ಸುಬ್ರಹ್ಮಣ್ಯ ಷಷ್ಠಿಯ ಗಮ್ಮತ್ತು!

 ಸುಬ್ರಹ್ಮಣ್ಯ ಷಷ್ಠಿಯ ಗಮ್ಮತ್ತು!



ಅದು ನವೆಂಬರ್-ದಶಂಬರ ತಿಂಗಳ ಸಮಯ. ಮಾರ್ಗಶಿರ ಮಾಸದ ಕಾಲ. ಮೈ ಕೊರೆಯುವ ಚಳಿ! ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಜನರು ಮೈಗೆ ಕಂಬಳಿ ಹೊದ್ದು ಮಲಗುತ್ತಿದ್ದರೆ ಆ ಊರಿಗೆ 14 ದಿನಗಳ ಕಾಲ ರಾತ್ರಿಯೆಂಬುದೇ ಮರೆತು ಹೋಗಿರುತ್ತದೆ! ತುಳುನಾಡಿನ ಜನರಿಗೆ ಇದೊಂದು ಹಬ್ಬದ ಸಮಯದಂತೆ ಎಂದೇ ಹೇಳಬಹುದು! ನಾನು ಚಳಿಗಾಲ ಎಂದ ತಕ್ಷಣವೇ ನಿಮಗೆ ನೆನಪಾಗಿರಬಹುದು. ನಿಮ್ಮ ಮನೆಯ ಹಿರಿಯರ ಬಳಿ ಬೇಕಾದರು ಹೋಗಿ ಕೇಳಿ ಅವರ ಬಾಯಿಂದ ಬರುವ ಮಾತು ಒಂದೇ- "ಎಂತ ವಿಪರೀತ ಚಳಿ ಮಾರಾಯ!ಸುಬ್ರಹ್ಮಣ್ಯ ಷಷ್ಠಿ ಹತ್ತಿರ ಬಂತ ಹೇಗೆ!?"



ಹೌದು,ಗೆಳೆಯರೇ ಈಗ ಗೊತ್ತಾಯಿತಾ,ನಾನು ಏನು ಹೇಳಲು ಬಂದಿದ್ದೇನೆ ಎಂದು? ಇನ್ನು ಕೆಲವೇ ದಿನಗಳಲ್ಲಿ ಕುಕ್ಕೆಪುರದ ಒಡೆಯ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹೋತ್ಸವ,ಸಾಮಾನ್ಯವಾಗಿ ಜನರು ಕರೆಯುವ ಸುಬ್ರಹ್ಮಣ್ಯ ಷಷ್ಠಿ ಅಥವ ಸುಬ್ರಹ್ಮಣ್ಯ ಜಾತ್ರೆ ಆರಂಭಗೊಳ್ಳಲಿದೆ. ನನಗೆ ನನ್ನೂರಿನ ಜಾತ್ರೆಯಾದ ಕಾರಣ ಇದೊಂದು ಹಬ್ಬದ ಹಾಗೆ! ಪುತ್ತೂರಿನ ಒಡೆಯ ಶ್ರೀ ಮಹಾಲಿಂಗೇಶ್ವರನ ಜಾತ್ರೆ ನನಗೆ ಒಂದೆಡೆ ವಿಶೇಷವಾದರೆ,ಮತ್ತೊಂದೆಡೆ ಕುಕ್ಕೆ ಸುಬ್ರಹ್ಮಣ್ಯ ಜಾತ್ರೆಯೂ ನನಗೆ ನೆಚ್ಚಿನದ್ದು! ಸಾಮಾನ್ಯವಾಗಿ ಈ ಎರಡು ಉತ್ಸವಗಳನ್ನು ತಪ್ಪಿಸದಂತೆ ಪ್ರತಿ ವರ್ಷವೂ ಹೋಗಲು ಪ್ರಯತ್ನಿಸುತ್ತೇನೆ.



ಸುಬ್ರಹ್ಮಣ್ಯ ಜಾತ್ರೆಯು ಕಾರ್ತಿಕ ಬಹುಳ ದ್ವಾದಶಿಯಂದು ಆರಂಭಗೊಂಡು ಮಾರ್ಗಶಿರ ಶುದ್ಧ ದ್ವಾದಶಿಯಂದು ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ಧ್ವಜಾರೋಹಾಣದೊಂದಿಗೆ(ಕೊಡಿಯೇರುವುದು) ಆರಂಭಗೊಂಡು ಧ್ವಜಾವರೋಹಣದೊಂದಿಗೆ(ಕೊಡಿ ಇಳಿಯುವುದು) ಜಾತ್ರೆ ನಡೆಯುವುದು ಕ್ರಮವಾದರೆ ಇಲ್ಲಿ ಕೊಪ್ಪರಿಗೆ ಏರುವುದರೊಂದಿಗೆ ಆರಂಭಗೊಂಡು ಕೊಪ್ಪರಿಗೆ ಇಳಿಯುವುದರೊಂದಿಗೆ ಮುಗಿಯುವುದು ಕ್ರಮ. ಇದು ಇಲ್ಲಿನ ವಿಶೇಷತೆ. ಸುಬ್ರಹ್ಮಣ್ಯ ದೇವರನ್ನು "ಅನ್ನದಾತ ಸುಬ್ಬಪ್ಪ" ಎಂದು ಕೂಡ ಕರೆಯುತ್ತಾರೆ. ಇದಕ್ಕೆ ಕಾರಣ ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತನಿಗೂ ಶ್ರೀ ದೇವರ ಅನ್ನಪ್ರಸಾದ ಸಿಕ್ಕಿಯೇ ಸಿಗುತ್ತದೆ. ಯಾವ ಹೊತ್ತಿಗೆ ಹೋದರು ಸರಿ ಒಂದು ತುತ್ತು ಅನ್ನದ ಕೊರತೆ ಇಲ್ಲಿ ಎಂದಿಗೂ ಇರುವುದಿಲ್ಲ. ಇದು ನನ್ನ ಅಜ್ಜಿಯು ಹೇಳುತ್ತಿದ್ದರು. ಅಂದಿನ ಕಾಲದಲ್ಲಿ ಕೆಲವು ಭಕ್ತರು ಮಧ್ಯರಾತ್ರಿ ದೇವಸ್ಥಾನಕ್ಕೆ ಹೋದಾಗಲೂ ಭಕ್ತರಿಗೆ ಅನ್ನಪ್ರಸಾದವೋ ತಿಂಡಿಯಾದರು ತಿನ್ನಲು ಸಿಗುತ್ತಿತ್ತೆಂದು ಅಜ್ಜಿ ಹೇಳುತ್ತಿದ್ದರು. ಬಹುಶಃ ಇದರ ಪ್ರತೀಕವೇ ಇಲ್ಲಿ ಶ್ರೀ ದೇವರ ಜಾತ್ರಾ ಸಂದರ್ಭದಲ್ಲಿ ಕೊಪ್ಪರಿಗೆ ಏರುವ ಕ್ರಮ ಬಂದದ್ದು ಇರಬಹುದು. ಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಈ ಕೊಪ್ಪರಿಗೆಯಲ್ಲೇ ಶ್ರೀ ದೇವರ ನೈವೇದ್ಯ ತಯಾರು ಮಾಡಲಾಗುತ್ತದೆ. ಒಮ್ಮೆ ಕೊಪ್ಪರಿಗೆ ಏರಿಸಿ ಒಲೆಗೆ ಬೆಂಕಿ ಕೊಟ್ಟರೆ ಮತ್ತೆ ಕೊಪ್ಪರಿಗೆ ಇಳಿಯುವವರೆಗೆ ಅದು ಹೊತ್ತಿಕೊಂಡೆ ಇರುತ್ತದೆ ಎಂದು ಹೇಳಲಾಗುತ್ತದೆ. ಶ್ರೀ ದೇವರ ಗರ್ಭಗುಡಿಯ ಬಳಿ ಕೊಪ್ಪರಿಗೆ ಏರಿಸಲಾಗುತ್ತದೆ. ಜಾತ್ರೆಯ ಮೊದಲೆರಡು ದಿನ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವವು ನಡೆಯುತ್ತದೆ. ಮೂರನೆಯ ದಿನದಂದು ಶ್ರೀ ದೇವರ ವೈಭವದ ಲಕ್ಷದೀಪೋತ್ಸವ ನಡೆಯುತ್ತದೆ. ಈ ದಿನ ದೇವಸ್ಥಾನದ ಒಳಗೆ ಉತ್ಸವ ನಡೆದು ದೀಪವಾಳಿಯಂದು ಶ್ರೀ ದೇವರ ಬಲಿ ಹೊರಟ ನಂತರ ಪ್ರಥಮ ಬಾರಿಗೆ ರಥಬೀದಿಗೆ ದೇವರು ಪ್ರವೇಶಿಸಿ ಚಂದ್ರಮಂಡಲ ರಥದಲ್ಲಿ ವಿರಾಜಮಾನರಾಗಿ ಭಕ್ತರಿಗೆ ದರ್ಶನ ನೀಡುತ್ತಾರೆ. ಚಂದ್ರಮಂಡಲ ರಥೋತ್ಸವವು ಕಾಶಿಕಟ್ಟೆಯಲ್ಲಿರುವ ಶ್ರೀ ದೇವರ ಸಹೋದರನಾದ ಗಣಪತಿ ದೇವರ ಸನ್ನಿಧಿವರೆಗೆ ನಡೆದು ಮತ್ತೆ ದೇವಸ್ಥಾನಕ್ಕೆ ಹಿಂದಿರುಗುತ್ತದೆ(ಇಲ್ಲಿ ಲಕ್ಷದೀಪೋತ್ಸವ ನಡೆಯುವ ದಿನವೇ ಪುತ್ತೂರಿನಲ್ಲೂ ನಡೆಯುವುದರಿಂದ ನಾನು ಒಮ್ಮೆಯು ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವದಲ್ಲಿ ಭಾಗಿಯಾಗಲಿಲ್ಲ).



