ಕಟೀಲು ಮೇಳದ ಆಟ, ಅದು ಕೇವಲ ಆಟವಲ್ಲ, ಅಭಿಮಾನಿಗಳಿಗೆ ಅದೊಂದು ಭಾವನೆ!


ಕೆಲವು ದಿನಗಳ ಹಿಂದೆ ಕಟೀಲು ಮೇಳಗಳ ಯಕ್ಷಗಾನ ಪ್ರದರ್ಶನ ಇನ್ನು ಕಾಲಮಿತಿ ಎಂಬ ಸುದ್ದಿಯನ್ನು ಓದಿದೆ. ವೈಯಕ್ತಿಕವಾಗಿ ನನಗೆ ಈ ಸುದ್ದಿ ಕೇಳಿ ಬೇಸರವಾಯಿತು. ಆದರೆ ಕಾಲಕ್ಕೆ ತಕ್ಕ ಬದಲಾವಣೆಗಳು ಸಹಜ. ನನಗೆ ಯಾಕೆ ಸಂಪೂರ್ಣ ರಾತ್ರಿಯ ಯಕ್ಷಗಾನ ಬಯಲಾಟ ಇಷ್ಟವೆಂದು ಹೇಳಲು ಈ ಲೇಖನವೇ ಸಾಕು. ಈ ಲೇಖನ ನಾನು ಮೇ 22,2022ರಂದು ನನ್ನ ಫೇಸ್ಬುಕ್ ಪುಟದಲ್ಲಿ ಬರೆದ ಲೇಖನವಾಗಿದೆ. ಇಂದು ಈ ಬ್ಲೋಗರ್ ಜಾಲದಲ್ಲಿ ಹಂಚುತ್ತಿದ್ದೇನೆ.

ಲೇಖನ:

ಕಟೀಲು ಮೇಳದ ಆಟ, ಅದು ಕೇವಲ ಆಟವಲ್ಲ, ಅಭಿಮಾನಿಗಳಿಗೆ ಅದೊಂದು ಭಾವನೆ!

ಹೌದು ಮಿತ್ರರೇ, 2022ನೇ ಇಸವಿ ಆರಂಭವಾದೊಡನೆ ನಾನು ಪ್ರತೀಕ್ಷಿಸುತ್ತಿದ್ದದ್ದು ಎರಡು ತಿಂಗಳುಗಳನ್ನು, ಅದು ಎಪ್ರಿಲ್ ಹಾಗು ಮೇ. ಎಪ್ರಿಲ್ ತಿಂಗಳಲ್ಲಿ ಆರಾಧ್ಯ ದೇವ ಶ್ರೀ ಮಹಾಲಿಂಗೇಶ್ವರನ ಜಾತ್ರೆಯಾದರೆ, ಮೇ ತಿಂಗಳಲ್ಲಿ ಹಾರಾಡಿ ಕಟ್ಟೆಯಲ್ಲಿ ನರಸಿಂಹ ಭಟ್ ಅವರ(ಪ್ರೀತಿಯ ನರಸಿಂಹಜ್ಜ) ಕಟೀಲು ಮೇಳದ ಸೇವೆಯಾಟ!
