕ್ಕೆ ಬರುತ್ತಾರೆ.
ಮರುದಿನ ಅಂದರೆ ಎ.18ರಂದು ಮಧ್ಯಾಹ್ನ ಬಿಸಿಲ ಬೆಗೆ ತಣ್ಣಗಾಗುತ್ತಿರುವ ಸಮಯಕ್ಕೆ ದೇವಸ್ಥಾನದಲ್ಲಿ ಆರಂಭಗೊಳ್ಳುವ ಶ್ರೀ ದೇವರ ಉತ್ಸವ, ನಂತರ ದೇವಸ್ಥಾನದ ಪಶ್ಚಿಮ ದ್ವಾರದ ಮೂಲಕ ದೇವರು ಹೊರಗೆ ಬಂದು ಹೊರಾಂಗಣದಲ್ಲಿ ಉತ್ಸವ ನಡೆದು ಶಾರದ ಭಜನ ಮಂದಿರದ ಬಳಿ ಇರುವ ಕಟ್ಟೆಯಲ್ಲಿ ಪೂಜೆ ನಡೆದು ಓಕುಳಿ ಪ್ರೋಕ್ಷಣೆ ನಡೆದು ರಕ್ತೇಶ್ವರಿ ಗುಡಿಯ ಬಳಿ ದೇವರು ವೀರಮಂಗಲಕ್ಕೆ ಹೋಗಿ ಬರುವ ತನಕ ದೇವಸ್ಥಾನವನ್ನು ಕಾಯುವ ಬಗ್ಗೆ ದೇವರ ಬಳಿ ದೈವದ ನುಡಿಕಟ್ಟು ನಡೆದ ನಂತರ ಶ್ರೀ ದೇವರು ಪುತ್ತೂರಿನಿಂದ 18 ಕಿ.ಮಿ ದೂರದಲ್ಲಿರುವ ವೀರಮಂಗಲಕ್ಕೆ ಅವಭೃತ ಸವಾರಿಯಲ್ಲಿ ಹೋಗಿ ವೀರಮಂಗಲದ ತಟದಲ್ಲಿ ಕುಮಾರಧಾರ ನದಿಯಲ್ಲಿ ಶ್ರೀ ದೇವರ ಅವಭೃತ ಸ್ನಾನ ನಡೆಯುತ್ತದೆ. ಸಂಜೆ ಮುಸ್ಸಂಜೆ ಹೊತ್ತಿನಲ್ಲಿ ದೇವಸ್ಥಾನದಿಂದ ವೀರಮಂಗಲಕ್ಕೆ ನಿರ್ಗಮಿಸುವ ದೇವರ ಸವಾರಿ ದಾರಿಯುದ್ದಕ್ಕೂ ಸುಮಾರು 50ಕ್ಕೂ ಅಧಿಕ ಕಟ್ಟೆಗಳಲ್ಲಿ ಭಕ್ತರು ಸಲ್ಲಿಸುವ ಕಟ್ಟೆ ಪೂಜೆ,ಹಣ್ಣುಕಾಯಿ ಸೇವೆಗಳನ್ನು ಸ್ವೀಕರಿಸುತ್ತಾ ವೀರಮಂಗಲ ತಲುಪುವಾಗ ಮರುದಿನ(ಎ.19) ಮುಂಜಾನೆಯಾಗುತ್ತದೆ! ಇದೊಂದು ದಾಖಲೆಯೆ ಸರಿ. ವೀರಮಂಗಲಕ್ಕೆ ಹೊರಡುವಾಗ ಯಾವ ಉತ್ಸಾಹ ಭಕ್ತರಲ್ಲಿ ಇತ್ತೋ ಅದೇ ಉತ್ಸಾಹ ವೀರಮಂಗಲ ತಲುಪುವಾಗಲು ಕಾಣಬಹುದು. ಇದು ಅಲ್ಲವೇ ಶ್ರೀ ಮಹಾಲಿಂಗೇಶ್ವರನ ಕೃಪೆ,ಶಕ್ತಿ? ಶ್ರೀ ದೇವರು ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ನಿರ್ಗಮಿಸಿದ ನಂತರ ನೀವು ದೇವಸ್ಥಾನಕ್ಕೆ ಹೋದರೆ ಅದೇನೋ ಒಂದು ಬೇರೆ ರೀತಿಯ ಅನುಭವ. ಆ ಒಂದು ದಿವ್ಯ ಶಕ್ತಿ ಇಲ್ಲದಂತೆ ಭಾಸವಾಗುತ್ತದೆ. 
ಹಿಂದಿನ ಕಾಲದಲ್ಲಿ ಶ್ರೀ ದೇವರ ಅವಭೃತ ಸ್ನಾನ ಉಪ್ಪನಂಗಡಿ ಬಳಿ ಕುಮಾರಧಾರ ನದಿಯಲ್ಲಿ ನಡೆಯುತ್ತಿತ್ತು ಎಂದು ಹೇಳಲಾಗುತ್ತದೆ. ನಂತರ ವೀರಮಂಗಲಕ್ಕೆ ದೇವರು ಯಾಕೆ ಹೋದರು ಎಂಬ ಕಥೆ ನಿಮಗೆಲ್ಲರಿಗೂ ತಿಳಿದಿರಬಹುದು.ವೀರಮಂಗಲದಲ್ಲಿ ಶ್ರೀ ದೇವರ ಅವಭೃತ ಸ್ನಾನದ ನಂತರ ಭಕ್ತರು ಪುಣ್ಯ ಸ್ನಾನವನ್ನು ಮಾಡಿ ದೇವರ ಜೊತೆಯೇ ಮರಳಿ ದೇವಸ್ಥಾನಕ್ಕೆ ಬಂದು(ವೀರಮಂಗಲದಿಂದಲೆ ಓಡಿಕೊಂಡು ಬರುವುದು ಎಂದು ಹೇಳಲಾಗುತ್ತದೆ) ನಂತರ ಕೊಡಿ ಇಳಿಯುವುದರೊಂದಿಗೆ ಶ್ರೀ ದೇವರ ಜಾತ್ರೋತ್ಸವ ಸಂಪನ್ನಗೊಳ್ಳುತ್ತದೆ. ನಂತರ ರಾತ್ರಿ ಚೂರ್ಣೋತ್ಸವ ನಡೆದು ದೇವಸ್ಥಾನದಲ್ಲಿರುವ ದೈವಗಳ ನೇಮೋತ್ಸವ ಎ.19,ಎ.20ರಂದು ನಡೆಯುತ್ತದೆ. ಜಾತ್ರೆ ಮುಗಿಯುವುದರೊಂದಿಗೆ ಪುತ್ತೂರಿನಲ್ಲಿ ಆ ಹಬ್ಬದ ವಾತಾವರಣ ಇಲ್ಲದಂತೆ ಭಾಸವಾಗುತ್ತದೆ. ಸದಾ ಜಿಗಿಜಿಗಿಯೆನ್ನುತ್ತಿದ್ದ ಪೇಟೆ ಬಿಕೋ ಎನ್ನುವಂತೆ ಭಾಸವಾಗುತ್ತದೆ. ನನಗೂ ಹಾಗೆ ಪುತ್ತೂರನ್ನು ಬಿಟ್ಟು ಹೋಗಲು ಮನಸ್ಸೇ ಬರುವುದಿಲ್ಲ ಎನ್ನುವ ಹಾಗೆ ಆಗಿ ಹೋಗಿದೆ.ಹುಟ್ಟೂರು,ಜನ್ಮ ಭೂಮಿ ಸುಬ್ರಹ್ಮಣ್ಯ ಹತ್ತಿರದ ಹರಿಹರಪಲ್ಲತಡ್ಕ ಆದರೂ ಕರ್ಮ ಭೂಮಿ ಪುತ್ತೂರು ಎಂದೆ ನಾನು ಈಗಲು ಗ್ರಹಿಸುವುದು. ನನ್ನ ಪ್ರಾಥಮಿಕ,ಪ್ರೌಢ ಶಿಕ್ಷಣವನ್ನು ಪಡೆದದ್ದು ಪುತ್ತೂರಿನಲ್ಲಿಯೇ. ಇಷ್ಟೊಂದು ಗಾಢವಾದ ಸಂಬಂಧ ನನಗೂ,ಪುತ್ತೂರಿಗೂ ಹಾಗು ಆರಾಧ್ಯ ದೇವ ಶ್ರೀ ಮಹಾಲಿಂಗೇಶ್ವರನಿಗೂ.
ಬನ್ನಿ ಈ ಬಾರಿಯೂ ಪುತ್ತೂರು ಜಾತ್ರೆಯಲ್ಲಿ ಭಾಗಿಯಾಗಿ ಪ್ರಭು ಶ್ರೀ ಮಹಾಲಿಂಗೇಶ್ವರನ ಕೃಪೆಗೆ ಪಾತ್ರರಾಗೋಣ
ನಾನು ನನ್ನ ಕಣ್ಣಿನಲ್ಲಿ ಕಂಡ,ಇನ್ನೊಬ್ಬರಿಂದ ಪುತ್ತೂರು ಜಾತ್ರೆ ಬಗ್ಗೆ ಕೇಳಿದನ್ನು ಇಲ್ಲಿ ಬರದಿದ್ದೇನೆ. ಏನಾದರು ತಪ್ಪು ಬರೆದಿದ್ದರೆ ಕ್ಷಮಿಸಿ,ಯಾವುದಾದರು ವಿಷಯ ಬಿಟ್ಟು ಹೋಗಿದ್ದರೆ ತಿಳಿಸಿ,ತಿದ್ದಬೇಕೆಂದು ವಿನಂತಿ.ನಿಮ್ಮ ಅಭಿಪ್ರಾಯ,ಪುತ್ತೂರು ಜಾತ್ರೆಯ ನಿಮ್ಮ ಅನುಭವವನ್ನು ಹಂಚಿಕೊಳ್ಳುಬೇಕೆಂದು ಜೊತೆಯಲ್ಲಿ ವಿನಂತಿಸಿಕೊಳ್ಳುತ್ತದೇನೆ.
ಈ ಒಂದು ಸಣ್ಣ ಲೇಖನ ಆರಾಧ್ಯ ದೇವ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅರ್ಪಣೆ...🙏
ಚಿತ್ರ ಕೃಪೆ: Vinayak Nayak 
🙏ಓಂ ನಮಃ ಶಿವಾಯ🙏

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!