ಷಷ್ಠಿ ಮಹೋತ್ಸವದ ನಾಲ್ಕನೆ,ಐದನೇ ಹಾಗು ಆರನೇ ದಿನದಂದು ದೇವಸ್ಥಾನದಲ್ಲಿ ಶ್ರೀ ದೇವರ ಶೇಷವಾಹನೋತ್ಸವ,ಅಶ್ವವಾಹನೋತ್ಸವ ಹಾಗು ಮಯೂರ ವಾಹನೋತ್ಸವ ನಡೆಯುತ್ತದೆ. ಏಳನೇ ದಿನದಿಂದ ಜಾತ್ರೆಯ ನಿಜವಾದ ಅಬ್ಬರ ಆರಂಭಗೊಳ್ಳುವುದು! ಏಳನೇ ದಿನ ರಾತ್ರಿ ದೇವಸ್ಥಾನದಲ್ಲಿ ಶ್ರೀ ದೇವರ ಪಲ್ಲಕ್ಕಿ,ಬಂಡಿ ಉತ್ಸವ ನಡೆದು ರಥಬೀದಿಯಲ್ಲಿ ಹೂವಿನ ರಥೋತ್ಸವ ನಡೆಯುತ್ತದೆ. ಈ ದಿನ ಶ್ರೀ ದೇವರ,ಹೂತೇರಿನ ಅಲಂಕಾರ ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ! ಅಂದು ಶ್ರೀ ದೇವರ ಹೂವಿನ ರಥೋತ್ಸವವು ಕಾಶಿಕಟ್ಟೆಯವರೆಗೆ ನಡೆದು ಸಹೋದರರಾದ ಶ್ರೀ ಸುಬ್ರಹ್ಮಣ್ಯ ದೇವರು ಹಾಗು ಶ್ರೀ ಮಹಾಗಣಪತಿ ದೇವರ ಭೇಟಿ ನಡೆದು ಕಾಶಿಕಟ್ಟೆ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ರಂಗಪೂಜೆ ನಡೆಯುತ್ತದೆ. ನಂತರ ಮರಳಿ ದೇವರ ಉತ್ಸವವು ದೇವಸ್ಥಾನಕ್ಕೆ ಬರುತ್ತದೆ. 



ಎಂಟನೆಯ ದಿನ ವೈಭವದ ಪಂಚಮಿ ರಥೋತ್ಸವದ ದಿನ! ಈ ದಿನ ಸುಬ್ರಹ್ಮಣ್ಯ ಪೇಟೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿರುತ್ತದೆ. ಜಾತ್ರೆಯ ಹಬ್ಬದ ವಾತಾವರಣ ಉತ್ತುಂಗಕ್ಕೆ ಏರುವ ದಿನ! ಈ ದಿನ ರಾತ್ರಿ ಶ್ರೀ ದೇವರ ಪಂಚಮಿ ರಥೋತ್ಸವ ನಡೆಯುತ್ತದೆ. ರಾತ್ರಿ ಶ್ರೀ ದೇವರ ಮಹಾಪೂಜೆ ನಡೆದು ಪಲ್ಲಕ್ಕಿಯಲ್ಲಿ ಶ್ರೀ ದೇವರ ಉತ್ಸವ ನಡೆಯುತ್ತದೆ. ನಂತರ ಹೊರಾಂಗಣದಲ್ಲಿ ಬಂಡಿ ಉತ್ಸವ ನಡೆದು ರಥಬೀದಿಗೆ ಶ್ರೀ ದೇವರು ಆಗಮಿಸಿ ಫಲಪುಷ್ಪ,ದೀಪಾಲಂಕಾರಗಳಿಂದ ಶೃಂಗಾರಗೊಂಡಿರುವ ಪಂಚಮಿ ರಥದಲ್ಲಿ ಆರೂಢರಾಗಿ ಪ್ರಸನ್ನ ಕಾಲದಲ್ಲಿ ಭಕ್ತರಿಗೆ ದರ್ಶನ ನೀಡಿ ಭಕ್ತರ ಇಷ್ಟಾರ್ಥವನ್ನು ಈಡೇರಿಸುತ್ತಾರೆ. ಮಧ್ಯರಾತ್ರಿಯ ಆ ಮೈಕೊರೆಯುವ ಚಳಿಯ ನಡುವೆ ಶ್ರೀ ದೇವರ ವೈಭವದ ಪಂಚಮಿ ರಥೋತ್ಸವವು ಕಾಶಿಕಟ್ಟೆಯವರೆಗೆ ನಡೆದು ನಂತರ ಸುಳ್ಯ ರಸ್ತೆಯಲ್ಲಿ ದರ್ಪಣ ತೀರ್ಥ ಹೊಳೆಯ ಪಕ್ಕದಲ್ಲಿರುವ ಸವಾರಿ ಮಂಟದಲ್ಲಿ ಶ್ರೀ ದೇವರ ಕಟ್ಟೆ ಪೂಜೆ ನಡೆಯುತ್ತದೆ. ಇದೇ ಸಂದರ್ಭದಲ್ಲಿ ವೈಭವದ ಸಿಡಿಮದ್ದಿನ ಪ್ರದರ್ಶನ(ಬೆಡಿ ಸೇವೆ) ನಡೆಯುತ್ತದೆ. ನಂತರ ರಥೋತ್ಸವವು ದೇವಸ್ಥಾನಕ್ಕೆ ಹಿಂದಿರುಗಿ ನಂತರ ತೈಲಾಭ್ಯಂಜನ ಕಾರ್ಯಕ್ರಮ ನಡೆಯುತ್ತದೆ.ಅಲ್ಲಿಗೆ ಎಂಟನೆಯ ದಿನದ ಉತ್ಸವ ಮುಕ್ತಾಯಗೊಂಡು ಒಂಬತ್ತನೆಯ ದಿನವಾದ ಷಷ್ಠಿಯ ಪುಣ್ಯ ದಿನದಂದು ನಡೆಯುವ ವೈಭವದ ಚಂಪಾಷಷ್ಠಿ ಮಹಾರಥೋತ್ಸವದ ಸಿದ್ಧತೆಗಳು ಆರಂಭಗೊಳ್ಳುತ್ತದೆ.