ಎಪ್ರಿಲ್ ತಿಂಗಳು ಮುಗಿಯುವಾಗ ಈ ಆಟಕ್ಕೆ ಇನ್ನೆಲ್ಲಿಲ್ಲದ ಕಾತುರ! ಈ ವರ್ಷ ನನಗೆ ಕಟೀಲು ಮೇಳದ ಹಲವು ಅಭಿಮಾನಿ ಬಂಧುಗಳನ್ನು ಪರಿಚಯವಿದ್ದ ಕಾರಣ ಅವರ ಈ ವರ್ಷದ ಆಟದ ಪ್ರಸಂಗ ಏನು ಇರಬಹುದು ಎಂಬ ಚರ್ಚೆ! ಈ ವರ್ಷ ಎಪ್ರಿಲ್ ತಿಂಗಳ ಕೊನೆಯಲ್ಲಿ ನನಗೆ ಪರೀಕ್ಷೆಯಿದ್ದರು ಸಹ ಕಟೀಲು ಮೇಳದ ಮೇ ತಿಂಗಳ ಸೇವೆಯಾಟದ ಪಟ್ಟಿಯ ನಿರೀಕ್ಷೆ, ಕಾರಣ ನರಸಿಂಹಜ್ಜನವರ ಆಟ ಯಾವಾಗ ಇರಬಹುದು ಎಂಬ ಕುತೂಹಲ! ಅಂತು ಇಂತು ಎ.30ರಂದು ಸೇವೆಯಾಟದ ಪಟ್ಟಿ ವಾಟ್ಸಾಪ್ ಗ್ರೂಪಿನಲ್ಲಿ ಬಂದೊಡನೆ ನಾನ ಮೊದಲು ನೋಡಿದ್ದು ನರಸಿಂಹಜ್ಜನವರ ಆಟ ಯಾವಾಗ,ಎಷ್ಟನೇ ಮೇಳ ಎಂದು! ಅಂತು ಮೇ.21ರಂದು 3ನೇ ಮೇಳದವರದ್ದು ಆಟ ಎಂದು ಗೊತ್ತಾದಾಗ ನನ್ನ ಕಾತುರ,ಸಂತೋಹ ಇನ್ನು ಹೆಚ್ಚಿತು. 3ನೇ ಮೇಳದವರಿಂದ ಎಂದು ನೋಡಿದಾಗ ಪ್ರಸಂಗ "ಶ್ರೀದೇವಿ ಮಹಾತ್ಮೆ" ಇರಬಹುದೇ ಎಂಬ ಪ್ರಶ್ನೆ ನನ್ನ ತಲೆಯಲ್ಲಿ ಹೊಳೆಯಲು ಆರಂಭಗೊಂಡಿತು. ಅಂತು ದಿನಗಳನ್ನು ಲೆಕ್ಕ ಹಾಕುತ್ತಾ ಕೊನೆಗೆ ಮೇ.21 ಬಂದೆ ಬಿಟ್ಟಿತು! ಆಟದ ದಿನವಾದರು ಈ ಬಾರಿ ಪ್ರಸಂಗದ ಮಾಹಿತಿ ಇಲ್ಲ,ನನಗೆ ಅವರ ಬಳಿ ಕೇಳಲು ಸಮಯ ಸಿಗಲಿಲ್ಲ, ಹೀಗೆಲ್ಲ ಆಗಿ ನಂತರ ರಂಗಸ್ಥಳದಲ್ಲಿ ಉಯ್ಯಾಲೆ ಕಟ್ಟುತ್ತಿರುವಾಗ "ಶ್ರೀದೇವಿ ಮಹಾತ್ಮೆ" ಎಂದು ನನಗೆ ಖಚಿತವಾಯಿತು. ವಿಶೇಷವೇನೆಂದರೆ ಇಲ್ಲಿ ಪ್ರತಿ ವರ್ಷ ವಿನೂತನವಾದ ಒಳ್ಳೆ ಕಥೆಯನ್ನುಳ್ಳ ಪ್ರಸಂಗವನ್ನು ಆಯ್ದುಕೊಳ್ಳುತ್ತಾರೆ. ಇಲ್ಲಿ ದೇವಿ ಮಹಾತ್ಮೆ ಯಕ್ಷಗಾನ ಕಳೆದ ಬಾರಿಯಾದದ್ದು ಸುಮಾರು 6-8 ವರ್ಷಗಳ ಹಿಂದೆ,ನಂತರ ಪ್ರತಿ ವರ್ಷ ವಿಶೇಷ ಪ್ರಸಂಗಗಳನ್ನು ಆಯ್ಕೆ ಮಾಡುತ್ತಿದ್ದರು. ಕಳೆದ ಎರಡು ವರ್ಷ ಕೋವಿಡ್ ಮಹಾಮಾರಿಯಿಂದಾಗಿ ಯಕ್ಷಗಾನ ತಿರುಗಾಟ ರದ್ದುಗೊಂಡಿದ್ದರಿಂದ ಈ ಸಾಲಿನ ತಿರುಗಾಟ ಆರಂಭವಾದೊಡನೆ ನಾನು ಪ್ರಾರ್ಥಿಸಿದ್ದು ನರಸಿಂಹಜ್ಜನವರ ಆಟ ಈ ವರ್ಷ ನಡೆಯಲಿ ಎಂದು, ಆ ಕಟೀಲಮ್ಮ ನನ್ನ ಪ್ರಾರ್ಥಿನೆಯನ್ನು ಕೇಳಿದಳೋ ಏನೋ,ಆಟ ನಿರ್ವಿಘ್ನವಾಗಿ ನಡೆಯಿತು,ಅಷ್ಟು ಮಾತ್ರವಲ್ಲದೆ ಮಳೆರಾಯನೂ ಆಟಕ್ಕೆ ಅಡ್ಡಿಪಡಿಸಲಿಲ್ಲ!
ಇರಲಿ 2019 ವರ್ಷ ಇಲ್ಲಿ ನಡೆದದ್ದು ಆರನೇ ಮೇಳದವರಿಂದ "ಹಿಡಿಂಬಾ ವಿವಾಹ-ಘೋಷಯಾತ್ರೆ" ಯಕ್ಷಗಾನ ಬಯಲಾಟ. ಆದರೆ ಕಾರಣಾಂತರಗಳಿಂದ ನನಗೆ ಆ ವರ್ಷ ಯಕ್ಷಗಾನ ನೋಡಲು ಆಗಲಿಲ್ಲ. ಆದರ ಮೊದಲ ನಾನು ಚಿಕ್ಕವನಿದ್ದಾಗ ಇಲ್ಲಿ ಒಮ್ಮೆ "ದ್ವಾದಶಾಕ್ಷರಿ-ಅಷ್ಟಾಕ್ಷರಿ-ಪಂಚಾಕ್ಷರಿ" ಯಕ್ಷಗಾನ ನಡೆದಿತ್ತು. ನನಗೆ ಆ ಯಕ್ಷಗಾನ ತುಂಬಾ ಮನಮುಟ್ಟಿತ್ತು,ಅತ್ಯುತ್ತಮವಾಗಿ ಮೂಡಿಬಂದಿತ್ತು, ಅದಾದ ನಂತರ ನಾನು ಇಲ್ಲಿ ನೋಡಿದ ಅತ್ಯುತ್ತಮ ಪ್ರದರ್ಶನವೆಂದರೆ ನಿನ್ನೆಯ ಯಕ್ಷಗಾನ

ನಿನ್ನೆಯ ಯಕ್ಷಗಾನಕ್ಕೆ ಇನ್ನೂ ಹೆಚ್ಚು ಕಳೆಬಂದದ್ದು ಕಟೀಲು ಮೇಳದಲ್ಲಿ ದಶಕಗಳ ಕಾಲ ತನ್ನ ಸೇವೆಯನ್ನು ಸಲ್ಲಿಸಿ,ರಂಗದಲ್ಲಿ ಮೆರೆದ "ರಂಗನಾಯಕ" ಕುರಿಯ ಗಣಪತಿ ಶಾಸ್ತ್ರಿ "ನಮ್ಮ ಪ್ರೀತಿಯ ಕುರಿಯ ಭಾಗವತರು" ಅವರ ಭಾಗವತಿಕೆ! ಅಪರೂಪಕ್ಕೆ ಅಪರೂಪದ ಕ್ಷಣಗಳಿಗೆ ನಿನ್ನೆಯ ಯಕ್ಷಗಾನ ವೇದಿಕೆಯಾಯಿತು. ಅವರ ಸಿರಿಕಂಠದಿಂದ ಪದ್ಯಗಳು ಆಹಾ! ಎಂತಹ ಮಧುರ ಕ್ಷಣಗಳು! ಆರಂಭದಲ್ಲಿ ನಾನು ಆರಂಭದ ಕೆಲವು ಸನ್ನಿವೇಶಗಳನ್ನು ನೋಡಲು ಕಳೆದುಕೊಂಡರು ನಂತರ ಸಂಪೂರ್ಣವಾಗಿ ಯಕ್ಷಗಾನವನ್ನು ವೀಕ್ಷಿಸಿದೆ. ನಿನ್ನೆ ಮಾಲಿನಿ ಪಾತ್ರವನ್ನು ನಿರ್ವಹಿಸಿದ ಸಂಜಯ್ ಅವರು ಪಾತ್ರಕ್ಕೆ ತಕ್ಕುದಾದ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾದರು. ನಾನು ಕೇಳಿದ ಹಾಗೆ ಎಲ್ಲರಿಗೆ ಇಷ್ಟವಾದದ್ದು ಕಥೆಯ ಖಳನಾಯಕ "ಮಹಿಷಾಸುರ"ನ ಪಾತ್ರ ನಿರ್ವಹಿಸಿದ ಶ್ರೀಯುತ ಬಾಲಕೃಷ್ಣ ಮಿಜಾರ್ ಅವರ ಅಭಿನಯ. ಮಧ್ಯರಾತ್ರಿಯ ಸಮಯದಲ್ಲಿ ನೆರೆದ ಪ್ರೇಕ್ಷಕರಲ್ಲಿ ಪೂರ್ತಿಯಾಗಿ ನಿದ್ರೆ ಮಾಡುತ್ತಿರುವಾಗ ಕೆಲವರು,ಇನ್ನು ಕೆಲವರು ಅರೆನಿದ್ರೆಯಲ್ಲಿ, ಬಹುತೇಕರು ಏಕಾಗ್ರಚಿತ್ತದಿಂದ ನೋಡುತ್ತಿರುವಾಗ ಮಹಿಷಾಸುರನ ಅಬ್ಬರದ ಪ್ರವೇಶ ಒಂದು ಕ್ಷಣ ನಿದ್ರೆಯಲ್ಲಿದ್ದವರನ್ನು ಎಬ್ಬಿಸಿದ್ದು ಸುಳ್ಳಲ್ಲ. ಈ ವರ್ಷ ನಾನು ನೋಡಿದ "ಶ್ರೀದೇವಿ ಮಹಾತ್ಮೆ" ಯಕ್ಷಗಾನದಲ್ಲಿ ಹನುಮಗಿರಿ ಮೇಳದ ಶ್ರೀ ಜಗದಾಭಿರಾಮ ಪಡುಬಿದ್ರೆಯವರ ಮಹಿಷಾಸುರ ಹಾಗು ಮಹಿಷಾಸುರನ ಪಾತ್ರಕ್ಕೆ ಹೆಸರುವಾಸಿಯಾದ ಶ್ರೀ ನಗ್ರಿ ಮಹಾಬಲ ರೈಯವರ ಮಹಿಷಾಸುರ ಬಿಟ್ಟರೆ ನನಗೆ ಹೆಚ್ಚು ಇಷ್ಟವಾದದ್ದು ಶ್ರೀ ಬಾಲಕೃಷ್ಣ ಮಿಜಾರರ ಮಹಿಷಾಸುರ. ಎಷ್ಟು ಬೇಕು ಅಷ್ಟೆ ನೃತ್ಯ, ಮಾತುಗಾರಿಕೆ, ಪಾತ್ರಕ್ಕೆ ತಕ್ಕುದಾದ ಅಬ್ಬರ,ಅಭಿನಯ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಮಹಿಷಾಸುರನ ಒಡ್ಡೋಲಗ ಸಮಯದಲ್ಲಿ ಸಭೆಯಿಂದ ಬರುವಾಗ ನನಗೆ ತೆಂಗಿನ ಮಡಲಿನ ಸೂಟೆ ಹಿಡಿಯುವ ಸೌಭಾಗ್ಯ ದೊರಕಿತು. ಕಟೀಲಮ್ಮನ ಸಂಕಲ್ಪ ಇದ್ದಿತೋಯೇನು ಗೊತ್ತಿಲ್ಲ. ಮಹಿಷಾಸುರನ ಒಡ್ಡೋಲಗ, ಬ್ರಹ್ಮನಿಂದ ವರ ಪಡೆದು ದೇವತೆಗಳೊಡನೆ ಯುದ್ಧ ಮಾಡಿ ದೇವಲೋಕವನ್ನು ಸ್ವಾಧೀನಪಡಿಸಿಕೊಳ್ಳುವ ಸನ್ನಿವೇಶಗಳಲ್ಲಿಯವರೆಗೆ ಕುರಿಯ ಭಾಗವತರು ತಮ್ಮ ಸೇವೆಯನ್ನು ಸಲ್ಲಿಸಿದರು. ನಂತರ ಪ್ರಧಾನ ಭಾಗವತರಾದ ಸದ್ಯ ಯಕ್ಷಲೋಕದಲ್ಲಿ ಮಿಂಚುತ್ತಿರುವ ಶ್ರೀ ದೇವಿಪ್ರಸಾದ್ ಆಳ್ವ ತಲಪಾಡಿಯವರ ಆಗಮನವಾಯಿತು.


ದೇವೆಂದ್ರ ದೇವತೆಗಳೊಡನೆ ಬ್ರಹ್ಮನ ಬಳಿ ಸಹಾಯಹಸ್ತದ ಬೇಡಿಕೆಗೆ ಹೋಗಿ ನಂತರ ವಿಷ್ಣು-ಈಶ್ವರನ ಬಳಿ ಹೋಗುವುದು ಹೀಗೆ ಮುಂದುವರೆಯುತ್ತಾ ಶ್ರೀದೇವಿ ಪ್ರತ್ಯಕ್ಷದ ಸನ್ನಿವೇಶ, ಸ್ವತಃ ಶ್ರೀದೇವಿಯೆ ಪ್ರತ್ಯಕ್ಷವಾದಂತೆ ಭಾಸವಾಗುತ್ತಿತ್ತು. ಯಕ್ಷರಂಗದಲ್ಲಿ ಮಿಂಚುತ್ತಿರುವ ಶ್ರೀ ಅರುಣ್ ಕೋಟ್ಯಾನ್ ಅವರ ಶ್ರೀದೇವಿ. ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಲ್ಲದೆ ಪ್ರೇಕ್ಷಕರು ಏಕಾಗ್ರಚಿತ್ತದಿಂದ ಭಕ್ತಿಪೂರ್ವಕವಾಗಿ ವೀಕ್ಷಿಸುವಂತೆ ಮಾಡಿದರು. ದೇವಿ ಪ್ರತ್ಯಕ್ಷವಾಗುವ ಸಮಯದಲ್ಲಿ ಶ್ರೀ ದೇವಿಪ್ರಸಾದ್ ತಲಪಾಡಿಯವರ ಸುಮಧುರ ಕಂಠದಿಂದ ಮೂಡಿದ "ದೇವಿ ಹೇ ಪಾವನ ಚರಿತೆ" ಪದ್ಯ ಪ್ರೇಕ್ಷಕರನ್ನು ಭಕ್ತಿಪರವಶವಾಗುವಂತೆ ಮಾಡಿತು. ನಂತರ ನಡುರಾತ್ರಿಯಲ್ಲಿ ಶ್ರೀದೇವಿ-ಮಹಿಷಾಸುರನ ಯುದ್ಧ ರೋಮಾಂಚನಕಾರಿಯಾಗಿತ್ತು. 


