ಗುರು ಸ್ಮರಣೆ!


ನನಗೆ ಹಲವು ಮಂದಿಯಿಂದ ನಾನು ಬರೆಯುವ ಲೇಖನಗಳ ಬಗ್ಗೆ ಪ್ರತಿಕ್ರಿಯೆ ಬಂತು. ನಾನು ಇಂದು ಕನ್ನಡದಲ್ಲಿ ನೀವು ತಿಳಿಸಿದ ಹಾಗೆ ಉತ್ತಮ ರೀತಿಯಲ್ಲಿ ಲೇಖನ ಬರೆಯುತ್ತೇನೋ ಅದರ ಶ್ರೇಯಸ್ಸು ಸಲ್ಲಬೇಕಾದದ್ದು ಆ ಮಹಾನ್ ಗುರುಗಳಿಗೆ. ಯಾರೆಂದು ಯೋಚನೆಯಲ್ಲಿದ್ದೀರಾ?

ಅವರು ತರಗತಿಗೆ ಬಂದರೆ ಸಾಕು ಸಂಪೂರ್ಣ ಕನ್ನಡ ಲೋಕವೇ ಆ ತರಗತಿಗೆ ಬಂದ ಹಾಗೆ ಆಗುತ್ತದೆ. ಕನ್ನಡ ಸರಿಯಾಗಿ ಗೊತ್ತಿಲ್ಲದವನೂ ಅವರು ಮಾಡುವ ಪಾಠವನ್ನು ಅರ್ಥ ಮಾಡಿಕೊಳ್ಳಬಹುದಾಗಿತ್ತು. ಅವರು ಆ ಪಾಠವನ್ನು ತಮ್ಮ ದಾಟಿಯಲ್ಲಿ ವಿವರಿಸಲು ಆರಂಭಿಸಿದರೆ ಅದು ನಮ್ಮ ತಲೆಯಲ್ಲಿ ಅದರ ಚಿತ್ರವನ್ನು ಕಲ್ಪಿಸಿಕೊಳ್ಳಬಹುದಾಗಿತ್ತು. ಅವರು ಸಾವಿರರು ವಿದ್ಯಾರ್ಥಿಗಳಿಗೆ "ಕನ್ನಡ"ವನ್ನು ಬೋಧಿಸಿದ ಮಹಾನ್ ಗುರುಗಳು.

ಅವರು ಯಾರೆಂದರೆ ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಪುತ್ತೂರು ಇಲ್ಲಿ ೩೬ ವರ್ಷಗಳ ಕಾಲ ಕನ್ನಡ ಉಪಾಧ್ಯಾಯರಾಗಿ ಜೊತೆಗೆ ೪ ವರ್ಷಗಳ ಕಾಲ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ವಿಶ್ರಾಂತ ಜೀವನವನ್ನು ನಡೆಸುತ್ತಿರುವ ನನ್ನ ಪ್ರೀತಿಯ "ರೂಪಕಲಾ" ಮೇಡಂ.

ಇಂದು "ಗುರು ಪೂರ್ಣಿಮೆ". ಈ ಶುಭ ದಿನದಂದು ನಾನು ಅವರನ್ನು ಸ್ಮರಿಸುವುದು ನನ್ನ ಕರ್ತವ್ಯ. 

ಬೆಳಗಿನ ಸುಂದರ ವಾತಾವರಣದಲ್ಲಿ ಶಾಲೆ ಆರಂಭಗೊಂಡರೆ ಸಾಕು ವಿದ್ಯಾರ್ಥಿಗಳು ಬಂದೊಡನೆ ಶಾಲೆಯಲ್ಲಿ ಒಂದೋ ಮಕ್ಕಳು ಓದುತ್ತಾ ಇರುತ್ತಾರೆ,ಇಲ್ಲದಿದ್ದರೆ ಹರಟೆ ಹೊಡೆದುಕೊಂಡು ಇರುತ್ತಾರೆ. ಅದರ ಜೊತೆಗೆ ಯಾವುದಾದರೊಂದು ತರಗತಿಯಲ್ಲಿ ನಿಮಗೆ ಕನ್ನಡ ಪದ್ಯವನ್ನು ಹಾಡುತ್ತಿರುವ ತರಗತಿಯನ್ನು ನೋಡಬಹುದು. ಆ ತರಗತಿಯನ್ನು ಆ ಕ್ಷಣ ನಡೆಸುತ್ತಿರುವುದು ಬೇರೆ ಯಾರು ಅಲ್ಲ, ಇವರೇ ನನ್ನ ಪ್ರೀತಿಯ ರೂಪಕಲಾ ಮೇಡಂ.