ಒಂಬತ್ತನೆಯ ದಿನ ಚಂಪಾಷಷ್ಠಿ ಮಹೋತ್ಸವದ ಸುದಿನ. ಈ ದಿನ ಮುಂಜಾನೆ ಶ್ರೀ ಸುಬ್ರಹ್ಮಣ್ಯ ದೇವರು ಹಾಗು ತನ್ನ ತಂದೆ-ತಾಯಿಯರಾದ ಶ್ರೀ ಉಮಾಮಹೇಶ್ವರ ದೇವರ ಜೊತೆಗೂಡಿ ರಥಬೀದಿಗೆ ಆಗಮಿಸಿ ಶ್ರೀ ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ(ಷಷ್ಠಿ ಮಹಾರಥ) ಹಾಗು ಶ್ರೀ ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ ಆರೂಢರಾಗಿ ಭಕ್ತರಿಗೆ ದರ್ಶನ ನೀಡುತ್ತಾರೆ. ನಂತರ ಶ್ರೀ ಉಮಾಮಹೇಶ್ವರ ದೇವರ ರಥೋತ್ಸವವು ರಥಬೀದಿಯಲ್ಲಿ ಸಾಗುತ್ತದೆ. ಶ್ರೀ ಉಮಾಮಹೇಶ್ವರ ದೇವರ ರಥೋತ್ಸವವು ರಥಬೀದಿಯ ಮತ್ತೊಂದು ತುದಿಗೆ ತಲುಪಿದೊಡನೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ವೈಭವದ ಚಂಪಾಷಷ್ಠಿ ಮಹಾರಥೋತ್ಸವವು ಭಕ್ತರ ಉದ್ಘೋಷದೊಡನೆ ರಥಬೀದಿಯಲ್ಲಿ ಸಾಗಿ ಮರಳಿ ದೇವಸ್ಥಾನಕ್ಕೆ ಬಂದು ಕೊನೆಗೊಳ್ಳುತ್ತದೆ. ನಂತರ ಪಂಚಮಿ ರಥದಲ್ಲಿ ಆರೂಢರಾಗಿರುವ ಶ್ರೀ ಉಮಾಮಹೇಶ್ವರ ದೇವರ ರಥೋತ್ಸವವು ಮರಳಿ ದೇವಸ್ಥಾನಕ್ಕೆ ಬಂದು ದಶಮಿ ಮಂಟಪದಲ್ಲಿ ಅವಳಿ ದೇವರ ಕಟ್ಟೆಪೂಜೆ ನಡೆಯುತ್ತದೆ. ನಂತರ ಶ್ರೀ ದೇವರು ಗರ್ಭಗುಡಿಗೆ ಮರಳಿ ದೇವರಿಗೆ ಪೂಜೆ-ಪುನಸ್ಕಾರಗಳು ಕ್ರಮ ಪ್ರಕಾರ ನಡೆಯುತ್ತದೆ. ಚೌತಿ,ಪಂಚಮಿ,ಷಷ್ಠಿ ದಿನಗಳಂದು ಮಧ್ಯಾಹ್ನ ಮಹಾಪೂಜೆಯಾದ ಕೂಡಲೇ ಶ್ರೀ ದೇವಸ್ಥಾನದ ಹೊರಾಂಗಣದಲ್ಲಿ ಎಡೆಸ್ನಾನ ನಡೆಯುತ್ತದೆ. ಮೊದಲು ಮಡೆ ಮಡೆಸ್ನಾನ ಇಲ್ಲಿ ನಡೆಯುತ್ತಿತ್ತು. ಈಗ ಇಲ್ಲಿ ಎಡೆಸ್ನಾನ ನಡೆಯುತ್ತೆದೆ. ಕೊರೋನ ಮಹಾಮಾರಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಎಡೆಸ್ನಾನಕ್ಕೆ ನಿರ್ಬಂಧ ಹೇರಲಾಗಿತ್ತು. ಈ ವರ್ಷ ಭಕ್ತರಿಗೆ ಎಡೆಸ್ನಾನ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿಯಿದೆ. ಬೀದಿ ಮಡೆಸ್ನಾನ(ಉರಳು ಸೇವೆ) ಇದು ಶ್ರೀ ದೇವರಿಗೆ ಅತ್ಯಂತ ಪ್ರಿಯವಾಗಿರುವ,ಕಠಿಣವಾಗಿರುವ ಸೇವೆ. ಸುಬ್ರಹ್ಮಣ್ಯ ದೇವಾಸ್ಥಾನದಿಂದ 2ಕಿ.