ಕಟೀಲು ಮೇಳದ ಆಟ, ಅದು ಕೇವಲ ಆಟವಲ್ಲ, ಅಭಿಮಾನಿಗಳಿಗೆ ಅದೊಂದು ಭಾವನೆ!

ಕೆಲವು ದಿನಗಳ ಹಿಂದೆ ಕಟೀಲು ಮೇಳಗಳ ಯಕ್ಷಗಾನ ಪ್ರದರ್ಶನ ಇನ್ನು ಕಾಲಮಿತಿ ಎಂಬ ಸುದ್ದಿಯನ್ನು ಓದಿದೆ. ವೈಯಕ್ತಿಕವಾಗಿ ನನಗೆ ಈ ಸುದ್ದಿ ಕೇಳಿ ಬೇಸರವಾಯಿತು. ಆದರೆ ಕಾಲಕ್ಕೆ ತಕ್ಕ ಬದಲಾವಣೆಗಳು ಸಹಜ. ನನಗೆ ಯಾಕೆ ಸಂಪೂರ್ಣ ರಾತ್ರಿಯ ಯಕ್ಷಗಾನ ಬಯಲಾಟ ಇಷ್ಟವೆಂದು ಹೇಳಲು ಈ ಲೇಖನವೇ ಸಾಕು. ಈ ಲೇಖನ ನಾನು ಮೇ 22,2022ರಂದು ನನ್ನ ಫೇಸ್ಬುಕ್ ಪುಟದಲ್ಲಿ ಬರೆದ ಲೇಖನವಾಗಿದೆ. ಇಂದು ಈ ಬ್ಲೋಗರ್ ಜಾಲದಲ್ಲಿ ಹಂಚುತ್ತಿದ್ದೇನೆ. ಲೇಖನ: ಕಟೀಲು ಮೇಳದ ಆಟ, ಅದು ಕೇವಲ ಆಟವಲ್ಲ, ಅಭಿಮಾನಿಗಳಿಗೆ ಅದೊಂದು ಭಾವನೆ! ಹೌದು ಮಿತ್ರರೇ, 2022ನೇ ಇಸವಿ ಆರಂಭವಾದೊಡನೆ ನಾನು ಪ್ರತೀಕ್ಷಿಸುತ್ತಿದ್ದದ್ದು ಎರಡು ತಿಂಗಳುಗಳನ್ನು, ಅದು ಎಪ್ರಿಲ್ ಹಾಗು ಮೇ. ಎಪ್ರಿಲ್ ತಿಂಗಳಲ್ಲಿ ಆರಾಧ್ಯ ದೇವ ಶ್ರೀ ಮಹಾಲಿಂಗೇಶ್ವರನ ಜಾತ್ರೆಯಾದರೆ, ಮೇ ತಿಂಗಳಲ್ಲಿ ಹಾರಾಡಿ ಕಟ್ಟೆಯಲ್ಲಿ ನರಸಿಂಹ ಭಟ್ ಅವರ(ಪ್ರೀತಿಯ ನರಸಿಂಹಜ್ಜ) ಕಟೀಲು ಮೇಳದ ಸೇವೆಯಾಟ! ಎಪ್ರಿಲ್ ತಿಂಗಳು ಮುಗಿಯುವಾಗ ಈ ಆಟಕ್ಕೆ ಇನ್ನೆಲ್ಲಿಲ್ಲದ ಕಾತುರ! ಈ ವರ್ಷ ನನಗೆ ಕಟೀಲು ಮೇಳದ ಹಲವು ಅಭಿಮಾನಿ ಬಂಧುಗಳನ್ನು ಪರಿಚಯವಿದ್ದ ಕಾರಣ ಅವರ ಈ ವರ್ಷದ ಆಟದ ಪ್ರಸಂಗ ಏನು ಇರಬಹುದು ಎಂಬ ಚರ್ಚೆ! ಈ ವರ್ಷ ಎಪ್ರಿಲ್ ತಿಂಗಳ ಕೊನೆಯಲ್ಲಿ ನನಗೆ ಪರೀಕ್ಷೆಯಿದ್ದರು ಸಹ ಕಟೀಲು ಮೇಳದ ಮೇ ತಿಂಗಳ ಸೇವೆಯಾಟದ ಪಟ್ಟಿಯ ನಿರೀಕ್ಷೆ, ಕಾರಣ ನರಸಿಂಹಜ್ಜನವರ ಆಟ ಯಾವಾಗ ಇರಬಹುದು ಎಂಬ ಕುತೂಹಲ! ಅಂತು ಇಂತು ಎ.30ರಂದು ಸೇವೆಯಾಟದ ಪಟ್ಟ...