ನನಗೆ ಅವರು ಕನ್ನಡ ಗುರುಗಳಾಗಿ ಸಿಕ್ಕಿದ್ದು ಎಂಟನೆ ತರಗತಿಯಲ್ಲಿ. ಹಳೆಗನ್ನಡ ಕಷ್ಟವೆಂಬ ಭ್ರಮೆಯಲ್ಲಿ ಇದ್ದ ನನಗೆ ಹೇಗೆ ಕಲಿಯುವುದೋ ಎಂಬ ಚಿಂತೆಯಲ್ಲೇ ಇದ್ದೆ. ನಾನು ಪ್ರಥಮ ಬಾರಿಗೆ ಹಳೆಗನ್ನಡವನ್ನು ಪಠಿಸುವುದನ್ನು ಅವರು ಪಾಠ ಆರಂಭಿಸಿದ ನಂತರ ಕೇಳಿದೆ. ಅವರು ಅಂದು ಮಾಡುತ್ತಿದ್ದ ಆ ಪಾಠ ಈಗಲು ನನ್ನ ಕಣ್ಣಿಗೆ ಕಟ್ಟಿದಂತಿದೆ. ಮುದ್ದಣ್ಣನ "ಶ್ರೀ ರಾಮ ಪಟ್ಟಾಭಿಷೇಕಂ" ಕವಿತೆಯ ಬಗ್ಗೆ ತನ್ನ ಹೆಂಡತಿಯ ಜೊತೆ ಸಂವಾದ ಮಾಡುವ ಭಾಗ ಎಂಟನೆಯ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಒಂದು ಪಾಠವಾಗಿ ನೋಡಬಹುದು. ಅದನ್ನು ಸಲೀಸಾಗಿ ಸುಲಭವಾಗಿ ಅರ್ಥೈಸಿಕೊಳ್ಳುವಂತೆ ಮಾಡಿದು ಇವರೇ. ಅವರು ತರಗತಿಗೆ ಬರುವ ಮೊದಲು ಕನ್ನಡ ಕವನಗಳನ್ನು ಆ ತರಗತಿಯ ವಿದ್ಯಾರ್ಥಿಗಳು ಜೋರಾಗಿ ಜೊತೆಗೆ ರಾಗದಲ್ಲಿ ಹಾಡುವುದು ಕಡ್ಡಾಯವಾಗಿತ್ತು. ಅಂದು ಅವರು ಈ ರೀತಿ ಮಾಡಿದ್ದರಿಂದ ಪರೀಕ್ಷೆಯಲ್ಲಿ ಸುಲಭವಾಗಿ ಪದ್ಯ ಕಂಠಪಾಠವನ್ನು ಬರೆಯಲು ಆಗುತ್ತಿತ್ತು. ಅವರು ಎಂಟನೆ ತರಗತಿ ಮತ್ತು ಹತ್ತನೇ ತರಗತಿಗೆ ಕನ್ನಡ ಪಾಠ ಮಾಡುತ್ತಿದ್ದರು. ಎಂಟನೆ ತರಗತಿಯಲ್ಲಿ ನಾನು ಉತ್ತೀರ್ಣನಾದ ನಂತರ ನನಗೆ ಅವರ ಪಾಠವನ್ನು ಕೇಳಲು ಇನ್ನು ಒಂದು ವರ್ಷ ಕಾಯಬೇಕಲ್ಲವೇ? ಎಂದು ಬೇಸರವಾಗುತ್ತಿತ್ತು.

ಹತ್ತನೇ ತರಗತಿಗೆ ನಾನು ಬಂದ ನಂತರ ಅವರು ಮತ್ತೆ ನನಗೆ ಕನ್ನಡ ಶಿಕ್ಷಕಿಯಾಗಿ ಸಿಕ್ಕಿದರು. ಹತ್ತನೇ ತರಗತಿಯಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ರಚಿತ "ಸಂಕಲ್ಪ ಗೀತೆ" ಎಂಬ ಪದ್ಯ ಹತ್ತನೇ ತರಗತಿಯ ಪಠ್ಯಕ್ರಮದಲ್ಲಿ ಸಿಗುತ್ತದೆ. ಅಂದು ಅವರು  ನಮಗೆ ಆ ಪದ್ಯವನ್ನು ಶಾಲೆಯ ಪ್ರತಿ ತರಗತಿಗೆ ಅಳವಡಿಸಿದ್ದ ಸ್ಪೀಕರಿನಲ್ಲಿ ಯೂಟ್ಯೂಬ್ ಮುಖಾಂತರ ಕೇಳಿಸಿ ಅದೇ ರಾಗದಲ್ಲಿ ಪದ್ಯವನ್ನು ಕಲಿಯಬೇಕೆಂದು ಹೇಳಿದರು. ನನಗೆ ಆ ಪದ್ಯ ಈಗಲು ನೆನಪಿದೆ. 

"ಸುತ್ತಲು ಕವಿಯುವ ಕತ್ತಲೆಯೊಳಗೆ

 ಪ್ರೀತಿಯ ಹಣತೆಯ ಹಚ್ಚೋಣ

ಬಿರುಗಾಳಿಗೆ ಹೊಯ್ದಾಡುವ ಹಡಗನು

ಎಚ್ಚರದಲಿ ಮುನ್ನಡೆಸೋಣ"

ಎಂದು ಆರಂಭವಾಗುವ ಆ ಪದ್ಯವನ್ನು ಹಾಡುವಾಗ ಯಾವುದೋ ಒಂದು ಭಾವನೆಯ ಲೋಕಕ್ಕೆ ಹೋಗುತ್ತಿದ್ದೆ. 

ಕುಮಾರವ್ಯಾಸ,ಕುಮಾರ ವಾಲ್ಮೀಕಿ ಬರೆದ ಹಳೆಗನ್ನಡದ ಪದ್ಯಗಳನ್ನು ಚೆನ್ನಾಗಿ ಅರ್ಥವಾಗುವಂತೆ ಪಾಠ ಮಾಡುತ್ತಿದ್ದರು. 

ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಬಗ್ಗೆ ನಮಗೆ ಹತ್ತನೆಯ ತರಗತಿಯಲ್ಲಿ ಒಂದು ಪಾಠವಿತ್ತು. ಆ ಪಾಠವನ್ನು ನಮಗೆ ಮಾಡುವುದರ ಜೊತೆಗೆ ಸರ್ ಎಂ.ವಿಶ್ವೇಶ್ವರಯ್ಯನವರ ಬದುಕಿನಲ್ಲಿ ಘಟಿಸಿದ ಕೆಲವು ಘಟನೆಗಳನ್ನು ಹಾಗೈ ಮೈಸೂರು ಕಂಡ ಶ್ರೇಷ್ಠ ಅರಸ ನಾಲ್ವಡಿ ಕೃಷ್ಣರಾಜ ಒಡೆಯರು,ದಿವಾನ ಮಿರ್ಜ ಇಸ್ಮಾಯಿಲ್ ಅವರ ಬಗ್ಗೆ ಕೂಡ ನಮಗೆ ಕಥೆ ಹೇಳುತ್ತಿದ್ದರು. ಎಂಟನೆಯ ತರಗತಿಯಲ್ಲಿ "ಮಂಕುತಿಮ್ಮನ ಕಗ್ಗ" ಪದ್ಯ ಪಾಠ ಮಾಡುತ್ತಿದ್ದಾಗ ಸರ್ ಎಂ.ವಿಶ್ವೇಶ್ವರಯ್ಯ ಹಾಗು ಡಿ.ವಿ.ಜಿಯವರ ಮಧ್ಯೆ ಇದ್ದ ಬೆಸುಗೆಯ ಬಗ್ಗೆ ಕೂಡ ನಮಗೆ ಹೇಳುತ್ತಿದ್ದರು. ನಾನು ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಕನ್ನಡ ಪರೀಕ್ಷೆಗೆ ಎಂದು ಓದುತ್ತಿದ್ದೇ ಕಮ್ಮಿ! ಸಂಪೂರ್ಣವಾಗಿ ಶುದ್ಧ ಕನ್ನಡದಲ್ಲಿ ಪಾಠ ಮಾಡುತ್ತಿದ್ದ ರೂಪಕಲಾ ಮೇಡಂ ಮಾಡಿದ ಪಾಠವೇ ನನಗೆ ನೆನಪಿನಲ್ಲಿ ಇರುತ್ತಿತ್ತು,ಆದ್ದರಿಂದ ಪರೀಕ್ಷೆಗೆ ಹೋಗುವ ಮೊದಲು ಒಮ್ಮೆ ಪಾಠ,ಪದ್ಯದ ಸಾರಾಂಶ,ವ್ಯಾಕರಣ ನೋಡಿ ಪರೀಕ್ಷೆಗೆ ಹೋಗುತ್ತಿದ್ದೆ.ಅವರು ಹೇಗೆ ಪಾಠ ಮಾಡಿದ್ದರೋ ಅದೇ ರೀತಿ ನಾನು ಉತ್ತರ ಬರೆಯುತ್ತಿದ್ದೆ.ಅಷ್ಟೂ ಅವರ ಪಾಠ ನನ್ನ ಮನಸ್ಸಿನಲ್ಲಿ ಅಚ್ಚಿನಂತೆ ಉಳಿದಿತ್ತು,ಈಗಲು ನೆನಪಿಗೆ ಬರುತ್ತದೆ. ಇದರ ಫಲವೇನೋ ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125ರಲ್ಲಿ 124 ಅಂಕ ಪಡೆದೆ. ಅವರಿಗೆ ಆ ವಿಷಯ ತಿಳಿದು ಬಹಳ ಸಂತಸಪಟ್ಟಿದ್ದರು. 

ಆ ಎರಡು ವರ್ಷದ ಫಲವಾಗಿ ನಾನ ಈಗ ಲೇಖನಗಳನ್ನು ಬರೆಯುತ್ತಿದ್ದೇನೆ. ಇಂತಹ ಶ್ರೇಷ್ಠ ಗುರುಗಳನ್ನು ಅವರ ಶಿಷ್ಯನಾಗಿ ಸ್ಮರಿಸುವುದು ನನ್ನ ಕರ್ತವ್ಯ. ಆದ್ದರಿಂದ ಗುರು ಪೂರ್ಣಿಮೆಯ ಈ ಶುಭ ದಿನದಂದು ಅವರನ್ನು ನಾನು ಸ್ಮರಿಸುತ್ತಾ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇನೆ.

ಶ್ರೀಮತಿ ರೂಪಕಲಾ ಮೇಡಂ ಅವರಿಗೆ ಆ ಭಗವಂತ ಆಯುರಾರೋಗ್ಯವನ್ನು ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತಾ ಈ ಗುರು ಸ್ಮರಣೆ ಪುಟ್ಟ ಲೇಖನವನ್ನು ಕೊನೆಗೊಳಿಸುತ್ತಿದ್ದೇನೆ.

||ಶ್ರೀ ಗುರುಭ್ಯೋ ನಮಃ|| 

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!