ಮಿ ದೂರದ ಕುಮಾರಧಾರದಲ್ಲಿರುವ ಪವಿತ್ರ ಕುಮಾರಧಾರೆ ಹೊಳೆಯಲ್ಲಿ ಸ್ನಾನ ಮಾಡಿ ಅಲ್ಲಿಂದಲೇ ಉರುಳುತ್ತಾ ಪ್ರಮುಖ ರಸ್ತೆಯಲ್ಲಿ ಸಾಗಿ ಕಾಶಿಕಟ್ಟೆಯಾಗಿ ರಥಬೀದಿಗೆ ಬಂದು ದೇವಸ್ಥಾನದಲ್ಲಿ ದೇವರಿಗೆ ನಮಸ್ಕಾರಗೈದು ಹೊರಾಂಗಣದಲ್ಲಿ ಉರುಳುತ್ತಲೇ ಸುತ್ತು ಬಂದು ದರ್ಪಣ ತೀರ್ಥ ಹೊಳೆಯಲ್ಲಿ ಸ್ನಾನ ಮಾಡುವುದು ಈ ಸೇವೆ. ಜಾತ್ರೆಯ ಹತ್ತನೆಯ ದಿನ ಅಂದರೆ ಸಪ್ತಮಿಯಂದು ಮುಂಜಾನೆ ಶ್ರೀ ದೇವಸ್ಥಾನದಲ್ಲಿ ಓಕುಳಿ ಪ್ರೋಕ್ಷಣೆ ನಡೆದು ಸಣ್ಣ ರಥ(ಬಂಡಿ ರಥ)ದಲ್ಲಿ ಶ್ರೀ ದೇವರು ಆರೂಢರಾಗಿ ರಥೋತ್ಸವವು ದೇವಸ್ಥಾನದಿಂದ ಆರಂಭಗೊಂಡು ಸುಬ್ರಹ್ಮಣ್ಯ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥೋತ್ಸವವು ಸಾಗುತ್ತಾ ಶ್ರೀ ದೇವರು ನೇರವಾಗಿ ಕುಮಾರಧಾರಕ್ಕೆ ಬಂದು ಪವಿತ್ರ ಕುಮಾರಧಾರೆ ನದಿಯಲ್ಲಿ ನೌಕೆಯಲ್ಲಿ ವಿಹರಿಸಿದ ಮೇಲೆ,ದೇವರ ಅವಭೃತ ಸ್ನಾನ ನಡೆಯುತ್ತದೆ. ನಂತರ ಬೀದಿಯುದ್ದಕ್ಕೂ ಭಕ್ತರು ಸಲ್ಲಿಸುವ ಹಣ್ಣುಕಾಯಿ,ಮಂಗಳರಾತಿ ಸ್ವೀಕರಸಿ,ಕಟ್ಟೆಗಳಲ್ಲಿ ಕಟ್ಟೆಪೂಜೆ ಸ್ವೀಕರಿಸಿ ದೇವಸ್ಥಾನಕ್ಕೆ ಮರಳಿ ದೇವರ ಉತ್ಸವ ಬರುತ್ತದೆ. ಚಂಪಾಷಷ್ಠಿ ಮಹೋತ್ಸವದ ಹದಿನೈದನೇಯ ದಿನ ಬೆಳಗ್ಗೆ ಕೊಪ್ಪರಿಗೆ ಇಳಿದು,ಮಧ್ಯಾಹ್ನ ಮಹಾಪೂಜೆಯ ನಂತರ ದೇವಸ್ಥಾನದ ಹೊರಾಂಗಣದಲ್ಲಿ ನೀರು ತುಂಬಿಸುವ ಕಾರ್ಯ ಆರಂಭಗೊಳ್ಳುತ್ತದೆ. ಸಂಜೆಯ ಹೊತ್ತಿಗೆ ಹೊರಾಂಗಣವನ್ನು ನೀರು ಆವಾರಿಸಿಕೊಂಡು ರಾತ್ರಿ ಶ್ರೀ ದೇವರ ಮಹಾಪೂಜೆ ನಂತರ ಹೊರಾಂಗಣಲ್ಲಿ ನೀರು ಬಂಡಿ ಉತ್ಸವ ಜರುಗುತ್ತದೆ. ಜನರಿಗೆ ಬಂಡಿ ಉತ್ಸವದಲ್ಲಿ ಭಾಗಿಯಾಗುವುದು ಒಂದೆಡೆ ಖುಷಿಯಾದರೆ ಮತ್ತೊಂದೆಡೆ ನೀರಿನಲ್ಲಿ ಆಡುವುದು,ದೇವಸ್ಥಾನದ ಗಜರಾಣಿ ಯಶಸ್ವಿಯ ಜೊತೆ ನೀರಾಟವಾಡುವುದು ಖುಷಿ. ಒಟ್ಟಾರೆಯಾಗಿ ಇಲ್ಲಿಗೆ ಹದಿನೈದು ದಿನಗಳ ಕುಕ್ಕೆ ಸುಬ್ರಹ್ಮಣ್ಯ ದೇವರ ವೈಭವದ ಚಂಪಾಷಷ್ಠಿ ಮಹೋತ್ಸವ ಮುಗಿಯುತ್ತದೆ.