ಆ ನಡುರಾತ್ರಿಯ ಸಮಯದಲ್ಲಿ,ಕೆಲವು ದಿನಗಳಿಂದ ಮಳೆ ಸುರಿದ ಪರಿಣಾಮ ಮೈಕೊರೆಯುವ ಚಳಿಯ ನಡುವೆ ಶುಂಭ-ನಿಶುಂಭ ಅಬ್ಬರದ ಒಡ್ಡೋಲಗ ಮತ್ತು ಪ್ರವೇಶ! ಶುಂಭ-ನಿಶುಂಭರು ದೇವಲೋಕವನ್ನು ಆಕ್ರಮಿಸಿಕೊಂಡೊದಡನೆ ಶ್ರೀದೇವಿಯ ರಕ್ಷಣೆಗೆ ಓಡುವ ದೇವೆಂದ್ರ. ನಂತರ ಶ್ರೀದೇವಿಯು ಯೋಚಿಸಿ ಕೌಶಿಕೆಯಾಗುವ ಸಮಯದಲ್ಲಿ ಶ್ರೀ ದೇವಿಪ್ರಸಾದ್ ಆಳ್ವ ತಲಪಾಡಿಯವರ ಸುಮಧುರ ಕಂಠದಿಂದ "ಎಂದು ಯೋಚಿಸಿ ಮಹಾಮಾಯೆ", "ಕನಕದುಯ್ಯಾಲೆ ಮೆರೆಯಲು" ಹಾಗು ಇನ್ನಿತರ ಕೆಲವು ಪದ್ಯಗಳಿಗೆ ತಕ್ಕಂತೆ ಅರುಣ್ ಕೋಟ್ಯಾನ್ ಅವರ ಅಭಿನಯ ನೆರೆದ ಪ್ರೇಕ್ಷಕರನ್ನು ರಸಲೀಲೆಯಲ್ಲಿ ತೇಲಾಡುವಂತೆ ಮಾಡಿತು.

 

ನಂತರ ಚಂಡ-ಮುಂಡರ ಅಬ್ಬರದ ಪ್ರವೇಶ! ಚಂಡನಾಗಿ ಶ್ರೀ ರಾಜೇಶ್ ಆಚಾರ್ಯ ಹಾಗು ಮುಂಡನಾಗಿ ಶ್ರೀ ಅಕ್ಷಯ್ ಭಟ್ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿ ಪ್ರೇಕ್ಷಕರ ಹೊಗಳಿಕೆಗೆ ಪಾತ್ರರಾದರು. ಅದರಲ್ಲಿಯೂ ಸಮಯದ ಅಭಾವವಿದ್ದರೂ ನಿಗದಿತ ಸಮಯದಲ್ಲಿ ರಕ್ತಬೀಜನ ಪಾತ್ರವನ್ನು ಅರಳ ಗಣೇಶ್ ಶೆಟ್ಟಿಯವರು ನಿರ್ವಹಿಸಿದ ರೀತಿ ಶ್ಲಾಘನೀಯ. ಒಮ್ಮೆಗೆ ಸುಬ್ರಾಯ ಹೊಳ್ಳರ ರಕ್ತಬೀಜನ ಪಾತ್ರವನ್ನು ನೆನಪಿಸುವಂತೆ ಇತ್ತು. ಶುಂಭನಿಗೆ ಬುದ್ಧಿಮಾತುಗಳನ್ನು ಹೇಳುವುದಿರಲಿ, ಆ ಸನ್ನಿವೇಶಗಳಲ್ಲಿ ಬರುವ "ತರಣಿಯಲ್ಲವಳು ಆದಿಮಾಯೆ" ಇನ್ನಿತರ ಪದ್ಯಗಳಿಗೆ ಅವರ ಅಭಿನಯ ತುಂಬಾ ಚೆನ್ನಾಗಿತ್ತು. ಶುಂಭನಿಂದ ಬೈಗುಳ ತಿಂದರೂ, ಶುಂಭನಿಗೆ ಮತ್ತೊಮ್ಮೆ ಬುದ್ಧಿಮಾತನ್ನು