ಇದಿಷ್ಟು ಚಂಪಾಷಷ್ಠಿ ಮಹೋತ್ಸವದ ಸುದೀರ್ಘ ವಿವರ. ಇನ್ನು ನಾನು ಜಾತ್ರೆಯಲ್ಲಿ ಮಾಡುತ್ತಿದ್ದ ಗಮ್ಮತ್ತಿನ ಬಗ್ಗೆ ಹೇಳುವುದಾದರೆ ನಾನು ಸಣ್ಣ ಹುಡುಗನಾಗಿದ್ದಾಗಲೇ ಸುಬ್ರಹ್ಮಣ್ಯ ಜಾತ್ರೆಗೆ ಹೋಗುತ್ತಿದ್ದವ. ನಮ್ಮ ಊರಿನ ಮನೆಯಿರುವುದು ಸುಬ್ರಹ್ಮಣ್ಯದಿಂದ 8 ಕಿ.ಮಿ ದೂರದಲ್ಲಿರುವ ಹರಿಹರಪಲ್ಲತ್ತಡ್ಕದಲ್ಲಿ. ನನ್ನ ಅಪ್ಪನ ಚಿಕ್ಕಪ್ಪನ ಮನೆ ಸುಬ್ರಹ್ಮಣ್ಯದಲ್ಲಿದ್ದ ಕಾರಣ ನಾವು ಊರಿಗೆ ಹೋಗಿ ಬರುವಾಗ ಹೆಚ್ಚಾಗಿ ಇಲ್ಲಿಗೆ ಬಂದೇ ಹೋಗುತ್ತಿದ್ದೆವು. ಅಪ್ಪನಿಗೆ ಚಿಕ್ಕಮ್ಮನೆಂದರೆ(ನನಗೆ ಅಜ್ಜಿ) ಬಲು ಪ್ರೀತಿ. ಆದ್ದರಿಂದ ಅವರನ್ನು ಮಾತನಾಡಿಸಲು ನಾವು ಹೆಚ್ಚಾಗಿ ಹೋಗುತ್ತಿದ್ದೆವು. ಅವರು ಈಗ ಸ್ವರ್ಗಸ್ಥರಾಗಿದ್ದಾರೆ. ಪ್ರತಿ ವರ್ಷ ನನಗೆ ಸುಬ್ರಹ್ಮಣ್ಯ ಷಷ್ಠಿಯ ಸಮಯದಲ್ಲಿ ಅವರ ನೆನಪು ಆಗಿಯೇ ಆಗುತ್ತದೆ. ಅವರು ಇದ್ದಾಗಲೆಲ್ಲ ಅವರ ಜೊತೆಯೇ ನಾವು ಹೆಚ್ಚಾಗಿ ದೇವರ ಉತ್ಸವ ನೋಡಲು ಹೋಗುತ್ತಿದ್ದೆವು. ಷಷ್ಠಿಯ ದಿನದಂದು ನಮ್ಮ ದ.ಕ ಜಿಲ್ಲೆಯ ಹೆಚ್ಚಿನ ಶಾಲೆಗಳಲ್ಲಿ ರಜೆ ಸಿಗುತ್ತಿತ್ತು. ಇದರಿಂದ ಪಂಚಮಿ ರಥದ ದಿನ ನಾವೆಲ್ಲ ಸಂಜೆ ಸುಬ್ರಹ್ಮಣ್ಯಕ್ಕೆ ಹೋಗಿ ಅಲ್ಲಿ ಅಜ್ಜಿ ಮನೆಗೆ ಹೋಗಿ ಮತ್ತೆ ಅಜ್ಜಿಯ ಜೊತೆಗೆ ಜಾತ್ರೆಗೆ ಹೋಗುತ್ತಿದ್ದ ನೆನಪು ನನಗೆ. ಪಂಚಮಿ ರಥೋತ್ಸವದಲ್ಲಿ ಭಾಗಿಯಾಗಿ ದೇವರ ಜೊತೆಗೆ ರಥಬೀದಿಯಿಂದ ಕಾಶಿಕಟ್ಟೆಗೆ ತಿರುಗುವಲ್ಲಿಯವರೆಗೆ(ಅಂದಿನ ಕುಮಾರಕೃಪ ಹೋಟಲಿನ ಬಳಿ) ಹೋಗಿ ನಂತರ ಕುಮಾರಕೃಪ ಹೋಟಲಿನಲ್ಲಿ ಐಸ್ ಕ್ರೀಮ್ ಸೇವಿಸಿ ನಂತರ ಹತ್ತಿರದಲ್ಲಿಯೇ ಚರುಂಬುರಿ ತಿಂದು ದೇವರು ಪುನಃ ರಥಬೀದಿಗೆ ಬರುವ ತನಕ ಕಾದು ಸಮಯ ಕಳೆಯುತ್ತಿದ್ದೆವು. ನಂತರ "ಕುಕ್ಕೆ ಬೆಡಿ" ಅಥವ "ಕುಕ್ಕೆ ಕದೋನಿ" ನೋಡಿ ಮತ್ತೆ ಮನೆಗೆ ಹಿಂದಿರುಗುತ್ತಿದ್ದೆವು. ಜೊತೆಗೆ ಅಕ್ಕಂದಿರ ಬಳಿ "ಎತ್ತು ಅಕ್ಕ" ಎಂದು ಬೇಡಿ ಅಕ್ಕಂದಿರು ನನ್ನನ್ನು ಎತ್ತಿ ಜಾತ್ರೆ ಇಡಿ ಸುತ್ತಿಸುವವರೆಗೆ ಬಿಡುತ್ತಿರಲಿಲ್ಲ. ಮರುದಿನ ಬೆಳಗ್ಗೆ ಬೇಗ ಎದ್ದು ಅಜ್ಜಿಯ ಜೊತೆಗೆ ದೇವಸ್ಥಾನದ ಭೋಜನ ಶಾಲೆಯ ಬಳಿ ಕಟ್ಟಡದ ಮೇಲೆ ನಿಂತು ರಥೋತ್ಸವ ನೋಡುವ ಗೌಜಿ ನನಗೆ! ಅಜ್ಜಿ ದೇವರು ಬರುವಾಗ ಪ್ರತಿ ಬಾರಿಯು ನನಗೆ ವಿವರಿಸಿ ಆ ಸನ್ನಿವೇಶಗಳು,ಅಂದಿನ ಘಟನೆಗಳು ಈಗಲು ನನ್ನ ಸ್ಮೃತಿ ಪುಟದಲ್ಲಿ ಉಳಿಯುವಂತೆ ಮಾಡಿದ್ದಾರೆ. ನನಗೆ ಸುಬ್ರಹ್ಮಣ್ಯ ದೇವಸ್ಥಾನದ ಗಜರಾಣಿ ಯಶಸ್ವಿಯನ್ನು ಪರಿಚಯಿಸಿದ್ದೇ ನನ್ನ ಅಜ್ಜಿ. ಅದು ಯಶಸ್ವಿ ಸುಬ್ರಹ್ಮಣ್ಯಕ್ಕೆ ಬಂದ ಸಮಯವಾಗಿರಬೇಕು. ಇನ್ನು ಸಣ್ಣ ಮರಿಯಾನೆ. ದೇವರ ಅವಭೃತ ಸ್ನಾನಕ್ಕೆ ಕುಮಾರಧಾರಕ್ಕೆ ಹೋಗಿ ಮರಳಿ ದೇವಸ್ಥಾನಕ್ಕೆ ಹಿಂದಿರುಗುವಾಗ ನಾನು ಯಶಸ್ವಿಯನ್ನು ಮೊದಲ ಬಾರಿ ನೋಡಿದೆ. ಪ್ರತಿ ಬಾರಿ ನಾನು ದೇವಸ್ಥಾನಕ್ಕೆ ಹೋದಾಗ ಅದರ ಸಮೀಪ ಒಂದು ಬಾರಿ ಹೋಗದೇ ನಾನು ಇರುವುದೇ ಇಲ್ಲ. ಯಶಸ್ವಿ ಒಂತರ ನನಗೆ ಗೆಳತಿಯ ಹಾಗೆ! ಸುಬ್ರಹ್ಮಣ್ಯ ಜಾತ್ರೆಯ ಬಗ್ಗೆ ನಾನು ಹೇಳಲು ಹೊರಟರೆ ಮುಗಿಯುವುದೇ ಇಲ್ಲ.





ಕೆಲವರಿಗೆ ಈಗಲೇ ನಾನು ಸುಬ್ರಹ್ಮಣ್ಯ ತಲುಪಿಯಾಗಿದೆ ಅಂತ ಅನಿಸಿರಬೇಕು. ಇದಕ್ಕೆಲ್ಲ ಕಾರಣ ನಾನು ಸುಬ್ರಹ್ಮಣ್ಯದಲ್ಲಿದ್ದ ನನ್ನ ಅಜ್ಜಿಯ ನೆನಪುಗಳು ಹಾಗು ನನ್ನ ಊರಿನ ಜೊತೆಗೆ ನನಗಿರುವ ಬಾಂಧವ್ಯದ ಕೊಂಡಿ. ನಾನು ಅಜ್ಜಿಯನ್ನು ಕರೆದಾಗ "ಎಂತ ಪುಳ್ಳಿ!?" ಎಂದು ಅಜ್ಜಿಯ ಬಾಯಿಂದ ಬರುತ್ತಿದ್ದ ಆ ಅಮೃತ ವಚನವು ಈಗಲೂ ನನ್ನ ಕಿವಿಯಲ್ಲಿ ಮಾರ್ದಿನಿಸುತ್ತದೆ. ಅಜ್ಜಿಯ ಜೊತೆಗೆ ದೇವಸ್ಥಾನದಲ್ಲಿ ಮಾಡುತ್ತಿದ್ದ ಭೋಜನ,ಶ್ರೀ ದೇವರ ಅನ್ನಪ್ರಸಾದ,ನನ್ನ ನೆಚ್ಚಿನ ಕಡ್ಲೆ ಬೇಳೆ ಪಾಯಸ ಸವಿಯುವ ಆನಂದ ಇವೆಲ್ಲ ಅಂದಿನ ನೆನಪುಗಳು! ಮನೆ ಅಜ್ಜಿಯ(ಅಪ್ಪನ ಅಮ್ಮ) ಪ್ರೀತಿ,ಅಪ್ಪುಗೆಯನ್ನು ಪಡೆಯುವ ಭಾಗ್ಯ ನನಗೆ ಸಿಗಲಿಲ್ಲ.ಆದರೆ ಅಷ್ಟನ್ನು ನನಗೆ ಕರುಣಿಸಿದವರು ನನ್ನ ಸುಬ್ರಹ್ಮಣ್ಯ ಅಜ್ಜಿ! ಛೇ! ಅಂತಹ ಸುಖ ಇನ್ನು ಎಲ್ಲಿ ಸಿಗಲು ಸಾಧ್ಯ? 