ಹೇಳುತ್ತಾ ಮತ್ತೊಮ್ಮೆ ಬೈಗಳು ತಿನ್ನುವ ಸನ್ನಿವೇಶ ಹಾಸ್ಯಾಸ್ಪದವಾಗಿತ್ತು. ಅದು ಹೌದು,ನಾನು ಶುಂಭನ ಪಾತ್ರ ನಿರ್ವಹಿಸಿದ ಶ್ರೀ ವಸಂತರಾಜ್ ಕಟೀಲ್ ಅವರ ಶುಂಭನ ಪಾತ್ರದ ಬಗ್ಗೆ ಹೇಳಲೇ ಇಲ್ಲ. ನಾನು ಶ್ರೀಯುತ ಕಟೀಲ್ ಅವರ ಶುಂಭನ ಪಾತ್ರವನ್ನು ನೋಡಿದ್ದು ಎರಡು ಬಾರಿ ಮಾತ್ರ(ನೇರಪ್ರಸಾರದಲ್ಲಿ ಹಲವು ಬಾರಿ ವೀಕ್ಷಿಸಿದ್ದೇನೆ). ನೋಡಿದ್ದಷ್ಟು ಸರ್ತಿ ನನಗೆ ಅವರು ತಮ್ಮ ಪಾತ್ರಕ್ಕೆ ಸರಿಯಾಗಿ ನ್ಯಾಯ ಒದಗಿಸಿದ್ದಾರೆ ಎಂದೇ ಅನಿಸಿತು. ನಿನ್ನೆಯ ಯಕ್ಷಗಾನದಲ್ಲಿ ನನಗೆ ನಕಾರಾತ್ಮಕವಾದ ಅಂಶ ಯಾವುದು ಗೋಚರಿಸಲಿಲ್ಲ. ಅಷ್ಟು ವಿಮರ್ಶೆ ಮಾಡುವಷ್ಟು ನಾನು ಯೋಗ್ಯನೂ ಅಲ್ಲ, ಪ್ರಬುದ್ಧನೂ ಅಲ್ಲ. ಇರಲಿ, ಮತ್ತೆ ರಕ್ತಬೀಜ ಕೌಶಿಕೆಯ ಬಳಿ ಹೋಗಿ ಅವಳ ಮನವೊಲಿಸುವ ಸನ್ನಿವೇಶವನ್ನು ಚೆನ್ನಾಗಿ ಅರಳ ಗಣೇಶ್ ಶೆಟ್ಟಿ ನಿರ್ವಹಿಸಿದರು.ಆ ಸನ್ನಿವೇಶದಲ್ಲಿ ಬರುವ "ನೋಡಿದನು ಕಲಿ ರಕ್ತಬೀಜನು" "ಏಣಾಂಕನಿಭವಕ್ತ್ರೆ" ಪದ್ಯಗಳು ನನಗೆ ತುಂಬಾ ಇಷ್ಟವಾದದ್ದು. ಅದನ್ನು ಶ್ರೀಯುತ ತಲಪಾಡಿಯವರ ಸ್ವರದಲ್ಲಿ ಕೇಳುವಾಗ ಖುಷಿಯೋ ಖುಷಿ. ನಂತರ ರಕ್ತಬೀಜನ ಪ್ರಸ್ತಾವ,ಪ್ರಾರ್ಥನೆಯನ್ನು ಸ್ವೀಕರಿಸಿದ ಮಾತೆ ರಕ್ತಬೀಜನೊಡನೆ ಯುದ್ಧ ಮಾಡಿ ರಕ್ತಬೀಜನ ವಧೆ ನಡೆದು ಆ ಬೆಳಗಿನ ಜಾವದಲ್ಲಿ ಚಳಿಯ ನಡುವೆ ಶುಂಭ-ದೇವಿಯ ಯುದ್ಧ, ಮೈರೋಮಾಂಚನ ಮಾಡಿತು. ಅದಕ್ಕೆ ಸರಿಯಾಗಿ ತಲಪಾಡಿಯವರ ಹೈವೋಲ್ಟೇಜ್ ಪದ್ಯಗಳು. ನಿದ್ರೆಯಲ್ಲಿದ್ದವರನ್ನು ಎಬ್ಬಿಸುವಂತೆ ಮಾಡಿತು.