ನನ್ನ ಅಜ್ಜಿ ಈಗ ಎಲ್ಲಿ ಇದ್ದರು ಅವರು ನನ್ನನ್ನು ಹರಸುತ್ತಾ ಇರಲಿ ಎಂಬುದೆ ಸುಬ್ರಹ್ಮಣ್ಯ ದೇವರ ಬಳಿ ನನ್ನ ಪ್ರಾರ್ಥನೆ!

ಇರಲಿ ಸುಬ್ರಹ್ಮಣ್ಯ ಜಾತ್ರೆಯ ಬಗ್ಗೆ ಬರೆಯಲು ಹೋಗಿ ನನ್ನ ನೆನಪು,ಭಾವನೆಗಳನ್ನೇ ಇಲ್ಲಿ ಹರಿದು ಬಿಟ್ಟೆ! ಹೆಚ್ಚಾಯಿತು ಎಂದು ಇದ್ದರೆ ಕ್ಷಮೆ ಇರಲಿ! ಅಜ್ಜಿಯ ನೆನಪು ನನ್ನನ್ನು ಭಾವುಕನಾಗುವಂತೆ ಮಾಡಿ ಬಿಟ್ಟಿತು.

ಬಸ್ಸಿನಲ್ಲಿ ಸಂಜೆ ಮನೆಗೆ ಬರುವಾಗ ಹೀಗೆ ಫೇಸ್ಬುಕ್ ಉದ್ದುತ್ತಿದ್ದಾಗ ಸುಬ್ರಹ್ಮಣ್ಯ ದೇವರ ಚಿತ್ರ ನೋಡಿದೆ. ಕೂಡಲೇ ಒಂದು ಲೇಖನ ಬರೆಯುವ ಆಸೆ ಹುಟ್ಟಿ ಬರೆದೇ ಬಿಟ್ಟೆ. ಸುಬ್ರಹ್ಮಣ್ಯ ಷಷ್ಠಿಯ ಬಗ್ಗೆ ನಾನು ಬರೆದ ಈ ಲೇಖನ ನಿಮಗೆ ಇಷ್ಟವಾದರೇ,ನಿಮ್ಮ ಅಭಿಪ್ರಾಯ ತಿಳಿಸಿ,ನಿಮ್ಮ ಆರ್ಶೀವಾದ ಸದಾ ನನ್ನ ಮೇಲೆ ಇರಲಿ! ಸುಬ್ರಹ್ಮಣ್ಯ ದೇವರು ನಮ್ಮನ್ನೆಲ್ಲ ಹರಿಸಿ,ಲೋಕವನ್ನು ಸುಖಿಯಾಗಿ ಇಡಲಿ ಎಂದು ಪ್ರಾರ್ಥಿಸುತ್ತಾ ನನ್ನ ಈ ಲೇಖನವನ್ನು ಅಂತ್ಯಗೊಳಿಸುತ್ತೇನೆ!

✍️ಶ್ರೀಕರ ಬಿ

ಚಿತ್ರ ಕೃಪೆ: Namma Subrahmanya Kukke Shree Subrahmanya Temple Facebook Page

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!