ಯಕ್ಷಗಾನ ಮುಗಿಯುವಾಗ "ಛೇ! ಯಕ್ಷಗಾನ ಮುಗಿದುಹೋಯಿತೇ,ಇನ್ನು ಒಂದು ವರ್ಷಕಾಯಬೇಕಲ್ಲವೇ?" ಎಂಬ ಕೊರಗು ಮನಸ್ಸಿನಲ್ಲಿ ಕಾಡಲು ಪ್ರಾರಂಭವಾಯಿತು.
ಈ ವರ್ಷದಷ್ಟು ನಾನು ನೋಡಿದ ಯಕ್ಷಗಾನ ಜೀವಮಾನದಲ್ಲಿ ಇಷ್ಟರವರೆಗೆ ನೋಡಿರಲಿಕ್ಕಿಲ್ಲ, ಹನುಮಗಿರಿ ಮೇಳದವರ ಪುತ್ತೂರು ಯಕ್ಷೋತ್ಸವದಿಂದ ಹಿಡಿದು, ನಂತರ ನಡೆದ ಕಟೀಲು ಒಂದನೇ ಮೇಳದವರಿಂದ ಪುತ್ತೂರು ದೇವಸ್ಥಾನದ ಗದ್ದೆಯಲ್ಲಿ ನಡೆದ ಯಕ್ಷಗಾನ,ನಂತರ ಮತ್ತೊಮ್ಮೆ ಹನುಮಗಿರಿ ಮೇಳದವರ ಯಕ್ಷಗಾನ ಎರಡು ಬಾರಿ,ನಿನ್ನೆ ಹಾರಾಡಿಯಲ್ಲಿ ಕಟೀಲು ಮೂರನೇ ಮೇಳದ ಯಕ್ಷಗಾನ. ಒಟ್ಟು ಪುತ್ತೂರಿನಲ್ಲಿ ನಡೆದ ಬಹುತೇಕ ಯಕ್ಷಗಾನ ಬಯಲಾಟಗಳನ್ನು ಸಂಪೂರ್ಣವಾಗಿ ವೀಕ್ಷಿಸಿದ್ದೇನೆ. ಮುಂದಿನ ಸಾಲಿನ ತಿರುಗಾಟದಲ್ಲಿ ಪುತ್ತೂರು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ, ತಾಯಿ ಭ್ರಮರಾಂಭಿಕೆಯ ಸನ್ನಿದ್ಧಿಯಲ್ಲಿ ನಡೆಯುವ ಯಕ್ಷಗಾನವನ್ನು ವೀಕ್ಷಿಸುವ ಭಾಗ್ಯ ನನಗೆ ದೊರಕಲಿ ಎಂಬುದು ನನ್ನ ಆಸೆ. ಆ ಆಸೆ ಈಡೇರಲಿ ಹಾಗು ಮುಂದಿನ ಸಾಲಿನ ತಿರುಗಾಟವೂ ನಿರ್ವಿಘ್ನವಾಗಿ ನೆರವೇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
🚩ಯಕ್ಷಗಾನಂ ಗೆಲ್ಗೆ🚩
🖊 ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!